ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಒತ್ತುವರಿ ತೆರವಿಗೆ ಜಿಲ್ಲಾ ಕಾರ್ಯಪಡೆ

Last Updated 27 ಆಗಸ್ಟ್ 2014, 19:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಒತ್ತುವರಿ ಆಗಿರುವ ಸರ್ಕಾರಿ ಜಮೀನು ತೆರವುಗೊಳಿಸಲು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಮುಖ್ಯನ್ಯಾಯಮೂರ್ತಿ ಡಿ.ಎಚ್‌.ವಘೇಲಾ ನೇತೃತ್ವದ ವಿಭಾಗೀಯ ಪೀಠವು ಬುಧವಾರ ಈ ಸಂಬಂಧದ ಅರ್ಜಿಯನ್ನು ವಿಚಾರಣೆ ನಡೆಸಿತು.

ರಾಜ್ಯದಾದ್ಯಂತ ಒತ್ತುವರಿ ಆಗಿರುವ 1.36 ಲಕ್ಷ ಎಕರೆಯನ್ನು ವರ್ಷಾಂತ್ಯದ ಒಳಗೆ ತೆರವು ಮಾಡಿಸಲಾಗುವುದು. ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿ ಮಟ್ಟದಲ್ಲಿ ಕಾರ್ಯಪಡೆ (ಟಾಸ್ಕ್‌ಫೋರ್ಸ್‌)  ರಚಿಸಲಾಗುವುದು. ಇದಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಉಪಾಧ್ಯಕ್ಷರಾಗಿಯೂ, ಉಪ ವಿಭಾಗಾಧಿಕಾರಿಗಳು ಸಂಚಾಲಕರಾಗಿ ಹಾಗೂ ತಹಶೀಲ್ದಾರರು ಈ ತಂಡದ ಅಧೀನ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ.

ಒತ್ತುವರಿ ತೆರವಿಗೆ ಈತನಕ ರಾಜ್ಯಮಟ್ಟದಲ್ಲಿ ಮಾತ್ರ ಕಾರ್ಯಪಡೆ ಇತ್ತು. ಈಗ ಇದನ್ನು ಜಿಲ್ಲಾ ಮಟ್ಟಕ್ಕೂ ವಿಸ್ತರಿಸಲಾಗಿದೆ. ಈ ಮೂಲಕ ತೆರವು ಕಾರ್ಯಾಚರಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲಾಗುವುದು. ಪ್ರತಿ ತಿಂಗಳ ನಿಗದಿತ ಗುರಿಯ ಆಧಾರದಲ್ಲಿ ಈ ಪಡೆ ತನ್ನ ಕೆಲಸ ನಿರ್ವಹಿಸಲಿದೆ. ಒಂದು ವೇಳೆ ನಿಗದಿತ ಗುರಿ ತಲುಪದೇ ಹೋದರೆ ಕಾರ್ಯಪಡೆಯನ್ನೇ ಲೋಪಕ್ಕೆ ಹೊಣೆ ಮಾಡಲಾಗುವುದು’ ಎಂದು ಸರ್ಕಾರ ತಿಳಿಸಿದೆ.

ಸರ್ಕಾರ ಕೋರ್ಟಿಗೆ ಸಲ್ಲಿಸಿರುವ ವರದಿ  ಪ್ರಕಾರ ರಾಜ್ಯದಲ್ಲಿ ಒಟ್ಟು 13,02,241 ಎಕರೆ ಜಮೀನು ಒತ್ತುವರಿ ಆಗಿದೆ. ಇದರಲ್ಲಿ 7,54,603 ಎಕರೆ ಜಮೀನು ವಿವಾದಲ್ಲಿದ್ದು ಇದನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ ಅನುಸಾರ ಸಕ್ರಮಗೊಳಿಸುವುದಕ್ಕೆ ಮನವಿ ಸಲ್ಲಿಸಲಾಗಿದೆ. ಅಂತೆಯೇ 1382 ಎಕರೆ ಜಮೀನು ತೆರವಿಗೆ ನ್ಯಾಯಾಲಯದ ತಡೆಯಾಜ್ಞೆ ಇದೆ.

ರಾಜ್ಯದಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಜಮೀನು ತೆರವು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ‘ನಮ್ಮ ಬೆಂಗಳೂರು’ ಮತ್ತು ಧಾರವಾಡದ ಸಮಾಜ ಪರಿವರ್ತನಾ ಸಮುದಾಯಗಳು ಕೋರ್ಟ್‌ ಮೆಟ್ಟಿಲೇರಿವೆ.

ಮುತಾಲಿಕ್‌ಗೆ ನಿರೀಕ್ಷಣಾ ಜಾಮೀನು
ಬೆಂಗಳೂರು:
ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ಗೆ ಹೈಕೋರ್ಟ್‌ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ. 30 ದಿನಗಳ ಒಳಗಾಗಿ ಸಂಬಂಧಿಸಿದ  ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ₨ 25 ಸಾವಿರ ವೈಯಕ್ತಿಕ ಬಾಂಡ್‌ ಮತ್ತು ಜಾಮೀನು ಒದಗಿಸುವಂತೆ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ನ್ಯಾಯಪೀಠ ಷರತ್ತು ವಿಧಿಸಿದೆ.

ಆರೋಪ ಏನು?: ‘ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಮುತಾಲಿಕ್‌  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಈ ಸಂದರ್ಭದಲ್ಲಿ ಬಸವನಗುಡಿ ಪ್ರದೇಶದಲ್ಲಿ  ಪ್ರಚಾರ ಮಾಡುವಾಗ, 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ  ಸಂದರ್ಭದಲ್ಲಿ ನಾನೂ ಕರಸೇವಕನಾಗಿ ಪಾಲ್ಗೊಂಡಿದ್ದೆ. ಮುಂದೆ ಕಾಶಿ ಮತ್ತು ಮಥುರಾಗಳಲ್ಲಿನ ಮಸೀದಿಗಳನ್ನೂ ನಾಶ ಮಾಡುವುದು ನಮ್ಮ ಉದ್ದೇಶವಾಗಿತ್ತು. ಆದರೆ  ಅದು ಈತನಕ ಈಡೇರಿಲ್ಲ.

ಆದ್ದರಿಂದ ಇವುಗಳನ್ನು ಧ್ವಂಸ ಮಾಡಲು ನನಗೆ ಶಕ್ತಿ ಬೇಕು. ಅದಕ್ಕಾಗಿ ನನ್ನನ್ನು ಈ ಚುನಾವಣೆಯಲ್ಲಿ ಆರಿಸಿ ಕಳುಹಿಸಿ ಎಂದು ಮತದಾರರಲ್ಲಿ ಸಾರ್ವಜನಿಕವಾಗಿ ಮನವಿ ಮಾಡಿದ್ದರು.

ಈ ಕುರಿತಂತೆ ಅವರು ಖಾಸಗಿ ಟಿ.ವಿ.ಚಾನೆಲ್‌ವೊಂದಕ್ಕೆ  ನೀಡಿದ ಸಂದರ್ಶನದಲ್ಲೂ ಈ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಅಜ್ಮಲ್‌ಖಾನ್‌ ಎಂಬುವವರು ಇಲ್ಲಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಆದರೆ ಆಗ ಕೋರ್ಟ್‌ ಮುತಾಲಿಕ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಇದನ್ನು ಅಜ್ಮಲ್‌ಖಾನ್‌ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆದರೆ ಸೆಷನ್ಸ್‌ ಕೋರ್ಟ್‌ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಅಜ್ಮಲ್‌  ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮುತಾಲಿಕ್‌ ಪರ ಕೆ.ಪಿ.ಅಮೃತೇಶ್‌ ವಕಾಲತ್ತು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT