ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾ, ಸರ್ಜಾ ಶ್ರೇಷ್ಠ ನಟಿ- ನಟ

2011-12ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
Last Updated 14 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಸಂಗೀತ ನಿರ್ದೇಶಕ, ಸಿನಿಮಾ ಸಾಹಿತಿ ಹಂಸಲೇಖ ಅವರಿಗೆ ಡಾ. ರಾಜಕುಮಾರ್ ಪ್ರಶಸ್ತಿ, ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ನಟ ಅನಂತನಾಗ್ ಅವರಿಗೆ ವಿಷ್ಣುವರ್ಧನ್ ಪ್ರಶಸ್ತಿ- ಇವು 2011-12ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಮುಖ್ಯಾಂಶಗಳು. ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಗೃಹ ಕಚೇರಿ `ಕೃಷ್ಣಾ'ದಲ್ಲಿ ಗುರುವಾರ ಪ್ರಶಸ್ತಿಗಳನ್ನು ಪ್ರಕಟಿಸಿದರು.

ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಅಶೋಕ್ ಖೇಣಿ ನಿರ್ಮಾಣದ, ಮನೋಜ್ ಸತಿ ನಿರ್ದೇಶನದ `ಪ್ರಸಾದ್' ಚಿತ್ರ ಆಯ್ಕೆಯಾಗಿದೆ. ಗಿರೀಶ ಕಾಸರವಳ್ಳಿ ನಿರ್ದೇಶನ, ಬಸಂತ್‌ಕುಮಾರ್ ಪಾಟೀಲ್ ನಿರ್ಮಾಣದ `ಕೂರ್ಮಾವತಾರ' ಚಿತ್ರಕ್ಕೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ರೂಪಾ ಸೌರವ್ ನಿರ್ಮಾಣದ, ಗೋಪಿ ಪೀಣ್ಯ ನಿರ್ದೇಶನದ `ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ' ಚಿತ್ರ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಪ್ರಶಸ್ತಿ, ಕೆ.ಎನ್.ಟಿ. ಶಾಸ್ತ್ರಿ ನಿರ್ದೇಶನದ `ಸರಸಮ್ಮನ ಸಮಾಧಿ' ಚಿತ್ರಕ್ಕೆ ಲಭಿಸಿದೆ. ಟಿ.ಎಸ್. ನಾಗಾಭರಣ ನಿರ್ದೇಶನದ `ಕಂಸಾಳೆ ಕೈಸಾಳೆ' ಅತ್ಯುತ್ತಮ ಮಕ್ಕಳ ಚಿತ್ರವೆಂಬ ಹಿರಿಮೆಗೆ ಪಾತ್ರವಾಗಿದ್ದು, ದಿನಕರ್ ತೂಗುದೀಪ ನಿರ್ದೇಶನದ `ಸಾರಥಿ' ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

`ಭಾಗೀರತಿ' ಚಿತ್ರದ ನಟನೆಗಾಗಿ ಭಾವನಾ ಅತ್ಯುತ್ತಮ ನಟಿ ಮತ್ತು `ಪ್ರಸಾದ್' ಚಿತ್ರಕ್ಕಾಗಿ ಅರ್ಜುನ್ ಸರ್ಜಾ ಅತ್ಯುತ್ತಮ ನಟ  ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಬಾಲನಟ ಪ್ರಶಸ್ತಿಗೆ ಮಾ. ಸಂಕಲ್ಪ್ (ಚಿತ್ರ: ಪ್ರಸಾದ್), ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಬೇಬಿ ಸುಹಾಸಿನಿ (ಚಿತ್ರ: ಬಣ್ಣದ ಕೊಡೆ) ಅವರನ್ನು ಆಯ್ಕೆಮಾಡಲಾಗಿದೆ.

`ಸಿದ್ಲಿಂಗು' ಚಿತ್ರದ ನಿರ್ದೇಶಕ ವಿಜಯ ಪ್ರಸಾದ್ ಅವರಿಗೆ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ. ಕಾಸರಗೋಡು ಚಿನ್ನಾ ನಿರ್ದೇಶನದ `ಉಜ್ವಾಡು' ಚಿತ್ರಕ್ಕೆ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಶ್ರೀಧರ್ ಅವರಿಗೆ (ಚಿತ್ರ: ಕಂಸಾಳೆ ಕೈಸಾಳೆ) ಮತ್ತು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗಿರಿಜಾ ಲೋಕೇಶ್ ಅವರಿಗೆ (ಚಿತ್ರ: ಸಿದ್ಲಿಂಗು) ಸಂದಿದೆ.

ಡಾ.ರಾಜ್‌ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳು ತಲಾ ರೂ. 2 ಲಕ್ಷ ನಗದು ಮತ್ತು ಚಿನ್ನ ಲೇಪಿತ ಫಲಕಗಳನ್ನು ಒಳಗೊಂಡಿರುತ್ತವೆ. ಪ್ರಥಮ ಅತ್ಯುತ್ತಮ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ  ತಲಾ ರೂ.  1 ಲಕ್ಷ ನಗದು ಮತ್ತು 50 ಗ್ರಾಂ ಚಿನ್ನದ ಪದಕ, 2ನೇ ಅತ್ಯುತ್ತಮ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ತಲಾ ರೂ. 75,000 ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ಹಾಗೂ 3ನೇ ಅತ್ಯುತ್ತಮ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ರೂ. 50 ಸಾವಿರ ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ಶೆಟ್ಟರ್ ತಿಳಿಸಿದರು.

ಹಂಸಲೇಖ, ಅನಂತನಾಗ್‌ಗೆ ಗೌರವ
ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಸುನೀಲ್ ಕುಮಾರ್ ದೇಸಾಯಿ ಮಾತನಾಡಿ, ಚಿತ್ರಗಳ ಆಯ್ಕೆಯಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಾರದೆಂಬ ಉದ್ದೇಶದಿಂದ ಅಂಕ ನೀಡಿಕೆ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿತ್ತು ಎಂದರು.

ಅತ್ಯುತ್ತಮ ಧ್ವನಿಗ್ರಾಹಕ ಪ್ರಶಸ್ತಿಯು ಗೊಂದಲಕಾರಿ ಎನಿಸಿದ್ದರಿಂದ ಈ ಸಾಲಿನ ಪ್ರಶಸ್ತಿಪಟ್ಟಿಯಲ್ಲಿ ಆ ವಿಭಾಗವನ್ನು ಪರಿಗಣಿಸಲಾಗಿಲ್ಲ ಎಂದು ಅವರು ತಿಳಿಸಿದರು. ಆಯ್ಕೆ ಸಮಿತಿ ಸದಸ್ಯರಾದ ವಿ.ಎಚ್. ಸುರೇಶ್, ವಿಶುಕುಮಾರ್, ವಿಶಾಖ ಎನ್., ರತ್ನಜ, ಭವ್ಯ, ಸಿ. ಚಂದ್ರಶೇಖರ್, ಮನೋರಂಜನ್ ಪ್ರಭಾಕರ್ ಮತ್ತು ಕೆ.ವೈ. ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಅನಂತಕುಮಾರ್‌ಗೆ ಪ್ರಶಸ್ತಿ!: ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ಆಯ್ಕೆಯಾದ ನಟ ಅನಂತ್‌ನಾಗ್ ಅವರ ಹೆಸರನ್ನು ಅನಂತಕುಮಾರ್ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಪ್ಪಾಗಿ ಓದಿದ್ದು ನಗುವಿನ ಅಲೆ ಎಬ್ಬಿಸಿತು.

`ರಾಜಕೀಯದಲ್ಲಿ ಮುಳುಗಿರುವಾಗ ಅವರ ಹೆಸರೇ ನೆನಪಿಗೆ ಬರುತ್ತದೆ' ಎಂದು ನಗುತ್ತಲೇ ತಪ್ಪನ್ನು ತಿದ್ದಿಕೊಂಡ ಶೆಟ್ಟರ್, ಅನಂತ್‌ನಾಗ್ ಹೆಸರನ್ನು ಮತ್ತೆ ಉಚ್ಚರಿಸಿದರು.

ಶೀಘ್ರದಲ್ಲೇ ಪ್ರದಾನ: 2010-11ನೇ ಸಾಲಿನ ಚಲನಚಿತ್ರ ಪ್ರಶಸ್ತಿಯ ಆಯ್ಕೆ ವಿವಾದವು ಕೋರ್ಟ್‌ನಲ್ಲಿದೆ. ಅದು ಬಗೆಹರಿದ ನಂತರವೇ ಈ ಸಾಲಿನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದೇ ಎಂಬ ಪ್ರಶ್ನೆಗೆ, `ಶೀಘ್ರವೇ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು' ಎಂದು ಮುಖ್ಯಮಂತ್ರಿಗಳು ಚುಟುಕಾಗಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT