ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪಗಳ ತವರು

Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಹಿಮಾಲಯದಲ್ಲಿ 100 ವರ್ಷಗಳಲ್ಲಿ ಸರಾಸರಿ ನಾಲ್ಕು  ಅಥವಾ ಐದು ಬಾರಿ ದೊಡ್ಡ ಪ್ರಮಾಣದ ಭೂಕಂಪಗಳು ಸಂಭವಿಸುತ್ತವೆ

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಶನಿವಾರ ಸಣ್ಣ ಮಳೆ ಜೊತೆಗೆ ತಣ್ಣಗೆ ಚಳಿಗಾಳಿಯೂ ಬೀಸುತ್ತಿತ್ತು.  ಅರ್ಧದಷ್ಟು ಜನರು ಮನೆಗಳ ಒಳಗೆ, ಉಳಿದವರು  ಬೀದಿಗಳಿಗೆ ಬಂದಿದ್ದರು. ಬೆಳಿಗ್ಗೆ 11.56ರ ಸಮಯ. ಕಠ್ಮಂಡುವಿನ ವಾಯವ್ಯ ದಿಕ್ಕಿಗೆ 82 ಕಿ.ಮೀ. ದೂರದ ಲಾಮ್‌ಜಂಗ್‌ ಹತ್ತಿರ ಕೇಂದ್ರಿತಗೊಂಡಿದ್ದ ಪ್ರಬಲ ಭೂಕಂಪ ಭೂಮಿಯನ್ನೊಮ್ಮೆ ಹಿಡಿದು ಅಲ್ಲಾಡಿಸಿದಂತಾಗಿ ಭೂಮಿ ಒಮ್ಮೆಲೆ ಕಂಪಿಸಿತು.

ಜನ ಅಲ್ಲೋಲ ಕಲ್ಲೋಲವಾದರು. ದೊಡ್ಡದೊಡ್ಡ ಕಟ್ಟಡಗಳು, ಮನೆಗಳು ಜನರ ಕಣ್ಣು ಮುಂದೆಯೇ ಕುಸಿದುಬಿದ್ದವು. ಮನೆಗಳ ಒಳಗಿದ್ದ ಸಾವಿರಾರು ಜನ ಗಾಬರಿಯಿಂದ ಬೀದಿಗೆ ಓಡಿಬಂದರು, ಉಳಿದವರು ಏನು ನಡೆಯುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಬಗೆ ಬಗೆಯ  ಕಟ್ಟಡಗಳು ಕುಸಿದುಬಿದ್ದವು. ಜನರು ಅದರ ಒಳಗೆ ಸಿಕ್ಕಿಕೊಂಡರು. ಇದೆಲ್ಲ ಕೇವಲ ಎರಡು ನಿಮಿಷಗಳಲ್ಲಿ ನಡೆದುಹೋಗಿತ್ತು. ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.8 ರಿಂದ 8.1ರಷ್ಟು ದಾಖಲಾಗಿತ್ತು.  ನೆಲದಿಂದ 15 ಕಿ.ಮೀ. ಆಳದಲ್ಲಿ ಭೂಕಂಪ ಕೇಂದ್ರಿತಗೊಂಡಿತ್ತು.  ಕಠ್ಮಂಡು 30 ಲಕ್ಷ ಜನಸಂಖ್ಯೆ ಹೊಂದಿದೆ.  ಇವರಲ್ಲಿ ಹೆಚ್ಚು ಜನರು ಸಾವುನೋವಿಗೆ ಒಳಗಾದರು.

ಕಠ್ಮಂಡು ನೂರಾರು  ಪುರಾತನ ಹಿಂದೂ ದೇವಾಲಯಗಳು, ಅರಮನೆಗಳು ಮತ್ತು ಪುರಾತನ ಸ್ಮಾರಕಗಳನ್ನು ಹೊಂದಿದ ನಗರ. ಹೆಚ್ಚು ಮನೆಗಳು ಕಲ್ಲು– ಮಣ್ಣಿನಿಂದ ನಿರ್ಮಾಣಗೊಂಡಿವೆ. ರಸ್ತೆಗಳು ಇಕ್ಕಟ್ಟಿನಿಂದ ಕೂಡಿವೆ. ಲಾಮ್‌ಜಂಗ್‌ ಪಟ್ಟಣದ ಹತ್ತಿರ ಕೇಂದ್ರಿತಗೊಂಡಿದ್ದ ಭೂಕಂಪದಿಂದ ಅದರ ಸುತ್ತಮುತ್ತಲಿನ ಹಳ್ಳಿ, ಪಟ್ಟಣಗಳು ಹೆಚ್ಚು ತೊಂದರೆಗೆ ಸಿಲುಕಿದವು.  ಅದೃಷ್ಟವಶಾತ್‌ ಭೂಕಂಪ ಹಗಲು ಹೊತ್ತಿನಲ್ಲಿ  ಘಟಿಸಿತು. ರಾತ್ರಿ ವೇಳೆ ಸಂಭವಿಸಿದ್ದಿದ್ದರೆ  ಸಾವು ನೋವಿನ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇತ್ತು. ಈ ಭೂಕಂಪ ಎಷ್ಟು ತೀವ್ರವಾಗಿತ್ತೆಂದರೆ, ಸಿಲುಗುರಿ, ಆಗ್ರಾದಲ್ಲೂ ಹಳೆ ಕಟ್ಟಡಗಳು ಕುಸಿದುಬಿದ್ದಿವು.

ಕರ್ನಾಟಕದ ಮಂಗಳೂರಿನ ಜನರಿಗೂ ಈ ಭೂಕಂಪದ ಅನುಭವವಾಯಿತು. ಭಾರತದ ಅನೇಕ  ನಗರಗಳು ಮಾತ್ರವಲ್ಲದೆ ಪಾಕಿಸ್ತಾನ, ಬಾಂಗ್ಲಾ, ಟಿಬೆಟ್, ಚೀನಾ ದೇಶಗಳ ಜನರಿಗೂ ಭೂಕಂಪದ ಆಘಾತ ತಟ್ಟಿತು. ಜನರು ಮನೆ, ಕಚೇರಿಗಳಿಂದ ಗಾಬರಿಯಿಂದ ಹೊರಕ್ಕೆ ಓಡಿಬಂದರು. ವಾರಾಣಸಿಯಲ್ಲಿ ಕಾಲ್ತುಳಿತ ಸಂಭವಿಸಿತು. ದೆಹಲಿಯ ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು.  ಎವರೆಸ್ಟ್ ಏರಲು ಹೋಗಿದ್ದ ಪರ್ವತಾರೋಹಿಗಳಿಗೂ ಭೂಕಂಪದ ಅನುಭವವಾಗಿದೆ.  ಭೂಕುಸಿತದಿಂದ ಹಲವರು ಜೀವ ಕಳೆದುಕೊಂಡಿದ್ದಾರೆ.

ಸುಮಾರು 400 ವರ್ಷಗಳ ಭೂಕಂಪದ ದಾಖಲೆಗಳನ್ನು ಅವಲೋಕಿಸಿದಾಗ, ಈ ಭೂಮಿಯ ಮೇಲೆ ಮುಖ್ಯವಾಗಿ ಎರಡು ಭೂಕಂಪ ವಲಯಗಳು ಕಾಣುತ್ತವೆ. ಒಂದು ಶಾಂತಸಾಗರವನ್ನು ಸುತ್ತುವರಿದ ಪ್ರದೇಶ. ಇನ್ನೊಂದು ವಲಯ ಈಸ್ಟ್ ಇಂಡೀಸ್‌ನಿಂದ ಆರಂಭವಾಗಿ ಹಿಮಾಲಯ, ಕ್ಯಾಸ್‌ಕಸ್, ಆಲ್ಪ್ಸ್ ಪರ್ವತ ಶ್ರೇಣಿಗಳನ್ನು ಹಾದು ಮೆಡಿಟರೇನಿಯನ್‌ವರೆಗೆ ಸಾಗುತ್ತದೆ. ಭಾರತದಲ್ಲಿ ಮುಖ್ಯವಾಗಿ ಮೂರು ಭೂಕಂಪ ವಲಯಗಳನ್ನು ಗುರುತಿಸಬಹುದು. ಅದರಲ್ಲಿ ಹೆಚ್ಚು ಹಾನಿಗೆ ಒಳಗಾಗುವುದು ಹಿಮಾಲಯ ವಲಯ. ಇಷ್ಟಕ್ಕೂ ಹೆಚ್ಚು ಭೂಕಂಪಗಳು ಹಿಮಾಲಯದಲ್ಲಿ ಏಕೆ ಸಂಭವಿಸುತ್ತವೆ? ಅದಕ್ಕೆ ವೈಜ್ಞಾನಿಕ ಕಾರಣಗಳಿವೆ. ಹಿಮಾಲಯ ಭೂಕಂಪಗಳ ತವರು. 

ಇಲ್ಲಿ 100 ವರ್ಷಗಳಲ್ಲಿ ಸರಾಸರಿ ನಾಲ್ಕು  ಅಥವಾ ಐದು ಬಾರಿ ದೊಡ್ಡ ಪ್ರಮಾಣದ ಭೂಕಂಪಗಳು ಘಟಿಸುತ್ತವೆ. ವಿಪರ್ಯಾಸವೆಂದರೆ ಇಡೀ ನೇಪಾಳ ದೇಶ ಹಿಮಾಲಯ ಪರ್ವತಗಳ ಮಡಿಲಲ್ಲಿದೆ.  ಪಶ್ಚಿಮದಲ್ಲಿ ಆಪ್ಘಾನಿಸ್ತಾನದಿಂದ ಹಿಡಿದು ಪೂರ್ವದಲ್ಲಿ ಮ್ಯಾನ್ಮಾರ್‌ವರಗೆ ಚಾಚಿಕೊಂಡಿರುವ ಹಿಮಾಲಯ ಶ್ರೇಣಿಯ ಉದ್ದ 2400 ಕಿ.ಮೀ. ಅಗಲ 160 ಕಿ.ಮೀ.ದಿಂದ 400 ಕಿ.ಮೀ.ವರೆಗೂ ಇದೆ.  ಹಿಮಾಲಯವು ಪೃಥ್ವಿಯ ಮೇಲೆ ಅತಿ ಎತ್ತರದ ಪರ್ವತ ಶ್ರೇಣಿಗಳನ್ನು ಹೊಂದಿದ್ದು ವರ್ಷಕ್ಕೆ ಆರರಿಂದ 10 ಸೆಂಟಿಮೀಟರ್‌ವರೆಗೆ ಬೆಳೆಯುತ್ತಿದೆ. ಯುರೇಷ್ಯಾ ಮತ್ತು ಇಂಡಿಯಾ ಭೂಖಂಡಗಳು ಎದುರುಬದುರಾಗಿ ಘರ್ಷಣೆಗೆ ನಿಂತಾಗ ಎರಡೂ ಖಂಡಗಳ ಅಂಚಿನಿಂದ ಕೊಚ್ಚಿ ಬರುತ್ತಿದ್ದ ಅಗಾಧ ಮರಳು, ಮೆಕ್ಕಲುಮಣ್ಣು ಪೂರ್ವ ಮತ್ತು  ಪಶ್ಚಿಮದಲ್ಲಿ  ಸಂಚಯನಗೊಳ್ಳುತ್ತಿತ್ತು.

ಹೀಗೆ ಸಂಚಯನ ಮೂಡುತ್ತಿದ್ದ ಸಾಗರವನ್ನು ಮುಂದೆ ಟೆಥಿಸ್ ಮಹಾಸಾಗರ ಎಂದು ಕರೆಯಲಾಯಿತು. ಉತ್ತರದಲ್ಲಿ ಯುರೇಷ್ಯಾ ಮತ್ತು ದಕ್ಷಿಣದಲ್ಲಿ ಇಂಡಿಯಾ ಭೂಫಲಕಗಳು ಮೆಲ್ಲಮೆಲ್ಲನೆ ಟೆಥಿಸ್ ಮಹಾಸಾಗರದ ಕತ್ತನ್ನು ಹಿಸುಕಲು ಪ್ರಾರಂಭಿಸಿದವು. ಇಂಡಿಯಾ ಫಲಕ ದಕ್ಷಿಣದಿಂದ ಉತ್ತರದ ಕಡೆಗೆ ನೂಕಲು ಪ್ರಾರಂಭಿಸಿದರೆ, ಉತ್ತರದಲ್ಲಿದ್ದ ಯುರೇಷ್ಯಾ ಫಲಕ ಒತ್ತಿ ಹಿಡಿದುಕೊಂಡಿತು. ಪರಿಣಾಮ ಟೆಥಿಸ್ ಸಾಗರದ ಸಂಚಯನವೆಲ್ಲ ಹಿಮಾಲಯ ಪರ್ವತಗಳಾಗಿ ಅದರಲ್ಲೂ ಮಧ್ಯ ಹಿಮಾಲಯ ಟಿಬೆಟ್ ಪ್ರಸ್ಥಭೂಮಿ ಅಥವಾ ಪ್ರಪಂಚದ ಮೇಲ್ಛಾವಣಿಯಾಗಿ ನಿಂತುಕೊಂಡಿತು.

ಹಿಮಾಲಯ ಶ್ರೇಣಿ ಐದು ಹಂತಗಳಲ್ಲಿ (3.5 ಕೋಟಿ ವರ್ಷಗಳಿಂದ 2.5 ಕೋಟಿ ವರ್ಷಗಳ ನಡುವೆ) ಇಂದಿನ ರೂಪ ಪಡೆದುಕೊಂಡಿತು. ಎರಡು ಭೂಖಂಡ ಅಥವಾ ಭೂಫಲಕಗಳ ನಡುವೆ ಅಗಾಧವಾದ ಬಿರುಕುಗಳಿದ್ದು, ಅವು ಚಲಿಸುತ್ತಿರುವ ಕಾರಣ ಘರ್ಷಣೆಗೆ ಒಳಗಾಗುತ್ತವೆ. ಎರಡು ಫಲಕಗಳ ಮಧ್ಯೆ ಸಿಕ್ಕಿಕೊಂಡಿರುವ ಹಿಮಾಲಯದ ಮೆದು ಶಿಲೆಗಳ ನಡುವೆ ರಾಕ್ಷಸ ಬಿರುಕುಗಳು ಅಥವಾ ದೈತ್ಯ ಸ್ತರಭಂಗಗಳಿವೆ. ಎರಡು ಭೂಫಲಕಗಳ ನಡುವೆ ನೂರಾರು ವರ್ಷಗಳ ಕಾಲ ಒತ್ತಡ ಬೆಳೆದು ಮುಂಚೂಣಿಯಲ್ಲಿರುವ ಶಿಲೆಗಳು ಒಮ್ಮೆಲೆ ಆಳದಲ್ಲಿ ಮುರಿದುಬಿದ್ದಾಗ ಭೂಕಂಪ ಘಟಿಸುತ್ತದೆ. ಇದೇ ಕಠ್ಮಂಡು ಪ್ರದೇಶದಲ್ಲಿ 1255ರಲ್ಲಿ ಆದ ಭೂಕಂಪದಿಂದ ಇಡೀ ನಗರ ನೆಲಸಮವಾದ ದಾಖಲೆ ಇದೆ.

ಆದಾದ 679 ವರ್ಷಗಳ ನಂತರ 1934ರಲ್ಲಿ ದೊಡ್ಡ ಭೂಕಂಪವಾಗಿತ್ತು. ಮತ್ತೆ 81 ವರ್ಷಗಳ ನಂತರ ಈಗ ಸಂಭವಿಸಿದೆ. ಕಳೆದ 100 ವರ್ಷಗಳಲ್ಲಾದ ಅತ್ಯಂತ ಪ್ರಬಲ ಭೂಕಂಪಗಳೆಂದರೆ, 1847-ಅಸ್ಸಾಂ, 1905-ಕಾಂಗ್ರಾ, 1934-ಬಿಹಾರ್-ನೇಪಾಳ, 1950-ಅಸ್ಸಾಂ. ದೊಡ್ಡ ಕಲ್ಲೊಂದನ್ನು ನೀರಿಗೆ ಎಸೆದಾಗ ಸುತ್ತಲೂ ಅಲೆಗಳು ಏಳುತ್ತವೆ. ಅದೇ ರೀತಿ ಭೂಕಂಪದ ಮಧ್ಯಕೇಂದ್ರದಲ್ಲಿ ಹೆಚ್ಚು ಹಾನಿ ಕಾಣಿಸಿಕೊಂಡು, ದೂರಹೋದಷ್ಟೂ ಹಾನಿ ಕಡಿಮೆಯಾಗುತ್ತ ಹೋಗುತ್ತದೆ (ಇದನ್ನು ರಿಕ್ಟರ್ ಮಾಪನದಿಂದ ಅಳೆಯಲಾಗುತ್ತದೆ). ಈಗಿನ ಭೂಕಂಪದ ವ್ಯಾಪ್ತಿ ಸುಮಾರು 4000 ಚದರ ಕಿ.ಮೀ.ಗಳವರೆಗೂ ಹರಡಿದೆ.
ಲೇಖಕ ಭೂವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT