ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನಮತ ಶಮನಕ್ಕೆ ಮುಖ್ಯಮಂತ್ರಿ ತಂತ್ರ

Last Updated 24 ಜೂನ್ 2016, 20:33 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಭಿನ್ನಮತ ಶಮನ ಮಾಡುವ ಪ್ರಯತ್ನ ಆರಂಭಿಸಿದ್ದಾರೆ.
ಮುಖ್ಯಮಂತ್ರಿಗಳೇ ಖುದ್ದು ಭಿನ್ನಮತೀಯ ಶಾಸಕರಾದ ಮಾಲೀಕಯ್ಯ ಗುತ್ತೇದಾರ್‌ ಹಾಗೂ ಎಸ್.ಟಿ. ಸೋಮಶೇಖರ್‌ ಅವರನ್ನು ಕರೆಸಿಕೊಂಡು ಮನವೊಲಿಸುವ ಕಸರತ್ತು ನಡೆಸಿದ್ದಾರೆ.

ಈ ಇಬ್ಬರಿಗೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಡುವುದಾಗಿ ಹೇಳಿದ್ದಾರೆ. ಅಲ್ಲದೆ, ಸಂಪುಟ ದರ್ಜೆ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ. ಉಳಿದ ಬಂಡಾಯ ಶಾಸಕರ ಜತೆ ಮಾತುಕತೆ ನಡೆಸಲು ತಮ್ಮ ಆಪ್ತರನ್ನು ಕಳುಹಿಸಿದ್ದಾರೆ.ಇದರಿಂದಾಗಿ ಬಂಡಾಯ ಶಾಸಕರನ್ನು ಒಗ್ಗೂಡಿಸಲು ಹಿರಿಯ ನಾಯಕರಾದ ಶ್ರೀನಿವಾಸ ಪ್ರಸಾದ್‌ ಹಾಗೂ ಅಂಬರೀಷ್‌ ರೂಪಿಸಿರುವ ಕಾರ್ಯತಂತ್ರಕ್ಕೆ ಹಿನ್ನಡೆಯಾಗಿದೆ.

ಸೋಮವಾರದಿಂದ ಸತತವಾಗಿ ಸಭೆಗಳನ್ನು ನಡೆಸಿದ ಭಿನ್ನಮತೀಯ ಶಾಸಕರು ಶುಕ್ರವಾರ ಒಂದೆಡೆ ಸೇರಲಿಲ್ಲ. ಮಾಲೀಕಯ್ಯ ಗುತ್ತೇದಾರ್‌, ಪತ್ನಿಗೆ ಹುಷಾರಿಲ್ಲ ಎಂದು ಹೇಳಿ ಹೈದರಾಬಾದ್‌ಗೆ ಹಾರಿದರು. ಸೋಮಶೇಖರ್‌ ಸಿ.ಎಂ ಜತೆಯಲ್ಲೇ ಇದ್ದರು. ಡಾ. ಮಾಲಕ ರೆಡ್ಡಿ ಯಾರನ್ನೂ ಭೇಟಿ ಮಾಡಲಿಲ್ಲ. ಬಾಬುರಾವ್‌ ಚಿಂಚನಸೂರ್ ಭಿನ್ನರ ಕೈಗೆ ಸಿಗದೆ ಓಡಾಡುತ್ತಿದ್ದಾರೆ.

ಹಿರಿಯ ಸಚಿವರ ಸಭೆ: ಮುಖ್ಯಮಂತ್ರಿ ಶುಕ್ರವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಹಿರಿಯ ಸಚಿವರಿಗೆ ಏರ್ಪಡಿಸಿದ್ದ ಉಪಾಹಾರ ಸಭೆಯಲ್ಲಿ, ಸದ್ಯದಲ್ಲೇ ಖಾಲಿ ಆಗಲಿರುವ ಕೆಲವು ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ಶಾಸಕರನ್ನು ನೇಮಕ ಮಾಡುವ ಸುಳಿವು ನೀಡಿದ್ದಾರೆ.

ಒಂದೂವರೆ ವರ್ಷದ ಹಿಂದೆ ನಿಗಮ– ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿದೆ. ಈ ನೇಮಕಾತಿ ಸಮಯದಲ್ಲೇ 18 ತಿಂಗಳ ಬಳಿಕ ಬೇರೆಯವರಿಗೆ ಸ್ಥಾನ ಬಿಟ್ಟುಕೊಡಬೇಕು ಎನ್ನುವ ಷರತ್ತು ಹಾಕಲಾಗಿದೆ.

ಈ ಷರತ್ತಿನಂತೆ ಕೆಲವು ನಿಗಮ– ಮಂಡಳಿಗಳ ಅಧ್ಯಕ್ಷರ ಅವಧಿ ಮುಗಿದಿದ್ದು, ಸೇವಾವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ.
ಖಾಲಿ ಆಗಲಿರುವ ನಿಗಮ ಮಂಡಳಿಗಳ ಪಟ್ಟಿ ಸಿದ್ಧವಾಗುತ್ತಿದ್ದು, ಈ ಸ್ಥಾನಗಳಿಗೆ ಯಾರನ್ನು ನೇಮಿಸಬೇಕೆಂಬ ಕುರಿತು ಮುಖ್ಯಮಂತ್ರಿಗಳು ಹೈಕಮಾಂಡ್‌ ಜತೆ ಚರ್ಚೆ ನಡೆಸಲಿದ್ದಾರೆ.

ರಾಜ್ಯದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರೊಂದಿಗೆ ಸಿದ್ದರಾಮಯ್ಯ ಮೊದಲ ಸುತ್ತಿನ ಚರ್ಚೆ ಮಾಡಲಿದ್ದಾರೆ. ಇಬ್ಬರೂ ಸೇರಿ ಸಿದ್ಧಪಡಿಸುವ ಪಟ್ಟಿಗೆ ಹೈಕಮಾಂಡ್‌ ಅಂತಿಮ ಒಪ್ಪಿಗೆ ನೀಡಲಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹೇಳಿಯೇ ಕೈಬಿಡಲಾಗಿದೆ: ‘ನಾನು ಏಕಾಏಕಿಯಾಗಿ ಯಾವ ಸಚಿವರನ್ನೂ ತೆಗೆದಿಲ್ಲ. ಪುನರ್‌ರಚನೆಗೆ ಮೊದಲು ಕರೆದಿದ್ದ ಮಂತ್ರಿ ಮಂಡಲದ ಸಭೆಯಲ್ಲಿ ಪುನರ್‌ರಚನೆ ಅನಿವಾರ್ಯ ಆಗಿರುವುದರಿಂದ ಕೆಲವು ಸಚಿವರನ್ನು ಕೈಬಿಡಬೇಕಾದ ವಿಷಯವನ್ನು ಮನವರಿಕೆ ಮಾಡಿದ್ದೆ’ ಎಂದು ತಮ್ಮ ಸಹೊದ್ಯೋಗಿಗಳಿಗೆ ಸ್ಪಷ್ಟಪಡಿಸಿದ್ದಾರೆ.

ವಿರೋಧ ಪಕ್ಷಗಳ ನಾಯಕರು ಹಾಗೂ ಮಾಧ್ಯಮಗಳು ಸತತವಾಗಿ ಕಣ್ಣು ಕಾಣದವರು, ಕಿವಿ ಕೇಳದವರು, ಅನಾರೋಗ್ಯ ಪೀಡಿತರು ಸಚಿವರಾಗಿದ್ದಾರೆ ಎಂಬ ಟೀಕೆಗಳನ್ನು  ಮಾಡಿದ್ದರಿಂದ ಹೊಸ ಸಚಿವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದೂ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು ಎಂದು ಮೂಲಗಳು ವಿವರಿಸಿವೆ.

ಸ್ಪೀಕರ್‌ ಸ್ಥಾನಕ್ಕೆ ಕೆ.ಬಿ. ಕೋಳಿವಾಡ ಅವರ ಆಯ್ಕೆ ಹಾಗೂ ಇದೇ 27, 28ರಂದು ನಡೆಯಲಿರುವ ಜಿಲ್ಲಾಧಿಕಾರಿಗಳ ಸಭೆ ಬಗ್ಗೆಯೂ ಅವರು ಸಭೆಗೆ ಮಾಹಿತಿ ನೀಡಿದ್ದಾರೆ.

ಹಿರಿಯ ಸಚಿವರ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮುಖ್ಯಮಂತ್ರಿ, ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಮತವೂ ಇಲ್ಲ, ಗುಂಪುಗಾರಿಕೆಯೂ ಇಲ್ಲ ಎಂದು ಪ್ರತಿಪಾದಿಸಿದರು.

ಇವೆಲ್ಲವೂ ಮಾಧ್ಯಮಗಳ ಸೃಷ್ಟಿ ಅಷ್ಟೆ. ಮಂತ್ರಿ ಮಂಡಲ ಪುನರ್‌ರಚನೆ ಬಳಿಕ ಅಸಮಾಧಾನ ಸಹಜ. ಅದನ್ನೇ ದೊಡ್ಡದು ಮಾಡಲಾಗುತ್ತಿದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT