ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ಧರ್ಮ: ಕನ್ನಡಿಗರು ವಿವರಿಸಿಕೊಟ್ಟ ಬೈನರಿಮಾರ್ಗ

Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಶೂನ್ಯತೆಯ ಮಧ್ಯಮಮಾರ್ಗವನ್ನು ಸಹಜವಾಗಿ ಬದುಕಿನ ಮಾರ್ಗವಾಗಿಸಿಕೊಂಡ ಬೌದ್ಧ ತಾತ್ವಿಕತೆಯ ಸಾವಿರಾರು ಸಾಧಕರು ನಮ್ಮ ನಡುವೆ ಇದ್ದಾರೆ. ಕೋಲಾರ, ತುಮಕೂರು ಮತ್ತು ಆಂಧ್ರದ ಅನೇಕ ಜಿಲ್ಲೆಗಳಲ್ಲಿರುವ ಅಚಲಿಗರು ಶೂನ್ಯತೆಯ ಅಧ್ಮಾತ್ಮ ಸಾಧಕರಾದರೆ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್, ಮಾನ್ಯತಾ ಟೆಕ್ ಪಾರ್ಕುಗಳಲ್ಲಿ ಇರುವವರು ಬುದ್ಧಗುರುವಿನ ಶೂನ್ಯತೆಯ ಬೈನರಿಮಾಧ್ಯಮದ ಬಳಕೆದಾರರು!

ಬೌದ್ಧ ಧರ್ಮವನ್ನು ಅರಿತುಕೊಳ್ಳಲು ಯಾವ ಪುಸ್ತಕವನ್ನು ಓದಬೇಕು ಮತ್ತು ಬೌದ್ಧ ಧರ್ಮದ ಪಾಲನೆ ಮಾಡುವುದಾದರೆ ಏನೇನನ್ನು ಪಾಲಿಸಬೇಕು? ಇದು ಅದನ್ನು ಅರಿಯ ಬಯಸುವ ಕುತೂಹಲಿಗಳ ಸಾಮಾನ್ಯ ಪ್ರಶ್ನೆ. ಇದೊಂಥರಾ ಕಟು ವ್ಯಂಗ್ಯ. ಸೊನ್ನೆಯನ್ನು ಪಡೆಯಲು ಏನೇನನ್ನು ಕೂಡಬೇಕು? ಎಂದು ಕೇಳಿದಂತೆ. ಈಗಾಗಲೇ ಓದಿ ಓದಿ ಬೇಡವಾದದ್ದನ್ನೆಲ್ಲಾ ಗುಡ್ಡೆ ಹಾಕಿಕೊಂಡದ್ದು ಸಾಲದೆ, ಇನ್ನೂ ಒಂದನ್ನು ಸೇರಿಸಿಕೊಳ್ಳಲು ಬಯಸುತ್ತಿರುತ್ತಾರೆ! ಅದೂ ಅಲ್ಲದೆ, ಆಚರಿಸಬಾರದವುಗಳ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿಟ್ಟುಕೊಂಡು ಅದರ ಜೊತೆಗೆ ಇನ್ನೊಂದಷ್ಟನ್ನು ಮಾಡಲು ತಯಾರಾಗಿ ಈ ಪ್ರಶ್ನೆ ಕೇಳುತ್ತಾರೆ.

ಬುದ್ಧನ ದಾರಿ ಗುಡ್ಡೆ ಹಾಕಿಕೊಳ್ಳುವ ದಾರಿಯಲ್ಲ, ಅಲ್ಲಿ ಪಡೆದು ಅಲ್ಲೇ ವಿಸರ್ಜಿಸುವ ಯಾನ. ಅದು ಸೇರಿಸಿಕೊಳ್ಳಬೇಕಾದ ಮತ್ತೊಂದಲ್ಲ; ಬದಲಿಗೆ ತಪ್ಪು ತಿಳಿವಳಿಕೆಯನ್ನು ತೊಡೆದು ಹಾಕುವುದರಿಂದ ಉಂಟಾಗುವ ವಿವೇಕ. ಈಗಾಗಲೇ ಇರುವ ಅನೇಕ ಆಚರಣೆಗಳ ಜೊತೆಗೆ ಸೇರಿಸಿಕೊಳ್ಳಬೇಕಾದ ಇನ್ನೊಂದು ಆಚರಣೆಯಲ್ಲ; ಬದಲಿಗೆ ಲೋಕಕ್ಕೆ ಕೇಡುಂಟುಮಾಡುವ ಆಚರಣೆಗಳ ನಿರಾಕರಣೆ ಮಾತ್ರ. ಯಾವಾಗಲೂ ಸೊನ್ನೆಯೇ ಆಗಿರುವ ಅವಸ್ಥೆ.

ಸೊನ್ನೆಯಾಗಿದ್ದರೆ ಮಾತ್ರ ಅಗತ್ಯಕ್ಕೆ ತಕ್ಕಂತೆ ಯಾವ ಸಂಖ್ಯೆಯೂ ಆಗಲು ಸಾಧ್ಯ ಮತ್ತು ಏನೂ ಆಗಿಲ್ಲದಿರಲೂ ಸಾಧ್ಯ. ಇದನ್ನು ಶೂನ್ಯತೆ ಅಥವಾ ಮಧ್ಯಮಮಾರ್ಗ ಎನ್ನುತ್ತಾರೆ. ಬುದ್ಧ ಗುರು ತಿಳಿಸಿಕೊಟ್ಟ ಈ ಶೂನ್ಯಮಾರ್ಗವನ್ನು ಸರಿಯಾಗಿ ವಿವರಿಸಿಕೊಟ್ಟವರು ಕನ್ನಡಿಗರು. ಶೂನ್ಯವೆಂದರೆ ಏನೂ ಇಲ್ಲದಿರುವುದಲ್ಲ. ಎಲ್ಲವೂ ಇದ್ದು, ಏನೂ ಇಲ್ಲದಂತಿರುವುದು. ಕೇವಲ ಸೊನ್ನೆಯಲ್ಲ; ಯಾವಾಗ ಬೇಕೋ ಆಗ ಯಾವ ಸಂಖ್ಯೆಯೂ ಆಗಬಹುದಾದದ್ದು. ಇದೊಂದು ರೀತಿಯ ಸೊನ್ನೆ ಮತ್ತು ಒಂದರ ‘ಬೈನರಿ ಮಾರ್ಗ’. ಆಹ್ವಾನ-ವಿಸರ್ಜನೆಗಳ ಮೂಲಕ ಲೋಕವನ್ನು ವಿವರಿಸಿಕೊಡುವುದರಿಂದಾಗಿ ದೊರಕುವ ಲೋಕಗ್ರಹಿಕೆಯ ಕ್ರಮ.

ಈ ಮಧ್ಯಮಮಾರ್ಗವನ್ನು ಮೊದಲು ವಿವರಿಸಿಕೊಟ್ಟವರು ಕನ್ನಡಿಗರು. ಕನ್ನಡಿಗ ನಾಗಾರ್ಜುನ ಬೌದ್ಧ ಮಧ್ಯಮಮಾರ್ಗವನ್ನು ವಿವರಿಸಿಕೊಡುವ ಮೂಲಕ ಮಹಾಯಾನವನ್ನು ಪ್ರವರ್ತಿಸಿದನು. ಬೌದ್ಧ ಮಧ್ಯಮಮಾರ್ಗವು ಬೇರೆ ಧರ್ಮಗಳ ರೀತಿಯಲ್ಲಿ ‘ಮಾಡುವ – ಮಾಡದಿರುವುಗಳ’ ಪಟ್ಟಿಯಲ್ಲ. ಬದಲಿಗೆ ಅದು ಈ ಕ್ಷಣಕ್ಕೆ ನಮ್ಮೆದುರಿಗಿರುವ ಲೋಕ ಮತ್ತು ಅದರ ಸಂಬಂಧದಲ್ಲಿ ನಮ್ಮನ್ನು ಅರಿತುಕೊಳ್ಳುವ ಕ್ರಮ. ಹೀಗೆ ಸರಿಯಾಗಿ ಅರಿತುಕೊಂಡಾಗ ಮಾತ್ರ ನಾವು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಲೋಕವನ್ನು ಸರಿಯಾಗಿ ಅರಿತುಕೊಳ್ಳುವ ಕ್ರಮವೆಂದರೆ ಪ್ರತಿಯೊಂದನ್ನು (ನಮ್ಮನ್ನೂ ಸೇರಿ) ಕಾರಣ ಮತ್ತು ಪರಿಸ್ಥಿತಿಗಳ ಸಂಯೋಜನೆ ಎಂದು ಅರಿತುಕೊಳ್ಳುವುದು. ಎಲ್ಲವೂ ಈ ಸಂಬಂಧದಲ್ಲಿಯೇ ಉಂಟಾಗುವುದರಿಂದ ಲೋಕವನ್ನು ಪ್ರತೀತ್ಯಸಮುತ್ಪಾದ ಎನ್ನುತ್ತಾರೆ.

ಸಮಸ್ತವೂ ಇದೆ – ಇಲ್ಲಗಳ ಸಂಯೋಜನೆಯಲ್ಲಿಯೇ ಉಂಟಾಗುತ್ತವೆ. ಆದುದರಿಂದಲೇ ಇದು ಬೈನರಿಮಾರ್ಗ. ಈಗಲೂ ಕನ್ನಡಿಗರೇ ಬೈನರಿ ಮಾರ್ಗದ ಮುಂದಾಳುಗಳು. ಸದ್ಯಕ್ಕೆ ಭಾಷಿಕವಾಗಿ ಅಭಿವ್ಯಕ್ತವಾಗಿರುವ ಸಮಸ್ತವನ್ನೂ ಸೊನ್ನೆ ಮತ್ತು ಒಂದರ ಬೈನರಿಗೆ ಇಳಿಸುವುದರ ಮೂಲಕ ಮತ್ತೊಂದು ಸತ್ಯದ ಅನಾವರಣವಾಗಿದೆ. ಅದೇನೆಂದರೆ ಯಾವುದೆಲ್ಲವನ್ನೂ ಬೈನರಿಗೆ ಇಳಿಸಬಹುದೋ ಅದೆಲ್ಲವನ್ನು ಕಟ್ಟಿದ್ದೂ ಕೂಡ ಅದೇ ಸೊನ್ನೆ ಮತ್ತು ಒಂದರ ಸಂಯೋಜನೆಯಿಂದ ಎಂಬ ಅರಿವು ಮೂಡುತ್ತದೆ. ಬೌದ್ಧಧರ್ಮವನ್ನು ಭಾರತದಿಂದಲೇ ಆಚೆಗಟ್ಟಲಾಗಿದೆ ಎನ್ನುವುದು ನಿಜವಲ್ಲ. ಅದು ಧ್ಯಾನಕ್ಕೆಂದು ಕುಳಿತವರ ಮೂಗಿನ ತುದಿಯಲ್ಲಿಲ್ಲ; ಬದಲಿಗೆ ಆಧುನಿಕ ತಂತ್ರಜ್ಞಾನವಾಗಿ ನಮ್ಮೆಲ್ಲರ ಬೆರಳ ತುದಿಗಳಲ್ಲಿ ಇದೆ!

ಕನ್ನಡಿಗ ನಾಗಾರ್ಜುನನನ್ನು ಬೌದ್ಧ ಮಧ್ಯಮಮಾರ್ಗದ ಆಚಾರ್ಯನೆಂದು ಕರೆಯುತ್ತಾರೆ. ಬೌದ್ಧ ಶೂನ್ಯಮಾರ್ಗ ಅಥವಾ ಮಧ್ಯಮಮಾರ್ಗವನ್ನು ಲೋಕಕ್ಕೆ ವಿವರಿಸಿಕೊಟ್ಟು ಮಹಾಯಾನವನ್ನು ಪ್ರವರ್ತಿಸಿದ ಅವನನ್ನು ಎರಡನೆಯ ಬುದ್ಧನೆಂದು ಗೌರವಿಸುತ್ತಾರೆ. ಲೋಕಾಭಿವ್ಯಕ್ತಿಯ ಮಹಾಮಾರ್ಗವಾದ ಚತುಷ್ಕೋಟಿತತ್ವವನ್ನು ಶ್ರೀಗುರು ನಾಗಾರ್ಜುನ ಗಣಿತೀಯ ಮಾರ್ಗವಾದ reduction ad absurdum ಕ್ರಮದ ಮೂಲಕ ವಿವರಿಸಿದ.

ನಮ್ಮನ್ನೂ ಸೇರಿಸಿಕೊಂಡು ನಮ್ಮ ಸುತ್ತಲಿನ ಈ ಲೋಕವನ್ನು ಇದೆ ಎಂದಾಗಲೀ, ಇಲ್ಲ ಎಂದಾಗಲೀ, ಇದೆ–ಇಲ್ಲ ಎರಡೂ ಹೌದೆಂದಾಗಲೀ, ಇದೆ–ಇಲ್ಲ ಎರಡೂ ಅಲ್ಲವೆಂದಾಗಲೀ ಏಕಾಕಿಯಾಗಿ ವಿವರಿಸಿಕೊಳ್ಳಲಾಗದು ಎಂದು ತೋರಿಸಿಕೊಟ್ಟನು. ಈ ನಾಲ್ಕೂ ಕ್ರಮಗಳನ್ನು (ಇದೆ, ಇಲ್ಲ, ಇದೆ-ಇಲ್ಲ ಎರಡೂ ಹೌದು, ಇದೆ-ಇಲ್ಲ ಎರಡೂ ಅಲ್ಲ) ವಿಶ್ಲೇಷಿಸಿ ನೋಡಿದರೆ ಈ ನಾಲ್ಕೂ ಕ್ರಮಗಳು ಪ್ರತಿಪಾದಿಸುತ್ತಿರುವುದು ಸ್ವತಂತ್ರ ಸತ್ಯವಲ್ಲವಾದುದರಿಂದ ತಮ್ಮಷ್ಟಕ್ಕೆ ಕುಸಿದುಬೀಳುತ್ತವೆ.

ಹೀಗೆ ಬೇರೆ ಯಾವ ನಿಲುವಿನ ನೆರವನ್ನೂ ಪಡೆಯದೆ ಈ ನಾಲ್ಕೂ ನಿಲುವುಗಳು ಅಂತಿಮ ಸತ್ಯವಲ್ಲ ಎಂದು ಸಾಧಿಸಿ ಅವು ಅಸಂಗತ ಎಂದು ತೋರಿಸಿಕೊಟ್ಟುದುದರಿಂದ ಈ ಕ್ರಮವನ್ನು reduction ad absurdum ಕರೆಯುತ್ತಾರೆ. ‘ಹಾಗಾದರೆ ನಿನ್ನ ನಿಲುವೇನು?’ ಎಂದು ಗುರು ನಾಗಾರ್ಜುನನನ್ನು ಕೇಳಿದರೆ– ‘ನನಗೆ ಯಾವ ಪ್ರತಿಜ್ಞೆಯೂ ಇಲ್ಲ, ಹಾಗಾಗಿ ನಾನು ಸ್ಥಾಪಿಸಬೇಕಾದದ್ದು ಏನೂ ಇಲ್ಲ’ ಎನ್ನುತ್ತಾನೆ. ಈ ಒಂದೂ ಇಲ್ಲದುದನ್ನು ಅಲ್ಲಮಗುರು ಹೀಗೆಂದು ನುಡಿಯುತ್ತಾನೆ:

ಎರಡೆಂಬರಯ್ಯ ಕರಣದ ಕಂಗಳಲ್ಲಿ ನೋಡಿದವರು
ಎರಡುವನತಿಗಳೆದು ಒಂದೆಂಬರಯ್ಯ!
ಒಂದು ಇಲ್ಲದ ನಿರಾಳವ ಕಾಮಿಸುವರಾಗಿ
ಕಲ್ಪಿಸುವುದಿಲ್ಲ, ಭಾವಿಸುವುದಿಲ್ಲ]
ಗೋಗೇಶ್ವರನೆಂಬುದಿಲ್ಲಾಗಿ ಮುಂದೆ ಬಯಲೆಂಬುದಿಲ್ಲ


ಅಲ್ಲಮನಾಗಲೀ, ನಾಗಾರ್ಜುನನಾಗಲೀ ಇವುಗಳನ್ನು ಕೇವಲ ನಿರಾಕರಣೆಯ ಕಾರಣಕ್ಕಾಗಿ ನಿರಾಕರಿಸುತ್ತಿಲ್ಲ, ಬದಲಿಗೆ ಇವುಗಳನ್ನು ಬಳಸಿ ಏನನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದಾರೋ ಆ ‘ಅಂತಿಮಸತ್ಯ’ ಎನ್ನುವುದು ಇಲ್ಲದಿರುವುದರಿಂದ ನಿರಾಕರಣೆಗೊಳ್ಳಬೇಕು. ಸದಾ ಬದಲಾಗುತ್ತಲೇ ಇರುವ ಲೋಕ ಸಂಗತಿಗಳಲ್ಲಿ ಶಾಶ್ವತವಾದುದನ್ನು ತೋರಿಸುತ್ತೇವೆ ಎಂಬ ಉದ್ದೇಶದಿಂದ ನಡೆಯುತ್ತಿರುವ ಈ ತರ್ಕದ ಉದ್ಯೋಗವನ್ನು ನಿರಾಕರಿಸದೆ ಹೋದರೆ, ಉದ್ದೇಶಪೂರ್ವಕವಾಗಿ ನೆಟ್ಟಿರುವ ತಪ್ಪು ಕೈಮರಗಳನ್ನು ತೆಗೆಯದೆ ಹೋದರೆ, ಆಗುವ ಅನಾಹುತಗಳನ್ನು ಬಲ್ಲ ಅವರು ಈ ತಪ್ಪು ಕೈಮರಗಳನ್ನು ಕೆಡವುತ್ತಾರೆ.

ಈಗೀಗಂತೂ ಕೇಡಿನ ಕೈಮರಗಳನ್ನು ಕೈಯಲ್ಲೆ ಹಿಡಿದು ದಿನಬೆಳಗಾದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕೂತು ಲಕ್ಷಾಂತರ ಜನರನ್ನು ದಿಕ್ಕು ತಪ್ಪಿಸುವ ಉದ್ಯೋಗ ಮಾಡುವ ಚಾನಲ್ ಗುರುಗಳ ದಂಡೇ ಇದೆ. ಇವರು ಬಿತ್ತುತ್ತಿರುವ ಕೇಡಂತೂ ಹೇಳತೀರದು. ಆತ್ಮವಾದ, ಬ್ರಹ್ಮವಾದ ಮುಂತಾದ ಬೊಗಳೆಗಳನ್ನು ವಿಜ್ಞಾನ ಹೇಗೆ ನಿರ್ಲಕ್ಷಿಸುತ್ತದೆಯೋ ಹಾಗೆಯೇ ಬೌದ್ಧ ಧರ್ಮವೂ ಅಂತಹ ಪೊಳ್ಳು ಸಂರಚನೆಗಳನ್ನು ಪರಿಗಣಿಸುವುದಿಲ್ಲ.

ಬುದ್ಧಗುರುವಿನ ಕಾಲಕ್ಕೆ ಇಂತಹ ತಪ್ಪು ಮಾರ್ಗಗಳನ್ನು ತೋರಿಸುವ ಅರುವತ್ತಮೂರು ಚಿಂತನಾಪ್ರಸ್ಥಾನಗಳು ಇದ್ದುವಂತೆ. ಅವುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬುದ್ಧಗುರು, ನಮ್ಮ ಜೀವನಕ್ರಮವನ್ನು ನಿರ್ದೇಶಿಸುತ್ತಿರುವ ಈ ದೃಷ್ಟಿವಾದಗಳಲ್ಲಿ ಇರುವ ದೋಷವೇ ನಮ್ಮ ಬದುಕಿನ ಸಂಕಟಕ್ಕೆ ಕಾರಣವಾಗಿರುವುದನ್ನು ಅರಿತುಕೊಂಡನು. ಭಾರತೀಯರ ಸದ್ಯದ ಬದುಕಿನ ಕೇಡುಗಳಿಗೆ ಈ ಕೈಮರಗಳೇ ಕಾರಣವಾಗಿವೆ.

ಬುದ್ಧಗುರು ತನ್ನದೇ ಆದ ಮತ್ತೊಂದನ್ನು ಸೇರಿಸುವುದರಿಂದ ಇದು ಬಗೆಹರಿಯುವುದಿಲ್ಲವೆಂದು ಅರಿತು, ಲೋಕವನ್ನು ಸರಿಯಾಗಿ ವಿವರಿಸಿಕೊಡಲು ಅವು ನಿರಾಕರಣೆಗೊಳ್ಳಬೇಕೆಂದು ತೋರಿಸಿಕೊಟ್ಟನು. ವಚನಕಾರರು ಇಂತಹ ದೃಷ್ಟಿವಾದಗಳ ಕೈಮರಗಳನ್ನು ತೆಗೆದುಹಾಕಿ ನಾವು ನಡೆಯಬೇಕಾದ ದಾರಿಯನ್ನು ‘ಬಯಲು’ ಎಂದು ಕರೆದರು. ಕುವೆಂಪು ಅದನ್ನು ‘ಅನಿಕೇತನ’ ತತ್ವವೆಂದೂ, ವಿಶ್ವಮಾರ್ಗವೆಂದೂ ಸೂಚಿಸಿದರು. ಬುದ್ಧಗುರು ಆತ್ಮ, ಬ್ರಹ್ಮ ಮುಂತಾದ ಪೊಳ್ಳು ಸಂರಚನೆಗಳನ್ನು ನಿರಾಕರಿಸಿ ವಿಜ್ಞಾನದ ರೀತಿಯಂತೆಯೇ ಅನಾತ್ಮವಾದ, ಅನಿತ್ಯತಾವಾದಗಳ ಮೂಲಕ ಲೋಕವನ್ನು ವಿವರಿಸಿಕೊಟ್ಟನು. ಅದನ್ನು ಬಾಳುತ್ತಿರುವ ಸಮೂಹಗಳು ಈಗಲೂ ಇವೆ!

ಕರ್ನಾಟಕದಲ್ಲಿ ಅಚಲ ಪರಂಪರೆ
ಕೋಲಾರ ಜಿಲ್ಲೆ ಮತ್ತು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಾದ್ಯಂತ ಅಚಲಿಗರೆಂದು ಕರೆದುಕೊಳ್ಳುವ ಸಾಧಕ ಪರಂಪರೆಯಿದೆ. ಮನಸ್ಸಿನ ಮೂಲೆಯಲ್ಲಿ ಕೂಡ ಲೋಕಕ್ಕೆ ಮುಚ್ಚಿಟ್ಟು ಬಾಳುವುದು ಏನೂ ಇರಕೂಡದು ಎಂದು ನಂಬಿ ಬದುಕುತ್ತಿರುವ ಅವರು ತಮ್ಮನ್ನು ‘ಬಹಿರಂಗಿಗಳು’ ಎಂದು ಕರೆದುಕೊಳ್ಳುತ್ತಾರೆ. ಈ ಮಾರ್ಗದ ಸಾಧಕರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ರಾಮಾವಧೂತರು, ದಕ್ಷಿಣಾಮೂರ್ತಿ, ಬೇರಿಕೆ ಬುಟ್ಟಪ್ಪನವರು ಮುಂತಾದ ಸಾಧಕರು ಈ ಮಾರ್ಗಿಗಳು.

ಆಂಧ್ರದ ನಾಗಾರ್ಜುನಕೊಂಡ, ಶ್ರೀಶೈಲಗಳಿಂದ ಕವಲೊಡೆದ ಈ ಮಾರ್ಗದ ತಾತ್ವಿಕ ಆಕರಮೂಲವೆಂದರೆ ನಾಗಾರ್ಜುನನ ‘ದಶಭೂಮಿಶಾಸ್ತ್ರ’. ಲೋಕವನ್ನು ನಾವು ಗ್ರಹಿಸಬೇಕಾದ ಕ್ರಮ ಮತ್ತು ಸಾಧನೆಯ ವಿವಿಧ ಹಂತಗಳನ್ನು ಹತ್ತು ಹಂತಗಳಲ್ಲಿ ಬೌದ್ಧ ಧರ್ಮವು ವಿವರಿಸುತ್ತದೆ. ಪ್ರಮುದಿತ, ವಿಮಲ, ಪ್ರಭಾಕರಿ, ಅರ್ಚಿಷ್ಮತಿ, ಸುದುರ್ಜಯ, ಅಭಿಮುಖಿ, ದೂರಾಗಮ, ಅಚಲ, ಸಾಧುಮತಿ ಮತ್ತು ಧರ್ಮಮೇಘ– ಇವು ಆ ಹತ್ತು ಹಂತಗಳು.

ಶೂನ್ಯತೆಯ ನೇರ ಅನುಸಂಧಾನ ಸಾಧ್ಯವಾಗುವ ಅವಧೂತರು ಸುಖ-ದುಃಖಗಳನ್ನು ದಾಟಿದಾಗ ಉಂಟಾಗುವ ಅನುಭವವು ‘ಪ್ರಮುದಿತ’; ಎಲ್ಲ ರೀತಿಯ ಕೆಡುಕುಗಳಿಂದ ಮುಕ್ತವಾಗಿ ಬದುಕುವುದು ‘ವಿಮಲ’; ಸದಾ ಜಾಗೃತವಾಗಿರುವ ನಿಸರ್ಗವಿವೇಕವು ‘ಪ್ರಭಾಕರಿ’; ಇದಿರಾಗುವ ಕೆಡುಕುಗಳನ್ನು ನಿವಾರಿಸಿಕೊಳ್ಳುವ ತಾಕ್ಷಣಿಕ ನಡೆ ‘ಅರ್ಚಿಷ್ಮತಿ’; ಮಧ್ಯಮಮಾರ್ಗದ ನಿರಂತರ ನಡೆಯನ್ನು ಕಾಪಾಡಿಕೊಳ್ಳುವುದು ‘ಸುದುರ್ಜಯ’; ಪ್ರಜ್ಞಾಪಾರಮಿತದ ಅನುಸಂಧಾನ ‘ಅಭಿಮುಖಿ’; ಎಲ್ಲ ಪ್ರಾಪಂಚಿಕ ವೈರುಧ್ಯಗಳನ್ನು ದಾಟುವುದು ‘ದೂರಾಗಮ’; ಮನಸ್ಸಿನಲ್ಲಿ ಸಂಗ್ರಹಗೊಂಡಿರುವ ಸಂರಚನೆಗಳಿಂದ ಮುಕ್ತನಾಗಿ ನಡೆದುಕೊಳ್ಳುವುದು ‘ಅಚಲ’; ತಾನು ಪಡೆದ ಅರಿವನ್ನು ಭಿನ್ನಭೇದವಿಲ್ಲದೆ ಸಮೂಹಕ್ಕೆ ಹಂಚುವುದು ‘ಸಾಧುಮತಿ’; ಮತ್ತು ಲೋಕ ಸಮಸ್ತವನ್ನು ಕರುಣೆ ಮೈತ್ರಿಯಿಂದ ಕಂಡು ಬಾಳಿಸುವುದು ‘ಧರ್ಮಮೇಘ’. ಇದರಲ್ಲಿನ ಎಂಟನೆಯ ಹಂತದ ಸಾಧಕರು ಅಚಲಿಗರು.

ಮನೋಕೋಶದಲ್ಲಿ ಸಂಗ್ರಹಗೊಳ್ಳುವ ಸಂರಚನೆಗಳೇ ನಮ್ಮ ತಪ್ಪು ಗ್ರಹಿಕೆಗೆ ಮತ್ತು ತಪ್ಪು ನಡೆಗೆ ಕಾರಣಗಳು. ಅವುಗಳ ಪರಿಣಾಮಗಳಿಗೆ ಒಳಗಾಗದೆ, ಅಂದರೆ ನಮ್ಮ ಮನಸ್ಸು ನೀಡುವ ನಿರ್ದೇಶನಗಳನ್ನು ತಕ್ಷಣ ಒಪ್ಪಿಕೊಳ್ಳದೆ ಅದನ್ನು ಪಕ್ಕಕ್ಕೆ ಇಟ್ಟು ಒಳಿತು ಕೆಡುಕುಗಳನ್ನು ಲೋಕಪರವಾಗಿ ಭಾವಿಸಿ ನಡೆದುಕೊಳ್ಳುವುದನ್ನು ‘ಅಚಲ’ ಎನ್ನುತ್ತಾರೆ.

ಅದನ್ನು ಕೋಲಾರದಲ್ಲಿ ಇದ್ದ ಅವಧೂತ ದಕ್ಷಿಣಾಮೂರ್ತಿಗಳು ಹೀಗೆ ವಿವರಿಸುತ್ತಾರೆ: ಯಾರು ತನ್ನ ಮನೋಸಂರಚನೆಗಳಿಂದ ವಿಚಲಿತನಾಗುವುದಿಲ್ಲವೋ ಅವನು ಅಚಲ. ಮನೋ ಸಂರಚನೆಗಳಿಂದ ಮುಕ್ತನಾಗಿ ನಡೆದುಕೊಳ್ಳುವುದನ್ನು ಮನೋಲಯ, ಅಮನಸ್ಕ ಮುಂತಾದ ಹೆಸರುಗಳಿಂದ ಸೂಚಿಸುತ್ತಾರೆ. ಅದನ್ನು ‘ಸಹಜಯಾನ’ ಎಂದು ಕೂಡ ಕರೆಯುತ್ತಾರೆ. ಅಚಲಿಗರು ‘ಸುಮ್ಮನೆ ಬಾಳುತ್ತಿರುವುದರಿಂದ’ ಯಾರ ಅರಿವಿಗೂ ಬರುತ್ತಿಲ್ಲ. ಈ ಅಚಲಮಾರ್ಗದ ಮಹಾಗುರುಗಳೆಂದರೆ ಸರಹಪಾದ ಮತ್ತು ಅಲ್ಲಮಪ್ರಭು. ಎಲ್ಲ ಪಂಥಗಳಿಂದ ಬಿಡಿಸಿಕೊಂಡು ‘ಸುಮ್ಮನೆ’ ಬಾಳುವ ಬಗೆಗೆ ಮಾತನಾಡುವುದು ಅಪರಾಧದಂತೆ ಕೇಳಿಸುತ್ತದೆ.

ದಣಿದ ಕುದುರೆಯ ಹಾಗೆ ಉಸಿರ ಎಳೆದು ಬಿಡುವೆಯಲ್ಲ!
ಸಹಜದಲ್ಲಿ ಸುಮ್ಮನಿರು ನಿಶ್ಚಲನಾಗಿ.
ಪವನವ ನಿರ್ಬಂಧಿಸಿ ನಿನ್ನ ಬಗ್ಗೆಯೇ ಧ್ಯಾನಿಸುವುದ ಬಿಡು
ಕಟ್ಠಾಜೋಗಿ, ಮೂಗಿನ ತುದಿಯ ನೋಡುತ್ತ ಕೂರಬೇಡ.    
(ಸರಹಪಾದ)

ಮನ ಉಂಟೆ ಮರಳೆ, ಶಿವಯೋಗಿಗೆ?
ಮತ್ತೊಮ್ಮೆ ಮನಮಗ್ನ ಉಂಟೆ ಶಿವಯೋಗಿಗೆ?
ಇಲ್ಲದ ಮನವನುಂಟೆಂದು ನುಡಿದು
ಅಡಗಿಸಿದೆನೆಂಬ ಮಾತು ಮನವ ನೆಲೆಮಾಡಿ ತೋಱುತ್ತದೆ
ಗೊಹೇಸ್ವರನನಱದ ಶರಣಂಗೆ ತೋಱಲಿಲ್ಲ ಅಡಗಲಿಲ್ಲ ಕೇಳಾ  
(ಅಲ್ಲಮಪ್ರಭು)


ಅಚಲಿಗರು ಬೌದ್ಧ  ಮಧ್ಯಮಮಾರ್ಗಿಗಳು. ಯಾವುದೇ ಧಾರ್ಮಿಕ ಸಂಕೇತಗಳ ಬಂಧನಕ್ಕೆ ಒಳಗಾಗಲು ಬಯಸದ ಬಯಲಿನ ಸಾಧಕರು. ಹಾಗಾಗಿ ಅವರು ತಮ್ಮನ್ನು ಹಾಗೆಂದು ಕರೆದುಕೊಳ್ಳಲು, ಕಡೆಗೆ ಬೌದ್ಧರೆಂದು ಕರೆದುಕೊಳ್ಳುವ ಅಗತ್ಯವನ್ನೂ ದಾಟಿದವರು. ಈ ನೆಲದಲ್ಲಿ ಇಂದಿಗೂ ಬೌದ್ಧ ತಾತ್ವಿಕತೆಯ ಸಾವಿರಾರು ಸಾಧಕರು ಶೂನ್ಯತೆಯ ಮಧ್ಯಮಮಾರ್ಗವನ್ನು ಸಹಜವಾಗಿ ಬದುಕಿನ ಮಾರ್ಗವಾಗಿಸಿಕೊಂಡಿದ್ದಾರೆ.

ಕೋಲಾರ, ತುಮಕೂರು ಮತ್ತು ಆಂಧ್ರದ ಅನೇಕ ಜಿಲ್ಲೆಗಳಲ್ಲಿರುವ ಅಚಲಿಗರು ಶೂನ್ಯತೆಯ ಅಧ್ಮಾತ್ಮ ಸಾಧಕರಾದರೆ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್, ಮಾನ್ಯತಾ ಟೆಕ್ ಪಾರ್ಕುಗಳಲ್ಲಿ ಇರುವವರು ಬುದ್ಧಗುರುವಿನ ಶೂನ್ಯತೆಯ ಬೈನರಿಮಾಧ್ಯಮದ ಬಳಕೆದಾರರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT