ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಇಲ್ಲದಿದ್ದರೂ ಕಾಮಗಾರಿ ನಡೆಸಿದರು!

Last Updated 21 ಜುಲೈ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ಭೂಮಿಯ ಲಭ್ಯತೆಯನ್ನೇ ಖಚಿತ ಮಾಡಿಕೊಳ್ಳದೆ ವೃಷಭಾವತಿ ಕಣಿವೆಯಲ್ಲಿ ಕೊಳಚೆ ನೀರಿನ ಸಂಸ್ಕರಣಾ ಘಟಕದ ಯೋಜನೆ ರೂಪಿಸಿ, ಬಿಬಿಎಂಪಿಗೆ ₹ 7.46 ಕೋಟಿ ನಷ್ಟ ಉಂಟುಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಮಂಡಲ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ ರಾಜ್‌ ಸಮಿತಿ ಶಿಫಾರಸು ಮಾಡಿದೆ. 

ವೃಷಭಾವತಿ ಕಣಿವೆಯಲ್ಲಿ ಮಳೆ ನೀರಿನ ಚರಂಡಿ ಸೇರುವ ಕೊಳಚೆ ನೀರಿನ ಸಂಸ್ಕರಣೆಗೆ 2008ರಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ, ಅಗತ್ಯ ಭೂಮಿ ದೊರೆಯದ ಕಾರಣ ಕಾಮಗಾರಿಯನ್ನೇ ಸ್ಥಗಿತಗೊಳಿಸಲಾಗಿತ್ತು. ಈ ಪ್ರಕ್ರಿಯೆಯಿಂದ ಉಂಟಾದ ನಷ್ಟದ ಬಗೆಗೆ ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು.

ವೃಷಭಾವತಿ ಕಣಿವೆ ಸುಧಾರಣೆ ಯೋಜನೆ ಸಿದ್ಧಪಡಿಸಿದ್ದ ಬಿಬಿಎಂಪಿ, ನೀರಿನ ಸಂಸ್ಕರಣಾ ಸ್ಥಾವರ, ಸಿಮೆಂಟ್‌ ಪೈಪ್‌ಲೈನ್‌ ನಿರ್ಮಾಣ, ಫೆನ್ಸಿಂಗ್‌ ಸೇರಿದಂತೆ ಒಟ್ಟಾರೆ 28 ಕಾಮಗಾರಿಗಳನ್ನು 20 ಗುತ್ತಿಗೆದಾರರಿಗೆ ವಹಿಸಿಕೊಟ್ಟಿತ್ತು. ಈ ಯೋಜನೆಯ ಒಟ್ಟು ಮೊತ್ತ ₹ 21.71 ಕೋಟಿ ಆಗಿತ್ತು.
ಭೂಮಿಯ ಅಲಭ್ಯತೆಯಿಂದ 15 ಕಾಮಗಾರಿಗಳು ಆರಂಭವಾಗಲೇ ಇಲ್ಲ. ಉಳಿದ ಕಾಮಗಾರಿಗಳು ಅಪೂರ್ಣಗೊಂಡಿದ್ದವು. ಎಲ್ಲ ಗುತ್ತಿಗೆಗಳನ್ನು ಹೇಗಿವೆಯೋ ಅದೇ ಸ್ಥಿತಿಯಲ್ಲಿ ರದ್ದುಗೊಳಿಸುವಂತೆ 2011ರ ಸೆಪ್ಟೆಂಬರ್‌ನಲ್ಲಿ ಆಯುಕ್ತರು ಆದೇಶಿಸಿದ್ದರು. 

ಭೂಮಿ, ವಿನ್ಯಾಸ, ನಕ್ಷೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಂಡ ನಂತರ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ, ಭೂಮಿಯ ಲಭ್ಯತೆ ನಿರ್ಧರಿಸುವ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಪೈಪ್‌ಲೈನ್‌ ಅಳವಡಿಕೆಗೆ ಅನುಮತಿ ಖಚಿತಪಡಿಸಿಕೊಳ್ಳುವ ಕೆಲಸ ಆಗಿರಲಿಲ್ಲ ಎಂಬ ಆಕ್ಷೇಪ ಎತ್ತಲಾಗಿದೆ. ಅಪೂರ್ಣಗೊಂಡಿದ್ದ ಕಾಮಗಾರಿ ಪರಿಶೀಲಿಸಿದಾಗ ಪೈಪ್‌ಲೈನ್‌ ಶಿಥಿಲಾವಸ್ಥೆಯಲ್ಲಿ ಇರುವುದು, ಅಪೂರ್ಣಗೊಂಡ ಸಂಸ್ಕರಣಾ ಘಟಕದಲ್ಲಿ ಕಸಕ್ಕೆ ಬೆಂಕಿ ಹಾಕಿರುವುದು  ಕಂಡುಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿ ಮುಂದೆ ಹಾಜರಾಗಿ ಉತ್ತರಿಸಿರುವ ಬಿಬಿಎಂಪಿ ಅಧಿಕಾರಿಗಳು, ‘ಗುಜರಾತ್‌ನ ಸಬರಮತಿ ನದಿ ಕಣಿವೆ ಯೋಜನೆ ಮಾದರಿಯಲ್ಲಿ ಈ ಯೋಜನೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಲೋಕ್‌ ಅದಾಲತ್‌ನಲ್ಲಿ ಬಂದ ಆದೇಶದ ಪ್ರಕಾರ ತುರ್ತಾಗಿ ಕೆಲಸ ಆರಂಭಿಸಲಾಗಿತ್ತು. ವೃಷಭಾವತಿ ಕಣಿವೆಯ ಎರಡೂ ಬದಿಗಳಲ್ಲಿ ಬಿಡಿಎ ನಿವೇಶನ ಮಾಡಿ ಹಂಚಿರುವ ಕಾರಣ ಭೂಮಿಯ ಲಭ್ಯತೆ ಇಲ್ಲ’ ಎಂದು ವಿವರಿಸಿದ್ದಾರೆ.

‘ಕಾವಲು ವ್ಯವಸ್ಥೆ ಇಲ್ಲದ್ದರಿಂದ ಪೈಪ್‌ಲೈನ್‌ ಶಿಥಿಲವಾಗಿರುವುದು ನಿಜ. ಆದರೆ ಮಾಡಿರುವ ಖರ್ಚು ವ್ಯರ್ಥವಾಗಿಲ್ಲ. ಈಗಿರುವ ಸೌಲಭ್ಯ ಬಳಸಿಕೊಂಡು ನೀರಿನ ಸಂಸ್ಕರಣೆಗೆ ವ್ಯವಸ್ಥೆ ಮಾಡಬಹುದು’ ಎಂದು ತಿಳಿಸಿದ್ದಾರೆ.

‘ಕಾಮಗಾರಿಯನ್ನು ಆರಂಭಿಸಿ ಎಂಟು ವರ್ಷಗಳಾಗಿದ್ದರೂ ಅರ್ಧಕ್ಕೆ ನಿಲ್ಲಿಸಿರುವುದು ಹಾಗೂ ಸಂಬಂಧಿಸಿದ ಇಲಾಖೆಗಳ ಜತೆ ಸಮನ್ವಯ ಸಾಧಿಸದೇ ಇರುವುದು ದೊಡ್ಡ ಲೋಪ’ ಎಂದು ಸಮಿತಿ ತನ್ನ ಅಸಮಾಧಾನ ಹೊರಹಾಕಿದೆ. ‘ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತೆಗೆದುಕೊಂಡ ಕ್ರಮದ ಕುರಿತು ವರದಿ ನೀಡಬೇಕು’ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಸೆಸ್‌ ಸಂಗ್ರಹಿಸದ್ದಕ್ಕೆ ಆಕ್ಷೇಪ: ಘನತ್ಯಾಜ್ಯ ನಿರ್ವಹಣೆಗಾಗಿ ಸೆಸ್‌ ಸಂಗ್ರಹಿಸಬೇಕು ಎನ್ನುವುದು ಜವಾಹರಲಾಲ್‌ ನೆಹರೂ ನಗರ ಪುನರುಜ್ಜೀವನ ಯೋಜನೆ (ಜೆ–ನರ್ಮ್‌) ನಿಯಮಗಳಲ್ಲಿ ಒಂದಾಗಿತ್ತು. ಕಟ್ಟಡದ ವಿಸ್ತೀರ್ಣಕ್ಕೆ ತಕ್ಕಂತೆ ಕನಿಷ್ಠ ₹ 10ರಿಂದ ಗರಿಷ್ಠ ₹ 600ರವರೆಗೆ ಸೆಸ್‌ ದರ ನಿಗದಿ ಮಾಡಲಾಗಿತ್ತು. ಆದರೆ, 2008ರಿಂದ 2011ರವರೆಗಿನ ಅವಧಿಯಲ್ಲಿ 75.77 ಕೋಟಿ ಸೆಸ್‌ ಹಾಗೂ ಅದರ ಮೇಲಿನ ದಂಡವನ್ನು ವಸೂಲಿ ಮಾಡಿಲ್ಲ ಎಂದು ಸಿಎಜಿ ವರದಿಯಲ್ಲಿ ಆಕ್ಷೇಪ ಎತ್ತಲಾಗಿತ್ತು.

ಈ ಆಕ್ಷೇಪಕ್ಕೆ ಉತ್ತರ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ತ್ಯಾಜ್ಯದ ಮೇಲಿನ ಸೆಸ್‌ ಸಂಗ್ರಹ ಮಾಡಿದ ಮೇಲೆ ಕಸ ಸಂಗ್ರಹಣೆ, ಸಾಗಾಣಿಕೆ ಹಾಗೂ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಆದರೆ, ಪ್ರಸ್ತಾಪಿತ ಅವಧಿಯಲ್ಲಿ ಕಸ ನಿರ್ವಹಣೆ ವಿಷಯದಲ್ಲಿ ಭಾರಿ ಗೊಂದಲ ಉಂಟಾಗಿತ್ತು. ಹೀಗಾಗಿ ಸಂಪೂರ್ಣವಾಗಿ ಸೆಸ್‌ ಸಂಗ್ರಹ ಮಾಡಲು ಸಾಧ್ಯವಾಗಿರಲಿಲ್ಲ. 2014–15ರಿಂದ ಸಮರ್ಪಕವಾಗಿ ಸೆಸ್‌ ಸಂಗ್ರಹ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಸೆಸ್‌ ಸಂಗ್ರಹಿಸಬೇಕು ಎನ್ನುವ ನಿಯಮವಿದ್ದರೂ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರಮಾನ ಸೋರಿಕೆಗೆ ಕಾರಣರಾಗಿದ್ದಾರೆ. ಇದರಿಂದ ಬಿಬಿಎಂಪಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿ ಸೂಚಿಸಿದೆ.

ಪ್ರತಿ ವಾರ್ಡ್‌ನಲ್ಲಿ ಸಂಗ್ರಹವಾಗುವ ಘನತ್ಯಾಜ್ಯ ಪ್ರಮಾಣದ ವಿವರಗಳಿಗೂ ಆಕ್ಷೇಪ ಎತ್ತಲಾಗಿದೆ. ಒಂದೇ ವಾರ್ಡ್‌ ನಲ್ಲಿ ವಿವಿಧ ದಿನಗಳಲ್ಲಿ ಸಂಗ್ರಹಿಸಿದ ತ್ಯಾಜ್ಯದ ಪ್ರಮಾಣದಲ್ಲಿ ವಿಪರೀತ ವ್ಯತ್ಯಾಸವಿದ್ದು, ವರದಿ ವಾಸ್ತವಿಕತೆಯಿಂದ ಕೂಡಿಲ್ಲ ಎಂದು ಪ್ರತಿಪಾದಿಸಲಾಗಿದೆ.

ಸಮಿತಿ ತಳೆದ ನಿಲುವಿನ ವಿಶೇಷಗಳು
ತ್ಯಾಜ್ಯ ವಿಲೇವಾರಿಗೆ ₹ 630.28 ಕೋಟಿ ಅಧಿಕ ವೆಚ್ಚ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಬರಿ ಎಚ್ಚರಿಕೆ, ₹ 280.17 ಕೋಟಿ ಸಹಾಯಧನ ಕೈತಪ್ಪಲು ಕಾರಣವಾದ ಅಧಿಕಾರಿಗಳ ಹೆಸರು ನೀಡಲು ಸೂಚನೆ ಮತ್ತು ₹ 7.46 ಕೋಟಿ ನಷ್ಟ ಉಂಟು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ!

ಗುತ್ತಿಗೆದಾರರಿಗೆ ₹ 630.28 ಕೋಟಿ ಹೆಚ್ಚುವರಿ ಪಾವತಿಯಾದ ಬಗೆಗೆ ಸಿಎಜಿ ವರದಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಇನ್ನುಮುಂದೆ ಈ ರೀತಿ ಆಗದಂತೆ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿ, ಸಮಿತಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.

ವಿಳಂಬದಿಂದ ಕೈತಪ್ಪಿದ ಸಹಾಯಧನ: ಅಸಮಾಧಾನ
ಜೆ–ನರ್ಮ್‌ಗೆ ಮಾಸ್ಟರ್‌ ಪ್ಲಾನ್‌ ಹಾಗೂ ವಿವರವಾದ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಲು ವಿಳಂಬ ಮಾಡಿದ್ದರಿಂದ ಬಿಬಿಎಂಪಿಗೆ ₹ 280.17 ಕೋಟಿ ಸಹಾಯಧನ ಕೈತಪ್ಪಿದ್ದಕ್ಕೂ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಡೆಕ್‌) ಸಂಸ್ಥೆಗೆ ಡಿಪಿಆರ್‌ ಸಿದ್ಧಪಡಿಸುವ ಹೊಣೆಯನ್ನು ವಹಿಸಲಾಗಿತ್ತು. 2008ರ ಏಪ್ರಿಲ್‌ ಒಳಗೆ ಈ ವರದಿ ಸಲ್ಲಿಸಬೇಕಿತ್ತು. ಆದರೆ, ವರದಿ ಸಲ್ಲಿಕೆಯಲ್ಲಿ 12 ತಿಂಗಳು ವಿಳಂಬವಾಗಿತ್ತು. ಇದರಿಂದ ಸಹಾಯಧನವೂ ಕೈತಪ್ಪಿತ್ತು.
ಪ್ರಕರಣದ ಸಂಬಂಧ ವಿವರಣೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ‘ಐಡೆಕ್‌ ಸಂಸ್ಥೆ ಕಾಲಮಿತಿಯಲ್ಲೇ ವರದಿ ಕೊಟ್ಟಿತ್ತು. ಆದರೆ, ತಾಂತ್ರಿಕ ಸಲಹೆಗಾರರು ವರದಿ ಪರಿಶೀಲಿಸಿ, ಅದಕ್ಕೆ ಅಂತಿಮ ರೂಪ ನೀಡುವಾಗ ವಿಳಂಬವಾಯಿತು’ ಎಂದು ಮಾಹಿತಿ ನೀಡಿದ್ದಾರೆ.
ವರದಿಯನ್ನು ವಿಳಂಬವಾಗಿ ಸಲ್ಲಿಸಲು ಕಾರಣರಾದ ಅಧಿಕಾರಿಗಳ ವಿವರ ನೀಡಬೇಕು ಎಂದು ಸಮಿತಿ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT