ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ-–ಪಾಕಿಸ್ತಾನದಲ್ಲೊಂದು ದುರಂತ ಪ್ರೇಮಕತೆ

ಪೊಲೀಸರ ಸಂಶಯಕ್ಕೆ ಬಲಿಯಾಯಿತು ಆತನ ಯೌವನದ ಬಹುಮುಖ್ಯ ಸಮಯ
Last Updated 4 ಮೇ 2016, 6:29 IST
ಅಕ್ಷರ ಗಾತ್ರ

ಪ್ರೇಮಪಾಶದಲ್ಲಿ ಬೀಳುವುದು ಅಪಾಯಕಾರಿ ಎನ್ನುತ್ತಾರೆ. ಆದರೆ ಉತ್ತರ ಭಾರತದ ರಾಮಾಪುರದಲ್ಲಿ ಬೆಳೆದು ಹರೆಯಕ್ಕೆ ಬಂದಿದ್ದ ಮೊಹಮ್ಮದ್ ಜಾವೇದ್‌ಗೆ ತನ್ನ ಪಾಕಿಸ್ತಾನಿ ಸಂಬಂಧಿಯೊಬ್ಬರಲ್ಲಿ ಪ್ರೇಮಾಂಕುರವಾದಾಗ, ಮುಂದೆ ಅದು ತನಗೆ ‘ಭಯೋತ್ಪಾದಕ’ ಎಂಬ ಹಣೆಪಟ್ಟಿ ಹಚ್ಚುತ್ತದೆ ಎಂದಾಗಲಿ, ಜೈಲಿನಲ್ಲಿ ಹನ್ನೊಂದೂವರೆ ವರ್ಷ ಕೊಳೆಯುವಂತೆ ಮಾಡುತ್ತದೆ ಎಂದಾಗಲಿ ಕಲ್ಪನೆಯೂ ಇರಲಿಲ್ಲ.

ನ್ಯಾಯಾಲಯ ಈ ಆರೋಪಗಳಿಂದ ತಮ್ಮನ್ನು ಮುಕ್ತಗೊಳಿಸಿದ ಎರಡು ವರ್ಷಗಳ ನಂತರ ತಮ್ಮ ಅಸಾಧಾರಣ ಪ್ರೇಮಕತೆಯನ್ನು ಬಿಬಿಸಿಯೊಡನೆ ಅವರು ಹಂಚಿಕೊಂಡಿದ್ದಾರೆ. ಪ್ರೇಮದ ಸೆಳೆತ, ಪರಸ್ಪರ ಬರೆದ ಪತ್ರಗಳು, ಭಾರತೀಯ ಅಧಿಕಾರಿಗಳಿಂದಾದ ತಮ್ಮ ಅಪಹರಣ ಮತ್ತು ಅವರು ಕೊಟ್ಟ ಹಿಂಸೆ, ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ವಿವರಿಸಿದ್ದಾರೆ. ಇನ್ನೂ ಮನಕಲಕುವ ವಿಚಾರವೆಂದರೆ, ಆತ ತನ್ನ ಪ್ರೇಯಸಿಯನ್ನು ಸೇರದೆ ಆಕೆಯಿಂದ ದೂರಾಗಬೇಕಾಗಿ ಬಂದದ್ದು.

ಈಗ ಜಾವೇದ್‌ಗೆ 33 ವರ್ಷ. ಅವರು ಮೊದಲ ಸಲ ಮೊಬಿನಾಳನ್ನು ಕಂಡದ್ದು 1999ರಲ್ಲಿ. ಭಾರತದ ವಿಭಜನೆಯಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಸಂಬಂಧಿಗಳನ್ನು ನೋಡಲು ತಮ್ಮ ತಾಯಿಯನ್ನು ಕರಾಚಿಗೆ ಕರೆದುಕೊಂಡು ಹೋದಾಗ. ಮೊದಲ ನೋಟದಲ್ಲಿ ಒಬ್ಬರಿಗೊಬ್ಬರು ಮನಸೋತರು.

‘ಭೆಟ್ಟಿಯಾಗಿ ತಿಂಗಳಲ್ಲೇ ನಾವು ಪ್ರೀತಿಸುವುದಾಗಿ ಒಬ್ಬರಿಗೊಬ್ಬರು ಹೇಳಿಕೊಂಡೆವು’ ಎಂದು ಜಾವೇದ್ ನನಗೆ ಹೇಳಿದ್ದು ತನ್ನ ಪಾಲಕರು, ಸಹೋದರರು ಮತ್ತು ಅವರ ಸಂಸಾರಗಳ ಜೊತೆಗೂಡಿ ಇರುವ ಆತನ ಪುಟ್ಟ ಮನೆಗೆ ನಾನು ಹೋದಾಗ. ‘ಕುಟುಂಬದ ಮದುವೆ ಸಮಾರಂಭದಲ್ಲಿ ನಾವು ಸೇರಿದ್ದೆವು. ಆದರಾಕೆಗೆ ಅದೇನೋ ಅಭದ್ರತೆ ಕಾಡುತ್ತಿತ್ತು. ಪಕ್ಕಕ್ಕೆ ನನ್ನನ್ನು ಕರೆದು, ನಾನು ಬೇರಾವ ಹುಡುಗಿಯನ್ನೂ ನೋಡಕೂಡದೆಂದೂ ಮತ್ತು ನನ್ನನ್ನು ಪ್ರೀತಿಸುತ್ತಿರುವುದಾಗಿಯೂ ಹೇಳಿದಳು. ನನಗೂ ಹಾಗೇ ಎನಿಸುತ್ತಿದೆ ಎಂದು ನಾನು ಆಕೆಗೆ ಹೇಳಿದೆ’ ಎಂದರು.

ಜಾವೇದ್ ಕರಾಚಿಯಲ್ಲಿದ್ದ ಮೂರೂವರೆ ತಿಂಗಳಲ್ಲಿ ಅವರಿಬ್ಬರ ಪ್ರೇಮ ಅರಳಿ ಬೇರು ಬಿಟ್ಟಿತು. ‘ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಆಕೆ ಬೆಳಿಗ್ಗೆ ಮನೆಬಿಟ್ಟು ಬರುತ್ತಿದ್ದಳು. ಕಾಲೇಜು ಗೇಟ್‌ನಲ್ಲಿ ಸಂಧಿಸಿ, ನಂತರ ನಾವು ಸಿಪಾರಿ ಪಾರ್ಕ್‌ನಲ್ಲಿ ಕಾಲ ಕಳೆಯುತ್ತಿದ್ದೆವು’ ಎಂದು ಜಾವೇದ್‌ ನೆನೆಯುತ್ತಾರೆ.
ಭಾರತಕ್ಕೆ ಮರಳಿದ ನಂತರ, ಈ ಟಿ.ವಿ. ರಿಪೇರಿ ಕಸುಬುದಾರ ಗಳಿಸಿದ್ದನ್ನೆಲ್ಲ, ತಾನು  ‘ಗುಡಿಯಾ’ (ಗೊಂಬೆ) ಎಂದು ಈಗಲೂ ಕರೆಯುವ ಮೊಬಿನಾಗೆ ಕರೆ ಮಾಡಲು ಖರ್ಚು ಮಾಡುತ್ತಿದ್ದರು. ‘ಆಗಿನ್ನೂ ಮೊಬೈಲ್‌ ಫೋನ್‌ಗಳಿರಲಿಲ್ಲ. ನಾನು ಟೆಲಿಫೋನ್‌ ಬೂತ್‌ಗೆ ಹೋಗಿ ಕರೆ ಮಾಡುತ್ತಿದ್ದೆ. ದುಬಾರಿ ಇತ್ತು. ಆಕೆಯೊಡನೆ ಒಂದು ನಿಮಿಷ ಮಾತಾಡಲು ₹ 62 ಖರ್ಚು ಮಾಡುತ್ತಿದ್ದೆ’ ಎಂದರು.

ವರ್ಷದ ನಂತರ ಕರಾಚಿಗೆ ಮತ್ತೆ ಹೋದಾಗ ಎರಡು ತಿಂಗಳು ಅಲ್ಲಿದ್ದರು. ಅಷ್ಟೊತ್ತಿಗೆ ಎರಡು ಕುಟುಂಬಗಳಿಗೂ ಅವರ ಹೃದಯಗಳ ಮಿಡಿತದ ಅರಿವಾಗಿತ್ತು. ಅವರನ್ನು ಒಂದುಗೂಡಿಸಲು ಎರಡೂ ಕಡೆಯಿಂದ ವಿರೋಧಇರಲಿಲ್ಲ. ಆದರೆ ಮೊಬಿನಾ ಕಡೆಯವರು ಜಾವೇದ್‌ ಪಾಕಿಸ್ತಾನಕ್ಕೆ ವಲಸೆ ಬರಬೇಕೆಂದು ಬಯಸಿದರು; ಜಾವೇದ್ ಮತ್ತು ಆತನ ಕುಟುಂಬ ಮೊಬಿನಾ ಭಾರತಕ್ಕೆ ಬರಬೇಕೆಂದು ಬಯಸಿತು.

‘ನಾನು ಆ ಸಲ ಹೊರಟು ನಿಂತಾಗ ಆಕೆ ಒಂದು ಮಾತು ಹೇಳಿದಳು. ಈಗ ನೀನು ಹೋಗು, ನಾನು ನನ್ನ ಕುಟುಂಬಕ್ಕೆ ಮನವರಿಕೆ ಮಾಡಿಕೊಡುತ್ತೇನೆ, ಆಗ ನೀನು ಬಂದು ಕರೆದುಕೊಂಡು ಹೋಗು ಎಂದಳು. ಆದರೆ ಮತ್ತೆ ನಾನು ಮರಳಿ ಅಲ್ಲಿಗೆ ಹೋಗುವುದಿಲ್ಲವೆಂದಾಗಲಿ, ಆಕೆಯನ್ನು ಮತ್ತೆ ನೋಡುವುದೇ ಇಲ್ಲವೆಂದಾಗಲಿ ಗೊತ್ತೇ ಇರಲಿಲ್ಲ’ ಎಂದು ಹೇಳಿದರು.

ಮುಂದಿನ ಎರಡು ವರ್ಷಗಳಲ್ಲಿ ಜಾವೇದ್‌ ಮೊಬಿನಾಗೆ ಆಗಾಗ ಕರೆ ಮಾಡುತ್ತಿದ್ದರು. ಇಬ್ಬರೂ ಪತ್ರಗಳನ್ನು ಬರೆಯುತ್ತಿದ್ದರು. ಮೊದಲ ಪತ್ರ ಬಂದಾಗ ಜಾವೇದ್‌ಗೆ ಪೇಚಿಗಿಟ್ಟುಕೊಂಡಿತು. ಆತ ಓದಿದ್ದು ಕಡಿಮೆ. ಮೊಬಿನಾ ಬರೆಯುತ್ತಿದ್ದ ಉರ್ದು ಓದಲು ಬರುತ್ತಿರಲಿಲ್ಲ. ಗೆಳೆಯರ ಗುಂಪು ಸಹಾಯಕ್ಕೆ ಬಂದಿತು. ಮಕ್ಸೂದ್ ಪತ್ರ ಓದುತ್ತಿದ್ದ. ಮತ್ತೆಮತ್ತೆ ಓದಲು ಜಾವೇದ್‌ಗೆ ಅನುಕೂಲವಾಗಲೆಂದು ತಾಜ್ ಮೊಹಮ್ಮದ್‌ ಭಾಷಾಂತರ ಮಾಡಿ ಹಿಂದಿಯಲ್ಲಿ ಬರೆದು ಕೊಡುತ್ತಿದ್ದ. ಜಾವೇದ್‌ ಅವರ ಉತ್ತರವನ್ನು ಮಕ್ಸೂದ್‌ ಬರೆದು ಕೊಡುವ ಹಾಳೆಗಳ ಮೇಲೆ ಯುವ ಪ್ರೇಮಿಗಳಿಬ್ಬರ ಮೊದಲಕ್ಷರ ಸೂಚಿಸುವ ‘ಎಂ.ಜೆ.’ ಎಂದು ಹೂವಿನ ಚಿತ್ತಾರವನ್ನು ಮುದ್ರಿಸುತ್ತಿದ್ದುದು ಮುಮ್ತಾಜ್ ಮಿಯಾ ಎಂಬ ಇನ್ನೊಬ್ಬ ಗೆಳೆಯ.

ಆಕೆಯ ಪತ್ರ ಹತ್ತು ಪುಟಗಳಷ್ಟಿತ್ತು. ಜಾವೇದ್‌ ಹನ್ನೆರಡು ಪುಟಗಳ ಉತ್ತರ ಬರೆದರು. ಅದನ್ನು ಬರೆಯಲು ಅವರಿಗೆ 12 ದಿನಗಳೇ ಬೇಕಾದವು. ಆದರೆ ಒಂದು ದಿನ ಇದೆಲ್ಲ ಬದಲಾಗಿ ಹೋಯಿತು.

‘ಆ ದಿನ ಈಗಲೂ ನನಗೆ ನಿಚ್ಚಳವಾಗಿ ನೆನಪಿದೆ’ ಎಂದ ಜಾವೇದ್‌ ವಿವರಿಸುತ್ತಾ  ಹೋದರು. ‘ಅವತ್ತು 2002ರ ಆಗಸ್ಟ್‌ 10. ಅದು ಶನಿವಾರ. ನಾನು ನನ್ನ ಅಂಗಡಿಯಲ್ಲಿದ್ದೆ. ಒಬ್ಬ ವ್ಯಕ್ತಿ ಬಂದು ತನ್ನ ಟಿ.ವಿ. ಸರಿಮಾಡಿಕೊಡಲು ತನ್ನ ಮನೆಗೆ ಬರುವಂತೆ ಕರೆದ. ಮನೆಗೆ ಬಂದು ಕೆಲಸ ಮಾಡುವುದಿಲ್ಲ ಎಂದು ಹೇಳಿದೆ. ಆದರೆ ಅವನು ತುಂಬಾ ಚಡಪಡಿಕೆಯಲ್ಲಿದ್ದ, ಒಪ್ಪಿದೆ. ನಾವು ಹೆಜ್ಜೆ ಹಾಕುತ್ತಿದ್ದಂತೆ ಕಾರೊಂದು ಹತ್ತಿರ ಬಂತು. ನನ್ನನ್ನು ಅಪಹರಿಸಲಾಯಿತು’.

‘ಮೊದಲು ನಾನು ಅವರೆಲ್ಲ ಯಾರೋ ಅಪರಾಧಿಗಳು ಎಂದುಕೊಂಡೆ. ಅವರ ಮಾತುಗಳನ್ನು ಕೇಳಿಸಿಕೊಂಡಾಗ ಅವರು ಪೊಲೀಸರೆಂಬುದು  ಗೊತ್ತಾಯಿತು.  ನನ್ನ ಕಷ್ಟಗಳ ಸರಮಾಲೆ ಅಲ್ಲಿಂದಲೇ ಶುರುವಾಯಿತು. ನನ್ನ ವಾಚ್, ಪರ್ಸ್‌ ಎಲ್ಲವನ್ನೂ ಅವರು ಕಿತ್ತುಕೊಂಡರು. ನನ್ನಲ್ಲಿದ್ದ ಮೊಬಿನಾಳ ಎರಡು ಪತ್ರಗಳನ್ನೂ ಕಿತ್ತುಕೊಂಡರು. ಸುಮ್ಮನಿರದಿದ್ದರೆ ಗುಂಡಿಟ್ಟು ಸಾಯಿಸುವುದಾಗಿ ಬೆದರಿಸಿದರು. ನನ್ನ ಕುಟುಂಬವನ್ನೂ ಅಪಹರಿಸಿದ್ದು, ಅವರನ್ನೆಲ್ಲ ಇನ್ನೊಂದು ಕಾರಿನಲ್ಲಿ ಹಿಂಸಿಸಲಾಗುತ್ತಿದೆ ಎಂದೂ ಹೇಳಿದರು. ನಾನು ಅಳುತ್ತಾ ದಯೆ ತೋರಬೇಕೆಂದು ಬೇಡಿದೆ. ತದನಂತರ, ನನ್ನ ಕಣ್ಣು ಕಟ್ಟಿ ಎಲ್ಲಿಗೋ ಕರೆದೊಯ್ದರು. ಕಣ್ಣು ಬಿಡಿಸಿದಾಗ ಕೋಣೆಯೊಂದರಲ್ಲಿದ್ದೆ. ಅಲ್ಲಿ ಮೂರು ದಿನ ಹಿಂಸಿಸಿದರು’.

‘ಹಿಗ್ಗಾಮುಗ್ಗಾ ನನ್ನನ್ನು ಥಳಿಸಿದರು, ತಲೆಕೆಳಗೆ ಮಾಡಿ ನೇತು ಹಾಕಿ, ಹಾಗೇ ಇಳಿಬಿಟ್ಟು ನನ್ನ ತಲೆಯನ್ನು ಆಗಾಗ ನೀರಿನಲ್ಲಿ ಮುಳುಗುವಂತೆ ಮಾಡಿದರು. ಅತೀವ ನೋವಾಗುತ್ತಿತ್ತು. ತಾಳಲಾರದೆ ನನ್ನನ್ನು ಕೊಂದುಬಿಡಿರೆಂದು ಬೇಡಿಕೊಂಡೆ’.

‘ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಏಜೆಂಟ್ ನಾನು ಎಂಬ ಆರೋಪ ಹೊರಿಸಿದ ಅವರು, ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಕ್ಷಣಾ ಪಡೆಯ ರಹಸ್ಯಗಳನ್ನು ಇಸ್ಲಾಮಾಬಾದ್‌ಗೆ ಕೊಡುತ್ತಾನೆ ಎಂದು ಆರೋಪಿಸಿದರು’.

ಮೂರು ದಿನಗಳ ನಂತರ ಜಾವೇದ್‌ ಅವರನ್ನು ರಾಮಾಪುರಕ್ಕೆ ಮರಳಿ ಕರೆತಂದು ಅವರ ಗೆಳೆಯರಾದ ಮಕ್ಸೂದ್, ತಾಜ್ ಮೊಹಮ್ಮದ್ ಮತ್ತು ಮುಮ್ತಾಜ್ ಮಿಯಾ ಅವರುಗಳನ್ನು ಬಂಧಿಸಿದರು. ಮರುದಿನ ನಾಲ್ವರನ್ನೂ ನ್ಯಾಯಾಲಯದಲ್ಲಿ ಹಾಜರುಪಡಿಸಿ, ಪತ್ರಕರ್ತರ ಮುಂದೆ ಪೆರೇಡ್‌ ಮಾಡಿಸಿ ‘ಭಾರತದ ವಿರುದ್ಧವೇ ಸೆಣಸುವ ಅಪಾಯಕಾರಿ ಭಯೋತ್ಪಾದಕರು’ ಎಂದು ಹೇಳಿದರು. ಜಾವೇದ್‌ ಪಾಕಿಸ್ತಾನಕ್ಕೆ ಎರಡು ಸಲ ಹೋಗಿದ್ದೇ ಐಎಸ್ಐನವರನ್ನು ಭೇಟಿಯಾಗಲು ಮತ್ತು ಆತ ಕರೆ ಮಾಡಿದ್ದು ರಹಸ್ಯಗಳನ್ನು ರವಾನಿಸಲು ಎಂದು ಆಪಾದಿಸಿದರು.

ಒಂದೂವರೆ ತಿಂಗಳ ನಂತರ ಜಾವೇದ್‌ ಮೇಲೆ ದೇಶದ ವಿವಾದಾತ್ಮಕ ವಿಶೇಷ ಭಯೋತ್ಪಾದನಾ ನಿಗ್ರಹ ಕಾನೂನಿನಡಿ (ಪೊಟಾ) ಆರೋಪ ಹೊರಿಸಲಾಯಿತು.

‘ಇದರರ್ಥ ನಮಗೆ ಜಾಮೀನು ಸಿಗುವಂತಿರಲಿಲ್ಲ. ನಾವು ಹತಾಶರಾಗಿದ್ದೆವು. ಅಪರಾಧ ಸಾಬೀತಾದರೆ ನಮಗೆ ಗಲ್ಲು ಶಿಕ್ಷೆಯಾಗುವುದಾಗಿ ಹೇಳಿದ್ದರು. ನನ್ನನ್ನೇ ಏಕೆ ಹೀಗೆ ಮಾಡಲು ಆಯ್ದುಕೊಂಡರೆಂದು ನನಗೆ ಗೊತ್ತಿಲ್ಲ. ಕಾರ್ಗಿಲ್ ಯುದ್ಧ ಮತ್ತು ಆ ಸಂಘರ್ಷ ಆರಂಭವಾದ ನಂತರ ಪಾಕಿಸ್ತಾನಕ್ಕೆ ತೆರಳಿದ ಪ್ರತಿ ಮುಸ್ಲಿಂ ಸಂಶಯಾಸ್ಪದ ವ್ಯಕ್ತಿ ಎಂಬ ಭಾವನೆ ಇರುವುದೇ ಕಾರಣವೆಂದು ಜೈಲಿನಲ್ಲಿ ಜನ ಹೇಳುತ್ತಿದ್ದರು’ ಎಂದರು ಜಾವೇದ್‌.

ಜೈಲಿನಲ್ಲಿದ್ದ ಅವಧಿಯಲ್ಲಿ ಅತಿ ದುಃಖದ ಸಮಯವೆಂದರೆ, ಕುಟುಂಬದಲ್ಲಿ ಮದುವೆ ನಡೆದಾಗ ಮತ್ತು ತಮ್ಮ ತಂದೆಯ ಕಾಲಿನ ಮೂಳೆಗೆ ಪೆಟ್ಟಾದಾಗ ಜಾವೇದ್‌ಗೆ ಹೋಗಲು ಸಾಧ್ಯವಾಗದಿದ್ದುದು. ‘ಅಲ್ಲೇ ರಾಮಾಪುರದ ಜೈಲಿನಲ್ಲೇ ಇದ್ದೇ. ಹತ್ತಿರವಿದ್ದೂ ದೂರವಿದ್ದೆ’ ಎನ್ನುತ್ತಾರೆ ಅವರು.

‘ಜೈಲಿನಲ್ಲಿ ತಮ್ಮ ಗೆಳೆಯರ ಗೆಳೆತನವನ್ನೂ ಅವರು ಕಳೆದುಕೊಂಡರು. ‘ಮಕ್ಸೂದ್, ತಾಜ್ ಮೊಹಮ್ಮದ್ ಮತ್ತು ಮುಮ್ತಾಜ್ ಮಿಯಾ ತಮ್ಮ ಹೆಸರನ್ನು ಪೊಲೀಸರಿಗೆ ಹೇಳಿದವ ನೀನೆಂದು ಆಪಾದಿಸಿದರು. ಪ್ರೇಯಸಿಯ ನೆನಪೊಂದೇ ನನ್ನನ್ನು ಹುಚ್ಚನಾಗದಂತೆ ನೋಡಿಕೊಂಡಿತು. ನನ್ನ ಸಹ ಕೈದಿಗಳಿಗೆ ಮೊಬಿನಾ ಬಗ್ಗೆ ಹೇಳುತ್ತಿದ್ದೆ. ನಾವು ಪ್ರೇಮದಲ್ಲಿ ಬಿದ್ದ ಬಗೆ, ಅವಳ ಅಭ್ಯಾಸಗಳು, ಭೇಟಿಯಾದಾಗ ಆಕೆ ನನ್ನನ್ನು ಕೆಣಕುತ್ತಿದ್ದ ಪರಿ ಎಲ್ಲವನ್ನೂ ಹೇಳುತ್ತಿದ್ದೆ. ಇದರಿಂದಲೇ ಜೈಲು ಜೀವನ ಸಹ್ಯವಾಗುವಂತಾಯಿತು, ಆಕೆಯ ನೆನಪು ಮಾಸದಂತೆ ಉಳಿಯಿತು’.

ಜಾವೇದ್‌ ಪಾಲಕರಿಗೂ ಅವು ಸಂಕಟದ ವರ್ಷಗಳು. ಆತನ ತಾಯಿ ಅಫ್ಸಾನಾ ಬೇಗಂ ಇದಕ್ಕೆಲ್ಲ ತಾನೇ ಹೊಣೆ ಎಂದುಕೊಳ್ಳುತ್ತಾರೆ. ‘ಕರಾಚಿಗೆ ಹೋಗಲು ನಾನು ದುಂಬಾಲು ಬೀಳದಿದ್ದರೆ ಅವನಿಗೆ ಈ ಕಷ್ಟ ಬರುತ್ತಿರಲಿಲ್ಲವೇನೋ’ ಎಂದು ಆಕೆ ಕಣ್ಣೀರು ಒರೆಸಿಕೊಳ್ಳುತ್ತಾ ಹೇಳುತ್ತಾರೆ. ಆತನ ತಂದೆ ಹೊಲ, ಒಡವೆ ಮಾರಿ ವಕೀಲರನ್ನಿಟ್ಟುಕೊಂಡು ಮಗನನ್ನು ಅಕ್ರಮ ಬಂಧನದಿಂದ ಬಿಡುಗಡೆಗೊಳಿಸಲು ಹೋರಾಡಿದರು.

ಕೊನೆಗೆ ಜಾವೇದ್ 2014ರ ಜನವರಿ 19ರಂದು ಬಿಡುಗಡೆಗೊಂಡರು. ಇದಕ್ಕೂ ಒಂದು ದಿನ ಮೊದಲು ನ್ಯಾಯಾಲಯ ಅವರ ಮೇಲಿನ ಆರೋಪಗಳನ್ನೆಲ್ಲ ತಿರಸ್ಕರಿಸಿ, ಸರ್ಕಾರಿ ವಕೀಲರ ಸಾಕ್ಷಿ ತಾಳೆಯಾಗುವುದಿಲ್ಲಎಂದು ಹೇಳಿತು.

‘ಜೈಲಿನಿಂದ ಹೊರಗೆ ಬಂದಾಗ ನಾನು ನಿಜವಾಗಿಯೂ ಮುಕ್ತನಾಗಿದ್ದೇನೆ ಎಂದು ನಂಬಲು ಕಷ್ಟವೇ ಆಯ್ತು’ ಎನ್ನುವ ಜಾವೇದ್‌ ‘ನನ್ನ ಜೀವನದ ಮೂರನೇ ಒಂದು ಭಾಗ, ಅದೂ ಬಹುಮುಖ್ಯವಾದ ಇಪ್ಪತ್ತರಿಂದ ಮೂವತ್ತರ ವಯಸ್ಸಿನ ಘಟ್ಟ ಕಳೆದುಹೋಗಿತ್ತು’ ಎನ್ನುತ್ತಾರೆ.

ಕಳೆದೆರಡು ವರ್ಷಗಳಲ್ಲಿ ಜಾವೇದ್‌ ತಮ್ಮ ಜೀವನವನ್ನು ಮರಳಿ ಕಟ್ಟಿಕೊಳ್ಳಲು ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ. ಮನೆಯ ಹತ್ತಿರವೇ ಒಂದು ಅಂಗಡಿ ಬಾಡಿಗೆ ಪಡೆದು, ಹಳೆಯ ಟಿ.ವಿ. ರಿಪೇರಿ ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರದಿಂದ ತಮಗೆ ಏನೂ ಪರಿಹಾರ ಬಂದಿಲ್ಲಎಂಬ ಅಸಮಾಧಾನವಿದೆ. ತಮ್ಮ ಜೀವನ ಹಾಳು ಮಾಡಿದವರಿಗೆ ಯಾವುದೇ ಶಿಕ್ಷೆ ಆಗಿಲ್ಲವೆಂಬ ಸಿಟ್ಟಿದೆ.

ಬಿಡುಗಡೆಯ ನಂತರ ಮೊಬಿನಾ ಜೊತೆ ಸಂಪರ್ಕವಿದೆಯೇ ಎಂದು ನಾನು ಕೇಳಿದೆ.

‘ಇಲ್ಲ, ಎಷ್ಟೊಂದು ಸಮಯ ಕಳೆದು ಹೋಯ್ತಲ್ಲ. ಆಕೆ ಮದುವೆಯಾಗಿರಬಹುದು. ನನ್ನ ತಲೆಯಿಂದ ಆಕೆಯನ್ನು ತೆಗೆದುಹಾಕಿದ್ದೇನೆ, ನನ್ನ ಹೃದಯದಿಂದಲ್ಲ. ಆಕೆಯೆಂದರೆ ನನಗೆ ಈಗಲೂ ಪ್ರೀತಿ. ಆದರೆ ಆಕೆಗೆ ಕರೆ ಮಾಡಲು ಹಿಂಜರಿಕೆಯಾಗುತ್ತದೆ. ಪೊಲೀಸರು ಮತ್ತೆ ನನ್ನ ಮತ್ತು ನನ್ನ ಕುಟುಂಬದ ಬೆನ್ನು ಹತ್ತಿದರೆ ಏನು ಗತಿ?’ ಎಂದು ಜಾವೇದ್‌ ಕೇಳುತ್ತಾರೆ.

-ಇಂಟರ್‌ನ್ಯಾಷನಲ್‌  ನ್ಯೂಯಾರ್ಕ್‌ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT