ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕರ್‌ ಬಯಕೆಯ ತಾಣಗಳು‌

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ನಗರದಲ್ಲಿ ಬೈಕರ್‌ಗಳ ಸಂಖ್ಯೆ ಏರುತ್ತಿದೆ. ಅವರು ಇಷ್ಟಪಟ್ಟು ಪ್ರಯಾಣ ಮಾಡುವ ತಾಣಗಳು ಯಾವುವು ಎನ್ನುವುದು ಕುತೂಹಲ. ಕೆಲವು ಬೈಕರ್‌ಗಳು ತಮ್ಮಿಷ್ಟದ ತಾಣಗಳ ಕುರಿತು ಮಾತನಾಡಿದ್ದಾರೆ.

ಸಿಲಿಕಾನ್‌ ನಗರಿ ಬೆಂಗಳೂರು ಬೈಕಿಂಗ್‌ ಕ್ಯಾಪಿಟಲ್‌ ಎಂದು ಗುರ್ತಿಸಿಕೊಂಡು ಸಾಕಷ್ಟು ದಿನಗಳೇ ಕಳೆದಿವೆ. ನಗರದಲ್ಲಿ ಸಾಕಷ್ಟು ಬೈಕ್‌ ಕ್ಲಬ್‌ಗಳು ಇವೆ. ಹಾಗೆಯೇ, ಬೈಕ್‌ ಬಗ್ಗೆ ವಿಪರೀತ ಗೀಳು ಹತ್ತಿಸಿಕೊಂಡ ಬೈಕರ್‌ಗಳೂ ಲೆಕ್ಕವಿಲ್ಲದಷ್ಟು ಇದ್ದಾರೆ. ಹಾರ್ಲೆ, ಕೆಟಿಎಂ ಡ್ಯೂಕ್‌, ಬೆನೆಲ್ಲಿ ಟಿಎನ್‌ಟಿ, ಕವಾಸಕಿ ನಿಂಜಾದಂತಹದ ಸೂಪರ್‌ಬೈಕ್‌ ಮೋಹಿಗಳು ಒಂದೆಡೆಯಾದರೆ, ವಿಂಟೇಜ್‌ ವ್ಯಾಲ್ಯೂ ಹೊಂದಿರುವ ಆರ್‌ಡಿ 350, ಎಝ್ಡಿ, ಜಾವಾ, ಬುಲೆಟ್‌ ಬೈಕ್‌ಗಳನ್ನು ಪ್ರೀತಿಸುವ ಬೈಕರ್‌ಗಳೂ ಇಲ್ಲಿದ್ದಾರೆ.

ಒಂದು, ಎರಡು, ಮೂರು ದಿನ ರಜೆ ಸಿಕ್ಕರೆ ಸಾಕು; ತಮ್ಮ ತಮ್ಮ ಬೈಕ್‌ ಎತ್ತಿಕೊಂಡು ಗುಂಪಾಗಿ ಅಥವಾ ಒಂಟಿಯಾಗಿ ರೈಡ್‌ಗೆ ಹೊರಡುವ ನಗರದ ಕೆಲವು ಬೈಕರ್ಸ್‌ಗಳು ತಮ್ಮ ನೆಚ್ಚಿನ ರೈಡಿಂಗ್‌ ಸ್ಪಾಟ್‌ ಯಾವುದು ಮತ್ತು ಏಕೆ ಎಂಬುದನ್ನು ಇಲ್ಲಿ ಹೇಳಿಕೊಂಡಿದ್ದಾರೆ. 

ಕರಾವಳಿ ಹುಡುಗ, ಸಾಫ್ಟ್‌ವೇರ್‌ ಕಂಪೆನಿ ಉದ್ಯೋಗಿ ಆಗಿರುವ ಸುಧೀರ್‌ ಪ್ರಸಾದ್‌ ಅವರು ಬೈಕ್‌ ರೈಡಿಂಗ್‌ಗೆ ಸ್ಥಳ ಆಯ್ಕೆ ಮಾಡುವಾಗ ತುಸು ಭಿನ್ನವಾಗಿ ಯೋಚಿಸುತ್ತಾರೆ. ಮುಖ್ಯವಾಗಿ ಇವರು ರೈಡ್‌ಗೆ ಹೋಗುವ ಸ್ಥಳದಲ್ಲಿ ಜನಜಂಗುಳಿ ಇರಬಾರದು. ಆ ಸ್ಥಳ ಕಮರ್ಷಿಯಲ್‌ ಆಗಿರಬಾರದು. ತುಂಬ ನ್ಯಾಚುರಲ್‌ ಆಗಿರಬೇಕು. ಈ ಮೂರು ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಅವರು ಸ್ಥಳ ಆಯ್ಕೆ ಮಾಡಿಕೊಳ್ಳುತ್ತಾರೆ.

‘ಒಂದು ದಿನದ ರೈಡ್‌ನಲ್ಲಿ ಹೆಚ್ಚು ಕಮ್ಮಿ 300ರಿಂದ 4000 ಕಿಲೋ ಮೀಟರ್‌ ದೂರ ಕ್ರಮಿಸಬಹುದು. ಒಂದು ದಿನದ ರೈಡ್‌ಗೆ ದೇವರಾಯನದುರ್ಗ ನನಗೆ ಅಚ್ಚುಮೆಚ್ಚಿನ ಸ್ಥಳ. ಬೆಳ್ಳಂಬೆಳಿಗ್ಗೆ ಆ ಸ್ಥಳಕ್ಕೆ ಲಗ್ಗೆಯಿಟ್ಟರೆ ಅಲ್ಲಿನ ನಿಸರ್ಗದ ಸೊಬಗು ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತದೆ.

ಮೂರು ದಿನದ ರೈಡ್‌ ಆದರೆ, ಗೋಕರ್ಣಕ್ಕೆ ಹೋಗುತ್ತೇನೆ. ಹಾದಿಯಲ್ಲಿ ಸಿಗುವ ಸಣ್ಣ ಸಣ್ಣ ಝರಿಗಳು ಬೈಕರ್‌ಗಳ ಮನಸ್ಸಿಗೆ ಮುದನೀಡುತ್ತವೆ. ಗೋಕರ್ಣದಲ್ಲಿ ಉಳಿದುಕೊಳ್ಳಲು ಸಣ್ಣ ಸಣ್ಣ ಗುಡಿಸಲುಗಳು ಸಿಗುತ್ತವೆ. ದಿನಕ್ಕೆ ₹200ರಿಂದ 300 ಬಾಡಿಗೆ ಇದೆ. ತಿಂಗಳುಗಟ್ಟಲೆ ಉಳಿಯುವ ವಿದೇಶಿಗರಿಗೆ ಕೇವಲ ₹150ರ ಲೆಕ್ಕದಲ್ಲಿ ದಿನದ ಬಾಡಿಗೆ ಇರುತ್ತದೆ. ಈ ಗುಡಿಸಲುಗಳು ತುಂಬ ಕ್ಲೀನ್‌ ಆಗಿ ಇರುತ್ತವೆ. ಹಾಗಾಗಿ, ನಾನು ಗೋಕರ್ಣಕ್ಕೆ ಹೋದಾಗೆಲ್ಲ ಅಲ್ಲೇ ಉಳಿಯುತ್ತೇನೆ.

ಲಾಂಗ್‌ರೈಡ್‌ ಅಂದರೆ 15–20 ದಿನದ ಟ್ರಿಪ್‌ಗೆ ಲಡಾಖ್‌ಗೆ ಹೋಗುತ್ತೇನೆ. ಅದಕ್ಕಿಂತಲೂ ಸ್ಪಿಟಿ ತುಂಬ ಸುಂದರವಾಗಿದೆ. ಇಲ್ಲಿಯ ರಸ್ತೆ ಏನೇನೂ ಚೆಂದವಿಲ್ಲ. ಆದರೆ, ಅಲ್ಲಿ ಎದುರಾಗುವ ಕಷ್ಟಗಳನ್ನೆಲ್ಲಾ ಹಿಮ್ಮೆಟ್ಟಿಸಿ ಬೈಕ್‌ ಅನ್ನು ಮುನ್ನುಗ್ಗಿಸುವಾಗ ನನಗೆ ಇನ್ನಿಲ್ಲದ ಖುಷಿ ಸಿಗುತ್ತದೆ. ರೋಹ್ತಾಂಗ್‌ ಪಾಸ್‌ನಿಂದ ಸ್ಪಿಟಿ ಪ್ರಾಂತ್ಯ ಪ್ರವೇಶಿಸುವ ನಡುವೆ 60 ಕಿಲೋ ಮೀಟರ್‌ನ ಒಂದು ರಸ್ತೆ ಇದೆ. ಅದು ಎಷ್ಟು ಸವಾಲಿನ ಹಾದಿ ಅಂದರೆ, ಅಲ್ಲಿ ರೈಡ್‌ ಮಾಡಿದಾಗಲೇ ತಿಳಿಯುವುದು. ನನಗೆ ಆ ರಸ್ತೆ ದಾಟಲು ಬರೋಬ್ಬರಿ ಏಳು ಗಂಟೆ ಬೇಕಾಯ್ತು’ ಎನ್ನುವ ಸುಧೀರ್‌ ಪ್ರಸಾದ್‌, ರಜೆ ಸಿಕ್ಕಾಗೆಲ್ಲಾ ತಮ್ಮ ಕೆಟಿಎಂ ಡ್ಯೂಕ್ 390 ಬೈಕ್‌ ಹತ್ತಿಕೊಂಡು ರೈಡ್‌ಗೆ ಹೊರಟುಬಿಡುವ ಉತ್ಸಾಹಿ ಬೈಕರ್‌.

ಆರ್‌ಡಿ 350 ಕ್ಲಬ್‌ನ ಸ್ಥಾಪಕ ವಿಶಾಲ್‌ ಅಗರ್‌ವಾಲ್‌ ರೈಡ್‌ಗೆ ಹೊರಡುವ ಮುನ್ನ ರಸ್ತೆ ಬಗ್ಗೆ, ಅಲ್ಲಿನ ಕರ್ವ್ಸ್‌ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ‘ಒಂದು ದಿನದ ರೈಡಿಂಗ್‌ಗೆ ನಂದಿ ಬೆಟ್ಟ, ಕೂರ್ಗ್‌, ಸಕಲೇಶಪುರ ನನ್ನ ನೆಚ್ಚಿನ ತಾಣಗಳು. ಎರಡು ಅಥವಾ ಮೂರು ದಿನದ ರೈಡ್‌ಗೆ ಊಟಿ, ಬಂಡೀಪುರಕ್ಕೆ ಹೋಗುತ್ತೇನೆ. ಮೂರು ದಿನದ ರೈಡ್‌ಗಳಿಗೆ ಕೇರಳ ಹೇಳಿ ಮಾಡಿಸಿದಂತಹ ಸ್ಥಳ. ಬೆಂಗಳೂರಿನಿಂದ ಮುನ್ನಾರ್‌ಗೆ 500 ಕಿಲೋ ಮೀಟರ್‌ ಇದೆ. ನನಗನ್ನಿಸುವಂತೆ ಬೈಕರ್ಸ್‌ಗಳ ನೆಚ್ಚಿನ ತಾಣ ಕೇರಳ. ಈ ಭಾಗದ ರಸ್ತೆ ಚೆನ್ನಾಗಿದೆ.

ದಾರಿಯುದ್ದಕ್ಕೂ ಹಿಲ್‌ ಸ್ಟೇಷನ್‌ಗಳಿವೆ. ಇನ್ನು ನಿಸರ್ಗ ಸೌಂದರ್ಯವಂತೂ ಅದ್ಭುತ. ಹಾಗಾಗಿ, ಕೇರಳವನ್ನು ಅನೇಕರು ಪ್ರೀತಿಸುತ್ತಾರೆ. ನಂದಿ ಹಿಲ್ಸ್‌ ರಸ್ತೆಯಲ್ಲಿ 40 ಹೇರ್‌ಪಿನ್‌ ಬೆಂಡ್‌ ಇದ್ದರೆ, ಸೇಲಂ ಬಳಿಯ ಕೊಲ್ಲಿ ಹಿಲ್ಸ್‌ ಹಾದಿಯಲ್ಲಿ 76 ಹೇರ್‌ಪಿನ್‌ ಬೆಂಡ್‌ಗಳು ಇವೆ. ಈ ರಸ್ತೆಯಲ್ಲಿ ಬೈಕ್‌ ಓಡಿಸುವಾಗ ಸಿಗುವಷ್ಟು ಕಿಕ್‌ ನನಗೆ ಮತ್ತೆಲ್ಲಿಯೂ ಸಿಕ್ಕಿಲ್ಲ. ಸೆಪ್ಟೆಂಬರ್‌– ಅಕ್ಟೋಬರ್‌ ತಿಂಗಳಿನಲ್ಲಿ ಲಾಂಗ್‌ ರೈಡ್‌ ಹೋಗಲು ಬಯಸುವ ಬೈಕರ್‌ಗಳಿಗೆ ಲಡಾಖ್‌ ಅಚ್ಚುಮೆಚ್ಚಿನ ತಾಣ. ವಿಶ್ವದ ಅತ್ಯಂತ ಎತ್ತರದ ಮೋಟಾರ್‌ ರೈಡಿಂಗ್‌ ಸ್ಥಳ ಇದು. 20–25 ದಿನದ ರೈಡ್‌ನಲ್ಲಿ ಬೈಕರ್‌ಗಳು ಸಿಕ್ಕಾಪಟ್ಟೆ ಸವಾಲುಗಳನ್ನು ಈ ರಸ್ತೆಯಲ್ಲಿ ಎದುರಿಸಬೇಕು’ ಎನ್ನುತ್ತಾರೆ ವಿಶಾಲ್‌.

ರ್‍ಯಾಂಗ್ಲರ್‌ ಟ್ರೂ ವಾಂಡರರ್‌್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ಬೈಕರ್‌ ಪಣಿಕ್ಕರ್‌ ಅವರ ಸವಾರಿಗೆ ಸಾಥ್‌ ನೀಡುವುದು ಕರಿಷ್ಮಾ. ಚಿಕ್ಕಂದಿನಿಂದಲೇ ಬೈಕ್‌ಗಳ ಬಗ್ಗೆ ವಿಪರೀತ ಮೋಹ ಬೆಳೆಸಿಕೊಂಡಿದ್ದ ಇವರು ಈವರೆಗೆ ಬೈಕ್‌ನಲ್ಲಿ ಹಲವು ರೈಡ್‌ಗಳನ್ನು ಮಾಡಿದ್ದಾರೆ. ಪಣಿಕ್ಕರ್‌ ಅವರು ಬೈಕ್‌ ರೈಡಿಂಗ್‌ಗೆ ಸ್ಥಳ ಆಯ್ಕೆ ಮಾಡಿಕೊಳ್ಳುವಾಗ ಮುಖ್ಯವಾಗಿ ಗಮನ ಹರಿಸುವುದು ಸಿನಿಕ್‌ ಬ್ಯೂಟಿ ಬಗ್ಗೆ. ‘ಒಂದು ದಿನದ ರೈಡಿಂಗ್‌ಗೆ ಬಿ.ಆರ್‌.ಹಿಲ್ಸ್‌, ಕೆ.ಗುಡಿ ನನ್ನ ನೆಚ್ಚಿನ ಸ್ಥಳಗಳು. ಎರಡು ದಿನದ ರೈಡ್‌ಗಾದರೆ ಊಟಿ, ವೈನಾಡು, ಚಿಕ್ಕಮಗಳೂರು ಅಥವಾ ಕೂರ್ಗ್‌ ಆಯ್ಕೆ ಮಾಡಿಕೊಳ್ಳುತ್ತೇನೆ. ಈ ಸ್ಥಳಗಳೆಲ್ಲೆಲ್ಲಾ ಅದ್ಭುತ ಪ್ರಾಕೃತಿಕ ಸೌಂದರ್ಯ ತುಂಬಿ ತುಳುಕುತ್ತಿದೆ.

ಕರಾವಳಿ ಪ್ರದೇಶಕ್ಕೆ ರೈಡ್‌ ಹೋಗುವುದಾದರೆ ಮಂಗಳೂರು, ಮರವಂತೆ ನನ್ನ ಮೊದಲ ಆಯ್ಕೆಯಾಗುತ್ತವೆ. ಶಿಲ್ಪಕಲೆ ಮತ್ತು ಐತಿಹಾಸಿಕ ಸ್ಥಳಗಳಿಗೆ ರೈಡ್‌ ಮಾಡುವ ಯೋಜನೆ ಹಾಕಿಕೊಂಡರೆ ಬಂಡೀಪುರ, ನಾಗರಹೊಳೆ, ಹಂಪಿ, ಬಾದಾಮಿ, ಐಹೊಳೆ ನನ್ನ ನೆಚ್ಚಿನ ತಾಣ’ ಎನ್ನುವ ಪಣಿಕ್ಕರ್‌, ನಗರದ ಖಾಸಗಿ ಕಂಪೆನಿಯೊಂದರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT