ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ – ಚೀನಾ ಬಾಂಧವ್ಯ ವೃದ್ಧಿಗೆ 8 ಸೂತ್ರ

21ನೇ ಶತಮಾನದಲ್ಲಿ ಉಭಯ ರಾಷ್ಟ್ರಗಳ ಪಾತ್ರ ಗುರುತರ: ಪ್ರಣವ್
Last Updated 26 ಮೇ 2016, 19:41 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ):  ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಭವಿಷ್ಯದ ದೃಷ್ಟಿಯಿಂದ ಎಂಟು ಸೂತ್ರಗಳನ್ನು ಮುಂದಿಟ್ಟಿದ್ದಾರೆ.

‘ಭಾರತ-ಚೀನಾ ಗಡಿ ವಿವಾದ ಸೇರಿದಂತೆ ಉಭಯ ರಾಷ್ಟ್ರಗಳ   ನಡುವಿನ ಸಮಸ್ಯೆಗಳನ್ನು ರಾಜಕೀಯ ಚಾಣಾಕ್ಷತೆ ಹಾಗೂ ನಾಗರಿಕತೆಯ ವಿವೇಚನೆ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕಾದ ಅಗತ್ಯ ಇದೆ’ ಎಂದು ಅವರು ಗುರುವಾರ  ಇಲ್ಲಿ  ಅಭಿಪ್ರಾಯಪಟ್ಟರು.

ಚೀನಾ ಪ್ರವಾಸದಲ್ಲಿರುವ ಪ್ರಣವ್‌, ಚೀನಾ-ಭಾರತ ವಿಶ್ವವಿದ್ಯಾನಿಲಯಗಳ ಅಧ್ಯಕ್ಷರ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.
‘ಗಡಿ ಹಂಚಿಕೊಂಡಿರುವ ದೇಶಗಳ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಆಗಾಗ್ಗೆ ಮೂಡುತ್ತಿರುತ್ತವೆ. ಆದರೆ ಅವನ್ನು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸುವುದು ಸರಿಯಲ್ಲ’ ಎಂದು ಅವರು ಹೇಳಿದರು.

ಗುರುತರ ಪಾತ್ರ: ಭಾರತ ಹಾಗೂ ಚೀನಾ 21ನೇ ಶತಮಾನದಲ್ಲಿ ಜಾಗತಿಕವಾಗಿ ‘ಗುರುತರ ಹಾಗೂ ರಚನಾತ್ಮಕ’ ಪಾತ್ರ ವಹಿಸಲಿವೆ ಎಂದೂ ಅವರು ಆಶಯ ವ್ಯಕ್ತಪಡಿಸಿದರು. 

ಇದೇ ವೇಳೆ ಭಾರತದ 10 ವಿಶ್ವವಿದ್ಯಾಲಯಗಳು ಚೀನಾದ ವಿವಿಗಳ ಜತೆ ಶೈಕ್ಷಣಿಕ ಸಹಕಾರ ಒಪ್ಪಂದಕ್ಕೆ ಪೀಕಿಂಗ್ ವಿವಿಯಲ್ಲಿ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಸಹಿ ಹಾಕಿದವು.

‘ತಕ್ಷಶಿಲಾ ವಿಶ್ವವಿದ್ಯಾಲಯವು ನಾಲ್ಕು ನಾಗರಿಕತೆಗಳ ಜತೆ ನಂಟು ಹೊಂದಿತ್ತು. ಭಾರತ, ಪರ್ಶಿಯನ್, ಗ್ರೀಕ್ ಹಾಗೂ ಚೀನಾದ ಅತ್ಯುತ್ತಮ ವಿದ್ವಾಂಸರನ್ನು ಇದು ಕೊಡುಗೆಯಾಗಿ ನೀಡಿದೆ. ಪಾಣಿನಿ, ಅಲೆಕ್ಸಾಂಡರ್, ಚಂದ್ರಗುಪ್ತ ಮೌರ್ಯ, ಚಾಣಕ್ಯ, ಚರಕ, ಚೀನಾದ ಬೌದ್ಧ ಸನ್ಯಾಸಿಗಳು, ಫಾಯಿಯಾನ್ ಮತ್ತು ಗ್ಸುವಾಂಗ್‌ಜಂಗ್‌ ಮೊದಲಾದವರು ವಿವಿಯ ಕೊಡುಗೆಗಳು’ ಎಂದು ಪ್ರಣವ್ ಕೊಂಡಾಡಿದರು.

‘ಸಂಶೋಧನೆಯಲ್ಲಿ ಹೂಡಿಕೆ ಅತಿಮುಖ್ಯ. ಭಾರತದ ಜಿಡಿಪಿಯಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ವೆಚ್ಚವು ಸದ್ಯ ಶೇ 0.8ರಷ್ಟಿದ್ದು, ಇದನ್ನು ಹೆಚ್ಚಿಸಲು ನಾವು ಗಮನಹರಿಸಿದ್ದೇವೆ’ ಎಂದರು.

ಪ್ರಣವ್‌  ಮುಂದಿಟ್ಟ ‘ಭಾಯಿ ಭಾಯಿ’ ಸೂತ್ರಗಳು

*ಪಾಲುದಾರಿಕೆ ಬಲಪಡಿಸಲು ಉಭಯ ದೇಶಗಳ ಬದ್ಧತೆ

*ಅಭಿವೃದ್ಧಿ ಪಾಲುದಾರಿಕೆಗಾಗಿ ರಾಜಕೀಯ ತಿಳಿವಳಿಕೆ ಅಗತ್ಯ

*ಉಭಯ ದೇಶಗಳ ಜನರ ಪರಸ್ಪರ ಪ್ರಯೋಜನಕ್ಕಾಗಿ ಸಹಕಾರ ಬಲಗೊಳಿಸುವುದು

*ನಿರ್ದಿಷ್ಟ ಗುರಿಯೊಂದಿಗೆ ಕೆಲಸ ಮಾಡುವುದು

*ಸಾಂಸ್ಕೃತಿಕ, ಧಾರ್ಮಿಕ, ತಂತ್ರಜ್ಞಾನ ಕಾರ್ಯಕ್ರಮ ಮೂಲಕ ಉಭಯ ದೇಶಗಳ ಯುವಜನರ ನಡುವೆ ಸಂಪರ್ಕ

ದಶಕಗಳ ನಂಟು ಸ್ಮರಿಸಿದ ಪ್ರಣವ್
60 ಹಾಗೂ 70ರ ದಶಕದಲ್ಲಿ ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಲು ಚೀನಾಕ್ಕೆ ಭಾರತ ನೀಡಿದ್ದ ಬೆಂಬಲ ಹಾಗೂ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ನೀಡಿದ್ದ ಬೆಂಬಲವನ್ನು ಪ್ರಣವ್ ಮುಖರ್ಜಿ ಚೀನಾಕ್ಕೆ ನೆನಪಿಸಿದರು.

ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸುವ ಭಾರತದ ಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿರುವ ಈ ಹೊತ್ತಿನಲ್ಲಿ ಪ್ರಣವ್ ಭೇಟಿ ಮಹತ್ವದ್ದಾಗಿದೆ.

‘1950ರಿಂದ ಅಂದಿನ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್‌ಸಿ) ಜತೆ ಭಾರತದ ರಾಜತಾಂತ್ರಿಕ ಸಂಬಂಧ ಶುರುವಾಯಿತು. ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಪಡೆಯಲು ಚೀನಾಗೆ 60,70ರ ದಶಕದವರೆಗೂ  ಈ ಬೆಂಬಲ ಮುಂದುವರಿದಿತ್ತು. ಕಾಯಂ ಸದಸ್ಯತ್ವ ಪಡೆಯಲೂ ಬೆನ್ನೆಲುಬಾಗಿ ನಿಂತಿತ್ತು’ ಎಂದು ಪ್ರಣವ್ ಅಂಕಿ ಅಂಶ ಸಮೇತ ಮನವರಿಕೆ ಮಾಡಿಕೊಟ್ಟರು.

ಮುಖ್ಯಾಂಶಗಳು
*ಮುಂದಿನ ಪೀಳಿಗೆಗೆ ಭಿನ್ನಾಭಿಪ್ರಾಯದ ವರ್ಗಾವಣೆ ಬೇಡ
*ವಿವಿಗಳ ನಡುವೆ ಶೈಕ್ಷಣಿಕ ಸಹಕಾರ ಒಪ್ಪಂದಕ್ಕೆ ಸಹಿ
*1950ರಿಂದೀಚೆಗಿನ ನಂಟು ಮೆಲುಕು ಹಾಕಿದ ಪ್ರಣವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT