ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮೊತ್ತ ಮೊದಲ ಎರಡಂತಸ್ತಿನ ಮೇಲ್ಸೇತುವೆ: ಬಳಕೆಗೆ ಮುಕ್ತ

Last Updated 18 ಏಪ್ರಿಲ್ 2014, 12:37 IST
ಅಕ್ಷರ ಗಾತ್ರ

ಮುಂಬೈ (ಐಎಎನ್ ಎಸ್): ಭಾರತದ ಮೊತ್ತ ಮೊದಲ ಎರಡಂತಸ್ತಿನ ಮೇಲ್ಸೇತುವೆಯು ರಾಷ್ಟ್ರದ ವಾಣಿಜ್ಯ ರಾಜಧಾನಿಯಾದ ಈ ಪಶ್ಚಿಮ ಕರಾವಳಿ ಮೆಟ್ರೊಪಾಲಿಟನ್ ನಗರದಲ್ಲಿ ಶುಕ್ರವಾರ ಸಾರ್ವಜನಿಕ ಬಳಕೆಗೆ ಮುಕ್ತ ಗೊಂಡಿತು.

'ಸಾಂತಾಕ್ರೂಜ್-ಚೆಂಬೂರ್ ಸಂಪರ್ಕ ರಸ್ತೆ (ಸಾಂತಾಕ್ರೂಜ್- ಚೆಂಬೂರು ಲಿಂಕ್ ರೋಡ್ - ಎಸ್ ಸಿ ಎಲ್ ಆರ್)' ಯೋಜನೆಯು ನಗರದಲ್ಲಿ ಪೂರ್ವ ಹಾಗೂ ಪಶ್ಚಿಮ ಮಧ್ಯೆ ಮಹತ್ವದ ಸಂಪರ್ಕವನ್ನು ಕಲ್ಪಿಸುವುದು ಮತ್ತು ಪ್ರಯಾಣದ ಅವಧಿಯನ್ನು ಹಿಂದಿನ 90 ನಿಮಿಷಗಳಿಂದ ಈಗ ಕೇವಲ 20 ನಿಮಿಷಗಳಿಗೆ ಇಳಿಸುವುದು. ತನ್ಮೂಲಕ ಪ್ರಯಾಣಿಕರಿಗೆ ಅಗಾಧ ಪ್ರಮಾಣದಲ್ಲಿ ಸಮಯ ಹಾಗೂ ಇಂಧನ ವೆಚ್ಚವನ್ನು ಉಳಿಸುವುದು.

ಮುಖ್ಯ ಮೇಲ್ಸೇತುವೆಯು 3.45 ಕಿ.ಮೀ. ಉದ್ಧಕ್ಕೆ ವ್ಯಾಪಿಸಿದ್ದರೆ, ಕೇಂದ್ರ ರೈಲ್ವೇ ಮತ್ತು ಬಂದರು ಹಳಿ ಮಾರ್ಗದ ಮೇಲೆ ಸಾಗುವ 1.8 ಕಿಮೀ; ಉದ್ದದ ಎರಡಂತಸ್ತಿನ ಮೇಲ್ಸೇತುವೆಯ ಪಶ್ಚಿಮ ಎಕ್ಸ್ ಪ್ರೆಸ್ ಹೆದ್ದಾರಿಯಿಂದ ಕುರ್ಲಾ, ತಿಲಕ ನಗರ, ಚೆಂಬೂರು ಮತ್ತು ಪೂರ್ವ ಎಕ್ಸ್ ಪ್ರೆಸ್ ಹೆದ್ದಾರಿ ಮಧ್ಯೆ ವೇಗದ ಸಂಪರ್ಕಕ್ಕೆ ಅನುಕೂಲ ಕಲ್ಪಿಸಿದೆ.

2002ರಲ್ಲಿ ಯೋಜಿಸಲಾಗಿದ್ದ ಈ ಯೋಜನೆಯ ನಿರ್ಮಾಣ ಕಾಮಗಾರಿ 2006ರಲ್ಲಿ ಆರಂಭವಾಗಿತ್ತು. ಹಲವಾರು ಏರಿಳಿತಗಳ ಬಳಿಕ  ಅಂತಿಮವಾಗಿ 454 ಕೋಟಿ ರೂಪಾಯಿ ಅಂದಾಜು ವೆಚ್ಚದೊಂದಿಗೆ ಈ ದಿನ ಸಾರ್ವಜನಿಕ ಸೇವೆಗೆ ಮುಕ್ತ ಪಡೆಯಿತು.

ಪ್ರಾರಂಭದಲ್ಲಿ  115 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜು ಮಾಡಲಾಗಿದ್ದ ಯೋಜನೆಯ ವೆಚ್ಚ ಅಂತಿಮಗೊಳ್ಳುವ ವೇಳೆಗೆ 454 ಕೋಟಿ ರೂಪಾಯಿಗಳಿಗೆ ತಲುಪಿದೆ.

ವಿಶ್ವಬ್ಯಾಂಕ್ ನೆರವಿನೊಂದಿಗೆ ಸಾಕಾರಗೊಂಡಿರುವ ಈ ಯೋಜನೆಯಿಂದ ನಗರದ ಪೂರ್ವ- ಪಶ್ಚಿಮ ಸಂಪರ್ಕಕ್ಕೆ ಅನುಕೂಲವಾಗುವುದು ಮಾತ್ರವೇ ಅಲ್ಲ, ಪುಣೆ, ಗೋವಾ, ನಾಸಿಕ್ ಮತ್ತಿತರ ಸ್ಥಳಗಳಿಗೆ ರಾಜ್ಯದಿಂದ ಮುಂದಕ್ಕೆ ವೇಗದ ಪಯಣಕ್ಕೂ ಅನುಕೂಲವಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮೇಲ್ಸೇತುವೆ ಮಾರ್ಗದಲ್ಲಿ ಗಾಝಿ ನಗರ, ಬುದ್ಧ ಕಾಲೋನಿ, ಇಂದಿರಾ ಕಾಲೋನಿ, ರಾಹುಲ್ ನಗರ ಮತ್ತು ಇತರ ಕೊಳಚೆಗೇರಿಗಳ ಸುಮಾರು 3,500 ಕುಟುಂಬಗಳಿಗೆ ಮರುವಸತಿ ಕಲ್ಪಿಸಬೇಕಾಗಿ ಬಂದದ್ದು ಯೋಜನೆಯ ಕಾಮಗಾರಿಗೆ ಉಂಟಾದ ಪ್ರಮುಖ ಅಡಚಣೆಗಳಲ್ಲಿ ಒಂದಾಗಿತ್ತು ಎಂದು ಮುಂಬೈ ಮೆಟ್ರೋಪಾಲಿಟನ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಎಂಎಂಆರ್ ಡಿಎ) ಅಧಿಕಾರಿಗಳು ಹೇಳಿದರು.

ಮೇಲ್ಸೇತುವೆಯಲ್ಲಿ ಎರಡಂತಸ್ತಿನ ಸೇತುವೆ ನಿರ್ಮಾಣಕ್ಕೆ ಭಾರತೀಯ ರೈಲ್ವೇಯಿಂದ ಅನುಮತಿ ಪಡೆಯುವುದಕ್ಕೂ ಸಾಕಷ್ಟು ಸಮಯ ಬೇಕಾಯಿತು ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT