ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಹೆಸರಲ್ಲಿ ಇಂಡ್ಯಾ!

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘ಇತ್ತೀಚಿನ ವರ್ಷಗಳಲ್ಲಿಯೇ ಬಂದಿರುವ ಅತ್ಯಂತ ಸಂವೇದನಾಶೀಲ ಕಥನಗಳಲ್ಲಿ ಇದೂ ಒಂದು. ಈ ಚಿತ್ರ ಮೋಸ ಮಾಡಲು ಸಾಧ್ಯವೇ ಇಲ್ಲ’. ಭರವಸೆ ತುಂಬಿದ ದನಿಯಲ್ಲಿ ಮಾತಿಗಿಳಿದರು ನಟ ನೀನಾಸಂ ಸತೀಶ್‌.

‘ಒಪ್ಕೊಂಡ್‌ಬುಟ್ಳು ಕಣ್ಲಾ...’ ಹಾಡಿನಂತೆ ಪ್ರೇಕ್ಷಕರು ಸಿನಿಮಾವನ್ನೂ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ಅವರದು. ಇಂದು (ಶುಕ್ರವಾರ) ತೆರೆ ಕಾಣುತ್ತಿರುವ ‘ಲವ್‌ ಇನ್‌ ಮಂಡ್ಯ’ದ ಕುರಿತು ಆತ್ಮವಿಶ್ವಾಸ ಮೂಡಲು ಕಾರಣಗಳನ್ನೂ ಸತೀಶ್‌ ತೆರೆದಿಡುತ್ತಾರೆ. ಹಾಡುಗಳನ್ನು ಇಷ್ಟಪಟ್ಟ ಪ್ರೇಕ್ಷಕನಿಗೆ ಸಿನಿಮಾ ಕೂಡ ಖಂಡಿತಾ ಇಷ್ಟವಾಗುತ್ತದೆ. ಇಡೀ ಸಿನಿಮಾ ಒಂದು ಸಂಪೂರ್ಣ ಆ್ಯಕ್ಷನ್‌ ಪ್ಯಾಕೇಜ್‌ ಎನ್ನುವುದು ಅವರ ವಿವರಣೆ.

‘ಲವ್‌ ಇನ್‌ ಮಂಡ್ಯ’ ಚಿತ್ರದ ಕಥೆ ಹುಟ್ಟುವುದು ಮಂಡ್ಯದ ಹಳ್ಳಿಯೊಂದರಲ್ಲಿ, ಅದು ಮುಗಿಯುವುದು ತಮಿಳುನಾಡಿನಲ್ಲಿ. ಮತ್ತೊಂದು ರಾಜ್ಯದಲ್ಲಿ ಅಂತ್ಯ ಕಾಣುವ ಅಪರೂಪದ ಕಥೆ ಇದು. ಮಂಡ್ಯದ ಸ್ಥಳೀಯ ಬದುಕಿನಂತೆಯೇ ತಮಿಳುನಾಡಿನ ಬದುಕು, ಸಂಸ್ಕೃತಿಯೂ ಚಿತ್ರಿತವಾಗಿದೆ. ಕನ್ನಡ ಸಿನಿಮಾಗಳಲ್ಲಿ ಗಟ್ಟಿ ಕಥೆಯೇ ಇರುವುದಿಲ್ಲ ಎಂಬ ದೂರಿಗೆ ಉತ್ತರ ಈ ಸಿನಿಮಾ ಎಂದು ಸತೀಶ್‌ ಹೇಳುತ್ತಾರೆ.

‘ಮಂಡ್ಯವೇ ಆಗಲಿ, ಉತ್ತರ ಕರ್ನಾಟಕದ ಊರಿನದೇ ಆಗಲಿ, ಎಲ್ಲರೂ ಇದು ತನ್ನದೇ ಕಥೆ ಎಂದು ಭಾವಿಸಿಕೊಳ್ಳುತ್ತಾರೆ. ಏಕೆಂದರೆ ಇದು ಎಲ್ಲರ ಕಥೆ. ಹಾಡುಗಳಲ್ಲಿ ಕಾಣುವ ಗುಣಮಟ್ಟ, ಪ್ರಾಮಾಣಿಕತೆ ಇಡೀ ಸಿನಿಮಾದಲ್ಲಿಯೂ ಕಾಣಿಸುತ್ತದೆ. ನೋಡುಗನಿಗೆ ಹೊಸ ಅನುಭವ ದಕ್ಕುವುದು ನಿಶ್ಚಿತ’ ಎಂಬ ನಿರೀಕ್ಷೆ ಅವರದು.

ಚಿತ್ರಕ್ಕೆ ಈಗಲೇ ಬಂದಿರುವ ಬೇಡಿಕೆ ಅವರಲ್ಲಿ ಅಚ್ಚರಿ ಮೂಡಿಸಿದೆ. ವಿತರಕರು, ಚಿತ್ರಮಂದಿರಗಳಿಂದ ಬೇಡಿಕೆ ಜೋರಾಗಿದೆ. 80 ಚಿತ್ರಮಂದಿರಗಳಲ್ಲಿ ಬಿಡುಗಡೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು, ಈಗ ಅದರ ಸಂಖ್ಯೆ 150ಕ್ಕೆ ಏರಿದೆ. 80–90ರ ದಶಕದ ಹಾಡುಗಳನ್ನು ನೆನಪಿಸುವ ‘ಒಂದು ಅಪರೂಪದ ಗಾನ ಇದು...’ ಹಾಡು ಸತೀಶ್‌ಗೆ ವಿಭಿನ್ನ ಅನುಭವ ನೀಡಿದೆ. ಆ ಮಾದರಿಯ ಹಾಡುಗಳಿಗೆ ನರ್ತಿಸುವುದು, ಭಾವಗಳನ್ನು ಹೊಮ್ಮಿಸುವುದು ನಿಜಕ್ಕೂ ಕಷ್ಟದ ಕೆಲಸ ಎಂದು ಅವರಿಗೆ ಅನಿಸಿದೆ. ನಿರ್ದೇಶಕ ಅರಸು ಅಂತಾರೆ ಅವರದು ಇದು ಮೊದಲ ಸಿನಿಮಾ ಎಂದೇನೂ ಅನಿಸುತ್ತಿಲ್ಲ, ಅಷ್ಟು ಪಕ್ವತೆಯಿಂದ ಕೆಲಸ ಮಾಡಿದ್ದಾರೆ ಎಂದು ಸತೀಶ್‌ ಅವರಿಗೆ ಅನ್ನಿಸಿದೆ.

‘ಡ್ರಾಮಾ’ದ ಸಹನಟಿ ಸಿಂಧು ಲೋಕನಾಥ್‌ ಇಲ್ಲಿಯೂ ಅವರಿಗೆ ಜೋಡಿ. ಪಾತ್ರದ ಬಗ್ಗೆ ಬದ್ಧತೆಯುಳ್ಳ, ಸಿಂಪಲ್‌ ನಟಿ ಸಿಂಧು ಎನ್ನುವುದು ಸತೀಶ್‌ ಪ್ರಶಂಸೆ. ಸಿಂಧು ಅವರ ಪ್ರಾಮಾಣಿಕತೆಯೂ ಅವರಿಗೆ ಇಷ್ಟವಾಗಿದೆ.

ತಾನು ಹೀರೊಯಿನ್‌ ಎಂದು ತೋರಿಸಿಕೊಳ್ಳುವ ಗುಣ ಅವರದಲ್ಲ. ಮೇಕಪ್‌ ಹಚ್ಚಿದಾಗ ಮಾತ್ರ ಅವರು ನಾಯಕಿಯಾಗುತ್ತಾರೆ. ಪಾತ್ರದಲ್ಲಿಯೂ ತನ್ಮಯರಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಸಿಂಧು ಗುಣಗಾನ ಮಾಡುತ್ತಾರೆ.

‘ಲೂಸಿಯಾ’ ಬಳಿಕ ಮುಂದಿನ ದಾರಿ ಸ್ಪಷ್ಟವಾಗಿರಲಿಲ್ಲ. ಆದರೆ ಈಗ ಯಾವ ಸಿನಿಮಾ ಆಯ್ದುಕೊಳ್ಳಬೇಕೆಂಬ ಸ್ಪಷ್ಟತೆಯಿದೆ. ನಟನೆ ಹಾಗೂ ಸಿನಿಮಾಗಳ ಆದ್ಯತೆಯಲ್ಲಿ ನನ್ನೊಳಗೆ ಸಾಕಷ್ಟು ಬದಲಾವಣೆಗಳಾಗಿವೆ ಎನ್ನುವ ಸತೀಶ್‌, ನೃತ್ಯ ಮತ್ತು ಆ್ಯಕ್ಷನ್‌ ಕಲಿಕೆಯಲ್ಲಿ ಹೆಚ್ಚು ಶ್ರಮ ವಿನಿಯೋಗಿಸುತ್ತಿದ್ದಾರೆ. ‘ರಾಕೆಟ್’ ಮೂಲಕ ನಿರ್ಮಾಪಕರಾಗುತ್ತಿರುವ ಸಂತಸ ಮತ್ತು ಹೊಣೆಗಾರಿಕೆ ಗಳನ್ನೂ ಅವರು ಹಂಚಿಕೊಳ್ಳುತ್ತಾರೆ. ಈ ಚಿತ್ರಕ್ಕಾಗಿ ದೇಹವನ್ನು ತೀವ್ರವಾಗಿ ದಂಡಿಸಿಕೊಳ್ಳುತ್ತಿದ್ದಾರೆ. ‘ಲವ್‌ ಇನ್‌ ಮಂಡ್ಯ’ ‘ರಾಕೆಟ್‌’ ಉಡಾವಣೆಗೆ ಸೂಕ್ತ ಮೆಟ್ಟಿಲಾಗಲಿದೆ ಎಂಬ ನಂಬಿಕೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT