ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಜೀವಿಗಳಿಗೆ ‘ಯಾನ’ ಮೂಲಕ ಉತ್ತರ

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ‘ವಿಜ್ಞಾನ, ಅಧ್ಯಾತ್ಮದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಕೆಲ ಬುದ್ಧಿಜೀವಿಗಳು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರಿಗೆ ‘ಯಾನ’ ಕಾದಂಬರಿ ಮೂಲಕ ತಕ್ಕ ಉತ್ತರ ನೀಡಿದ್ದೇನೆ’ ಎಂದು ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ಪ್ರತಿಕ್ರಿಯಿಸಿದರು.  ನಗರದ ಕುವೆಂಪು ರಂಗಮಂದಿರ­ದಲ್ಲಿ ಅಭಿರುಚಿ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ‘ಯಾನ’ ಕಾದಂಬರಿ ಕುರಿತ ಸಂವಾದ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.

‘ಮಂಗಳ ಗ್ರಹಕ್ಕೆ ‘ಮಾಮ್’ ನೌಕೆ ಉಡಾವಣೆ ಮಾಡುವ ಮುನ್ನ ಇಸ್ರೊ ಅಧ್ಯಕ್ಷ ರಾಧಾಕೃಷ್ಣನ್ ತಿರುಪತಿಗೆ ತೆರಳಿ ಪೂಜೆ ಮಾಡಿಸಿದ್ದರು. ಇದೇ ಪ್ರಭಾವ ‘ಯಾನ’ ಕಾದಂಬರಿಯಲ್ಲಿ ಬರುವ ಡಾ.ವೆಂಕಟ್ ಮೇಲೂ ಆಗಿದೆ ಎಂಬ ಮಾತು ಸಲ್ಲದು. ರಾಧಾಕೃಷ್ಣನ್ ತಿರುಪತಿಗೆ ಹೋಗುವ ಮೊದಲೇ ನಾನು ಕೃತಿ ರಚಿಸಿದ್ದೆ. ಕಾದಂಬರಿಯಲ್ಲಿ ಬರುವ ಡಾ.ವೆಂಕಟ್, ಒತ್ತಡ ನಿವಾರಣೆಗೆ ತಾಯಿಯ ಸಲಹೆಯಂತೆ ತಿರುಪತಿಗೆ ಹೋಗುತ್ತಾನೆ’ ಎಂದು ವಿವರ ನೀಡಿದರು. ಸಾಹಿತಿ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತನಲ್ಲ. ಆದರೆ, ಯಾವುದೇ ಕ್ಷೇತ್ರದ ಬಗ್ಗೆ ಬರೆಯುವ ಮುನ್ನ ಸಾಕಷ್ಟು ಅಧ್ಯಯನ ನಡೆಸಬೇಕು. ಆಗ ಮಾತ್ರ ಉತ್ತಮ ಕೃತಿ ಹೊರಬರಲು ಸಾಧ್ಯ ಎಂದು ಪ್ರತಿಪಾದಿಸಿದರು.

ತರ್ಕವನ್ನು ಬಿಟ್ಟು ಕಾದಂಬರಿ ಓದ­ಬೇಕು. ಇಲ್ಲ­ವಾದರೆ ಕೃತಿ ಆಸ್ವಾದಿಸಲು ಸಾಧ್ಯವಿಲ್ಲ. ‘ಯಾನ’ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಮಾಹಿತಿ ನೀಡಿದರು. ‘ಯಾನ ಕಾದಂಬರಿ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದೆ. ವಿಜ್ಞಾನ ನನ್ನ ಕ್ಷೇತ್ರವಲ್ಲ. ಆದರೆ, ವಿಜ್ಞಾನಕ್ಕೂ ತತ್ವಶಾಸ್ತ್ರಕ್ಕೂ ಅವಿನಾಭಾವ ಸಂಬಂಧ. ಶಂಕರಾ­ಚಾರ್ಯರ ತತ್ವಗಳಿಗೂ, ಐನ್‌ಸ್ಟೀನ್ ಅವರ ವಿಜ್ಞಾನಕ್ಕೂ 11 ಶತಮಾನಗಳ ಅಂತರವಿದ್ದರೂ ಆಲೋಚನೆಗಳ ನಡುವೆ ಸಾಮ್ಯತೆ ಇದೆ. ಹಾಗೆಯೇ, ಸಾಹಿತಿ ಯಾವುದೇ ವಿಷಯ ಆಯ್ಕೆ ಮಾಡಿ­ಕೊಳ್ಳುವುದಿಲ್ಲ. ಬದಲಿಗೆ ಅದು ಒಳಗೆ ಹುಟ್ಟುತ್ತದೆ; ಬೆಳೆಯುತ್ತದೆ. ಅಭಿವೃದ್ಧಿ ಹೊಂದುತ್ತದೆ. ನಂತರ ಅದಕ್ಕೆ ಬೇಕಾದ ಪುಸ್ತಕಗಳ ಅಧ್ಯಯನ ನಡೆಸಿದರೆ ಪರಿಣಾಮಕಾರಿ ಕೃತಿ ಬರೆಯಲು ಸಾಧ್ಯವಾಗುತ್ತದೆ’ ಎಂದು ವಿಶ್ಲೇಷಿಸಿದರು.

ಬಹಳಷ್ಟು ಮಂದಿ ‘ಯಾನ-–2’ ಬರೆಯುವಂತೆ ಒತ್ತಾಯಿಸುತ್ತಿದ್ದಾರೆ.  ಸದ್ಯ ಅಂತಹ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT