ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವತಿಯ ಸ್ವಗತಗಳು

Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘‘Enough is enough. ಇನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ. ನಾನೀಗ ಮಾತನಾಡಲೇಬೇಕಾಗಿದೆ. ತಲತಲಾಂತರದಿಂದ ಘಾಸಿಗೊಳ್ಳುತ್ತಲೇ ಬಂದ ನಮ್ಮ ಯೋನಿಯ ಬಗ್ಗೆ ಮಾತನಾಡಬೇಕಾಗಿದೆ. ನಿರಂತರವಾಗಿ ಸಾಂಸ್ಕೃತಿಕ ವಿದ್ರೋಹಕ್ಕೆ ಬಲಿಯಾಗುತ್ತಾ ಬಂದಿರುವ ಆ ಪುಟ್ಟ ಗುಲಾಬಿಯ ಗೂಡಿನ ಬಗ್ಗೆ ಮಾತನಾಡಬೇಕಿದೆ. ತೊಡೆಗಳ ಸಂಧಿಯ ಕೆಳಗೆ ರಹಸ್ಯವಾಗಿ ಪಿಸುಗುಡುತ್ತಿರುವ ಆ ನಮ್ಮ ಆತ್ಮ ಪ್ರತ್ಯಯದ ಬಗ್ಗೆ ಮಾತನಾಡಬೇಕಾಗಿದೆ.’’

ದುಃಖದ ಆಳದಿಂದ ಬಂದ ಈ ಮಾತುಗಳು, The Vagina monologues ಎಂಬ ಕೃತಿಯ ಲೇಖಕಿ ಈವ್ ಎನ್‌ಸ್ಲರ್‌ಳದು. ಈ ಕೃತಿ, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ, ಅಂತರರಾಷ್ಟ್ರೀಯ ನೆಲೆಯಲ್ಲಿ ಹುಟ್ಟುಹಾಕಿದ ನೆಲಮೂಲ ಚಳವಳಿಗಳಿಗೆ ಕಾರಣವಾಗಿದೆ. ಹತ್ತು ವರ್ಷಗಳಿಂದ ಸತತವಾಗಿ ಜಗತ್ತಿನಾದ್ಯಂತ ನಾಟಕ ರೂಪದಲ್ಲಿ ಪ್ರದರ್ಶನಗೊಳ್ಳುತ್ತಿರುವ ಇದು ಹೊಸ ಅರಿವನ್ನು ಮೂಡಿಸಲು ಕಾರಣವಾಗಿದೆ. ಇದಕ್ಕೆ ಎಲ್ಲೆಡೆ ಸಾಂಸ್ಕೃತಿಕ ಮಹತ್ವ ದೊರೆತಿದೆ. ಮುಂಬಯಿಯಲ್ಲಿ ಕೂಡ ಈ ನಾಟಕದ ಪ್ರದರ್ಶನವಿತ್ತು.

ಅದರ ಹೆಸರನ್ನು ನೋಡಿಯೇ ಗಾಬರಿಗೊಂಡಿದ್ದ ನಾನು ಅದನ್ನು ನೋಡಲು ಹೋಗಲಿಲ್ಲ. ಈಗ ಈ ಕೃತಿ ನನ್ನ ಕೈಗೆ ಬಂದಿರುವಾಗ ಇದರ ಬಗ್ಗೆ ಬರೆಯುವ ಧೈರ್ಯವನ್ನು ತೋರಿಸುತ್ತಿದ್ದೇನೆ. ಇದು ನನ್ನ ಪ್ರಜ್ಞೆಯನ್ನು ವಿಸ್ತೃತಗೊಳಿಸಿದೆ. ಅರಿವನ್ನು ಹರಿತಗೊಳಿಸಿದೆ.
ಈವ್ ಎನ್‌ಸ್ಲರ್, ಅಮೆರಿಕದ ಖ್ಯಾತ ನಾಟಕಕಾರ್ತಿ, ದಿಗ್ದರ್ಶಕಿ, ಚಳವಳಿಯ ನೇತಾರೆ. The Vagina monologues ಜೊತೆಗೆ, In the Body of the world, The secret Life of Girls around the world ಮುಂತಾದ ಹಲವಾರು ಕೃತಿಗಳ ಲೇಖಕಿ.

ಬಾಲ್ಯದಲ್ಲಿ ತನ್ನ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ, ಅನೇಕ ವರ್ಷಗಳ ಕಾಲ, ತನ್ನನ್ನು ತನ್ನ ದೇಹದಿಂದ ಪ್ರತ್ಯೇಕಿಸಿಕೊಂಡು ಒಂದು ರೀತಿ ಮರವಟ್ಟು ಬದುಕಿದವಳು. ‘ನಾನು ನನ್ನ ದೇಹದೊಳಗಾಗಲೀ, ಈ ಭೂಮಿಯ ಮೇಲಾಗಲೀ ಬದುಕುತ್ತಿರಲಿಲ್ಲ. ಅವುಗಳ ಉರವಣೆಗಳು ಏನೆಂಬುದರ ಅನುಭವ ಆಗಿರಲಿಲ್ಲ’ ಎನ್ನುತ್ತಾಳೆ. ಕಾಂಗೋ ನಗರದಲ್ಲಿ ಅತ್ಯಾಚಾರಕ್ಕೆ ಒಳಗಾದ ಅನೇಕ ಮಹಿಳೆಯರನ್ನು ನೋಡಿದ ಮೇಲೆ, ಅದರಿಂದ ಆಘಾತಗೊಂಡ ಅವಳಿಗೆ ತನ್ನ ದೇಹದ ಪರಿವೆ ಉಂಟಾಗುತ್ತದೆ.

ಸಾವಿರಾರು ನಿರಾಶ್ರಿತ ಹಾಗೂ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗಾಗಿ ತನ್ನ ಬದುಕನ್ನು ಮುಡಿಪಾಗಿರಿಸುತ್ತಾಳೆ. ಕಾಂಗೋ ನಗರವನ್ನು ‘ರೇಪ್ ಸಿಟಿ’ಯೆಂದು ಕರೆಯುತ್ತಾಳೆ. ಆ ಸಿಟಿ ಅವಳ ದೇಹದ ಹೊರಗಿಲ್ಲ, ಬದಲಾಗಿ ಅದರೊಳಗೇ ಇದೆ. ಹಾಗೆಯೇ ‘ಕ್ಯಾನ್ಸರ್ ಟೌನ್’, ‘ಸಿಟಿ ಆಫ್ ಜಾಯ್’ ಎಂಬ ಅನೇಕ ನಗರಗಳೂ ಅವಳ ದೇಹದೊಳಗೇ ಇವೆ. ಮನುಷ್ಯ ಭೂಮಿಯ ಮೇಲೆ ನಿರಂತರವಾಗಿ ಎಸಗುತ್ತಿರುವ ಅತ್ಯಾಚಾರಗಳನ್ನು ಅವಳು ತನ್ನ/ ಹೆಣ್ಣಿನ ದೇಹದ ಮೇಲೆ ಆಗುತ್ತಿರುವ ಅತ್ಯಾಚಾರಗಳಿಗೆ ಸಮೀಕರಿಸುತ್ತಾಳೆ. ದೇಹ, ವ್ಯಕ್ತಿತ್ವ ಮತ್ತು ಪ್ರಪಂಚದ ನಡುವಿರುವ ಅಂತರ್ ಸಂಬಂಧಗಳನ್ನು ಕುರಿತು In the Body of the world ಕೃತಿಯಲ್ಲಿ ಚರ್ಚಿಸುತ್ತಾಳೆ.

ತನ್ನ ಬಿರುಸಿನ ಚಟುವಟಿಕೆಗಳ ನಡುವೆ ಈವ್‌ ಗರ್ಭಕೋಶದ ಕ್ಯಾನ್ಸರಿಗೆ ಗುರಿಯಾಗುತ್ತಾಳೆ. ಚುಚ್ಚಿ, ಕೊರೆದು, ಕತ್ತರಿಸಿ, ಹೊಲೆಯುವ ಯಮಯಾತನೆಗೆ ಒಳಗಾದಾಗ ಅವಳಿಗೆ ತನ್ನ ದೇಹದ ಬಗೆಗೆ ಹೊಸ ಅರಿವು ಉಂಟಾಗುತ್ತದೆ. ಆಸ್ಪತ್ರೆಯಲ್ಲಿ ಮಲಗಿದ್ದ ಅವಳನ್ನು ನೋಡಲು ಬಂದ ಮನೋವೈಜ್ಞಾನಿಕ ಸಲಹೆಗಾರ, ‘ನೀನು ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಜೊತೆಯಲ್ಲೇ ಸದಾ ಕಳೆಯುತ್ತಿದ್ದುದರಿಂದ, ಅದು ನಿನ್ನ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರಿ, ಪ್ರಜ್ಞೆಯ ಭಾಗವಾಗಿ, ಗರ್ಭಕೋಶದ ಕ್ಯಾನ್ಸರಿಗೆ ಕಾರಣವಾಗಿದೆ’ ಎನ್ನುತ್ತಾನೆ.

ಉಲ್ಬಣಗೊಂಡ ತನ್ನ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಿ ಗೆದ್ದು ಬಂದ ಅವಳ  ಆತ್ಮಚರಿತ್ರೆಯೇ In the Body of the world. ಇಂತಹ ಕೃತಿಗಳು ಕನ್ನಡದಲ್ಲೂ ಬಂದಿವೆ. ಬಿ.ವಿ. ಭಾರತಿಯವರ ‘ಸಾಸಿವೆ ತಂದವಳು’ ಕೂಡ ಅಂತಹ ಒಂದು ಕೃತಿ. ಆದರೆ The Vagina Monologues ರೀತಿಯ, ಮಹಿಳೆಯ ಖಾಸಗಿ ಲೋಕದ ಬಗ್ಗೆ ಇಷ್ಟು ಧಾರ್ಷ್ಟ್ಯದಿಂದ ಮಾತನಾಡುವ ಕೃತಿಗಳು ಕನ್ನಡಕ್ಕೆ ಇನ್ನೂ ಬಂದಿಲ್ಲ.

ದುಗುಡಗಳ ಸಾಲುದೀಪ
ನಿರಾಶ್ರಿತ ಹೆಣ್ಣು ಮಕ್ಕಳು, ವೇಶ್ಯೆಯರು, ಅತ್ಯಾಚಾರಕ್ಕೆ ಬಲಿಯಾದವರು, ಮಾದಕ ದ್ರವ್ಯ ವ್ಯಸನಿಗಳು, ಏಡ್ಸ್ ರೋಗಿಗಳು, ಲೆಸ್ಬಿಯನ್‌ಗಳು, ಕುಟುಂಬದವರಿಂದಲೇ ಅತ್ಯಾಚಾರಕ್ಕೆ ಒಳಗಾದವರು– ಈ ಎಲ್ಲರ ಕುರಿತು ಈವ್‌ ಮಾಹಿತಿ ಸಂಗ್ರಹಿಸಿದ್ದಾಳೆ. ಅವರೆಲ್ಲಾ ಲೇಖಕಿಯೊಡನೆ ಹಂಚಿಕೊಂಡ, ಅವರ ಖಾಸಗಿ ಬದುಕಿನ, ದೇಹ ದೌರ್ಜನ್ಯಗಳ ಅಳಲಿನ ಕಥೆಯೇ The Vagina Monologues. ‘ಹೇಳಿಕೊಳ್ಳುವ ತೀವ್ರತೆಯಲ್ಲಿ ಹೆಣ್ಣುಮಕ್ಕಳು ತಮ್ಮ ಅಂಗಾಂಗಗಳ ಬಗೆಗಿನ ಗುಹ್ಯಲೋಕವನ್ನು ಬಯಲು ಮಾಡಿದ್ದು, ಮಹಿಳೆಯರ ದೌರ್ಜನ್ಯದ ವಿರುದ್ಧ ಜಾಗತಿಕ ನೆಲೆಯಲ್ಲಿ ಚಳವಳಿಯನ್ನು ಹೂಡಲು ಸಾಧ್ಯವಾಯಿತು’ ಎನ್ನುತ್ತಾಳೆ ಈವ್.

ಆ ಚಳವಳಿಯನ್ನೇ ‘V Day’ ಎಂದು ಕರೆಯಲಾಗುತ್ತದೆ. ‘ಕಿರುಸಭಾಗೃಹವೊಂದರಲ್ಲಿ ಮೊತ್ತಮೊದಲ ಬಾರಿಗೆ, ತಲ್ಲಣಗೊಳಿಸುವ ಅವಾಚ್ಯ ಶಬ್ದ Vagina ನನ್ನ ಬಾಯಿಂದ ಹೊರಬಂದಿತು. ಅದು ನನಗೇ ವಿಸ್ಮಯವನ್ನು ತಂದಿತು. ಯಾವ ಶಬ್ದವನ್ನು ನಾನು ಉಚ್ಚರಿಸಲೇಬಾರದಿತ್ತೋ ಅಂತಹ ಶಬ್ದವೇ ನನಗೆ ಧ್ವನಿಯನ್ನೂ ಕೊಟ್ಟಿತು. ಅದನ್ನು ನಾವೆಲ್ಲಾ ಮತ್ತೆ ಮತ್ತೆ ಉಚ್ಚರಿಸಿದೆವು. ಕಂಫರ್ಟ್‌ ವುಮನ್‌ ಎಂದೇ ಕರೆಯಲಾಗುವ, ಯುದ್ಧ ಭೂಮಿಯ ಸೈನಿಕರಿಗೆ ದೇಹಸೇವೆಯನ್ನು ಒದಗಿಸಿದ್ದ 70-90 ವರ್ಷ ವಯೋಮಾನದ, 30 ವೃದ್ಧ ಮಹಿಳೆಯರ ಗುಂಪೊಂದು, ತಮ್ಮ ಜನ್ಮದಲ್ಲೇ ಎಂದೂ ಉಚ್ಛರಿಸದ pook-ee (ಯೋನಿ) ಶಬ್ದವನ್ನು ಕೈಗಳನ್ನು ಮೇಲೆತ್ತಿ, ಎತ್ತರದ ಧ್ವನಿಯಿಂದ ಕೂಗುತ್ತಾ ಜಯಘೋಷ ಮಾಡಿದರು.

ಸಾಂಪ್ರದಾಯಕ ದೇಶವಾದ ಪಾಕಿಸ್ತಾನದ ಮಹಿಳೆಯರಂತೂ, ತಮ್ಮ ಆಫ್ಘಾನಿಸ್ತಾನದ ಸೋದರಿಯರಿಗಾಗಿ ಕೆಂಪು ಉಡುಗೆಗಳಲ್ಲಿ ಬಂದು ನಾಟಕವನ್ನು ಪ್ರದರ್ಶಿಸಿದರು’ ಎಂದು ಈವ್‌ ನೆನಪಿಸಿಕೊಂಡಿದ್ದಾಳೆ. ‘V Day’  ಚಳವಳಿಯ ರೂಪವಾದರೆ, The Vagina Monologues ಅದರ ಕಲಾ ರೂಪ, ನಾಟಕ. ಈವ್‌ಳ ಪ್ರಕಾರ ಚಳವಳಿ ಮತ್ತು ಕಲೆ ಪರಸ್ಪರ ಪೂರಕವಾದವುಗಳು. ಕಲೆಯು ಚಳವಳಿಯನ್ನು ಹೆಚ್ಚು ಸೃಜನಶೀಲಗೊಳಿಸಿ, ಅದಕ್ಕೆ ಒತ್ತಾಸೆಯನ್ನು ಕೊಟ್ಟರೆ, ಚಳವಳಿಯು ಕಲೆಯ ಆಶಯಗಳನ್ನು ವಾಸ್ತವದ ನೆಲೆಯ ಮೇಲೆ ಹೆಚ್ಚು ಕೇಂದ್ರೀಕರಿಸುವಂತೆ ಮಾಡುತ್ತದೆ.

ಚಳವಳಿಯಲ್ಲಿ ಪಾಲುಗೊಂಡ ಮಹಿಳೆಯರೆಲ್ಲಾ ತಮ್ಮ ದೇಹದ ಮೇಲಿನ ಹಕ್ಕನ್ನು ಮತ್ತೆ ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವುದರೊಂದಿಗೆ, ತಮ್ಮ ಆಸೆ, ಕನಸುಗಳನ್ನು, ಸಾಧನೆ, ಅಪಮಾನ, ನಾಚಿಕೆಗಳನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವುದರ ಮೂಲಕ ತಮ್ಮ ಶಕ್ತಿ ಸಾಧ್ಯತೆಗಳನ್ನು ಅರಿತುಕೊಂಡರು. ತಮ್ಮದೇ ಆದ ಧ್ವನಿಯನ್ನು ಮೊಳಗಿಸುವುದರೊಂದಿಗೆ ‘V Day’  ಚಳವಳಿಯನ್ನು ಬಲಗೊಳಿಸಿದರು. ಈ ಚಳವಳಿಯ ಭಾಗವೇ ಆದ The Vagina Monologues ನಾಟಕ, 45 ಭಾಷೆಗಳಲ್ಲಿ 119 ರಾಷ್ಟ್ರಗಳಲ್ಲಿ ಪ್ರದರ್ಶನ ಕಂಡಿದೆ.

ಇಷ್ಟೆಲ್ಲಾ ನಡೆದ ಮೇಲೂ ಉತ್ತರ ಅmeರಿಕ, ಯೂರೋಪ್ ದೇಶಗಳಲ್ಲಿ ಕಾಲೇಜುಗಳಲ್ಲಿ, ಕುಟುಂಬಗಳಲ್ಲಿ ಮಹಿಳೆಯರು ಅತ್ಯಾಚಾರ, ಲೈಂಗಿಕ ಹಿಂಸೆಗೆ ಒಳಗಾಗುತ್ತಿದ್ದಾರೆ. ವೇಶ್ಯಾವಾಟಿಕೆಗಳಿಗೆ ಮಾರಾಟವಾಗುತ್ತಿದ್ದಾರೆ. ಆಫ್ಘಾನಿಸ್ತಾನದಲ್ಲಂತೂ ಯುದ್ಧ ಪಿಪಾಸುಗಳು, ಅತ್ಯಾಚಾರಿಗಳು, ಕೊಲೆಗಡುಕರೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಈಜಿಪ್ಟ್ ಅಲ್ಲದೇ ಇಡೀ ಆಫ್ರಿಕಾ ಖಂಡದಲ್ಲಿ ಈಗಲೂ ಮಹಿಳೆಯರು ತಮ್ಮ ಭಗಾಂಕುರಕ್ಕೆ ಕತ್ತರಿ ಪ್ರಯೋಗವಾಗುವ ಭಯದಲ್ಲಿ ನರಳುತ್ತಿದ್ದಾರೆ ಎನ್ನುತ್ತಾಳೆ.

ಈವ್ ಹೇಳುತ್ತಾಳೆ, ‘ನಾವು ಬೇಲಿಗಳನ್ನು ಮುರಿದಿದ್ದೇವೆ, ಗೋಡೆಗಳನ್ನು ಕೆಡವಿದ್ದೇವೆ. ಈ ನೆಲದ ನಿರ್ವಚನಗಳನ್ನೇ ಬದಲಾಯಿಸುತ್ತಿದ್ದೇವೆ. ನಮ್ಮ ಕತೆಗಳನ್ನು, ನಮ್ಮ ಧ್ವನಿಗಳನ್ನು ನಾವು ಮತ್ತೆ ಪಡೆದುಕೊಳ್ಳುತ್ತಿದ್ದೇವೆ. ಆದರೂ ಅತ್ಯಾಚಾರಕ್ಕೆ ಕಾರಣವಾಗುವ ಸಾಂಸ್ಕೃತಿಕ ಹುನ್ನಾರಗಳನ್ನು ಅರಿಯುವಲ್ಲಿ ನಾವು ಇನ್ನೂ ಸಫಲರಾಗಿಲ್ಲ’.

ಸುಭಗ ಸ್ವಗತಗಳು
‘ಕೈ ತೆಗಿ ಅಲ್ಲಿಂದ...’ – ಅಮ್ಮ ತನ್ನ ಎತ್ತರದ ಧ್ವನಿಯಲ್ಲಿ, ಏನೋ ಅನಾಹುತ ಆಗಿ ಹೋದಂತೆ ಕಿರುಚಿದಳು. ನಾನು ಭಯದಿಂದ ತತ್ತರಿಸಿ ಹೋಗಿದ್ದೆ.. ನಾನು ಮಾಡಿದ ತಪ್ಪೆಂದರೆ ನನ್ನ ತೊಡೆಸಂದುಗಳಲ್ಲಿ ಕೆರೆದುಕೊಂಡದ್ದು. ಅಂದಿನಿಂದ ನಾನು ಅದನ್ನು ಸ್ನಾನಮಾಡುವಾಗಲೂ ಮುಟ್ಟುವ ಧೈರ್ಯಮಾಡಲಿಲ್ಲ. ಒಂಬತ್ತು ವರ್ಷದ ಅವಳು ಒಮ್ಮೆ ಹಾಸಿಗೆಯಲ್ಲಿ ಮಲಗಿ ಅದರ ಸ್ಪರ್ಶದಿಂದ ಖುಶಿ ಪಡುತ್ತಿರುವಾಗ, ಅದನ್ನು ಕಂಡ ಹಿರಿಯರು ಮಾರನೆಯ ದಿನವೇ ಅವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವಳ ಯೋನಿಯ ಬಾಯಿಯನ್ನು ಹೊಲೆಸುತ್ತಾರೆ.

ಈವ್ ನಡೆಸುತ್ತಿರುವ ನಿರಾಶ್ರಿತ ಆಶ್ರಮದಲ್ಲಿ ಒಬ್ಬ ಹೆಣ್ಣು ಮಗಳು ಹೇಳಿಕೊಳ್ಳುವ ಕಥೆ ಇದು. ಹತ್ತನೇ ವಯಸ್ಸಿನಲ್ಲಿಯೇ ತಂದೆಯ ಒಬ್ಬ ಸ್ನೇಹಿತನ ಅತ್ಯಾಚಾರಕ್ಕೆ ಅವಳು ಬಲಿಯಾಗುತ್ತಾಳೆ. ಅದೇ ಹುಡುಗಿ ಹದಿಮೂರು ವರ್ಷದವಳಾದಾಗ ನನ್ನ ಯೋನಿಯೆಂದರೆ ಬಹಳ ಅಸಹ್ಯವಾದ ಒಂದು ಗೂಡು.. ನೋವು, ಕೀವು, ರಕ್ತ ಮಾಂಸಗಳ ದುರ್ವಾವಾಸನೆಯ ತವರು, ಸದಾ ಆಕ್ರಮಣ, ಹೊಡೆತ, ಅಪಘಾತಕ್ಕೆ ಈ ಪಕ್ಕಾದ ಈ ಗೂಡು... ಅದೊಂದು ಅಪಶಕುನದ ಊಟೆ ಎನ್ನುತ್ತಾಳೆ.

‘ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರು ಸಾಮಾನ್ಯವಾಗಿ ಮಾದಕ ಔಷಧಿಗಳ ನಶೆಗೆ ಬಲಿಯಾಗುತ್ತಾರೆ, ಅಥವಾ ವೇಶ್ಯಾವಾಟಿಕೆಯ ಕಟ್ಟೆ ಹತ್ತುತ್ತಾರೆ, ಇಲ್ಲದಿದ್ದರೆ ಏಡ್ಸ್ ಎಂಬ ಮಹಾಮಾರಿಗೆ ತುತ್ತಾಗುತ್ತಾರೆ. ಆದರೆ ಈ ಹುಡುಗಿಯ ಕತೆ ಅಂತಹ ಭಯಂಕರವಾದುದೇನಲ್ಲ. ಅವಳು ಮುಂದೆ ಅವಳಂತೆಯೇ ಕಂಗಾಲಾಗಿ ಬಂದ ಮಹಿಳೆಯೊಬ್ಬಳ ಜೊತೆ ಸ್ನೇಹ ಬೆಳೆಸಿದಳು. ಕೊನೆಗೆ ಅವರಿಬ್ಬರೂ ಆರ್ಥಿಕವಾಗಿ ಸಬಲರಾಗಿ ಜೊತೆಯಾಗಿ ಬದುಕಲು ಪ್ರಾರಂಭಿಸಿದರು’ ಎಂದು ಈವ್ ಹೇಳುತ್ತಾಳೆ.

ಬಹಳ ಹಿಂದೆ, ಒಂದು- ಒಂದೂವರೆ ವರುಷದ ಹೆಣ್ಣು ಮಗುವೊಂದು ಬತ್ತಲೆ ಓಡಾಡುತ್ತಿದ್ದಾಗ ‘ಥೂ, ಅಸಹ್ಯ.. ಚಡ್ಡಿ ಹಾಕು,.. ಹೆಣ್ಣು ಮಗು ಬೇರೆ’ ಎಂದು ಅಜ್ಜಿ ಹೇಳುತ್ತಿದ್ದ ಒಂದು ಮಾತು ನೆನಪಾಗುತ್ತದೆ. ಅದೇ ಮನೆಯಲ್ಲಿ ಐದಾರು ವರ್ಷವಾದರೂ ಚಡ್ಡಿಯಿಲ್ಲದೇ ತಿರುಗುತ್ತಿದ್ದ ಒಂದು ಗಂಡು ಮಗುವಿನ ನೆನಪೂ ಆಗುತ್ತದೆ.

ಜಾನಪದ ಸಾಹಿತ್ಯದಲ್ಲಿ ಒಬ್ಬ ತಾಯಿ ತನ್ನ ಮಗ ಎರೆಯಂಗನಿಗೆ ಹಾಲೂಡಿಸುವಾಗ ‘ಕೆರೆಯಂ ಕಟ್ಟಿಸು.. ಬಾವಿಯಂ ತೋಡಿಸು...’ ಎಂದು ಹೇಳುವಂತೆ, ಹೆಣ್ಣು ಮಗುವಿಗೆ ಅದು ತೊಟ್ಟಿಲಿನಲ್ಲಿರುವಾಗಲೇ ‘ಅದನ್ನು ಮುಚ್ಚಿಕೊಳ್ಳಬೇಕು, ರಕ್ಷಿಸಿಕೊಳ್ಳಬೇಕು, ಅದೆಂದರೆ ಅಸಹ್ಯ, ಅದನ್ನು ಮುಟ್ಟಬಾರದು, ಅದರ ಬಗ್ಗೆ ಮಾತನಾಡಬಾರದು’ ಎಂಬುದನ್ನು ಕೇವಲ ರಕ್ತಗತವಲ್ಲ, ಮನೋಗತ ಮಾಡಿಸಲಾಗುತ್ತದೆ.

ಯೋನಿಯೆಂದರೆ ಅಪಮಾನ, ಹಿಂಸೆ, ನಾಚಿಕೆ ಮುಂತಾದ ಕೀಳರಿಮೆಯ ಪಾಠಗಳನ್ನು ಕಲಿಸುವ ಸಂಸ್ಕೃತಿಯಲ್ಲಿ ಮಗು ಬೆಳೆದು ದೊಡ್ಡವಳಾಗುತ್ತಾಳೆ. ಹೆಣ್ಣು ಹೀಗೆ ಅದರ ಬಗ್ಗೆ ನಾಚಿಕೆ, ಅಪಮಾನ, ತಿರಸ್ಕಾರ, ದ್ವೇಷಗಳನ್ನು ಬೆಳೆಸಿಕೊಳ್ಳುವುದು, ಹೆಣ್ಣನ್ನು ನಿಯಂತ್ರಿಸುವ ಪಿತೃಪ್ರಧಾನ ವ್ಯವಸ್ಥೆಯ ಒಂದು ಉಪಾಯವೇ ಆಗಿದೆ.

ಆತ್ಮಕೇಂದ್ರದ ದರ್ಶನ
ಎಷ್ಟೋ ಹೆಣ್ಣು ಮಕ್ಕಳು ಅದನ್ನು ಸರಿಯಾಗಿ ನೋಡದೆಯೇ, ಅದರ ಬಗ್ಗೆ ಅರಿವಿಲ್ಲದೆಯೇ, ಮದುವೆಯಾಗಿ ಮಕ್ಕಳನ್ನು ಹೆತ್ತು ಮುದುಕಿಯರಾಗಿರುತ್ತಾರೆ. ಈವ್ ಎನ್‌ಸ್ಲರ್, ನಡೆಸುವ ತನ್ನ ಕಮ್ಮಟಗಳಲ್ಲಿ (Vagina Workshop) ಅಭ್ಯರ್ಥಿಗಳಿಗೆ ತರಬೇತು ನೀಡುವುದು ತಮ್ಮ ‘ಸ್ವ’ದ ಬಗ್ಗೆ ಅರಿವನ್ನು ಬೆಳೆಸಿಕೊಳ್ಳುವುದರ ಕುರಿತು. ಯೋನಿಯ ಬಣ್ಣ, ಆಕೃತಿ, ರಚನೆ, ವೈಜ್ಞಾನಿಕ ಸತ್ಯ, ಅದರ ಕಾರ್ಯ ಸ್ವರೂಪ, ಸುಖದ ತುರೀಯ ಸ್ಥಿತಿ ಮುಂತಾದವುಗಳ ಬಗೆಗೆ ಚರ್ಚೆ ನಡೆಯುವುದು, ಪ್ರಾಯೋಗಿಕ ನೆಲೆಯ ಆಧಾರದ ಮೇಲೆಯೇ. ಅದನ್ನು ನೋಡಿಕೊಳ್ಳುವ ಕಲೆಯ ಮೂಲಕವೇ.

ಹಾಗೆ ನೋಡಿದರೆ ಒಬ್ಬ ಹೆಣ್ಣು ತನ್ನ ‘ಸ್ವ’ವನ್ನು ಗಂಡಸಿನ ಹಾಗೆ ನೋಡಿಕೊಳ್ಳುವುದು ಸುಲಭವಲ್ಲ. ಗಂಡಸಿಗಾದರೆ ಕನ್ನಡಿಯ ಮುಂದೆ ಬತ್ತಲೆ ನಿಂತರೆ ಸಾಕು ಎಲ್ಲವೂ ಬಟಾಬಯಲಾಗುತ್ತದೆ. ಹೆಣ್ಣಿಗೆ ಹಾಗಲ್ಲ. ಅದರ ಪೂರ್ಣ ಅನಾವರಣವಾಗಬೇಕಾದರೆ ಕೈಗನ್ನಡಿಯಿಂದ ಹಿಂಬದಿಯಿಂದ ನೋಡಿಕೊಳ್ಳುವ ಸರ್ಕಸ್ ಮಾಡಬೇಕು. ಆದ್ದರಿಂದಲೇ ಈವ್‌ನ ಶಿಬಿರದ ಅಭ್ಯರ್ಥಿಗಳು ಪರಸ್ಪರ ಒಬ್ಬರದ್ದನ್ನು ಇನ್ನೊಬ್ಬರು ನೋಡಿಕೊಳ್ಳುವುದರ ಮೂಲಕವೇ ತಮ್ಮ ಆತ್ಮಕೇಂದ್ರದ ಬಗೆಗೆ ಅರಿತುಕೊಳ್ಳುತ್ತಾರೆ. ಆಗ ಅರಿವಿನ ಸ್ಫೋಟವಾಗುತ್ತದೆ. ಆಗ ಅದರ ಬಗ್ಗೆ ಆವರೆಗಿನ ತಮ್ಮ ನೇತ್ಯಾತ್ಮಕ ಕವಚಗಳನ್ನು ಕಳಚಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕೊಂದು ಇತ್ಯಾತ್ಮಕ ನೆಲೆ ಪ್ರಾಪ್ತವಾಗುತ್ತದೆ. ಅದರ ಗುಹ್ಯ ಸ್ವರೂಪ, ಅನೂಹ್ಯ ಆಳ, ಆದಿಮ ಅಜ್ಞಾತ ನೆನಪುಗಳ ಪ್ರತೀಕವೇ ಆಗಿದೆ.

ಹೀಗೆ ಪರಸ್ಪರ ನೋಡಿಕೊಳ್ಳುವ ಮತ್ತು ಅರಿವನ್ನು ವಿಸ್ತೃತಗೊಳಿಸುವ ಕ್ರಿಯೆ, ಕೇವಲ ಹೆಣ್ಣುಗಳ ಮಧ್ಯೆಯೇ ನಡೆಯಬೇಕಾಗಿಲ್ಲ. ಒಳಗಣ್ಣನ್ನು ತೆರೆಯುವ ಶಕ್ತಿ ಗಂಡಿಗೆ ಕೂಡ ಇದೆ. ಗಂಡು–ಹೆಣ್ಣಿನ ನಡುವೆ ಒಂದು ರೋಚಕ ಸಾಮರಸ್ಯವೂ ಸಾಧ್ಯ. ಅದು ಪರಸ್ಪರ ಅರಿವಿನ ಸ್ಫೋಟಕ್ಕೆ ಕಾರಣವಾಗುವ ಸಂಗತಿಯನ್ನು, ಯೋನಿಯ ಮೂಲಕ ಆಗುವ ಸಾಕ್ಷಾತ್ಕಾರವನ್ನು, ಆನಂದದ ಸ್ವರೂಪವನ್ನು ಕೆಳಗಿನ ಸಾಲುಗಳು (ಇದು ನಮ್ಮ ಸಂಸ್ಕೃತಿಗೆ ಹೊಸದಲ್ಲವಾದರೂ) ಕಟ್ಟಿಕೊಡುತ್ತವೆ–

‘‘ಯಾವುದೋ ಒಂದು ಭೂಪಟದಲ್ಲಿ ಚಂದ್ರನನ್ನು ವೀಕ್ಷಿಸುವ ಹಾಗೆ ಅವನು ಒಂದು ತಾಸಿನವರೆಗೆ ನನ್ನನ್ನೇ ನೋಡುತ್ತಾ ನನ್ನ ಕಣ್ಣೊಳಗೆ ಕಣ್ಣಿಟ್ಟು ಕುಳಿತುಬಿಟ್ಟ. ಆದರೆ ಅವನು ನೋಡುತ್ತಿದ್ದುದು ನನ್ನ ಗುಲಾಬಿ ಗೂಡನ್ನು. ಆ ಬೆಳಕಿನಲ್ಲಿ, ರೆಪ್ಪೆ ಮಿಟುಕಿಸದೆ ನನ್ನ ‘ಸ್ವ’ವನ್ನು ಕಾಣುತ್ತಾ ಕುಳಿತಿದ್ದ ಅವನನ್ನು ನೋಡಿದೆ. ಅವನು ನಿಜವಾಗಿಯೂ ಉದ್ದೀಪನಗೊಂಡಿದ್ದ. ಎಷ್ಟು ಶಾಂತವಾಗಿದ್ದ! ಯಾವುದೋ ಕನಸಿನ ಲೋಕದಲ್ಲಿದ್ದಂತೆ ಕಂಡ. ನಾನು ದ್ರವಿಸತೊಡಗಿದೆ. ಉದ್ವಿಗ್ನಳಾದೆ. ಅವನು ನೋಡಿದ ರೀತಿಯಲ್ಲೇ ನಾನು ನನ್ನನ್ನು ನೋಡಿಕೊಳ್ಳತೊಡಗಿದೆ.

ಯಾವುದೋ ಒಂದು ಶ್ರೇಷ್ಠ ಚಿತ್ರದ ಮುಂದೆಯೋ, ಜಲಪಾತದ ಮುಂದೆಯೋ ನಿಂತಂತಹ ಸೌಂದರ್ಯಾನುಭೂತಿ ನನ್ನೊಳಗೆಲ್ಲಾ ಉಂಟಾಯಿತು. ಬಾಬ್ ಸ್ವಲ್ಪವೂ ವಿಚಲಿತನಾಗದೇ, ಜೀವಂತಿಕೆಯೇ ಮೂರ್ತಿವೆತ್ತಂತಿದ್ದ. ನನ್ನೊಳಗೆಲ್ಲ ಏನೋ ಉಕ್ಕಿಬಂದಂತಾಯಿತು. ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸಿತು. ನನ್ನ ಆ ಟ್ಯೂಲಿಪ್ ಹೂವನ್ನು ಪ್ರೀತಿಸತೊಡಗಿದೆ. ಬಾಬ್ ಅದರೊಳಗೆ ಕಳೆದುಹೋದ. ನಾನು ಅವನನ್ನು ಸೇರಿಕೊಂಡೆ. ನಾವಿಬ್ಬರೂ ಆ ಟ್ಯೂಲಿಪ್ ಹೂವಿನೊಳಗೆ ಮರೆಯಾಗಿಬಿಟ್ಟೆವು’’.

ಬಾಬ್ ಎನ್ನುವ ಆ ಯುವಕ ಅವಳ ಯೋನಿಯನ್ನೇ ವೀಕ್ಷಿಸುತ್ತಾ, ಧ್ಯಾನಸ್ಥ ನೆಲೆಯಲ್ಲಿ ಕುಳಿತು ಬಿಡುವುದು, ನಮ್ಮ ಯೋನಿ ಪೂಜೆಯ ಹಲವಾರು ವಿಧಾನಗಳಲ್ಲಿ (ಸ್ತೋತ್ರ, ತಂತ್ರ, ಧ್ಯಾನ) ಒಂದು. ಇಂತಹ ತಿಳಿವಿನ ಬಗ್ಗೆ ಇರುವ ಅಜ್ಞಾನವೇ, ಅದರಿಂದ ಉಂಟಾಗುವ ಅತೃಪ್ತಿಯೇ, ಸಾಮಾಜಿಕ ವಿಷಫಲಗಳನ್ನು ಬಿತ್ತಲು ಕಾರಣವಾಗಿದೆ.

ರಾಮಕೃಷ್ಣ ಪರಮಹಂಸರು ಒಮ್ಮೆ ‘ಕೃಷ್ಣ ತಲೆಯಲ್ಲಿ ನವಿಲುಗರಿ ಮುಡಿದಿದ್ದಾನಲ್ಲಾ; ಆ ನವಿಲುಗರಿಯಲ್ಲಿರುವ ಚಿಹ್ನೆ ಯಾವುದು ಬಲ್ಲಿರಾ? ಅಲ್ಲಿರುವುದು ಯೋನಿಯ ಚಿಹ್ನೆ!’ (ಲಕ್ಷ್ಮೀಶ ತೋಳ್ಪಾಡಿ. ‘ಪೂರ್ಣಾವತಾರಿ’, ಉದಯವಾಣಿ ಆಗಸ್ಟ್‌ 17, 2014) ಎನ್ನುತ್ತಾರೆ. ಕೊಳಲು ಒಂದು ಫ್ಯಾಲಿಕ್ ಸಂಕೇತ ಎಂಬುದನ್ನು ಅನೇಕ ವಿಮರ್ಶಕರು ಒಪ್ಪಿಕೊಂಡಿದ್ದಾರೆ. ಆದುದರಿಂದಲೇ ಕೊಳಲು ಮತ್ತು ನವಿಲುಗರಿ ಅಭಿನ್ನವಾಗಿ ಬೆರತುಹೋಗಿವೆ.

ಅವನು ಕೊಳಲು ನುಡಿಸುವುದು ಗೋಪಿಕೆಯರಿಗಾಗಿಯೇ. ನಮ್ಮ ಸಂಸ್ಕೃತಿಯಲ್ಲಿ ಕೃಷ್ಣ, ಸೌಂದರ್ಯದ ಆತ್ಯಂತಿಕ ಪ್ರತೀಕ. ಕೊಳಲು ಮತ್ತು ನವಿಲುಗರಿಯಿಲ್ಲದೇ ಕೃಷ್ಣನನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇವೆರಡಿಲ್ಲದ ಕೃಷ್ಣನ ಸೌಂದರ್ಯಾನುಭೂತಿಯೂ ಸಾಧ್ಯವಿಲ್ಲ. ಇಂತಹ ಒಂದು ಸುಂದರವಾದ ನವಿಲುಗರಿಯನ್ನು ನಮ್ಮ ಸಂಸ್ಕೃತಿ ಅಪಮೌಲ್ಯೀಕರಣಕ್ಕೆ ಈಡು ಮಾಡಿಬಿಟ್ಟಿದೆ.

ಈವ್, ಮ್ಯಾನ್‌ಹ್ಯಾಟನ್ ಪ್ರವಾಸದಲ್ಲಿದ್ದಾಗ, ಅಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರನ್ನು ಕಾಣುತ್ತಾಳೆ. ಅವರ ಕಳೆಗುಂದಿದ ಮುಖ, ಅಸಹಾಯಕತೆಯೇ, ಮಧುರವಾದ, ಮೃದುವಾದ ಈ ಗರಿಯನ್ನು ಹೊಸಕಿ ನಾಶಮಾಡಿಬಿಟ್ಟ ಸಂಗತಿಯನ್ನು ಹೇಳುತ್ತಿರುತ್ತದೆ. ನ್ಯೂಯಾರ್ಕ್‌ಗೆ ಮರಳಿದ ಈವ್ ಸಿಟ್ಟು, ಆಕ್ರೋಶದಿಂದ ಕುದಿಯುತ್ತಿರುತ್ತಾಳೆ. ಕಾರಣ, ಮಧ್ಯ ಯೂರೋಪಿನಲ್ಲಿ 1993ರಲ್ಲಿ 20,000ದಿಂದ 70,000 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿರುತ್ತಾರೆ. ಒಬ್ಬ ಗೆಳತಿಗೆ ಈವ್‌ಳ ಸಿಟ್ಟು ಅತಿರೇಕ ಎನಿಸುತ್ತದೆ, ಯಾಕೆಂದರೆ, ಅವಳು ಹೇಳುತ್ತಾಳೆ, ‘ನನ್ನ ಈ ನಗರದಲ್ಲಿ (ಅಮೆರಿಕ ದೇಶದಲ್ಲಿ) ಪ್ರತಿ ವರುಷ ಸುಮಾರು ಐದು
ಲಕ್ಷ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ’.

ಈವ್ ಸಂದರ್ಶಿಸುವ, ಬೊಸ್ನೇವಿಯಾದ ಒಬ್ಬ ಹೆಣ್ಣು ಮಗಳು, ಅಂತಹ ಐದು ಲಕ್ಷ ಹೆಣ್ಣು ಮಕ್ಕಳಲ್ಲಿ ಒಬ್ಬಳು. ಅವಳು ಹೇಳುತ್ತಾಳೆ- ‘ಅದು ಒಂದು ತಂಪು ಕೊಳವಾಗಿತ್ತು. ಅದರ ನಿರ್ಮಲ ನೀರಿನೊಳಗೆ ಪುಟ್ಟ ಕಪ್ಪೆಚಿಪ್ಪುಗಳು, ನುಣುಪು ಕಲ್ಲುಗಳೂ ಬಿಸಿಲು ಕಾಯುತ್ತಿದ್ದವು. ಅಂತಹ ಕೊಳದ ಮೃದು ಬದಿಗಳನ್ನು ಕತ್ತರಿಸಿಬಿಟ್ಟರು. ಕತ್ತರಿಸಿದ ನನ್ನ ಯೋನಿಯ ಒಂದು ತುಟಿ ನನ್ನ ಕೈಗೆ ಹತ್ತಿತ್ತು’.
ಅವಳು ಯೋನಿಯೆಂದರೆ ‘ನನ್ನ ಹಳ್ಳಿ’ (My village) ಎನ್ನುತ್ತಾಳೆ.

‘ಇಂತಹ ಮುಗ್ಧ ಹಳ್ಳಿ ಒಂದು ಕಾಲಕ್ಕೆ ಹಸಿರು ಹುಲ್ಲುಗಾವಲಿನಿಂದ, ಸೊಂಪಾದ ಕೆಂಪು ತೆನೆಗಳಿಂದ, ದನ ಕರುಗಳಿಂದ, ಹಕ್ಕಿಗಳ ಕಲರವದಿಂದ, ಹುಡುಗಿಯರ ಹಾಡುಗಳಿಂದ, ಕೂಡಿತ್ತು.. ಅಂತಹ ನೆಲವನ್ನು ಸೈನಿಕರು ಉಕ್ಕಿನ ಬಂದೂಕಗಳಿಂದ ಅಗೆದು, ಕೊಚ್ಚಿ, ದೋಚಿಬಿಟ್ಟರು. ಅದು ನನ್ನ ತವರಾಗಿತ್ತು. ಸತತವಾಗಿ ಏಳು ದಿನಗಳ ಕಾಲ ಒಬ್ಬರಾದಮೇಲೆ ಒಬ್ಬರು ಸರದಿಯಂತೆ ಎರಗಿ ನನ್ನ ನೆಲದಮೇಲೆ, ಸೀದುಹೋದ ಮಾಂಸದಂತೆ ವಾಸನೆ ಬರುವ, ಹೊಲಸು ನಾರುವ ಅವರ ವೀರ್ಯವನ್ನು ಬಸಿದುಹೋದರು. ನಿರ್ಮಲವಾದ ನೀರಿನಿಂದ ಕೂಡಿದ್ದ ನನ್ನ ಕೊಳ ಈಗ ಕೀವು, ವಿಷಗಳಿಂದ ತುಂಬಿಹೋಗಿದೆ. ಅಲ್ಲಿ ಕಟಾವಿಗೆ ಬಂದು ನಿಂತ ಪೈರುಗಳು ಸುಟ್ಟುಕರಕಲಾಗಿವೆ. ಹಾಗೆಯೇ ಅಲ್ಲಿನ ಮೀನುಗಳೂ’.

ನನ್ನ ಯೋನಿಯೆಂದರೆ ಒಂದು ಜಲಾಶಯ.
ಅದಕ್ಕೆ ಅವರು ಮುತ್ತಿಗೆ ಹಾಕಿದರು. ಕೊಚ್ಚಿದರು,
ಬೆಂಕಿ ಇಟ್ಟರು ಬೂದಿ ಮಾಡಿದರು
ಈಗ ನಾನು ಅದನ್ನು ಸ್ಪರ್ಶಿಸುವುದಿಲ್ಲ.
ಅದನ್ನು ವೀಕ್ಷಿಸುವುದಿಲ್ಲ.
ಈಗ ನಾನು ನನ್ನ ಮನೆಯೊಳಗಿಲ್ಲ.
ಈಗ ನಾನೆಲ್ಲಿರುವೆನೆಂದು ನನಗೇ ಗೊತ್ತಿಲ್ಲ.

ಆಫ್ರಿಕಾದಂತಹ ದೇಶದಲ್ಲಿ, ಸುಖದ ತುರೀಯ ಸ್ಥಿತಿಗೆ ಕಾರಣವಾಗುವ ಭಗಾಂಕುರವನ್ನು ಕತ್ತರಿಸಿ ಹಾಕಲಾಗುತ್ತದೆ. ಎಂಟರಿಂದ ಹತ್ತು ಕೋಟಿ ಹೆಣ್ಣು ಮಕ್ಕಳು ಇಂತಹ ಶಸ್ತ್ರಕ್ರಿಯೆಗೆ ಒಳಗಾಗಿದ್ದಾರೆಂದು ಈವ್ ಅಭಿಪ್ರಾಯ ಪಡುತ್ತಾಳೆ. ಪ್ರತಿವರುಷ 20 ಲಕ್ಷ ಹುಡುಗಿಯರ ಜನನಾಂಗದ ಮೇಲೆ ಇಂತಹ ಕತ್ತರೀ ಪ್ರಯೋಗ ನಡೆಯುತ್ತದೆ. ಹೆಣ್ಣುಮಕ್ಕಳು ಹಸ್ತ ಮೈಥುನದಂತಹ ಸುಖಕ್ಕೆ ಈಡಾಗಬಾರದು ಎಂಬುದು ಇದರ ಉದ್ದೇಶ. ಇದು ಹೇಗೆಂದರೆ ಮುಷ್ಠಿ ಮೈಥುನದ ಸುಖಕ್ಕೆ ಒಳಗಾಗುವ ಹುಡುಗನ ಶಿಶ್ನವನ್ನೇ ಕತ್ತರಿಸಿ ಹಾಕಿದಂತೆ, ಎನ್ನುತ್ತಾಳೆ ಈವ್‌ಳನ್ನು ಭೇಟಿಮಾಡಿದ ನಹೀದ್ ತೋಬಿಯಾ ಎನ್ನುವ ಆಫ್ರಿಕನ್ ತಜ್ಞೆ.

ಗಂಡಸಿಗೆ ಸುನ್ನತಿ ಶಸ್ತ್ರಕ್ರಿಯೆ ನಡೆಸುವುದು ಅವನ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದಕ್ಕಾದರೆ, ಹೆಣ್ಣಿಗೆ ನಡೆಸುವುದು, ಅದರ ಶಕ್ತಿಯನ್ನು ಕುಗ್ಗಿಸಲು. ಭಗಾಂಕುರದ ಶಸ್ತ್ರಕ್ರಿಯೆಗೆ ಒಳಗಾದ ಮಹಿಳೆಯರು ಹೆರಿಗೆ ಸಮಯದಲ್ಲಿ ಪಡುವ ಯಾತನೆ, ಸಾಮಾನ್ಯ ಮಹಿಳೆಯರು ಪಡುವ ಯಾತನೆಗಿಂತ ಅಧಿಕವಾಗಿರುತ್ತದೆ. ಅದು ಅನೇಕ ವೇಳೆ ಸಾವಿಗೂ ಕಾರಣವಾಗುತ್ತದೆ. ಆ ವೈದ್ಯೆಯ ಪ್ರಕಾರ, ಅಂತಹ ಮಹಿಳೆಯರು ಸದಾ ಗರ್ಭಕೋಶದ ಸೋಂಕಿಗೆ ಬಲಿಯಾಗುತ್ತಾರಲ್ಲದೆ, ಫಿಸ್ತುಲಾದಂತಹ ತೊಂದರೆಗಳಿಗೂ ಈಡಾಗುತ್ತಾರೆ.

ಲಾವಾ ಮತ್ತು ಪ್ರವಾಹ
ಅಮೃತಾ ಪ್ರೀತಮ್ ತನ್ನ ಒಂದು ಕವಿತೆಯಲ್ಲಿ ಯೋನಿ ಸ್ರೋತವನ್ನು ಲಾವಾಗೆ ಹೋಲಿಸಿದ್ದಾಳೆ. ಈವ್, ಅರವತ್ತೈದರಿಂದ ಎಪ್ಪತ್ತೈದು ವರುಷ ಪ್ರಾಯದ ಮಹಿಳೆಯರನ್ನು ಸಂದರ್ಶನ ಮಾಡಿದಾಗ, ಎಲ್ಲರೂ ತಮ್ಮ ಯೋನಿಯ ಬಗ್ಗೆ ಹೇಯವಾದ ಭಾವನೆಗಳನ್ನೇ ತಳೆಯುತ್ತಾರೆ. ಅದರಲ್ಲಿ ಒಬ್ಬಳು ತನಗೆ ಬಿದ್ದ ವಿಚಿತ್ರವಾದ ಕನಸೊಂದನ್ನು ಹೇಳಿಕೊಳ್ಳುತ್ತಾಳೆ. ಆ ಕನಸು ಹೀಗಿದೆ– ಒಬ್ಬ ಗೆಳೆಯನ ಜೊತೆ ಅವಳು ಒಂದು ಹೋಟೆಲ್‌ನಲ್ಲಿ ತಂಗಿರುತ್ತಾಳೆ.

ಆ ಗೆಳೆಯ ಅವಳಿಗೆ ಮುತ್ತನಿತ್ತಾಗ, ಇಡೀ ಕೋಣೆ ಕಂಪಿಸಲಾರಂಭಿಸುತ್ತದೆ. ಮೇಜಿನ ಕೆಳಗಿದ್ದ ಪಾರಿವಾಳಗಳು ಹಾರಿ ಹೊರಗೆ ಬರುತ್ತವೆ. ಅಮೃತಾ ಪ್ರೀತಮ್ ಯಾವುದನ್ನು ಲಾವಾ ಎಂದಿದ್ದಳೋ ಅದನ್ನು ಅವಳು ಪ್ರವಾಹ ಎನ್ನುತ್ತಾಳೆ. ಅವಳೊಳಗಿಂದ ಆ ಪ್ರವಾಹ ಹರಿಯಲು ಪ್ರಾರಂಭವಾಗುತ್ತದೆ. ಅದು ಎಲ್ಲಾ ಕಡೆ ವ್ಯಾಪಿಸಿಕೊಂಡು ಬಿಡುತ್ತದೆ. ಅದರೊಳಗೆ ಮೀನುಗಳು ಈಜಾಡಲು ತೊಡಗುತ್ತವೆ. ನಾವೆಗಳು ಏಳುತ್ತವೆ. ಇಡೀ ಹೋಟೆಲ್ ನೀರಿನಿಂದ ಆವೃತವಾಗಿಬಿಡುತ್ತದೆ. ಗಾಬರಿಯಿಂದ, ಅಪಮಾನದಿಂದ ಅವಳ ಗೆಳೆಯ ಮಂಡಿಯುದ್ದ ನೀರಿನಲ್ಲಿ ನಿಂತಿರುತ್ತಾನೆ. ಇನ್ನಿತರರು ಉಟ್ಟ ಬಟ್ಟೆಯಲ್ಲಿಯೇ ಆ ಪ್ರವಾಹದಲ್ಲಿ ಭರದಿಂದ ಈಜುತ್ತಾ ಅವಳ ಕಡೆಗೆ ಬರುತ್ತಾರೆ.

ಇಡೀ ಜಗತ್ತು, (ನಮ್ಮ ಸಾಂಸ್ಕೃತಿಕ ನಿರ್ವಚನದಲ್ಲಿ ಜಗತ್ತು ಅಂದರೆ ಪುರುಷ ಜಗತ್ತು ಮಾತ್ರ ತಾನೇ?) ಸುತ್ತುತ್ತಿರುವುದು ಯೋನಿಯ ಸುತ್ತಲೇ. ಈ ಪ್ರವಾಹದಲ್ಲಿ ಅದು ಮುಳುಗೇಳುತ್ತಿದೆ. ಆದರೆ ಅದನ್ನು ಒಪ್ಪಿಕೊಂಡು, ಅದರ ಪ್ರಾಧಾನ್ಯವನ್ನು ಗುರುತಿಸಲು ಸಾಧ್ಯವಿಲ್ಲ, ಹಾಗೆಂದು ಬಿಡಲೂ ಆಗುವುದಿಲ್ಲ. ಇಂತಹ ಒಂದು ಇಕ್ಕಟ್ಟಿನಲ್ಲಿ, ಗೊಂದಲದಲ್ಲಿ ಸಿಕ್ಕಿರುವ ಪಿತೃ ಪ್ರಧಾನ ವ್ಯವಸ್ಥೆಗಿರುವ ಒಂದು ಪರ್ಯಾಯವೆಂದರೆ, ಯೋನಿಯ ಪ್ರಾಧಾನ್ಯವನ್ನು ಸಾಂಸ್ಕೃತಿಕ ಸುಳ್ಳಿನ ಆಧಾರದ ಮೇಲೆ ಹತ್ತಿಕ್ಕುವುದು.

ಒಮ್ಮೆ ಗುಲಾಬಿ ಜಗತ್ತು ಮಾತನಾಡತೊಡಗಿದರೆ ಅದರ ಮಹಾಪೂರದಲ್ಲಿ ವ್ಯವಸ್ಥೆ ಕೊಚ್ಚಿಕೊಂಡು ಹೋಗಿಬಿಡುತ್ತದೆ. ಇಡೀ ಜಗತ್ತು ಬುಡಮೇಲಾಗಿಬಿಡುತ್ತದೆ. ಆದುದರಿಂದ ಅದು ಮಾತನಾಡದಂತೆ ಅದರ ಬಾಯಿ ಹೊಲೆಯಲಾಗುತ್ತದೆ. ಮೇಲಿಂದ ಮೇಲೆ ಅದರ ಮೇಲೆ ಆಕ್ರಮಣ ಮಾಡಲಾಗುತ್ತದೆ. ಮಹಿಳೆಯ ಮೇಲಿನ ಅತ್ಯಾಚಾರ ಪುರುಷ ವ್ಯವಸ್ಥೆಯ ಪೌರುಷವಲ್ಲ, ಬದಲಾಗಿ ಅದರ ದೌರ್ಬಲ್ಯ. ತನ್ನ ದೌರ್ಬಲ್ಯವನ್ನು ಹತ್ತಿಕ್ಕುವ ಸಲುವಾಗಿ ಸತತವಾಗಿ ಇಂತಹ ಮುಗ್ಧ, ಅಮಾಯಕ ಗೂಡಿನ ಮೇಲೆ ಹಲ್ಲೆ ಮಾಡಲಾಗುತ್ತದೆ.

ಕೆಲವು ತಿಂಗಳುಗಳ ಹಿಂದೆ ಪಾರ್ವತಿ ಜಿ. ಐತಾಳ್ ಅವರು ಮಲಯಾಳಂನ ಶೀಬ ಇ.ಕೆ. ಎನ್ನುವವರ ಕಥೆಯನ್ನು ‘ಆಟಿಕೆ’ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇದು ಆಟಿಕೆಗಳನ್ನು ಮಾರುವವನ ಕತೆ. ಆಟಿಕೆಗಳೆಂದರೆ ಮಕ್ಕಳ ಆಟಿಕೆಗಳಲ್ಲ ಅವು. ಹೆಣ್ಣಿನ ಅಂಗಾಂಗಳನ್ನು ರಬ್ಬರ್‌ನಲ್ಲಿ ಮಾಡಿದ ಆಟಿಕೆಗಳವು. ಪ್ರತಿ ಆಫೀಸಿಗೂ ಲಂಚ್ ಬ್ರೇಕ್‌ನಲ್ಲಿ ಹೋಗಿ only for men, please ಎನ್ನುತ್ತಾ ಆಟಿಕೆಗಳನ್ನು ಮಾರುವುದು ಅವನ ಕೆಲಸ. ‘ನೋಡಿ ಸಾರ್, ಇದು ಹೆಣ್ಣಿನ ಅಂಗಗಳಷ್ಟೇ ನೈಜವಾಗಿದೆ.

ಹದವಾದ ಶಾಖವನ್ನು ಕೊಡಬಲ್ಲ ಬ್ಯಾಟರಿ ಕೂಡ ಇದರಲ್ಲಿ ಅಡಕವಾಗಿದೆ... ದಯವಿಟ್ಟು ತೆಗೆದುಕೊಳ್ಳಿ ಸಾರ್... ನಮ್ಮ ಹೆಣ್ಣು ಮಕ್ಕಳನ್ನು ಮಾತ್ರ ಮುಟ್ಟಬೇಡಿ ಸಾರ್... ಅವರನ್ನು ಬಿಟ್ಟು ಬಿಡಿ ಸಾರ್’ ಎಂದು ಕಂಡ ಕಂಡವರಿಗೆಲ್ಲಾ ಅಂಗಲಾಚುತ್ತಾ, ಆಟಿಕೆಗಳನ್ನು ಕೊಳ್ಳಲು ಒತ್ತಾಯಿಸುತ್ತಾನೆ. ಯಾಕೆಂದರೆ ಅವನ ಮುದ್ದಿನ ಮಗಳು ಅತ್ಯಾಚಾರಕ್ಕೆ ಬಲಿಯಾಗಿರುತ್ತಾಳೆ.

ಯೋನಿಯೆಂದರೆ ಈವ್ ಹೇಳುತ್ತಾಳೆ– ಹುಲ್ಲುಗಾವಲಿನ ನಡುವಿರುವ ಪುಟ್ಟ ಮನೆ, ಎಲೆಗಳ ಮಧ್ಯೆ ಇರುವ ಪುಟ್ಟ ಗುಲಾಬಿ, ಟ್ಯೂಲಿಪ್ ಹೂ. ಮರಾಠಿಯ ಪ್ರಸಿದ್ಧ ಕವಿ ದಿಲೀಪ್ ಚಿತ್ರೆಯವರ ಪ್ರಕಾರ ಅದು ಮದೋನ್ಮತ್ತ ಕಪ್ಪು ಪಾರಿಜಾತ (ಕಾಳಾ ಪ್ರಾಜಕ್ತ). ಅದು ಹೆಣ್ಣಿನ ಅಂತರಂಗಕ್ಕೆ ಬಾಗಿಲೂ ಹೌದು, ಮನೆಯೂ ಹೌದು. ಭಾರತೀಯ ಅಧ್ಯಾತ್ಮದಲ್ಲಿ ಅದೆಂದರೆ ಶ್ರೀಚಕ್ರ. ತನ್ನ ಸೃಷ್ಟಿ ಕಾರ್ಯಕ್ಕೆ ಅಡ್ಡಬಾರದಂತೆ ಲಯಮುಖೀ ಶಿವನನ್ನೇ ಪರ್ಯಂಕವನ್ನಾಗಿ ಮಾಡಿಕೊಂಡು ಕುಳಿತ ರಾಜರಾಜೇಶ್ವರಿಯ ಶಕ್ತಿ ಕೇಂದ್ರ.

ಶಾಕ್ತರಲ್ಲಿ ಅದು ಶಕ್ತಿಪೀಠ. ಈವ್‌ಳಿಗೆ ಬಹಳ ಅಚ್ಚರಿಯ ಸಂಗತಿಯೆಂದರೆ ಭಾರತೀಯರಲ್ಲಿ ಯೋನಿಯ ಬಗ್ಗೆ ಇಂತಹ ಪೂಜನೀಯ, ಮಹತ್ವದ ಸ್ಥಾನ ಇರುವುದು. ಇದನ್ನು ಈವ್ ತನ್ನ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾ ತಾಂತ್ರಿಕರಲ್ಲಿ ಇದ್ದ ಯೋನಿ ಪೂಜೆಯ ಮಹತ್ವ ಕ್ರಮೇಣ ಸಾಂಸ್ಕೃತಿಕ ಅಪವ್ಯಾಖ್ಯಾನಕ್ಕೆ ಗುರಿಯಾಗಿ ಅಂಚಿಗೆ ಸರಿದುದನ್ನು ಹೇಳುತ್ತಾಳೆ. ಅವಳ ಪ್ರಕಾರ ಇಂಗ್ಲಿಷಿನ cunt  ಶಬ್ದದ ಮೂಲ ಕಾಳಿದೇವತೆಯ ವಿಶೇಷಣವಾದ ಕುಂಡ (ಕುಂಡಲಿನಿ) ಶಬ್ದದಲ್ಲಿದೆ. ಅದುವೇ ಮುಂದೆ country, kin ಅಂತಹ ಇಂಗ್ಲಿಷ್ ಶಬ್ದಗಳಿಗೆ ದಾರಿಮಾಡಿಕೊಟ್ಟಿರುವುದನ್ನು ಅವಳು ಪ್ರಸ್ತಾಪಿಸುತ್ತಾಳೆ. 

ಆದಿ ಆಧಾರವಿಲ್ಲದಂದು... ಹಮ್ಮು ಬಿಮ್ಮುಗಳಿಲ್ಲದಂದು... ಗುಹೇಶ್ವರಾ.. ನೀನಿದ್ದೆಯಲ್ಲಾ ಎಂದು ಅಲ್ಲಮ ಹೇಳಿರಬಹುದು. ಆದರೆ ಆ ಗುಹೇಶ್ವರನಿಗೂ ಈ ಶಕ್ತಿಪೀಠವೇ ಆಧಾರ. ಇದು ಇಲ್ಲದಿದ್ದರೆ ಗುಹೇಶ್ವರ ನಿಲ್ಲಲಾರ, ನಮ್ಮ ಸಂಸ್ಕೃತಿಯಲ್ಲಿ ಉಳಿಯಲಾರ. ಗುಹೇಶ್ವರನ ನೆಲೆಯೆಂದರೆ ಅದೇ. ಅದು ಅವನ ಸಂಪುಟ. ಇಂತಹ ಆದಿಮ ಅರಿವಿಗಿಂದು ವಿಸ್ಮೃತಿ ಕವಿದುಬಿಟ್ಟಿರುವುದು ವಿಷಾದದ ಸಂಗತಿಯಾಗಿದೆ.
ನಮ್ಮ ಹೆಣ್ಣು ಮಕ್ಕಳನ್ನು ಮುಟ್ಟಬೇಡಿ ಸಾರ್
ಅವರನ್ನು ಬಿಟ್ಟುಬಿಡಿ ಸಾರ್
ಪ್ಲೀಸ್ ಬಿಟ್ಟುಬಿಡಿ..

ಇದು ವರವೋ ಶಾಪವೋ?

ದೇವರೇ ಯಾಕಾದರೂ ಕೊಟ್ಟೆ
ಒಂದೇ ಒಂದು ಮುಷ್ಟಿಯ ಈ ಗರ್ಭವನ್ನು?
ಇದು ನನ್ನ ಕಂದನ ನಂದನವೇ?
ಕಾಮಾಂಧರ ಸಮರಾಂಗಣವೇ?
ತಿಳಿಯುತ್ತಿಲ್ಲ ಇದು ವರವೋ ಶಾಪವೋ
ಬಲವೋ ದೌರ್ಬಲ್ಯವೋ
ಬಂಧನವೋ ನಿರ್ಬಂಧನವೋ

ಎಷ್ಟು ರಕ್ಷಿಸಿಕೊಳ್ಳಬೇಕು ಬಲಿಗೊಟ್ಟು
ಸ್ವಚ್ಛಂದ ಬಾಲ್ಯದ ದಿನಗಳ
ಗರಿ ಕಿತ್ತು ಕಿತ್ತು?
ಎಷ್ಟು ಶಿಕ್ಷಿಸಿಕೊಳ್ಳಬೇಕು ಆತುಮನ
ತಪದ ಗುರಿಗಳನ್ನೊಡೆದು
ಮಾಡಿ ಚೂರು ಚೂರು?

ಬೆಳಕಲ್ಲಿ ಕತ್ತಲಲ್ಲಿ
ಮನೆಯಲ್ಲಿ, ಶಾಲೆಯಂಗಳದಲ್ಲಿ
ಎಲ್ಲೆಂದರಲ್ಲಿ ನುಗ್ಗುವ ಕಾಮುಕ
ಮನೆಹಾಳ ಗೂಳಿಗಳ ಲಗ್ಗೆ?
ಹೇಗೆ ತಡೆಯಲಿ ಇವರ?
ಕೆಂಡದಂಥ ಕಣ್ಣಲ್ಲಿರುವುದು
ಪ್ರೀತಿಯೇ ನೀತಿಯೇ? ಇಲ್ಲ ಇಲ್ಲ
ಬರಿ ತೆವಲು, ಕ್ಷಣಿಕದಮಲು!
ಇವರೇನು ಬಲ್ಲರು ಸೃಷ್ಟಿಯ ನೆಲೆ?
ಹೆಣ್ಣು ಮಾತ್ರ ಪಡೆದ ವರದ ಬೆಲೆ, ಕಲೆ?
ಗರ್ಭದಲ್ಲೊಂದು ಅಗಾಧ ತಪವಿದೆ
ತಿಳಿಸಲಾಗದ ಹಪಹಪಿ ಇದೆ
ಬೇಡುವ ಪಡೆಯುವ ಹದವಿದೆ,
ಮಾತೃತ್ವದ ಮುದವಿದೆ!
ಸೃಷ್ಟಿಯ ಕದವನ್ನೊದ್ದು ನುಗ್ಗುವ ರಾಕ್ಷಸರನ್ನು
ಶಿಕ್ಷಿಸಲು ತೆಗೆದಿಟ್ಟುಕೊಳ್ಳಬೇಕು
ಜಗದಗಲದ ಬಾಗಿಲು
–ಮಾಲತಿ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT