ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಬೆಂಬಲ ನೀಡಲಿದೆ

ಹವಾಮಾನ ವೈಪರೀತ್ಯ ತಡೆ: ಮೋದಿ ಭರವಸೆ
Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಸಿಂಗಪುರ (ಪಿಟಿಐ/ ಐಎಎನ್‌ಎಸ್‌): ‘ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಯಲು ವಿಶ್ವ ಸಮುದಾಯ ನಡೆಸುತ್ತಿರುವ ಪ್ರಯತ್ನಕ್ಕೆ ಭಾರತ ಬೆಂಬಲ ನೀಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಅಮೆರಿಕ ವ್ಯಕ್ತಪಡಿಸಿದ್ದ ಆತಂಕಕ್ಕೆ ಉತ್ತರ ನೀಡಿದೆ.

ಸಿಂಗಪುರ ಪ್ರವಾಸದ ಕೊನೆಯ ದಿನವಾದ ಮಂಗಳವಾರ ಭಾರತದ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರುವ ಭಾರತಕ್ಕೆ ಅಪಾರ ಪ್ರಮಾಣದ ಇಂಧನದ ಅವಶ್ಯತೆಯಿದೆ. ಆದರೆ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಎದುರಾಗುವ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದರು.

ಪ್ಯಾರಿಸ್‌ನಲ್ಲಿ ನವೆಂಬರ್‌ 30 ರಿಂದ ಆರಂಭವಾಗಲಿರುವ ಹವಾಮಾನ ವೈಪರೀತ್ಯ ಕುರಿತ ಸಮಾವೇಶದಲ್ಲಿ ಭಾರತ ‘ಸವಾಲಾಗಲಿದೆ’ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಜಾನ್‌ ಕೆರ್ರಿ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದರು.

ಎಲ್ಲ ಗ್ರಾಮಗಳಿಗೆ ವಿದ್ಯುತ್‌: ‘2022ರ ವೇಳೆ ಭಾರತದ ಎಲ್ಲ ಗ್ರಾಮಗಳಿಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು’ ಎಂಬ ಭರವಸೆಯನ್ನು ಮೋದಿ ನೀಡಿದರು.

ಐಎನ್‌ಎ ಸ್ಮಾರಕಕ್ಕೆ ಗೌರವ: ಮೋದಿ ಅವರು ಇಲ್ಲಿರುವ ಇಂಡಿಯನ್‌ ನ್ಯಾಷನಲ್‌ ಆರ್ಮಿಯ (ಐಎನ್‌ಎ) ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಜೀವತೆತ್ತ ಸೈನಿಕರನ್ನು ನೆನಪಿಸಿದ ಮೋದಿ ಅವರು ಸ್ಮಾರಕಕ್ಕೆ ಗೌರವ ಸಲ್ಲಿಸಿದರು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಹೇಳಿದ್ದಾರೆ. ಸ್ಮಾರಕದ ಬಳಿ ಇರಿಸಲಾಗಿದ್ದ ಸುಭಾಷ್‌ ಚಂದ್ರ ಬೋಸ್‌ ಅವರ ಭಾವಚಿತ್ರಕ್ಕೆ ಮೋದಿ ವಂದಿಸಿದರು.

ಭಾರತಕ್ಕೆ ವಾಪಸ್‌: ನಾಲ್ಕು ದಿನಗಳ ಮಲೇಷ್ಯಾ ಮತ್ತು ಸಿಂಗಪುರ ಪ್ರವಾಸ ಕೊನೆಗೊಳಿಸಿದ ಮೋದಿ ಅವರು ಮಂಗಳವಾರ ರಾತ್ರಿ ನವದೆಹಲಿಗೆ ವಾಪಸಾದರು.
*
ಹತ್ತು ಒಪ್ಪಂದಗಳಿಗೆ ಸಹಿ
ಸಿಂಗಪುರ (ಪಿಟಿಐ):
ಭಾರತ ಮತ್ತು ಸಿಂಗಪುರ 10 ಒಪ್ಪಂದಗಳಿಗೆ ಸಹಿ ಹಾಕಿದ್ದು, ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿವೆ. ಪ್ರಧಾನಿ ಮೋದಿ ಮಂಗಳವಾರ ಸಿಂಗಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆ ಬಳಿಕ ಉಭಯ ದೇಶಗಳ ನಾಯಕರ ಸಮ್ಮುಖದಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಸೈಬರ್‌ ಭದ್ರತೆ, ನಾಗರಿಕ ವಿಮಾನಯಾನ ಮತ್ತು ನೌಕಾಯಾನ ಕ್ಷೇತ್ರಗಳಲ್ಲಿ ಒಪ್ಪಂದ ನಡೆದಿವೆ. ‘ಭಾರತ– ಸಿಂಗಪುರ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಿವೆ. ಈಗ ಇರುವ ಒಪ್ಪಂದಗಳನ್ನು ನವೀಕರಿಸಿದ್ದು, ರಾಜಕೀಯ, ಭದ್ರತೆ ಮತ್ತು ರಕ್ಷಣಾ ಸಹಕಾರ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಪ್ರಾದೇಶಿಕ ಭದ್ರತೆ ಮತ್ತು ಅಭಿವೃದ್ಧಿಗೆ ಇದು ನೆರವಾಗಲಿದೆ’ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
*
ಇಡೀ ವಿಶ್ವ ಭಾರತದ ಮೇಲೆ ಅಪಾರ ನಂಬಿಕೆ ಇರಿಸಿದೆ. ಇದಕ್ಕೆ ಮೋದಿ ಕಾರಣರಲ್ಲ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೇ ಕಾರಣ.
-ನರೇಂದ್ರ ಮೋದಿ,  
ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT