ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಜನತಂತ್ರದಿಂದ ಕಲಿಯಲಿ ಯುರೋಪ್‌

ಐರೋಪ್ಯ ಒಕ್ಕೂಟವು ಭಾರತದ ಒಕ್ಕೂಟ ವ್ಯವಸ್ಥೆಯ ಒಂದು ಪ್ರತಿಕೃತಿ
Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಐರೋಪ್ಯ ಒಕ್ಕೂಟದಿಂದ ಹೊರಬರಲು ಜನಮತ ಸಂಗ್ರಹಣೆಯ ಮೂಲಕ ಬ್ರಿಟನ್‌  ನಿರ್ಧರಿಸಿದ್ದು ಈಗಾಗಲೇ ಹಳೆಯ ವಿಚಾರ. ಸುಮಾರು 1.74 ಕೋಟಿ ಜನ ಹೊರಬರಲು ಮತ ನೀಡಿದರೆ, ಸುಮಾರು 1.60 ಕೋಟಿ ಜನ ಹೊರಬರದಿರಲು ಮತ ನೀಡಿದ್ದಾರೆ. ಆದರೆ ಒಕ್ಕೂಟದಲ್ಲಿಯೇ ಉಳಿಯ ಬಯಸಿರುವ ಸ್ಕಾಟ್ಲೆಂಡ್‌ ತನ್ನ ಸದಸ್ಯತ್ವವನ್ನು ಉಳಿಸಿಕೊಳ್ಳಲು ಬ್ರಿಟನ್‌ನಿಂದಲೇ ಹೊರಬರಲು ಯೋಚಿಸುತ್ತಿದೆ. ಹಲವು ದೇಶಗಳೂ ಐರೋಪ್ಯ ಒಕ್ಕೂಟದಿಂದ ಹೊರಬರಲು ಯೋಚಿಸುತ್ತಿವೆ ಎಂಬ ಸುದ್ದಿಯೂ ಇದೆ. ಐರೋಪ್ಯ ಒಕ್ಕೂಟವನ್ನು ಹುಟ್ಟುಹಾಕಿದ ಪರಿಕಲ್ಪನೆಯ ಬುಡವನ್ನೇ ಇದು ಅಲ್ಲಾಡಿಸುತ್ತಿದೆ.

ವಿಶ್ವದೆಲ್ಲೆಡೆ ಒಂದು ಕಡೆ ಹಲವಾರು ದಶಕಗಳಿಂದ ಕೇಂದ್ರಾಭಿಗಾಮಿ (ಕೇಂದ್ರದ ಕಡೆ ಚಲಿಸುವ) ಶಕ್ತಿಗಳು ಕೆಲಸ ಮಾಡುತ್ತಿದ್ದರೆ ಇನ್ನೊಂದೆಡೆ ಕೇಂದ್ರಾಪಗಾಮಿ (ಕೇಂದ್ರದಿಂದ ದೂರ ಸರಿಯುವ) ಶಕ್ತಿಗಳು ಕೆಲಸ ಮಾಡುತ್ತಿವೆ. ಇದಕ್ಕೆ ವಿಶ್ವಸಂಸ್ಥೆ ರಚನೆ ಹಾಗೂ ಸೋವಿಯತ್ ಒಕ್ಕೂಟದ ವಿಘಟನೆಗಳು ಅತ್ಯಂತ ಸಶಕ್ತ ಹಾಗೂ ಸಮರ್ಪಕ ಉದಾಹರಣೆಗಳು.

ರೋಮ್‌ ನಗರವನ್ನು ಒಂದು ದಿನದಲ್ಲಿಯೇ ಕಟ್ಟಲಾಗಿಲ್ಲ ಎಂಬಂತೆ ಐರೋಪ್ಯ ಒಕ್ಕೂಟವನ್ನೂ ಒಂದು ದಿನದಲ್ಲಿ ರಚಿಸಲಾಗಲಿಲ್ಲ. ಈ ಪ್ರಕ್ರಿಯೆ ಪ್ರಾರಂಭವಾಗಿದ್ದು ಪ್ರಖರ ರಾಷ್ಟ್ರೀಯತೆಯ ಕಾರಣದಿಂದ ನಡೆದ ಎರಡು ಮಹಾಯುದ್ಧಗಳಿಂದ ಬೇಸತ್ತ ಯುರೋಪಿನ ಜನ ಯುರೋಪಿನ ಭವಿಷ್ಯ ಇರುವುದು ಸಂಘ ಜೀವನದಲ್ಲಿ ಎಂದು ಅರಿತ ನಂತರ.

1993ರಲ್ಲಿ ಫ್ರಾನ್ಸಿನ ಸಮಾಜವಾದಿ ಅಧ್ಯಕ್ಷ ಫ್ರಾಸ್ವಾಂ ಮಿತ್ತೆರಾಂ ನೇತೃತ್ವದಲ್ಲಿ ಯುರೋಪಿಯನ್ನರಿಗೆ ಒಂದೇ ಪೌರತ್ವವನ್ನು ನೀಡುವ ಯುರೋಪಿಯನ್ ಯೂನಿಯನ್ (ಐರೋಪ್ಯ ಒಕ್ಕೂಟ) ಸ್ಥಾಪಿತವಾಯಿತು. ಆದರೆ ಇದಕ್ಕಿಂತ ಮೊದಲಿನಿಂದಲೇ ಇದಕ್ಕೆ ಅಡಿಪಾಯವನ್ನು ಹಾಕಲು ಆರಂಭಿಸಲಾಗಿತ್ತು.

1951ರಲ್ಲಿ ಆರು ದೇಶಗಳನ್ನು ಸೇರಿಸಿ ಯುರೋಪಿನ ಕಲ್ಲಿದ್ದಲು ಮತ್ತು ಉಕ್ಕಿನ ಸಂಘಟನೆಯನ್ನು ಹಾಗೂ ಯುರೋಪಿನ ಆರ್ಥಿಕ ಸಂಘಟನೆಯನ್ನು (ಯುರೋಪಿಯನ್ ಸಾಮಾನ್ಯ ಮಾರುಕಟ್ಟೆ) ಸ್ಥಾಪಿಲಾಯಿತು. 1979ರಲ್ಲಿ ಯುರೋಪಿನ ರಾಷ್ಟ್ರಗಳ ನಾಗರಿಕರು ನೇರವಾಗಿ ಆಯ್ಕೆ ಮಾಡಿದ ಯುರೋಪಿಯನ್ ಪಾರ್ಲಿಮೆಂಟ್‌ ಅಸ್ತಿತ್ವಕ್ಕೆ ಬಂತು. 1995ರಲ್ಲಿ ಐರೋಪ್ಯ ಒಕ್ಕೂಟದ ಹೆಚ್ಚಿನ ರಾಷ್ಟ್ರಗಳು ‘ಯುರೋ’ ಎಂಬ ಒಂದೇ ನಾಣ್ಯವನ್ನು ಒಪ್ಪಿಕೊಂಡವು. ಇದಕ್ಕೆ ಬ್ರಿಟನ್ ಹಾಗೂ ಇನ್ನೂ ಹಲವು ದೇಶಗಳು ಅಪವಾದವಾಗಿದ್ದವು.

ಇಂದು ಒಕ್ಕೂಟದ ಪ್ರತಿ ಸದಸ್ಯ ದೇಶಕ್ಕೆ ಅದರ ಪ್ರತ್ಯೇಕ ಪಾರ್ಲಿಮೆಂಟುಗಳು, ಪ್ರತ್ಯೇಕ ಭಾಷೆಗಳು ಹಾಗೂ ಪ್ರತ್ಯೇಕ ಸಂಸ್ಕೃತಿಗಳಿದ್ದರೂ ಅದೊಂದು ಒಕ್ಕೂಟವಾಗಿ ಬೆಳೆಯುತ್ತಿದೆ. ಇಂದು ಐರೋಪ್ಯ ಒಕ್ಕೂಟದ ಯಾವುದೇ ಸದಸ್ಯ ರಾಷ್ಟ್ರದಲ್ಲಿ ಪ್ರವಾಸ ಮಾಡಲು, ವಲಸೆ ಹೋಗಲು ಒಕ್ಕೂಟದ ನಾಗರಿಕರಿಗೆ ಯಾವ ನಿರ್ಬಂಧವೂ ಇರುವುದಿಲ್ಲ.

ಇದನ್ನೆಲ್ಲ, ಅಂದರೆ ಯುರೋಪಿಯನ್ನರು 1951ರಿಂದ 1995ರವರೆಗೆ ಸುಮಾರು 45 ವರ್ಷಗಳಲ್ಲಿ ಸಾಧಿಸಿದ್ದನ್ನು, ಅಂದರೆ ಒಂದೇ ಪೌರತ್ವ, ಒಂದೇ ನಾಣ್ಯ, ಒಂದೇ ಮಾರುಕಟ್ಟೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರವಾಸ ಅಥವಾ ವಲಸೆ ಹೋಗಲು ಯಾವುದೇ ನಿರ್ಬಂಧವಿಲ್ಲದಿರುವುದು, ಐರೋಪ್ಯ ಒಕ್ಕೂಟಕ್ಕೆ  ಒಂದೇ ಪಾರ್ಲಿಮೆಂಟು ಹಾಗೂ ಸದಸ್ಯ ರಾಜ್ಯಗಳಿಗೆ ಪ್ರತ್ಯೇಕ ಪಾರ್ಲಿಮೆಂಟುಗಳು, ಇದನ್ನೆಲ್ಲ ಭಾರತ ಹತ್ತು ವರ್ಷಗಳಲ್ಲಿ, ಅಂದರೆ 1946ರ ಡಿಸೆಂಬರ್ 9ರಂದು ಮೊದಲ ಬಾರಿಗೆ ಸಂವಿಧಾನ ರಚನಾ ಸಭೆ, ಸಭೆ ಸೇರಿದ ದಿನದಿಂದ 1956ರ ಆಗಸ್ಟ್‌ 31ರಂದು ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಪುನರ್‌ರಚಿಸುವ ಕಾನೂನು ಸಂಸತ್ತಿನಲ್ಲಿ ಅಂಗೀಕೃತವಾಗುವವರೆಗಿನ ಅವಧಿಯಲ್ಲಿ ಸಾಧಿಸಿತು ಎಂದು ಹೇಳಬಹುದು. ಹಾಗೆ ನೋಡಿದರೆ ಐರೋಪ್ಯ ಒಕ್ಕೂಟ ಭಾರತದ ಒಕ್ಕೂಟದ ಒಂದು ಪ್ರತಿಕೃತಿ ಎಂದೇ ಹೇಳಬಹುದು.

ಭಾರತ ತನ್ನ ಸಂವಿಧಾನವನ್ನು ರಚಿಸುವಾಗ ಇಂಥದ್ದೇ ಹಲವಾರು ಪ್ರಶ್ನೆಗಳನ್ನು ಎದುರಿಸಿತ್ತು. 600ಕ್ಕಿಂತ ಹೆಚ್ಚು ರಾಜಸಂಸ್ಥಾನಗಳಿದ್ದ, ನೂರಾರು ಭಾಷೆಗಳು, ನೂರಾರು ಧರ್ಮಗಳು, ನೂರಾರು ಸಂಸ್ಕೃತಿಗಳು, ಸಾವಿರಾರು ಜಾತಿಗಳಿರುವ ಭಾರತವನ್ನು ಒಂದು ರಾಷ್ಟ್ರವನ್ನಾಗಿ ಕಟ್ಟಬಹುದೇ ಎನ್ನುವುದು ಅಂದು ಅತ್ಯಂತ ದೊಡ್ಡ ಪ್ರಶ್ನೆಯಾಗಿತ್ತು. ಸಾಲದ್ದಕ್ಕೆ ಹಿಂದೂಗಳು, ಮುಸ್ಲಿಮರು ಎರಡು ಬೇರೆ ಬೇರೆ ರಾಷ್ಟ್ರಗಳು ಎಂದು ಭಾರತದ ಕೋಮುವಾದಿಗಳು ವಾದಿಸಿ ಪ್ರಶ್ನೆಯನ್ನು ಇನ್ನೂ ಜಟಿಲಗೊಳಿಸಿದ್ದರು.

ಮೊಘಲರು ಹಾಗೂ ಬ್ರಿಟಿಷರ ಕೇಂದ್ರೀಕೃತ ಆಡಳಿತವು ಭಾರತದಲ್ಲಿ ಒಗ್ಗಟ್ಟನ್ನು ಉಳಿಸಿಕೊಂಡು ಬಂದಿತ್ತು ಎಂಬ ವಾದವೊಂದಿತ್ತು. ಅದಕ್ಕೆದುರಾಗಿ ಭಾರತದ ವೈವಿಧ್ಯಕ್ಕೆ ಅವಕಾಶ ನೀಡದಿದ್ದರೆ ಅದು ಒಟ್ಟಾಗಿ ಉಳಿಯಲಾರದು ಎಂಬ ವಾದವೂ ಇತ್ತು. ಆದುದರಿಂದ ಸ್ವತಂತ್ರ ಭಾರತದಲ್ಲಿಯೂ ಒಂದು ಅತ್ಯಂತ ಬಲಿಷ್ಠವಾದ ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ಸಂವಿಧಾನವನ್ನು ರಚಿಸಬೇಕೋ ಅಥವಾ ಭಾರತದ ವೈವಿಧ್ಯವನ್ನು ಪೋಷಿಸುವಂತೆ ಬಲಿಷ್ಠ ರಾಜ್ಯ ಸರ್ಕಾರಗಳಿಗೆ ಅವಕಾಶ ಇರಬೇಕೋ ಎನ್ನುವುದೇ ಸಂವಿಧಾನ ರಚನಾ ಸಭೆಯ ಮುಂದಿನ ಪ್ರಮುಖ ಪ್ರಶ್ನೆಯಾಗಿತ್ತು.

ಭಾರತ ಹಲವು ರಾಷ್ಟ್ರಗಳ ಒಂದು ಒಕ್ಕೂಟವಾಗಿರಬೇಕೋ ಅಥವಾ ಒಂದೇ ರಾಷ್ಟ್ರದ ಹಲವು ರಾಜ್ಯಗಳ ಒಕ್ಕೂಟವಾಗಿರಬೇಕೋ ಎನ್ನುವುದು ಇದೇ ಪ್ರಶ್ನೆಯ ಇನ್ನೊಂದು ಮಗ್ಗುಲು. ಮೊದಲಿಗೆ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ ಬಲಿಷ್ಠ ರಾಜ್ಯಗಳನ್ನು ಬಯಸಿತ್ತು. ಆದರೆ ಸಂವಿಧಾನವನ್ನು ರಚಿಸುವ ಹೊತ್ತಿಗೆ ದೇಶದಲ್ಲಿ ಹೊತ್ತಿಕೊಳ್ಳಲಾರಂಭಿಸಿದ್ದ ಕೋಮುವಾದದ ದಳ್ಳುರಿಯಿಂದಾಗಿ ಬಲಿಷ್ಠ ಕೇಂದ್ರ ಸರ್ಕಾರದ ಅವಶ್ಯಕತೆ ಉಂಟಾಗಿದ್ದರಿಂದ ಕೊನೆಗೆ ಇವೆರಡರ ನಡುವಿನ ಮಧ್ಯಮ ಮಾರ್ಗವನ್ನು ಸಂವಿಧಾನ ಸಭೆ ಅನುಸರಿಸಿತು.

ಸ್ವಾತಂತ್ರ್ಯ ಬಂದ ಹೊಸತರಲ್ಲಿಯೇ ಭಾರತ ಸದ್ದುಗದ್ದಲವಿಲ್ಲದೆ ಎರಡು ಮೌನ ಕ್ರಾಂತಿಗಳನ್ನು ಮಾಡಿತು. ಮೊದಲನೆಯದು, ಅದು ಭಾರತದ ಎಲ್ಲಾ ಜನರಿಗೆ ಒಂದೇ ಪೌರತ್ವವನ್ನು ನೀಡುವ ಮೂಲಕ ದೇಶವು ಹಲವು ರಾಜ್ಯಗಳ ಒಂದೇ ರಾಷ್ಟ್ರ ಎನ್ನುವುದನ್ನು ಖಚಿತಪಡಿಸಿತು. ಸಾರ್ವತ್ರಿಕ ಮತದಾನ ಪದ್ಧತಿಯನ್ನು ಜಾರಿಗೊಳಿಸುವ ಮೂಲಕ ಈ ಪರಿಕಲ್ಪನೆಗೆ ಒತ್ತು ಕೊಟ್ಟಿತು. ಅದುವರೆಗೆ ಭಾರತದಲ್ಲಿ ವಯಸ್ಕ ಮತದಾನ ಪದ್ಧತಿಯಲ್ಲ, ಆಸ್ತಿ ಆಧಾರಿತ ಮತದಾನ ಪದ್ಧತಿ ಜಾರಿಯಲ್ಲಿತ್ತು.

ಎರಡನೆಯದು ಹರಿದು ಹಂಚಿಹೋಗಿದ್ದ ಭಾರತ ಒಂದುಗೂಡಿ ಎರಡು ಹಂತಗಳಲ್ಲಿ ಒಂದು ರಾಷ್ಟ್ರವಾಗಿ ಮೂಡಿಬಂದಿತು. ಮೊದಲನೆಯ ಹಂತದಲ್ಲಿ ನೂರಾರು ರಾಜಸಂಸ್ಥಾನಗಳನ್ನು ದೇಶದಲ್ಲಿ ಸೇರಿಸಿ ಎರಡನೆಯ ಹಂತದಲ್ಲಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಪುನರ್‌ ವಿಂಗಡಣೆ ಮಾಡುವ ಮೂಲಕ ಭಾರತ ಒಂದು ರಾಷ್ಟ್ರವಾಗಿ ರೂಪುಗೊಂಡಿತು. ಸೋವಿಯತ್ ಒಕ್ಕೂಟದ ಸಂವಿಧಾನ ತನ್ನ ಘಟಕ ರಾಜ್ಯಗಳಿಗೆ ಸೋವಿಯತ್ ಒಕ್ಕೂಟದಿಂದ ಹೊರಹೋಗುವ ಅಧಿಕಾರವನ್ನು ನೀಡಿದ್ದರೂ ಅಲ್ಲಿ ರೂಪುಗೊಂಡ ಕೇಂದ್ರೀಕೃತ ರಾಜ್ಯ ವ್ಯವಸ್ಥೆ ಆ ಅಧಿಕಾರವನ್ನು ಬರೀ ಮರೀಚಿಕೆಯನ್ನಾಗಿಸಿ ಒಕ್ಕೂಟದ ಒಗ್ಗಟ್ಟನ್ನು ಸಾಧಿಸಿತ್ತು.

ಭಾರತದ ಸಂವಿಧಾನ ತನ್ನ ಘಟಕ ರಾಜ್ಯಗಳಿಗೆ ಭಾರತದ ಒಕ್ಕೂಟದಿಂದ ಹೊರಹೋಗುವ ಅಧಿಕಾರವನ್ನು ನೀಡದಿದ್ದರೂ ರಾಜ್ಯಗಳಿಗೆ ಸಾಕಷ್ಟು ಅಧಿಕಾರವನ್ನು ನೀಡುವ ಮೂಲಕ ಈ ಸಾಧ್ಯತೆಯನ್ನು ಅಲ್ಲಗಳೆಯದಂತೆ ಮಾಡಿತ್ತು. ಆದರೆ ಒಂದು ಕಡೆಗೆ ಸೋವಿಯತ್ ಒಕ್ಕೂಟದ ಕೇಂದ್ರೀಕೃತ ರಾಜ್ಯ ವ್ಯವಸ್ಥೆ ಒಕ್ಕೂಟದ ಒಗ್ಗಟ್ಟನ್ನು ಉಳಿಸುವಲ್ಲಿ ಸೋತುಹೋದರೆ ಇನ್ನೊಂದೆಡೆಗೆ ಭಾರತದಲ್ಲಿ ಘಟಕ ರಾಜ್ಯಗಳಿಗೆ ನೀಡಿದ ಈ ಅಧಿಕಾರಗಳೇ, ಆಯಾ ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಹಕಾರಿಯಾಗಿ, ಆ ರಾಜ್ಯಗಳು ಭಾರತದ ಒಕ್ಕೂಟದಿಂದ ಹೊರಹೋಗದಂತೆ ಮಾಡಿದವು.

ಇಂದು ಐರೋಪ್ಯ ಒಕ್ಕೂಟ ಎದುರಿಸುತ್ತಿರುವ ವಿಘಟನೆಯ ಪ್ರಕ್ರಿಯೆಯನ್ನು ಭಾರತ ಹಿಂದೆಯೇ ಎದುರಿಸಿ ಪರಿಹರಿಸಿದೆ ಕೂಡ. ಸ್ವಾತಂತ್ರ್ಯಾನಂತರ ಸರ್ದಾರ್‌ ವಲ್ಲಭಭಾಯಿ ಪಟೇಲರು ರಾಜಸಂಸ್ಥಾನಗಳನ್ನು ಭಾರತದಲ್ಲಿ ಸೇರುವಂತೆ ಮಾಡುವ ಮೂಲಕ ಜುನಾಗಡ ಹಾಗೂ ಹೈದರಾಬಾದ್‌ಗಳ ಸಂದರ್ಭದಲ್ಲಿ ಕೇಂದ್ರಾಪಗಾಮಿ ಶಕ್ತಿಗಳನ್ನು ಹತ್ತಿಕ್ಕುವ ಮೂಲಕ ದೇಶದ ಒಕ್ಕೂಟವನ್ನು ಗಟ್ಟಿಗೊಳಿಸಿದರು. ಆದರೆ ನಂತರ ಕೂಡ ಪಂಜಾಬಿನಲ್ಲಿ, ತಮಿಳುನಾಡಿನಲ್ಲಿ, ಪೂರ್ವೋತ್ತರ ರಾಜ್ಯಗಳಲ್ಲಿ ಕೇಂದ್ರಾಪಗಾಮಿ ಶಕ್ತಿಗಳು ತಲೆ ಎತ್ತಿದರೂ ಅಲ್ಲಿ ಭಾರತದ ಜನತಂತ್ರ ಈ ಶಕ್ತಿಗಳನ್ನು ಸೋಲಿಸಿತು. ಇಂದು ಕಾಶ್ಮೀರದಲ್ಲಿ ಮಾತ್ರ ಈ ಶಕ್ತಿಗಳು ಇನ್ನೂ ಸಕ್ರಿಯವಾಗಿವೆ. ಆದರೆ ಅಲ್ಲಿ ಕೂಡ ಜನತಂತ್ರ ಇಂದಲ್ಲ ನಾಳೆ ಈ ಶಕ್ತಿಗಳನ್ನು ಸೋಲಿಸಲಿದೆ. 

ಮೊದಲಿಗೆ ಸೋವಿಯತ್ ಒಕ್ಕೂಟದ ಘಟಕಗಳಾಗಿದ್ದ ಹಂಗೆರಿ, ಜೆಕೊಸ್ಲೊವಾಕಿಯ, ಪೋಲೆಂಡ್‌ ಮೊದಲಾದ ದೇಶಗಳು ಸೋವಿಯತ್ ಒಕ್ಕೂಟದ ಪತನದ ನಂತರ 2004ರಲ್ಲಿ ಐರೋಪ್ಯ ಒಕ್ಕೂಟದ ಸದಸ್ಯತ್ವ ಪಡೆದವು. ಐರೋಪ್ಯ ಒಕ್ಕೂಟದಲ್ಲಿ  ಮುಕ್ತ ವಲಸೆಗೆ ಅವಕಾಶವಿರುವುದರಿಂದ ಈ ದೇಶಗಳಲ್ಲಿದ್ದ ಕಾರ್ಮಿಕರು ಪಶ್ಚಿಮ ಯುರೋಪಿನ ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ ಮೊದಲಾದ ದೇಶಗಳಿಗೆ ವಲಸೆ ಹೋಗಿ ಅಲ್ಲಿಯ ಕಾರ್ಮಿಕರಿಗಿಂತ ಕಡಿಮೆ ಸಂಬಳಕ್ಕೆ ದುಡಿಯಲು ಪ್ರಾರಂಭಿಸಿರುವುದರಿಂದ ಸ್ಥಳೀಯ ಕಾರ್ಮಿಕರಲ್ಲಿ ಈ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿದೆ. ಒಕ್ಕೂಟದ ಹಲವು ರಾಷ್ಟ್ರಗಳಲ್ಲಿ ಒಕ್ಕೂಟವನ್ನು ತ್ಯಜಿಸಲು ಈ ಕಾರಣದಿಂದಲೇ ಒತ್ತಾಯ ಉಂಟಾಗುತ್ತಿದೆ.

ಇಂತಹ ಒತ್ತಡಗಳನ್ನು ಭಾರತವೂ ಅನುಭವಿಸಿದೆ. ಉದಾಹರಣೆಗೆ ಪ್ರಮುಖವಾಗಿ ಬಿಹಾರ ಹಾಗೂ ಒಡಿಶಾದಿಂದ ಕಾರ್ಮಿಕರು ಕೆಲಸವನ್ನು ಅರಸಿ ಬೇರೆಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಸ್ಥಳೀಯ ಜನರಿಗೆ ಈ ಬಗ್ಗೆ ಅಸಮಾಧಾನ ಬೆಳೆಯುತ್ತಿರುವುದನ್ನು ಮುಂಬೈನ  ಶಿವಸೇನೆ, ವಲಸೆ ಬರುವವರ ವಿರುದ್ಧ ದನಿ ಎತ್ತುವುದರಲ್ಲಿ ಕಾಣಬಹುದು. ಆದರೆ ಭಾರತ ಇವೆಲ್ಲ ತೊಡಕುಗಳನ್ನು ಮೀರಿ ನಿಲ್ಲುವಲ್ಲಿ ಯಶಸ್ವಿಯಾಗುತ್ತಿದೆ. 

ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಬೇಕೆಂಬ ಸಲಹೆ ಬಂದಾಗ ಅಂದು ಇಂಗ್ಲೆಂಡಿನ ಪ್ರಧಾನ ಮಂತ್ರಿಯಾಗಿದ್ದ ಕನ್ಸರ್ವೆಟಿವ್ ಪಕ್ಷದ ವಿನ್ಸ್‌ಟನ್‌ ಚರ್ಚಿಲ್‌ ಅವರು, ಅರೆನಗ್ನ ನಿರಕ್ಷರಿ ಭಾರತೀಯರಿಗೆ ಸ್ವಾತಂತ್ರ್ಯವನ್ನು ಕೊಟ್ಟರೆ ಹತ್ತು ವರ್ಷಗಳಲ್ಲಿ ಅದನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು.

1983ರಲ್ಲಿ ಬ್ರಿಟನ್ನಿನ ಲೇಬರ್ ಪಕ್ಷದ ನಾಯಕರಾಗಿ ಆಯ್ಕೆಯಾದ ನೀಲ್ ಕಿನ್ನೊಕ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಸಮಾಜವಾದಿ ಅಧ್ಯಯನ ಕೇಂದ್ರದ ಸದಸ್ಯರು ಅವರನ್ನು ಭೇಟಿಯಾಗಿದ್ದರು. ಮಾತುಕತೆಯ ಮಧ್ಯೆ ಜನತಂತ್ರದ ವಿಷಯದಲ್ಲಿ ಭಾರತ ಇನ್ನೂ ಬ್ರಿಟನ್ನಿನಿಂದ ಎಷ್ಟೋ ಕಲಿಯಬೇಕಾಗಿದೆ ಎಂದು ಕೇಂದ್ರದ ಸದಸ್ಯರು ಹೇಳಿದಾಗ, ಕಿನ್ನೊಕ್ ಬ್ರಿಟನ್ನೇ ಭಾರತದಿಂದ ಕಲಿಯಬೇಕಿದೆ ಎಂದು ಹೇಳಿದ್ದರು.

‘ಬ್ರಿಟನ್ನಿನಲ್ಲಿ ಒಂದೇ ಭಾಷೆ, ಒಂದೇ ಧರ್ಮ, ಒಂದೇ ಸಂಸ್ಕೃತಿಯನ್ನು ಅನುಸರಿಸುವ ಜನರೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಅಂತಹ ದೇಶದಲ್ಲಿ ಜನತಂತ್ರವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುವುದು ಕಷ್ಟದ ಕೆಲಸವೇನಲ್ಲ. ಆದರೆ, ನಿಮ್ಮ ದೇಶದಲ್ಲಿ ನೂರಾರು ಭಾಷೆಗಳು, ನೂರಾರು ಧರ್ಮಗಳು, ನೂರಾರು ಸಂಸ್ಕೃತಿಗಳು, ಸಾಲದ್ದಕ್ಕೆ ಸಾವಿರಾರು ಜಾತಿಗಳಿವೆ, ಇಂತಹ ದೇಶದಲ್ಲಿ ನೀವು ಜನತಂತ್ರವನ್ನು ಇದುವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು, ಅದನ್ನು ಬೆಳೆಸುತ್ತಿರುವುದು ಅತ್ಯಂತ ಆಶ್ಚರ್ಯಕರ ಹಾಗೂ ಶ್ಲಾಘನೀಯ’ ಎಂದು ವಿವರಿಸಿದ್ದರು. ಇಂದು ಯುರೋಪಿನಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಇದು ನಿಜವೇನೋ ಎನಿಸುತ್ತದೆ.

ಕೇಂದ್ರಾಭಿಗಾಮಿ ಶಕ್ತಿಗಳಿಗೆ ಒತ್ತು ಕೊಟ್ಟು ಹೇಗೆ ಒಗ್ಗಟ್ಟನ್ನು ಉಳಿಸಿಕೊಳ್ಳಬಹುದು ಎನ್ನುವುದನ್ನು, ವೈವಿಧ್ಯದ ಮಧ್ಯೆ ಏಕತೆಯನ್ನು ಹೇಗೆ ಕಾಪಾಡಿಕೊಂಡು ಬರಬಹುದು ಎನ್ನುವುದನ್ನು ಯುರೋಪು ಇಂದು ಭಾರತದಿಂದ ಕಲಿಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT