ಡಿ.ಎಸ್. ನಾಗಭೂಷಣ, ಡಾ. ರಾಜೇಂದ್ರ ಚೆನ್ನಿ ಮೊದಲಾದವರು ‘ಅನಂತಮೂರ್ತಿ ವಿರುದ್ಧ ಟೀಕೆ ನಿಲ್ಲಲಿ’ ಎಂದು ಬರೆದಿರುವ ಪತ್ರಕ್ಕೆ (ವಾ.ವಾ. ಜೂ. 17) ಪ್ರತಿಕ್ರಿಯೆ.

ಶಿವಮೊಗ್ಗದ ಕೆಲವು ಬುದ್ಧಿಜೀವಿಗಳು ಸಮಾನ ಮನಸ್ಕ ವಲಯಕ್ಕೆ ಸಲ್ಲುವ ವಿಷಯಗಳನ್ನು ಸಾರ್ವಜನಿಕ ವಲಯದಲ್ಲಿ ತಂದರೆ.. ಕನ್ನಡ ಸಾಹಿತ್ಯ ಸಂಸ್ಕೃತಿಗಳ ಆರೋಗ್ಯಕರ ಬೆಳವಣಿಗೆ ಶೋಚನೀಯವಾಗುತ್ತದೆ ಎಂದು ಆತಂಕ ಪಡುತ್ತಿರುವುದು ನಿಜಕ್ಕೂ ದುರದೃಷ್ಟಕರ. ಅದಾವ ಬಗೆಯ ದುಗುಡ ಇವರನ್ನು ಹೀಗೆ ಯೋಚಿಸುವಂತೆ ಪ್ರೇರೇಪಿಸಿದೆಯೋ ಅರ್ಥವಾಗುತ್ತಿಲ್ಲ. ಅನಂತಮೂರ್ತಿ, ಕಲಬುರ್ಗಿ ನಡುವಿನ ವಿವಾದ ಸಾರ್ವಜನಿಕ ವಲಯದೊಳಗೆ ಪ್ರವೇಶಿಸಿದುದರಿಂದಲೇ ಅನಂತಮೂರ್ತಿಯವರನ್ನು ವಿವಾದಕ್ಕೀಡು ಮಾಡುವ ಕಲಬುರ್ಗಿಯವರ ವಿಫಲ ಪ್ರಯತ್ನ ಬಯಲಾದುದು. ಇದನ್ನು ಅವರೇ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಾವು ಬಲ್ಲಂತೆ ಅನಂತಮೂರ್ತಿಯವರದ್ದು ನಿಂದಕರನ್ನೂ ಸದಾ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ ಗಾಂಧಿಯ ವಿವೇಕದಿಂದ ಪ್ರೇರಣೆ ಪಡೆದ ಚಿಂತನೆಗಳಾಗಿವೆ. ಗಾಂಧಿಯ ಆಲೋಚನೆ ಮತ್ತು ಪ್ರಯೋಗಗಳಿಗೆ ಎಂದೂ ಇದು ಸಮಾನಮನಸ್ಕ ಖಾಸಗಿ ವಲಯಕ್ಕೆ ಸೇರಿದ್ದು ಮತ್ತು ಇದು ಸಮಸ್ತ ಸಾರ್ವಜನಿಕ ವಲಯಕ್ಕೆ ಸೇರಿದ್ದು ಎಂಬ ಭೇದ ತಿಳಿದಿರಲಿಲ್ಲ.

ಇದರರ್ಥ ಅನಂತಮೂರ್ತಿ ಗಾಂಧಿಯ ಕಟ್ಟಾ ಅನುಯಾಯಿ ಎಂದಲ್ಲ. ಆದರೆ ಅವರಿಗೆ ತಮ್ಮ ವಿಚಾರಗಳ ಬಗ್ಗೆ ಅಖಂಡವಾದ ಬದ್ಧತೆಯಿರುವ ಕಾರಣ ಅವರು ಕಳೆದ ಹಲವು ದಶಕಗಳಿಂದ ಇಂತಹ ಅದೆಷ್ಟೋ ನಿಂದನೆ, ಕಟಕಿಗಳನ್ನು ಕಂಡು ಸುಮ್ಮನೆ ನಕ್ಕು ನಿರ್ಲಕ್ಷಿಸುತ್ತ ಬಂದಿದ್ದಾರೆ. ಆ ಬದ್ಧತೆಯ ಜೊತೆಗೆ ತಮ್ಮ ವಿಚಾರಗಳನ್ನು ತಾವೇ ಅನುಮಾನಿಸುವ ಮತ್ತು ಮರುಶೋಧನೆಗೆ ಒಳಪಡಿಸುವ ಗುಣದಿಂದಾಗಿಯೇ (ಈ ಗುಣ ಗಾಂಧಿಯಲ್ಲೂ ಇತ್ತು) ಅವರು ನಮ್ಮ ನಡುವೆ ಸಾರ್ವಜನಿಕ ಬುದ್ಧಿಜೀವಿ (ಇದು ರಾಮಚಂದ್ರ ಗುಹಾ ಅವರ ಮಾತು) ಎಂದು ಜನಜನಿತರಾಗಿರುವುದು. ನಿಜ, ನಿಂದನೆಯ ಕರೆಗಳಿಂದ ಕುಟುಂಬದವರಿಗೆ ಮುಜುಗರವಾಗಬಹುದು.

ಆ ನಿಂದನೆಯ ಕರೆಗಳು ಎಲ್ಲಿಂದ ಬರುತ್ತವೆ ಎಂಬುದನ್ನು ಪತ್ತೆ ಮಾಡಿ ಅಂತಹ ಪುಂಡರನ್ನು ತಹಬಂದಿಗೆ ತರಲು ತಕ್ಕುದಾದ ತಾಂತ್ರಿಕ ಪರಿಕರಗಳನ್ನು ಈಗಾಗಲೇ ನಮ್ಮ ಪೊಲೀಸ್ ವ್ಯವಸ್ಥೆ ಅಳವಡಿಸಿಕೊಂಡಿದೆ. ಅಂದ ಮೇಲೆ ಇಂತಹ ಪುಂಡರ ಸೊಲ್ಲಡಗಿಸಲು ಸಮಕಾಲೀನರಾದ ಇತರ ಬುದ್ಧಿಜೀವಿಗಳ ಬಳಿ ಅಂಗಲಾಚುವುದು ವಿಹಿತವಲ್ಲ.

ಸಮಾನ ಮನಸ್ಕರಾದ ನಮ್ಮ ಪ್ರತಿಭಾವಂತ ಚಿಂತಕರು ಸಾರ್ವಜನಿಕ ವಲಯದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಾರದೇ? ಅಥವಾ ಇವರ ಚಿಂತನಾ ಸೂಕ್ಷ್ಮಗಳು ಸಾರ್ವಜನಿಕ ವಲಯದ ಹುಲುಮಾನವರಿಗೆಲ್ಲ ಅರ್ಥವಾಗುವುದಿಲ್ಲ ಎಂದೇನಾದರೂ ತೀರ್ಮಾನಿಸಿಕೊಂಡಿರುವರೇ? ಸಾರ್ವಜನಿಕ ವಲಯವೆಂಬ ದಿವ್ಯವನ್ನು ಹೊಕ್ಕು ಜೀವಂತವಾಗಿ ಹೊರಬರುವ ಚಿಂತನೆಗಳಷ್ಟೇ ಕನ್ನಡ ಸಾಹಿತ್ಯ ಸಂಸ್ಕೃತಿಯ ಮೂಲಧಾತುಗಳನ್ನು ರೂಪಿಸಬಲ್ಲದು. ಇವರು ಇದು ಬೌದ್ಧಿಕ ವಿವೇಚನೆ, ಸೂಕ್ಷ್ಮ ಸಾಹಿತ್ಯಕ, ಸಾಂಸ್ಕೃತಿಕ ಚರ್ಚೆಗಳಿಗೆ ಅನುಕೂಲಕರ ವಾತಾವರಣವಿಲ್ಲದ ಕೆಟ್ಟಕಾಲ ಎಂದು ತಲ್ಲಣಿಸಿದ್ದಾರೆ.

ಮನುಷ್ಯ ನಾಗರಿಕತೆಯ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ ಎಲ್ಲ ಕಾಲವೂ ಇದೇ ತರಹದ ಕೆಟ್ಟಕಾಲವೇ ಆಗಿರುವುದು ತಿಳಿಯುತ್ತದೆ. ಅಲ್ಲದೆ ಇಂತಹ ಕೆಟ್ಟಕಾಲದಲ್ಲೇ ಬುದ್ಧಿಜೀವಿಗಳೆನಿಸಿಕೊಂಡವರ ವಿಚಾರಗಳ ಚರ್ಚೆ ಸಾರ್ವಜನಿಕ ವೇದಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ನಡೆಯಬೇಕಾಗಿದೆ. ಆಗ ಮಾತ್ರ ಯಾವುದು ಹುಸಿ ಮತ್ತು ಯಾವುದು ದಿಟ ಎಂಬುದು ಪದೇ ಪದೇ ಸಾಬೀತಾಗುವುದು.
–ಡಾ. ಟಿ.ಎನ್. ವಾಸುದೇವಮೂರ್ತಿ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.