ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕಿನಕೇರಿಯ ಪರಿಸರದೊಲುಮೆ

Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ಇದು ಪರಿಸರ ಪ್ರೇಮಿ ಗ್ರಾಮ. ಇಲ್ಲಿನ ಜನರು ಸೆಗಣಿಯಿಂದ ‘ಪರಿಸರ ಸ್ನೇಹಿ’ ಇಂಧನ ಉತ್ಪಾದಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಮಾತ್ರವಲ್ಲ, ತ್ಯಾಜ್ಯ ನಿರ್ವಹಣೆಯಲ್ಲೂ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಇದು ಕರ್ನಾಟಕ– ಮಹಾರಾಷ್ಟ್ರದ ಗಡಿಯಲ್ಲಿರುವ ಗ್ರಾಮ, ಬೆಳಗಾವಿ ತಾಲ್ಲೂಕಿನ ಬೆಕ್ಕಿನಕೇರಿ. ಈ ಗ್ರಾಮದ ಶೇ 95ರಷ್ಟು ಮನೆಗಳ ಸದಸ್ಯರು ತಮ್ಮ ಮನೆಗಳ ಹಿತ್ತಲಲ್ಲಿ ಗೋಬರ್ ಅನಿಲ ಘಟಕಗಳನ್ನು ಅಳವಡಿಸುವ ಮೂಲಕ ಸ್ವಾವಲಂಬನೆಯ ಹಾದಿಯಲ್ಲಿ ಸಾಗಿದ್ದಾರೆ.

ಮಹಾರಾಷ್ಟ್ರದ ಗಡಿಯಿಂದ ಕೇವಲ ಒಂದೂವರೆ ಕಿ.ಮೀ. ಅಂತರದಲ್ಲಿರುವ ಕರ್ನಾಟಕದ ಕೊನೆಯ ಗ್ರಾಮ ಬೆಕ್ಕಿನಕೇರಿ ಪ್ರವೇಶಿಸುತ್ತಲೇ ಅಚ್ಚರಿಯಾಗುತ್ತದೆ. ಗ್ರಾಮದಲ್ಲಿ ಹೆಜ್ಜೆ, ಹೆಜ್ಜೆಗೂ ಇರುವ ಗೋಬರ್‌ ಅನಿಲ ಘಟಕಗಳು ಕಣ್ಣಿಗೆ ಬೀಳುತ್ತವೆ. ಅಲ್ಲದೇ, ಸ್ವಚ್ಛತೆಯಿಂದ ನಳನಳಿಸುತ್ತಿರುವ ಗ್ರಾಮದ ರಸ್ತೆಗಳು, ರಸ್ತೆ ಬದಿಯಲ್ಲಿರುವ ತ್ಯಾಜ್ಯ ಸಂಗ್ರಹದ ಗುಂಡಿಗಳು, ಗ್ರಾಮಸ್ಥರೇ ನಿರ್ಮಿಸಿರುವ ಕೃತಕ ಕೆರೆ ‘ಪರಿಸರ ಪ್ರೇಮ’ವನ್ನು ಜಾಗೃತಗೊಳಿಸುತ್ತವೆ!

ಸ್ವಚ್ಛತೆಯ ಮಂತ್ರ
ಸ್ವಚ್ಛತೆಯ ಮಂತ್ರ ಜಪಿಸುತ್ತಿರುವ ಬೆಕ್ಕಿನಕೇರಿಯು 4,884 ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ 586 ಮನೆಗಳಿದ್ದು, 500ಕ್ಕೂ ಹೆಚ್ಚು ಮನೆಗಳ ಹಿತ್ತಿಲನ್ನು ಗೋಬರ್‌ ಅನಿಲ ಘಟಕಗಳು ಅತಿಕ್ರಮಿಸಿಕೊಂಡಿವೆ! ಇದೀಗ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಮನೆಗಳ ಹಿತ್ತಿಲಲ್ಲೂ ಗೋಬರ್‌ ಅನಿಲ ಘಟಕ ಅಳವಡಿಸುವ ಪರಂಪರೆ ಮುಂದುವರಿದಿದೆ. ಸ್ಥಳಾವಕಾಶದ ಕೊರತೆಯಿರುವ ಮನೆಗಳನ್ನು ಹೊರತುಪಡಿಸಿ, ಗ್ರಾಮದ ಎಲ್ಲ ಮನೆಗಳಲ್ಲೂ ಈ ಘಟಕವನ್ನು ಕಾಣಬಹುದಾಗಿದೆ.

‘ನಮ್ಮ ಊರಲ್ಲಿ ಮೊದಲ ಗೋಬರ್‌ ಅನಿಲ ಘಟಕ ಆರಂಭಗೊಂಡಿದ್ದು 1986ರಲ್ಲಿ. ಭೀಮಸೇನ್‌ ಕೋಳಿ, ನಾರಾಯಣ ಸಾವಂತ ಹಾಗೂ ಆನಂದ ದಾಯಗೊಂಡೆ ಎಂಬುವರು ಆರಂಭದಲ್ಲಿ ತಮ್ಮ ಮನೆಗಳ ಹಿತ್ತಿಲಲ್ಲಿ ಘಟಕ ಅಳವಡಿಸಿದರು. ಘಟಕದಿಂದ ಲಭಿಸುವ ಇಂಧನದಿಂದಲೇ ಅಡುಗೆ ತಯಾರಿಸಲಾರಂಭಿಸಿದರು. ಇದರಿಂದ ಆಕರ್ಷಿತರಾದ ಗ್ರಾಮಸ್ಥರು, ಒಬ್ಬೊಬ್ಬರಾಗಿ ಈ ಘಟಕ ಅಳವಡಿಕೆ ಮುಂದಾದರು. ಇದರ ಫಲವಾಗಿ ಇಂದು ಗ್ರಾಮದಲ್ಲಿ 500ಕ್ಕೂ ಹೆಚ್ಚು ಗೋಬರ್‌ ಅನಿಲ ಘಟಕಗಳು ತಲೆ ಎತ್ತಿವೆ’ ಎಂದು ಗ್ರಾ.ಪಂ. ಅಧ್ಯಕ್ಷೆ ರೇಖಾ ಖದವಾಡಕರ, ಸದಸ್ಯ ಮಲ್ಲಪ್ಪ ಗಾವಡೆ ಹಾಗೂ ನಾಗೇಶ ನಂದಗಡೆ ಹೇಳುತ್ತಾರೆ.

‘10/10 ಅಡಿ ಅಳತೆಯ ಜಾಗದಲ್ಲಿ ಸುಮಾರು ₨ 40 ಸಾವಿರ ವೆಚ್ಚದಲ್ಲಿ ಈ ಘಟಕ ಅಳವಡಿಸಬಹುದು. ನಿತ್ಯ ಮೂರ್ನಾಲ್ಕು ಎಮ್ಮೆ ಅಥವಾ ಎತ್ತುಗಳ ಸೆಗಣಿಯನ್ನು ಈ ಘಟಕಕ್ಕೆ ಹಾಕಿ, ನಾಲ್ಕು ಕೊಡ ನೀರು ಹಾಕಿದರೆ ಸಾಕು. ಪ್ರತಿದಿನ ಐದಾರು ಜನರಿರುವ ಕುಟುಂಬಕ್ಕೆ ಅಡುಗೆಗಾಗಿ ಬೇಕಾಗುವಷ್ಟು ಇಂಧನ ಪಡೆಯಬಹುದು. ನಂತರದಲ್ಲಿ ಸೆಗಣಿ ಘಟಕದಿಂದ ಹೊರ ಚೆಲ್ಲುವುದರಿಂದ, ಅದನ್ನು ಹೊಲಕ್ಕೆ ಹಾಕಿ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದು ಹೇಳುತ್ತಾರೆ.

ತ್ಯಾಜ್ಯ ನಿರ್ವಹಣಾ ಘಟಕ
‘ಬೆಕ್ಕಿನಕೇರಿಯು ‘ಪರಿಸರ ಸ್ನೇಹಿ’ ಇಂಧನ ಉತ್ಪಾದನೆ ಮಾತ್ರವಲ್ಲ, ತ್ಯಾಜ್ಯ ನಿರ್ವಹಣೆಯಲ್ಲೂ ಮುಂದಿದೆ. ಇಲ್ಲಿ ಪ್ರತಿ ಮನೆಗೆ ಘನ ಹಾಗೂ ತ್ಯಾಜ್ಯ ಪದಾರ್ಥಗಳ ವಿಂಗಡಣೆಗಾಗಿ ಶಾಸಕರಿಂದ ಎರಡು ಪ್ಲಾಸ್ಟಿಕ್‌ ಡಬ್ಬಿಗಳನ್ನು ನೀಡಲಾಗಿದೆ. ಪ್ರತಿ 20 ಮನೆಗಳಿಗೆ ಒಂದರಂತೆ ಕಸ ಹಾಕಲು ತ್ಯಾಜ್ಯ ಸಂಗ್ರಹದ ಗುಂಡಿ ನಿರ್ಮಿಸಲಾಗಿದೆ. ತ್ಯಾಜ್ಯ ನಿರ್ವಹಣಾ ಘಟಕವೂ ಇದ್ದು, ಗ್ರಾಮದಲ್ಲಿ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಬೆಕ್ಕಿನಕೇರಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಶೋಕ ಮಿರ್ಜಿ ಅವರು.

‘ನಮ್ಮದು ಐದು ಜನರ ಕುಟುಂಬ. ನಾವು ಗೋಬರ್‌ ಅನಿಲ ಘಟಕದಿಂದ ಉತ್ಪಾದನೆಯಾಗುವ ಇಂಧನದಿಂದಲೇ ಅಡುಗೆ ಮಾಡುತ್ತೇವೆ. ಸರ್ಕಾರ ಸ್ವಲ್ಪ ನೆರವಾದರೆ, ಇದರಿಂದಲೇ ವಿದ್ಯುತ್‌ ಸಹ ಉತ್ಪಾದಿಸಬಹುದು’ ಎನ್ನುತ್ತಾರೆ ಗ್ರಾಮದ ಮಹಿಳೆ ಮಲ್ಲವ್ವ.

ಸಿಲಿಂಡರ್‌ ಹಂಗಿಲ್ಲ
ಇಂದು ಇಡೀ ದೇಶದಲ್ಲಿ ಅಡುಗೆ ಅನಿಲಕ್ಕಾಗಿ ಪೈಪೋಟಿ ನಡೆಯುತ್ತಿದೆ. ನಾನಾ ರೀತಿಯ ಹೋರಾಟಗಳು ನಡೆಯುತ್ತಿವೆ. ಆದರೆ, ಈ ಗ್ರಾಮದ ಪರಿಸ್ಥಿತಿ ಇದಕ್ಕೆ ಭಿನ್ನ. ಇಲ್ಲಿನ ಇಲ್ಲಿನ ಜನರಿಗೆ ಅಡುಗೆ ಅನಿಲದ (ಸಿಲಿಂಡರ್) ಹಂಗಿಲ್ಲ. ಅಡುಗೆ ಅನಿಲಕ್ಕಾಗಿ ಬುಕ್ಕಿಂಗ್ ಮಾಡುವ ಅಗತ್ಯವೂ ಇಲ್ಲ., ಇಲ್ಲಿ ಸಿಲಿಂಡರ್‌ಗಳು ಕಣ್ಣಿಗೆ ಬೀಳುವುದೂ ಇಲ್ಲ!

ನೈರ್ಮಲ್ಯ ಪುರಸ್ಕಾರ
ಗ್ರಾಮೀಣ ಸ್ವಚ್ಛತೆ ಕಾಪಾಡುವಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಕ್ಕಿನಕೇರಿ ಗ್ರಾಮ ಪಂಚಾಯ್ತಿಗೆ ರಾಜ್ಯ ಸರ್ಕಾರದ ವತಿಯಿಂದ 2011–12ನೇ ಸಾಲಿನ ‘ನೈರ್ಮಲ್ಯ ಪುರಸ್ಕಾರ’ ಲಭಿಸಿದೆ. ಈ ಪುರಸ್ಕಾರದಲ್ಲಿ ಬೆಕ್ಕಿನಕೇರಿ ಪಂಚಾಯ್ತಿಯು ಬೆಳಗಾವಿ ವಿಭಾಗದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಇದರ ಜೊತೆಗೆ ಬೆಕ್ಕಿನಕೇರಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಇದೀಗ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಿರ್ಜಿ ನೇತೃತ್ವದಲ್ಲಿ ಸದಸ್ಯರು ಬೆಕ್ಕಿನಕೇರಿಯನ್ನು ‘ಬಯಲು ಮುಕ್ತ ಗ್ರಾಮ ಪಂಚಾಯ್ತಿ’ಯನ್ನಾಗಿ ಮಾಡುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಇದಕ್ಕಾಗಿ ಹಗಲಿರುಳೆನ್ನದೇ ದುಡಿಯುತ್ತಿದ್ದಾರೆ. ಪರಿಸರ ಸ್ನೇಹಿ ಇಂಧನ ಉತ್ಪಾದಿಸುವ ಮೂಲಕ ಸ್ವಾವಲಂಬನೆಯ ಹಾದಿಯಲ್ಲಿ ಸಾಗಿರುವ ಬೆಕ್ಕಿನಕೇರಿ ಗ್ರಾಮಸ್ಥರಿಗೆ ಸಲಾಂ ಹೇಳಲೇಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT