ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಹುಗಾರಿಕೆಯ ಬೆನ್ನತ್ತಿ...

Last Updated 22 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸುಭಾಷ್‌ಚಂದ್ರ ಬೋಸ್ ಅವರ ಕುಟುಂಬದ ಮೇಲೆ ಜವಾಹರಲಾಲ್ ನೆಹರೂ ಸರ್ಕಾರ ಬೇಹುಗಾರಿಕೆ ನಡೆಸಿತ್ತು ಎಂಬ ಸುದ್ದಿ ನಿಜಕ್ಕೂ ದಿಗ್ಭ್ರಮೆ ಮೂಡಿಸುವ ವಿಚಾರ. ಸುಮಾರು ಎರಡು ದಶಕಗಳ ಕಾಲ ಬೋಸ್‌ ಕುಟುಂಬದ ಚಲನವಲನ ಬೇಹುಗಾರಿಕೆಯ ನೆರಳಿನಲ್ಲೇ ಸಾಗಿಬಂದಿರುವ ರಹಸ್ಯ, ಇದೀಗ ಬಯಲಾಗಿ ದೇಶದಲ್ಲಿ ಚರ್ಚೆಯ ಭುಗಿಲೆಬ್ಬಿಸಿದೆ. ಈ ಘಟನೆಯಿಂದ ನೆಹರೂ ಮತ್ತು ಅವರ ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ. ನೆಹರೂ ಅವರಂತಹ ಮುತ್ಸದ್ದಿಗಳೂ ‘ಬೇಹುಗಾರಿಕೆ ವಿಭಾಗ’ವನ್ನು ತಮ್ಮ ‘ರಾಜಕೀಯ ಲಾಭ‘ಕ್ಕಾಗಿ ಬಳಸಿಕೊಂಡಿರುವುದು ದುರಂತ ಮತ್ತು ಖಂಡನಾರ್ಹ.

ಯಾವ ಕೋನದಿಂದ ನೋಡಿದರೂ ನೆಹರೂ ಮತ್ತು ಅವರ ಬಳಗದಂತೆಯೇ ಬೋಸ್‌ ಸಹ ನಿಸ್ಸಂಶಯವಾಗಿ ಅಪ್ಪಟ ದೇಶಪ್ರೇಮಿ, ಅಪ್ರತಿಮ, ನೈಜ ಸ್ವಾತಂತ್ರ್ಯ ಹೋರಾಟಗಾರ. ಸೈದ್ಧಾಂತಿಕವಾಗಿ ಬೋಸ್‌ ಅವರನ್ನು ವಿರೋಧಿಸುವವರೂ ಇದನ್ನು ಒಪ್ಪುತ್ತಾರೆ. ಆದರೆ, ಸ್ವಾತಂತ್ರ್ಯ ಹೋರಾಟ ಕುರಿತ ಬೋಸ್ ದೃಷ್ಟಿಕೋನ, ನಿಲುವು ನೆಹರು ಮತ್ತು ಅವರ ಒಡನಾಡಿಗಳಿಗಿಂತ ವಿಭಿನ್ನವಾಗಿತ್ತು, ತೀವ್ರಗಾಮಿ  ಸ್ವರೂಪದ್ದಾಗಿತ್ತು. ಮಾರ್ಗ ಬೇರೆಯಾದರೂ, ಗುರಿ ಒಂದೇ ಎಂಬುದು ಗಮನಾರ್ಹ.

ರಾಜಕೀಯ ಕಾರಣಕ್ಕಾಗಿ ಬೋಸ್‌ ಅವರಂತಹ ನಿಷ್ಕಳಂಕ, ಸ್ಪಟಿಕ ಸದೃಶ ವ್ಯಕ್ತಿಯ ಚಾರಿತ್ರ್ಯವಧೆ ನಡೆಯುವುದನ್ನು ಮತ್ತು ಅವರ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸುವುದನ್ನು ಯಾರೂ ಸಮರ್ಥಿಸಲಾರರು. ಬೋಸ್ ಆಗಲಿ ಅಥವಾ ಅವರ ಕುಟುಂಬಸ್ಥರಾಗಲಿ ರಾಷ್ಟ್ರ ವಿರೋಧಿಗಳೇನಲ್ಲ ಎಂಬುದೂ ಅಷ್ಟೇ ನಿಚ್ಚಳ, ಸತ್ಯ.

ಈ ಘಟನೆ ಮತ್ತೊಂದು ಗಂಭೀರ ಪ್ರಶ್ನೆಯನ್ನು ನಮ್ಮ ಮುಂದೆ ಇಟ್ಟಿದೆ. ಅದು ಬ್ರಿಟಿಷರ ಪಳೆಯುಳಿಕೆ ‘ಬೇಹುಗಾರಿಕೆ ವಿಭಾಗ’ದ ಪ್ರಸ್ತುತತೆ. ಇಂತಹ ವಿಭಾಗ’ದ ಅಗತ್ಯ ನಮಗಿದೆಯೇ ಎಂಬ ಬಗ್ಗೆ ಚರ್ಚೆ ಆಗಬೇಕಿದೆ. ಹಾಗೆ ನೋಡಿದರೆ, ದೇಶದ ರಾಜಕೀಯ ವಿಷಮಗೊಂಡಿದ್ದೇ ಹೊಸದಾಗಿ ಆರಂಭವಾದ ಭಾರತೀಯ ರಾಜಕಾರಣ, ಅದರ ನಾಯಕಗಣ ಮತ್ತು ಸಂಸ್ಥೆಗಳು ರೂಪುತಳೆದ ಮೇಲೆಯೇ. ಬ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ ‘ರಾಷ್ಟ್ರೀಯ ಭದ್ರತೆ’ ಪರಿಕಲ್ಪನೆಯಲ್ಲಿ ಮಾಡಿಕೊಂಡು ಬಿಟ್ಟುಹೋದ ‘ಅನಗತ್ಯ ಕಸದ ಹೊರೆ’ಯೇ ಈ ಬೇಹುಗಾರಿಕೆ ವಿಭಾಗ. 1887ರ ಡಿ. 22ರಂದು ಬ್ರಿಟಿಷ್ ಸರ್ಕಾರ ಆದೇಶದ ಮೂಲಕ ಸೆಂಟ್ರಲ್ ಸ್ಪೆಷಲ್ ಬ್ರಾಂಚ್ (ಕೇಂದ್ರೀಯ ವಿಶೇಷ ವಿಭಾಗ) ರೂಪುತಳೆಯಿತು. ಬ್ರಿಟಿಷರಿಗೆ ಇದ್ದ ಏಕಮಾತ್ರ ಉದ್ದೇಶವೆಂದರೆ, ಭಾರತದ ಮುಖಂಡರು ಹಾಗೂ ಜನರ ಮೇಲೆ ನಿಗಾ ಇರಿಸಿ, ಆ ಸಂಬಂಧ ಮಾಹಿತಿ ಹೆಕ್ಕುವುದು. ಅನ್ಯರನ್ನು ಆಳುವವರಿಗೆ ಸಹಜವಾಗಿಯೇ ತಮ್ಮ ಬಗೆಗಿನ ಸ್ಥಳೀಯರ ಮನೋಭಾವ ಅರಿಯಲು, ಆಕ್ರೋಶ ಹತ್ತಿಕ್ಕಲು, ಮಾಹಿತಿ ಕಲೆಹಾಕಲು ಬೇಹುಗಾರಿಕೆ ಅವರಿಗೆ ಅನಿವಾರ್ಯವಾಗಿತ್ತು.

ದುರಂತವೆಂದರೆ ಸ್ವಾತಂತ್ರ್ಯೋತ್ತರ ಸಂದರ್ಭಕ್ಕೆ ಅನುಗುಣವಾಗಿ ಪರ್ಯಾಯವನ್ನು ಹುಡುಕಿಕೊಳ್ಳದ ಭಾರತ ರಾಜಕಾರಣ, ಬ್ರಿಟಿಷರು ಬಿಟ್ಟಿದ್ದನ್ನೇ  ಅನುಸರಿಸಿತು. ಬೇಹುಗಾರಿಕೆ ವಿಭಾಗಕ್ಕೆ ಯಾವುದೇ ಕಾಯ್ದೆಯ ಮಾನ್ಯತೆಯೂ ಇಲ್ಲ. ಒಂದು ರೀತಿ ‘ಅಕ್ರಮ ಸಂತಾನ’ದಂತೆ ಇದೊಂದು ಅನಾಥ ಶಿಶು. ನಿರ್ದಿಷ್ಟ ಗೊತ್ತು–ಗುರಿಯ ಹೊಣೆಗಾರಿಕೆಗಳಿಲ್ಲದ, ಇತ್ತ ಪೊಲೀಸ್ ಅಥವಾ ನಾಗರಿಕ ಸೇವೆ ಎನ್ನಲಾಗದ, ಮತ್ಯಾವುದೇ ಮುಖವನ್ನು ಹೊಂದಿಲ್ಲದ, ನಿಯಮಾದರ್ಶಗಳಿಲ್ಲದ, ಇತ್ತ ಶಾಸಕಾಂಗಕ್ಕಾಗಲಿ ಅಥವಾ ಇನ್ಯಾವುದೇ ಸಂವಿಧಾನಾತ್ಮಕ ಸಂಸ್ಥೆಗಳಿಗಾಗಲಿ ಉತ್ತರದಾಯಿಯಾಗದ, ತನ್ನ ಗುಪ್ತ ನಿಧಿಯ ಖರ್ಚು–ವೆಚ್ಚಕ್ಕೂ ಬಾಧ್ಯಸ್ಥವಾಗದ ಈ ವಿಭಾಗ, ಒಂದು ರೀತಿಯಲ್ಲಿ ಬೆನ್ನೆಲುಬೇ ಇಲ್ಲದ ‘ಪ್ರಾರಬ್ಧ’.

ಭಯೋತ್ಪಾದನೆ ನಿಗ್ರಹಕ್ಕೆ ಅಸ್ತ್ರವಾಗಬೇಕಿದ್ದ ಬೇಹುಗಾರಿಕೆ ವಿಭಾಗ, ‘ರಾಜಕೀಯ ಅಸ್ತ್ರ’ವಾಗಿ ಬಳಕೆಯಾಗಿದ್ದೇ ಹೆಚ್ಚು. ಈ ವಿಚಾರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಂದೇ ಎಂದು ಹೇಳಬಹುದು. ಪಕ್ಷದ ವಿಭಿನ್ನ ತತ್ವಾದರ್ಶಗಳಿದ್ದರೂ, ಅಧಿಕಾರಾರೂಢ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬೇಹುಗಾರಿಕೆಯನ್ನು ಬಳಸಿಕೊಳ್ಳುವಲ್ಲಿ ಸಮಾನಮನಸ್ಕರು. ಅಧಿಕಾರ ಹಿಡಿದ ರಾಜಕಾರಣಿಗಳು ತಮ್ಮ ಲಾಲಸೆ, ‘ಲಾಭದಾಯಕ ಉದ್ದೇಶ’ಕ್ಕಾಗಿ ಯಾವುದೇ ಮುಜುಗರ, ನಾಚಿಕೆ ಇಲ್ಲದೆ ಇದನ್ನು ಬಳಸಿಕೊಂಡಿದ್ದಾರೆ. ತಮ್ಮದೇ ಪಕ್ಷದ ಭಿನ್ನಮತೀಯರನ್ನು ಬಗ್ಗುಬಡಿಯಲು, ಅವರ ಚಲನವಲನ, ಸಂಪರ್ಕಗಳನ್ನು ಬೆನ್ನತ್ತಲು ಬಳಸಿದ್ದಾರೆ.

ಸಾರ್ವಜನಿಕ ಕ್ಷೇತ್ರದಲ್ಲಿ ಒಂದಿಷ್ಟು ಗೌರವ ಉಳಿಸಿಕೊಂಡಿದ್ದ ಚರಣ್‌ಸಿಂಗ್, ಚಂದ್ರಶೇಖರ್ ಅವರಂತಹ ವ್ಯಕ್ತಿಗಳು ಪ್ರಧಾನಿಯಾಗಿದ್ದ ಕಾಲದಲ್ಲೂ, ‘ಎದುರಾಳಿಗಳನ್ನು ಹಣಿಯುವ ರಾಜಕೀಯ ಬೇಹುಗಾರಿಕೆ’ ನಡೆದಿತ್ತು ಎಂದರೆ, ಉಳಿದವರ ಕಾಲದಲ್ಲಿ ಹೇಗೆ ಎಗ್ಗಿಲ್ಲದೆ ನಡೆದಿರಬಹುದು ಎಂಬುದನ್ನು ಊಹಿಸಬಹುದಾಗಿದೆ.

ಅಧಿಕಾರದಲ್ಲಿ ಇದ್ದಾಗ ಈ ‘ಅಸ್ತ್ರ’ವನ್ನು ನಿರ್ದಾಕ್ಷಿಣ್ಯ, ನಿರ್ಲಜ್ಜೆಯಿಂದ ಬಳಸುವ ರಾಜಕಾರಣಿಗಳು, ಅಧಿಕಾರ ಕಳೆದುಕೊಂಡಾಗ ಅದೇ ‘ಅಸ್ತ್ರ’ ದುರುಪಯೋಗವಾಗುತ್ತಿದೆ ಎಂದು ಏಕೆ ಊಳಿಡುತ್ತಾರೋ ಗೊತ್ತಿಲ್ಲ. ತಮ್ಮ ಸಲಹೆಗಾರರಾಗಿದ್ದ ಮೊರಾರ್ಜಿ ದೇಸಾಯಿ ಅವರ ದೂರವಾಣಿಯನ್ನು ಕದ್ದಾಲಿಸಲು ಇಂದಿರಾ ಗಾಂಧಿ ಅವರು ಸೂಚಿಸಿರಲಿಲ್ಲವೇ? ಬೇಹುಗಾರಿಕೆ ವಿಭಾಗ ದೇಶದ ವಿವಿಧ ರಾಜಕೀಯ ಪಕ್ಷಗಳ, ವಾಣಿಜ್ಯೋದ್ಯಮಿಗಳ, ಮಾಧ್ಯಮದವರ ದೂರವಾಣಿಯನ್ನು ಕದ್ದಾಲಿಸಿದೆ. ಸಶಸ್ತ್ರಪಡೆಯ ಅಧಿಕಾರಿಗಳೂ ಈ ‘ಗುಮ್ಮ’ನ ಜಾಲದಿಂದ ನುಣುಚಿಕೊಳ್ಳಲು ಆಗಿಲ್ಲ.

ಬೇಹುಗಾರಿಕೆ ಪಡೆ ರಾಜಕಾರಣಿಗಳ ಕಬಂಧ ಬಾಹುವಿನಿಂದ ಬಿಡುಗಡೆ ಆಗಬೇಕಾದರೆ ಶಾಸನಾತ್ಮಕ ಸುಧಾರಣೆಗೆ ಒಡ್ಡಿಕೊಳ್ಳಬೇಕಿದೆ. ಅದಕ್ಕೊಂದು ಕಾಯ್ದೆಯ ಬಲವನ್ನು ತಂದುಕೊಡಬೇಕಿದೆ. ಉತ್ತರದಾಯಿ ನಿಯಮಾವಳಿಗಳ ಬಂಧಕ್ಕೆ ತರಬೇಕಿದೆ. ಆದರೆ, ನಮ್ಮ ರಾಜಕಾರಣಿಗಳು ಇಂತಹ ‘ಸಾಹಸ’ಕ್ಕೆ ಮುಂದಾಗುತ್ತಾರೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.

ಹಾಗೆಯೇ, ಕಾನೂನಾತ್ಮಕ ತಳಹದಿಯಲ್ಲೇ ಯಾವ್ಯಾವ ದಾಖಲೆಗಳು ‘ರಹಸ್ಯ’ ಎಂಬುದನ್ನು ಮರುಪರಿಶೀಲಿಸುವ ಅಗತ್ಯವಿದೆ. ಕಾಲಾನುಕ್ರಮದಲ್ಲಿ ‘ಅಪ್ರಸ್ತುತ’ವಾದ ದಾಖಲೆಗಳನ್ನು ಬಹಿರಂಗಪಡಿಸಲು ನಿಯಮಾವಳಿಯಲ್ಲೇ ಅವಕಾಶ ಮಾಡಿಕೊಳ್ಳುವ ಅಗತ್ಯವಿದೆ.

ಭಾರತ ಬೃಹತ್ ಶಕ್ತಿಯಾಗಿ ಬೆಳೆಯಬೇಕಾದರೆ ನಮ್ಮ ರಾಜಕಾರಣಿಗಳು, ನಿಜವಾದ ‘ನಿಷ್ಕಳಂಕ ನಾಯಕ’ರಾಗಬೇಕು ಮತ್ತು ಕಾಯ್ದೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತಾಗಬೇಕು. ಆಗ ಮಾತ್ರ ಭವ್ಯ ಭಾರತದ ಕನಸು ಹುರಿಗಟ್ಟುತ್ತದೆ.
-ಲೇಖಕರು ನಿವೃತ್ತ ಸಹಾಯಕ ನಿರ್ದೇಶಕರು, ಇಂಟೆಲಿಜೆನ್ಸ್ ಬ್ಯೂರೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT