ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಆಗ್ರಹ

Last Updated 26 ಮೇ 2016, 8:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದಿರುವುದು ಮತ್ತು ಬರಗಾಲ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರ ಬಗ್ಗೆ ನಿರ್ಲಕ್ಷ್ಯ ತಾಳಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಸರಿದಾರಿಗೆ ತರುವವರೆಗೆ ಸಂಘಟಿತರಾಗಿ ಮತ್ತೆ ಹೋರಾಟ ಮಾಡಬೇಕಾಗಿದೆ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಹಾಗೂ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅಭಿಪ್ರಾಯಪಟ್ಟರು.

ಇಲ್ಲಿಯ ಕೋಟೆ ದ್ವಾರದ ಮುಂದೆ ಬುಧವಾರ ಹಮ್ಮಿಕೊಂಡಿದ್ದ ರೈತರ ಬೃಹತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೇ ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ರಾಜಕಾರಣಿಗಳ ಹೃದಯಕ್ಕೆ ನಾಟುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಕಳೆದ ಸಾಲಿನಲ್ಲಿ ₹ 6 ಲಕ್ಷ ಬೆಳೆ ಸಾಲ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ₹8.5 ಲಕ್ಷ ಸಾಲ ಕೊಡಬೇಕೆಂದು ಸರ್ಕಾರ ಹೇಳುತ್ತಿದೆ. ಸಾಲ ಪಡೆದ ರೈತರು ಗುಲಾಮಗಿರಿಯಲ್ಲಿ ದುಡಿಯಬೇಕೆಂಬ ಹುನ್ನಾರ ಸರ್ಕಾರದ್ದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ 9 ಕೋಟಿ ರೈತ ಕುಟುಂಬಗಳಿದ್ದು, ಪ್ರತಿವರ್ಷ 9 ಲಕ್ಷ ರೈತ ಕುಟುಂಬಗಳು ಒಕ್ಕಲುತನ ಮಾಡುವುದನ್ನು ಬಿಡುತ್ತಿವೆ. ಮುಂದೊಂದು ದಿನ ರೈತ ಬೆಳೆಯದಿದ್ದರೆ ದೇಶದಲ್ಲಿ ತೀವ್ರ ಆಹಾರ ಕೊರತೆ ಸಂಭವಿಸಿ ಹಸಿವಿನಿಂದ ಹಾದಿ ಬೀದಿಯಲಿ ಜನ ಸತ್ತಾರು ಎಂದು ಎಚ್ಚರಿಸಿದರು.

₹ 40 ಸಾವಿರ ಕೋಟಿ ತಾಳೆ ಎಣ್ಣೆಯು ಸೇರಿದಂತೆ ಉದ್ದು, ಹೆಸರು, ಕಡಲೆ ಧಾನ್ಯಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಕೇಳಿದರೆ ಬೆಲೆ ನಿಯಂತ್ರಣಕ್ಕಾಗಿ ಎಂದು ಹೇಳುತ್ತಾರೆ. ಇದು ದೇಶಕ್ಕೆ ನಾಚಿಕೆಯಾಗುವ ವಿಷಯವಾಗಿದೆ’ ಎಂದರು.

‘ಬಂಡವಾಳಶಾಹಿ ಅದಾನಿ ಒಬ್ಬರಿಗೆ ಸರ್ಕಾರ ₹ 72 ಸಾವಿರ ಕೋಟಿ ಸಾಲ ನೀಡಿದೆ. ಆದರೆ ದೇಶದ ಎಲ್ಲ ರೈತರಿಗೆ ಸೇರಿ ₹ 70 ಸಾವಿರ ಕೋಟಿ ಬೆಳೆ ಸಾಲ ನೀಡಲಾಗಿದೆ. ಬಜೆಟ್ ಪೂರ್ವದಲ್ಲಿ ಮೋದಿ ಸರ್ಕಾರ ಉದ್ದಿಮೆದಾರರು ಮತ್ತು ಬಂಡವಾಳಶಾಹಿಗಳ ₹ 1.14 ಸಾವಿರ ಕೋಟಿ ಸಾಲಮನ್ನಾ ಮಾಡಲಾಯಿತು. ಯಾವ ರಾಜಕಾರಣಿಯೂ ಇದರ ಬಗ್ಗೆ ಚಕಾರ ಎತ್ತಲಿಲ್ಲ. ಇದು ಮೋದಿ ಅಥವಾ ಜೇಟ್ಲಿ ದುಡ್ಡಲ್ಲ. ಸರ್ಕಾರ ನಡೆಸುವವರು ಮತ್ತು ಈ ರಾಜಕಾರಣಿಗಳು ಅವರ ಮುಸುರೆ ತಿಂದು ಅವರ ಆಶ್ರಯದಲ್ಲೇ ಬೆಳೆದವರು’  ಎಂದು ಅವರು ಕಿಡಿಕಾರಿದರು.

‘ದೊಡ್ಡ ಅಥವಾ ಸಣ್ಣ ರೈತರೆನ್ನದೆ ಅವರ ಸಾಲ ಮನ್ನಾ ಮಾಡಬೇಕು, 60 ವರ್ಷ ಮೀರಿದ ರೈತನಿಗೆ ಪಿಂಚಣಿ ಸೌಲಭ್ಯ ನೀಡಬೇಕು, ಕೃಷಿ ಉತ್ಪನ್ನಗಳ ಮೇಲೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಪೇಟೆಯಲ್ಲಿ ವ್ಯಾಪಾರಸ್ಥರಿಂದ ಆಗುತ್ತಿರುವ ಅನ್ಯಾಯ ತಡೆಗಟ್ಟಬೇಕು, ಕಳಸಾ, ಬಂಡೂರಿ ನಾಲಾ ಜೋಡಣೆ ವಿವಾದವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ಇತ್ಯರ್ಥ ಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಮಾತನಾಡಿ, ‘ರೈತರದು ಬದುಕಿನ ಸಮಸ್ಯೆಯಾಗಿದೆ. ಅವರ ಹೋರಾಟದಲ್ಲಿ ಯುವಕರು ಆಸಕ್ತಿ ತೋರುತ್ತಿಲ್ಲ. ಅವರೂ ರೈತರ ಹೋರಾಟದಲ್ಲಿ ಭಾಗವಹಿಸಬೇಕು’ ಎಂದರು.

ಚಿತ್ರದುರ್ಗದ ಶಾಂತಮ್ಮ, ಶಿವಾನಂದ ಹೊಳೆಹಡಗಲಿ, ಶಂಕ್ರೆಪ್ಪ ಯಡಳ್ಳಿ, ಸಿದ್ರಾಮ ರಂಜಣಗಿ, ಶರಣಗೌಡ ಬಿರಾದಾರ, ಬಸವರಾಜ ರಾಚರೆಡ್ಡಿ, ಗುರುರಾಜ ಹುಣಸೀಮರದ, ಜಿ. ಎಸ್. ಶಿವಣ್ಣ, ಸಿ. ಎನ್. ಶ್ಯಾಗೋಟಿ, ಜಿ. ಎಸ್. ಶಿವಣ್ಣ, ಬೈಲಪ್ಪ ದಳವಾಯಿ, ವಿರುಪಾಕ್ಷ ಹೊಸೂರ, ಚನಬಸಣ್ಣ ಮಸೂತಿ, ಮಹಾಂತೇಶ ರಾವುತ, ಆನಂದ ಮೂಡಲಗಿ, ಶಿವಪುತ್ರಪ್ಪ ಕರಡಿಗುದ್ದಿ, ನಿಜನಗೌಡ, ಬಸನಗೌಡ ಪಾಟೀಲ, ಸಿದ್ದಣ್ಣ ಕಂಬಾರ, ನಿರ್ಮಲಕಾಂತ ಪಾಟೀಲ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT