ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂದಾಹ ತಣಿಸಲು ಕೆರೆ ಆಪೋಶನ!

ಜಲಮೂಲವನ್ನೇ ಸಮಾಧಿ ಮಾಡಿದ ಭೂಗಳ್ಳರು: ನೆರವಿಗೆ ನಿಂತ ಬಿಬಿಎಂಪಿ ಅಧಿಕಾರಿಗಳು
Last Updated 20 ಆಗಸ್ಟ್ 2014, 19:51 IST
ಅಕ್ಷರ ಗಾತ್ರ

ಬೆಂಗಳೂರು: ಒಂದಾನೊಂದು ಕಾಲದಲ್ಲಿ ಪರಿಶುದ್ಧ ನೀರಿನ ಆಗರವಾಗಿತ್ತು ಉತ್ತರಹಳ್ಳಿ ಭಾಗದ ಚಿಕ್ಕ ಕಲ್ಲಸಂದ್ರ ಕೆರೆ. 12 ಎಕರೆ, 26 ಗುಂಟೆ ಪ್ರದೇಶದಲ್ಲಿ ವಿಸ್ತರಿ­ಸಿದ್ದ ಆ ಕೆರೆಯೀಗ ಭೂಗಳ್ಳರ ಪಾಲಿನ ಸ್ವರ್ಗ­ವಾಗಿ ಹೇಳ ಹೆಸರಿಲ್ಲದಂತೆ ಅಳಿದುಹೋಗಿದೆ. ಕೆರೆ ಪಾತ್ರದ ಅತಿಕ್ರಮಣದಲ್ಲಿ ಕಂದಾಯ ಅಧಿಕಾರಿಗಳು ಭಾಗಿ­ಯಾದ ವಾಸನೆಯೂ ಬಡಿಯುತ್ತಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಚಿಕ್ಕ ಕಲ್ಲಸಂದ್ರ ಗ್ರಾಮದ ಸರ್ವೆ ನಂ. 76ರಲ್ಲಿ ಈಗಲೂ ಕೆರೆ ಇದೆ ಎನ್ನು­ತ್ತವೆ ಸರ್ಕಾರದ ಎಲ್ಲ ದಾಖಲೆಗಳು. ಆದರೆ, ಆ ಜಾಗದಲ್ಲಿ ಕೆರೆಯಿದೆ ಎನ್ನುವುದಕ್ಕೆ ಈಗ ಯಾವ ಕುರು­ಹುಗಳೂ ಉಳಿದಿಲ್ಲ. ಕೆರೆಪಾತ್ರದಲ್ಲಿ ಕಾನೂನು­ಬಾಹಿರ­ವಾಗಿ ಹಲವು ಕಟ್ಟಡಗಳು ತಲೆ ಎತ್ತಿವೆ.

ಶಾಲೆಯೊಂದು ಕೆರೆ ಅಂಗಳದಲ್ಲಿ ನಡೆಯುತ್ತಿವೆ. ಪೀಠೋ­ಪಕರಣ ಮಳಿಗೆಯೊಂದು ಅಲ್ಲಿಯೇ ವಹಿ­ವಾಟು ನಡೆಸುತ್ತಿದ್ದು, ಲೋಹದ ಸಾಮಾನುಗಳ ತಯಾರಿಕಾ ಘಟಕಗಳು ಸುತ್ತ ಹರಡಿಕೊಂಡಿವೆ. ಇಷ್ಟು ಅತಿಕ್ರಮಣ ಸಾಲದೆಂಬಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಕೆರೆಯ ಮಧ್ಯೆ ಭಾಗದಲ್ಲಿ ಬಸ್‌ ನಿಲ್ದಾಣವನ್ನೂ ನಿರ್ಮಿಸಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ (ಎಲ್‌ಡಿಎ) ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪಡೆಯಲಾದ ವಿವರಣೆ ಸಹ ಕೆರೆಗೆ ಈಗಾಗಲೇ ಚರಮಗೀತೆ ಬರೆಯಲಾಗಿದೆ ಎಂಬುದನ್ನು ಸಾರುತ್ತದೆ.

‘ಪ್ರಾಧಿಕಾರದ ಬಳಿ ಲಭ್ಯವಿರುವ ದಾಖಲೆಗಳ ಪ್ರಕಾರ, ಕೆರೆ ಸಂಪೂರ್ಣವಾಗಿ ಅತಿಕ್ರಮಣಗೊಂಡಿದ್ದು, ಅದರ ಮೂಲಸ್ವರೂಪವೇ ಮಾಯವಾಗಿದೆ. ಕೆರೆಯ ಯಾವ ಲಕ್ಷಣವನ್ನೂ ಅದೀಗ ಉಳಿಸಿಕೊಂಡಿಲ್ಲ. ವಸತಿಗೃಹ, ಶಾಲೆ, ಡಾಂಬರು ಹಾಕಲಾದ ರಸ್ತೆ, ಬಸ್‌ ನಿಲ್ದಾಣ, ದೇವಸ್ಥಾನ ಹಾಗೂ ಕೊಳಚೆ ಪ್ರದೇಶ ತಲೆ ಎತ್ತಿವೆ’ ಎಂದು ಮಾಹಿತಿ ನೀಡಲಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೆರೆಯ ಹೃದಯ ಭಾಗದಲ್ಲೇ ರಸ್ತೆಯನ್ನು ನಿರ್ಮಿಸಿದೆ. ಇದು ಪಾಲಕನ ಸ್ಥಾನದಲ್ಲಿರುವ ಬಿಬಿಎಂಪಿ ಕೆರೆಗೆ ಎಸಗಿದ ಅಪಚಾರ. ಆ ರಸ್ತೆಗೆ ಸಾಹಿತಿ ಶಿವರಾಮ ಕಾರಂತ ಅವರ ಹೆಸರು ಇಡಲಾಗಿದೆ. ಕೆರೆಯ ಒಂದು ತುಂಡು ಭೂಮಿ ಮಾತ್ರ ಹಾಗೇ ಉಳಿದಿದೆ. ಮಕ್ಕಳು ಅದನ್ನು ಆಟದ ಮೈದಾನವನ್ನಾಗಿ ಬಳಕೆ ಮಾಡುತ್ತಿದ್ದಾರೆ.

ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರಣ ಚಿಕ್ಕ ಕಲ್ಲಸಂದ್ರದ ಸರ್ವೆ ನಂ. 76ರಲ್ಲಿ ಈಗಲೂ ಇರುವುದು ಕೆರೆ. ಹಿಡುವಳಿ ಮತ್ತು ಬೆಳೆ ಹಕ್ಕುಗಳ ದಾಖಲೆ (ಆರ್‌ಟಿಸಿ), ಗ್ರಾಮ ಟಿಪ್ಪಣಿ, ಗ್ರಾಮ ನಕ್ಷೆ ಎಲ್ಲವೂ ಆ ಸ್ಥಳದಲ್ಲೊಂದು ಕೆರೆ ಇತ್ತು ಎನ್ನುವುದನ್ನು ಸಂದೇಹಕ್ಕೆ ಆಸ್ಪದ ಇಲ್ಲದಂತೆ ಹೇಳುತ್ತವೆ. ಆದರೆ, ಭೂಗಳ್ಳರೆಂಬ ತಿಮಿಂಗಲುಗಳು ಇಂತಹ ಕೆರೆಯನ್ನೇ ನುಂಗಿ ನೀರು ಕುಡಿದಿವೆ.

ಕೆರೆ ಏನಾಗಿದೆ ಎನ್ನುವುದು ಕಂದಾಯ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತಿದೆ. 2010ರ ಅಕ್ಟೋಬರ್‌ನಲ್ಲಿ ಸರ್ವೇಕ್ಷಣಾ ಇಲಾಖೆಯು ಕೆರೆ ಸಮೀಕ್ಷೆ ಮಾಡಿ ನಕ್ಷೆ ಸಿದ್ಧಪಡಿಸಿದೆ. ಅತಿಕ್ರಮಣಗೊಂಡ ಪ್ರದೇಶವನ್ನು ಆ ನಕ್ಷೆಯಲ್ಲಿ ಸ್ಪಷ್ಟವಾಗಿ ಗುರುತಿಸಲಾ­ಗಿದ್ದು, ಎಂಟು ಜನ ಕಂದಾಯ ಅಧಿಕಾರಿಗಳು ಅದನ್ನು ದೃಢೀಕರಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್‌, ಸರ್ವೇಯರ್‌, ಕಂದಾಯ ಅಧಿಕಾರಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಎಲ್ಲರೂ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ನಕ್ಷೆಗೆ ಸಹಿ ಹಾಕಿದ್ದಾರೆ. ಆದರೆ, ಯಾವ ಅಧಿಕಾರಿಯೂ ಅತಿಕ್ರಮಣ ತೆರವುಗೊಳಿಸಲು ಮುಂದಾಗಲಿಲ್ಲ. ಕೆರೆ ಉಳಿಸಲಿಲ್ಲ.

ಕೆರೆ ಅಂಗಳದ ಎಲ್ಲ ಅತಿಕ್ರಮಗಳಿಗೆ ಅಧಿಕೃತ ಮುದ್ರೆ ಒತ್ತಿದ ಬಿಬಿಎಂಪಿ, ಅಲ್ಲಿನ ಕಾನೂನುಬಾಹಿರ ನಿವೇಶನಗಳಿಗೆ ಖಾತೆ ಮಾಡಿಕೊಟ್ಟಿದೆ. ಖಾತೆ ಮಾಡಿಸಿಕೊಂಡವರು ಕಟ್ಟಡ ನಿರ್ಮಿಸಿಕೊಂಡರು. ಕೆರೆ ಪಾತ್ರದಲ್ಲೇ ಕಟ್ಟಡ ಏಳುವುದು ಗೊತ್ತಿದ್ದರೂ ಅಧಿಕಾರಿಗಳು ನಕ್ಷೆಗೆ ಮಂಜೂರಾತಿ ನೀಡಿದ್ದಾರೆ. ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ಹಾಗೂ ಜಲಮಂಡಳಿ ಯಾವುದೇ ತಕರಾರು ಎತ್ತದೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಒದಗಿಸಿಕೊಟ್ಟಿವೆ.

ಕೆರೆಯಿದ್ದ ಪ್ರದೇಶಕ್ಕೆ ಯಾರಾದರೂ ಭೇಟಿ ನೀಡಿದ್ದಾದರೆ ಅಲ್ಲಿ ಅತಿಕ್ರಮಣ ಎಷ್ಟು ವ್ಯವಸ್ಥಿತವಾಗಿ ನಡೆದಿದೆ ಎನ್ನುವುದು ಕಣ್ಣಿಗೆ ಕಟ್ಟುವಂತೆ ಎದ್ದು ಕಾಣುತ್ತದೆ. ‘ಮೊದಮೊದಲು ಕೊಳಚೆ ನೀರನ್ನು ಉದ್ದೇಶ ಪೂರ್ವಕವಾಗಿಯೇ ಕೆರೆಗೆ ಬಿಡಲಾಯಿತು. ಬಳಿಕ ಕಟ್ಟಡದ ತ್ಯಾಜ್ಯವನ್ನು ನೂರಾರು ಲಾರಿಗಳಲ್ಲಿ ತಂದು ಸುರಿಯಲಾಯಿತು. ಅಧಿಕಾರಿಗಳು ಎಲ್ಲವನ್ನೂ ಮೌನವಾಗಿ ನೋಡುತ್ತಿದ್ದರು’ ಎಂದು ಸ್ಥಳೀಯರು ನೋವಿನಿಂದ ವಿವರಿಸುತ್ತಾರೆ.

ಪ್ರಾಕೃತಿಕ ಸಂಪನ್ಮೂಲದ ಈ ಹಗಲು ದರೋಡೆಗೆ ಯಾರಿಂದಲೂ ಆಕ್ಷೇಪಣೆ ಬಾರದಂತೆ ನೋಡಿಕೊಳ್ಳಲು ಪ್ರಭಾವಿ ವ್ಯಕ್ತಿಗಳಿಗೂ ನಿವೇಶನ ಹಂಚಿಕೆ ಮಾಡಲಾಯಿತು. ‘ಹಲವು ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಹ ಈ ಅಕ್ರಮದ ಫಲಾನುಭವಿಗಳಾದರು’ ಎಂಬ ಸ್ಥಳೀಯರು ಹೇಳುತ್ತಾರೆ.

ಕೆರೆಯನ್ನು ಅತಿಕ್ರಮಿಸಿಕೊಂಡ ಬಳಿಕ ಭೂ ದಾಖಲೆಗಳನ್ನು ತಿದ್ದಲಾಯಿತು. ನಿವೇಶನಗಳಿಗೆ ಸಿಕ್ಕ, ಸಿಕ್ಕ ಸರ್ವೆ ಸಂಖ್ಯೆ ನೀಡಿ ನೋಂದಣಿ ಮಾಡಿಸಲಾಯಿತು. ಈಗಲೂ ಸರಿಯಾಗಿ ತಪಾಸಣೆ ನಡೆಸಿದರೆ ನಿವೇಶನಗಳು ಇರುವ ಸ್ಥಳಕ್ಕೂ ಅವುಗಳ ಸರ್ವೆ ಸಂಖ್ಯೆಗೂ ತಾಳೆ ಆಗುವುದಿಲ್ಲ ಎಂದು ಕೆರೆ ಸಂರಕ್ಷಣೆಗೆ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರೊಬ್ಬರು ವಿವರಿಸುತ್ತಾರೆ.

ಪ್ರತ್ಯೇಕವಾದ ಆರ್‌ಟಿಐ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಬಿಬಿಎಂಪಿ ಕೆರೆಗಳ ವಿಭಾಗದ ಅಧಿಕಾರಿಗಳು, ‘ಕೆರೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಮೂಲ ನಕ್ಷೆ ಅಲಭ್ಯ. ಹೀಗಾಗಿ ಅಲ್ಲಿನ ಅತಿಕ್ರಮಣ ತೆರವುಗೊಳಿಸಿ, ಕೆರೆ ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತಿಲ್ಲ’ ಎನ್ನುವ ಉತ್ತರ ನೀಡಿದ್ದಾರೆ.

ಕೆರೆಯ ಸದ್ಯದ ಸ್ಥಿತಿ ಕುರಿತು ಮಾಹಿತಿ ಬೇಕು ಎಂದು ಪಟ್ಟು ಹಿಡಿದರೆ ‘ಕೆರೆ ಪಾತ್ರ ಭಾಗಶಃ ಅತಿಕ್ರಮಣಗೊಂಡಿದೆ’ ಎಂಬ ವಿವರಣೆ ಸಿಗುತ್ತದೆ. ‘ಬೆಂಗಳೂರು ದಕ್ಷಿಣ ತಹಶೀಲ್ದಾರರಿಂದ ನಕ್ಷೆ ಸಿಕ್ಕ ಬಳಿಕ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂಬ ಹಾರಿಕೆ ಉತ್ತರ ದೊರೆಯುತ್ತದೆ. ‘ಪ್ರಜಾವಾಣಿ’ಗೆ ಬೆಂಗಳೂರು ನಗರ ಜಿಲ್ಲಾಡಳಿತದಿಂದ ಕೆರೆಯ ಪ್ರಮಾಣೀಕೃತ ನಕ್ಷೆ ಪಡೆಯಲು ಸಾಧ್ಯವಾಗಿರುವಾಗ, ಸರ್ಕಾರದ ಭಾಗವೇ ಆಗಿರುವ ಬಿಬಿಎಂಪಿಗೆ ಅದಿನ್ನೂ ಸಿಕ್ಕಿಲ್ಲ!

ಚಿಕ್ಕ ಕಲ್ಲಸಂದ್ರ ಕೆರೆ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಬಂದ ದೂರುಗಳನ್ನು ಆಧರಿಸಿ ತಹಶೀಲ್ದಾರರು, ‘ಸ್ಥಳ ಸಮೀಕ್ಷೆ ನಡೆಸಿ ವಾಸ್ತವ ಸಂಗತಿ ಆಧರಿಸಿ ವರದಿ ನೀಡಬೇಕು’ ಎಂದು ಕಂದಾಯ ಅಧಿಕಾರಿಗೆ ಸೂಚಿಸಿದ್ದರು. ಸಮೀಕ್ಷೆ ನಡೆಸಲು ಕಂದಾಯ ಅಧಿಕಾರಿಯೊಬ್ಬರು ಕಳೆದ ಜನವರಿಯಲ್ಲೇ ಸ್ಥಳಕ್ಕೆ ತೆರಳಿದ್ದರು. ಆದರೆ, ಭೂಗಳ್ಳರಿಂದ ಆ ಅಧಿಕಾರಿ ಬೆದರಿಕೆ, ಪ್ರತಿರೋಧ ಎದುರಿಸಬೇಕಾಯಿತು.

ಅಕ್ರಮಗಳ ಕುರಿತು ಸುದೀರ್ಘ ವರದಿ ಸಿದ್ಧಪಡಿಸಿದ ಆ ಅಧಿಕಾರಿ, ತಮಗೆ ಬಂದ ಬೆದರಿಕೆ ಕರೆಗಳ ಬಗೆಗೂ ವರದಿಯಲ್ಲಿ ಪ್ರಸ್ತಾಪಿಸಿದ್ದರು. ಬಲವಾದ ಪೊಲೀಸ್‌ ರಕ್ಷಣೆ ಇಲ್ಲದೆ ಪೂರ್ಣ ಪ್ರಮಾಣದ ಸಮೀಕ್ಷೆ ಕಾರ್ಯ ನಡೆಸಲು ಅಸಾಧ್ಯ ಎಂದು ವಿವರಿಸಿದ್ದರು. ಅವರು ನೀಡಿದ ಈ ವರದಿ ಬಳಿಕ ಸಮೀಕ್ಷೆ ಕೆಲಸ ಅಷ್ಟಕ್ಕೇ ಸ್ಥಗಿತಗೊಂಡಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮ್ಯಾಜಿಸ್ಟ್ರೇಟ್‌ ಅಧಿಕಾರವೂ ಇದೆ. ಸರ್ಕಾರಿ ಭೂಮಿ ಸಂರಕ್ಷಿಸುವ ಹೊಣೆಗಾರಿಕೆಯೂ ಅವರ ಮೇಲಿದೆ. ಆದರೆ, ಅತಿಕ್ರಮಣ ತೆರವುಗೊಳಿಸಲು ಅವರು ಇದುವರೆಗೆ ಕ್ರಮ ಕೈಗೊಂಡಿಲ್ಲ. ಅತಿಕ್ರಮಣದ ವಿರುದ್ಧ ಸ್ಥಳೀಯರು ಯಾರಾದರೂ ಧ್ವನಿ ಎತ್ತಿದರೆ ಅವರ ಧ್ವನಿ ಅಡಗಿಸುವ ಕಲೆ ಭೂಗಳ್ಳರಿಗೆ ಚೆನ್ನಾಗಿ ಕರಗತವಾಗಿದೆ.

ತೋಳ್ಬಲವನ್ನೂ ಬಳಕೆ ಮಾಡಲಾಗುತ್ತಿದೆ. ಇತ್ತೀಚೆಗೆ ಛಾಯಾಗ್ರಾಹಕರೊಬ್ಬರು ಅತಿಕ್ರಮಿತ ಪ್ರದೇಶದ ಫೋಟೊ ತೆಗೆಯಲು ಹೋದಾಗ ಕೆಲವು ಕಟ್ಟುಮಸ್ತಾದ ಯುವಕರು ಬಂದು ಫೋಟೊ ತೆಗೆಯದಂತೆ ಸೂಚಿಸಿದ್ದಲ್ಲದೆ, ತಕ್ಷಣ ಜಾಗ ಖಾಲಿ ಮಾಡುವಂತೆ ಬೆದರಿಕೆ ಒಡ್ಡಿದ ಘಟನೆಯೂ ನಡೆದಿದೆ.

ಕೆರೆ ಅತಿಕ್ರಮಣದಲ್ಲಿ ರಾಜಕಾರಣಿಗಳ ಪಾತ್ರವೇ ಹಿರಿದು ಎಂದು ದೂರುತ್ತಾರೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ ಗುರಪ್ಪ ನಾಯ್ಡು. ‘ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಇಲ್ಲವೆ ಸಹಕಾರ ಇಲ್ಲದೆ ಯಾವುದೇ ಅಕ್ರಮಗಳೂ ನಡೆಯುವುದು ಅಸಾಧ್ಯ. ಹೀಗಾಗಿ ಕೆರೆ ಕಣ್ಮರೆಯಾದರೂ ಮೌನವಾಗಿರುವ ರಾಜಕಾರಣಿಗಳ ಕಡೆ ನಾವು ಅನುಮಾನದಿಂದ ನೋಡಲೇಬೇಕಿದೆ’ ಎಂದು ಅವರು
ಹೇಳುತ್ತಾರೆ.

ಕಾಂಗ್ರೆಸ್‌ ಸರ್ಕಾರವೇ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದರೂ ನಾಯ್ಡು ಅವರಿಗೂ ಕೆರೆ ಅತಿಕ್ರಮಣ ತೆರವುಗೊಳಿಸಲು ಮುಂದಾಗುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಆಗಿಲ್ಲ. ಕಳೆದ ವರ್ಷ ವಿಧಾನಸಭಾ ಚುನಾವಣೆ ನಡೆದಾಗ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕೆರೆಗೆ ಪಾದಯಾತ್ರೆ ನಡೆಸಿದ್ದರು. ಆ ಹೋರಾಟವೂ ಫಲ ನೀಡಿಲ್ಲ.

ರಾಜಕಾಲುವೆಯೂ ಕಣ್ಮರೆ!
ಬೆಂಗಳೂರು:
ಕೆರೆ ಹಾಗೂ ನದಿಗಳಿಗೆ ಮಳೆ ನೀರು ಒಯ್ಯುವ ರಾಜಕಾಲುವೆಗಳ ಒತ್ತುವರಿ ಕುರಿತಂತೆ ಹೈಕೋರ್ಟ್‌ನಲ್ಲಿ ಹಲವು ದಾವೆಗಳು ದಾಖಲಾಗಿ ಒತ್ತಡ ಹೆಚ್ಚಾಗಿದ್ದರಿಂದ ಜಿಲ್ಲಾಡಳಿತ ಬೃಹತ್‌ ನೀರುಗಾಲುವೆ (ರಾಜಕಾಲುವೆ)ಗಳ ಸಮೀಕ್ಷೆ ನಡೆಸಿದೆ.

ರಾಜಕಾಲುವೆಗಳ ಸಮೀಕ್ಷೆ ನಡೆಸಬೇಕೆಂಬ ಹೈಕೋರ್ಟ್‌ನ ನಿರ್ದೇಶನವನ್ನು ಪಾಲಿಸುವಾಗ ಜಿಲ್ಲಾಡಳಿತ ಎಷ್ಟು ‘ಕಾಳಜಿ’ ತೋರಿದೆ ಎನ್ನುವುದು ಚಿಕ್ಕ ಕಲ್ಲಸಂದ್ರ ಕೆರೆಗೆ ನೀರು ತರುವ ಕಾಲುವೆ ಸಮೀಕ್ಷೆಯಲ್ಲಿ ಎದ್ದು ಕಾಣುತ್ತದೆ. ಒತ್ತುವರಿಯಾಗಿದ್ದು ಸ್ಪಟಿಕದಷ್ಟೇ ಸ್ಪಷ್ಟವಾಗಿದ್ದರೂ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೂ ಮನಸ್ಸಿಲ್ಲ.

ಎಲ್ಲ ರಾಜಕಾಲುವೆಗಳ ಸಮೀಕ್ಷೆ ನಡೆಸಬೇಕು ಎಂದು ಹೈಕೋರ್ಟ್‌ ಮೂರು ವರ್ಷಗಳ ಹಿಂದೆಯೇ ನಿರ್ದೇಶನ ನೀಡಿತ್ತು. ಅತಿಕ್ರಮಣ ತೆರವುಗೊಳಿಸುವುದಷ್ಟೇ ಅಲ್ಲ, ಬೇಲಿಯನ್ನೂ ಹಾಕಬೇಕು ಎಂಬ ಸೂಚನೆಯನ್ನೂ ಸಹ ನೀಡಿತ್ತು.

ಕಲುಷಿತ ಇಲ್ಲವೆ ಸಂಸ್ಕರಿಸಿದ ನೀರನ್ನು ಈ ಕಾಲುವೆಗಳ ಮೂಲಕ ಹರಿಸುವಂತಿಲ್ಲ ಎಂಬ ನಿರ್ದೇಶನವನ್ನೂ ನೀಡಿತ್ತು. ವೃಷಭಾವತಿ ಹಾಗೂ ಅರ್ಕಾವತಿ ನದಿಗಳಿಗಲ್ಲದೆ ಕೆರೆಗಳಿಗೆ ನೀರುಣಿಸುವ ಈ ಕಾಲುವೆಗಳ ರಕ್ಷಣೆ ವಿಷಯದಲ್ಲಿ ಹೈಕೋರ್ಟ್‌ ಆದೇಶ ಬಹುಮುಖ್ಯವಾಗಿತ್ತು. ಕೆರೆಗಳನ್ನಷ್ಟೇ ಅಭಿವೃದ್ಧಿಪಡಿಸಿ, ಕಾಲುವೆಗಳನ್ನು ಹಾಗೇ ಬಿಟ್ಟರೆ ಜಲಮೂಲಗಳ ಪುನರುಜ್ಜೀವನ ಅಸಾಧ್ಯದ ಮಾತು.

ಜನವರಿ 5ರಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಅವರ ಜತೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಆಗಿನ ಜಿಲ್ಲಾಧಿಕಾರಿ ಜಿ.ಸಿ. ಪ್ರಕಾಶ್‌, ರಾಜಕಾಲುವೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ ಎಂದು ಪ್ರಕಟಿಸಿದ್ದರು. ಕಾಲುವೆಗಳ ನಕ್ಷೆ ಹಾಗೂ ಸಮೀಕ್ಷೆ ವರದಿಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದರು. ಈ ಹೇಳಿಕೆಯನ್ನೇ ಆಧರಿಸಿ ಚಿಕ್ಕ ಕಲ್ಲಸಂದ್ರ ಕೆರೆಯ ರಾಜಕಾಲುವೆ ನಕ್ಷೆ ಕುರಿತಂತೆ ಆರ್‌ಟಿಐ ಅಡಿಯಲ್ಲಿ ಮಾಹಿತಿಯನ್ನು ಕೇಳಲಾಗಿತ್ತು.

ಕೆರೆಯ ಕೆಳಹಂತದ ಕಾಲುವೆ ನಕ್ಷೆಯನ್ನು ನೀಡಿದ ಬಿಬಿಎಂಪಿ, ಮೇಲಿನ ಹಂತದ ಕಾಲುವೆ ಕುರಿತ ಮಾಹಿತಿಯನ್ನು ಒದಗಿಸಿರಲಿಲ್ಲ. ಆದರೆ, ಕೆರೆ ಮೇಲ್ಭಾಗದಲ್ಲಿ ಎರಡು ಕಿ.ಮೀ. ಉದ್ದಕ್ಕೂ ರಾಜಕಾಲುವೆ ಒತ್ತುವರಿಯಾಗಿದ್ದು ದೃಢಪಟ್ಟಿದೆ. ಒತ್ತುವರಿ ತೆರವು ಕಾರ್ಯಾಚರಣೆ ನಡೆದರೆ ಹಲವು ಕಟ್ಟಡಗಳು ಧರೆಗೆ ಉರುಳುವುದು ಖಚಿತವಾಗಿದೆ.

ರಾಜಕಾಲುವೆ ಕುರಿತು ಮಾಹಿತಿ ಕೇಳಿದರೆ ಬಿಬಿಎಂಪಿ ಅಧಿಕಾರಿಗಳು ನುಣುಚಿಕೊಳ್ಳಲು ಯತ್ನಿಸುತ್ತಾರೆ. ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಯತ್ತ ಬೊಟ್ಟು ತೋರಿಸಲಾಗುತ್ತದೆ. ರಾಜಕಾಲುವೆಗಳ ಕುರಿತು ಮಾಹಿತಿ ನೀಡಲು ಬಿಬಿಎಂಪಿ ಹಿಂದೇಟು ಹಾಕಲು ಇನ್ನೊಂದು ಬಲವಾದ ಕಾರಣವಿದೆ. ಬಹುತೇಕ ಎಲ್ಲ ಅತಿಕ್ರಮಣಗಳ ಹಿಂದೆ ಒಂದಿಲ್ಲೊಂದು ರೀತಿಯಲ್ಲಿ ಬಿಬಿಎಂಪಿಯ ನೆರಳಿದೆ.

ಕೇಂದ್ರ, ರಾಜ್ಯ ಸರ್ಕಾರದ ಅನುದಾನ ಮಾತ್ರವಲ್ಲದೆ ಅಂತರರಾಷ್ಟ್ರೀಯ ಬ್ಯಾಂಕ್‌ಗಳಿಂದ ಸಿಕ್ಕ ಆರ್ಥಿಕ ನೆರವನ್ನೂ ಬಳಕೆ ಮಾಡಿಕೊಂಡು ಬಿಬಿಎಂಪಿ ಪುಟ್ಟದಾದ ‘ಬಾಕ್ಸ್‌’ ಚರಂಡಿಯನ್ನು ನಿರ್ಮಿಸಿದೆ. ಇದರಿಂದ ರಾಜಕಾಲುವೆ ಇಲ್ಲವಾಗಿಸುವ ಪ್ರಕ್ರಿಯೆಗೆ ಬಲ ಸಿಕ್ಕಿದೆ. ಹೊಸದಾಗಿ ನಿರ್ಮಿಸಲಾದ ಚರಂಡಿ, ರಾಜಕಾಲುವೆಯ ಹತ್ತನೇ ಒಂದು ಭಾಗದಷ್ಟು ಮಾತ್ರವಿದೆ. ಉಳಿದ ಜಾಗ ಭೂಗಳ್ಳರ ಪಾಲಾಗಿದೆ. ರಾಜಕಾಲುವೆಯ ಸಮಾಧಿ ಮೇಲೆ ಖಾಸಗಿ ಉದ್ಯಾನ, ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣ ಮೊದಲಾದ ಕಟ್ಟಡಗಳು ತಲೆ ಎತ್ತಿವೆ.

1958ರ ನಕ್ಷೆಯಲ್ಲಿ ಕೆರೆ
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ 1958ರಲ್ಲಿ ಸಿದ್ಧಪಡಿಸಿದ ಚಿಕ್ಕ ಕಲ್ಲಸಂದ್ರ ಗ್ರಾಮದ ನಕ್ಷೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಅದರಲ್ಲಿ ಸರ್ವೆ ಸಂಖ್ಯೆ 76ರಲ್ಲಿ ಕೆರೆ ಇರುವುದನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಕೆರೆಗೆ ನೀರು ತರುತ್ತಿದ್ದ ರಾಜಕಾಲುವೆಯನ್ನೂ ಆ ನಕ್ಷೆಯಲ್ಲಿ ತೋರಿಸಲಾಗಿದೆ.

ಭೂಮಾಪನ ಇಲಾಖೆ ಇದೇ ಗ್ರಾಮದ ನಕ್ಷೆಯನ್ನು 2001ರಲ್ಲಿ ನೀಡಿದಾಗಲೂ ಕೆರೆ ಅಸ್ತಿತ್ವ­ವನ್ನು ತೋರಲಾಗಿದೆ. ಹೀಗೆ ಹಲವು ದಶಕಗಳಿಂದ ತನ್ನ ಅಸ್ತಿತ್ವವನ್ನು ಕಾಪಾಡಿ­ಕೊಂಡು ಬಂದಿದ್ದ ಕೆರೆಯನ್ನು ಈಗ ಕಣ್ಮರೆ ಮಾಡಲಾಗಿದೆ.
2010ರ ಅಕ್ಟೋಬರ್‌ನಲ್ಲಿ ಸರ್ವೇಕ್ಷಣಾ ಇಲಾಖೆಯು ಕೆರೆ ಸಮೀಕ್ಷೆ ಮಾಡಿ ಸಿದ್ಧಪ­ಡಿ­ಸಿದ ನಕ್ಷೆಯನ್ನು ಮಾಹಿತಿ ಹಕ್ಕು ಕಾಯ್ದೆ ಮೂಲಕ ‘ಪ್ರಜಾವಾಣಿ’ ಪಡೆದುಕೊಂಡಿದೆ. ಅತಿ­ಕ್ರಮ­ಣ­ಗೊಂಡ ಭಾಗವನ್ನು ಅದರಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ. ಹಗಲು ದರೋಡೆ ನಡೆ­ದಿರುವುದು ಅತ್ಯಂತ ಸ್ಪಷ್ಟವಾಗಿದ್ದರೂ ಕಂದಾಯ ಇಲಾಖೆ ಇಲ್ಲವೆ ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ಮುಗಿದ ಅಧ್ಯಾಯ
ಗ್ರಾಮದ ಜೋಡಿದಾರರು ಕಟ್ಟಿಸಿದ ಖಾಸಗಿ ಕೆರೆ ಅದಾಗಿತ್ತು. ಈ ಕೆರೆ ನಿರ್ಮಾಣಕ್ಕೆ ಯಾವುದೇ ಸಾರ್ವಜನಿಕ ಹಣವೇನೂ ವಿನಿಯೋಗ ಆಗಿಲ್ಲ. 20–25 ವರ್ಷಗಳ ಹಿಂದೆಯೇ ಹಳ್ಳಿ­ಗರು ಈ ಕೆರೆ ಪ್ರದೇಶವನ್ನು ಸ್ವಾಧೀನಕ್ಕೆ ಪಡೆದಿದ್ದು, ಖಾತೆಗಳನ್ನೂ ಮಾಡಿಸಿಕೊಂಡಿ­ದ್ದಾರೆ. ಸರ್ಕಾರದಿಂದ ಅಂತಹ ವ್ಯಕ್ತಿಗಳಿಗೆ ನೋಟಿಸ್‌ ಸಹ ಬಂದಿತ್ತು. ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಹಳ್ಳಿಗರ ಪರವಾಗಿಯೇ ತೀರ್ಪು ಬಂದಿದೆ. ಹೀಗಾಗಿ ಈ ಪ್ರಕರಣ ಈಗ ಮುಗಿದ ಅಧ್ಯಾಯ.
ಕೆರೆ ಪಕ್ಕದಲ್ಲೇ ನಮ್ಮ ಭೂಮಿಯೂ ಇದ್ದು, ಅದರ ಇತಿಹಾಸ ಸಂಪೂರ್ಣವಾಗಿ ಗೊತ್ತಿದೆ. ಈಗಾಗಲೇ ಅಧಿಕೃತ ಖಾತೆ ಆಗಿದ್ದಲ್ಲದೆ, ಹೈಕೋರ್ಟ್‌ ತೀರ್ಪು ಸಹ ಅವರ ಪರ­ವಾ­ಗಿರುವ ಕಾರಣ ಒತ್ತುವರಿ ತೆರವುಗೊಳಿಸುವುದು ಅಸಾಧ್ಯ. ನಾವೆಲ್ಲ – ಶಾಸಕರು, ಬಿಬಿ­ಎಂಪಿ ಸದಸ್ಯರು ಹಾಗೂ ಅಧಿಕಾರಿಗಳು – ಈ ವಿಷಯದಲ್ಲಿ ತುಂಬಾ ಅಸಹಾಯಕ­ರಾಗಿ­ದ್ದೇವೆ. ಅತಿಕ್ರಮಣ ತೆರವುಗೊಳಿಸಲು ಸರ್ಕಾರ ಏನಾದರೂ ಕ್ರಮ ಕೈಗೊಂಡರೆ ಸಹಕರಿಸಲು ಸಿದ್ಧರಿದ್ದೇವೆ.
–ಎಲ್‌.ಶ್ರೀನಿವಾಸ್‌, ಪದ್ಮನಾಭನಗರ ಬಿಬಿಎಂಪಿ ಸದಸ್ಯ

ಜನಪ್ರತಿನಿಧಿಗಳ ಕರಿನೆರಳು
ಜನಪ್ರತಿನಿಧಿಗಳ ಸಹಕಾರವಿಲ್ಲದೆ ಒತ್ತು­ವರಿ ಮಾಡುವುದು ಸಾಧ್ಯವೇ ಇಲ್ಲ. ಕೆರೆ ಪಾತ್ರ ನುಂಗಿದ್ದು ಹಗಲು ದರೋಡೆಯಾ­ಗಿದೆ. ರಾಜ್ಯ ಸರ್ಕಾರ ಅತಿಕ್ರಮಣವನ್ನು ಆದಷ್ಟು ಬೇಗ ತೆರವುಗೊಳಿಸಿ, ಕೆರೆಗೆ ಪುನರು­ಜ್ಜೀವನ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.
–ಗುರಪ್ಪ ನಾಯ್ಡು, ಕೆಪಿಸಿಸಿ  ಕಾರ್ಯದರ್ಶಿ

ಮಾಹಿತಿ ಇಲ್ಲ
ಚಿಕ್ಕ ಕಲ್ಲಸಂದ್ರ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ನನಗೆ ಮಾಹಿತಿ ಇಲ್ಲ. ಕೆರೆಗಳ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳ ಜತೆ ಮಾತನಾಡಿ, ಮಾಹಿತಿ ಪಡೆಯುತ್ತೇನೆ. ಅಲ್ಲೊಂದು ವೇಳೆ ಒತ್ತುವರಿಯಾಗಿದ್ದರೆ, ಅದನ್ನು ತೆರವು­ಗೊಳಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ.
–ಎಂ.ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತ

ಬಿಎಂಟಿಎಫ್‌ ಸುಮ್ಮನಿರುವುದೇಕೆ?

ಚಿಕ್ಕ ಕಲ್ಲಸಂದ್ರ ಕೆರೆ ಸಂಪೂರ್ಣವಾಗಿ ಅತಿ­ಕ್ರಮಣ­ಗೊಂಡಿದೆ. ಮನೆ, ಬಸ್‌ ನಿಲ್ದಾಣ, ಮಳಿಗೆ­ಗಳ ನಿರ್ಮಾಣ ಮಾಡಲಾಗಿದೆ. ಬೇರೆ ಪ್ರಕರಣ­ಗಳ ವಿಚಾರದಲ್ಲಿ ಅತಿಯಾಗಿ ಕ್ರಿಯಾಶೀಲವಾಗಿ­ರುವ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಈ ವಿಷಯದಲ್ಲಿ ಸುಮ್ಮನಿರು­ವುದು ಸೋಜಿಗವಾಗಿದೆ. ಎ.ಟಿ. ರಾಮಸ್ವಾಮಿ ಸಮಿತಿ ವರದಿಯಲ್ಲೂ ಈ ಕೆರೆ ಒತ್ತುವರಿಗೆ ಸಂಬಂ­ಧಿ­ಸಿ­ದಂತೆ ವಿವರವಾಗಿ ತಿಳಿಸಲಾಗಿತ್ತು. ಹೇಗಾ­ದರೂ ಒತ್ತುವರಿಯನ್ನು ತೆರವುಗೊಳಿಸಲೇಬೇಕಿದೆ.
–ಬಿ.ಎಸ್‌. ಸತ್ಯನಾರಾಯಣ, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT