ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯೂರೋಕ್ರಸಿ

ಪರಿ ಪರಿಭಾಷೆ
Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಈ ಪದದಲ್ಲಿರುವ ಎರಡು 'ರ'ಕಾರಗಳು ಒಂದು ಬಗೆಯ ಕರ್ಕಶತೆಯನ್ನು ತರುವುದು ಈ ಪದದ ಹಿಂದಿರುವ ಅಗಾಧ ವ್ಯವಸ್ಥಾಸಂಕೀರ್ಣತೆಯ ಬಗ್ಗೆ ಭಯ, ಹೇವರಿಕೆಗಳನ್ನು ಹುಟ್ಟಿಸುತ್ತದೆಂಬ ಒಂದು ಕಲ್ಪನೆಯನ್ನು ಮಾಡಬಹುದು. ಆದರೆ ಫ್ರೆಂಚ್ ಮೂಲದ ಈ ಪದ ಆ ನುಡಿಯಲ್ಲಿ ಅಷ್ಟು ಕರ್ಕಶವಲ್ಲ; ಕಾರಣ ಅವರು 'ರ'ಕಾರವನ್ನು ನಮ್ಮಂತೆ ನಾಲಿಗೆಯಿಂದ ಉಚ್ಛರಿಸುವುದಿಲ್ಲ, ಬದಲು ಗಂಟಲಿನಿಂದ.

ಡೆಮಾಕ್ರಸಿಯೆಂಬುದು ಗ್ರೀಕ್ ಪದಗಳಾದ dêmos ಮತ್ತು kratos ದಿಂದ ಬಂದಿದೆ ಎಂದು ನಾವೆಲ್ಲ ಉರುಹೊಡೆದು ಕಲಿತಂತೆಯೇ ಬ್ಯೂರೋಕ್ರಸಿಯ ಮೂಲ ಫ್ರೆಂಚ್ ಪದ ಬ್ಯೂರೋದಿಂದ ಬಂದಿದೆ ಎಂದೂ, ಹಾಗೂ ಬ್ಯೂರೋ ಎಂದರೆ ಟೇಬಲ್ ಎಂದೂ ನಮಗೆಲ್ಲ ಗೊತ್ತು. ಟೇಬಲ್ಲಿನಿಂದ ಟೇಬಲ್ಲಿಗೆ ಫೈಲುಗಳು ಹರಿಯುತ್ತ, ಅವು ಕಡೆಗೊಮ್ಮೆ ಸ್ವೀಕಾರವಾಗಿ ಜೀವ ತಳೆಯುವುದೋ ಅಥವಾ ಮತ್ತೆ ಹಿಮ್ಮುಖವಾಗಿಯೋ, ಝಿಗ್‌ಝ್ಯಾಗ್ ಆಗಿಯೋ, ಈ ಟೇಬಲ್ಲಿನಲ್ಲಿ ಮಾಯವಾಗಿ ಇನ್ನೊಂದು ಟೇಬಲ್ಲಿನವರೆಗೆ ಗುಪ್ತಗಾಮಿನಿಯಾಗಿ ಹರಿದು ಅಲ್ಲಿ ಧುತ್ತನೆ ಪ್ರತ್ಯಕ್ಷವಾಗುವ ಪರಿಯನ್ನು ಮತ್ತದರ ಪ್ರಮೇಯ-ಪರ್ಮ್ಯುಟೇಶನ್‌ಗಳನ್ನು ಅರ್ಥೈಸುವ ಸಾಹಸವನ್ನು ಮ್ಯಾಕ್ಸ್ ವೆಬರ್, ಸ್ಟುಅರ್ಟ್ ಮಿಲ್, ಮಾರ್ಕ್ಸ್ ಥರದವರು ಮಾಡಿದ್ದಾರೆ.

ಭಾರತದ ಯಾವುದೇ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿ ವರ್ಗದ 12 ಪದರಗಳು ಇವೆ. ಅತಿ ಕೆಳಗೆ ಕ್ಲರ್ಕ್‌ನಿಂದ ಆರಂಭವಾಗಿ ಕೊನೆಗೆ ಒಬ್ಬ ಸಚಿವನವರೆಗಿನ ಈ ಏಣಿ ಏರಲು ಒಂದು ಕಡತಕ್ಕೆ 50 ದಿನಗಳು ಬೇಕೆಂದು ಕರ್ನಾಟಕದ ನಿವೃತ್ತ ಐ.ಎ.ಎಸ್ ಅಧಿಕಾರಿ ವಿವೇಕ್ ಕುಲಕರ್ಣಿ ಬರೆದಿದ್ದರು. ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ - ಒಂದು ಯೋಜನೆಗಾಗಿ ಬಿಡುಗಡೆ ಮಾಡಲಾಗುವ 100 ರೂಪಾಯಿಯಲ್ಲಿ 10 ರೂ ರೂಪಾಯಿ ಮಾತ್ರವೇ ನಿಜವಾದ ಅವಶ್ಯಕತೆಯಿರುವ, ಗುರುತಿಸಲ್ಪಟ್ಟ ಮನುಷ್ಯನನ್ನು ತಲುಪುತ್ತದೆ ಎಂದಿದ್ದರು. ಈ ವೈಚಿತ್ರ್ಯದಲ್ಲಿರುವ ಸಮಸ್ಯೆಯನ್ನು ‘ಫ್ರಿಕ್ಷನ್’ ಎಂದು ಗುರುತಿಸಲಾಯಿತು. ಅರ್ಥಾತ್ ಸೌಲಭ್ಯವನ್ನು ತಲುಪಿಸಲು ಬೇಕಾದ ಖರ್ಚುವೆಚ್ಚಗಳೇ ಸೌಲಭ್ಯದ ದೇಹವನ್ನು ತಿಂದುಹಾಕುವ ತಮಾಷೆ ಇದು. ಇದನ್ನು ‘ಕೊನೆಯ ಮೈಲಿ’ ಸಮಸ್ಯೆ (Last Mile Problem) ಎಂದು ಟೆಲಿಕಮ್ಯುನಿಕೇಶನ್ನಿನಲ್ಲಿ ಕರೆಯಲಾಗುತ್ತದೆ.

ಹಳ್ಳಿಹಳ್ಳಿಯಲ್ಲೂ ಕೋಕೊಕೋಲ ಸಿಗುವಾಗ ಶುದ್ಧ ನೀರು, ಆರೋಗ್ಯ ಸೌಲಭ್ಯಗಳನ್ನು ಅಲ್ಲಿಗೆ ತಲುಪಿಸಲಾಗದ ಸರ್ಕಾರದ ಅಸಾಮರ್ಥ್ಯವನ್ನು ಇದು ಹೇಳುತ್ತದೆ. ಈ ಕೆಲಸ ಮಾಡಲೆಂದೇ ಇರುವ 12 ಹಂತದ ಅಧಿಕಾರಿವರ್ಗವು ಒಂದು ದೊಡ್ಡ ಶತಪದಿಯಂತೆ ಜೋಭದ್ರವಾಗಿ ಕೆಲಸಮಾಡುತ್ತ, ಸೌಲಭ್ಯದ ಹಣದಲ್ಲಿ ಪೇಪರು, ಪೆನ್ನು, ಹಾಳೆ ಕೊಂಡು ಫಲಾನುಭವಿಗಳನ್ನು ಲಿಸ್ಟ್ ಮಾಡುತ್ತ ಇರುತ್ತದೆ. ಯಾರಾದರೂ ಧಿಗ್ಗನೆ ಮುಟ್ಟಿದರೆ, ಕೂಡಲೇ ಚಕ್ಕುಲಿಯಂತೆ ಮುರುಟಿ ಕುಳಿತುಕೊಂಡುಬಿಡುತ್ತದೆ.

ಕುತೂಹಲದ ವಿಷಯವೆಂದರೆ- ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಯಾವುದೇ ಮನುಷ್ಯನೊಬ್ಬ (ಯಾವುದೋ ಚಳ್ಳಕೆರೆಯ ವ್ಯಕ್ತಿ ಎಂದುಕೊಳ್ಳಿ) ಕೇವಲ ಏಳು ಹಂತಗಳಲ್ಲಿ ಅಮೆರಿಕದ ಅಧ್ಯಕ್ಷರಿಗೆ ಒಂದು ವಸ್ತುವನ್ನೋ, ಉಡುಗೊರೆಯನ್ನೋ ತಲುಪಿಸಲು ಸಾಧ್ಯ ಎನ್ನುತ್ತದೆ. (ಅಂದರೆ ನಿಮ್ಮ ಪರಿಚಯದ ಅಮೆರಿಕದ ಒಬ್ಬರಿಗೆ ಅದನ್ನು ತಲುಪಿಸಿ, ಅವರು ಅದನ್ನು ಅಧ್ಯಕ್ಷರಿಗೆ ಸಮೀಪದವರಿಗೆ ಸಮೀಪವಿರುವ ಇನ್ನೊಬ್ಬರಿಗೆ ತಲುಪಿಸುತ್ತ... ಹೀಗೆ.) ಅಂದರೆ ಈ ಬಾಟಮ್-ಅಪ್ ಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರೂ ಆ ಕ್ರಿಯೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಕೊನೆಯ ಮೈಲಿಯ ಸಮಸ್ಯೆಯು ಹೀಗೆ ಸಮುದಾಯದ, ಗ್ರಾಮಪಂಚಾಯಿತಿಯ ಜನರ ಒಳಗೊಳ್ಳುವಿಕೆಯಿಂದ- ಕೇವಲ ಜಡವಾಗಿ ಶಿಸ್ತುಬದ್ಧವಾದ ಅಧಿಕಾರಿವರ್ಗ ಸಾಧಿಸಲಾಗದ ಕೆಲಸವನ್ನು ಯಶಸ್ವಿಯಾಗಿ ಮುಗಿಸಬಹುದು ಎನ್ನುತ್ತದೆ.

18ನೇ ಶತಮಾನದಲ್ಲಿ ಫ್ರಾನ್ಸಿನಲ್ಲಿ ಬ್ಯೂರೋಕ್ರಸಿಯು ಎಷ್ಟು ಸಂಕೀರ್ಣಗೊಳ್ಳುತ್ತ ನಡೆಯಿತೆಂದರೆ ಅದನ್ನು ‘ಬ್ಯೂರೋಮೇನಿಯಾ’ ಎಂದು ಕರೆಯಲಾಯಿತು. ಇದನ್ನು ಸರಳಗೊಳಿಸಲು ನೆಪೋಲಿಯನ್ ತಂದ ‘ನೆಪೋಲಿಯನ್ ಕೋಡ್’ ಇದನ್ನು ಇನ್ನಷ್ಟು ಕ್ಲಿಷ್ಟಗೊಳಿಸಿತಷ್ಟೇ. ಇಂಗ್ಲೆಂಡಿನ ಬಹುಪ್ರಖ್ಯಾತ ಸಿಟ್-ಕಾಮ್ ಧಾರಾವಾಹಿ ‘ಎಸ್ ಮಿನಿಸ್ಟರ್’ ನಲ್ಲಿ ಮಂತ್ರಿ ಜಿಮ್ ಹ್ಯಾಕರ್, ಅವನ ಸೆಕ್ರೆಟರಿ ಹಂಫ್ರಿಗೆ - ಅನಗತ್ಯ ಅಧಿಕಾರಿಗಳನ್ನು ಕೆಲಸದಿಂದ ತೆಗೆದುಹಾಕಿ ಬ್ಯೂರೋಕ್ರಸಿಯನ್ನು Downsize ಮಾಡು ಎನ್ನುತ್ತಾನೆ. ಅದಕ್ಕೆ ಉತ್ತರವಾಗಿ ಹಂಫ್ರಿ ‘ಹಾಗೆ ಮಾಡಲು ನಾವು ಇನ್ನೊಂದಿಷ್ಟು ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ: ಯಾರನ್ನು ತೆಗೆಯಬೇಕು, ಉಳಿಸಿಕೊಳ್ಳಬೇಕು ಎಂದು ಗುರುತಿಸಲು’ ಎನ್ನುತ್ತಾನೆ! ಇತ್ತೀಚೆಗೆ ಜನರ ಸಿಟ್ಟು ಅಧಿಕಾರಿವರ್ಗಕ್ಕಿಂತ ಹೆಚ್ಚಾಗಿ ರಾಜಕಾರಣಿಗಳತ್ತ ತಿರುಗಿದೆ. ರಾಜಕಾರಣಿಗಳು ತಮ್ಮ ಸಿಟ್ಟನ್ನು ಹಿಂದೆಂದಿಗಿಂತಲೂ ತುಸುಹೆಚ್ಚೇ ಅಧಿಕಾರಿಗಳ ಮೇಲೆ ತೋರಿಸಿಕೊಳ್ಳುತ್ತಿದ್ದಾರೆ. ಕಾರ್ಯಾಂಗ-ಶಾಸಕಾಂಗಗಳು ಹೀಗೆ ಒಂದು ಸಿಟ್ಟಿನ ಸಮಾನಹಂಚಿಕೆಯ ತತ್ವದ ಮೇಲೆ ಸಂವಿಧಾನವನ್ನು ಅಣಕಮಾಡಿ ಮುಂದುವರೆದಿವೆ.

ಜಾಗತೀಕರಣದ ಹಾಗೂ ಖಾಸಗೀಕರಣದ ನಂತರ ಉದ್ಭವಿಸಿದ ಒಂದು ಮುಖ್ಯ ಪರಿಭಾಷೆಯೆಂದರೆ ‘Dynamism’ ಮತ್ತು ‘Efficiency’ (ಕಾರ್ಯಕಾರಿತ್ವ, ದಕ್ಷತೆ). ಇವೆರಡೂ ಸರ್ಕಾರೀ ವರ್ಗದಲ್ಲಿ ಇಲ್ಲವೆಂದೂ, ಕಾರ್ಪೊರೇಟ್ ಜಗತ್ತು ವೇಗವೂ ಪ್ರಾಮಾಣಿಕವೂ ಆದುದೆಂಬ ನಂಬಿಕೆ ಬೆಳೆಯಿತು. ನಿವೃತ್ತ ಅಧಿಕಾರಿ ಚಿರಂಜೀವಿ ಸಿಂಗ್ ಅವರು ತಮ್ಮ ಬರಹದಲ್ಲಿ ‘ಈ ಬಗೆಯ ಡೈನಮಿಕ್ ಅಧಿಕಾರಿಗಳು 90ರ ದಶಕದ ಬಳಿಕ ಹೆಚ್ಚಿದರು. ಅವರು ವೇಗವಾಗಿ, ಡೈನಮಿಕ್ ಆಗಿ ಮಾಡಿದ ಕೆಲಸಗಳ ಅವಶೇಷಗಳನ್ನು ಈಗಲೂ ನೋಡಬಹುದು’ ಎಂದು ತಮಾಷೆಯಾಗಿ ನುಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT