ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವ ಬದುಕಿಗೆ ಸಂದ ಗೌರವ

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಅರುಣ್ ಭಟ್ ಅವರ ಛಾಯಾಚಿತ್ರಕ್ಕೆ ಪ್ರತಿಷ್ಠಿತ ಹಮ್ದನ್ ಬಿನ್ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಹವ್ಯಾಸವಾಗಿ ಒಡಮೂಡಿದ ‘ಫೋಟೊಗ್ರಫಿ’ ಬದುಕಾಗಿ, ಕನಸಾಗಿ ಜೀವಕ್ಕೆ ಜತೆಯಾದ ಬಗ್ಗೆ ಅವರು ಇಲ್ಲಿ ಹೇಳಿಕೊಂಡಿದ್ದಾರೆ.

‘ಒಂದು ಚಿತ್ರ, ನೂರು ಸಾಲಿಗೆ ಸಮ’ ಎನ್ನುವ ಮಾತಿದೆ. ಪ್ರತಿಷ್ಠಿತ ಹಮ್ದನ್ ಬಿನ್ ಪ್ರಶಸ್ತಿಗೆ ಆಯ್ಕೆ ಆಗಿರುವ ನಗರದ ಅರುಣ್ ಭಟ್ ಅವರ ಈ ಒಂದು ಚಿತ್ರ ನೂರು ಭಾವಗಳ ಅನುಭವವನ್ನು ಕಣ್ಮುಂದೆ ಕಟ್ಟುತ್ತದೆ.

ಹೌದು, ಛಾಯಾಚಿತ್ರ ಕೇವಲ ಆ ಒಂದು ಘಟನೆ, ಕ್ಷಣ ಅಥವಾ ಚಟುವಟಿಕೆಯನ್ನು ಹಿಡಿದಿಡುವುದಷ್ಟೇ ಅಲ್ಲ, ಅದರಾಚೆಗಿನ ಭಾವ–ಬೆಸುಗೆಗಳನ್ನೂ, ಕಥಾಹಂದರವನ್ನೂ ಕಣ್ಣಿಗೆ ಕಟ್ಟುವ ಕಲೆ ಮತ್ತು ಅದೇ ಒಂದು ಛಾಯಾಚಿತ್ರದ ನಿಜವಾದ ಹೂರಣ ಎನ್ನುವುದು ಅರುಣ್ ನಂಬಿಕೆ.

ಪ್ರವಾಸ ಛಾಯಾಗ್ರಹಣದಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವ ಅರುಣ್, ದೇಶದ ವಿವಿಧ ಭಾಗಗಳ ಜೀವನ ಕ್ರಮ, ಆಚಾರ–ವಿಚಾರಗಳನ್ನು ತಮ್ಮ ಚಿತ್ರಗಳ ಸರಣಿಯಲ್ಲಿ ದಾಖಲಿಸುತ್ತ ಬಂದಿದ್ದಾರೆ. ಪುರಸ್ಕಾರಕ್ಕೆ ಪಾತ್ರವಾದ ಈ ಛಾಯಾಚಿತ್ರದ ಕಥೆ ಇಲ್ಲಿದೆ.

ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಸಂಭ್ರಮ
ಜೀವನದಲ್ಲಿ ಎಲ್ಲವನ್ನೂ ತೊರೆದ ಬೌದ್ಧ ಸನ್ಯಾಸಿಗಳ ಬದುಕು ಹೇಗಿರುತ್ತದೆ, ಅವರ ಜೀವನ ಕ್ರಮ ಎಂಥದ್ದು ಎಂಬ ಬಗ್ಗೆ ಫೋಟೊ ಡಾಕ್ಯುಮೆಂಟರಿ ಮಾಡಲು ಹಿಮಾಚಲ ಪ್ರದೇಶಕ್ಕೆ ತೆರಳಿದೆ. ಒಂದು ವಾರ ಅವರ ನಡುವೆಯೇ ಇದ್ದು ಅವರ ಬದುಕಿನ ರೀತಿ–ನೀತಿಗಳನ್ನು ದಾಖಲಿಸುವ ಪ್ರಯತ್ನದಲ್ಲಿದ್ದೆ. 

ಆಕಸ್ಮಿಕ ಹವ್ಯಾಸ

ಮೂಲತಃ ಶಿವಮೊಗ್ಗದ ಸಾಗರದವರಾದ ಅರುಣ್ ಭಟ್ ಎಂಜಿನಿಯರಿಂಗ್ ಓದಲೆಂದು ಬೆಂಗಳೂರಿಗೆ ಬಂದವರು. ಅಪ್ಪ ಸಾಗರದಲ್ಲಿ ಶಿಕ್ಷಕ. ಅಮ್ಮ ಗೃಹಿಣಿ. ಅಣ್ಣ ವೈದ್ಯ. ಎಂಜಿನಿಯರ್ ಆಗಬೇಕಿದ್ದ ಅರುಣ್, ಆಕಸ್ಮಿಕವಾಗಿ ಹವ್ಯಾಸಕ್ಕೆಂದು ಕೈಯಲ್ಲಿ ಕ್ಯಾಮೆರಾ ಹಿಡಿದರು. ಆದರೆ ಕ್ಯಾಮೆರಾ ಅವರನ್ನು ಸಂಪೂರ್ಣವಾಗಿ ಆವರಿಸಿಕೊಂಡ ಬಗೆ ಇಲ್ಲಿದೆ.

ದಿನವಿಡಿ ನಾಲ್ಕು ಗೋಡೆಯ ಒಳಗಡೆಯೇ ಕುಳಿತು, ಅಧ್ಯಯನ, ಓದು, ಧ್ಯಾನಗಳಲ್ಲಿ ಕಳೆದು ಹೋಗುವ ಆಶ್ರಮದ ಮಕ್ಕಳು ಸಂಜೆಯಾಗುತ್ತಿದ್ದಂತೆ ಆಚೆ ಬರುತ್ತಿದ್ದರು. ಅವರಿಗಾಗಿಯೇ, ಅವರಂತೆಯೇ ಇರುವ ಆ ಸಂಜೆಯ ಕೆಲ ಮಧುರ ಕ್ಷಣಗಳನ್ನು ಅವರು ಸಂಭ್ರಮಿಸುತ್ತಿದ್ದ ರೀತಿಯೇ ಸೋಜಿಗ.

ದಿನವಿಡೀ ಕೋಣೆಯೊಳಗೆ ಮುದುಡಿ ಕುಳಿತ ಅವರ ಚೈತನ್ಯ, ಸಂಜೆಯಾಗುತ್ತಿದ್ದಂತೆ ಆ ಸಂಭ್ರಮದ ರೂಪದಲ್ಲಿ ಪುಟಿದೇಳುದ್ದ ವೈಖರಿಯನ್ನು ಕ್ಯಾಮೆರಾ ಕಣ್ಣಿನಿಂದ ಸೆರೆಹಿಡಿಯುವುದೇ ಒಂದು ಅದಮ್ಯ ಅನುಭವ. ದಿನವೂ ಸಂಜೆ ಮಕ್ಕಳು ಆಚೆ ಬರುವ ಸಮಯಕ್ಕೆ ಹೋಗಿ ಕ್ಯಾಮೆರಾ ಆನ್ ಮಾಡಿಕೊಂಡು ಕೂತುಬಿಡುತ್ತಿದ್ದೆ. ಕ್ಲಿಕ್ಕಿಸಿದಷ್ಟೇ ಮಿಂಚಿನ ವೇಗದಲ್ಲಿ ಬದಲಾಗುತ್ತಿದ್ದ ಅವರ ಚಲನವಲನಗಳನ್ನು ಸೆರೆ ಹಿಡಿಯುವುದು ಅಷ್ಟು ಸುಲಭವೇನೂ ಆಗಿರಲಿಲ್ಲ. ಆದರೆ ಕ್ಲಿಕ್ಕಿಸಿದಷ್ಟೂ ವಿವಿಧ ಭಾವ–ಭಂಗಿಗಳು ಅಲ್ಲಿ ಕ್ಯಾಮೆರಾಗೆ ಸಿಕ್ಕುತ್ತಿದ್ದವು...

ಹೀಗೆ ಸಾಗುತ್ತದೆ ಬೌದ್ಧ ಸನ್ಯಾಸಿ ಮಕ್ಕಳ ಬಣ್ಣದ ಬದುಕನ್ನು ರೋಚಕವಾಗಿ ಸೆರೆಹಿಡಿದ ಅರುಣ್ ಅವರ ಅನುಭವ ಮಂಟಪ.

ಕನಸಿನ ಛಾಯೆ
ಅರುಣ್ ಈ ‘ಛಾಯಾ’ ಜಗತ್ತಿನ ಹಿಂದೆ ಬಿದ್ದು 13 ವರ್ಷಗಳೇ ಕಳೆದಿವೆ. ಸುಮ್ಮನೆ ಹವ್ಯಾಸವಾಗಿ ಜತೆಗೂಡಿದ ಫೋಟೊಗ್ರಫಿ ಹುಚ್ಚು ತಾನೇ ಬದುಕಾಗಿ, ಜೇನಾಗಿ, ಕನಸಾಗಿ, ಕನವರಿಕೆಯಾಗಿ ಜೊತೆಗೇ ಸಾಗಿ ಬರುತ್ತಿದೆ.

‘ಈಗಂತೂ ಫೋಟೊಗ್ರಫಿ ಬಿಟ್ಟರೆ ಬೇರೆ ಏನೂ ಇಲ್ಲ ಎನ್ನುವಂತಾಗಿದೆ. ಕ್ಯಾಮೆರಾ ಕೈಯಲ್ಲಿ ಹಿಡಿದು ದೇಶ–ವಿದೇಶ ಸುತ್ತುವುದು, ಕಾಣುವುದನ್ನು, ಕಾಣದೇ ಇರುವುದನ್ನೂ ಸೆರೆಹಿಡಿಯುವಲ್ಲಿ ಕಳೆದು ಹೋಗುವುದೇ ಜೀವನ ಕ್ರಮವಾಗಿ ಹೋಗಿದೆ. ಇಳಿ ಸಂಜೆಗೆ ಜಾರುತಿಹ ಸೂರ್ಯ, ನೀಲಿ ಆಗಸದಲ್ಲಿ ಮೂಡುವ ಚಂದ್ರನ ನೆರಳು, ಹಿಂಡು ಆನೆಯ ಪರಿವಾರ... ಹೀಗೆ ಎಲ್ಲವನ್ನೂ ಹಾಗೇ ಸೆರೆ ಹಿಡಿದು ಚಿರಸ್ಥಾಯಿಗೊಳಿಸುವ ಖುಷಿಗೆ ಮಿಗಿಲಾದುದು ಯಾವುದೂ ಇಲ್ಲ. ಫೋಟೊಗ್ರಫಿ ಒಂದು ಕಲೆ ಮಾತ್ರವಲ್ಲ, ಅದೊಂದು ಭಾವಜಗತ್ತು’ ಎನ್ನುವ ಅರುಣ್, ತಮ್ಮ ಮತ್ತು ಛಾಯಾಚಿತ್ರದ ನಡುವಿನ ಅನುಬಂಧವನ್ನು ವಿವರಿಸುತ್ತಾರೆ.

‘ಫೋಟೊಗ್ರಫಿ ಬಗ್ಗೆ ಎಷ್ಟು ಕಲಿತರೂ ಸಾಲದು. ಹೊಸದನ್ನು ಕಲಿಯುವುದು ಮತ್ತು ಕಲಿತಿದ್ದನ್ನು ಇತರರಿಗೆ ಕಲಿಸುವುದೇ ಕಾಯಕವಾಗಿದೆ’ ಎನ್ನುತ್ತಾರೆ. ತಮ್ಮ ಅಪರೂಪದ ಫೊಟೊಗ್ರಫಿ ಅನುಭವನ್ನು ದಾಖಲಿಸಲು ಹಾಗೂ ಸಮಾನ ಮನಸ್ಕರ ಜೊತೆಗೆ ಅದನ್ನು ಹಂಚಿಕೊಳ್ಳಲು ಅವರು ಅನೇಕ ನಿಯತಕಾಲಿಕೆಗಳಿಗೆ ಬರೆಯುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ.

ಹಿಪಾ ಪ್ರಶಸ್ತಿಯ ಗರಿಮೆ
ದುಬೈ ಮೂಲದ ಪ್ರತಿಷ್ಠಿತ ಹಮ್ದನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅಂತರರಾಷ್ಟ್ರೀಯ ಛಾಯಾಗ್ರಹಣ (HIPA) ಪ್ರಶಸ್ತಿಗೆ ಅರುಣ್ ಭಟ್ ಅವರ ಬೌದ್ಧ ಆಶ್ರಮದ ಮಕ್ಕಳ ಈ ಛಾಯಾಚಿತ್ರ ಆಯ್ಕೆ ಆಗಿದೆ.

ಕಳೆದ ನಾಲ್ಕು ವರ್ಷಗಳಿಂದ ವಿಶ್ವದ ಛಾಯಾಗ್ರಹಕರಿಗಾಗಿ ಹಿಪಾ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತದ ಮೂರು ಜನ ಛಾಯಾಚಿತ್ರಗಾರರು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರಲ್ಲಿ ಬೆಂಗಳೂರಿನಲ್ಲಿರುವ ಸಾಗರದ ಅರುಣ್ ಭಟ್ ಮೊದಲಿಗರು ಎನ್ನುವುದು ಹೆಮ್ಮೆಯ ವಿಚಾರ.

ಒಟ್ಟು ನಾಲ್ಕು ವಿಭಾಗಗಳಲ್ಲಿ ಛಾಯಾಚಿತ್ರಗಳನ್ನು ಆಹ್ವಾನಿಸಲಾತ್ತು. ಒಂದು ಮುಖ್ಯ ವಿಭಾಗ ಮತ್ತು ಮೂರು ಸಹ ವಿಭಾಗಗಳು. ‘ಲೈಫ್ ಇನ್ ಕಲರ್ಸ್’  ಎನ್ನುವ ಮುಖ್ಯ ವಿಭಾಗದಲ್ಲಿ ಅರುಣ್ ಅವರ ಚಿತ್ರ ಮೊದಲ ಸ್ಥಾನ ಗಳಿಸಿದೆ.

ವಿವಿಧ ಭಾಗಗಳಿಂದ ಸುಮಾರು 31 ಸಾವಿರ ಛಾಯಾಗ್ರಾಹಕರು ಸ್ಪರ್ಧೆಗೆ ಪಾಲ್ಗೊಂಡಿದ್ದರು. ಸುಮಾರು 60 ಸಾವಿರ ಚಿತ್ರಗಳನ್ನು ಕಳುಹಿಸಿದ್ದರು. ಅವುಗಳಲ್ಲಿ 21 ಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಆ ಸಾಲಿನಲ್ಲಿ ಅರುಣ್ ಅವರ ಬೌದ್ಧ ಸನ್ಯಾಸಿ ಮಕ್ಕಳ ಪುಟಿದೇಳುವ ಉತ್ಸಾಹವನ್ನು ಹಿಡಿದಿಡುವ ಚಿತ್ರ ಮೊದಲು ಕಾಣುತ್ತದೆ.

ಜಗತ್ತಿನ ಪ್ರತಿಷ್ಠಿತ ಛಾಯಾಗ್ರಹಣ ಸ್ಪರ್ಧೆಯಾಗಿರುವ ಹಿಪಾ, ಪ್ರತಿವರ್ಷ ಒಟ್ಟು 2.5 ಕೋಟಿ ರೂಪಾಯಿಯಷ್ಟು ನಿಧಿಯನ್ನು ಬಹುಮಾನವಾಗಿ ನೀಡುತ್ತದೆ. ಈ ಪೈಕಿ ಅರುಣ್ ಭಟ್ ಅವರ ‘ಲೈಫ್ ಆಫ್ ಕಲರ್ಸ್‘ ವಿಭಾಗದ ಮೊದಲ ಪ್ರಶಸ್ತಿಗೆ ಬಂದಿರುವ ಬಹುಮಾನದ ಗೌರವ ಧನ 15 ಲಕ್ಷ ರೂಪಾಯಿಗೂ ಹೆಚ್ಚು (25 ಸಾವಿರ ಡಾಲರ್). 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT