ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇನಾಮಿ ಆಸ್ತಿಗೆ ಏಳು ವರ್ಷ ಶಿಕ್ಷೆ

ತಿದ್ದುಪಡಿ ಮಸೂದೆಗೆ ಲೋಕಸಭೆ ಒಪ್ಪಿಗೆ
Last Updated 28 ಜುಲೈ 2016, 5:42 IST
ಅಕ್ಷರ ಗಾತ್ರ

ನವದೆಹಲಿ:  ಅಕ್ರಮ ಸಂಪತ್ತಿಗೆ ಕಡಿವಾಣ ಹಾಕುವ ಕಾನೂನನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸುವುದಕ್ಕಾಗಿ ಬೇನಾಮಿ ವಹಿವಾಟು ತಿದ್ದುಪಡಿ ಕಾಯ್ದೆ 2015ಕ್ಕೆ ಲೋಕಸಭೆ ಒಪ್ಪಿಗೆ ನೀಡಿದೆ.

ಬೇನಾಮಿ ಆಸ್ತಿ ಹೊಂದಿರುವವರಿಗೆ ಏಳು ವರ್ಷ ಶಿಕ್ಷೆ ಮತ್ತು ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ 25ರಷ್ಟು ದಂಡ ವಿಧಿಸುವುದಕ್ಕೆ ಈ ಕಾಯ್ದೆಯಲ್ಲಿ ಅವಕಾಶ ಇದೆ. ಹಾಗೆಯೇ ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಖರೀದಿಸಲಾದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಅವಕಾಶ ಇದೆ.
‘ಅಕ್ರಮ ಹಣ ಹೊಂದಿರುವ ಸಾಕಷ್ಟು ಜನರು ಕಾಲ್ಪನಿಕ ಹೆಸರಿನಲ್ಲಿ ಆಸ್ತಿ ಖರೀದಿಸುತ್ತಾರೆ.

ಇಂತಹ ವಹಿವಾಟುಗಳನ್ನು ತಡೆಯಲೇಬೇಕು’ ಎಂದು ಮಸೂದೆಯ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಧಾರ್ಮಿಕ ಸಂಸ್ಥೆಗಳ ಆಸ್ತಿಗಳು ಅಥವಾ ದೇವರ ಹೆಸರಿನಲ್ಲಿ ಇರುವ ಆಸ್ತಿಗಳಿಗೆ ಈ ಕಾಯ್ದೆಯಿಂದ ತೊಂದರೆಯಾಗಬಹುದು ಎಂದು ಕೆಲವು ಸದಸ್ಯರು ಎತ್ತಿದ ಕಳವಳಕ್ಕೆ, ಇಂತಹ ಸಂಸ್ಥೆಗಳಿಗೆ ಈ ಕಾನೂನಿನಿಂದ ವಿನಾಯಿತಿ ಇದೆ ಎಂದು ಜೇಟ್ಲಿ ತಿಳಿಸಿದ್ದಾರೆ.

‘ಚರ್ಚ್‌ ಅಥವಾ ಮಸೀದಿ ಅಥವಾ ಗುರುದ್ವಾರ ಅಥವಾ ದೇವಾಲಯವೊಂದು ಇಂತಹ ಆಸ್ತಿ ಹೊಂದಿದ್ದರೆ ಅದಕ್ಕೆ ಸೆಕ್ಷನ್‌ 58ರ ಅಡಿಯಲ್ಲಿ ವಿನಾಯಿತಿ ನೀಡುವುದಕ್ಕೆ ಅವಕಾಶ ಇದೆ’ ಎಂದು ಅವರು ಹೇಳಿದ್ದಾರೆ.

ಆದರೆ ಧರ್ಮದ ಹೆಸರಿನಲ್ಲಿ ತೆರಿಗೆ ವಂಚನೆಗೆ ಯತ್ನ ನಡೆಸಬಾರದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ‘ಅಕ್ರಮ ವಹಿವಾಟು ನಡೆಸಿ ಅದನ್ನು ಮುಚ್ಚಿಡುವುದಕ್ಕೆ ನಕಲಿ ಧಾರ್ಮಿಕ ಜನಾಂಗವೊಂದನ್ನು ಸೃಷ್ಟಿಸಿ, ಅದರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದರೆ ಅದಕ್ಕೆ ವಿನಾಯಿತಿ ದೊರೆಯದು’ ಎಂದು ಜೇಟ್ಲಿ ತಿಳಿಸಿದ್ದಾರೆ.

ಬೇನಾಮಿ ಆಸ್ತಿ ಎಂದರೇನು?: ಒಬ್ಬ ವ್ಯಕ್ತಿಯ ಹೆಸರಿಗೆ ನೋಂದಣಿಯಾಗುವ ಅಥವಾ ವರ್ಗಾವಣೆಯಾಗುವ  ಆಸ್ತಿಗೆ ಬೇರೊಬ್ಬರು ಹಣ ಪಾವತಿಸುವುದನ್ನು ಬೇನಾಮಿ ಆಸ್ತಿ ಎಂದು ಕಾಯ್ದೆಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT