ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ನಿರೀಕ್ಷೆಯಲ್ಲಿ ...

Last Updated 27 ಸೆಪ್ಟೆಂಬರ್ 2015, 19:42 IST
ಅಕ್ಷರ ಗಾತ್ರ

‘ವಿಶ್ವಕಪ್‌ ಬಳಿಕ ಒಂದು ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಇತ್ತು. ಕ್ರೀಡಾ ಕೋಟಾ ಅಥವಾ ಅಂಗವಿಕಲರ ಕೋಟಾದ ಅಡಿಯಲ್ಲಾದರೂ ಆ ಆಸೆ ಈಡೇರುತ್ತದೆ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ, ಇಷ್ಟು ವರ್ಷಗಳಾದರೂ ನೌಕರಿಯ ಕನಸು ಕನಸಾಗಿಯೇ ಉಳಿದಿದೆ...’

1998ರಲ್ಲಿ ನಡೆದ ಮೊದಲ ಅಂಧರ ಏಕದಿನ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಗೌರವ ಪಡೆದಿದ್ದ ಭಾರತದ ಬಾಲಾಜಿ ದಾಮೋರ್‌ ಅವರ ನೋವಿನ ಮಾತುಗಳಿವು.

ಬಾಲಾಜಿ ಸೊಗಸಾಗಿ ಆಡುತ್ತಿದ್ದರು. ಆದ್ದರಿಂದ ಅವರನ್ನು ‘ಅಂಧರ ಕ್ರಿಕೆಟ್‌ನ ಸಚಿನ್ ತೆಂಡೂಲ್ಕರ್‌’ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದರು. ಅಂಧರ ಮೊದಲ ವಿಶ್ವಕಪ್‌ ನಡೆದು 17 ವರ್ಷಗಳೇ ಉರುಳಿವೆ. ಆಗಿನ ‘ಹೀರೋ’ ಬಾಲಾಜಿ ಈಗ ದನ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ!

ಕ್ರಿಕೆಟ್‌ನ ನಂಟು ಮುಗಿದ ಬಳಿಕ ಉದ್ಯೋಗ ಎನ್ನುವುದು ಇಂತಹ ಬಹುತೇಕ ಅಂಧ ಕ್ರಿಕೆಟಿಗರ ಪಾಲಿಗೆ ಮರೀಚಿಕೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿ ಇರುವ ಭಾರತದಲ್ಲಿ ‘ಇಲ್ಲ’ಗಳ ನಡುವೆಯೇ ಅಂಧರ ಕ್ರಿಕೆಟ್‌ ಬೆಳೆಯುತ್ತಿದೆ. ರಾಷ್ಟ್ರೀಯ ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಂದ ಪ್ರೋತ್ಸಾಹ ಸಿಗದಿದ್ದರೂ ಇಲ್ಲಿನ ಪ್ರತಿಭೆಗಳು ಏಕದಿನ ಮತ್ತು ಮೊದಲ ಟ್ವೆಂಟಿ– 20 ವಿಶ್ವಕಪ್‌ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ, ತಾರತಮ್ಯ ಮಾತ್ರ ನಿಂತಿಲ್ಲ.

ಮುಂಬರುವ ಟ್ವೆಂಟಿ–20 ವಿಶ್ವಕಪ್‌ಗಾಗಿ ಬಲಿಷ್ಠ ಯುವ ತಂಡವನ್ನು ಕಟ್ಟುವ ಕಾರ್ಯ ನಡೆಯುತ್ತಿದೆ. ಸೌಲಭ್ಯಗಳು ಇಲ್ಲ ಎಂಬ ಕೊರತೆಯ ನಡುವೆಯೂ ಎರಡು ವಿಶ್ವಕಪ್‌ ಜಯಿಸಿದ ಅಂಧ ಕ್ರಿಕೆಟಿಗರಲ್ಲಿ ಆತ್ಮವಿಶ್ವಾಸ ಮನೆ ಮಾಡಿದೆ. ಬೇರುಮಟ್ಟದಿಂದಲೇ ಪ್ರತಿಭಾನ್ವಿತರ ಶೋಧಕ್ಕೆ ರಾಷ್ಟ್ರೀಯ ಅಂಧರ ಕ್ರಿಕೆಟ್‌ ಸಂಸ್ಥೆ  ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ.

ರಾಜ್ಯದಲ್ಲಿ ತಯಾರಿ: ಕಳೆದ ವರ್ಷ ನಡೆದ ದಕ್ಷಿಣ ವಲಯ ಅಂಧರ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತ್ತು. ಈ ಅಕ್ಟೋಬರ್‌ 19ರಿಂದ ನಡೆಯಲಿರುವ ದಕ್ಷಿಣ ವಲಯ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ತುಮಕೂರಿನಲ್ಲಿ ರಾಜ್ಯ ಮಟ್ಟದ ಟ್ವೆಂಟಿ–20 ಟೂರ್ನಿ ನಡೆಯಿತು.

ರಾಜ್ಯದಲ್ಲಿರುವ ಸುಮಾರು 18 ತಂಡಗಳ ಪೈಕಿ 12 ತಂಡಗಳು ಇದರಲ್ಲಿ ಭಾಗವಹಿಸಲಿವೆ. ರಾಜ್ಯ ತಂಡವನ್ನು ಬಲಪಡಿಸಲು ಪ್ರತಿಭಾನ್ವಿತರ ಆಯ್ಕೆಗೆ ರಾಜ್ಯ ಅಂಧರ ಕ್ರಿಕೆಟ್‌ ಸಂಸ್ಥೆ ಇಲ್ಲಿನ ಆಟಗಾರರ ಮೇಲೆ ಗಮನ ಹರಿಸಲಿದೆ. ಮುಂಬರುವ ಏಷ್ಯಾ ಕಪ್‌ ಮತ್ತು ಟ್ವೆಂಟಿ–20 ಟೂರ್ನಿಗಳಿಗೆ ರಾಷ್ಟ್ರೀಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆ ಸಜ್ಜಾಗಿದೆ. ಹೀಗಾಗಿ ರಾಜ್ಯದ ಆಟಗಾರರ ಪಾಲಿಗೆ ಈ ಟೂರ್ನಿ ಮಹತ್ವದ್ದು ಎನಿಸಿದೆ.

ಭಾರತ ಎರಡು ವಿಶ್ವಕಪ್‌ಗಳನ್ನು ಗೆದ್ದಾಗ ಕನ್ನಡಿಗ ಶೇಖರ್‌ ನಾಯ್ಕ್‌ ತಂಡವನ್ನು ಮುನ್ನಡೆಸಿದ್ದರು. 2002ರಿಂದಲೂ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಶಿವಮೊಗ್ಗದ ಹರಿಕೆರೆ ತಾಂಡಾದ ಶೇಖರ್‌ ಅವರಿಗೆ 2010ರಲ್ಲಿ ತಂಡದ ನೇತೃತ್ವ ವಹಿಸುವ ಅವಕಾಶ ಲಭಿಸಿತ್ತು. ಹಿಂದೆಯೂ ಭಾರತ ತಂಡ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತ ಸಾಧನೆ ಮಾಡಿರಲಿಲ್ಲ. ವಿಶ್ವಕಪ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸರಣಿಗಳಲ್ಲಿ ಗೆದ್ದ ಬಳಿಕ ಅಂಧರ ಕ್ರಿಕೆಟ್‌ಗೂ ಪ್ರಾಯೋಜಕರು ಬೆಂಬಲ ನೀಡುತ್ತಿದ್ದಾರೆ.

ವಿಶ್ವಕಪ್‌ ಗುರಿ: ಮುಂದಿನ ವರ್ಷದ ಜನವರಿ 16ರಿಂದ ಕೊಚ್ಚಿಯಲ್ಲಿ ಏಷ್ಯಾ ಕಪ್‌ ಕ್ರಿಕೆಟ್‌ ನಡೆಯಲಿದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ. ಮುಂದಿನ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ ವೇಳೆ ನಡೆಯಲಿರುವ ಎರಡನೇ ಟ್ವೆಂಟಿ–20 ವಿಶ್ವಕಪ್‌ಗೆ ಉತ್ತಮ ತಂಡ ಕಟ್ಟಲು ಈ ಟೂರ್ನಿ ಉತ್ತಮ ವೇದಿಕೆ ಎನಿಸಿದೆ ಎನ್ನುತ್ತಾರೆ ಶೇಖರ್‌ ನಾಯ್ಕ್‌.

‘ಏಷ್ಯಾ ಕಪ್ ಮತ್ತು ವಿಶ್ವಕಪ್‌ಗಾಗಿ ಕಠಿಣ ತಯಾರಿ ನಡೆಸುತ್ತಿದ್ದೇವೆ. ಸತತವಾಗಿ ಗೆಲ್ಲುತ್ತಿದ್ದರೆ ಕೆಎಸ್‌ಸಿಎ, ಬಿಸಿಸಿಐ, ಸರ್ಕಾರ ಮತ್ತು ಪ್ರಾಯೋಜಕರು ನಮ್ಮತ್ತ ಗಮನ ಹರಿಸುತ್ತಾರೆ ಎಂಬ ಆಶಯ ಇದೆ. ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡುವಂತೆ ಬಿಸಿಸಿಐಗೆ ಕೇಳುತ್ತಿದ್ದರೂ ಪ್ರಯೋಜನವಾಗಿಲ್ಲ. ದೇಶದಲ್ಲಿ 35 ರಿಂದ 40 ಸಾವಿರ ಅಂಧ ಕ್ರಿಕೆಟಿಗರಿದ್ದಾರೆ. ಬಿಸಿಸಿಐ ನೆರವು ದೊರೆತರೆ ಅಂಧರ ಕ್ರಿಕೆಟ್‌ ಇನ್ನಷ್ಟು ಬೆಳೆಯಲಿದೆ. ನೆರೆಯ ಪಾಕಿಸ್ತಾನ, ಶ್ರೀಲಂಕಾಗಳ ರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಗಳು ಅಂಧರ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುತ್ತಿವೆ. ಆದರೆ ಇಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ’ ಎಂದು ಶೇಖರ್ ಬೇಸರ ವ್ಯಕ್ತಪಡಿಸುತ್ತಾರೆ.

‘ನಮಗೆ ಅಭ್ಯಾಸಕ್ಕೆ ಮೈದಾನಗಳೇ ಸರಿಯಾಗಿ ಸಿಗುವುದಿಲ್ಲ. ಟ್ವೆಂಟಿ–20 ವಿಶ್ವಕಪ್‌ ಪಂದ್ಯಕ್ಕೆ ನೀಡಿದ್ದು ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನವನ್ನು. ಸೆಲೆಬ್ರಿಟಿ ಲೀಗ್‌ನಂತಹ ಟೂರ್ನಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಕೊಡುತ್ತಾರೆ. ವಿಶ್ವಕಪ್‌ ಅದಕ್ಕಿಂತಲೂ ಚಿಕ್ಕದೇ? ಒಳ್ಳೆಯ ಕ್ರೀಡಾಂಗಣ, ತರಬೇತಿ, ಹಣಕಾಸಿನ ಸೌಲಭ್ಯ, ಮೂಲ ಸೌಕರ್ಯಗಳು ದೊರೆತರೆ ಕತ್ತಲೆಯಲ್ಲಿರುವ ಅಂಧರ ಕ್ರಿಕೆಟ್‌ಗೆ ಬೆಳಕು ಸಿಕ್ಕಂತಾಗುತ್ತದೆ. ನನ್ನಂತ ಅದೆಷ್ಟೋ ಆಟಗಾರರ ಬದುಕೂ ಬೆಳಕಾಗುತ್ತದೆ’ ಎಂದು ಶೇಖರ್‌ ನೋವಿನಿಂದ ಹೇಳುತ್ತಾರೆ.

ಪ್ರಕಾಶ್ ಜಯರಾಮಯ್ಯ, ರವಿ, ಶೇಖರ್ ಅವರಂಥ ಬೆರಳೆಣಿಕೆಯಷ್ಟೇ ರಾಜ್ಯದ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಂದ ಮಾತ್ರಕ್ಕೆ ಕರ್ನಾಟಕದಲ್ಲಿ ಪ್ರತಿಭಾವಂತ ಆಟಗಾರರು ಇಲ್ಲವೆಂದೇನಲ್ಲ. ಸಮರ್ಥನಂ ಸಂಸ್ಥೆ ಅಂಧರ ಕ್ರಿಕೆಟ್‌ ಬೆಳವಣಿಗೆಗೆ ಸಾಕಷ್ಟು ಶ್ರಮಿಸುತ್ತಿದೆ. ಈ ಸಂಸ್ಥೆ ಕೇವಲ ನಗರ ಪ್ರದೇಶಗಳಲ್ಲಿ ಪ್ರತಿಭಾ ಶೋಧನೆಯನ್ನಷ್ಟೇ ಮಾಡದೇ ಗ್ರಾಮೀಣ ಭಾಗದ ಪ್ರತಿಭೆಗಳಿಗೂ ಒತ್ತು ನೀಡಬೇಕು. ದೇಶಿ ಟೂರ್ನಿಗಳ ಸಂಖ್ಯೆ ಹೆಚ್ಚೆಚ್ಚು ಆಯೋಜಿಸಬೇಕು. ಆಗಷ್ಟೇ, ಅಂಧರ ಕ್ರಿಕೆಟ್‌ಗೆ ಪ್ರಾಯೋಜಕರ ಮತ್ತಷ್ಟು ಬೆಂಬಲ ಲಭಿಸಬಹುದು. 
***
ವಿಶ್ವಕಪ್‌ ಗೆದ್ದಾಗ ನಮ್ಮ ತಂಡದಲ್ಲಿದ್ದ ಕೇರಳದ ಆಟಗಾರನಿಗೆ ಅಲ್ಲಿನ ಸರ್ಕಾರ ಉದ್ಯೋಗ ನೀಡಿತು. ಏಷ್ಯಾ ಕಪ್‌ಗೆ ಶೇ 50ರಷ್ಟು ಹಣವನ್ನು ಅಲ್ಲಿನ ಸರ್ಕಾರವೇ ನೀಡುತ್ತಿದೆ. ಕೇರಳದಲ್ಲಿರುವ ಪ್ರೋತ್ಸಾಹ ನಮ್ಮಲ್ಲಿ ಏಕಿಲ್ಲ?
- ಶೇಖರ್‌ ನಾಯ್ಕ್‌,
ಭಾರತ ಅಂಧರ ಕ್ರಿಕೆಟ್‌ ತಂಡದ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT