ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಕಕ್ಷೆಗೆ ಇನ್ನೊಂದೇ ಹೆಜ್ಜೆ

ಕೊನೆಯ ಹಂತದ ಪರೀಕ್ಷೆ ಯಶಸ್ವಿ
Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಭೂಮಿಯಿಂದ 66.6 ಕೋಟಿ ಕಿ.ಮೀ. ದೂರದಲ್ಲಿರುವ ಮತ್ತು 300 ದಿನಗಳ ಕಾಲ ಸ್ತಬ್ಧ ಸ್ಥಿತಿಯಲ್ಲಿದ್ದ ಎಂಜಿನ್‌ ಒಂದಕ್ಕೆ ಮತ್ತೆ ಚಾಲನೆ ನೀಡುವುದು ವಿಜ್ಞಾನದ ಅದ್ಭುತವೇ ಸೈ. ‘ಮಂಗಳಯಾನ’ ಕಾರ್ಯಕ್ರಮದ ಅಂಗ­ವಾಗಿ ಸೋಮವಾರ  ‘ಮಾರ್ಸ್ ಆರ್ಬಿಟರ್’ ನೌಕೆಯ ಕೊನೆಯ ಪಥ ಸರಿಪಡಿಸುವಿಕೆ ಹಾಗೂ ಮುಖ್ಯ ದ್ರವ ಎಂಜಿನ್‌ನ ದಹನಶೀಲತೆಯ ಪರೀಕ್ಷೆ ಯಶಸ್ಸು ಕಂಡಿದ್ದು, ಇಸ್ರೊ ಈ ಹಿರಿಮೆಗೆ ಪಾತ್ರವಾಗಿದೆ.

ಮುನ್ನೂರು ದಿನಗಳಿಂದ ನಿದ್ರಾವಸ್ಥೆ­ಯಲ್ಲಿ ಇರಿಸಲಾಗಿದ್ದ 440 ನ್ಯೂಟನ್‌ ನೂಕುಬಲ ಸಾಮರ್ಥ್ಯದ ದ್ರವ ಎಂಜಿನನ್ನು ಪೂರ್ವನಿಗದಿಯಾದಂತೆ ಸೋಮ­ವಾರ ಸುಮಾರು 4 ಸೆಕೆಂಡುಗಳ ಕಾಲ ಉರಿಸಲಾಯಿತು. ಪರೀಕ್ಷೆಯ ಯಶಸ್ಸಿನಿಂದ ಇಸ್ರೊ ವಿಜ್ಞಾನಿಗಳ ವಿಶ್ವಾಸ ನೂರ್ಮಡಿಸಿದೆ.

ಬುಧವಾರ (ಸೆ. 24) ಬೆಳಿಗ್ಗೆ ಇದೇ ಎಂಜಿನ್‌ 24 ನಿಮಿಷಗಳ ಕಾಲ ಉರಿದು ‘ಮಾರ್ಸ್ ಆರ್ಬಿಟರ್’ ಅನ್ನು ಮಂಗಳ ಗ್ರಹದ ಕಕ್ಷೆಗೆ ನೂಕಲಿದೆ. ಬುಧವಾರ ಬೆಳಿಗ್ಗೆ 7 ಗಂಟೆಯಿಂದ 7.30ರ ಅವಧಿಯಲ್ಲಿ ನೌಕೆ ಮಂಗಳನ ಕಕ್ಷೆಯನ್ನು ತಲುಪುವ ಸಾಧ್ಯತೆಯಿದೆ. 8.30ರ ಹೊತ್ತಿಗೆ ಫಲಿತಾಂಶ ಸ್ಪಷ್ಟವಾಗಲಿದೆ.

ಮಂಗಳನೌಕೆ ಈಗ ಮಂಗಳ ಗ್ರಹದ ಗುರುತ್ವ ವಲಯದ ಒಳಗೆ ಬಂದಿರು­ವುದರಿಂದ ಸೋಮವಾರದ ಪರೀಕ್ಷೆಯ ಯಶಸ್ಸು ಮತ್ತಷ್ಟು ಮಹತ್ತರವಾದದ್ದು. ‘ಮಾರ್ಸ್‌ ಆರ್ಬಿಟರ್‌’ ಸದ್ಯಕ್ಕೆ ಮಂಗಳನ 5.4 ಲಕ್ಷ ಕಿ.ಮೀ. ವ್ಯಾಪ್ತಿಯ ಗುರುತ್ವ ವಲಯದಲ್ಲಿ ಇದೆ.

ಬುಧವಾರ ಬೆಳಿಗ್ಗೆ 7 ಗಂಟೆಯಿಂದ 7.30ರ ಅವಧಿಯಲ್ಲಿ ನೌಕೆ ಮಂಗಳನ ಕಕ್ಷೆ ತಲುಪುವ ಸಾಧ್ಯತೆ

ಬುಧವಾರವೇ ಮೊದಲ ವರ್ಣ ಚಿತ್ರ...
ಮಂಗಳ ನೌಕೆಗೆ ಅಳವಡಿಸಲಾ­ಗಿರುವ ಅತ್ಯಾಧುನಿಕ ಕ್ಯಾಮೆರಾಗೆ ಚಾಲನೆ ನೀಡಲು ಇಸ್ರೊ ಸಿದ್ಧತೆ ನಡೆಸಿದ್ದು, ಬುಧ­ವಾರ ಮಧ್ಯಾ­ಹ್ನದ ಹೊತ್ತಿಗೆ ನೌಕೆಯು ಮೊದಲ ವರ್ಣ ಚಿತ್ರವನ್ನು ಭೂಮಿಗೆ ಕಳಿಸುವ ಸಾಧ್ಯ­ತೆ­ಯಿದೆ.   ‘ಬ್ಯಾಲಾಳುವಿ­ನ­ಲ್ಲಿರುವ  ಇಸ್ರೊ ಕೇಂದ್ರಕ್ಕೆ ಈ ಚಿತ್ರ ರವಾನೆ­ಯಾ­ಗಲಿದೆ’ ಎಂದು ಮೂಲಗಳು ತಿಳಿಸಿವೆ.

ಮುಂದಿನ ಸವಾಲು
24ರಂದು ನೌಕೆಯನ್ನು ಕೆಂಪು­ಕಾಯ ಅಂಗಾರಕನ ಕಕ್ಷೆಗೆ ಸೇರಿ­ಸ­ಬೇಕೆಂದರೆ ಅದರ ವೇಗವನ್ನು ತಗ್ಗಿ­ಸ­ಬೇಕು.ಇದು  ಕಠಿಣ ಸವಾಲು. ಮಂಗಳಕ್ಕೆ ಸಾಪೇ­ಕ್ಷ­­ವಾಗಿ ನೌಕೆ ವೇಗ­ವನ್ನು ಸೆಕೆಂಡ್‌ಗೆ 22.1 ಕಿ.ಮೀ.­ನಿಂದ ಸೆಕೆಂಡ್‌ಗೆ 4.4 ಕಿ.ಮೀ.ಗೆ ಇಳಿಸಬೇಕು. ಹೀಗೆ ವೇಗ ತಗ್ಗಿಸಿ ನೌಕೆ­ಯನ್ನು ಯಶ­ಸ್ವಿಯಾಗಿ ಕಕ್ಷೆಗೆ ಸೇರಿಸಲು ದ್ರವ ಎಂಜಿನ್‌ನ್ನು 24 ನಿಮಿಷ­ಗಳ ಕಾಲ ಉರಿಸ­ಬೇಕಾಗುತ್ತದೆ.

ಇದು ಸಂತಸದ ಕ್ಷಣ. ಮಂಗಳ­ನೌಕೆ ಸುಸ್ಥಿತಿಯಲ್ಲಿದೆ. ಇದು ಶೇ 98­­ರಷ್ಟು ಪಯಣ ಮುಗಿಸಿದೆ. ಬುಧ­ವಾರದ ಮಹತ್ವದ ಕಾರ್ಯಾ­ಚರ­ಣೆಗಾಗಿ ನಾವು ಸಜ್ಜಾಗುತ್ತಿ­ದ್ದೇವೆ
– ಇಸ್ರೊ ಅಧ್ಯಕ್ಷ, ಕೆ.ರಾಧಾಕೃಷ್ಣನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT