ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋಗದ ಆವರಣದಲ್ಲಿ ಅಧ್ಯಾತ್ಮ ಶಿಖರ

Last Updated 2 ಮಾರ್ಚ್ 2018, 15:59 IST
ಅಕ್ಷರ ಗಾತ್ರ

ಥಾಯ್ಲೆಂಡ್‌ ಜೊತೆಗೆ ಕನಸು–ಕನವರಿಕೆಗಳ ವಿಲೇವಾರಿಯ ಪರಿಸರ ಮಾತ್ರವಲ್ಲದೆ, ಅಧ್ಯಾತ್ಮದ ನೆಲೆಯೂ ಹೌದೆನ್ನುವುದಕ್ಕೆ ಉದಾಹರಣೆ ‘ವಾಟ್‌ ಪೊ’. ಇಲ್ಲಿನ ಆರಾಮ ಬುದ್ಧ ಸಾವಧಾನದ ಬದುಕಿನ ಪಾಠ ಹೇಳುವಂತಿದ್ದಾನೆ. ‘ವಾಟ್‌ ಪೊ’ ದೇಗುಲ ಸಮುಚ್ಚಯದಲ್ಲಿ ಹೆಜ್ಜೆಹೆಜ್ಜೆಗೂ ಕಾಡುವ ಬುದ್ಧ ಒಂದು ರೂಪಕವಾಗಿ ನಮ್ಮನ್ನು ಕಾಡುತ್ತಾನೆ.

ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಹತ್ತಾರು ಆಲಯಗಳಿವೆ. ಹಲವಾರು ಅರಮನೆಗಳಿವೆ. ಹತ್ತುಹಲವು ಬೌದ್ಧ ಕ್ಷೇತ್ರಗಳಿವೆ. ಇವೆಲ್ಲವುಗಳಲ್ಲಿ ಸೂಜಿಗಲ್ಲಿನಂತೆ ಸೆಳೆವ ನಾಲ್ಕೈದು ಬೌದ್ಧ ಆಲಯಗಳಲ್ಲಿ ‘ವಾಟ್‌ ಪೊ’ಗೆ ಮುಖ್ಯಸ್ಥಾನ.

‘ವಾಟ್‌ ಪೊ’ ಅಕ್ಷರಶಃ ಹೆಸರಿನಷ್ಟೇ ದೊಡ್ಡ ಆಲಯ ಸಮುಚ್ಚಯ. ಇದರ ಒಟ್ಟು ವಿಸ್ತೀರ್ಣ 80 ಸಾವಿರ ಚದರ ಮೀಟರ್‌ಗಳು!
‘ವಾಟ್‌ ಪೊ’ ಆಲಯ ಹತ್ತಾರು ಸಂಗತಿಗಳಿಗೆ ಪ್ರಸಿದ್ಧವಾಗಿದ್ದರೂ, ಬಹುಪ್ರಖ್ಯಾತವಾಗಿರುವುದು ಇಲ್ಲಿರುವ ನಿದ್ರಾಭಂಗಿಯ ಬುದ್ಧನ ಪ್ರತಿಮೆಯಿಂದ. ಈ ಪ್ರತಿಮೆಯ ಉದ್ದ 43 ಮೀಟರ್‌, ಎತ್ತರ 15 ಮೀಟರ್‌! ಜನಸಾಮಾನ್ಯರ ಬಾಯಲ್ಲಿ ‘ಸ್ಲೀಪಿಂಗ್‌ ಬುದ್ಧ’ ಎಂದು ಕರೆಸಿಕೊಳ್ಳುವ ಇದರ ನಿಜವಾದ ಹೆಸರು ‘ಆರಾಮ ಬುದ್ಧ’.

ಬ್ಯಾಂಕಾಕ್‌ನ ಅರಮನೆಯ ವಾಸ್ತುಶೈಲಿಯನ್ನೇ ‘ವಾಟ್‌ ಪೊ’ ದೇಗುಲವೂ ಹೊಂದಿರುವುದು ವಿಶೇಷ. ರಾಜಧಾನಿಗೆ ಬರುವ ಬಹಳಷ್ಟು ಪ್ರವಾಸಿಗರು ತಪ್ಪದೆ ಭೇಟಿ ಕೊಡುವ ಈ ದೇಗುಲ ಸಮುಚ್ಚಯ ಹರಡಿಕೊಂಡಿರುವುದು ಎಂಟು ಹೆಕ್ಟೇರ್‌ ಪ್ರದೇಶದಲ್ಲಿ ಎಂದರೆ ಅದರ ಅಗಾಧತೆ ಅರಿವಾದೀತು.

ಬೌದ್ಧ ಧರ್ಮವನ್ನು ಅನುಸರಿಸುತ್ತಿರುವ ಥಾಯ್ಲೆಂಡ್‌ನ ರಾಜಧಾನಿಯಲ್ಲಿ ‘ವಾಟ್‌ ಪೊ’ ಆರಂಭವಾಗಿದ್ದು ಯಾವಾಗ ಎನ್ನುವುದರ ಬಗೆಗೆ ಯಾವುದೇ ಪುರಾವೆಗಯಿಲ್ಲ. ಆದರೆ ಇಲ್ಲೊಂದು ಶಿಥಿಲ ಆಲಯವಿತ್ತು. ಥಾಯ್ಲೆಂಡ್‌ನ ಪುರಾತನ ರಾಜಧಾನಿ ‘ಆಯುಟ್ಟಾಯೆ’ದಲ್ಲಿ ಬೃಹತ್‌ ಬುದ್ಧ ಪ್ರತಿಮೆ ಇತ್ತು.

ಬರ್ಮಾ ಹಾಗೂ ಸೈಯಂ (ಥಾಯ್ಲೆಂಡ್‌ನ  ಹಿಂದಿನ ಹೆಸರು) ನಡುವಣ ಯುದ್ಧ ಕಾಲದಲ್ಲಿ ಈ ಬುದ್ಧ ಪ್ರತಿಮೆ ನಾಶಗೊಂಡಿತ್ತು. ರಾಜಧಾನಿ ಬ್ಯಾಂಕಾಕ್‌ಗೆ ಸ್ಥಳಾಂತರಗೊಂಡಾಗ ದೇಶ ಆಳುತ್ತಿದ್ದ ‘ಚಕ್ರ’ ಸಂತತಿ ಬುದ್ಧನಿಗಾಗಿ ಅದ್ದೂರಿ ದೇವಾಲಯವೊಂದನ್ನು ನಿರ್ಮಿಸಲು ನಿರ್ಧರಿಸಿತು.

ಆಗ ‘ಆಯುಟ್ಟಾಯ’ದಲ್ಲಿದ್ದ ನಿದ್ರಾಶೈಲಿಯ ಬುದ್ಧನನ್ನು ಹೋಲುವ ಪ್ರತಿಮೆಯನ್ನು ‘ವಾಟ್‌ ಪೊ’ನಲ್ಲಿ ಸ್ಥಾಪಿಸಿದರು. 1782ರಲ್ಲಿ ಈ ದೇಶವನ್ನು ಆಳುತ್ತಿದ್ದ ಮೊದಲನೆಯ ರಾಮ, ದೇವಾಲಯವನ್ನು ಆಕರ್ಷಿಸಲು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ. 3ನೇ ರಾಮನ ಆಡಳಿತಾವಧಿಯಲ್ಲಿ ‘ವಾಟ್‌ ಪೊ’ ಮತ್ತಷ್ಟು ವಿಸ್ತಾರಗೊಂಡಿತು. 1801ರಲ್ಲಿ ಇದರ ಪುನರ್‌ ನಿರ್ಮಾಣಕ್ಕೆ 12 ವರ್ಷಗಳೇ ಹಿಡಿದವು.

ವಿಶ್ವಸಂಸ್ಥೆಯ ‘ಯುನೆಸ್ಕೊ’ದಿಂದ ಜಾಗತಿಕ ನೆನಪುಗಳ ತಾಣ ಯೋಜನೆಯಲ್ಲಿ ಸೇರ್ಪಡೆಯಾಗಿರುವ ‘ವಾಟ್‌ ಪೊ’ ಸಂರಕ್ಷಣಾ ಕಾರ್ಯಗಳನ್ನು ಕಂಡಿದ್ದು 1982ರಲ್ಲಿ. ಕಳೆದ 260 ವರ್ಷಗಳಲ್ಲಿ ಅನೇಕ ಬಾರಿ ಮಹತ್ವದ ಬದಲಾವಣೆಗಳನ್ನು ಕಂಡ ‘ವಾಟ್‌ ಪೊ’ ಪ್ರಸ್ತುತ ಥಾಯ್ಲೆಂಡ್‌ನ ಅತಿದೊಡ್ಡ ದೇವಾಲಯ ಸಮುಚ್ಚಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜಧಾನಿ ಬ್ಯಾಂಕಾಂಕ್‌ನ ಇತಿಹಾಸದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ.

ಎರಡು ಸ್ಪಷ್ಟ ಆವರಣಗಳಲ್ಲಿ ನಿರ್ಮಾಣಗೊಂಡಿರುವ ‘ವಾಟ್‌ ಪೊ’ ಸಮುಚ್ಚಯಕ್ಕಿರುವ ಬಾಗಿಲುಗಳು 16! ಆದರೆ ಸಾಮಾನ್ಯವಾಗಿ ಈಗ ತೆರೆಯುವುದು ಎರಡು ಬಾಗಿಲುಗಳನ್ನು ಮಾತ್ರ. ವಿಶೇಷ ಸಂದರ್ಭಗಳಲ್ಲಿ ಇನ್ನೂ ಕೆಲವು ದ್ವಾರಗಳನ್ನು ತೆಗೆಯುವುದುಂಟು.

ಇಡೀ ಆಲಯ ಸಮುಚ್ಚಯದಲ್ಲಿನ ಪ್ರಮುಖ ಆಕರ್ಷಣೆ ಆರಾಮ ಬುದ್ಧನ ಪ್ರತಿಮೆ. ಚಿನ್ನದ ಹೊದಿಕೆ ಹೊಂದಿರುವ, 46 ಮೀಟರ್‌ ಉದ್ದ ಹಾಗೂ 15 ಮೀಟರ್‌ ಎತ್ತರವಿರುವ ಈ ಪ್ರತಿಮೆಯ ಸುತ್ತ ಬುದ್ಧನ 108 ಪವಿತ್ರ ಆಶಯಗಳನ್ನು ವಿವಿಧ ಕಲಾಕೃತಿಗಳಲ್ಲಿ ಪ್ರತಿಬಿಂಬಿಸಲಾಗಿದೆ.

ನಿರ್ವಾಣದ ಕಡೆಗೆ ಸಾಗುತ್ತಿರುವ ಸ್ಥಿತಿಯನ್ನು ಈ ಬೃಹತ್‌ ಪ್ರತಿಮೆ ಸೂಚಿಸುತ್ತದೆ ಎಂಬ ಅಭಿಪ್ರಾಯವೂ ಇದೆ. ಈ ಪ್ರತಿಮೆಯನ್ನು ಒಮ್ಮೆಗೇ ನೋಡಲು ಅಸಾಧ್ಯ. ಇಡೀ ಆಲಯವನ್ನು ಆವರಿಸಿಕೊಂಡಿರುವ ಬುದ್ಧನನ್ನು ಮುಖದ ಕಡೆಯಿಂದ ನೋಡುತ್ತ ನಾಲ್ಕೈದು ಬಾಗಿಲುಗಳನ್ನು ಕ್ರಮಿಸಿ ಪಾದದ ಬಳಿ ಬರಬೇಕು.

ಪ್ರಾರ್ಥನೆಗೆಂದು ತುಸು ಸ್ಥಳಬಿಟ್ಟರೆ ಬುದ್ಧ ವಿಗ್ರಹದ ಹಿಂಭಾಗದಲ್ಲಿ 108 ಕಂಚಿನ ಪಾತ್ರೆಗಳಿವೆ. ಸಣ್ಣ ಓಣಿಯಂತಹ ಜಾಗದಲ್ಲಿ ಹಾದು ಬಂದರೆ ಬುದ್ಧನ ಶಿರ ದರ್ಶನವಾಗುತ್ತದೆ. ಇಡೀ ಆಲಯ ನಿಶ್ಶಬ್ದವಾಗಿದ್ದು, ಕಂಚಿನ ಪಾತ್ರೆಗಳಲ್ಲಿ ನಾಣ್ಯಗಳನ್ನು ಕಾಣಿಕೆಯಾಗಿ ಹಾಕುವ ಸದ್ದು ಮಾತ್ರ ಕೇಳಿಸುತ್ತದೆ.

ಬುದ್ಧನ ಉಪದೇಶಗಳು, ತತ್ವಸಿದ್ಧಾಂತಗಳು ಮತ್ತು ಬೌದ್ಧ ಮತದ ವಿವಿಧ ಸಂಕೇತಗಳನ್ನು 108 ಪ್ರತ್ಯೇಕ ಭಿತ್ತಿಗಳಲ್ಲಿ ಆಕರ್ಷಕವಾಗಿ ಚಿತ್ರಿಸಿ ಪ್ರದರ್ಶಿಸಿರುವುದು ಇಲ್ಲಿಯ ಪಾವಿತ್ರ್ಯ ಹಾಗೂ ಅಂದವನ್ನು ಹೆಚ್ಚಿಸಿದೆ. ಬಿಳಿಯ ಆನೆ, ನೃತ್ಯಗಾರ್ತಿಯರು ಪುಷ್ಪಗಳೊಂದಿಗೆ ಬುದ್ಧನಿಗೆ ಅರ್ಪಿಸುವ ಚಿತ್ತಾಕರ್ಷಕ ಚಿತ್ರಗಳು ಈ ಆಲಯದ ವಿಶೇಷ.

ಇಡೀ ಕಟ್ಟಡವನ್ನು ಆಕ್ರಮಿಸಿಕೊಂಡಿರುವ ‘ಆರಾಮ ಬುದ್ಧ’ನನ್ನು ಒಂದೇ ಕೋನದಿಂದ ಪೂರ್ಣವಾಗಿ ನೋಡಲು ಸಾಧ್ಯವಿಲ್ಲ. ಪಾದದ ಬಳಿ ಅಥವಾ ಬೇರಾವ ಕೋನದಿಂದ ಬುದ್ಧನ ಪ್ರಶಾಂತ ಮುಖವನ್ನು ನೋಡುವ ಪ್ರಯತ್ನ ಮಾಡಬಹುದಷ್ಟೆ.

ಹಳದಿ ಲೋಹದಿಂದ ಕಂಗೊಳಿಸುವ ಬುದ್ಧನನ್ನು ದರ್ಶಿಸಲು ಪ್ರವಾಸಿಗಳು, ಬಿಕ್ಕುಗಳು–ಭಕ್ತಾದಿಗಳು ಸದಾ ಕಿಕ್ಕಿರಿದಿದ್ದರೂ ಅಲ್ಲಿ ನಮಗೆ ಕೇಳುವುದು ಕಾಣಿಕೆ ಪಾತ್ರೆಗಳಿಗೆ ನಾಣ್ಯ ಬೀಳುವ ಸದ್ದು ಮಾತ್ರ.
ಒಂದು ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ಬುದ್ಧ ಪ್ರತಿಮೆಗಳಿರುವುದು ವಾಟ್‌ ಪೊದ ಇನ್ನೊಂದು ವಿಶೇಷ.

ಪಾಳುಬಿದ್ದಿರುವ ಆಯುಟ್ಟತಾಯ್‌ ಮತ್ತು ಸುಖೇತ್‌ತಾಯ್‌ ವಿಹಾರಗಳೂ ಸೇರಿದಂತೆ ಥಾಯ್ಲೆಂಡ್ ಉದ್ದಗಲಕ್ಕೂ ಸಂಗ್ರಹಿಸಿದ ಬುದ್ಧ ಪ್ರತಿಮೆಗಳಿಗೆ ‘ವಾಟ್‌ ಪೊ’ ಮನೆ. ಧ್ಯಾನಸ್ಥ ವಿಗ್ರಹಗಳೇ ಇದರಲ್ಲಿ ಹೆಚ್ಚು.

ಆದರೆ ಪ್ರತಿಯೊಂದು ಪ್ರತಿಮೆಯನ್ನು ಕಾಳಜಿಯಿಂದ ಪ್ರದರ್ಶಿಸಿರುವುದನ್ನು ಇಲ್ಲಿ ಕಾಣಬಹುದು.
ವಾಟ್‌ ಪೊ ಆವರಣ ಬಣ್ಣಗಳ ಓಕುಳಿಯಂತೆ ಕಾಣುತ್ತದೆ. ಇದಕ್ಕೆ ಕಾರಣ ಇಲ್ಲಿರುವ ವಿವಿಧ ಬಣ್ಣಗಳ, ವಿವಿಧ ಆಕಾರ–ಅಳತೆಯ ಸ್ಥೂಪಗಳು.

ಒಂದೊಂದಕ್ಕೂ ಒಂದೊಂದು ಚರಿತ್ರೆಯೂ ಇದೆ. ಥಾಯ್ಲೆಂಡ್‌ ರಾಜವಂಶದ ಅನೇಕರ ಅಸ್ಥಿ ಇರುವ ಸ್ಥೂಪಗಳು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತವೆ.
ಥಾಯ್ಲೆಂಡ್‌ನ ಸಂಸ್ಕೃತಿ, ವ್ಯಾಪಾರ ವಹಿವಾಟು, ರಾಜಕೀಯ–ಸಾಮಾಜಿಕ ಚಟುವಟಿಕೆಗಳನ್ನು ಸಮರ್ಥವಾಗಿ ಬಿಂಬಿಸುವಂತಹ ವಾಟ್‌ ಪೊ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಇದೊಂದು ಅರಿವಿನ ಕೇಂದ್ರ ಕೂಡ. ನೆಲದ ಬೇರುಗಳನ್ನು ಈಗಿನ ಪೀಳಿಗೆಯವರಿಗೆ ಪರಿಚಯಿಸುವ ಮಾಹಿತಿಗಳು ಇಲ್ಲಿ ಯಥೇಚ್ಛ


5ನೇ ಶತಮಾನದಿಂದ ಅಸ್ತಿತ್ವದಲ್ಲಿರುವ ಥಾಯ್ಲೆಂಡ್‌ (ಸಯಾಂ) ದೇಶದ ಚರಿತ್ರೆ, ವೈದ್ಯಕೀಯ, ಆರೋಗ್ಯ, ಸಂಪ್ರದಾಯ, ಸಾಹಿತ್ಯ. ನುಡಿಗಟ್ಟು, ಪಶುಸಂಗೋಪನೆ, ಚಿತ್ರಕಲೆ, ಜಾನಪದ, ಮುಂತಾದ ವಿಷಯಗಳನ್ನು ಶಿಲಾಭಿತ್ತಿಗಳಲ್ಲಿ ಸರಳವಾಗಿ ನಿರೂಪಿಸಿ ‘ವಾಟ್‌ ಪೊ’ ಆವರಣದಲ್ಲಿ ಅನಾವರಣಗೊಳಿಸಿದ್ದು, ಪುಟ್ಟ ಪುಟ್ಟ ಹಸಿರು ಉದ್ಯಾನಗಳ ನಡುವೆ ಇವು ನೋಡುಗರ ಗಮನ ಸೆಳೆಯುತ್ತವೆ.

ದೀರ್ಘಕಾಲದಿಂದ ಥಾಯ್ಲೆಂಡ್‌ ಆಳುತ್ತಿರುವ ‘ಚತ್ರಿ’ ರಾಜವಂಶದ ನಾಲ್ವರು ದೊರೆಗಳ ಸ್ಮರಣೆಯಾಗಿ ಇಲ್ಲಿ ನೆಲೆಗೊಂಡಿರುವ ಸ್ಥೂಪಗಳು ಆಗಿನ ರಾಜ್ಯವ್ಯವಸ್ಥೆಯ ಆಗು ಹೋಗುಗಳ ಪ್ರತಿಬಿಂಬವಾಗಿವೆ.

‘ಅಂಗಮರ್ದನ’ಕ್ಕೆ ಥಾಯ್ಲೆಂಡ್‌ ಪ್ರಸಿದ್ಧಿ. ಇದು ಇಲ್ಲಿಯ ಪ್ರಾಚೀನ ವೈದ್ಯ ಪದ್ಧತಿಯ ಭಾಗವೂ ಹೌದು. ‘ವಾಟ್‌ ಪೊ’ ಆವರಣದಲ್ಲಿ ಪ್ರಾಚೀನ ಅಂಗಮರ್ದನ (ಮಸಾಜ್‌) ಶಾಲೆಯುಂಟು. ‘ಪುರೆ ಬುದ್ಧದೇವ ಪತಿಮಾಕೊರನ್‌’ ಎಂಬ ಅಮೃತಶಿಲೆಯ ದೇವಾಲಯ ‘ಅಂಗಮರ್ದನ’ ಶಿಕ್ಷಣ ಕೇಂದ್ರ. ಇಲ್ಲಿ ಮಸಾಜ್‌ ಅನ್ನು ಶಾಸ್ತ್ರೋಕ್ತವಾಗಿ ಕಲಿಸಲಾಗುತ್ತದೆ. ದೇಶ ವಿದೇಶಗಳಿಂದ ‘ಮಸಾಜ್‌’ ಅನ್ನು ಕಲಿಯಲು, ತರಬೇತು ಹೊಂದಲು ಆಸಕ್ತರು ಇಲ್ಲಿಗೆ ಬರುತ್ತಾರೆ.

16ನೇ ಶತಮಾನದಿಂದೀಚೆಗೆ ಅಧಿಕೃತ ಇತಿಹಾಸವಿರುವ ‘ವಾಟ್‌ ಪೊ’ ಬೌದ್ಧ ಆಲಯ ಸಮುಚ್ಚಯ, ಕೇವಲ ಧಾರ್ಮಿಕ ಕ್ಷೇತ್ರವಲ್ಲ. ವರ್ಣರಂಜಿತ ಕಟ್ಟಡ–ಪ್ರತಿಮೆಗಳನ್ನೊಳಗೊಂಡ ಒಂದು ಅಪೂರ್ವ ದೃಶ್ಯದೀವಿಗೆ. ಭೋಗದ ಅಕ್ಷಯಪಾತ್ರೆಯಂತಿರುವ ಥಾಯ್ಲೆಂಡ್‌ಗೆ ಅಧ್ಯಾತ್ಮದ ಸ್ಪರ್ಶ ದೊರೆಯುವಲ್ಲಿ ‘ವಾಟ್‌ ಪೊ’ ಕೊಡುಗೆ ದೊಡ್ಡದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT