ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಶಿಬಿರ: ಇದು ರ(ಮ)ಜಾ ಸಮಯ

Last Updated 24 ಏಪ್ರಿಲ್ 2016, 19:34 IST
ಅಕ್ಷರ ಗಾತ್ರ

ಪರೀಕ್ಷೆಗಳನ್ನು ಬರೆದು ನಿರಾಳರಾಗಿರುವ ವಿದ್ಯಾರ್ಥಿಗಳು ಹಾಗೂ ಮಕ್ಕಳ ಜತೆ ನಿಜವಾದ ‘ಪರೀಕ್ಷೆ’ ಎದುರಿಸಿದ ಪೋಷಕರಿಗೆ ರಜಾ ಅವಧಿಯ ಈ ದಿನಗಳಲ್ಲಿ ‘ಬೇಸಿಗೆ ಶಿಬಿರ’ ಆಕರ್ಷಣೆಯ ಕೇಂದ್ರಬಿಂದು.

ಗ್ರಾಮೀಣ ಭಾಗದಲ್ಲಿ ‘ಬೇಸಿಗೆ ಶಿಬಿರ’ದ ಭರಾಟೆ ಅಷ್ಟಾಗಿ ಕಾಣದಿದ್ದರೂ ಪುಟ್ಟ ಪಟ್ಟಣಗಳಿಂದ ಬೃಹತ್ ನಗರಗಳವರೆಗೆ ‘ಬೇಸಿಗೆ ಶಿಬಿರ’ ತನ್ನ ಛಾಪು ಮೂಡಿಸಿದೆ. ಸಮೀಪದ ಪಟ್ಟಣ / ನಗರದಲ್ಲಿ ಆಯೋಜಿಸಿರುವ ಶಿಬಿರಕ್ಕೆ ತಮ್ಮ ಮಗುವನ್ನು ಸೇರಿಸಿ ನಮ್ಮ ಮಗುವೂ ‘ಸಮ್ಮರ್ ಕ್ಯಾಂಪ್‌’ ಸೇರಿದೆ ಎಂದು ಬೀಗುವ ಗ್ರಾಮೀಣ ಭಾಗದ ಪೋಷಕರಿಗೇನೂ ಕೊರತೆಯಿಲ್ಲ.

ಬೇಸಿಗೆ ಶಿಬಿರದ ಲಾಭವೇನು?
ವರ್ಷವಿಡೀ ಪಠ್ಯ, ಪುಸ್ತಕ, ಹಾಜರಾತಿ, ತರಗತಿ, ಓದು, ಮನೆಪಾಠ, ಪ್ರಯೋಗಾಲಯ, ಪರೀಕ್ಷೆ, ಫಲಿತಾಂಶ... ಈ ಸರಣಿ ಪ್ರಕ್ರಿಯೆಯಲ್ಲಿ ನಲುಗಿದ ವಿದ್ಯಾರ್ಥಿಗಳಿಗೆ ಭರಪೂರ ಮನರಂಜನೆಯ ಜತೆ ಜೀವನಾವಶ್ಯಕ ಕೌಶಲಗಳನ್ನು, ಸೃಜನಶೀಲತೆಯನ್ನು ರೂಢಿಸುವ ನಿಟ್ಟಿನಲ್ಲಿ ‘ಬೇಸಿಗೆ ಶಿಬಿರ’ಗಳಿಗೆ ಸೇರಿಸುವುದು ಉತ್ತಮ ವಿಚಾರವೇ. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳಿಂದಾಗುವ ಲಾಭಗಳನ್ನು ನಾವು ಹೀಗೆ ಗುರುತಿಸಬಹುದು.

* ಸ್ವಾವಲಂಬನೆ, ಸ್ವಾತಂತ್ರ್ಯದ ಅನುಭವ: ಶಿಬಿರಾರ್ಥಿಗಳು ಮನೆಯ ಹೊರಗಡೆ ಆಯೋಜಿಸಿರುವ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಪೋಷಕರ ಅವಲಂಬನೆ, ನಿರ್ಬಂಧಗಳಿಲ್ಲದೆ ಸ್ವಾವಲಂಬನೆ, ಸ್ವಾತಂತ್ರ್ಯದ ಬದುಕನ್ನು ಅನುಭವಿಸುತ್ತಾರೆ. ಸ್ವಯಂ, ಸ್ವಗೌರವ, ಘನತೆಯ ಪರಿಕಲ್ಪನೆಯನ್ನು ಅರಿತುಕೊಳ್ಳುತ್ತಾರೆ.

* ಸೃಜನಶೀಲ ಅಭಿವ್ಯಕ್ತಿಗೆ ಸಹಕಾರಿ: ಶಿಬಿರಗಳಲ್ಲಿ ಕಲೆ, ಚಿತ್ರಕಲೆ, ಸಂಗೀತ, ಹಾಡುಗಾರಿಕೆ, ನಾಟ್ಯ, ನಾಟಕ, ಮೂಕಾಭಿನಯ, ಕತೆ ಹೇಳುವುದು, ಮುಖವಾಡ ತಯಾರಿ, ಚರ್ಚೆ, ಸ್ಪೋಕನ್ ಇಂಗ್ಲಿಷ್, ಮೆಮೊರಿ ಗೇಮ್ಸ್... ಇತ್ಯಾದಿ ಸೃಜನಶೀಲ ಚಟುವಟಿಕೆಗಳಿಗೆ ವೇದಿಕೆ ಸಿಗುತ್ತದೆ. ಇದರಿಂದ ಅಭಿವ್ಯಕ್ತಿ ಸಾಮರ್ಥ್ಯ ವೃದ್ಧಿಸುತ್ತದೆ.

* ದೇಹ, ಮನಸ್ಸನ್ನು ಚಟುವಟಿಕೆಯಿಂದಿಡಲು ಸಹಕಾರಿ: ಸಾಮಾನ್ಯವಾಗಿ ಬೇಸಿಗೆ ಶಿಬಿರದಲ್ಲಿ ಆಟ, ಓಟ, ನಡಿಗೆ, ವ್ಯಾಯಾಮ, ಜಿಗಿತ, ಏರುವುದು, ಇಳಿಯುವುದು... ಹೀಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಈ ಚಟುವಟಿಕೆಗಳು ದೇಹದ ಉತ್ಸಾಹ, ಆರೋಗ್ಯವನ್ನು ಇಮ್ಮಡಿಸುತ್ತವೆ. ಬೇಸಿಗೆಯ ಧಗೆಯನ್ನು ಮರೆಸಿ, ಮಾನಸಿಕ ಉಲ್ಲಾಸ ನೀಡುತ್ತವೆ.

* ದೇಸಿ, ವಿದೇಶಿ ಆಟಗಳ ಅರಿವು: ಶಿಬಿರಗಳಲ್ಲಿ ಬುಗುರಿ, ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಅಳೆಗುಳಿಮನೆ, ಕಬಡ್ಡಿ, ಪಗಡೆ, ಕೈಲಾಸ ಪಟ, ಚೌಕಾಬಾರಾ, ಲೇಝೀಂ, ಚಿಣ್ಣಿ–ದಾಂಡು, ಗೋಲಿಯಾಟ... ಮತ್ತಿತರ ದೇಸಿ ಕ್ರೀಡೆಗಳ ಜತೆ ಕ್ರಿಕೆಟ್, ಹಾಕಿ, ಫುಟ್‌ಬಾಲ್, ಟೆನಿಸ್, ಬ್ಯಾಡ್ಮಿಂಟನ್, ಟೆಬಲ್ ಟೆನಿಸ್, ಚೆಸ್, ಬ್ಯಾಸ್ಕೆಟ್‌ಬಾಲ್‌ ಮತ್ತಿತರ ಆಟಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ.

* ಉಪಯುಕ್ತ ಕೌಶಲಗಳ ಕಲಿಕೆ: ಶಿಬಿರಗಳಲ್ಲಿ ಈಜು, ಸೈಕ್ಲಿಂಗ್, ಕರಾಟೆ, ಕುಂಗ್‌ಫೂ, ಸ್ಕೇಟಿಂಗ್, ಯೋಗ, ಧ್ಯಾನ, ಶಾಸ್ತ್ರೀಯ– ಪಾಶ್ಚಾತ್ಯ ನೃತ್ಯ, ಅಭಿನಯ, ವಾದ್ಯ ಸಂಗೀತ, ಗಾಯನ, ಕಲೆ, ಚಿತ್ರಕಲೆ, ಸೆರಾಮಿಕ್, ಅಬಾಕಸ್... ಇತ್ಯಾದಿ, ಜೀವಮಾನವಿಡೀ ಉಪಯುಕ್ತವಾಗುವ ಕೌಶಲಗಳನ್ನು ಕಲಿಸಲಾಗುತ್ತದೆ. ಈ ಕೌಶಲಗಳ ಕಲಿಕೆಯಿಂದ ಸಾಹಸ ಪ್ರವೃತ್ತಿ ಹಾಗೂ ಮಾನಸಿಕ ಸಂತೃಪ್ತಿ ಹೆಚ್ಚುತ್ತದೆ. ಇದು ಆಸಕ್ತಿ– ಅಭಿರುಚಿಗಳ ವಿಕಾಸಕ್ಕೂ ದಾರಿ ಮಾಡಿಕೊಡುತ್ತದೆ.

* ಜೀವನ ಕೌಶಲಗಳ ಅರಿವು: ಶಿಬಿರದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು, ಶೂ ಪಾಲಿಶ್ ಹಾಕುವುದು, ಲೇಸ್ ಕಟ್ಟುವುದು, ಬಟ್ಟೆ ಗುಂಡಿ ಹಾಕುವುದು, ಟೈ ಕಟ್ಟುವುದು, ಹಾಸಿಗೆ ಹಾಸುವುದು, ಹಾಸಿಗೆಗಳನ್ನು ಮಡಿಚಿಡುವುದು, ಬಟ್ಟೆ ಒಗೆಯುವುದು, ಇಸ್ತ್ರೀ ಮಾಡುವುದು, ಕಸ ಗುಡಿಸುವುದು, ಅಡುಗೆ ತಯಾರಿ, ಊಟಕ್ಕೆ ಬಡಿಸುವುದು... ಮತ್ತಿತರ ಉಪಯುಕ್ತ ‘ಜೀವನ ಕೌಶಲ’ಗಳನ್ನು ಕಲಿಸಲಾಗುತ್ತದೆ.

* ‘ಎಲೆಕ್ಟ್ರಾನಿಕ್’ ಕಿರಿಕಿರಿಯಿಂದ ದೂರ: ಶಿಬಿರದ ಅವಧಿಯಲ್ಲಿ ಮೊಬೈಲ್, ಟಿವಿ, ಕಂಪ್ಯೂಟರ, ಇಂಟರ್‌ನೆಟ್, ವಾಟ್ಸ್‌ಆ್ಯಪ್, ಫೇಸಬುಕ್, ವಿಡಿಯೊಗೇಮ್... ಮೊದಲಾದ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮಕ್ಕಳನ್ನು ದೂರವಿರಿಸುವುದರಿಂದ ಮಕ್ಕಳು ಕಿರಿಕಿರಿಯಿಂದ ಮುಕ್ತರಾಗಿ ನೆಮ್ಮದಿಯಿಂದ ಬದುಕಬಹುದು.

*ನಿಸರ್ಗದ ಒಡನಾಟ: ಶಿಬಿರಗಳಲ್ಲಿ ನೈಜ ಅನುಭವಗಳಿಗೆ ಆದ್ಯತೆ ನೀಡಲಾಗುತ್ತದೆ. ಸಾಧ್ಯವಾದಷ್ಟು ನಿಸರ್ಗದ ಮಡಿಲಲ್ಲಿ, ಸ್ವಚ್ಛಂದ ವಾತಾವರಣದಲ್ಲಿ ಪರಿಶುದ್ಧ ಗಾಳಿ, ಬೆಳಕು, ಮಣ್ಣು, ನೀರು, ಗಿಡ–ಮರಗಳ ಜತೆ ಒಡನಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ವನಭೋಜನ, ಚಾರಣ, ಕಿರು ಪ್ರವಾಸಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ಮಕ್ಕಳಿಗೆ ಪ್ರಕೃತಿಯ ನೈಜ ಅನುಭವ ಸಿಗುತ್ತದೆ.

* ಯಶಸ್ಸಿನ ಅನುಭವ: ಶಿಬಿರಗಳಲ್ಲಿ ಆಯೋಜಿಸುವ ಬಹುತೇಕ ಚಟುವಟಿಕೆಗಳಲ್ಲಿ ಶಿಬಿರಾರ್ಥಿಗಳಿಗೆ ಯಶಸ್ಸಿನ ಅನುಭವ ದೊರಕುತ್ತದೆ. ಇದರಿಂದ ‘ನನ್ನಿಂದ ಸಾಧ್ಯ’ (ಐ ಕ್ಯಾನ್) ಎಂಬ ಆತ್ಮವಿಶ್ವಾಸ ವೃದ್ಧಿಸುತ್ತದೆ.

* ಸಾಮಾಜಿಕ ಕೌಶಲಗಳ ವೃದ್ಧಿ: ಶಿಬಿರ ಎಂಬುದು ಸಾಮೂಹಿಕ ಜೀವನ. ಗುಂಪಿನಲ್ಲಿ ಕೆಲಸ ಮಾಡುವುದು, ಆಟವಾಡುವುದರಿಂದ ಮಕ್ಕಳಲ್ಲಿ ಸಹಕಾರ, ಸಹಬಾಳ್ವೆ, ಸಹಯೋಗ, ಸಂಯೋಜನೆ, ಸಂಘಟನೆ, ಸಾಮುದಾಯಿಕ ಬದ್ಧತೆ, ಭಾವೈಕ್ಯ, ಸಾಮರಸ್ಯ, ನಾಯಕತ್ವ... ಇತ್ಯಾದಿ ಸಾಮಾಜಿಕ ಕೌಶಲಗಳು ವೃದ್ಧಿಸುತ್ತವೆ.

* ವೈವಿಧ್ಯತೆಗೆ ತೆರೆದುಕೊಳ್ಳುವುದು: ಶಿಬಿರಗಳಲ್ಲಿ ವಿವಿಧತೆ ಇರುತ್ತದೆ. ವಿಭಿನ್ನ ಭಾಷೆ, ಸಂಸ್ಕೃತಿ, ಧರ್ಮ, ಜಾತಿ, ಸಂಪ್ರದಾಯ, ಆಚರಣೆ, ಅಂತಸ್ತುಗಳ ಹಿನ್ನೆಲೆಯಿಂದ ಬಂದ ಮಕ್ಕಳು ಒಂದೇ ಸೂರಿನಡಿ ಒಂದಾಗಿ ಬಾಳುತ್ತಾರೆ. ಹೀಗಾಗಿ, ಸಹಜವಾಗಿಯೇ ಮಕ್ಕಳು ವೈವಿಧ್ಯತೆಗೆ ತೆರೆದುಕೊಳ್ಳುತ್ತಾರೆ. ಬಹುತ್ವದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುತ್ತಾರೆ. ಇಲ್ಲಿ ವಿವಿಧತೆಯಲ್ಲಿ ಏಕತೆಯ ಭಾವ ಮೈದಳೆದಿರುತ್ತದೆ.

* ಬಾಂಧವ್ಯದ ಅರಿವು, ಸ್ನೇಹಿತರ ಸಂಖ್ಯೆಯಲ್ಲಿ ಹೆಚ್ಚಳ: ಶಿಬಿರಗಳಲ್ಲಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುವುದರಿಂದ ಸಾಮಾಜಿಕ ಬಾಂಧವ್ಯ ಒಡಮೂಡುತ್ತದೆ. ಇದೇ ಬಾಂಧವ್ಯ ಸ್ನೇಹಕ್ಕೆ ದಾರಿ ಮಾಡಿಕೊಡುತ್ತದೆ. ಸಹಜವಾಗಿಯೇ ಶಿಬಿರದಲ್ಲಿ ಪರಿಚಿತರಾಗುವ ಹೊಸ ಸ್ನೇಹಿತರು ಜೀವಮಾನವಿಡೀ ಸ್ನೇಹಿತರಾಗಿ ಉಳಿಯುವ ಸಾಧ್ಯತೆ ಇದೆ.

* ಪರಿಣಿತರ ಮಾರ್ಗದರ್ಶನ: ಭವಿಷ್ಯಕ್ಕೆ ಉಪಯುಕ್ತವಾಗುವ ನಿಟ್ಟಿನಲ್ಲಿ ಶಿಕ್ಷಣ, ಉದ್ಯೋಗ, ಪ್ರಥಮಚಿಕಿತ್ಸೆ, ವಿಪತ್ತು ನಿರ್ವಹಣೆ, ಪರಿಸರ ಸಂರಕ್ಷಣೆ, ಮೂಢನಂಬಿಕೆ, ವೈಜ್ಞಾನಿಕ ಮನೋಭಾವ... ಮತ್ತಿತರ ವಿಷಗಳನ್ನು ಕುರಿತು ತಜ್ಞರಿಂದ ಮಾಹಿತಿ ಒದಗಿಸುವ ಮೂಲಕ ಮಕ್ಕಳ ಅರಿವಿನ ಹರವನ್ನು ಹೆಚ್ಚಿಸಲಾಗುತ್ತದೆ. 

*
ಸೂಕ್ತ ಮಾಹಿತಿ, ಜವಾಬ್ದಾರಿ ಇರಲಿ
ಶಿಬಿರ ಎಂಬುದು ಒಂದು ಸಾಮಾಜಿಕ ಜವಾಬ್ದಾರಿಯಾಗಿರಬೇಕೇ ವಿನಃ ವ್ಯವಹಾರ ಆಗಬಾರದು. ಈಚೆಗೆ ಕೆಲವರು ಶಿಬಿರಗಳನ್ನು ಹಣ ಗಳಿಕೆಯ ಮಾರ್ಗವಾಗಿಸಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಶಿಬಿರವನ್ನು ಆಯ್ಕೆ ಮಾಡಿಕೊಳ್ಳುವಾಗ ಶಿಬಿರ ಸಂಘಟಕರ ಹಿನ್ನೆಲೆ, ಆಯೋಜನೆಯ ಸ್ಥಳ, ಸುರಕ್ಷತೆ, ಸ್ವಚ್ಛತೆ, ಆಹಾರ, ನೀರು, ಪರಿಸರ ಹಾಗೂ ಸಂಘಟಿಸುವ ಚಟುವಟಿಕೆಗಳ ವಿವರವನ್ನು ಪೋಷಕರು ಅರಿತುಕೊಳ್ಳಬೇಕು.

ಅವರ ಆಯ್ಕೆ ಉತ್ತಮವಾಗಿರಬೇಕು. ಅಲ್ಲದೆ, ಕೆಲ ಪೋಷಕರು ‘ರಜೆಯಲ್ಲಿ ಮಕ್ಕಳನ್ನು ಸಂಭಾಳಿಸುವುದಕ್ಕಿಂತ ಶಿಬಿರಕ್ಕೆ ಸೇರಿಸುವುದು ಒಳಿತು’ ಎಂಬ ಭಾವನೆಯನ್ನು ಹೊಂದಿದ್ದಾರೆ. ಹೀಗಿದ್ದರೆ, ಅದು ಮಗುವಿನ ದುರಾದೃಷ್ಟ.

ದೇಶದ ಆಸ್ತಿಯಾಗಿರುವ ಮುಗ್ಧ ಮಕ್ಕಳ ಜೀವನದ ಜತೆ ಚೆಲ್ಲಾಟ ಸಲ್ಲ. ಮನರಂಜನೆ ಜತೆ ಕಲಿಕೆಗೂ ಅವಕಾಶವಿರುವ ಶಿಬಿರಗಳನ್ನು ಆಯ್ದುಕೊಂಡರೆ ಉಪಯುಕ್ತ ಎಂಬುದನ್ನು ಪೋಷಕರು ಮರೆಯಬಾರದು.
–ಎಚ್. ಜನಾರ್ದನ (ಜೆನ್ನಿ), ನಿರ್ದೇಶಕ, ರಂಗಾಯಣ– ಮೈಸೂರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT