ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕು ತಂದವರು

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸರ್ಕಾರದ ಯಾವ ಯೋಜನೆಗಳೂ ಇವರನ್ನು ತಲುಪುತ್ತಿಲ್ಲ. ಸರ್ಕಾರದಿಂದ ಕೊಟ್ಟ ಸೋಲಾರ್ ದೀಪಗಳು ಬಹುತೇಕ ಉರಿಯುವುದೇ ಇಲ್ಲ. ಕಂಡ ಕಂಡವರಲ್ಲಿ ವಿದ್ಯುತ್‌ಗಾಗಿ ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಲೇ ಇಲ್ಲ. ಬೆಳಕು ನೀಡಿ ಕೈಹಿಡಿಯಬೇಕಾದ ಸರ್ಕಾರದ ಮೌನದಿಂದ ಎಲ್ಲೆಲ್ಲೂ ಗಾಢಾಂಧಕಾರ!

ದಟ್ಟ ಕಾಡಿನ ಕತ್ತಲ ಜಗತ್ತಿನಲ್ಲಿ ಬೆಳಕು ಕಂಡುಹಿಡಿದು ಬಾಳಲ್ಲಿ ಹೊಸತನವನ್ನು ಕಂಡುಕೊಂಡ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಗ್ರಾಮಸ್ಥರ ಕಥನವಿದು. ಪೇಟೆ- ಪಟ್ಟಣಗಳಿಂದ ಬಹುದೂರದ ವ್ಯಾಪ್ತಿಯಲ್ಲಿ ತಲೆ-ತಲಾಂತರದಿಂದ ನೆಲೆ ಕಂಡುಕೊಂಡಿರುವ ಮಲೆಕುಡಿಯ ಸಮುದಾಯಕ್ಕೆ ಸೇರಿದ ಸುಮಾರು 23 ಮನೆಗಳು ಕುತ್ಲೂರು ಪರಿಸರದಲ್ಲಿದೆ.

ಸಾಯಂಕಾಲವಾಗುತ್ತಲೇ ಕಾಡಿನ ಕತ್ತಲೆ ಆವರಿಸಿಬಿಡುತ್ತದೆ. ಬೆಳಕು ಕಾಣಬೇಕೆಂದರೆ ಚಿಮಿಣಿ ದೀಪವೇ ಆಧಾರವಾಗಿತ್ತು. ಆದರೆ ಆ ಮನೆಗಳಲ್ಲೀಗ ಬೆಳಕು ಮೂಡಿದೆ. ಎಷ್ಟೋ ದಿನಗಳನ್ನು ಅಂಧಕಾರದಲ್ಲಿಯೇ ನೂಕಿರುವ ಇಲ್ಲಿಯ ಜನರೀಗ ನೆಮ್ಮದಿಯ ಉಸಿರಾಡುತ್ತಿದ್ದಾರೆ. ಇದಕ್ಕೆ ಕಾರಣವಾದುದು ಪಶ್ಚಿಮ ಘಟ್ಟದಿಂದ ಹರಿದು ಬರುವ ನೀರು!

ಹೌದು. ಈ ನೀರು ಗ್ರಾಮದಲ್ಲಿ ಬೆಳಕು ಮೂಡಲು ಕಾರಣವಾಗಿದೆ. ಈ ನೀರನ್ನು ಬಳಸಿಕೊಂಡು ಜಲವಿದ್ಯುತ್ ಘಟಕಕ್ಕೆ ಹರಿಸಿ ಬೆಳಕು ಪಡೆಯಲಾಗುತ್ತಿದೆ. ಎಂಟು ಮನೆಗಳಲ್ಲಿ ವಿದ್ಯುತ್ ಯಾವುದೇ ಖರ್ಚಿಲ್ಲದೇ ಉತ್ಪಾದನೆಯಾಗುತ್ತಿದೆ.

ಮನೆಯಲ್ಲಿ ಬೆಳಕು
ಹೀಗೆ ಬೆಳಕು ಕಂಡವರಲ್ಲಿ ಕುತ್ಲೂರು ಒಂಜರ್ದಡಿ ಮಂಜಪ್ಪನವರೂ ಒಬ್ಬರು. ಶುಭ ಸಮಾರಂಭಗಳಿಗೆ 12 ಕಿ.ಮೀ. ದೂರದ ಕಾಡಿನಲ್ಲಿ ಜನರೇಟರ್ ಹೊತ್ತು ತರಬೇಕಾದ ಕಾಲವಿತ್ತು. ಆದರೆ ಈಗ ಹಾಗಿಲ್ಲ. ಸುಮಾರು 1 ಲಕ್ಷ 10 ಸಾವಿರ ಖರ್ಚು ಭರಿಸಿ ದಿನಂಪ್ರತಿ 12 ಲೈಟುಗಳನ್ನು ಉರಿಸುವುದರೊಂದಿಗೆ ಟೀವಿ, ಮಿಕ್ಸಿಯನ್ನೂ ಬಳಸುತ್ತಾರೆ. ಕೆರೆ ಕಟ್ಟಿ ತೋಡಿನ ನೀರನ್ನು ಪೈಪ್ ಮೂಲಕ ಕೆರೆಗೆ ಹರಿಸಿ ಅಲ್ಲಿಂದ ಸುಮಾರು 100 ಮೀಟರ್ ಪೈಪ್ ಅಳವಡಿಸಿ ಜಲವಿದ್ಯುತ್ ಘಟಕಕ್ಕೆ ಹರಿಸಿದ್ದಾರೆ. ನೀರಿನ ರಭಸಕ್ಕೆ ಮೋಟಾರು ತಿರುಗಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಮಳೆಗಾಲದಲ್ಲಿ ದೊಡ್ಡ ಪೈಪ್‌ನಲ್ಲಿ ನೀರನ್ನು ಹರಿಸಿದರೆ, ಬೇಸಿಗೆಯಲ್ಲಿ ಸಣ್ಣ ಪೈಪ್ ಮೂಲಕ ನೀರು ಹರಿದು ಬರುತ್ತದೆ.

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಎಲ್ಲರನ್ನೂ ಕಾಡುತ್ತದೆ. ಆದರೆ ಇಲ್ಲಿ ಆ ಸಮಸ್ಯೆಯೇ ಇಲ್ಲ. ಮಳೆ ಬಂದರೂ ದಿನದ 24 ಗಂಟೆಯೂ ಕರೆಂಟ್‌ ಇರುತ್ತದೆ! ಅದೂ ಯಾವುದೇ ಖರ್ಚಿಲ್ಲದೇ! ಸುಮಾರು 35 ಲೈಟುಗಳನ್ನು ಉರಿಸಬಹುದು. ಒಂದು ಘಟಕದಿಂದ ಎರಡು ಮನೆಯ ಅವಶ್ಯಕತೆ ಈಡೇರಿಸಬಹುದು, ಸರ್ಕಾರದ ಸಹಾಯಧನವೂ ದೊರಕಿದರೆ ಉತ್ತಮ ಎಂಬುದು ಮಂಜಪ್ಪ ಅವರ ಅನುಭವದ ಮಾತು. ಆ ಜಲವಿದ್ಯುತ್ ಘಟಕಕ್ಕೆ ಹರಿಸಿದ ನೀರು ವ್ಯರ್ಥವಾಗುವುದಿಲ್ಲ. ಅದನ್ನು ಗದ್ದೆಗೆ ಬಳಸುತ್ತಾರೆ, ತೋಟಕ್ಕೂ ಹರಿಸುತ್ತಾರೆ. ಇಂತಹ ಜಲವಿದ್ಯುತ್ ಬಳಸಿ ಬೆಳಕು ಕಂಡ ಮನೆಗಳು ಈ ಪ್ರದೇಶದಲ್ಲೀಗ ಹೆಚ್ಚಾಗಿದೆ. ಈ ವರ್ಷ ತಮಗೂ ಈ ರೀತಿಯ ಬೆಳಕನ್ನು ಪಡೆಯುವ ಯೋಚನೆ ಇದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುಧಾಕರ ಎಂ.ಕೆ.

ಸರ್ಕಾರದ ವಿವಿಧ ಯೋಜನೆಗಳ ಹೆಸರಿನಲ್ಲಿ ಹಣ ಬಿಡುಗಡೆ ಮಾಡಿದರೂ ಅವುಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಆಕ್ಷೇಪದಿಂದ ಅಭಿವೃದ್ಧಿ ಸಾಧ್ಯವಿಲ್ಲವೆಂದವರೇ ಹೆಚ್ಚು. ದೂರದ ಮತ್ತು ಒಳನಾಡು ಪ್ರದೇಶದ ನಕ್ಸಲ್ ಪೀಡಿತ ಪ್ರದೇಶಾಭಿವೃದ್ಧಿಗೆ ಬಂದಿರುವ ಹಣದ ವಿನಿಯೋಗವಾಗದೇ ಇರುವ ಈ ಸಂದರ್ಭದಲ್ಲಿ ಇಲ್ಲಿನ ಅರಣ್ಯವಾಸಿಗಳನ್ನು ಹೊರದೂಡಲು ಪ್ರಯತ್ನಿಸಿದವರೇ ಹೆಚ್ಚು. ಅದೆಲ್ಲವನ್ನೂ ಮೀರಿ ಸ್ವಾವಲಂಬಿಯಾಗಿ ನೆಲೆನಿಂತು ಬದುಕನ್ನು ಕಟ್ಟಿಕೊಂಡವರು ಮಾದರಿ ಜೀವನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT