ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರನ ಕಣಿವೆಯ ಚೆಲುವಿನ ಸುತ್ತ...

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ತುಮಕೂರಿನಿಂದ 72ಕಿ.ಮೀ. ದೂರದಲ್ಲಿರುವ ಚಿಕ್ಕನಾಯಕನಳ್ಳಿ ತೆಂಗಿಗೆ ಹೆಸರಾದ ಪ್ರದೇಶ. ಕೆಲವೊಮ್ಮೆ ‘ಚಿಕ್ಕನಾಯಕನಹಳ್ಳಿಯ ಚಿಪ್ಪು’ ಎಂದು ಅಣಕಿಸುವ ಸ್ಥಿತಿಗೆ ಗುರಿಯಾಗಿದೆ. ಈ ಅಣಕದ ಹಿಂದೆ ತೆಂಗಿನ ಕರಟವೆಂಬ ಅರ್ಥಕ್ಕಿಂತ ಬೇರೆಯದೇ ಆದ ವಾಸ್ತವ ಸಂಗತಿ ಇರಬೇಕು. ಕರಟಕ್ಕೂ ಬರದ ಬೀಡಿಗೂ ಇರುವ ನಂಟಿನ ಭೌಗೋಳಿಕ ವಸ್ತುಸಂಗತಿಯ ಕಡೆ ಆ ಅರ್ಥಸೂಕ್ಷ್ಮದ ನೆರಳು ಚಾಚಿದೆ ಅನ್ನಿಸುತ್ತಿದೆ.

ಚಿಕ್ಕನಾಯಕನಹಳ್ಳಿಯಿಂದ ಪಶ್ಚಿಮದ ಈಶಾನ್ಯ ಮೂಲೆಗೆ 35 ಕಿಲೋ ಮೀಟರ್ ದೂರದಲ್ಲಿ ಬೋರನ ಕಣಿವೆ ಅಣೆಕಟ್ಟು ಇದೆ. ಇದೊಂದು ಚಿಕ್ಕ ಡ್ಯಾಂ. ಉತ್ತರ ದಕ್ಷಿಣದ ಉದ್ದಕ್ಕೆ ಮೈಚಾಚಿಕೊಂಡಿರುವ ಒಂದು ದೊಡ್ಡ ಗುಡ್ಡಸಾಲು; ಚಿಕ್ಕನಾಯಕನ ಹಳ್ಳಿಯ ಮದಲಿಂಗನ ಕಣಿವೆಯ ಬೆಟ್ಟಸಾಲಿನ ಮುಂದುವರಿದ ಭಾಗದಂತೆ ಮಧ್ಯೆ ಬಿಡುವು ಕೊಟ್ಟು ಬೆಳೆದು ಹಬ್ಬಿರುವ ಬೆಟ್ಟಸಾಲು ಇದು. ಇದರ ಉತ್ತರ ಭಾಗದಲ್ಲಿ ಮತ್ತೆ ಬಿಡುವು ಕೊಟ್ಟಂತೆ ಹರಿದ ಒಂದು ಕಣಿವೆ ಪ್ರದೇಶ. ಈ ಕಣಿವೆಯ ಎರಡೂ ಬದಿಯಲ್ಲಿ ಎರಡು ದೊಡ್ಡ ಬೆಟ್ಟಗಳು.

ಈ ಕಣಿವೆಗೆ ಬೋರನೆಂಬುವವನು ದಿನವೂ ಕುರಿ ಮೇಯಿಸಲು ಬರುತ್ತಿದ್ದನಂತೆ. ಇದರಿಂದಾಗಿ ಇದಕ್ಕೆ ಬೋರನ ಕಣಿವೆ ಎಂಬ ಹೆಸರು ಬಂದಿದೆಯಂತೆ. ಇದು ಸುತ್ತಲಿನ ಜನರ ಬಾಯಲ್ಲಿ ಇರುವ ಕತೆ. ಈ ಕಣಿವೆಯನ್ನು ಬಳಸಿಕೊಂಡು ಎರಡೂ ಗುಡ್ಡಗಳನ್ನು ಪ್ರಕೃತಿದತ್ತ ಏರಿಗಳನ್ನಾಗಿಸಿ ಒಂದು ಚಿಕ್ಕ ಅಣೆಕಟ್ಟೆಯನ್ನು ಕಟ್ಟಲಾಗಿದೆ. ಇದೇ ಬೋರನ ಕಣಿವೆ ಡ್ಯಾಂ.

ಚಿಕ್ಕನಾಯಕನಹಳ್ಳಿಯಂಥ ಬರದ ನಾಡಿನಲ್ಲೂ ಡ್ಯಾಂ ಇದೆಯಾ ಎಂದು ಆಶ್ಚರ್ಯ ಪಡಬೇಕು. ಇದಕ್ಕೆ ನೀರು ಎಲ್ಲಿಂದ ಹರಿಯುತ್ತದೆ? ಸದಾ ಡ್ಯಾಂ ತುಂಬಿರುವುದು ಸಾಧ್ಯವೇ? ಹೀಗೆ ಪ್ರಶ್ನೆಗಳು ಸಹಜವಾಗಿ ಏಳುತ್ತವೆ. ಆದರೆ ಈ ಪ್ರಶ್ನೆಗಳಿಗಿಲ್ಲಿ ಅವಕಾಶವಿಲ್ಲದ ಹಾಗೆ ಆಶ್ಚರ್ಯವನ್ನೇ ಧುತ್ತನೆ ನಿಲ್ಲಿಸಿದಂತೆ ನೀರು ಮೈಚಾಚಿ ಮಲಗಿದೆ. ಅಣೆಕಟ್ಟೆಯ ಮೇಲೆ ನಿಂತು ನೋಡಿದರೆ ಹನ್ನೆರಡು ಕಿಲೋಮೀಟರ್ ದೂರದ ತನಕ ನೀರು ನಿಲ್ಲುವ ಜಾಗದ ವಿಸ್ತಾರ ಕಾಣುತ್ತದೆ. ಡ್ಯಾಂನ ನೀರು ನಿಲ್ಲುವ ಪಶ್ಚಿಮದ ಅಂಚಿನಲ್ಲಿ ಕಾರೇಹಳ್ಳಿ ರಂಗನಾಥಸ್ವಾಮಿಯ ದೇವಸ್ಥಾನವಿದೆ.

ಅಣೆಕಟ್ಟೆಗೂ ಇಲ್ಲಿಗೂ 6 ಕಿ.ಮೀ. ಅಂತರವಿದೆ. ಪ್ರತಿ ವರ್ಷವೂ ಈ ದೇವಸ್ಥಾನದ ಹತ್ತಿರ ದೇವರ ಉತ್ಸವ ನಡೆಯುತ್ತದೆ. ಈ ಉತ್ಸವದ ವಿಶೇಷವೆಂದರೆ ಈ ಸುತ್ತಿನಲ್ಲಿ ನಡೆಯುವ ದನದ ಜಾತ್ರೆಯಲ್ಲಿ ಇದು ಬಹಳ ದೊಡ್ಡ ಜಾತ್ರೆ. ಮಳೆ ಅಧಿಕವಾಗಿ ಬಿದ್ದು ಬೋರನ ಕಣಿವೆ ತುಂಬಿದಾಗ ಕೆಲವು ಬಾರಿ ಡ್ಯಾಂ ನೀರಿನಲ್ಲಿ ದೇವಸ್ಥಾನ ಸಂಪೂರ್ಣ ಮುಳುಗಿ ಹೋಗುತ್ತದೆ. ಗೋಪುರದ ಕಳಸ ಮಾತ್ರ ದೂರಕ್ಕೆ ಗೂಟದಂತೆ ಕಾಣುತ್ತದೆ. ಹೀಗೆ ದೇವಸ್ಥಾನ ಮುಳುಗಿದಾಗ ಪೂಜೆಗೆ ಅಡಚಣೆಯಾಗದಂತೆ ಮುಳುಗಡೆಯಾಗದ ಜಾಗದಲ್ಲಿ ಇನ್ನೊಂದು ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ರಮಣೀಯ ಸೂರ್ಯಾಸ್ತ
ಬೋರನ ಕಣಿವೆ ತುಂಬಿದಾಗ ಅಣೆಕಟ್ಟೆಯ ಮೇಲೆ ನಿಂತು ಸೂರ್ಯಾಸ್ತವನ್ನು ನೋಡುವುದು ವಿಶೇಷ ಅನುಭವ ನೀಡುತ್ತದೆ. ಮೈಲುಗಟ್ಟಲೆ ಚಾಚಿದ ನೀರಿನಲ್ಲಿ ಸೂರ್ಯರಶ್ಮಿಯ ಬಿಂಬ ಬಂಗಾರದ ಕಂಬದಂತೆ ಥಳ ಥಳ ಹೊಳೆಯುತ್ತದೆ. ನೀರಿನಂಚಿನಲ್ಲಿ ಪ್ರಾರಂಭವಾಗುವ ತೆಂಗಿನ ತೋಟಸಾಲು, ಆ ಸಾಲು ತೋಟಗಳ ಮರೆಯಲ್ಲಿ ಅಲ್ಲೊಂದು ಇಲ್ಲೊಂದು ಹಳ್ಳಿಗಳು. ಮಧ್ಯೆ ಮಧ್ಯೆ ಬಯಲ ಹೊಲಮಾಳಗಳು ಇವೆಲ್ಲವುಗಳನ್ನು ದಾಟಿ ದೂರದಲ್ಲಿ ದಿಗಂತದಂಚಿನಲ್ಲೆಂಬಂತೆ ಕರಿದಾಗಿ ಕಾಣುವ  ಗವಿರಂಗಸ್ವಾಮಿಯ ಗುಡ್ಡ, ಆ ಗುಡ್ಡದ ನೆತ್ತಿಯ ಮೇಲೆ ಸೂರ್ಯದೇವ ಬಾನಂಚಿಗಿಳಿಯುವ ದೃಶ್ಯ ನಯನ  ಮನೋಹರ.

ಕನ್ನಂಬಾಡಿಗಿಂತಲೂ ಹಿಂದಿನ ಅಣೆಕಟ್ಟು
ಬೋರನ ಕಣಿವೆ ಕನ್ನಂಬಾಡಿಗಿಂತಲೂ ಮೊದಲೇ ನಿರ್ಮಾಣವಾದದ್ದು. ಇದನ್ನು ಕಟ್ಟಿಸಿದವರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಬಹದ್ದೂರ್. ಆಗ ದಿವಾನರಾಗಿದ್ದವರು ಶೇಷಾದ್ರಿ ಅಯ್ಯರ್. ಈ ಅಣೆಕಟ್ಟು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಮುಖ್ಯ ಎಂಜಿನಿಯರ್ ಕರ್ನಲ್ ಸಿ. ಬವನ್, ಸಹಾಯಕ ಮುಖ್ಯ ಎಂಜಿನಿಯರ್ ಡಬ್ಲು ಮೆಕಚಿನ್ ಯಸ್ನೋಯರ್. ಇಡೀ ಕಟ್ಟಡದ ಕೆಲಸವನ್ನು ನಿಗಾ ಇಟ್ಟು ಮಾಡಿಸಿದವರು ಕಾರ್ಯ ನಿರ್ವಾಹಕ ಎಂಜಿನಿಯರ್ ರಾಘವಲನಾಯುಡು. ನಿರ್ಮಾಣ ಕಾರ್ಯವನ್ನು 1888 ರಲ್ಲಿ ಪ್ರಾರಂಭಿಸಿ 1892 ರಲ್ಲಿ ಪೂರ್ಣಗೊಳಿಸಲಾಗಿದೆ.

ಈ ಅಣೆಕಟ್ಟೆಗೆ ಹಲವಾರು ಕೆರೆಗಳ ಕೋಡಿಬಿದ್ದ ನೀರು ಹರಿದು ಬರುತ್ತದೆ. 2002 ಎಕರೆ 31 ಗುಂಟೆ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಿರುವ ಈ ಅಣೆಕಟ್ಟೆಯ ಸಾಗುವಳಿ ಭೂಮಿಯು ಬೆಳ್ಳಾ, ಬೋರನ ಕಣಿವೆ ಅಂಬಾಪು, ಹೊಯ್ಸಳ ಕಟ್ಟೆ, ದಬ್ಬಗುಂಟೆ, ಮರೇನಡು, ಮುತ್ತುಗದ ಹಳ್ಳಿಗಳಿಗೆ ಸೇರಿದೆ. ಇದರಲ್ಲಿ 845 ಎಕರೆಯಷ್ಟು ಪ್ರದೇಶ ಮಾತ್ರ ರೈತರ ಉಳುಮೆಗೆ ಸೇರಿದ್ದು, ಮಿಕ್ಕದ್ದು ಬೀಳು ಬಿದ್ದಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೈಸೂರು ಅರಸರು ನೀರಾವರಿಗೆ ಕೊಡುತ್ತಿದ್ದ ಮಹತ್ವ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕನ್ನಂಬಾಡಿಯಂಥ ದೊಡ್ಡ ಅಣೆಕಟ್ಟು ನಿರ್ಮಾಣವಾಯಿತು. ಅದಕ್ಕೂ ಪೂರ್ವದಲ್ಲಿ ಚಾಮರಾಜೇಂದ್ರ ಒಡೆಯರ ಕಾಲದಲ್ಲಿ ಬೋರನ ಕಣಿವೆ ಅಣೆಕಟ್ಟು ನಿರ್ಮಾಣವಾಯಿತು. ಮೈಸೂರು ಅರಸರ ರೈತಪರ ಆಡಳಿತಕ್ಕೆ ಇವೆಲ್ಲ ಬಹುದೊಡ್ಡ ಸಾಕ್ಷಿಗಳಾಗಿವೆ.

ಇಂದಿನವರ ಅವಜ್ಞೆ
ಸುಂದರವಾದ ಸುಭದ್ರವಾದ ಬೋರನ ಕಣಿವೆ ಅಣೆಕಟ್ಟು ಈಗ ಮೇಲ್ವಿಚಾರಕರ ಅವಜ್ಞೆಯಿಂದಾಗಿ ಜಿಲ್ಲಾಡಳಿತದ ಬೇಜವಾಬ್ದಾರಿ ವರ್ತನೆಯಿಂದಾಗಿ ಹಾಳಾಗುವ ಸ್ಥಿತಿ ತಲುಪಿದೆ. ಏರಿಯ ಮಧ್ಯಭಾಗದಲ್ಲಿರುವ ಗೇಟ್‌ವೇ ಸ್ಥಿತಿ ಹೇಗಿದೆ ಎಂದರೆ ಕಿತ್ತುಬಿಸಾಕಿರುವ ಯಂತ್ರದ ಬಿಡಿಭಾಗಗಳನ್ನು ಒಟ್ಟಿಗೆ ರಾಶಿ ಹಾಕಿದಂತಿದೆ. ಎರಡು ಬಾಯಿಗಳ ಕಬ್ಬಿಣದ ಮುಚ್ಚಳಗಳೂ ಕಿತ್ತು ಹೋಗಿದ್ದು ಸಾವಿಗೆ ಆಹ್ವಾನವೀಯುವಂತೆ ಕಂದಕ ತೆರೆದಿದೆ. ಇದು ಇಡೀ ಅಣೆಕಟ್ಟಿನ ನೀರಿನ ಒತ್ತಡವನ್ನು ತಡೆಹಿಡಿದಿರುವ ಏರಿಯ ಮಧ್ಯಭಾಗದ ಅವಸ್ಥೆ.

   ಇನ್ನು ಎರಡು ಬದಿಯ ಗುಡ್ಡಗಳೇನೋ ಈಗ ಸುಸ್ಥಿತಿಯಲ್ಲಿವೆ.  ಆದರೆ ಸುತ್ತಲಿನ ಬೆಟ್ಟಗಳ ಮೇಲೆ ಹಾಕಿರುವ ವಿದ್ಯುತ್ ಉತ್ಪಾದನೆಯ ಬೃಹತ್ ಗಾಳಿಗಿರಗಟ್ಟೆಗಳನ್ನು ನೋಡಿದರೆ ಮುಂದೆಂದಾದರೂ ಈ ಬೆಟ್ಟಗಳ ಮೇಲೂ ಅವುಗಳನ್ನು ಹಾಕಬಹುದು ಎಂಬ ಆತಂಕ ಕಾಡುತ್ತದೆ. ಇಡೀ ಅಣೆಕಟ್ಟೆಯ ಎರಡೂ ಬದಿಯಲ್ಲಿರುವ ಗಾರೆಗಚ್ಚಿನ ಗೋಡೆಗಳು ಅಲ್ಲಲ್ಲಿ ಕಿತ್ತುಹೋಗಿದ್ದು, ಹೀಗೇ ಬಿಟ್ಟರೆ ಪೂರ್ತಿ ಕಳಚಿ ಬೀಳುವ ಸಾಧ್ಯತೆಗಳಿವೆ.

ಇಲ್ಲಿಗೆ ವಿಹಾರಕ್ಕೆಂದು ಬರುವ ಹುಡುಗ ಹುಡುಗಿಯರು ತಮ್ಮ ಹೆಸರುಗಳನ್ನು ಪ್ರೇಮದ ಸಂಕೇತಗಳನ್ನು ಸಿಕ್ಕ ಸಿಕ್ಕ ಕಡೆ ಕೆತ್ತಿ ಬರೆದು ಇಡೀ ಅಣೆಕಟ್ಟನ್ನು ವಿರೂಪಗೊಳಿಸಿದ್ದಾರೆ. ಶಂಕುಸ್ಥಾಪನೆಯ ವಿವರಗಳನ್ನು ದಾಖಲಿಸಿರುವ ಅಮೃತ ಶಿಲೆಯ ಫಲಕಗಳ ಮೇಲೂ ಹೆಸರುಗಳನ್ನು ಕೆತ್ತಿದ್ದಾರೆ. ಅಳಿಸಲಾಗದ ಬಣ್ಣದಲ್ಲಿ ಏನೇನೋ ಬರೆದಿದ್ದಾರೆ. ಇದು ಅನೈತಿಕ ಚಟುವಟಿಕೆಗಳ ತಾಣವಾಗಿರುವುದಕ್ಕೆ ಸುತ್ತ ಬಿದ್ದಿರುವ ಬಾಟಲಿಗಳು, ಬಳೆ ಚೂರುಗಳು ಸಾಕ್ಷಿ ಹೇಳುತ್ತಿವೆ.

ತುಮಕೂರು ಜಿಲ್ಲೆಯಲ್ಲಿ ಇದುವರೆಗೆ ಎಷ್ಟು ಜನ ಜಿಲ್ಲಾಧಿಕಾರಿಗಳು ಬಂದು ಹೋಗಿದ್ದಾರೆ! ತಮ್ಮ ಜಿಲ್ಲಾಡಳಿತಕ್ಕೆ ಒಳಪಟ್ಟಿರುವ ಈ ಜಾಗದ ಇರುವಿಕೆ ಎಷ್ಟು ಜನ ಜಿಲ್ಲಾಧಿಕಾರಿಗಳಿಗೆ ಗೊತ್ತಿತ್ತೋ ತಿಳಿಯದು. ಗೊತ್ತಿದ್ದರೆ ಅವರು ಅಣೆಕಟ್ಟೆಗೆ ಭೇಟಿ ನೀಡಿದ್ದರೆ ಸ್ಥಿತಿ ಹೀಗಿರುತ್ತಿರಲಿಲ್ಲ. ಸಂಬಂಧ ಪಟ್ಟ ಶಾಸಕರಾಗಲಿ, ಸಚಿವರುಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸದಿರುವುದು ನಮ್ಮ ನಾಗರಿಕ ಪ್ರಜ್ಞೆಗೆ ಕನ್ನಡಿ ಹಿಡಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT