ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಬೆಲೆ ಶೇ 26 ಏರಿಕೆ

Last Updated 8 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇರುವ ಉದ್ಯೋಗಾವಕಾಶ, ಉತ್ತಮ ಹವೆ, ವೈವಿಧ್ಯಮಯ ಜೀವನಶೈಲಿ ಮೊದಲಾದ ಹಲವು ಕಾರಣಗಳಿಂದಾಗಿ ಜನರ ವಲಸೆ ಹೆಚ್ಚುತ್ತಲೇ ಇದೆ. ಇದು ಈ ಮಹಾನಗರದ ‘ರಿಯಲ್‌ ಎಸ್ಟೇಟ್’ ಉದ್ಯಮಕ್ಕೆ ಉತ್ತೇಜನಕಾರಿಯಾಗಿಯೇ ಇದೆ. ಇದರಿಂದಾಗಿ ಸ್ಥಿರಾಸ್ತಿಗಳ ಬೆಲೆಯಲ್ಲಿ ಇತ್ತೀಚೆಗೆ ಮತ್ತೆ ವೇಗದ ಗತಿಯಲ್ಲಿ ಏರಿಕೆ ಕಾಣಿಸಲಾರಂಭಿಸಿದೆ.

ವಸತಿ ನಿರ್ಮಾಣಕ್ಕೆ ಅನುಕೂಲಕಾರಿಯಾದ ಸಮತಟ್ಟು ಭೂ ಪ್ರದೇಶಗಳ ಬೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಶೇ 26.1ರಷ್ಟು ಏರಿಕೆ ಕಂಡುಬಂದಿದೆ.
ಇನ್ನೊಂದೆಡೆ, ಮಾಹಿತಿ ತಂತ್ರಜ್ಞಾನ (ಐ.ಟಿ) ಮತ್ತು ಅದರ ಸೇವಾ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿರುವ ಬೆಳವಣಿಗೆ ಕೂಡ ಕಂಪೆನಿ ಕಚೇರಿಗಳನ್ನು ನೆಲೆಗೊಳಿಸಲು ವಾಣಿಜ್ಯ ಬಳಕೆ ಕಟ್ಟಡಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡುತ್ತಿದೆ. ಇದೂ ಸಹ ಬೆಂಗಳೂರಿನ ಹೊರವಲಯದಲ್ಲಿ ಜಮೀನು ಬೆಲೆಯಲ್ಲಿ ಹೆಚ್ಚಳ ಉಂಟಾಗಲು ಕಾರಣವಾಗಿದೆ.

ಬೆಂಗಳೂರಿನಲ್ಲಷ್ಟೇ ಅಲ್ಲ, ಮುಂಬೈನಲ್ಲಿಯೂ ವಸತಿ ನಿರ್ಮಾಣ ಯೋಜನೆ ಭೂಮಿಯ ಬೆಲೆ ಕಳೆದ ಎರಡು ವರ್ಷಗಳಲ್ಲಿ ಶೇ 35.2ರಷ್ಟು ಏರಿಕೆ ಕಂಡಿದೆ. ಬದಲಾದ ರಿಯಲ್ ಎಸ್ಟೇಟ್ ನಿಯಮಗಳು ಮತ್ತು ಸ್ಥಿರಾಸ್ತಿ ಬೆಲೆಯಲ್ಲಿ ಹೆಚ್ಚಳದ ಕಾರಣದಿಂದಾಗಿ   ಈ ಬೆಲೆ ಏರಿಕೆ ಆಗಿದೆ ಎನ್ನುತ್ತದೆ ಜಾಗತಿಕ ಆಸ್ತಿ ಸಮೀಕ್ಷೆ ಸಂಸ್ಥೆ ‘ನೈಟ್ ಫ್ರಾಂಕ್’ನ ವರದಿ.

ಏಷ್ಯಾದ ಪ್ರಮುಖ 13 ನಗರಗಳಲ್ಲಿ ವಸತಿ ನಿರ್ಮಾಣ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವ ಭೂಮಿ ಬೆಲೆಯನ್ನು ಮಾರುಕಟ್ಟೆ ದರದ ಮಾನದಂಡದ ಮೇಲೆ ವಿಶ್ಲೇಷಣೆಗೆ ಒಳಪಡಿಸಿದಾಗ ಬೆಂಗಳೂರು ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕಿಂತಲೂ (ಎನ್‌ಸಿಆರ್) ಮುಂಬೈನಲ್ಲಿಯೇ ಭೂಮಿ ಬೆಲೆ ಹೆಚ್ಚು ಗಗನಮುಖಿಯಾಗಿದೆ.

ಕಳೆದ ಎರಡು ವರ್ಷಗಳಲ್ಲಿ ವಸತಿ ನಿರ್ಮಾಣ ಭೂಮಿ ಬೆಲೆಯಲ್ಲಿ ಬೆಂಗಳೂರು ಶೇ 26.1ರಷ್ಟು ಮತ್ತು ‘ಎನ್‌ಸಿಆರ್’ ಶೇ 24.9ರಷ್ಟು ಏರಿಕೆ ಕಂಡುಬಂದಿದ್ದರೆ, ಮುಂಬೈನಲ್ಲಿ ಶೇ 35.2 ರಷ್ಟು ಹೆಚ್ಚಳವಾಗಿದೆ. ಏತನ್ಮಧ್ಯೆ, ಕಚೇರಿ ಸ್ಥಳಾವಕಾಶ ಅಭಿವೃದ್ಧಿ ಭೂಮಿ ಬೆಲೆ ‘ಎನ್‌ಸಿಆರ್’ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ ಶೇ  16.3 ಹಾಗೂ 12.9 ರಷ್ಟು ಏರಿಕೆ ದಾಖಲಿಸಿದೆ. ಆದರೆ, ಮುಂಬೈನಲ್ಲಿ ಮಾತ್ರ ವಾಣಿಜ್ಯ ಬಳಕೆ ಕಟ್ಟಡಗಳ ಸ್ಥಳಾವಕಾಶಕ್ಕೆ (ನಿವೇಶನ) ಕಳೆದ ಎರಡು ವರ್ಷಗಳಲ್ಲಿ ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ. ಮುಂಬೈನಲ್ಲಿ ವಾಣಿಜ್ಯ ಬಳಕೆ ಭೂಮಿಯ ಬೆಲೆಯಲ್ಲಿ ಶೇ 13.1ರಷ್ಟು ಕುಸಿತ ಕಂಡುಬಂದಿದೆ ಎನ್ನುತ್ತಾರೆ ನೈಟ್ ಫ್ರಾಂಕ್‌ನ ಮುಖ್ಯ ಆರ್ಥಿಕ ತಜ್ಞ ಮತ್ತು ಸಂಶೋಧನಾ ನಿದೇರ್ಶಕರಾಗಿರುವ ಸಮಂತಕ್ ದಾಸ್.

‘ಕಾನೂನುಗಳಲ್ಲಿ ಕೆಲವು  ಬದಲಾವಣೆಗಳಾಗಿರುವುದರಿಂದ ಮುಂಬೈನಲ್ಲಿ ವಸತಿ ನಿರ್ಮಾಣ ಅಭಿವೃದ್ಧಿಗೆ ಬಳಕೆ ಮಾಡುವ ಜಮೀನು ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ, ಕಚೇರಿ ಸ್ಥಳಾವಕಾಶ ವಿಭಾಗದಲ್ಲಿ ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗಿರುವುದೇ ಈ ವಿಭಾಗದಲ್ಲಿ ಪ್ರಗತಿ ಎಂಬುದು ಇಳಿಮುಖ ಹಾದಿಯಲ್ಲಿದೆ’ ಎನ್ನುತ್ತದೆ ವರದಿ.

ಇದೇ ವೇಳೆ ‘ಎನ್‌ಸಿಆರ್’ ವಸತಿ ಅಭಿವೃದ್ಧಿ ಭೂಮಿ ಸೂಚ್ಯಂಕ ಶೇ 24.9ರಷ್ಟು ಮೇಲೇರಿದೆ. ಇದರಿಂದಾಗಿ ಈ ಭಾಗದಲ್ಲಿ ಬಳಕೆಗೆ ಸಿದ್ಧವಾಗಿರುವ ಭೂ ಪ್ರದೇಶದ ಬೇಡಿಕೆ ಸತತ ಹೆಚ್ಚುತ್ತಲೇ ಇದೆ.ಅಭಿವೃದ್ಧಿಗೊಂಡಿರುವ ಕನ್ಹಾಟ್‌ಪ್ಲೇಸ್‌ ಮತ್ತು ಸಾಕೆತ್ ಮಾರುಕಟ್ಟೆಗಳಿಗೆ ಹೋಲಿಸಿದರೆ ಇನ್ನೂ ಪ್ರಗತಿ ಹೊಂದುತ್ತಿರುವ ಗುಡಗಾಂವ್ ಮಾರುಕಟ್ಟೆ ಪ್ರದೇಶದಲ್ಲಿನ ‘ಕಚೇರಿ ಬಳಕೆಗೆ ಸಿದ್ಧವಾಗಿರುವ ಭೂ ಪ್ರದೇಶ’ದ ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಸೀಮಿತ ಲಭ್ಯತೆ, ಕಳಪೆ ಗುಣಮಟ್ಟದ ಮೂಲಸೌಕರ್ಯ ಮತ್ತು ಅನುಮತಿ ಪ್ರಾಧಿಕಾರದ ನಿರ್ಬಂಧ ಸೇರಿದಂತೆ ವಿವಿಧ ಕಾರಣಗಳಿಂದ ಹೊಸ ವಸತಿ ಯೋಜನೆಗಳ ನಿರ್ಮಾಣ ಕಾರ್ಯ ಮುಂಬೈನಲ್ಲಿ ಸದ್ಯ ಸ್ವಲ್ಪ ಹಿನ್ನಡೆ ಕಂಡಿದೆ. ಆದರೆ, ಮುಂಬರುವ ದಿನಗಳಲ್ಲಿ ಮತ್ತೆ ನಿರ್ಮಾಣ ಚಟುವಟಿಕೆ ಗರಿಗೆದರಲಿದ್ದು, ಮುಂಬೈನ ಭೂಮಿ ಬೆಲೆ ನಿರಂತರ ಏರಿಕೆ ಕಾಣುವ ಸಾಧ್ಯತೆ ಇದೆ ಎನ್ನುತ್ತದೆ ವರದಿ.

ಹೂಡಿಕೆ ಇಳಿಮುಖ
ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆಯಾಗುವ ಬಂಡವಾಳ ಪ್ರಮಾಣ ಕಳೆದ ವರ್ಷ ಭಾರಿ ಕುಸಿತ ಕಂಡಿದೆ. 2013ರಲ್ಲಿ ಕೇವಲ 120 ಕೋಟಿ ಅಮೆರಿಕನ್ ಡಾಲರ್‌ಗಳಷ್ಟು (ರೂ.7800 ಕೋಟಿ) ಹೂಡಿಕೆಯಾಗಿದೆ. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿನ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿನ ಹೂಡಿಕೆ ಶೇ 65ರಷ್ಟು ಕುಸಿತ ಕಂಡಿದೆ. ಹಾಗಿದ್ದೂ  ದೇಶವು ಏಷ್ಯಾ ಪೆಸಿಫಿಕ್ (ಎಪಿಎಸಿ) ವಲಯದಲ್ಲಿ 10ನೇ ಸ್ಥಾನ ಕಾಯ್ದುಕೊಂಡಿದೆ ಎನ್ನುತ್ತದೆ ಜಾಗತಿಕ ಆಸ್ತಿ ಸಲಹಾ ಸಂಸ್ಥೆ ‘ಕುಷ್ಮನ್ ಅಂಡ್ ವೆಕ್‌ಫೀಲ್ಡ್’.

2012ನೇ ಸಾಲಿನಲ್ಲಿ ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದ ಹೂಡಿಕೆ ಪ್ರಮಾಣ 340 ಕೋಟಿ ಡಾಲರ್‌ಗಳಿಗೆ (ಸುಮಾರು ರೂ.21 ಸಾವಿರ ಕೋಟಿ) ತಲುಪಿತ್ತು.

‘ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಳೆದ ವರ್ಷ ಅಂದಾಜು 120 ಕೋಟಿ ಅಮೆರಿಕನ್ ಡಾಲರ್‌ನಷ್ಟು ಬಂಡವಾಳ ಹೂಡಿಕೆಯಾಗಿದೆ. ‘ಎಪಿಎಸಿ’ ವಲಯದಲ್ಲಿನ ರಿಯಲ್‌ ಎಸ್ಟೇಟ್‌ ಬಂಡವಾಳ ಹೂಡಿಕೆಯ ದೇಶಗಳ ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದೆ’ ಎನ್ನುತ್ತದೆ ವರದಿ. 2013ರಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ‘ಎಪಿಎಸಿ’ ವಲಯಕ್ಕೆ ಒಟ್ಟಾರೆಯಾಗಿ 48,700 ಕೋಟಿ ಅಮೆರಿಕನ್ ಡಾಲರ್‌ಗಳಷ್ಟು (ರೂ.31.65 ಲಕ್ಷ ಕೋಟಿ) ದಾಖಲೆ ಪ್ರಮಾಣದ ಬಂಡವಾಳ ಹರಿದು ಬಂದಿದೆ.

ದೇಶವಾರು ಹೂಡಿಕೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ 35,800  ಕೋಟಿ ಡಾಲರ್‌ಗಳಷ್ಟು (ರೂ.23.27 ಲಕ್ಷ ಕೋಟಿ) ಬಂಡವಾಳ ಆಕರ್ಷಿಸುವ ಮೂಲಕ ಚೀನಾ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನವನ್ನು 4460 ಕೋಟಿ ಡಾಲರ್‌ (ರೂ.2.90 ಲಕ್ಷ ಕೋಟಿ) ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿರುವ ಜಪಾನ್ (3ನೇ ಸ್ಥಾನ) ಪಡೆದಿದೆ.

ಫಿಲಿಫೈನ್ಸ್, ಇಂಡೊನೇಷ್ಯಾ, ಥೈಲ್ಯಾಂಡ್ ಮತ್ತು ತೈವಾನ್‌ನಂತಹ ಮಾರುಕಟ್ಟೆಗಳಲ್ಲಿ ಗಣನೀಯ ಪ್ರಮಾಣದ ಹೂಡಿಕೆಯ ಕುಸಿತ ಕಾಣಿಸಿಕೊಂಡಿರುವ ನಡುವೆಯೂ ಭಾರತ ‘ಎಪಿಎಸಿ’ ವಲಯದಲ್ಲಿ 10ನೇ ಸ್ಥಾನ ಕಾಯ್ದುಕೊಂಡಿದೆ.2013ರಲ್ಲಿ ಭಾರತದಲ್ಲಿ ಭೂಮಿ ಖರೀದಿಗೆ ಹೂಡಿಕೆ ಯಾಗಿರುವ 83.80 ಕೋಟಿ ಡಾಲರ್  (ರೂ.5447 ಕೋಟಿ) ಬಂಡವಾಳದಲ್ಲಿ ಬಹುತೇಕ ಹೂಡಿಕೆ (24.70 ಕೋಟಿ ಡಾಲರ್‌ಗಳಷ್ಟು)  ಕಚೇರಿ ಸ್ಥಳಾವಕಾಶಕ್ಕೆ ಸಂಬಂಧಿಸಿದ ಭೂಮಿಯ ಮೇಲೆಯೇ ತೊಡಗಿಸಲಾಗಿದೆ. ಹಾಗಿದ್ದೂ ಒಟ್ಟಾರೆ ಭೂಮಿಯ  ಮೇಲಿನ ಹೂಡಿಕೆಯಲ್ಲಿ ಶೇ 61 ಮತ್ತು ಕಚೇರಿ ಸ್ಥಳಾವಕಾಶ ಹೂಡಿಕೆಯಲ್ಲಿ ಶೇ 77ರಷ್ಟು ಇಳಿಕೆ ಕಂಡುಬಂದಿದೆ.

‘ಸದ್ಯದ ಸನ್ನಿವೇಶದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆ ತೀವ್ರ ಅನಿಶ್ಚಿತ ಸ್ಥಿತಿಗೆ ತಲುಪಿದೆ. ಇದು ಹೂಡಿಕೆದಾರರಲ್ಲಿ ಕಳವಳ ಉಂಟುಮಾಡಿದೆ. ಇದಕ್ಕೆ ಲೋಕಸಭೆ ಚುನಾವಣೆ ಎಂಬ ರಾಜಕೀಯ ಬದಲಾವಣೆ ಕಾಲ ಕೂಡ ಕಾರಣವಾಗಿದೆ’ ಎನ್ನುತ್ತಾರೆ ಕುಷ್ಮನ್ ಅಂಡ್ ವೆಕ್‌ಫೀಲ್ಡ್ ಸಂಸ್ಥೆಯ ದಕ್ಷಿಣ ಏಷ್ಯಾ ವಲಯದ ಕಾರ್ಯನಿರ್ವಾಹಕ ವ್ಯವಸ್ಥಾಪಕ ನಿದೇರ್ಶಕ ಸಂಜಯ್ ದತ್.

‘ಈಗಿನ ಇಳಿಮುಖ ಹಾದಿಯ ಪಯಣದ ನಡುವೆಯೂ ಹೂಡಿಕೆದಾರರಿಗೆ ಭಾರತ ‘ಎಪಿಎಸಿ’ ವಲಯದಲ್ಲಿ ಭವಿಷ್ಯದ ಭರವಸೆಯ ಪ್ರಮುಖ ಹೂಡಿಕೆ ತಾಣವಾಗಿಯೇ ಗೋಚರಿಸುತ್ತಿದೆ. ಇದಕ್ಕೆ 2013ರ ವರೆಗೆ ಖಾಸಗಿ ಕ್ಷೇತ್ರಕ್ಕೆ ವರ್ಷದಿಂದ ವರ್ಷಕ್ಕೆ ಶೇ 13ರಷ್ಟು ಹೆಚ್ಚಳವಾಗುತ್ತ ಹರಿದು ಬರುತ್ತಿರುವ ಹೂಡಿಕೆಯೇ ಸಾಕ್ಷಿ’ ಎನ್ನುತ್ತಾರೆ ಸಂಜಯ್. ದೇಶದ ಆರ್ಥಿಕ ವ್ಯವಸ್ಥೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 2015ರ ಹೊತ್ತಿಗೆ ಗಮನಾರ್ಹವಾದ ಪ್ರಗತಿ ಕಾಣಿಸಿಕೊಳ್ಳಲಿದೆ ಎಂಬ ಆಶಾಭಾವ ವನ್ನು ಮಾರುಕಟ್ಟೆ ಪರಿಣಿತರು ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT