ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ತತ್ವಶಾಸ್ತ್ರದ ಚಿಂತನೆಗೆ ಬಹುತ್ವದ ನೆಲೆ

ಲೇಖಕ ಸುಂದರ್ ಸಾರುಕ್ಕೈ ಅಭಿಪ್ರಾಯ
Last Updated 9 ಅಕ್ಟೋಬರ್ 2015, 20:09 IST
ಅಕ್ಷರ ಗಾತ್ರ

ಸಾಗರ: ‘ಇದೇ ಸತ್ಯ ಅಥವಾ ಇರುವುದು ಒಂದೇ ಸತ್ಯ ಎಂಬ ನಿಲುವಿಗೆ ಅಂಟಿಕೊಳ್ಳದೆ ಬಹುತ್ವದ ನೆಲೆಯ ಚಿಂತನೆ ಮತ್ತು ಪ್ರತಿ ಚಿಂತನೆಗಳನ್ನು ಭಾರತೀಯ ತತ್ವಶಾಸ್ತ್ರದಲ್ಲಿ ಕಾಣಬಹುದು’ ಎಂದು ಲೇಖಕ ಸುಂದರ್ ಸಾರುಕ್ಕೈ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಶುಕ್ರವಾರ ‘ಭಾರತೀಯ ತತ್ವಶಾಸ್ತ್ರದಲ್ಲಿ ಚಿಂತನೆ ಮತ್ತು ಪ್ರತಿಚಿಂತನೆ’ ವಿಷಯ ಕುರಿತು ಮಾತನಾಡಿದ ಅವರು, ‘ಭಾರತೀಯ ತತ್ವಶಾಸ್ತ್ರದಲ್ಲಿನ ಪ್ರತಿಯೊಂದು ಚಿಂತನೆ ಮತ್ತು ಪ್ರತಿಚಿಂತನೆಗಳು ತರ್ಕದ ಮೇಲೆ ನಡೆಯುವ ಆಲೋಚನಾ ಕ್ರಮ ಮತ್ತು ನಿಯಮಬದ್ಧ ವಿಶ್ಲೇಷಣೆಗಳನ್ನು ಆಧರಿಸಿವೆ’ ಎಂದರು.

ಭಾರತೀಯ ತತ್ವಶಾಸ್ತ್ರದಲ್ಲಿ ಪರಧರ್ಮ ಸಹಿಷ್ಣುತೆ ಎನ್ನುವುದು ಅತ್ಯಂತ ಸಹಜವಾಗಿ ಪ್ರತಿಬಿಂಬಿತವಾಗಿದೆ. ಅಹಿಂಸೆಯ ನೆಲೆಗಳು ಇಲ್ಲಿ ಬೌದ್ಧಿಕ ಸ್ವರೂಪ ಪಡೆದಿರುವಂತದ್ದು. ಈ ಕಾರಣಕ್ಕೆ ಗೋಮಾಂಸ ಸೇವಿಸುವವರ ನಂಬಿಕೆಗಳನ್ನು ಒಪ್ಪಿಕೊಳ್ಳದೆ ಇದ್ದರೂ ಆ ಬಗ್ಗೆ ಸೈರಣೆ ತೋರುವ ತಾತ್ವಿಕತೆ ಜೈನಸಿದ್ಧಾಂತದ ಹಿಂದೆ ಇದೆ ಎನ್ನುವುದನ್ನು ಉದಾಹರಿಸಿದರು.

‘ಇಲ್ಲ’ ಎನ್ನುವುದರ ಕುರಿತ ಮೀಮಾಂಸೆಯ ವಿಷಯವನ್ನು ಪಾಶ್ಚಾತ್ಯ ತತ್ವಶಾಸ್ತ್ರ ಒಳಗೊಂಡಿದ್ದರೂ ಇದಕ್ಕೆ ಸಂಬಂಧಪಟ್ಟಂತೆ ಭಾರತದ ತತ್ವಶಾಸ್ತ್ರ ಮುಖಾಮುಖಿಯಾಗಿರುವ ಕ್ರಮ ಅತ್ಯಂತ ವಿಭಿನ್ನವಾದದ್ದು. ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿ ‘ಇದೆ’ ಅಥವಾ ‘ಇಲ್ಲ’ ಎನ್ನುವುದರ ಬಗ್ಗೆ ನಿರ್ದಿಷ್ಟವಾಗಿ ಒಂದು ನಿಲುವಿಗೆ ಅಂಟಿಕೊಳ್ಳುವುದನ್ನು ಕಾಣಬಹುದು. ಆದರೆ, ಭಾರತೀಯ ತತ್ವಶಾಸ್ತ್ರದಲ್ಲಿ ಈ ಬಗೆಯ ನಿರ್ದಿಷ್ಟತೆ ಇಲ್ಲದ ಉದಾರವಾದಿ ಚಿಂತನೆ ಇದೆ ಎಂದು ವಿಶ್ಲೇಷಿಸಿದರು.

‘ಇದೆ’ ಅಥವಾ ‘ಇಲ್ಲ’ ಎನ್ನುವುದರ ಚಿಂತನೆ ಯಾವ ವಯೋಮಾನದವರು, ಯಾವ ಸ್ಥಳದಲ್ಲಿ, ಯಾವ ಕಾಲದಲ್ಲಿ, ಯಾವ ಲಿಂಗಕ್ಕೆ ಸೇರಿದವರು ಮಾಡುತ್ತಿದ್ದಾರೆ ಎನ್ನುವುದನ್ನು ಭಾರತೀಯ ತತ್ವಶಾಸ್ತ್ರ ಮುಖ್ಯವಾಗಿ ಪರಿಗಣಿಸುತ್ತದೆ. ಆದರೆ, ಪಾಶ್ಚಾತ್ಯ ತತ್ವಶಾಸ್ತ್ರ ಇಂತಹ ಕ್ರಮದಿಂದ ದೂರವಿದೆ ಎಂದರು.

ಭಾರತೀಯ ತತ್ವಶಾಸ್ತ್ರದ ಚಿಂತನೆಯಲ್ಲಿ ಇಂದು ಸತ್ಯವಾಗಿದ್ದು ನಾಳೆ ಸುಳ್ಳಾಗಬಹುದು. ಇಂದು ಸುಳ್ಳಾಗಿದ್ದು ನಾಳೆ ಸತ್ಯವಾಗಬಹುದು ಎನ್ನುವ ವಿಶಿಷ್ಟವಾದ ಹೊಳಹು ಅಡಗಿದೆ. ಹೀಗಾಗಿ, ಇಲ್ಲಿನ ಚಿಂತನೆ ಮತ್ತು ಪ್ರತಿಚಿಂತನೆಗೆ ಒಪ್ಪಿಗೆ ಮತ್ತು ನಿರಾಕರಣೆಯ ಎರಡು ನೆಲೆಗಳಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT