ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕ ಹಂಬಲದ ಆಟ

Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಚಿಕ್ಕಂದಿನಲ್ಲಿ ನೋಡಿದ್ದ ‘ಮಿಂಚಿನ ಓಟ’ ಚಿತ್ರ ಕೀರ್ತಿ ಅವರನ್ನು ತೀವ್ರವಾಗಿ ಕಾಡುತ್ತಿತ್ತು. ಶಂಕರ್‌ನಾಗ್‌ ಅಭಿಮಾನಿಯಾದ ಅವರಲ್ಲಿ ಈ ಚಿತ್ರದಲ್ಲಿನ ಜೈಲು ಒಡೆದು ಪರಾರಿಯಾಗುವ ಸನ್ನಿವೇಶ ಅಚ್ಚಳಿಯದೆ ಉಳಿದಿತ್ತು. ಅವರಲ್ಲಿ ತಾನೂ ಇಂಥದ್ದೊಂದು ಸಿನಿಮಾ ಮಾಡಬೇಕು ಎಂಬ ತುಡಿತ ಹುಟ್ಟಿತು. ಹಿಂದಿಯಲ್ಲಿ ‘ಬದ್ಲಾಪುರ್’ನಂತಹ ಚಿತ್ರ ನೀಡಿದ ಶ್ರೀರಾಮ್ ರಾಘವನ್‌ ಅವರ ಪ್ರಭಾವಕ್ಕೂ ಕೀರ್ತಿ ಒಳಗಾದವರು.

ಒಮ್ಮೆ ಮಡಿಕೇರಿ ಸಮೀಪದಲ್ಲಿನ ನ್ಯಾಯಾಂಗ ಕಾರಾಗೃಹವನ್ನು ನೋಡಿದಾಗ, ತಾನು ಸಿನಿಮಾ ಮಾಡಬೇಕು, ಅದೂ ಇದೇ ಜೈಲಿನಲ್ಲಿ ಎಂದು ದೃಢನಿಶ್ಚಯ ಮಾಡಿಕೊಂಡರು. ಅಲ್ಲಿನ ಭೌಗೋಳಿಕ ಪರಿಸರವನ್ನು ಮನದಲ್ಲಿಟ್ಟುಕೊಂಡೇ ಚಿತ್ರಕಥೆ ರೂಪಿಸಿದರು. ಪಾತ್ರಗಳ ಸೃಷ್ಟಿಯ ವೇಳೆಗೆ ಅದನ್ನು ನಿಭಾಯಿಸುವ ಕಲಾವಿದರ ಚಿತ್ರವೂ ಅವರ ಕಣ್ಣಮುಂದಿತ್ತು.

ಅನಂತನಾಗ್‌ ಅವರೇ ಜೈಲರ್‌ ಪಾತ್ರ ಮಾಡಬೇಕೆಂದು ಪಾತ್ರಕ್ಕೆ ಅನಂತ್‌ ಎಂದೇ ಹೆಸರಿಟ್ಟರು. ಉಳಿದ ಪಾತ್ರಗಳನ್ನೂ ಹಾಗೆ ಕಡೆದರು. ಇಂದು (ನ.27) ತೆರೆಕಾಣುತ್ತಿರುವ ‘ದಿ ಪ್ಲ್ಯಾನ್‌’ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ ಎಂದು ನಿರ್ದೇಶಕ ಕೀರ್ತಿ ಭರವಸೆ ಹೊಂದಿದ್ದಾರೆ. ಅನಂತನಾಗ್‌ ಚಿತ್ರ ಗೆಲ್ಲುತ್ತದೆ ಎಂದು ಬೆನ್ನುತಟ್ಟಿ ಹೇಳಿರುವುದು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ‘ಮಿಂಚಿನ ಓಟ’ ಚಿತ್ರದ ಬಳಿಕ ಕನ್ನಡದಲ್ಲಿ ಅಷ್ಟು ಪರಿಣಾಮಕಾರಿಯಾದ ಜೈಲು ಮುರಿಯುವ ಚಿತ್ರ ಬಂದಿಲ್ಲ ಎನ್ನುತ್ತಾರೆ ಕೀರ್ತಿ.

ಕನಸು ಕಾಣುವ ಮತ್ತು ಕನಸುಗಳೇ ಇಲ್ಲದ ವಿಭಿನ್ನ ಮನಸ್ಥಿತಿಯ ನಾಲ್ವರು ಯುವಕರಲ್ಲಿ ಭವಿಷ್ಯದ ಬಗ್ಗೆ ಯೋಜನೆಗಳಿಲ್ಲ. ಇಂತಹ ಯುವಕರು ಆಕಸ್ಮಿಕವಾಗಿ ಜೈಲು ಸೇರುತ್ತಾರೆ. ಒಳಹೋದ ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಯೋಜನೆ ರೂಪಿಸತೊಡಗುತ್ತಾರೆ. ಅವರು ಜೈಲು ಸೇರುವುದು ಏಕೆ? ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡುವುದು ಏಕೆ? ಯಾವ ರೀತಿಯ ಪ್ಲ್ಯಾನ್‌ ಮಾಡುತ್ತಾರೆ? ಅವರಿಗೆ ಯಾರು ಸಹಾಯ ಮಾಡುತ್ತಾರೆ? ಯಾರು ಅಡ್ಡಿ ಮಾಡುತ್ತಾರೆ? ಇತ್ಯಾದಿ ಅಂಶಗಳೇ ‘ದಿ ಪ್ಲ್ಯಾನ್’ನ ಮೂಲವಸ್ತುಗಳು.

ಚಿತ್ರಕಥೆ ಹೆಣೆಯುವ ಶ್ರಮಕ್ಕಿಂತಲೂ ಅವರಿಗೆ ಹೆಚ್ಚು ಕಷ್ಟವಾಗಿದ್ದು ಜೈಲ್‌ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು. ಕಥೆ ಮೆಚ್ಚಿದ್ದ ಅನಂತನಾಗ್‌ ಅವರನ್ನು ಒಪ್ಪಿಸಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಅವರಿಗೆ ಜೈಲಿನಿಂದ ಸಿಗಬೇಕಿದ್ದ ಅನುಮತಿ ಕೊನೆ ಕ್ಷಣದಲ್ಲಿ ಕೈತಪ್ಪಿತು. ಸಿನಿಮಾ ಮಾಡುವುದಾದರೆ ಅದೇ ಜೈಲಿನಲ್ಲಿ ಮಾಡಬೇಕು, ಇಲ್ಲದಿದ್ದರೆ ಬೇಡವೇ ಬೇಡ ಎಂದು ನಿರ್ಧರಿಸಿಕೊಂಡಿದ್ದ ಕೀರ್ತಿ ಮತ್ತೆ ಅನುಮತಿ ಪಡೆಯುವ ಹೋರಾಟಕ್ಕಿಳಿದರು.

ಕೊನೆಗೂ ಅದರಲ್ಲಿ ಯಶಸ್ವಿಯಾದರು. ದೊರೆತ 15 ದಿನಗಳ ಅವಕಾಶದಲ್ಲಿ ಮತ್ತೆ ತಂತ್ರಜ್ಞರನ್ನು ಕರೆಯಿಸಿ ಮಡಿಕೇರಿ ಜೈಲಿನಲ್ಲಿ ಚಿತ್ರೀಕರಣ ಪೂರೈಸಿದರು. ಇಡೀ ಚಿತ್ರ ಕೇಂದ್ರೀಕೃತವಾಗಿರುವುದು ಜೈಲರ್‌ ಮತ್ತು ನಾಲ್ಕು ಯುವಕರ ಮೇಲೆ. ಜೈಲರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಂತನಾಗ್ ಅವರೇ ಚಿತ್ರದ ಹೀರೊ ಎನ್ನುತ್ತಾರೆ ಕೀರ್ತಿ. ಚಿತ್ರದಲ್ಲಿ ಸಾಂದರ್ಭಿಕವಾಗಿ ಹುಟ್ಟಿಕೊಳ್ಳುವ ಹಾಸ್ಯವಿದೆ.

ಹಾಡು, ಹೊಡೆದಾಟಗಳಿಲ್ಲ, ಪ್ರೀತಿ ಪ್ರೇಮದ ದೃಶ್ಯಗಳಿಲ್ಲ. ಆದರೆ ಚಿತ್ರ ನಗಿಸುತ್ತದೆ, ಭಾವುಕಗೊಳಿಸುತ್ತದೆ, ಸೀಟಿನಂಚಿನಲ್ಲಿ ಕುಳಿತುಕೊಳ್ಳುವಂತೆ ಕೌತುಕ ಹುಟ್ಟಿಸುತ್ತದೆ ಎಂದು ಅವರು ವಿವರಿಸುತ್ತಾರೆ. ಚಿತ್ರಕಥೆಯ ಹೆಣಿಗೆ ಅಲ್ಲಲ್ಲಿ ಗೊಂದಲ ಹುಟ್ಟಿಸಬಹುದು. ಆದರೆ ಪ್ರತಿಯೊಂದಕ್ಕೂ ಸಂಬಂಧವಿರುತ್ತದೆ. ಗೊಂದಲ ಸೃಷ್ಟಿಸುವ ಉದ್ದೇಶದಿಂದ ಈ ರೀತಿ ಮಾಡಿಲ್ಲ. ಕಥೆಯ ನಿರೂಪಣೆ ವಿಭಿನ್ನವಾಗಿರಬೇಕೆಂಬುದಷ್ಟೇ ಕಾರಣ ಎಂದು ಅವರು ಹೇಳುತ್ತಾರೆ.

ಎಂಜಿನಿಯರಿಂಗ್‌ನಿಂದ ಸಿನಿಮಾಕ್ಕೆ...
ಮಂಜುನಾಥ್‌ ಕೀರ್ತಿ ಮೂಲತಃ ಎಂಜಿನಿಯರ್‌. ನಿರ್ದೇಶನದ ಸೆಳೆತನದಿಂದ ಕಂಪೆನಿಯೊಂದರಲ್ಲಿ ಇದ್ದ ಉದ್ಯೋಗ ತೊರೆದವರು. ಪಿಯುಸಿಯಲ್ಲಿ ಇದ್ದಾಗಿನಿಂದಲೂ ಅವರನ್ನು ಸಿನಿಮಾ ಸೆಳೆಯುತ್ತಿತ್ತು. ಆಗಲೇ ಸಿನಿಮಾ ರಂಗಕ್ಕೆ ಹೋಗಿ ಕೆಲಸ ಕಲಿಯಬೇಕೆಂಬ ಆಸೆ. ಆದರೆ ಮನೆಯಲ್ಲಿನ ಪರಿಸ್ಥಿತಿ ಅದಕ್ಕೆ ಅನುವು ಮಾಡಿಕೊಟ್ಟಿರಲಿಲ್ಲ. ದುಡಿಯುತ್ತಲೇ ಓದು ಮುಂದುವರಿಸುವ ಅನಿವಾರ್ಯತೆ.

ಎಂಜಿನಿಯರಿಂಗ್‌ ಓದುವಾಗ ಸಿನಿಮಾಟೊಗ್ರಫಿ ವಿದ್ಯೆಯನ್ನೂ ಕಲಿತರು. ಉದ್ಯೋಗಕ್ಕೆ ಸೇರಿದ ಬಳಿಕ ಅದನ್ನು ಕರಗತ ಮಾಡಿಕೊಂಡರು. ‘6–5=2’ ಚಿತ್ರದಲ್ಲಿ ಕ್ಯಾಮೆರಾ ಹಿಡಿದು ಚಿತ್ರರಂಗದ ಬದುಕಿಗೆ ಕಾಲಿಟ್ಟರು. ಆದರೆ ಅದರ ನಂತರ ಅಂತಹ ಅವಕಾಶಗಳು ಸಿಗಲಿಲ್ಲ. ಮುಂಬೈ ಕಡೆ ಮುಖ ಮಾಡಿ ಒಂದಷ್ಟು ಕಾಲ ಜಾಹೀರಾತುಗಳಿಗೆ ಕೆಲಸ ಮಾಡಿದರು. ಸುಮಾರು ಒಂದೂವರೆ ವರ್ಷದ ಕನಸು ‘ದಿ ಪ್ಲ್ಯಾನ್’ನ ಪ್ಲಾಟ್‌ ಹಿಡಿದು ಮತ್ತೆ ಮರಳಿದವರು ಈಗ ಅದನ್ನು ಈಡೇರಿಸಿಕೊಂಡ ಖುಷಿಯಲ್ಲಿದ್ದಾರೆ.

ಬಾಲಿವುಡ್ ಅಂಗಳಕ್ಕೂ ‘ಪ್ಲ್ಯಾನ್’
ಹಿಂದಿಯ ನಿರ್ದೇಶಕ ಶ್ರೀರಾಮ್ ರಾಘವನ್, ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅದನ್ನು ಹಿಂದಿಗೂ ಕೊಂಡೊಯ್ಯುವ ಬಯಕೆ ವ್ಯಕ್ತಪಡಿಸಿದ್ದಾರೆ. ಅವರೇ ಅದನ್ನು ನಿರ್ದೇಶಿಸುತ್ತಾರೋ ಅಥವಾ ನಾನೇ ನಿರ್ದೇಶಿಸುತ್ತೇನೆಯೋ ಗೊತ್ತಿಲ್ಲ. ಆದರೆ ಇದು ಬಾಲಿವುಡ್‌ಗೆ ಹೋಗುವುದಂತೂ ಖಚಿತ. ಜನವರಿ ಅಥವಾ ಫೆಬ್ರುವರಿಯಲ್ಲಿ ಇದು ನಿರ್ಧಾರವಾಗುತ್ತದೆ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ಕೀರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT