ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ, ಚೀನಾ, ಅಮೆರಿಕ ತ್ರಿಪಕ್ಷೀಯ ಬಾಂಧವ್ಯ

ಡೆಕ್ಕನ್‌ ಹೆರಾಲ್ಡ್ ವಿಚಾರ ಸಂಕಿರಣದಲ್ಲಿ ಮೊಳಕೆಯೊಡೆದ ಪರಿಕಲ್ಪನೆ
Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ:  ಭಾರತ, ಅಮೆರಿಕ ಹಾಗೂ ಚೀನಾವನ್ನು ಒಳಗೊಂಡ ತ್ರಿಪಕ್ಷೀಯ ಬಾಂಧವ್ಯದ (ಜಿ– 3) ಹೊಸ ಪರಿಕಲ್ಪನೆಯೊಂದು ಶನಿವಾರ ಇಲ್ಲಿ ಮೊಳಕೆ ಒಡೆಯಿತು.

ಡೆಕ್ಕನ್‌ ಹೆರಾಲ್ಡ್‌ ಇಂಗ್ಲಿಷ್‌ ದೈನಿಕ  ಹಮ್ಮಿಕೊಂಡಿದ್ದ ‘21ನೇ ಶತಮಾನದ ನಿರ್ಮಾಣದಲ್ಲಿ ಭಾರತ, ಅಮೆರಿಕ ಹಾಗೂ ಚೀನಾದ ಪಾತ್ರ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಮಾವೇಶದಲ್ಲಿ  ಈ ಪರಿಕಲ್ಪನೆ ಹೊರಹೊಮ್ಮಿತು.

ಮುಂದಿನ ತಿಂಗಳು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಲಿರುವ ಮುನ್ನ ಈ ಹೊಸ ಕಲ್ಪನೆ ಒಡಮೂಡಿರುವುದು ಗಮನಾರ್ಹ.
‘ಇದು ನಿಜವಾಗಿ ಸ್ವಾಗತಾರ್ಹ­ವಾದ ಹೊಸ ವಿಚಾರ. ಇದರಿಂದ ಆರ್ಥಿಕವಾಗಿ ಪ್ರಬಲವಾದ ಮೂರು ಪ್ರಮುಖ ರಾಷ್ಟ್ರಗಳ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಯಾಗುವು­ದಾ­ದರೆ ಈ ಪ್ರಸ್ತಾವ­ವನ್ನು ಚೀನಾ ಮುಕ್ತ ಮನಸ್ಸಿ­ನಿಂದ ಒಪ್ಪಿಕೊಳ್ಳಲಿದೆ’ ಎಂದು ಸಮಾ­ವೇಶದಲ್ಲಿ ಭಾಗವಹಿಸಿದ್ದ ಭಾರತ­ದಲ್ಲಿನ ಚೀನಾ ರಾಯಭಾರಿ ಲೀ ಯುಚೆಂಗ್ ಭರವಸೆ ನೀಡಿದರು.

ಲೀ ಅವರ ಅಭಿಪ್ರಾಯವನ್ನು ಅನು­ಮೋದಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್‌, ತ್ರಿಪಕ್ಷೀಯ ಬಾಂಧವ್ಯ ಮೂರು ಸಮಾನ ರಾಷ್ಟ್ರ­ಗಳನ್ನು ಮತ್ತಷ್ಟು ಹತ್ತಿರಕ್ಕೆ ತರಲಿದೆ ಎಂದರು.

ಕೇಂದ್ರ ಮಾಜಿ ಸಚಿವ ಜೈರಾಮ್‌ ರಮೇಶ್‌ ಅವರು ಜಗತ್ತಿನ ಮೂರು ಪ್ರಮುಖ ಆರ್ಥಿಕ ಶಕ್ತಿಗಳ ಮಧ್ಯೆ ತ್ರಿಪಕ್ಷೀಯ ಹೊಂದಾಣಿಕೆ ಕುರಿತ ಪ್ರಸ್ತಾವ ಮಂಡಿಸಿದರು.

ಸದ್ಯ ಭಾರತ, ನೆರೆಯ ಚೀನಾ ಮತ್ತು ಹಳೆಯ ಮಿತ್ರರಾಷ್ಟ್ರ ರಷ್ಯ  ಜತೆ ಹಾಗೂ ಅಮೆರಿಕ, ಜಪಾನ್ ಜತೆ  ತ್ರಿಪಕ್ಷೀಯ ಸಂಬಂಧ ಹೊಂದಿದೆ.
ಸದ್ಯದ ಸೂಪರ್‌ ಪವರ್‌ ರಾಷ್ಟ್ರ­ವಾದ ಅಮೆರಿಕ ಇನ್ನೂ ಎರಡು ದಶಕ­ಗಳ ಕಾಲ ತನ್ನ ಸ್ಥಾನವನ್ನು ಉಳಿಸ­ಿಕೊಳ್ಳಲಿದೆ. ಅದಾದ ನಂತರ ಜಾಗತಿಕ ಮಟ್ಟದಲ್ಲಿ ಭಾರಿ ಬದಲಾವಣೆ­ಗಳಾ­ಗಲಿವೆ ಎಂದು ವಿ.ಕೆ. ಸಿಂಗ್‌ ಭವಿಷ್ಯ ನುಡಿದರು.

ಉಭಯ ರಾಷ್ಟ್ರಗಳ ನಡುವಿನ ಗಡಿ ಸಮಸ್ಯೆಗಳಿಗೆ ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಉದ್ಘಾಟನಾ ಸಮಾರಂಭದ ಭಾಷಣದಲ್ಲಿ ಚೀನಾದ ಲೀ ಹಾಗೂ ಭಾರತದ ಸಿಂಗ್‌ ಸಮ್ಮತಿ ಸೂಚಿಸಿದರು.

ಒಮ್ಮೆ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಹಾಗೂ ವಾಣಿಜ್ಯ ಬಾಂಧವ್ಯ ಉತ್ತಮಗೊಂಡರೆ ಗಡಿ ಸಮಸ್ಯೆ ತನ್ನಿಂದ ತಾನೇ ಪರಿಹಾರವಾಗುತ್ತದೆ ಎಂದು ಸಿಂಗ್‌ ಹೇಳಿದರು.

‘ಭವಿಷ್ಯದಲ್ಲಿ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿ ಕುರಿತು ನಾನು ತುಂಬಾ ಆಶಾವಾದಿ­ಯಾಗಿದ್ದೇನೆ’ ಎಂದು ಲೀ ಹೇಳಿದರು.
ಜಾಗತಿಕ ಮಟ್ಟದಲ್ಲಿ ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಚೀನಾ ಹಾಗೂ ಅಮೆರಿಕದ ಪಾರಮ್ಯವನ್ನು ಇಡೀ ಜಗತ್ತು ಗಮನಿಸುತ್ತಿದೆ. ಈ ಎರಡೂ ರಾಷ್ಟ್ರಗಳೊಂದಿಗೆ ಸ್ನೇಹ ಹೊಂದುವುದು ಭಾರತಕ್ಕೆ ಅಗತ್ಯ. ತ್ರಿಪಕ್ಷೀಯ ಹೊಂದಾಣಿಕೆ ಆರ್ಥಿಕವಾಗಿ ಪರಸ್ಪರ ಮೂರು ರಾಷ್ಟ್ರಗಳಿಗೂ ಲಾಭ ತರಲಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ಸಂಪಾದಕ ಕೆ.ಎನ್‌. ತಿಲಕ್‌ ಕುಮಾರ್‌ ಅವರು ಅಭಿಪ್ರಾಯಪಟ್ಟರು.

ಮೂರು ರಾಷ್ಟ್ರಗಳ ಬಾಂಧವ್ಯವು ಕೇವಲ ಅವುಗಳಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಲಾಭ ತಂದು ಕೊಡಲಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಶೀಘ್ರ ಹುವೈ ಅಭಿವೃದ್ಧಿ ಕೇಂದ್ರ
ಚೀನಾದ ಮುಂಚೂಣಿ ಟೆಲಿಕಾಂ ಕಂಪೆನಿಯಾದ ‘ಹುವೈ’ ಬೆಂಗ­ಳೂರಿ­ನಲ್ಲಿ ತನ್ನ ಅತ್ಯಂತ ದೊಡ್ಡ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುತ್ತಿದ್ದು, ಇನ್ನು ಕೆಲವೇ ವಾರಗಳಲ್ಲಿ ಇದು ಕಾರ್ಯಾ­­ರಂಭ ಮಾಡಲಿದೆ.


ಸಂಕಿರಣದ ಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಜೈರಾಮ್‌ ರಮೇಶ್‌ ಅವರು, ಹುವೈ ಕಂಪೆನಿ ಬೆಂಗಳೂರಿ­­ನಲ್ಲಿ ಅಭಿವೃದ್ಧಿ ಕೇಂದ್ರ ಆರಂಭಿಸಲಿ­ರುವ ವಿಷಯವನ್ನು ಭಾರತದಲ್ಲಿ­ರುವ ಚೀನಾ ರಾಯಭಾರಿ ಲಿ ಯೆಚುಂಗ್‌ ಅವರು ತಮ್ಮೊಡನೆ ಹಂಚಿಕೊಂಡರು ಎಂದು ತಿಳಿಸಿದರು.

ಪಾಲ್ಗೊಂಡವರು
ಬಾಂಗ್ಲಾದೇಶದ ರಾಯಭಾರಿ ಸೈಯದ್‌ ಮಝುಂ ಅಲಿ, ಬ್ರೆಜಿಲ್‌ ರಾಯ­ಭಾರ ಕಚೇರಿಯ ಉಪ ಮುಖ್ಯಸ್ಥ ಹೆನ್ರಿ ಕ್ಯಾರಿಯರ್ಸ್‌, ಪಾಕಿಸ್ತಾನ, ಮ್ಯಾನ್ಮಾರ್‌, ನೈಜೀ­ರಿಯಾ, ನೇಪಾಳ, ಭೂತಾನ್‌, ಈಜಿಪ್ಟ್‌, ವಿಯೆಟ್ನಾಂ, ಥಾಯ್ಲೆಂಡ್‌, ಸ್ವಿಟ್ಜರ್‌ಲೆಂಡ್‌, ಸಿಂಗ­ಪುರದ ರಾಜತಾಂತ್ರಿಕ ಅಧಿ­ಕಾರಿ­ಗಳು, ಹಿರಿಯ ಸರ್ಕಾರಿ ಅಧಿಕಾರಿಗಳು, ಶಿಕ್ಷಣ ತಜ್ಞರು, ಸೇನಾ ತಜ್ಞರು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT