ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯ ಕನವರಿಕೆ...

ಮಿದುಮಾತು: ಹೆಣ್ಣೊಬ್ಬಳ ಒಡಲಾಳದ ದನಿ
Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಈ ಬ್ಯಾಸಗಿ ಸೂಟಿ ಬಂದ್ರ ಸಾಕು. ಹೆಣ್ಮಕ್ಕಳ ಸಂಭ್ರಮಾನೇ ಬ್ಯಾರೆ.
ಮುಂಜೇನೆ ಬಿಸಿಲೇರುದ್ರೊಳಗ, ಮಾಳಗಿ ಮ್ಯಾಲೆ ಹಪ್ಪಳ, ಸಂಡಗಿ, ಕುರುಡಗಿ ಎಲ್ಲಾ ಅರಳಬೇಕು.
ಸಂಜೀ ಛಾ ಕುಡಿಯೂಕಿಂತ ಮೊದಲು ಅವನ್ನು ಕೆಳಗ ತರಬೇಕು. ಗಾಳಿ ಆಡಾಕ ನಮ್ಹಂಗ ಬಿಸಿಲ್ನಿಂದ ಬಂದ ಮ್ಯಾಲೆ ಕೈಕಾಲು ಚಾಚಿ ಮಲಕ್ಕೊಂಡು ಬಿಡ್ತಾವ.

ಇವೆಲ್ಲವೂ ಗಟ್ಟಿ ಡಬ್ಬಿಯೊಳಗ ಮಡಚಲಾರದೆ, ಮುರೀಲಾರದೆ ಇಡೂದೆ ಒಂದು ಸವಾಲು. ಡಬ್ಬಿಯೊಳಗೂ ಒಂದಾದ ಮ್ಯಾಲೊಂದು ಇಡಬೇಕು. ಮೊದಲು ಸಂಡಗಿ, ಆಮೇಲೆ ಕುರುಡಗಿ, ಆಮೇಲೆ ಹಪ್ಪಳ. ಇಲ್ಲೊಂದು ವಿಜ್ಞಾನ ಅಡಗೇದ. ಜೊತಿಗೆ ನಿರ್ವಹಣೆನು.
ಹಪ್ಪಳ ಮಾಡೂದಂದ್ರ ನಮ್ಮಕ್ಕ ನೆನಪಾಗ್ತಾಳ. ಅಕಿ ಮಾಡೂದು ಒಂದೆರಡಲ್ಲ, ಹತ್ತಾರು ನಮೂನಿ. ತಿಂಗಳದಾಗ ಎರಡು ಗ್ಯಾಸು ಮುಗಿಸಾಕಿ. ಹಪ್ಪಳದ ಹಿಟ್ಟು ಮಾಡೂದ್ರೊಳಗ.

ಬೆನ್ನು ನೋವು ಮಾಡ್ಕೊಳ್ಳಾಕಿ. ರೊಕ್ಕಾ ಕೊಟ್ರ ಎಲ್ಲಾ ನಮೂನಿ ಹಪ್ಪಳಾ ತರಬೌದು. ಅದ್ಯಾಕ ಹಿಂಗ ತ್ರಾಸು ಮಾಡ್ಕೋತಿ ಅಂತ ಕೇಳಿದ್ರ, ಬಿಸಿಲಾಗ ಬಾಡಿದ ಹಪ್ಪಳದ್ಹಂಗ ಮುಖ ಮಾಡ್ಕೊಳ್ಳಾಕಿ.

ಅವ್ವ ನಾಲ್ಕು ನಮೂನಿ ಮಾಡ್ತಿದ್ದಳು. ಅವಷ್ಟು ಕಲತೆ. ನಮ್ಮತ್ತಿ ಆರು ನಮೂನಿ ಮಾಡ್ತಾರ. ಅವೆಲ್ಲ ಕಲಸ್ಯಾರ. ಕೈ ಬ್ಯಾನಿ, ಬೆನ್ನು ಬ್ಯಾನಿ ಅನ್ಕೊಂತ ಕುಂತ್ರ, ನಮ್ಮವ್ವ–ನಮ್ಮತ್ತಿ ಮಾಡುವ ಹಪ್ಪಳಾ ನನ್ನ ಮಗಳು ಕಲಿಯೂದು ಬ್ಯಾಡನ? ಅವೆಲ್ಲ ಇಲ್ಲಿಗೆ ನಿಂತು ಹೋಗಬೇಕೇನು? ಇಂಥಾದ್ದೊಂದು ಪರಂಪರೆಯ ಪ್ರಶ್ನೆ ಒಗದು ಮತ್ತ ಹಿಟ್ಟಿನ ಹದಾ ನೋಡೂದ್ರೊಳಗ ತನ್ನನ್ನೇ ತಾನು ಕಳಕೊಳ್ಳಕಿ.

ಆದ್ರ ಯಾರರೆ ಹಪ್ಪಳ ಛೊಲೊ ಆಗ್ಯಾವ. ಉಪ್ಪು ಖಾರ ಪಸಂದ ಆಗ್ಯಾವ ಅಂದ್ರ ಸಾಕು. ಹಪ್ಪಳಕ್ಕಿಂತ ಅಗಲಗೆ ಅರಳಕ್ಕಿ.
ಬ್ಯಾಸಗಿ ಬಂದಾಗ ರಾಯಚೂರು ಜಿಲ್ಲಾದ ಮನಿ ಅಂಗಳಾ, ಮ್ಯಾಳಗಿ ನೋಡೂದೇ ಒಂದು ಚಂದ. ಬಣ್ಣಬಣ್ಣದ ಅಕ್ಕಿ ಹಪ್ಪಳ, ಸಂಡಗಿ ಎಷ್ಟು ಛಂದ ಕಾಣ್ತಾವ.

ನಮ್ಮವ್ವ ನಮ್ಮಾಯಿ ಇಬ್ಬರಿಗೂ ಬ್ಯಾಸಗಿ ಸೂಟಿ ಅಂದ್ರ ಇಡೀ ವರ್ಷಕ್ಕಿಂತ ಹೆಚ್ಚಿನ ಕೆಲಸಾ ಹಚ್ಕೊಳ್ಳೋರು.
ಒಂದು ವರ್ಷಕ್ಕ ಆಗೂವಷ್ಟು ಖಾರಪುಡಿ ಕುಟ್ಟಸೋರು. ಗುಂಟೂರು ಒಂದಿಷ್ಟು, ಬ್ಯಾಡಗಿ ಒಂದಿಷ್ಟು. ಅಡಗಿ ಮಾಡಾಕ ಗುಂಟೂರು ಖಾರ ಹಾಕಿದ್ರ, ಸೇಂಗಾ ಹಿಂಡಿ, ಪುಠಾಣಿ ಹಿಂಡಿ, ರಂಜಕ, ಕಾರೆಳ್ಳು, ಗುರೆಳ್ಳು, ಅಗಸಿ ಹಿಂಡಿಗೆ ಬ್ಯಾಡಗಿ ಮೆಣಸಿನಕಾಯಿ ಪುಡಿ ಹಾಕೋರು. ಹಿಂಗಾಗಿ ಎರಡೂ ಪುಡಿ ಮಾಡಿಸಿ ಇಡೋರು. ನಮಗೆಲ್ಲ ಮುಂಜೇನೆ ತುಂಬು ಕಡಿಯಾಕ ಕುಂದರಸಿದ್ರ, ಮಧ್ಯಾಹ್ನ ಅಂಗಳದಾಗ ಆಟಾ ಆಡೂಹಂಗೇ ಇರಲಿಲ್ಲ. ಘಾಟಿಗೆ ಸೀನಿದ್ರ, ಯಾರು ಹೆಚ್ಚು ಸೀನಿದ್ವಿ ಅನ್ನೂದೇ ಪಂಥ ಆಗ್ತಿತ್ತು.
ಆದ್ರ ಒಮ್ಮೊಮ್ಮೆ ಅಮ್ಮ ಮೆಣಸಿನ ಕಾಯಿ ತುಂಬು ಕಡಕೊಂತ ಕಣ್ಣೀರಾಗ್ತಿದ್ಲು. 

ಶಾವಗಿ ಹೊಸಿಯೂದು, ಸೌತಿಬೀಜ ಮಾಡೂದು, ಸಿಂಪಿಸೌತಿ, ಹಣಗೀ ಹಲ್ಲಿನಿಂದ ಸಿಂಪಿ ಹೂ ಮಾಡಿ ಬಸದ್ರ ಈ ಕಾಲದ ಯಾವ ಪಾಸ್ತಾಕ್ಕಿಂತಲೂ ರುಚಿ ಇರ್ತಿತ್ತು ಆ ಒಗ್ಗರಣಿ.

ಮೆಣಸಿನ ತುಂಬು ತಗಿಯೂ ಮುಂದ ಅಮ್ಮಗ್ಯಾಕ ಸಿಟ್ಟು ಬರ್ತಿತ್ತು? ಶಾವಗಿ ಹೊಸಿಯೂಮುಂದ ಯಾಕ ಹಾಡು ಬರ್ತಿದ್ವು? ಅದ್ರೊಳಗಿನ ಖಾರ, ಇದ್ರೊಳಗಿನ ಸವಿ ಯಾವುದು ಅಮ್ಮನ ಮನಸಿಗೆ ಹೋಗ್ತಿತ್ತು? ಹೊರಗ ಬರ್ತಿತ್ತು?
ಪ್ರತಿ ಬ್ಯಾಸಗಿಯೊಳಗೂ ಇಂಥಾ ಪ್ರಶ್ನೆ ಎದುರಾಗ್ತಾವ.

ಉಪ್ಪಿನ ಕಾಯಿಗಂತೂ ಮಿರಗಾ ಕುಂದರಲಿ ಅಂತ ಕಾಯೋರು. ಆದ್ರ ಅಷ್ಟರೊಳಗ ಮಸಾಲಿ ಖಾರ, ಮೆಂತ್ಯದ ಹಿಟ್ಟು, ಚಟ್ನಿಪುಡಿ, ರಂಜಕ, ಖಾರಪುಡಿ, ಅರಿಶಿನ ಪುಡಿ ಎಲ್ಲಾ ಮಾಡಿಡೋರು. ಸಾಸಿವಿ ಬೀಸಿ, ಹೊಟ್ಟು ತೂರಿ ಹಳದಿ ಮೈಮ್ಯಾಲೆ ಬರೂಹಂಗ ಮಾಡೋರು.

ಇದು ಬರೇ ನಮ್ಮನಿ ಕತಿಯಲ್ಲ. ಎಲ್ಲಾ ಹೆಣ್ಮಕ್ಕಳ ಕತೀನೂ ಹೌದು. ಮತ್ತ ಸತತ ನಡಿಯೂ ಕತಿ.
ಬೆಂಗಳೂರಂಥಾ ಊರಾಗಷ್ಟೇ ಅಲ್ಲ, ಹುಬ್ಬಳ್ಳಿ, ಗುಲ್ಬರ್ಗ, ಸಿಂದಗಿಯಂಥ ಸಣ್ಣ ಊರಾಗೂ ಮಸಾಲಿ ಖಾರ ಕೊಂಡು ತೊಗೊಳ್ಳುವ ಪರಿಸ್ಥಿತಿ ಈಗ ಬಂದದ. ಆದ್ರೂ ಹಿಂದಿನ ಒಂದು ತಲಿ ಈಗಲೂ ತಮ್ಮ ಕೊಂಡಿ ಅಲ್ಲಿ–ಇಲ್ಲಿ ಬೆಸಿಯಾಕ ನೋಡ್ತಿರ್ತಾರ.
ನಮ್ಮವ್ವನಂಥೋರು, ಮಗನ ಮನಿಗೆ ಹೋಗಿ, ಮಗಳ ಮನೀಗೆ ಹೋಗಿ, ಮಸಾಲಿ ಸಾಮಾನೆಲ್ಲ ಹುರದು ಮಾಡಿಕೊಡ್ತಾರ.

ಇಲ್ಲಾಂದ್ರ ಊರಾಗೇ ಮಾಡಿಟ್ಕೊಂಡು ಆಸ್ತಿ ಪಾಲು ಮಾಡೂಹಂಗೇ ಸಮಾಪಾಲು ಮಾಡಿಡ್ತಾರ. ಇದರೊಳಗ ಅವರ ಅಕ್ಕಾತಂಗೀರು ಪಾಲೂ ಸೇರಿರ್ತದ. ಒಂದ ತಾಯಿ ಇವರಿಗೆಲ್ಲ ಮಸಾಲಿ ಮಾಡೂದು ಕಲಿಸಿದ್ರೂ, ಎಲ್ಲಾರ ಕೈ ರುಚಿ ಬ್ಯಾರೆಬ್ಯಾರೆ.

ಈ ರುಚಿ ಮಾತು ಹೆಂಗರೆ ಇರಲಿ, ಪರಂಪರೆ ಮತ್ತು ರೂಢಿಯಿಂದಲೇ ಎಂತೆಂಥ ಮಾಹಿತಿ ಜ್ಞಾನ ಇವರಿಗೆ ರವಾನಿ ಆಗ್ಯಾವ ಅನ್ನೂದೇ ಅಚ್ಚರಿ ಮೂಡಸ್ತದ. ಮೆಂತ್ಯ ಹಾಕಿದ್ರ ಕೆಡೂದಿಲ್ಲ. ನೀರು ಮುಟ್ಟಸದಿದ್ರ ಹಾಳಾಗೂದಿಲ್ಲ. ಬಳ್ಳೊಳ್ಳಿ, ಮೆಂತ್ಯ, ಕಾಳುಮೆಣಸು, ಅರಿಶಿನ ಇವೆಲ್ಲವೂ ನೈಸರ್ಗಿಕವಾದ ಪ್ರಿಸರ್ವೇಟಿವ್ಸ್‌.

ಇವೆಲ್ಲ ಅಳದು ಸುರುದೂ ಮಾಡೂ ಹದ ವಿಜ್ಞಾನ ಆದ್ರ, ಹುರಿಯೂದು ಕಲೆ. ಕೂಡಿಡೂದು ನಿರ್ವಹಣೆ. ಇಡೀ ವರ್ಷದ ನಿರ್ವಹಣೆಗೆ ಬ್ಯಾಸಗಿ ಸುಡೂ ಬಿಸಲಾಗ ಒಲಿಮುಂದ ನಿಂತು ಬೆವರು ಸುರುಸ್ತಾರ.

ಗಂಡಮಕ್ಳಿಗೆ ಈ ಸಂಕಟ ಕಾಣೂದಿಲ್ಲ. ಕಾಡೂದಿಲ್ಲ. ಅಂವಾ ಮಾತ್ರ, ‘ಆಷಾಢದ ಸುಳಿಗಾಳಿ ಬೀಸೂಮುಂದ ಹೇಸಿ ನನ್ನ ಜನ್ಮ ಹೆಣ್ಣಾಗಿ ಹುಟ್ಟಲಿಲ್ಯಾಕ’ ಅಂತ ಕರುಬತಾನ.

ಬ್ಯಾಸಗಿ ಬಿಸಿಲು ಸುಡೂಮುಂದ ಒಲಿಮುಂದ ನಿಂತು ಬೇಯೂಮುಂದ ಯಾವ ಹೆಣ್ಮಕ್ಕಳೂ ‘ಪಡಸಾಲ್ಯಾಗ ಕುಂತು ಪಾನಕ ಕುಡಿಯುವ ಗಂಡಾಗಿ ಹುಟ್ಟಲಿಲ್ಲ ಯಾಕ’ ಅಂತ ವಿಚಾರ ಮಾಡೂದಿಲ್ಲ.

ಬದಲಿಗೆ ಮಸಾಲಿಗೆ ಕುಟ್ಟಿಟ್ಟ ಯಾಲಕ್ಕಿ ಸಿಪ್ಪಿ ಸಕ್ಕರಿಗೆ ಹಾಕಿಡ್ತಾಳ. ಪಾನಕ ಘಂ ಅನ್ಲಿ ಅಂತ.
ಈಗ ರೊಕ್ಕ ಕೊಟ್ಟು ಎಲ್ಲಾ ಖರೀದಿ ಮಾಡ್ತೀವಿ. ಆದ್ರ ವರಷಕ್ಕ ಆಗೂವಷ್ಟು ಮಾಡಿಟ್ಟೇನಿ ಅನ್ನೂ ನಿರಾಳ ಭಾವ ಖರೀದಿ ಮಾಡಾಕ ಆಗೂದಿಲ್ಲ. ಹಿರೀಮಗನಿಗೆ ಪ್ರೀತಿಯ ಗುಳಂಬ ಮಾಡಿಟ್ಟೀನಿ ಅನ್ನೂ ಖುಷಿ ಖರೀದಿ ಮಾಡಾಕ ಆಗೂದಿಲ್ಲ. ಮಗಳಿಗೆ ಹಂಚಿನ ಮ್ಯಾಲೆ ಎಣ್ಣಿ ಹಾಕಿ, ಸಾಸಿವಿ ಸಿಡಿಸಿ, ಉಳ್ಳಾಗಡ್ಡಿ ಹೆಚ್ಚಿ ಹಾಕಿ, ಮಸಾಲಿ ಖಾರ ಹಾಕಿದ್ದ ಒಗ್ಗರಣಿ ಅನ್ನ ಉಣ್ಣಿಸುವ ಸುಖಾ ಸಿಗಾಂಗಿಲ್ಲ.

ಉಸಿರಾಡಾಕ ಆಗಲಾರದ ಈ ದಿನಮಾನದಾಗ ಇವತ್ತಿನ ಊಟಕ್ಕ ಅಡಗಿ ಮಾಡಿದ್ರೂ ಸಾಕು ಅನಸೂಮುಂದ... ವರುಷದ ತಯಾರಿ ಮಾಡುವ ಖುಷಿನೇ ಕಳಕೊಂಡಿವಿ. ಜೊತಿಗೆ ಹಪ್ಪಳಾ ಹಾಕೂ ಮ್ಯಾಳಗಿ, ಮೆಣಸಿನಕಾಯಿ ಒಣಗಿಸೂ ಅಂಗಳಾ... ಇವನೂ ಕಳಕೊಂಡಿವಿ. ಇರೂ ಜಾಗದ ಜೊತಿಗೆ ನಮ್ಮ ಇರುವನ್ನೂ ಕಳ್ಕೋತೀವೇನು?  ಈ ಪ್ರಶ್ನೆ ಭಾಳ ಕಾಡ್ತದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT