ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಸಿದ್ರೆ ವೋಟ್ ಹಾಕ್ತೀವಿ...

Last Updated 16 ಏಪ್ರಿಲ್ 2014, 9:18 IST
ಅಕ್ಷರ ಗಾತ್ರ

ತುಮಕೂರು: ‘ಪ್ರತಿ ಬಾರಿ ಎಲೆಕ್ಷನ್ ಬಂದಾಗಲೂ ರಾಜಕಾರಿಣಿಗಳು ಆಶ್ವಾಸನೆಗಳ ಸುರಿಮಳೆ ಸುರಿಸುತ್ತಾರೆ. ನಂತರ ನಮ್ಮತ್ತ ತಿರುಗಿಯೂ ನೋಡುವುದಿಲ್ಲ...’

– ಮಧುಗಿರಿ ತಾಲ್ಲೂಕಿನ ಹರಿಹರೊಪ್ಪ, ತುರುವೇಕೆರೆ ತಾಲ್ಲೂಕಿನ ಪಟ್ಟದಹೊಸಹಳ್ಳಿ ಮತ್ತು ಪಾವಗಡ ತಾಲ್ಲೂಕಿನ ನಿಡಗಲ್ ಗ್ರಾಮಸ್ಥರು ಇದೇ ಮಾತನ್ನು ಹೇಳುತ್ತಾ ಮತ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ.

ನೀರು ಕೊಡಿ ಸ್ವಾಮಿ
ಮಧುಗಿರಿ: ಸಮರ್ಪಕ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಪುರಸಭೆ ಕಛೇರಿ ಎದುರು ಹರಿಹರೊಪ್ಪ ಗ್ರಾಮದ ನಿವಾಸಿಗಳು ಖಾಲಿ ಕೊಡ ಹಿಡಿದು ಮಂಗಳವಾರ ಪ್ರತಿಭಟಿಸಿದರು.

ಪಟ್ಟಣದ 22ನೇ ವಾರ್ಡ್ ಹರಿಹರೊಪ್ಪ ಗ್ರಾಮದಲ್ಲಿ ಕೊಳವೆ ಬಾವಿ ಕೆಟ್ಟು ಹೋಗಿ ತಿಂಗಳೂ ಕಳೆದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಇದರಿಂದ ಜನ ಮತ್ತು ಜಾನುವಾರು­ಗಳಿಗೆ ತೊಂದರೆಯಾಗಿದೆ. ಜನರು ಕೂಲಿಗೆಂದು ಹೋಗಿದ್ದಾಗ ಪುರಸಭೆಯ ನೀರಿನ ಟ್ಯಾಂಕರ್ ಬರುತ್ತದೆ. ಜನರಿಗೆ ನೀರು ಹಿಡಿದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತು ವಾರ್ಡ್‌ನ ಸದಸ್ಯ ಶ್ರೀನಿವಾಸ್ ಅವರು ಪುರಸಭೆ ಮುಖ್ಯಾಧಿಕಾರಿ ಮತ್ತು ಎಂಜಿನಿಯರ್ ಅವರ ಗಮನ ಸೆಳೆದಿದ್ದಾರೆ. ಕೊಳವೆ ಬಾವಿಯ ಮೋಟಾರ್ ಕಳಚಿ ಬಿದ್ದಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ ಎಂದು ಜನರು ದೂರಿದರು.

ಕುಡಿಯುವ ನೀರಿನ ಸಮಸ್ಯೆ ಇರುವಾಗ ಮತ ಚಲಾಯಿಸುವುದು ಹೇಗೆ? ಎಂದು ಪ್ರಶ್ನಿಸಿದರು.
ಕೊಳವೆಬಾವಿಗೆ ತಾತ್ಕಾಲಿಕವಾಗಿ ವ್ಯಕ್ತಿಯೊಬ್ಬ­ರಿಗೆ ಸೇರಿದ ಮೋಟಾರ್ ಮತ್ತು ಪಂಪ್ ಅಳವಡಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ನಂತರ ನಿವಾಸಿಗಳು ಪ್ರತಿಭಟನೆ ಕೈಬಿಟ್ಟರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಶಿವಕುಮಾರ್, ಸಿದ್ದಗಂಗಮ್ಮ, ಸುಶೀಲಮ್ಮ, ಅನಸೂಯ, ನರಸಮ್ಮ, ಅನ್ನಪೂರ್ಣ, ನಾಗರತ್ನಾ, ಪದ್ಮಾ, ಲಕ್ಕಪ್ಪ, ನವೀನ್ ಇತರರು ಪಾಲ್ಗೊಂಡಿದ್ದರು.

ಇನ್ನೆಷ್ಟು ದಿನ ಕಾಯಬೇಕು...
ತುರುವೇಕೆರೆ: ಕುಡಿಯುವ ನೀರು ಹಾಗೂ ಕೃಷಿ ಉದ್ದೇಶಕ್ಕೆ ಶಾಶ್ವತ ನೀರಾವರಿ ವ್ಯವಸ್ಥೆ ರೂಪಿಸಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಅರೆಮಲ್ಲೇನ­ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೦ ಗ್ರಾಮ­ಗಳ ಗ್ರಾಮಸ್ಥರು ಮಂಗಳವಾರ ಹಳ್ಳದ­ಹೊಸಹಳ್ಳಿ ಗ್ರಾಮದಲ್ಲಿ ಧರಣಿ ನಡೆಸಿದರು.

ಲಕ್ಷ್ಮೀದೇವರಹಳ್ಳಿ, ಬಿಗನೇನಹಳ್ಳಿ, ಹುಲಿಕಲ್, ಕ್ಯಾಮಸಂದ್ರ ಸೋಪನಹಳ್ಳಿ, ಕೋಡಗಿಹಳ್ಳಿ ಗೊಲ್ಲರ­ಹಟ್ಟಿ, ಗಂಗನಹಳ್ಳಿ ಗ್ರಾಮಸ್ಥರು ಸಭೆ ಸೇರಿ ನೀರಾವರಿಗೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸ­ಲಾಗುವುದು ಎಂದು ಎಚ್ಚರಿಸಿದರು.

ರೈತ ಮುಖಂಡ ಹನುಮಂತಯ್ಯ ಮಾತ­ನಾಡಿ, ಚುನಾವಣೆಗೆ ಮೊದಲು ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆ ನೆರವೇರಿದರೂ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಜನಪ್ರತಿನಿಧಿಗಳು ಸುಳ್ಳು ಭರವಸೆ ನೀಡುತ್ತಿದ್ದಾರೆ. ನೀರಿಲ್ಲದ ಕಾರಣ ತೆಂಗಿನ ಮರಗಳು ಒಣಗಿ ಹೋಗುತ್ತಿವೆ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ, ಮುಖಂಡರಾದ ರಾಮಕೃಷ್ಣಯ್ಯ, ಜವರೇಗೌಡ, ಕಾಳೇಗೌಡ, ಹನುಮೇಗೌಡ, ರವಿಕುಮಾರ್ ಹಾಲು ಉತ್ಪಾದಕ ಸಂಘದ ರಾಮಕೃಷ್ಣ, ಕಾಂತರಾಜು, ದೇವರಾಜು, ಶಿವೇಗೌಡರು ಲಲಿತಮ್ಮ ಇತರರು ಭಾಗವಹಿಸಿದ್ದರು.

ಇಲ್ಲಿ ಏನೂ ಇಲ್ಲ...
ಪಾವಗಡ: ತಾಲ್ಲೂಕಿನ ನಿಡಗಲ್ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಮಂಗಳವಾರ ಎಚ್ಚರಿಸಿದರು.

ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿನ ದೇಗುಲ, ಕೋಟೆ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸುತ್ತಾರೆ. ಆದರೆ ಗ್ರಾಮಕ್ಕೆ ಬರಲು ಸೂಕ್ತ ಸೌಕರ್ಯವಿಲ್ಲ. ಸುತ್ತಮುತ್ತಲ ಗ್ರಾಮ, ಪಟ್ಟಣಕ್ಕೆ ತೆರಳಲು ಬಸ್‌ ಸೌಕರ್ಯವಿಲ್ಲ. ಬಡ ಜನತೆ ತುರ್ತು ಸ್ಥಿತಿಯಲ್ಲಿ ಆಸ್ಪತ್ರೆಗೆ ತೆರಳಲೂ ಸಾಧ್ಯ­ವಿಲ್ಲದ ಸ್ಥಿತಿ ಇದೆ ಎಂದು ದೂರಿದರು.

ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದೆ. ಆದರೆ ಸಮೀಪದಲ್ಲಿ ಎಲ್ಲಿಯೂ ಪ್ರೌಢಶಾಲೆ ಇಲ್ಲ. ೬ ಕಿ.ಮೀ ದೂರದ ನ್ಯಾಯದಗುಂಟೆ ಗ್ರಾಮ­ದಲ್ಲಿರುವ ಪ್ರೌಢಶಾಲೆಗೆ ಮಳೆಗಾಲದಲ್ಲಿ ಹೋಗಲು ಸಾಧ್ಯವಿಲ್ಲದ ಕಾರಣ ಅನೇಕರು ವಿದ್ಯಾಭ್ಯಾಸವನ್ನೇ ತ್ಯಜಿಸಿದ್ದಾರೆ. ನ್ಯಾಯ ಬೆಲೆ ಅಂಗಡಿ, ನಾಡ ಕಚೇರಿ, ಆರೋಗ್ಯ ಕೇಂದ್ರದ ಸೌಕರ್ಯವೂ ಗ್ರಾಮದಲ್ಲಿ ಇಲ್ಲ ಎಂದು ಅಳಲು ತೋಡಿಕೊಂಡರು.

ಹೆಸರಿಗೆ ಮಾತ್ರ ಹೋಬಳಿ ಕೇಂದ್ರವಾಗಿರುವ ಗ್ರಾಮದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಚುನಾವಣೆ, ರಾಜ್ಯೋತ್ಸವದ ಸಮಯದಲ್ಲಿ ಗ್ರಾಮದ ಅಭಿವೃದ್ಧಿಯ ಮಾತನಾಡುವ ರಾಜ­ಕಾರಣಿ­ಗಳು ನಂತರದ ದಿನಗಳಲ್ಲಿ ಇತ್ತ ಸುಳಿ­ಯುವುದಿಲ್ಲ.  ಗ್ರಾಮದಲ್ಲಿ ಪ್ರೌಢಶಾಲೆ, ನ್ಯಾಯ­ಬೆಲೆ ಅಂಗಡಿ, ಕಿರಿಯ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು. ಗ್ರಾಮಕ್ಕೆ ಬರಲು ಸಮರ್ಪಕ ರಸ್ತೆ, ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವತ್ತ ಗಮನ ಹರಿಸದಿದ್ದಲ್ಲಿ ಪಕ್ಷಾತೀತವಾಗಿ ಲೋಕಸಭಾ ಚುನಾವಣೆ  ಬಹಿಷ್ಕರಿಸಲು ನಿರ್ಧರಿಸ­ಲಾಗಿದೆ ಎಂದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಜೊಜ್ಜು­ನಾಯಕ, ಮಲ್ಲಣ್ಣ, ಮಲ್ಲಿ­ಕಾರ್ಜುನ, ರಾಮಪ್ಪ, ತಿಪ್ಪೇಸ್ವಾಮಿ, ಪಾಲಯ್ಯ, ಮಹಮದ್ ಸಾದಿಕ್, ಹನು­ಮಂತ­ರಾಯ, ಈರಣ್ಣ, ವೀರಭದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT