ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಅಂತರದಿಂದ ಗೆದ್ದ ಜಯಾ

ಐದು ರಾಜ್ಯಗಳ ಉಪಚುನಾವಣೆ: ಆಡಳಿತ ಪಕ್ಷಕ್ಕೆ ಒಲವು ತೋರಿದ ಮತದಾರ
Last Updated 1 ಜುಲೈ 2015, 9:13 IST
ಅಕ್ಷರ ಗಾತ್ರ

ಚೆನ್ನೈ/ಭೋಪಾಲ್‌ (ಪಿಟಿಐ): ಚೆನ್ನೈನ ಆರ್‌.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಮುಖ್ಯಸ್ಥೆ, ಮುಖ್ಯಮಂತ್ರಿ ಜೆ.ಜಯ ಲಲಿತಾ 1.60 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಪ್ರಚಂಡ ವಿಜಯ ಸಾಧಿಸಿದ್ದಾರೆ.

ಜಯಾ ಅವರ ಸಮೀಪದ ಪ್ರತಿಸ್ಪರ್ಧಿ ಸಿಪಿಐನ ಸಿ.ಮಹೇಂದ್ರ ಠೇವಣಿ ಕಳೆದು ಕೊಂಡಿದ್ದಾರೆ. ‘ಚಲಾವಣೆಯಾದ 1.81 ಲಕ್ಷ ಮತಗಳಲ್ಲಿ ನನಗೆ ಶೇ 88.43 ಮತಗಳು ಬಿದ್ದಿವೆ. ನಿಜಕ್ಕೂ ಇದೊಂದು ಐತಿಹಾಸಿಕ ವಿಜಯ’ ಎಂದು ಜಯಾ ಬಣ್ಣಿಸಿದ್ದಾರೆ. ಜಯಾ ಮರು ಆಯ್ಕೆಗೆ ದಾರಿ ಮಾಡಿಕೊಡುವುದಕ್ಕಾಗಿ ಆರ್‌.ಕೆ.ನಗರ ಶಾಸಕ ವೆಟ್ರಿವೇಲು ಅವರು ಮೇನಲ್ಲಿ ರಾಜೀನಾಮೆ ನೀಡಿದ್ದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಮೇ 23ರಂದು ಖುಲಾಸೆಗೊಂಡ ಬಳಿಕ ಜಯಾ ಮತ್ತೆ ತಮಿಳುನಾಡು ಗದ್ದುಗೆ ಏರಿ ದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಆರು ತಿಂಗಳ ಒಳಗೆ ಅವರು ಶಾಸಕಿಯಾಗಿ ಆಯ್ಕೆಯಾಗಬೇಕಿತ್ತು. 

ಮುಂದಿನ ವರ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆಲವು ಸಾಧಿಸಲಿದೆ ಎನ್ನುವುದಕ್ಕೆ ಈ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ಎಂದೂ ಜಯಾ ಹೇಳಿಕೊಂಡಿದ್ದಾರೆ.

ತನಿಖೆಗೆ ಆದೇಶ:  ಈ ಚುನಾವಣೆ ಯಲ್ಲಿ ಅಕ್ರಮ ನಡೆದಿದೆ. ಆದ ಕಾರಣ ತನಿಖೆ ನಡೆಬೇಕು. ಚುನಾವಣಾ ಆಯೋಗ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಿಪಿಐ ಆಗ್ರಹಿಸಿದೆ.

ಕಾಂಗ್ರೆಸ್‌ ಗೆಲುವು:  ಕೇರಳದ ಅರುವಿಕ್ಕರ ವಿಧಾನಸಭೆ ಕ್ಷೇತ್ರದಿಂದ  ಕಾಂಗ್ರೆಸ್‌ನ ಕೆ.ಎಸ್‌.ಶಬರಿನಾಥನ್‌ 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ ಎಲ್‌ಡಿಎಫ್‌ನ  ವಿಜಯಕುಮಾರ್‌ ಅವರನ್ನು ಮಣಿಸಿ ದ್ದಾರೆ.  ಮಾಜಿ ಸ್ಪೀಕರ್‌ ಜಿ. ಕಾರ್ತಿ ಕೇಯನ್‌  ಫೆಬ್ರುವರಿಯಲ್ಲಿ ಮೃತ ಪಟ್ಟ ಬಳಿಕ ಈ ಕ್ಷೇತ್ರ ತೆರವಾಗಿತ್ತು. ಶಬರಿನಾಥನ್‌ ಅವರು ಕಾರ್ತಿಕೇಯನ್‌  ಪುತ್ರ.

ಮೇಘಾಲಯದಲ್ಲಿಯೂ ಆಡಳಿತ ಪಕ್ಷ  ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಚೋಕ್‌ಪಾಟ್‌ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಬ್ಲುಬೆಲ್‌ ಆರ್‌.ಸಂಗ್ಮಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಫಿಲಿಪೋಲ್‌ ಮರಕ್‌ ( ಎನ್‌ಪಿಪಿ) ಅವರನ್ನು 2,550 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಮಧ್ಯಪ್ರದೇಶದ ಗರೋತ್‌ ವಿಧಾನ ಸಭೆ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಬಿಜೆಪಿ ಶಾಸಕ ರಾಜೇಶ್‌ ಯಾದವ್‌ ಅನಾರೋಗ್ಯದಿಂದ ಮೃತಪಟ್ಟ ಕಾರಣ ಈ ಕ್ಷೇತ್ರ ತೆರವಾಗಿತ್ತು. ಪಕ್ಷದ ಅಭ್ಯರ್ಥಿ ಚಂದರ್‌ ಸಿಂಗ್‌ ಸಿಸೋಡಿಯಾ ಅವರು ಕಾಂಗ್ರೆಸ್‌ನ ಸುಭಾಷ್‌ ಕುಮಾರ್‌ ಸೋಜತಿಯಾ ಅವರನ್ನು 13 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ತ್ರಿಪುರಾದ ಪ್ರತಾಪಗಡ ಹಾಗೂ ಸುರ್ಮಾ ಕ್ಷೇತ್ರಗಳಲ್ಲಿ ಸಿಪಿಎಂ ಗೆಲುವು ಸಾಧಿಸಿದೆ.
*
ಇದೊಂದು ಐತಿಹಾಸಿಕ ವಿಜಯ. ಮತದಾರರ ಆಕಾಂಕ್ಷೆ ಹಾಗೂ ಅಗತ್ಯಗಳನ್ನು ಈಡೇರಿಸುವುದಕ್ಕೆ ನಾನು ಶಕ್ತಿಮೀರಿ ಕೆಲಸ ಮಾಡುತ್ತೇನೆ.
-ಜಯಲಲಿತಾ,
ತಮಿಳುನಾಡು ಮುಖ್ಯಮಂತ್ರಿ

*ಈ ಉಪಚುನಾವಣೆ ಹಾಸ್ಯಾಸ್ಪದ. ಪ್ರಜಾತಂತ್ರ ವ್ಯವಸ್ಥೆ ಶಿಥಿಲ ಗೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ
-ಎಂ.ಕೆ.ಸ್ಟಾಲಿನ್‌,
ಡಿಎಂಕೆ  ಮುಖಂಡ

*
ಮುಖ್ಯಾಂಶಗಳು
* ಕೇರಳ, ಮೇಘಾಲಯ: ಕಾಂಗ್ರೆಸ್‌
*ಮಧ್ಯಪ್ರದೇಶ: ಬಿಜೆಪಿ ಮೇಲುಗೈ
*ತ್ರಿಪುರಾ: ಸಿಪಿಎಂಗೆ ವಿಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT