ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸೇಬಿಗೆ ಚೀನಾ ಸವಾಲ್

Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಇಲ್ಲಿದೆ ನೋಡಿ ಸೇಬು, ಬಣ್ಣ ಬಣ್ಣದ ಸೇಬು, ರುಚಿಯೂ ಬೇರೆ ಬೇರೆ, ಬೆಲೆಯೂ ಕಡಿಮೆ. ಎಷ್ಟು ಬೇಕಾದರೂ ಕೊಂಡುಕೊಳ್ಳಿ’– ಹೀಗೆಂದು ಹೇಳಿದವನೇ ನಮ್ಮ ಕಾರಿನ ಚಾಲಕ ದೇವೇಂದರ್‌ ಆವರಣವೊಂದರೊಳಕ್ಕೆ ನಮ್ಮನ್ನು ತಂದುಬಿಟ್ಟ. ಹಿಮಾಚಲ ಪ್ರದೇಶದ ಪ್ರವಾಸದಲ್ಲಿದ್ದು, ಅಲ್ಲಿ ಸಲೀಸಾಗಿ ಸಿಗುವ ಸೇಬು ಖರೀದಿಸೋಣವೆಂದು ದಾರಿಬದಿ ಹಣ್ಣು ಅಂಗಡಿ ಹತ್ತಿರ ಕಾರು ನಿಲ್ಲಿಸಲು ಚಾಲಕನಿಗೆ ಹೇಳಿದರೆ ಆತ ನಮ್ಮನ್ನು ಮಾರುಕಟ್ಟೆ ಆವರಣದಲ್ಲೇ ಇಳಿಸಿದ್ದ.

ಹಲವು ಟೆಂಟು ಅಂಗಡಿಗಳು, ಚಿಕ್ಕ ಚಿಕ್ಕ ವಾಹನಗಳಲ್ಲಿ ಹಣ್ಣು ಲೋಡು ಇಳಿಸುತ್ತಿದ್ದ ಕೂಲಿಗಳು, ಸೇಬು ತುಂಬಿದ್ದ ಪ್ಲಾಸ್ಟಿಕ್‌ ಕ್ರೇಟುಗಳು, ಹರಾಜಿನಲ್ಲಿ ಮಾಲು ಪಡೆಯಲು ಪೈಪೋಟಿ ನಡೆಸುತ್ತಿದ್ದ ವ್ಯಾಪಾರಿಗಳು, ಸೇಬು ತುಂಬಿದ ಪೆಟ್ಟಿಗೆ ಕೊಂಡೊಯ್ಯಲು ಕಾದಿದ್ದ ಬೃಹತ್‌ ಟ್ರಕ್‌ಗಳು– ಇದನ್ನೆಲ್ಲಾ ನೋಡಿ ಬೆಚ್ಚಿ ಬೀಳುವ ಸರದಿ ನಮ್ಮದಾಗಿತ್ತು. ಜುಲೈ ತಿಂಗಳಲ್ಲಿ, ಸೇಬು ಋತುವಿನ ಮೊದಲ ಫಸಲು ಮಾರುಕಟ್ಟೆ ಪ್ರವೇಶಿಸಿತ್ತು.

ಆಗಸಕ್ಕೆ ಚಾಚಿಕೊಂಡ ಬೆಟ್ಟಸಾಲುಗಳ ಪಕ್ಕ ಬಿಯಾಸ್‌ ನದಿ ರಭಸದಿಂದ ಹರಿಯುತ್ತಿತ್ತು. ಅದರ ಬದಿಗೆ ಇದ್ದ ಮಾರುಕಟ್ಟೆಯಲ್ಲಿ ಮುಂಜಾನೆ ವ್ಯಾಪಾರದ ಭರಾಟೆ. ಇದು ತರಕಾರಿ–ಹಣ್ಣುಗಳ ಮಾರುಕಟ್ಟೆಯಾದರೂ ನಾವಲ್ಲಿದ್ದಾಗ ಸೇಬು ಫಸಲಿನದೇ ಕಾರುಬಾರು, ಏಕೆಂದರೆ ಅದು ಸೇಬು ಸೀಜನ್‌! ಆ ಮಾರುಕಟ್ಟೆ ಹೆಸರು ಕುಲು; ಇದು ದೇಶದ ಹೆಸರಾಂತ ಸೇಬು ಮಾರುಕಟ್ಟೆಗಳಲ್ಲೊಂದು.
ಆರೋಗ್ಯದ ಹಣ್ಣೆಂದೇ ಪ್ರಸಿದ್ಧವಾದ ಸೇಬಿನ ಹಿಂದೆ ದೊಡ್ಡ ಚರಿತ್ರೆಯೇ ಇದೆ.

ಮಧ್ಯ ಏಷ್ಯಾದಲ್ಲಿ ಉಗಮಿಸಿದ ಈ ಹಣ್ಣು ಸಾವಿರ ಸಾವಿರ ವರ್ಷಗಳಿಂದ ಏಷ್ಯ ಹಾಗೂ ಯುರೋಪ್‌ ರಾಷ್ಟ್ರಗಳ ಬಹುಮುಖ್ಯ ಆಹಾರ ಪದಾರ್ಥಗಳಲ್ಲೊಂದು. ನಾನಾ ಬಗೆಯ ಗುಣ ವಿಶೇಷಗಳನ್ನು ತನ್ನದಾಗಿಸಿಕೊಂಡಿರುವ ಸೇಬಿನ ತಳಿಗಳು ಏಳೂವರೆ ಸಾವಿರಕ್ಕೂ ಹೆಚ್ಚು. ವಿವಿಧ ಸಂಸ್ಕೃತಿಗಳೊಂದಿಗೆ ಪೌರಾಣಿಕ ಪ್ರಸಂಗಗಳಲ್ಲೂ ಸೇರಿ ಹೋಗಿರುವ ಸೇಬು ವಿಶಿಷ್ಟ ಫಲ.

ಸೇಬು ಬೆಳೆಯುವ ದೇಶಗಳಲ್ಲಿ ಚೀನಾ ಮುಂಚೂಣಿಯಲ್ಲಿದೆ. ನಂತರದ ಸ್ಥಾನಗಳಲ್ಲಿ ಅಮೆರಿಕ, ನ್ಯೂಜಿಲೆಂಡ್‌, ಇಟಲಿ, ಚಿಲಿ, ಭಾರತ, ಪೋಲೆಂಡ್‌ ದೇಶಗಳಿವೆ. 2010ರ ಅಂಕಿ ಅಂಶಗಳ ಪ್ರಕಾರ ವಿಶ್ವದ ಸೇಬು ಉತ್ಪಾದನೆ 69 ಮಿಲಿಯನ್‌ ಟನ್‌ಗಳು, ಇದರಲ್ಲಿ ಅರ್ಧದಷ್ಟು ಬೆಳೆದಿದ್ದು ಚೀನಾ.

ಭಾರತದ್ದೇ ಆದ ‘ಅಂಬ್ರಿ’ ತಳಿಯನ್ನು ಬಹು ಹಿಂದಿನಿಂದಲೂ ಕಾಶ್ಮೀರದಲ್ಲಿ ಬೆಳೆಯಲಾಗುತ್ತಿತ್ತೆಂದು ಹೇಳಲಾಗಿದ್ದರೂ ಬ್ರಿಟಿಷರು ಹಿಮಾಲಯದ ಕುಲುಕಣಿವೆಯಲ್ಲಿ ಸೇಬು ಪರಿಚಯಿಸಿದ್ದು 1865ರ ಸುಮಾರಿಗೆ. ನಂತರದ ವರ್ಷಗಳಲ್ಲಿ ಸಿಮ್ಲಾ ಪ್ರದೇಶಗಳಲ್ಲೂ ಸೇಬು ಬೇಸಾಯ ಆರಂಭವಾಯಿತು. ಕಾಶ್ಮೀರ, ಅರುಣಾಲ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ– ಭಾರತದಲ್ಲಿ ಸೇಬು ಬೆಳೆಯುವ ರಾಜ್ಯಗಳು.

ಹಿಮಾಚಲ ಪ್ರದೇಶವೇ ಭಾರತದ ‘ಸೇಬು ತೊಟ್ಟಿಲು’. ಇಲ್ಲಿ ಅತಿಹೆಚ್ಚು ಕೃಷಿಭೂಮಿಯಲ್ಲಿ ಸೇಬು ಬೆಳೆಯುವ ಪ್ರಾಂತ್ಯ ‘ಕುಲು’. ಇಲ್ಲಿನ ಒಟ್ಟಾರೆ 65,186 ಹೆಕ್ಟೇರ್‌ ಬೇಸಾಯ ಭೂಮಿಯಲ್ಲಿ  28,870 ಹೆಕ್ಟೇರ್‌ ಪ್ರದೇಶದಲ್ಲಿ ಸೇಬಿನ ತೋಟಗಳಿವೆ. ಪ್ರತಿವರ್ಷ ಹಿಮಾಚಲ ಪ್ರದೇಶದಿಂದ ತಲಾ 20 ಕಿಲೋಗಳ 35 ದಶಲಕ್ಷ ಸೇಬು ತುಂಬಿದ ಪಟ್ಟಿಗೆಗಳು ದೇಶದುದ್ದಕ್ಕೂ ರವಾನೆಯಾಗುತ್ತವೆ. ಸೇಬು ವ್ಯವಸಾಯಕ್ಕೆ ಅನುಕೂಲವಾದಂತಹ ನೈಸರ್ಗಿಕ ಸಂಪನ್ಮೂಲಗಳಿದ್ದರೂ ಜಾಗತಿಕ ಮಾರುಕಟ್ಟೆ ಇರಲಿ, ಭಾರತೀಯ ಮಾರುಕಟ್ಟೆಯಲ್ಲೂ ನಮ್ಮ ಸೇಬು ಬೆಳೆಗಾರರು ಸ್ಪರ್ಧಿಸುವ ಸ್ಥಿತಿಯಲ್ಲಿಲ್ಲ.

ಗರ್ಷಾ ಗ್ರಾಮದ (ಕುಲುಕಣಿವೆ) ಚಮನ್‌ಲಾಲ್‌ ಕುಟುಂಬದ ಪರಿಸ್ಥಿತಿಯನ್ನೇ ನೋಡಿ; ಇಡೀ ಕುಟುಂಬ ಸೇಬು ಬೇಸಾಯದಲ್ಲಿ ತೊಡಗಿಕೊಂಡಿದೆ. ಆದರೆ, ಕಟಾವು ಮಾಡಿದ ಹಣ್ಣು ಅಂದೇ ಮಾರಾಟ ಮಾಡಬೇಕಾದ ಅನಿವಾರ್ಯತೆ ಬಿದ್ದಿದ್ದರಿಂದ ಕಳೆದೆರಡು ವರ್ಷಗಳಿಂದ ಚಮನ್‌ಲಾಲ್‌ ಕುಟುಂಬ ಸೇಬಿನಿಂದ ಕಹಿ ಉಂಡಿರುವುದೇ ಹೆಚ್ಚು. ಚಮನ್‌ಲಾಲ್‌ ಅವರ ಮಗ ದೀಪಕ್‌ ಉತ್ಸಾಹದಿಂದ ಸೇಬು ಕೃಷಿಯಲ್ಲಿ ತೊಡಗಿರುವರಾದರೂ ವ್ಯತಿರಿಕ್ತ ಪರಿಣಾಮಗಳಿಂದಾಗಿ ಮುಂದಿನ ವರ್ಷ ತಮ್ಮ ತೋಟಗಳನ್ನು ಗುತ್ತಿಗೆದಾರರಿಗೆ ಕೊಡಲು ಉದ್ದೇಶಿಸಿದ್ದಾರೆ.

‘ಸೇಬಿಗಿಂತ ಟೊಮ್ಯಾಟೊ ಹೆಚ್ಚಿಗೆ ಮಾರಾಟವಾದರೆ ಇನ್ನೇನು ಮಾಡಬೇಕು ಹೇಳಿ ಸಾರ್‌’ ಅನ್ನುವ ದೀಪಕ್‌, ‘ಗ್ರಾಹಕರು ಸೇಬು ಕೆ.ಜಿ.ಯೊಂದಕ್ಕೆ ಕನಿಷ್ಟ 100 ರೂಪಾಯಿ ಕೊಡಬೇಕಾಗಿದ್ದರೂ ನಮಗೆ ದಕ್ಕುತ್ತಿರುವುದು ಹತ್ತು ರೂಪಾಯಿಗಿಂತ ಕಡಿಮೆ. ಮಧ್ಯವರ್ತಿಗಳ ಬಿಗಿಮುಷ್ಠಿಯಿಂದ ವಿಮುಕ್ತಿ ಸಿಕ್ಕಾಗಲೇ ಸೇಬು ಕೃಷಿ–ಬೆಳೆಗಾರ ಉದ್ಧಾರವಾಗುವುದು’ ಎನ್ನುತ್ತಾರೆ.

ಕಟಾವು ಮಾಡಿದ ಸೇಬು ಹಣ್ಣುಗಳನ್ನು 6–8 ತಿಂಗಳು ಕಾಯ್ದಿಡುವ ಅವಕಾಶವಿದೆ. ಅದಕ್ಕೆ ಅಗತ್ಯ ಶೈತ್ಯಾಗಾರಗಳನ್ನು ನಿರ್ಮಿಸುವಲ್ಲಿ ಸರ್ಕಾರ, ಸಹಕಾರಿ ಸಂಘಗಳು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ, ಕೀಟಬಾಧೆಗಳಿಂದ ಸೇಬು ಉಳಿಸಲು ಹೊಸ ತಳಿಗಳನ್ನು ರೂಪಿಸುವ ಪ್ರಯತ್ನಗಳೂ ತೃಪ್ತಿಕರವಾಗಿಲ್ಲ ಎನ್ನುವುದು ಮತ್ತೊಬ್ಬ ಸೇಬು ಕೃಷಿಕ ಕಿನೋರ್‌ ದಶಪಾಲ್‌ ಅಭಿಪ್ರಾಯ.

ಸೇಬು ಬೆಲೆ ನೆಲ ಕಚ್ಚುತ್ತಿರುವುದಕ್ಕೆ ನೊಂದುಕೊಂಡ ಬೆಳೆಗಾರರು ಕೆಲವೆಡೆ ಕೊಯ್ಲು ಮಾಡದೆ ಬಿಟ್ಟರು. ಹಣ್ಣಾದ ಸೇಬು ಭೂಮಿ ಸೇರಿಹೋಯಿತು. ‘ವರ್ಷ ಪೂರ್ತಿ ಬೆವರು ಸುರಿಸಿ ಬೆಳೆದ ಸೇಬು ಮತ್ತೆ ನೆಲ ಸೇರಿದರೆ ಉಂಟಾಗುವ ಪರಿಸ್ಥಿತಿ ಹೇಗೆ ವಿವರಿಸುವುದು’ ಎನ್ನುವ ಕೋಡಾ ಗ್ರಾಮದ ರಾಜು ಕೂಲಿ, ‘ಸಾಗಣೆ ವೆಚ್ಚ ದಿನೇ ದಿನೇ ಏರುತ್ತಿದ್ದು ಆಮದು ಮಾಡಿಕೊಂಡ ಸೇಬು ನಮ್ಮ ಮಾರುಕಟ್ಟೆ ಪ್ರವೇಶಿಸುತ್ತಿದ್ದು ಇದರ ಪರಿಣಾಮ ಇನ್ನೂ ಕಷ್ಟ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಅವರ ಆತಂಕಕ್ಕೆ ಪೂರಕವಾಗಿ ಈಚೆಗೆ ಚೀನಾ ಸೇಬು ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ.

ಬೆಂಗಳೂರಿನಲ್ಲಿ ಸೇಬು
ಉದ್ಯಾನನಗರಿ ಬೆಂಗಳೂರು ಹಿಂದೊಮ್ಮೆ ಸೇಬು ಬೆಳೆಗೂ ಹೆಸರಾಗಿತ್ತು. ಗಂಗೇನಹಳ್ಳಿ ಭಾಗದಲ್ಲಿ ಅನೇಕ ಸೇಬು ತೋಟಗಳಿದ್ದವು. ಲಾಲ್‌ಬಾಗ್‌ನಲ್ಲೂ ಸೇಬು ಮರಗಳು ಕಾಣಸಿಗುತ್ತಿದ್ದವು. ಅದು 1940ರ ಸುಮಾರು, ರೋಗವೊಂದು ಸೇಬು ಮರಗಳಿಗೆ ಆವರಿಸಿಕೊಂಡಿತು. ಜೊತೆಗೆ ಹೆಚ್ಚಿದ ಉಷ್ಣಾಂಶ ಬೆಳೆಗೆ ವ್ಯತಿರಿಕ್ತವಾಗಿತ್ತು. ಹೀಗಾಗಿ ಸೇಬು ಮರಗಳೆಲ್ಲಾ ಒಣಗಿಹೋದವು. ಐದಾರು ದಶಕಗಳ ಬಳಿಕ ಕೆಂಪುತೋಟದಲ್ಲಿ ಮತ್ತೆ ಸೇಬು ಬೇಸಾಯ ಶುರುವಾಗಿ ಆಶಾದಾಯಕ ಬೆಳವಣಿಗೆ ಕಂಡಿದೆ. ಬೆಂಗಳೂರಿನಂತೆ ಕರ್ನಾಟಕದ ಚಿಕ್ಕಮಗಳೂರು, ದಕ್ಷಿಣಕನ್ನಡ ಜಿಲ್ಲೆಗಳಲ್ಲೂ ಸೇಬು ಮರಗಳು ಬೆಳೆಯತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT