ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾಂತರದ ಬೆನ್ನು ಹತ್ತಿ

Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮೊನ್ನೆ ಸೆಪ್ಟೆಂಬರ್ 30ರಂದು ನನ್ನ ಹಳೆಯ ವಿದ್ಯಾಸಂಸ್ಥೆಯ ಭಾಷಾಂತರ ವಿಭಾಗ ‘ಅಂತರರಾಷ್ಟ್ರೀಯ ಭಾಷಾಂತರ ದಿನ’ವನ್ನು ಆಚರಿಸಿತು. ಪ್ರತಿವರ್ಷದ ಸೆಪ್ಟೆಂಬರ್ 30 ಅಂತರರಾಷ್ಟ್ರೀಯ ಭಾಷಾಂತರ ದಿನ ಎಂದು ಪರಿಗಣಿಸಲ್ಪಡುತ್ತದೆ. ಈ ವರ್ಷ ಅದನ್ನು ಭಾಷಾಹಕ್ಕುಗಳ ಥೀಮಿಗೆ ಜೋಡಿಸಿಕೊಳ್ಳಲಾಗಿದೆ. ಯಾಕೆ ಸೆಪ್ಟೆಂಬರ್ 30ರಂದು? ಯಾಕೆಂದರೆ ಇದು ಸೈಂಟ್ ಜೆರೋಮ್ (347-420) ಎಂಬ ಇಟಾಲಿಯನ್ ಸಂತನ ಫೀಸ್ಟ್ ಡೇ; ಸೈಂಟ್ ಜೆರೋಮ್ ಆ ಕಾಲದ ಪ್ರಸಿದ್ಧ ಭಾಷಾಂತರಕಾರನಾಗಿದ್ದ.

‘ಫೀಸ್ಟ್ ಡೇ’ ಎಂದರೆ ಆತ ದೇಹಾಂತವಾದ ದಿನ. ವರ್ಷದ ಒಂದೊಂದು ದಿನವನ್ನು ಒಂದೊಂದು ಸಾಮಾಜಿಕ, ಸಾಂಸ್ಕೃತಿಕ ವಿಷಯಗಳ ಹೆಸರಿನಲ್ಲಿ ಆಚರಿಸುವುದು ಇತ್ತೀಚಿನ ಪರಿಪಾಠ. ಹಿಂದೆ ಇವು ಧಾರ್ಮಿಕ ಸಂಗತಿಗಳಿಗೆ ಮಾತ್ರ ಮೀಸಲಾಗಿದ್ದುವು; ನಂತರ ರಾಜಕೀಯ ಕ್ರಾಂತಿ ಅಥವಾ ಅಂಥವೇ ಘಟನೆಗಳಿಗೆ ವಿಸ್ತರಿಸಿದುವು; ಈಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳಿಗೂ ಅವು ವ್ಯಾಪಿಸಿವೆ. ಈ ಅಂತರರಾಷ್ಟ್ರೀಯ ಭಾಷಾಂತರ ದಿನದ ಕುರಿತು ನನಗೆ ಗೊತ್ತಾದುದು ವಿದ್ಯಾರ್ಥಿಗಳು ನನ್ನನ್ನು ಕೆಲವು ಮಾತುಗಳನ್ನಾಡಲು ಕರೆದಾಗ. ಆ ಸಮಾರಂಭದಲ್ಲಿ ಭಾಗವಹಿಸಿ ಬಂದೆ. ಭಾಷಾಂತರ ಮತ್ತು ಭಾಷಾಹಕ್ಕುಗಳ ನಡುವಣ ಸಂಬಂಧವೇ ಅಂದಿನ ಚರ್ಚಾವಸ್ತುವಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ.

ಭಾಷಾಂತರ ಇಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಅಧ್ಯಯನ ವಿಷಯವಾಗಿದೆ ಹಾಗೂ ಭಾಷಾಂತರದ ಬಗ್ಗೆ ಹಲವಾರು ವಿದ್ವಾಂಸರು ವಿದ್ವತ್ಪೂರ್ಣವಾದ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ರೊಮಾನ್ ಯಾಕೊಬ್ಸನ್, ವಾಲ್ಟರ್ ಬೆಂಜಮಿನ್, ಜಾರ್ಜ್ ಸ್ಟೈನರ್, ಝಾಕ್ ಡೆರಿಡಾ, ಲಾರನ್ಸ್ ವೆನುತಿ ಮುಂತಾದ ಕೆಲವು ಪ್ರಸಿದ್ಧ ಹೆಸರುಗಳು ಉಲ್ಲೇಖನೀಯ. ಅಲ್ಲದೆ ಭಾಷಾಂತರದ ಸಮಸ್ಯೆಗಳು ಭಾಷಾಕ್ಷೇತ್ರದಿಂದ ತೊಡಗಿ, ಸಾಂಸ್ಕೃತಿಕ ಮತ್ತು ರಾಜಕೀಯ ಸಮಸ್ಯೆಗಳ ತನಕ ವಿಸ್ತರಿಸಿವೆ.

ಇನ್ನು ಭಾಷಾಂತರದ ಇತಿಹಾಸವನ್ನು ತೆಗೆದುಕೊಂಡರೆ ಅದು ಬಹಳ ಪುರಾತನವಾದುದು. ಅದೇ ರೀತಿ, ಅಕ್ಷರ ಸಂಸ್ಕೃತಿ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ಭಾಷಾಂತರವೂ ಒಂದಲ್ಲ ಒಂದು ಬಗೆಯಲ್ಲಿ ಇದ್ದೇ ಇದೆ. ಅಕ್ಷರ ಸಂಸ್ಕೃತಿ ಇಲ್ಲದೆ ಬರೇ ಮೌಖಿಕ ಸಂಸ್ಕೃತಿ ಇರುವೆಡೆಯೂ ಮೌಖಿಕ ಭಾಷಾಂತರ (ಇದಕ್ಕೆ ಇಂಟರ್‌ಪ್ರಿಟೇಶನ್ ಎನ್ನುತ್ತಾರೆ) ಅಸ್ತಿತ್ವದಲ್ಲಿ ಇರುವುದನ್ನು ಕಾಣುತ್ತೇವೆ. ಮನುಷ್ಯ ಜನಾಂಗಗಳ ಪರಸ್ಪರ ಸಂಬಂಧಕ್ಕೆ ಭಾಷಾಂತರ ಅತ್ಯಗತ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾಷಾಹಕ್ಕುಗಳಿಗೂ ಭಾಷಾಂತರಕ್ಕೂ ಅವಿನಾ ಸಂಬಂಧವಿದೆ: ನಮ್ಮ ನಮ್ಮ ಭಾಷೆಗಳನ್ನು ಉಳಿಸುವುದು, ಬೆಳೆಸುವುದು, ಇತರ ಭಾಷೆಗಳಿಂದ ಪಡೆಯುವುದು, ಅವುಗಳಿಗೆ ನೀಡುವುದು ಮುಂತಾದ ವ್ಯಾಪಾರಗಳಿಗೆ ಭಾಷಾಂತರ ಬೇಕಾಗುತ್ತದೆ. ಈ ವಿಷಯವನ್ನು ನಾನಿಲ್ಲಿ ಅಕಡೆಮಿಕ್ ರೀತಿಯಲ್ಲಿ ವಿಸ್ತರಿಸಬಯಸದೆ, ಭಾಷಾಂತರದ ಜತೆ ನನಗೇನು ಸಂಬಂಧ ಎನ್ನುವುದನ್ನು ಮಾತ್ರವೇ ಹೇಳಲು ಯತ್ನಿಸುತ್ತೇನೆ.

ನನ್ನ ಮೊತ್ತ ಮೊದಲ ಬ್ರಶ್ ವಿದ್ ಟ್ರಾನ್ಸ್‌ಲೇಶನ್ ಮಲೆಯಾಳದ ಜತೆ– 1960ರ ದಶಕದಲ್ಲಿ. ನನಗೆ ಮಲೆಯಾಳದ ಸಾಹಿತ್ಯಭಾಷೆ ಓದಲು ಬರೆಯಲು ಬರುತ್ತಿರಲಿಲ್ಲವಾದರೂ ಆಡು ಮಾತು ಬರುತ್ತಿತ್ತು. ಇಂಗ್ಲಿಷ್ ಸಾಹಿತ್ಯವನ್ನು ನಾನು ಕಾಸರಗೋಡು ಮತ್ತು ತಿರುವನಂತಪುರದಲ್ಲಿ ಓದಿದ್ದು. ಕೇರಳದ ಕೆಲವೆಡೆ ಇಂಗ್ಲಿಷ್ ಲೆಕ್ಚರರಾಗಿ ಕೆಲಸಮಾಡುತ್ತಿದ್ದೆ. ನನ್ನದೇ ಪ್ರದೇಶವಾದ ಕಾಸರಗೋಡಿನಲ್ಲೂ ಕೆಲವು ವರ್ಷ ಇದ್ದೆ. ಅದು ಮಲೆಯಾಳಿ–ಕನ್ನಡ ಘರ್ಷಣೆಯ ಕಾಲವಾಗಿತ್ತು; ಯಾಕೆಂದರೆ ಕಾಸರಗೋಡು ಕೇರಳಕ್ಕೆ ಸೇರಿತ್ತು. ಅದನ್ನು ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಟಿಸಿದವರಲ್ಲಿ ನಾನೂ ಒಬ್ಬ.

ಕನ್ನಡಿಗರ ಪ್ರತಿಭಟನೆ ನಡೆಯುತ್ತಲೇ ಇತ್ತು. ಆದರೂ ಸಾಂಸ್ಕೃತಿಕವಾಗಿ ಕನ್ನಡಿಗರು ಮತ್ತು ಮಲೆಯಾಳಿಗಳು ಪರಸ್ಪರ ಅರಿತುಕೊಳ್ಳುವುದು, ಕೊಡು ಕೊಳ್ಳುವುದು ಬಹಳಷ್ಟಿದೆ ಎಂದು ನಾವು ಕೆಲವರು ಪರಿಗಣಿಸಿದ್ದೆವು. ಇಂಥ ಚಿಂತನೆಯೇ ಕಟ್ಟಾವಾದಿ ಕನ್ನಡಿಗರ ದೃಷ್ಟಿಯಲ್ಲಿ ಕನ್ನಡ ದ್ರೋಹ ಎನಿಸುವ ಪರಿಸರ ಆಗ ಇತ್ತು. ಆದರೆ ಅದೇ ಕಾಲಕ್ಕೆ ಕನ್ನಡ ಮತ್ತು ಮಲೆಯಾಳದ ಲೇಖಕರನ್ನು ಒಂದುಗೂಡಿಸುವ ನವ್ಯ (ಮಲೆಯಾಳದಲ್ಲಿ ‘ಆಧುನಿಕ’) ಸಾಹಿತ್ಯ ಮೂಡಿಬರುತ್ತಿತ್ತು. ಕೇರಳದಲ್ಲಿ ಇದ್ದ ನನಗೆ ಅನೇಕ ಮಲೆಯಾಳಿ ಯುವ ಲೇಖಕರ ಪರಿಚಯ ಉಂಟಾಯಿತು; ಅವರ ಜತೆ ನನಗೆ ಯಾವ ವೈಮನಸ್ಸೂ ಇರಲಿಲ್ಲ; ಅವರಾದರೂ ನನ್ನನ್ನು ಪರಕೀಯನೆಂದು ತಿಳಿದುಕೊಳ್ಳಲಿಲ್ಲ.

ನಮ್ಮ ನಡುವೆ ಸಾಹಿತಿಗಳ ಮಿತ್ರತ್ವ ಬೆಳೆಯಿತು. ಅಲ್ಲದೆ ಮಲೆಯಾಳದ ಸುಪ್ರಸಿದ್ಧ ಆಧುನಿಕ ಕವಿ ಅಯ್ಯಪ್ಪ ಪಣಿಕ್ಕರ್ ನನ್ನ ವಿದ್ಯಾಗುರುಗಳೂ ಆಗಿದ್ದರು. ಅವರು ನಡೆಸುತ್ತಿದ್ದ ‘ಕೇರಳ ಕವಿತ’ ಎಂಬ ಪತ್ರಿಕೆ ತುಂಬಾ ಪ್ರಭಾವಶಾಲಿಯಾಗಿತ್ತು. ಆ ಪತ್ರಿಕೆಗೋಸ್ಕರ ಕನ್ನಡ ಕವಿತೆಗಳನ್ನು ಅನುವಾದಕ್ಕೆ ಒದಗಿಸುವಲ್ಲಿ ನನ್ನ ಪಾತ್ರವೂ ತಕ್ಕ ಮಟ್ಟಿಗೆ ಇತ್ತು. ಮಲೆಯಾಳಿ ಕವಿಗಳು ನನ್ನ ಜತೆ ಕುಳಿತು ಅನುವಾದ ಕಾರ್ಯದಲ್ಲಿ ತೊಡಗುತ್ತಿದ್ದರು. ಅದೇ ರೀತಿ ಮಲೆಯಾಳಿ ಲೇಖಕರ ಪರಿಚಯವೂ ಕನ್ನಡಿಗರಿಗೆ ಆಗತೊಡಗಿತು. ಸಾಂಸ್ಕೃತಿಕವಾಗಿ ಈ ಸಂಬಂಧ ಆ ಕಾಲದಲ್ಲಿಯೂ ಮುಂದೆಯೂ ಬಹಳ ಮುಖ್ಯವಾಗಿತ್ತು ಎನ್ನುವುದು ನನ್ನ ನಂಬಿಕೆ. ಕಾಸರಗೋಡಿನ ಕೆಲವು ಮಲೆಯಾಳವಾದಿಗಳು ಸಹಾ ಸಾಹಿತ್ಯಿಕವಾಗಿ ನಮ್ಮ ಜತೆ ಇದ್ದರು ಎನ್ನುವುದು ನನಗೆ ಸಂತೋಷದ ವಿಷಯ; ಅವರಲ್ಲಿ ಕೆಲವರು ದ್ವಿಭಾಷಿಗಳೂ ಇದ್ದರು, ಹಾಗೂ ಕನ್ನಡದ ಉತ್ತಮ ಸಾಹಿತ್ಯ ಕೃತಿಗಳನ್ನು ಅವರು ಮಲೆಯಾಳಕ್ಕೆ ಅನುವಾದಿಸಿದರು. ಪರಸ್ಪರ ಅರಿವು ಮತ್ತು ಸಹಕಾರ ಹಲವು ತಪ್ಪುಕಲ್ಪನೆಗಳನ್ನು ದೂರ ಮಾಡುತ್ತವೆ.

ಭಾಷಾಂತರದ ಜತೆ ನನ್ನ ಎರಡನೇ ಬ್ರಶ್ ನಡೆದದ್ದು ಸುಮಾರು ಎಪ್ಪತ್ತರ ದಶಕದಲ್ಲಿ, ನವ್ಯ ಸಾಹಿತ್ಯ ತನ್ನ ಪ್ರಾದುರ್ಭಾವ ಸ್ಥಿತಿಯಲ್ಲಿದ್ದಾಗ. ಆಗ ನಾನು ಮಾಡಿದ ಭಾಷಾಂತರ ಕನ್ನಡದಿಂದ ಇಂಗ್ಲಿಷ್‌ಗೆ. ಸಂಖ್ಯೆಯಲ್ಲಿ ಹೆಚ್ಚೇನಲ್ಲ, ಆದರೂ ನನ್ನ ಮಟ್ಟಿಗೆ ಅವು ಮುಖ್ಯವೇ ಆಗಿದ್ದುವು. ಸಾಂಸ್ಕೃತಿಕವಾಗಿ ನಾನು ಮುಖ್ಯವಾದ್ದೇನೋ ಮಾಡುತ್ತಿದ್ದೇನೆ ಎಂಬ ಭಾವ ನನಗೆ. ಪೇಜಾವರ ಸದಾಶಿವರಾಯರ ‘ನಾಟ್ಯೋತ್ಸವ’, ಗೋಪಾಲಕೃಷ್ಣ ಅಡಿಗರ ‘ಭೂತ’, ಯು.ಆರ್‌. ಅನಂತಮೂರ್ತಿಯವರ ‘ಕಿಳ್ಳೆಕ್ಯಾತರ ಹುಡುಗಿ’, ಪಿ. ಲಂಕೇಶರ ‘ಬಿಚ್ಚು’ ಮತ್ತು ‘ಅವ್ವ’ ಮುಂತಾದ ಕವಿತೆಗಳು ಇವುಗಳಲ್ಲಿ ಸೇರಿವೆ. ನನ್ನ ಇಂಗ್ಲಿಷ್ ಭಾಷಾಂತರಗಳು ಎಲ್ಲೆಲ್ಲೋ ಪ್ರಕಟಗೊಂಡಿವೆ; ಎಲ್ಲೆಂದು ನನಗೀಗ ಸರಿಯಾಗಿ ನೆನಪಿಲ್ಲ.

ಕೆಲವು ಕವಿತೆಗಳು ಮೂಲ ಲಯವನ್ನು ಕೂಡ ಇಂಗ್ಲಿಷ್‌ನಲ್ಲಿ ತರಲು ಯತ್ನಿಸಿದೆ: ಇವುಗಳಲ್ಲಿ ಪೇಜಾವರ ಸದಾಶಿವರಾಯರ ‘ನಾಟ್ಯೋತ್ಸವ’ ಒಂದು. ಇನ್ನು ಗದ್ಯಕ್ಕೆ ಬಂದರೆ, ಅನಂತಮೂರ್ತಿಯವರ ‘ನವಿಲುಗಳು’ ಕತೆ, ‘ಭಾರತೀಪುರ’ದ ಒಂದು ಮುಖ್ಯ ಅಧ್ಯಾಯ (ಜಗನ್ನಾಥ ಹರಿಜನರಿಗೆ ಸಾಲಿಗ್ರಾಮವನ್ನು ಮುಟ್ಟಲು ಒತ್ತಾಯಿಸುವ ಸನ್ನಿವೇಶ), ಲಂಕೇಶರ ಕತೆಗಳಾದ ‘ಮುಟ್ಟು’ ಮತ್ತು ‘ಕಲ್ಲುಕರಗುವ ಸಮಯ’ ನನ್ನ ಇಂಗ್ಲಿಷ್ ಭಾಷಾಂತರಗಳಲ್ಲಿ ಸೇರಿವೆ. ‘ಕಲ್ಲು ಕರಗುವ ಸಮಯ’ಕ್ಕೆ ಸಂಬಂಧಿಸಿ ಒಂದು ಮಾತು. ಅಕ್ಷರಶಃ ಈ ಶೀರ್ಷಿಕೆ ಇಂಗ್ಲಿಷ್‌ನಲ್ಲಿ The Time when Stone melts ಎಂದು ಆಗುತ್ತದೆ; ಆದರೆ ನಾನದನ್ನು The Molten Time ಎಂದು ಪರಿವರ್ತಿಸಿದೆ; ಕೆಲವರಿಗದು ಹಿಡಿಸಲಿಲ್ಲ, ಆದರೆ ನನಗೆ ಅದು ಸಂದರ್ಭಕ್ಕೆ ಸರಿಯೆನಿಸಿತು!

ಆ ನಂತರ ನಾನು ನನ್ನದೇ ಔದ್ಯೋಗಿಕ ಜೀವನದಲ್ಲಿ ಮುಳುಗಿದೆ; ಆ ಹೊತ್ತಿಗೆ ನಾನು ದೂರದ ಹೈದರಾಬಾದಿಗೆ ಬಂದಿದ್ದೆ. ಕನ್ನಡದ ಸಂಪರ್ಕವೂ ಕಡಿಮೆಯಾಯಿತು. ಈ ದೀರ್ಘಾವಧಿಯಲ್ಲಿ ನಾನು ಯಾವ ಭಾಷಾಂತರವನ್ನೂ ಮಾಡಲಿಲ್ಲ. ನಾನು ನನ್ನದೇ ಕವಿತೆಗಳನ್ನು ಭಾಷಾಂತರಿಸಿದ್ದೂ ಅಲ್ಪ. ಯಾವ ಯಾವುದೋ ಕಾರಣಕ್ಕಾಗಿ ನಾಲ್ಕೈದು ಕವಿತೆಗಳನ್ನು ಇಂಗ್ಲಿಷಿಗೆ ತರಬೇಕಾಯಿತು, ಅಷ್ಟೆ.
ಹೈದರಾಬಾದಿನ ಉದ್ಯೋಗದಿಂದ ನಾನು ನಿವೃತ್ತನಾದ ಮೇಲೆಯೂ ಒಂದು ದಶಕದ ಕಾಲ ನಾನು ಅಧ್ಯಾಪಕ ವೃತ್ತಿಯನ್ನು ಬೇರೆ ದೇಶಗಳಲ್ಲಿ ಮುಂದುವರಿಸಿದೆ. ಜೀವನದ ಕೊನೆ ಘಟ್ಟದಲ್ಲಿ ಮತ್ತೊಮ್ಮೆ ಭಾಷಾಂತರ ಶುರುಮಾಡಿದೆ: ಈ ಬಾರಿ ಇಂಗ್ಲಿಷ್‌ನಿಂದ ಕನ್ನಡಕ್ಕೆ. ಅದೇಕೋ ಕನ್ನಡದಿಂದ ದೂರ ಹೋದಂತೆ ಕನ್ನಡದ ತೊಳಲು ಜಾಸ್ತಿಯಾಗುತ್ತದೆ! ಅದೊಂದು ಭಾವನಾತ್ಮಕ ಸಂಬಂಧ. ನಾನು ಮೆಚ್ಚುವ ಕೃತಿಗಳನ್ನು ಕನ್ನಡಕ್ಕೆ ತರಬೇಕೆಂಬ ಹಂಬಲದಿಂದ ಪ್ರೇರಿತವಾದ ಭಾಷಾಂತರದ ಜಾಡಿನಲ್ಲಿ ನಾನು ಹೊರಟೆ.

ಆಲ್‌ಫ್ರೆಡ್ ಕುಬಿನ್‌ನ ಒಂದು ಕಾದಂಬರಿ ‘ಆಚೆ ಬದಿ’–ಕಾಫ್ಕಾನ ಪರಿಚಯವಿರುವ ಕನ್ನಡಿಗರು ಈತನನ್ನು ಕೂಡ ಪರಿಚಯಮಾಡಿಕೊಳ್ಳಬೇಕು ಎಂಬ ಇರಾದೆಯಿಂದ, ಯಾಕೆಂದರೆ ಕಾಫ್ಕಾನ ಮೇಲೆ ಪ್ರಭಾವ ಬೀರಿದ ಅವನ ಸಮಕಾಲೀನ ಈತ, ಪ್ರಮುಖವಾಗಿ ಕಲಾವಿದ, ಬರೆದುದು ಇದೊಂದೇ ಕಾದಂಬರಿ; ಜರ್ಮನ್ ಕವಿ ರಿಲ್ಕೆಯ ಅದ್ಭುತ ಕಾದಂಬರಿ ‘ಮಾಲ್ಟ ಲೌರಿಡ್ಸ್ ಬ್ರಿಗ್‌ನ ಟಿಪ್ಪಣಿ ಪುಸ್ತಕ’; ಫ್ರೆಂಚ್ ರೊಮ್ಯಾಂಟಿಕ್ ಕವಿ ಜೆರಾರ್ಡ್ ದ ನೆರ್ವಾಲನ ಪ್ರವಾಸಕಥನ-ಕಾದಂಬರಿ ‘ಪೂರ್ವಯಾನ’; ಅಮೆರಿಕನ್ ಕತೆಗಾರ ಕಾದಂಬರಿಕಾರ ಹರ್ಮನ್ ಮೆಲ್ವಿಲ್‌ನ ಕೆಲವು ಕತೆಗಳು. ಅಲ್ಲದೆ, ಲೋರ್ಕಾ, ಎಝ್ರಾ ಪೌಂಡ್, ವಾಲೇಸ್ ಸ್ಟೀವನ್ಸ್ ಮುಂತಾದವರ ಕವಿತೆಗಳು, ಶೇಕ್ಸ್‌ಪಿಯರನ ಕೆಲವು ನಾಟಕಗಳು, ಹಾಗೂ ವಿಜ್ಞಾನ ಮತ್ತು ವೈಚಾರಿಕತೆಯಲ್ಲಿ ನನಗೆ ಆಸಕ್ತಿಯಿರುವುದರಿಂದ ಅಂಥ ಕೆಲವು ಲೇಖನಗಳನ್ನೂ ಕನ್ನಡಕ್ಕೆ ತರುವ ಪ್ರಯತ್ನ ಮಾಡಿದ್ದೇನೆ.

ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೇಗೆ ಭಾಷಾಂತರಿಸಬೇಕು ಎನ್ನುವುದೊಂದು ಪ್ರಶ್ನೆ. ಕನ್ನಡಕ್ಕೆ ಬಂದ ಕೃತಿ ಕನ್ನಡದ್ದೇ ಎಂದು ಎನಿಸಬೇಕೇ? ಅಥವಾ ಅದರಲ್ಲಿ ಮೂಲದ ಚಿಹ್ನೆಗಳು ಇದ್ದರೆ ಪರವಾಯಿಲ್ಲವೇ? ಭಾಷಾಂತರಿಸುವಾಗ ನಾವು ಏನನ್ನು ಭಾಷಾಂತರಿಸುತ್ತೇವೆ– ಕತೆ ಅಥವಾ ವಸ್ತುವನ್ನೇ, ಅಥವಾ ಶೈಲಿಯನ್ನು ಕೂಡ? ಯಾಕೆ ಭಾಷಾಂತರಿಸುತ್ತೇವೆ? ಇಂಥ ಪ್ರಶ್ನೆಗಳಿಗೆ ನಾನು ನನ್ನದೇ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದೇನೆ. ನಾವು ಮಾಡುವ ಭಾಷಾಂತರದಿಂದ ಕನ್ನಡಕ್ಕೆ ಏನಾದರೂ ಒಂದಾದರೂ ಸಿಗಬೇಕು– ಏನೇ ಇರಲಿ. ಭಾಷಾಂತರ ಎನ್ನುವುದೊಂದು ಕಾಮನಬಿಲ್ಲು ಇದ್ದಹಾಗೆ; ಅದಕ್ಕೆ ಬೇರೆ ಬೇರೆ ಕೊನೆಗಳಿವೆ: ಸಾಧಾರ, ಸಾರಾಂಶ, ರೂಪಾಂತರ, ಅನುವಾದ, ಭಾವಾನುವಾದ ಇತ್ಯಾದಿ. ಕೆಲವು ಕಾಲಘಟ್ಟಗಳಲ್ಲಿ ಕೆಲವೊಂದು ಹೆಚ್ಚು ಸಾಧುವಾಗುತ್ತವೆ.

ಉದಾಹರಣೆಗೆ, ಬಿ.ಎಂ.ಶ್ರೀ. ಯವರ ‘ಇಂಗ್ಲಿಷ್ ಗೀತೆಗಳು’ ರೂಪಾಂತರಗಳು; ಆ ಕಾಲಕ್ಕೆ ಅವು ಅಗತ್ಯವಾಗಿದ್ದುವು. ಆದರೆ ನಾನಿಂದು ರೂಪಾಂತರಗಳನ್ನು ಮಾಡುವ ಸ್ಥಿತಿಯಲ್ಲಿ ಇಲ್ಲ. ನನ್ನ ಭಾಷಾಂತರಗಳು ‘ಕನ್ನಡದಲ್ಲಿ ಕನ್ನಡದ್ದೇ’ ಎಂಬ ರೀತಿಯಲ್ಲಿ ಇರುವುದಿಲ್ಲ. ಬೇರೆಯವರು ಬೇರೆ ರೀತಿಯಲ್ಲಿ ಮಾಡಿದರೆ ಅದೂ ಸ್ವಾಗತಾರ್ಹವೇ.

ಇನ್ನು ವೈಜ್ಞಾನಿಕ, ತತ್ವಜ್ಞಾನಿಕ, ಮತ್ತು ಈಚೆಗಿನ ಕೆಲವು ವಿಮರ್ಶಾ ಲೇಖನಗಳ ವಿಷಯಕ್ಕೆ ಬಂದಾಗ ಇಲ್ಲಿ ಪಾರಿಭಾಷಿಕ ಪದಗಳ ಸಮಸ್ಯೆ ಎದುರಾಗುತ್ತದೆ. ಯಾವುದೇ ಕ್ಷೇತ್ರಕ್ಕೆ ಪಾರಿಭಾಷಿಕ ಪದಗಳು ಅತ್ಯಗತ್ಯ. ಯಾಕೆಂದರೆ ಅವು ವಿಶೇಷ ಅರ್ಥದ ಒಂದು ಪ್ಯಾಕೇಜ್ ಇದ್ದಹಾಗೆ. ಉದಾಹರಣೆಗೆ, ಡಿಕನ್‌ಸ್ಟ್ರಕ್ಷನ್; ಇದಕ್ಕೀಗ ಕನ್ನಡದಲ್ಲಿ ‘ನಿರಚನೆ’ ಎನ್ನುತ್ತಾರೆ. ಒಳ್ಳೆಯ ಪದ. ಆದರೆ ಇತರ ಹಲವಾರು ವಿದೇಶೀಯ ಪದಗಳಿಗೆ ಕನ್ನಡದಲ್ಲಿ ಪ್ರಚಲಿತವಾದ ಪದಗಳಿಲ್ಲ. ಇದು ಪದಗಳ ಸಮಸ್ಯೆ ಮಾತ್ರವೂ ಅಲ್ಲ. ಕೆಲವು ಲೇಖಕರು ಇಂಗ್ಲಿಷ್‌ನಲ್ಲಿ ಬಹಳ ಸಾಂದ್ರವಾಗಿ ಬರೆಯುವುದನ್ನು ನಾನು ಗಮನಸಿದ್ದೇನೆ. ಸಾಂದ್ರವಾದ್ದು ಸಾಕಷ್ಟು ಕ್ಲಿಷ್ಟವೂ ಆಗಿರುತ್ತದೆ.

ಉದಾಹರಣೆಗೆ, ರೂಪಾಂತರ ವ್ಯಾಕರಣದ ಸಿದ್ಧಾಂತಿ ನೋಮ್ ಚಾಮ್ಸ್‌ಕಿ. ಸಾಂದ್ರ ಎಂದರೆ ವಾಕ್ಯವೊಂದರಲ್ಲಿ ಅನೇಕ ವಿಷಯಗಳನ್ನು ಇರಿಸುವುದು: ಮುಖ್ಯ ವಾಕ್ಯದಲ್ಲಿ ಉಪವಾಕ್ಯಗಳ ಸರಣಿಯೇ ಇರುತ್ತದೆ. ಒಂದೇ ವಾಕ್ಯದಲ್ಲಿ ಪೂರ್ವಪಕ್ಷ, ಉತ್ತರಪಕ್ಷ, ನಿದರ್ಶನಗಳು, ಸಂದೇಹಗಳು– ಎಲ್ಲವೂ ಬಂದು ಬಿಡುವುದು. ಆಗ ವಾಕ್ಯವನ್ನು ತುಂಡರಿಸಿದರೆ, ಮೂಲದ ಅರ್ಥ ನಷ್ಟವಾಗುತ್ತದೆ. ಮೂಲದ ವಾಕ್ಯ ಸರಣಿಯನ್ನೇ ಇರಿಸಿದರೆ, ಹಲವು ಸಲ ಅದು ಕನ್ನಡದ ಓದುಗರಿಗೆ ಕಷ್ಟವಾಗುತ್ತದೆ. ಯಾಕೆಂದರೆ, ಕನ್ನಡ ಇನ್ನೂ ಅಂಥ ಶೈಲಿಗೆ ಒಗ್ಗಿಕೊಂಡಿಲ್ಲ. ಸಾಹಿತ್ಯದಲ್ಲಿ ಹರ್ಮನ್ ಮೆಲ್ವಿಲ್‌ನ ಭಾಷೆ ಬಹಳ ವಿಧಗಳಲ್ಲಿ ಕ್ಲಿಷ್ವವಾಗಿದೆ; ಈ ಕ್ಲಿಷ್ಟತೆಯ ಒಂದು ಕಾರಣ ವಿಷಯ ಸಾಂದ್ರತೆ.

ಕೆಲವರು ಕೇಳುವುದಿದೆ, ಓಹೋ ಇದು ಮೂಲದ ಜರ್ಮನ್ (ಅಥವಾ ಫ್ರೆಂಚ್, ಸ್ಪ್ಯಾನಿಶ್ ಇತ್ಯಾದಿ) ಇಂಗ್ಲಿಷ್‌ಗೆ ಭಾಷಾಂತರಗೊಂಡು ಅದನ್ನು ನೀನು ಕನ್ನಡಕ್ಕೆ ತಂದುದಲ್ಲವೇ ಎಂಬುದಾಗಿ. ಅದು ನಿಜ, ಯಾಕೆಂದರೆ ನನಗೆ ಮೂಲದ ಭಾಷೆಗಳು ಬರುವುದಿಲ್ಲ; ಆದ್ದರಿಂದ ನನ್ನದು ಭಾಷಾಂತರದ ಭಾಷಾಂತರ ಎನ್ನುವುದು ನಿಜ– ಪ್ಲೇಟೋವಿನ ಪ್ರಸಿದ್ಧ ಮೇಜಿನ ಹಾಗೆ! ಮೂಲಕ್ಕೆ ದುಪ್ಪಟ್ಟು ದೂರ. ಅಷ್ಟಕ್ಕೇನಾಯಿತು? ಮೂಲದ ಭಾಷೆ ಗೊತ್ತಿರುತ್ತಿದ್ದರೆ ಅದರಿಂದಲೇ ಭಾಷಾಂತರ ಮಾಡಬಹುದಾಗಿತ್ತು. ಗೊತ್ತಿಲ್ಲದ ಕಾರಣ ಇಂಗ್ಲಿಷ್ ಭಾಷಾಂತರವನ್ನು ಮೂಲವಾಗಿ ಬಳಸಬೇಕಾಗಿದೆ. ಲೋಕದಲ್ಲಿ ಹೆಚ್ಚಿನವರಿಗೂ ಟಾಲ್‌ಸ್ಟಾಯ್, ಬಾಲ್‌ಝಾಕ್, ಸರ್ವಾಂಟಿಸ್ ಮುಂತಾದವರ ಕೃತಿಗಳು ಇಂಗ್ಲಿಷ್ ಮೂಲಕವೇ ಪರಿಚಯವಾದುದು. ಅನಂತಮೂರ್ತಿಯವರ ‘ಸಂಸ್ಕಾರ’ ಲೋಕದ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ; ಆದರೆ ನೇರವಾಗಿ ಕನ್ನಡದಿಂದ ಆದುದು ಬಹುಶಃ ಅಪರೂಪ; ಎ.ಕೆ. ರಾಮಾನುಜನ್ ಅವರು ಮಾಡಿದ ಇಂಗ್ಲಿಷ್ ಭಾಷಾಂತರದಿಂದಲೇ ಈ ಎಲ್ಲಾ ಭಾಷಾಂತರಗಳೂ ಆದುವು.

ಶೇಕ್ಸ್‌ಪಿಯರ್‌ನ ನಾಟಕಗಳ ಪ್ರಸ್ತಾಪ ಬಂದಾಗ, ಈ ನಾಟಕದ ಭಾಷಾಂತರ ಕನ್ನಡದಲ್ಲಿ ಬಂದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಬರದೆ ಇರುತ್ತದೆಯೇ? ಆದರೆ ನನ್ನ ಭಾಷಾಂತರ ನನ್ನದೇ. ಭಾಷಾಂತರದ ಕುರಿತು ಸೀಮಿತ ಅಪೇಕ್ಷೆಯುಳ್ಳವರು ಮಾತ್ರವೇ ಇಂಥ ಮಾತೆತ್ತುತ್ತಾರೆ. ಪ್ರತಿಯೊಬ್ಬನ ಭಾಷಾಂತರವೂ ಒಂದೇ ಮೂಲದಿಂದ ಶುರುವಾದರೂ ಹಲವು ರೀತಿಯಲ್ಲಿ ಭಿನ್ನವಾಗಿರುತ್ತದೆ ಎನ್ನುವುದನ್ನು ತಿಳಿದಿರಬೇಕು. ಈ ಭಿನ್ನತೆಗಳನ್ನು ಹೋಲಿಸಿ ನೋಡಿ ಯಾವುದು ಯಾಕೆ ಹೆಚ್ಚು ಸಮಂಜಸ ಎಂಬ ಜಿಜ್ಞಾಸೆಯನ್ನು ಬೇಕಾದರೆ ನಡೆಸಬಹುದು. ಭಾಷೆ ಬದಲಾಗುತ್ತ ಹೋದಂತೆ ಹಾಗೂ ವ್ಯಕ್ತಿದೃಷ್ಟಿ ವಿಭಿನ್ನವಾಗಿ ಇದ್ದಷ್ಟು ಕಾಲವೂ ಒಂದೇ ಪಠ್ಯದ ಹಲವು ಭಾಷಾಂತರಗಳಿಗೆ ಅವಕಾಶ ಇದ್ದೇ ಇರುತ್ತದೆ.

ಭಾಷಾಂತರಗಳಿಗೆ ತೀರಾ ಕಮರ್ಷಿಯಲ್ ಆದಂಥ ಕೆಲವು ಎಡರು ತೊಡರುಗಳಿವೆ: ಪ್ರಕಾಶಕರ ಅಭಾವ ಅವುಗಳಲ್ಲಿ ಒಂದು. ಮೂಲ (ಕಮರ್ಶಿಯಲ್ ದೃಷ್ಟಿಯಿಂದ) ಜನಪ್ರಿಯವಾದ ಕೃತಿಯಾಗಿದ್ದರೆ ಅದಕ್ಕೆ ಪ್ರಕಾಶಕರು ಸುಲಭದಲ್ಲಿ ಸಿಗುತ್ತಾರೆ. ಅದಲ್ಲ, ನೀವೊಂದು ಬೇರೆ ಭಾಷೆಯ ಕೃತಿಯನ್ನು ಅದರ ಆಂತರಿಕ ಗುಣಗಳಿಗೋಸ್ಕರ ಮೆಚ್ಚಿ ಭಾಷಾಂತರ ಮಾಡಿದ್ದೀರಿ ಎಂದಾದರೆ ಪ್ರಕಾಶಕರು ಸಿಗುವುದು ದುರ್ಲಭ. ಇಂದು ಶೇಕ್ಸ್‌ಪಿಯರನ ಕೃತಿಗಳು ಮೂಲದಲ್ಲೇ ಜನಕ್ಕೆ ಬೇಡ; ಇನ್ನು ಅವುಗಳ ಭಾಷಾಂತರ ಯಾರಿಗೆ ಬೇಕು? ಕವಿತೆಗಳ ಸ್ಥಿತಿಯೂ ಇದುವೇ. ಎಝ್ರಾ ಪೌಂಡ್, ಎಲಿಯಟ್, ಸ್ಟೀವನ್ಸ್ ಮುಂತಾದ ಕವಿಗಳಿಗೆ ಇಂಗ್ಲಿಷ್ ವಲಯದಲ್ಲಿ ದೊಡ್ಡ ಹೆಸರೇನೋ ಇದೆ; ಆದರೆ ಅವುಗಳ ಭಾಷಾಂತರ? ಇನ್ನು ಹಿಮೆನೆಝ್, ಲೋರ್ಕಾ, ರಿಲ್ಕೆ, ಕವಾಫಿ? ಭಾಷಾಂತರದ ಭಾಷಾಂತರಗಳು, ಯಾಕೆಂದರೆ ಇವರ ಕವಿತೆಗಳು ನಮಗೆ ಸಿಗುವುದು ಇಂಗ್ಲಿಷ್ ಭಾಷಾಂತರದಲ್ಲಿ.

ಇನ್ನು, ಮೂಲದ ಸೊಗಡಿಲ್ಲ, ಚೆಲುವಿಲ್ಲ, ಮೂಲಕ್ಕೆ ನ್ಯಾಯ ಸಿಕ್ಕಿಲ್ಲ, ಅಥವಾ ಕನ್ನಡ ಅಂತಲೆ ಅನಿಸುವುದಿಲ್ಲ ಎಂದು ಮುಂತಾಗಿ ಹೇಳಿ ಭಾಷಾಂತರಗಳನ್ನು ಡಿಸ್‌ಮಿಸ್ ಮಾಡುವುದು ಎಷ್ಟೊಂದು ಸುಲಭ! ಆದರ್ಶ ಭಾಷಾಂತರ ಎನ್ನುವುದೊಂದು ಕಲ್ಪನೆ ಮಾತ್ರ; ವಾಸ್ತವದಲ್ಲಿ ಅಂಥದೊಂದು ಇಲ್ಲ. ಎಲ್ಲಾ ಭಾಷಾಂತರಗಳೂ ಒಂದಲ್ಲ ಒಂದು ಸಮಸ್ಯೆಯನ್ನು ಒಳಗೊಂಡಿರುತ್ತವೆ: ಮೂಲ ಮತ್ತು ಗುರಿ ಭಾಷೆಗಳು ಸ್ವಭಾವದಲ್ಲಿ ಭಿನ್ನವಾದಷ್ಟೂ ಈ ಸಮಸ್ಯೆಗಳು ಹೆಚ್ಚೆಚ್ಚು ಮೊನಚಾಗುತ್ತವೆ. ಇದರಿಂದ ಪಾರಾಗುವುದು ಯಾರಿಗೂ ಸಾಧ್ಯವಿಲ್ಲ.

ಸಾಹಿತ್ಯಿಕ ಭಾಷಾಂತರ ಒಂದು ಪ್ರೀತಿಯ ಕಾಯಕವೇ ಹೊರತು ಯಾವುದೇ ಖ್ಯಾತಿಗೋಸ್ಕರ ಮಾಡುವ ಕೆಲಸವಲ್ಲ. ಜನಪ್ರಿಯ ಪುಸ್ತಕಗಳನ್ನು ಭಾಷಾಂತರ ಮಾಡುವವರಿಗೆ ಧನಲಾಭ ಇರಬಹುದು. ಭಾಷಾಂತರ ಮಾಡಿಯೇ ಸಂಪತ್ತು ಗಳಿಸಿದವರು ಇದ್ದಾರೆ. ಅಂಥ ಕೃತಿಗಳ ಬಗ್ಗೆ ಅಲ್ಲ ನಾನೀ ಮಾತುಗಳನ್ನು ಹೇಳುವುದು. ಸಿನಿಮಾ ಹಾಡುಗಳನ್ನು ಬರೆದು ಶ್ರೀಮಂತರಾದವರು ಇದ್ದಾರೆ; ಆದರೆ ಕವಿತೆಗಳನ್ನು ಬರೆದು ಯಾರೂ ಶ್ರೀಮಂತರಾಗಿಲ್ಲ. ಭಾಷಾಂತರ ಕ್ಷೇತ್ರವೂ ಹೀಗೆಯೇ.

ನನ್ನ ಸಾಹಿತಿ ಮಿತ್ರರೊಬ್ಬರು ನನಗೆ ಅಂದಿದ್ದರು: ಯಾಕೆ ಭಾಷಾಂತರದಲ್ಲಿ ಸಮಯ ಹಾಳು ಮಾಡುತ್ತೀಯಾ? ನಾವು ನಮ್ಮದೇ ಕೋಲವನ್ನು ಕಟ್ಟಿಕೊಳ್ಳಬೇಕು, ಎಂಬುದಾಗಿ. ಅವರು ಹೇಳಿದ್ದರಲ್ಲಿ ತಥ್ಯವಿಲ್ಲದೆ ಇಲ್ಲ. ಭಾಷಾಂತರದಲ್ಲಿ ನಾನು ನನ್ನ ಜೀವನದ ಗಣನೀಯ ಕಾಲವನ್ನು ಕಳೆದಿದ್ದೇನೆ. ಆ ಸಮಯದಲ್ಲಿ ನನ್ನದೇ ಏನಾದರೂ ಬರೆಯಬಹುದಾಗಿತ್ತು– ನಮ್ಮ ಮುಂದಿರುವ ಕೆಲವು ಮಾದರಿಗಳ ತರ. ಆಗ ಕಾಣುವುದಕ್ಕಾದರೂ ಒಂದು ಮಹಾಸೌಧ ಇರುತ್ತಿತ್ತು. ಆದರೆ ತಲೆಯೊಳಗೆ ಇತರ ಹುಳ ಹೊಕ್ಕ ನನ್ನಂಥವರು ಹಿಡಿಯುವ ದಾರಿ ಬೇರೆಯೇ! ಕನ್ನಡಕ್ಕಾಗಿ ಏನೋ ಮಾಡುತ್ತಿದ್ದೇನೆ ಎಂಬ ಮಹಾ ಭ್ರಮೆಯೊಂದು ಹೊಕ್ಕು ಭಾಷಾಂತರ ಮಾಡಿದೆ. ಅದೆಲ್ಲಾ ವ್ಯರ್ಥವಾಯಿತೇ? ತಿಳಿಯದು. ಆದರೆ, ಬಹುಶಃ ಟಾಲ್‌ಸ್ಟಾಯ್ ಹೇಳಿದಂತೆ, ಜೀವನದಲ್ಲಿ ಭ್ರಮೆಗಳೇ ಇಲ್ಲದಿದ್ದರೆ ಮತ್ತೆ ಬದುಕುವುದಾದರೂ ಯಾಕೆ? ಕತೆ, ಕವಿತೆ, ಕಾದಂಬರಿ, ನಾಟಕ, ಚಿತ್ರ, ನೃತ್ಯ, ಭಾಷೋದ್ಧಾರ, ದೇಶೋದ್ಧಾರ ಎಲ್ಲವೂ ಭ್ರಮೆಗಳೇ! ಜತೆಯಲ್ಲಿ ಭಾಷಾಂತರ.

ಕೆಲವು ವರ್ಷಗಳ ಹಿಂದೆ ಭಾಷಾಂತರ ಥಿಯರಿಯ ಕುರಿತು ಇಂಗ್ಲಿಷ್‌ನಲ್ಲಿ ನಾನೊಂದು ಲೇಖನ ಬರೆದಿದ್ದೆ: Translation as Literature Three ಎನ್ನುವುದು ಅದರ ಶೀರ್ಷಿಕೆಯಾಗಿತ್ತು. ಇದು ವಾಲ್ಟರ್ ಬೆಂಜಮಿನ್‌ನ ‘ಥರ್ಡ್ ಲ್ಯಾಂಗ್ವೇಜ್’ ಎಂಬ ಪರಿಕಲ್ಪನೆಯನ್ನು ನೆನಪಿಗೆ ತಂದರೆ ಆಶ್ಚರ್ಯವಿಲ್ಲ; ಆದರೆ ನನ್ನ ಈ ‘ಮೂರನೇ ಸಾಹಿತ್ಯ’ಕ್ಕೂ ಬೆಂಜಮಿನ್‌ನ ‘ಮೂರನೇ ಭಾಷೆ’ಗೂ ಯಾವ ಸಂಬಂಧವೂ ಇಲ್ಲ. ಬೆಂಜಮಿನ್ ಪ್ರಕಾರ ಮೂಲ ಭಾಷೆಗೂ ಗುರಿ ಭಾಷೆಗೂ (ವಾಸ್ತವದಲ್ಲಿ ಎಲ್ಲಾ ಭಾಷೆಗಳಿಗೂ) ಅತೀತವಾದ ಶುದ್ಧ ಭಾಷೆಯೊಂದು ಇದೆ; ಅದುವೇ ಮೂರನೇ ಭಾಷೆ. ಭಾಷಾಂತರ ಈ ಮೂರನೇ ಭಾಷೆಯನ್ನು ಸಾಕೃತಗೊಳಿಸಲು ನೆರವಾಗುವಂಥದು.

ನನ್ನ ಮೂರನೇ ಸಾಹಿತ್ಯದ ಕಲ್ಪನೆ ಬೇರೆ: ಭಾಷಾಂತರ (ಅಥವಾ ಅನುವಾದ) ಸಾಹಿತ್ಯ ಎಂದೂ ದೇಸಿ (ನೇಟಿವ್ ಎನ್ನುವ ಅರ್ಥದಲ್ಲಿ) ಸಾಹಿತ್ಯವಾಗಿ ಸ್ವೀಕೃತವಾಗುವುದಿಲ್ಲ; ಅದು ದೇಸಿ ಸಾಹಿತ್ಯಕ್ಕೆ ವಾರೆಯಾಗಿಯೇ ನಿಲ್ಲುತ್ತದೆ. ಆದರೆ ಕಾಲಾವಧಿಯಲ್ಲಿ ಅದು ದೇಸಿ ಸಾಹಿತ್ಯ ಕೃತಿಗಳ ಮೇಲೆ ಪ್ರಭಾವ ಬೀರುತ್ತದೆ. ಇದೊಂದು ‘ಪರ್ಕೊಲೇಶನ್ ಇಫೆಕ್ಟ್’ (ಸೋರುವಿಕೆಯ ಪರಿಣಾಮ). ಕಾಫ್ಕಾ, ಕಮೂ, ಎಲಿಯೆಟ್ ಮುಂತಾದವರ ಬರಹಗಳ ಕನ್ನಡ ಭಾಷಾಂತರಗಳು ಇಂಥ ಪರಿಣಾಮಗಳನ್ನು ಉಂಟುಮಾಡಿವೆ. ಡಿವಿಜಿಯವರು ಉಮರ್ ಖಯ್ಯಾಮನ ರುಬಾಯತುಗಳನ್ನು (ಎಡ್ವರ್ಡ್ ಫಿಟ್ಝೆರಾಲ್ಡ್‌ನ ಇಂಗ್ಲಿಷ್ ಅನುವಾದದಿಂದ) ಕನ್ನಡಕ್ಕೆ ‘ಉಮರನ ಒಸಗೆ’ ಎಂಬ ಹೆಸರಿನಲ್ಲಿ ತಂದರು; ಡಿವಿಜಿಯವರದು ರೂಪಾಂತರ ಮತ್ತು ಭಾಷಾಂತರಗಳ ಮಧ್ಯದ ಒಂದು ವಿಧಾನವಾಗಿತ್ತು. ನಂತರ ಅವರು ಸ್ವತಃ ‘ಮಂಕುತಿಮ್ಮನ ಕಗ್ಗ’ ರಚಿಸುವುದಕ್ಕೆ ಇದು ಸಹಾಯ ಮಾಡಿತು.

ಇದೆಲ್ಲವನ್ನೂ ನೋಡಿದಾಗ ನಮಗೆ ಕಾಣಿಸುವುದು ಒಂದು ಅದ್ಭುತವಾದ ಸಾಂಸ್ಕೃತಿಕ ವಿದ್ಯಮಾನ: ಇಂಗ್ಲಿಷ್‌ನಲ್ಲಿ ಹೇಳುವಂಥ ‘ಟಚ್ ಏಂಡ್ ಗೋ’ ವಿಧಾನ. ಭಾಷಾಂತರವೆನ್ನುವುದು ನಾವು ಹೊಸ ಸಂಗತಿಗಳನ್ನು ನಮಗೆ ಬೇಕೆಂದು ನಮ್ಮ ಭಾಷೆಗೆ ತರುವ ಒಂದು ವ್ಯಾಪಾರ. ಯಾವುದೇ ಎರಡು ಭಾಷೆಗಳು, ಅವು ಎರಡು ಎನ್ನುವ ಕಾರಣಕ್ಕೇನೇ, ಭಿನ್ನವಾಗಿರುತ್ತವೆ. ಎರಡನ್ನೂ ಒಂದರ ಮೇಲೆ ಒಂದನ್ನು ಇರಿಸಿದಾಗ ಅವು ಪರಿಪೂರ್ಣವಾಗಿ ಹೊಂದುವುದಿಲ್ಲ. ಭಾಷೆಗಳು ಪರಸ್ಪರ ವಾರೆಯಾಗಿಯೇ ಇರುತ್ತವೆ. ಈ ಸಮಸ್ಯೆಯನ್ನು ಒಪ್ಪಿಕೊಂಡೇ ನಾವು ಭಾಷಾಂತರವನ್ನು ನೋಡಬೇಕಾಗುತ್ತದೆ. ಇದರರ್ಥ ಭಾಷಾಂತರಗಳು ವಿಮರ್ಶೆಗೆ ಒಳಗಾಗಬಾರದು ಎಂದಲ್ಲ.

ವಿಮರ್ಶಿಸುವಾಗಲೂ ನಾವು ನಿಜಕ್ಕೂ ಏನನ್ನು ವಿಮರ್ಶಿಸುತ್ತೇವೆ ಎನ್ನುವ ಪರಿಜ್ಞಾನ ಬೇಕಾಗುತ್ತದೆ. ಅಲ್ಲದೆ, ನಾವು ಭಾಷಾಂತರದ ಬಗ್ಗೆ ಎಷ್ಟು ಲೇಖನಗಳನ್ನಾದರೂ ಓದಬಹುದು, ಥಿಯರಿಗಳನ್ನು ಹಾರಿಬಿಡಬಹುದು, ಜಿಜ್ಞಾಸೆ ನಡೆಸಬಹುದು; ಆದರೆ ನಿಜವಾಗಿ ಭಾಷಾಂತರಕ್ಕೆ ಕುಳಿತಾಗ ಅವು ಯಾವುವೂ ನಮ್ಮ ಸಹಾಯಕ್ಕೆ ಬರುವುದಿಲ್ಲ. ಅವು ಸಹಾಯಕ್ಕೆ ಬರದಿರುವುದೇ ಒಳ್ಳೆಯದು; ಯಾಕೆಂದರೆ ಅಂಥವು ಹಸ್ತಕ್ಷೇಪವಾಗುತ್ತವೆಯೇ ವಿನಾ ನಿಜವಾದ ಸಹಾಯವಲ್ಲ. ಒಂದೆರಡು ಡಿಕ್ಷನರಿಗಳು, ವಿಶ್ವಕೋಶಗಳು ಇದ್ದರೆ ಸರಿ. ಓದಿ ತೋರಿಸುವುದಕ್ಕೆ, ಸಲಹೆ ಕೇಳುವುದಕ್ಕೆ ಕೆಲವು ಗೆಳೆಯರಿದ್ದರೆ ಉತ್ತಮ. ಅದಕ್ಕಿಂತ ಹೆಚ್ಚಿನ ಯಾವುದೂ ಸಕ್ರಿಯ ಭಾಷಾಂತರದಲ್ಲಿ ಸಹಾಯಕ್ಕೆ ಬರುವುದಿಲ್ಲ.

ವಸ್ತುಗಳು, ವಿಚಾರಗಳು, ಸಿದ್ಧಾಂತಗಳು, ತತ್ವಗಳು, ವಿಧಾನಗಳು ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತ ಇರುತ್ತವೆ. ಅವು ಕೆಲವು ಸಲ ಭಾಷಾಂತರದ ಮೂಲಕ ಇರಬಹುದು, ನೇರವಾಗಿಯೂ ಇರಬಹುದು. ಫ್ರೆಂಚ್ ಮಹಾಕ್ರಾಂತಿ ಫ್ರಾನ್ಸ್‌ನಲ್ಲಿ ನಡೆಯಿತು; ಆದರೆ ಬಹು ಬೇಗನೆ ಅದು ಇಡೀ ಯುರೋಪಿನಲ್ಲಿ ಹರಡಿತು. ವಿಜ್ಞಾನದ ಸೂಕ್ಷ್ಮ ಸಂಶೋಧನೆಗಳು ಎಲ್ಲೋ ಹುಟ್ಟುತ್ತವೆ, ಎಲ್ಲೆಲ್ಲೋ ವ್ಯಾಪಿಸುತ್ತವೆ, ವಿಶ್ವವ್ಯಾಪಿಯಾಗುತ್ತವೆ. ತಂತ್ರಜ್ಞಾನವೂ, ಸಾಹಿತ್ಯವೂ ಅದೇ ರೀತಿ. ಅವುಗಳ ಗಡಿಗಳು, ರಾಷ್ಟ್ರೀಯತೆಗಳು ತಾತ್ಕಾಲಿಕ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT