ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬುಲ್ಸ್ ಜಯಭೇರಿ

ಕಬಡ್ಡಿ ಲೀಗ್‌: ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚಿಲಾರ ಪಡೆ
Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ಜೈಪುರ (ಪಿಟಿಐ/ಐಎಎನ್‌ಎಸ್‌):  ನಾಯಕ ಮಂಜಿತ್‌ ಚಿಲಾರ  ದಾಳಿ ಹಾಗೂ ಟ್ಯಾಕ್ಲಿಂಗ್‌ನಲ್ಲಿ ಮನಮೋಹಕ ಆಟ ಆಡಿ ಸವಾಯಿ ಮಾನ್‌ಸಿಂಗ್‌ ಒಳಾಂಗಣ ಕ್ರೀಡಾಂಗಣದಲ್ಲಿ  ನೆರೆದಿದ್ದ ಕಬಡ್ಡಿ  ಪ್ರಿಯರ ಮೆಚ್ಚುಗೆಗೆ ಪಾತ್ರರಾದರು.

ಅವರ ಆಲ್‌ರೌಂಡ್‌ ಆಟದ ಬಲದಿಂದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನ ತನ್ನ ನಾಲ್ಕನೇ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿತು.

ಸೋಮವಾರ ನಡೆದ ಪಂದ್ಯದಲ್ಲಿ ಮಂಜಿತ್ ಚಿಲಾರ ಬಳಗ 33–17 ಪಾಯಿಂಟ್ಸ್‌ಗಳಿಂದ ದಬಾಂಗ್‌ ಡೆಲ್ಲಿ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು  20ಕ್ಕೆ ಹೆಚ್ಚಿಸಿಕೊಂಡು ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿತು. ಆಡಿದ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಸೋಲು ಹಾಗೂ ಗೆಲುವುಗಳನ್ನು ಕಂಡಿರುವ ದಬಾಂಗ್‌ 10 ಪಾಯಿಂಟ್ಸ್‌ ಹೊಂದಿದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಟಾಸ್‌ ಗೆದ್ದ ಬುಲ್ಸ್‌ ನಾಯಕ ಮಂಜಿತ್‌ ಚಿಲಾರ ಬಲಬದಿಯ ಕೋರ್ಟ್‌ ಆಯ್ಕೆ ಮಾಡಿಕೊಂಡರು. ದಬಾಂಗ್‌ ಪರ ದಾಳಿ ನಡೆಸಿದ ರೋಹಿತ್‌ ಕುಮಾರ್‌ ಚೌಧರಿ ಮತ್ತು ಕಾಶಿ ಲಿಂಗ ಅಡಕೆ ಹಾಗೂ ಬುಲ್ಸ್‌ ಪರ ರೈಡಿಂಗ್‌ ನಡೆಸಿದ ಅಜಯ್‌ ಠಾಕೂರ್‌ ಬರಿಗೈಲಿ ಮರಳಿದ ಕಾರಣ ಮೊದಲ ಎರಡು ನಿಮಿಷಗಳ ಆಟದಲ್ಲಿ ಯಾವುದೇ ಪಾಯಿಂಟ್‌ ದಾಖಲಾಗಲಿಲ್ಲ.

ಬಳಿಕ  ಬುಲ್ಸ್‌ ಪರ ಎರಡನೇ ಆಟಗಾರನಾಗಿ ದಾಳಿ ನಡೆಸಿದ ಮಂಜಿತ್‌ ಚಿಲಾರ ಅವರನ್ನು  ಯಶಸ್ವಿಯಾಗಿ ಹಿಡಿದ ದಬಾಂಗ್‌ ಆಟಗಾರರು ಪಾಯಿಂಟ್‌ ಖಾತೆ ತೆರೆದರು. ಇದರ ಬೆನ್ನಲ್ಲೇ ಬುಲ್ಸ್‌ ತಂಡದ ರಕ್ಷಣಾ ವಿಭಾಗದ ಆಟಗಾರರು  ದಬಾಂಗ್‌  ತಂಡದ ರೈಡರ್‌  ರೋಹಿತ್‌ ಕುಮಾರ್‌ ಚೌಧರಿ ಅವರನ್ನು ಬಂಧಿಸಿ 1–1ರಲ್ಲಿ ಸಮಬಲ ಕಂಡುಕೊಂಡರು.

ಮೂರನೇ ನಿಮಿಷದಲ್ಲಿ ರೈಡರ್‌ ಕಾಶಿ ಲಿಂಗ ಅಡಕೆ ಹಾಗೂ ಮರು ರೈಡಿಂಗ್‌ನಲ್ಲಿ ಅಮಿತ್‌ ಕುಮಾರ್‌ ಅವರನ್ನು ಬಂಧಿಸಿದ ಬುಲ್ಸ್‌ ಆಟ ಗಾರರು 3–1ರ ಮುನ್ನಡೆ ಗಳಿಸಿದರು. ಆ ನಂತರದ ಏಳು ನಿಮಿಷಗಳ ಆಟ ಸಮಬಲದ ಹೋರಾಟದಿಂದ ಸಾಗಿತು.  ಹೀಗಾಗಿ 10ನೇ ನಿಮಿಷದ ಅಂತ್ಯಕ್ಕೆ ಉಭಯ ತಂಡಗಳು ತಲಾ ನಾಲ್ಕು ಪಾಯಿಂಟ್‌ ಹೊಂದಿದ್ದವು.

ಬಳಿಕ ಬುಲ್ಸ್‌ ತಂಡದ ಆಟಗಾರರು ಚಾಕಚಕ್ಯತೆಯ ಆಟ ಆಡಿದ್ದರಿಂದ ಪಂದ್ಯ ದ ಚಿತ್ರಣವೇ ಬದಲಾಗಿ ಹೋಯಿತು. ರೈಡಿಂಗ್‌ನಲ್ಲಿ ಪಾಯಿಂಟ್ಸ್‌ ಕಲೆಹಾಕುವ ಜತೆಗೆ  ಟ್ಯಾಕ್ಲಿಂಗ್‌ನಲ್ಲೂ ಗಮನಸೆಳೆದ ಚಿಲಾರ ಬಳಗ 17–8ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ವಿರಾಮದ ಬಳಿಕ ದಬಾಂಗ್‌ ಆಟಗಾರರು ಚೇತರಿಕೆಯ ಆಟ ಆಡ ಬಹುದೆಂದು ಆಸೆಗಣ್ಣಿನಿಂದ ಕಾದಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಕಾಡಿತು.

ಇದಕ್ಕೆ ಕಾರಣವಾಗಿದ್ದು ಬುಲ್ಸ್‌ ನಾಯಕ ಚಿಲಾರ. ವೇಗ ಹಾಗೂ ಜಾಣ್ಮೆಯ ದಾಳಿಯ ಮೂಲಕ ದಬಾಂಗ್‌ ತಂಡದ ರಕ್ಷಣಾ ವಿಭಾಗವನ್ನು ಭೇದಿಸಿದ  ಅವರು ಒಂಬತ್ತು ಪಾಯಿಂಟ್ಸ್‌ ಗಳಿಸಿ ತಂಡದ ಗೆಲುವಿನ ಕನಸಿಗೆ ಜೀವ ತುಂಬಿದರು.  ಈ ತಂಡದ ಅಜಯ್‌ ಠಾಕೂರ್‌ (4 ಪಾಯಿಂಟ್ಸ್‌) ಅವರನ್ನೂ ದಬಾಂಗ್‌ ಆಟಗಾರರು ಕಟ್ಟಿಹಾಕಲು ವಿಫಲರಾದರು.

ರಕ್ಷಣಾ ವಿಭಾಗದಲ್ಲಿ ಧರ್ಮರಾಜ್‌ ಚೇರಲಾತನ್‌ (4) ಮತ್ತು ಸೋಮವೀರ್‌ ಶೇಖರ್‌ (6) ಮಿಂಚಿದ್ದರಿಂದ  ಬುಲ್ಸ್ ತಂಡದ ಗೆಲುವಿನ ಹಾದಿ ಇನ್ನಷ್ಟು ಸಲೀಸಾಯಿತು. ಜೋಗಿಂದರ್‌ ನರ್ವಾಲ್‌ (3) ಕೂಡಾ ಇವರಿಬ್ಬರಿಗೆ ಸೂಕ್ತ ಬೆಂಬಲ ನೀಡಿದರು. ದಬಾಂಗ್‌ ತಂಡದ ರೋಹಿತ್‌ ಚೌಧರಿ ತಮ್ಮ ಪ್ರತಿ ದಾಳಿಯಲ್ಲೂ ಪಾಯಿಂಟ್‌್ ತಂದಿತ್ತು ಬುಲ್ಸ್‌ ಆಟಗಾರರ ವಿಶ್ವಾಸಕ್ಕೆ ಪೆಟ್ಟು ನೀಡುವ ಪ್ರಯತ್ನ ನಡೆಸಿದರು. ಆದರೆ ಇತರ ಆಟಗಾರರಿಂದ ಅವರಿಗೆ ಸೂಕ್ತ ಬೆಂಬಲ ಸಿಗದಿದ್ದುದರಿಂದ ಈ ತಂಡ ಸೋಲಿನ ಪ್ರಪಾತಕ್ಕೆ ಕುಸಿಯಿತು.

ಟೈಟಾನ್ಸ್‌ಗೆ ಜಯ:  ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡ 33–22 ಪಾಯಿಂಟ್ಸ್‌ಗಳಿಂದ ಹಾಲಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಮಣಿಸಿತು. ಪಿಂಕ್‌ ಪ್ಯಾಂಥರ್ಸ್‌ ತಂಡಕ್ಕೆ ಟೂರ್ನಿಯಲ್ಲಿ ಎದುರಾದ ಸತತ ನಾಲ್ಕನೇ ಸೋಲು ಇದಾಗಿದೆ.

ಇಂದಿನ ಪಂದ್ಯಗಳು
ಬೆಂಗಳೂರು ಬುಲ್ಸ್‌–ಜೈಪುರ ಪಿಂಕ್‌ ಪ್ಯಾಂಥರ್ಸ್‌.
ಸ್ಥಳ: ಜೈಪುರ
ಆರಂಭ: ರಾತ್ರಿ 8ಕ್ಕೆ

ಪುಣೇರಿ ಪಲ್ಟನ್‌–ಬೆಂಗಾಲ್‌ ವಾರಿಯರ್ಸ್‌
ಆರಂಭ:
ರಾತ್ರಿ 9ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT