ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಗಳಿಗೆ ಮೂಗುದಾರ

ಕೇಂದ್ರ ಸಚಿವರ  ನೀತಿ ಸಂಹಿತೆ ಪರಿಕ್ಷರಣೆ
Last Updated 10 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಸಚಿವರಾಗುವ ಮುನ್ನ ವ್ಯಾಪಾರ – ವಹಿವಾಟಿನಲ್ಲಿ ಹೊಂದಿದ್ದ ಆಸಕ್ತಿ ಕೈಬಿಡುವಂತೆ ಹಾಗೂ ಯಾವುದೇ ಸಂಘ, ಸಂಸ್ಥೆಗಳೊಂದಿಗೆ ಹೊಂದಿದ್ದ ಸಂಪರ್ಕವನ್ನು  ಸಂಪೂರ್ಣ­ವಾಗಿ ಕಡಿದು­ಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿ­ಗಳಿಗೆ  ತಾಕೀತು ಮಾಡಿದ್ದಾರೆ.

ರಾಜಕೀಯ ಪ್ರಭಾವ  ಬಳಸಿ­ಕೊಂಡು  ಸ್ವಜನ ಪಕ್ಷಪಾತದಲ್ಲಿ ತೊಡ­ಗ­ಬಾರದು.   ಅಧಿಕಾರ ದುರುಪ­ಯೋಗ ಪಡಿಸಿ­ಕೊಂಡು ಗುತ್ತಿಗೆ, ಪರ­ವಾ­ನಗಿಗಾಗಿ ಶಿಫಾರಸು ಮಾಡು­ವಂತಿಲ್ಲ.  ಸರ್ಕಾರದ ಆಸ್ತಿ ಖರೀದಿ ಅಥವಾ ಮಾರಾಟ ಮಾಡಬಾರದು ಎಂದೂ ಸಚಿವರಿಗೆ ಸೂಚಿಸಲಾಗಿದೆ.    ಎರಡು ತಿಂಗಳ ಒಳಗಾಗಿ ತಮ್ಮ ಹಾಗೂ ಕುಟುಂಬದ ಎಲ್ಲ ಆಸ್ತಿ ವಿವರ, ವ್ಯಾಪಾರ- ಮತ್ತು ವಹಿವಾಟಿನ ಸಮಗ್ರ ಮಾಹಿತಿಯನ್ನು  ಪ್ರಧಾನಿಗೆ ಸಲ್ಲಿಸು­ವಂತೆ  ಕೇಂದ್ರ ಸಚಿವರಿಗೆ ನಿರ್ದೇಶನ ನೀಡಲಾಗಿದೆ.

ಸಚಿವರು ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಎಲ್ಲ ಸ್ಥಿರಾಸ್ತಿ, ಷೇರು, ಒಡವೆ, ಸಾಲ, ವ್ಯಾಪಾರ, ವಹಿವಾಟಿಗೆ ಸಂಬಂಧಿಸಿದ  ಮಾಹಿತಿ­ಗಳನ್ನು ಜುಲೈ 26ರ  ಒಳಗಾಗಿ  ಪ್ರಧಾನಿಗೆ ಸಲ್ಲಿಸಬೇಕು.

ಸಂಪುಟದ ಸಹೋದ್ಯೋಗಿಗಳ ನೀತಿ ಸಂಹಿತೆ ಪಾಲನೆ ಮೇಲೆ ಖುದ್ದು ಪ್ರಧಾನಿಯೇ ನಿಗಾ ಇಡಲಿದ್ದಾರೆ.
ಅಲ್ಲದೇ  ಸಚಿವರ ಸ್ಥಾನದಲ್ಲಿ ಮುಂದುವರಿಯುವವರೆಗೆ  ಪ್ರತಿ ವರ್ಷ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವ ತೆರಿಗೆ ವಿವರಗಳನ್ನೇ ಯಥಾವತ್ತಾಗಿ ಆಗಸ್ಟ್ 31ರ ಒಳಗಾಗಿ ಪ್ರಧಾನಿ ಕಚೇರಿಗೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಯುಪಿಎ ಸರ್ಕಾರದಲ್ಲಿ ಜಾರಿಯ­ಲ್ಲಿದ್ದ ಸಚಿವರ ನೀತಿ ಸಂಹಿತೆಗಳನ್ನು  ಗೃಹ ಸಚಿವಾಲಯ ಹಲವು ಬದಲಾ­ವಣೆ­ಗಳೊಂದಿಗೆ     ಮಂಗಳವಾರ ಪ್ರಕಟಿಸಿದೆ.

ವಿವಿಧ ರಾಜ್ಯಗಳ ಸಚಿವರಿಗೂ ಈ ನೀತಿ ಸಂಹಿತೆ ಅನ್ವಯವಾಗಲಿದೆ. ಅವರು ಆಯಾ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ.
ಈ ಹಿಂದೆ ಯುಪಿಎ ಸರ್ಕಾರದಲ್ಲಿ ಸಂಪುಟ ಕಾರ್ಯದರ್ಶಿ ಆಸ್ತಿ ವಿವರ ಸಲ್ಲಿಸುವಂತೆ ಕೋರಿ ಸಚಿವರಿಗೆ ಜ್ಞಾಪನಾ ಪತ್ರ ಬರೆಯುತ್ತಿದ್ದರು.
ನೀತಿ ಸಂಹಿತೆಯಲ್ಲಿ ಏನಿದೆ?

*ಸಚಿವರು ವೈಯಕ್ತಿಕವಾಗಿ ಅಥವಾ ಕುಟುಂಬದ ಸದಸ್ಯರ ಮೂಲಕ ಯಾವುದೇ ವ್ಯವಹಾರದಲ್ಲಿ ತೊಡಗಿಸಿ­ಕೊಳ್ಳುವಂತಿಲ್ಲ. ಹಳೆಯ ವೃತ್ತಿಯ ಬಗ್ಗೆ ಮಾಹಿತಿ ನೀಡಬೇಕು.

*ಸಚಿವರಾದ ನಂತರ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೊಸದಾಗಿ ಯಾವುದೇ ವ್ಯಾಪಾರ, ವಹಿವಾಟು ಆರಂಭಿಸುವಂತಿಲ್ಲ.

*ಸಚಿವರ ಕುಟುಂಬದ ಸದಸ್ಯರು ಹೊಸದಾಗಿ ಆರಂಭಿಸುವ ವ್ಯಾಪಾ­ರದ ಬಗ್ಗೆ ಪ್ರಧಾನಿಗೆ ತಿಳಿಸಬೇಕು.

*ಪರವಾನಗಿ, ಪರ್ಮಿಟ್‌, ವಿಶೇಷ ಕೋಟಾದ ಸೌಲಭ್ಯ ಪಡೆಯಲು ರಾಜಕೀಯ ಪ್ರಭಾವ ಬೀರುವಂತಿಲ್ಲ.

*ಸಚಿವರು, ಅವರ ಕುಟುಂಬದ ಸದಸ್ಯರು ಯಾವುದೇ ರಾಜಕೀಯ ಅಥವಾ ಕೌಟುಂಬಿಕ ದತ್ತಿನಿಧಿ, ಸಂಘ, ಸಂಸ್ಥೆಗಳಿಂದ ದೇಣಿಗೆ ಅಥವಾ ಚಂದಾ ಪಡೆಯುವಂತಿಲ್ಲ.

*ಯಾರಿಂದಲೂ ಬೆಲೆ ಬಾಳುವ ಉಡುಗೊರೆಗಳನ್ನು ಸ್ವೀಕರಿಸು­ವಂತಿಲ್ಲ.

*ಪ್ರಧಾನಿ ಪೂರ್ವಾನುಮತಿ ಇಲ್ಲದೆಯೇ ಸಚಿವರ ಕುಟುಂಬದ ಸದಸ್ಯರು ದೇಶ, ವಿದೇಶಗಳಲ್ಲಿರುವ ವಿದೇಶಿ ಸಂಘ, ಸಂಸ್ಥೆ, ಕಚೇರಿಗಳಲ್ಲಿ ಉದ್ಯೋಗ ಪಡೆಯುವಂತಿಲ್ಲ. ಒಂದು ವೇಳೆ ಸಚಿವರ ಕುಟುಂಬದ ಸದಸ್ಯರು ಈಗಾಗಲೇ ಉದ್ಯೋಗ­ದಲ್ಲಿದ್ದರೆ ಪ್ರಧಾನಿ  ಗಮನಕ್ಕೆ ತಂದು,  ಉದ್ಯೋಗ­ದಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಕೈಗೊಳ್ಳಬೇಕು.

*ವಿದೇಶಗಳಿಗೆ ತೆರಳಿದಾಗ ಅಥವಾ ವಿದೇಶಿ ಪ್ರತಿನಿಧಿಗಳು ನೀಡುವ ದುಬಾರಿ ಅಲ್ಲದ ಸಾಂಕೇತಿಕ ಉಡುಗೊರೆ, ಸ್ಮರಣಿಕೆ, ಕಾಣಿಕೆಗಳನ್ನು ಸಚಿವರು ಸ್ವೀಕರಿಸಬಹುದು. ಅವುಗಳ ಮೌಲ್ಯ ₨ 5,000 ಮೀರಿರ­ಬಾರದು.

*ಒಂದು ವೇಳೆ ಉಡುಗೊರೆ ಮೌಲ್ಯ ₨ 5,000 ಮೀರಿದರೆ ಸಚಿವರು ಹೆಚ್ಚಿನ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿ ಉಡುಗೊರೆ ಪಡೆಯಬಹುದು. ಇಲ್ಲದಿದ್ದರೆ ಆ ಉಡುಗೊರೆ ಸರ್ಕಾರದ ಪಾಲಾಗುತ್ತದೆ. ಅವುಗಳನ್ನು ರಾಷ್ಟ್ರಪತಿ ಭವನ, ಪ್ರಧಾನಿ ಅಧಿಕೃತ ನಿವಾಸ ಅಥವಾ ರಾಜಭವನದಲ್ಲಿ
ಇರಿಸಲಾ­ಗುವುದು.

*ಪ್ರವಾಸದ ವೇಳೆ ಸರ್ಕಾರಿ ಪ್ರವಾಸಿ ಮಂದಿರದಲ್ಲಿಯೇ ವಾಸ್ತವ್ಯ ಹೂಡ­ಬೇಕು. ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುವಂತಿಲ್ಲ.

*ಔತಣಕೂಟಗಳಲ್ಲಿ ಭಾಗವಹಿ­ಸುವುದನ್ನು ಆದಷ್ಟೂ ತಪ್ಪಿಸಿಕೊಳ್ಳಬೇಕು

*ವೈಯಕ್ತಿಕ ಕೆಲಸ, ಕಾರ್ಯಗಳಿಗಾಗಿ ನಾಗರಿಕ ಸೇವಾ ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರುವಂತಿಲ್ಲ.

*ಸಚಿವರಾಗಿ ಅಧಿಕಾರವಹಿಸಿಕೊಂಡ ಎರಡು ತಿಂಗಳ ಒಳಗಾಗಿ ಆಸ್ತಿ ವಿವರ ಘೋಷಿಸಬೇಕು. ಪ್ರತಿ ವರ್ಷ ಆಗಸ್ಟ್‌ 31ರೊಳಗೆ ಈ ವಿವರ ಸಲ್ಲಿಸಬೇಕು.

‘ಆಧಾರ್‌’ ಸಂಪುಟ ಸಮಿತಿ ರದ್ದು
ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಆಧಾರ್‌) ಸಂಬಂಧಿಸಿದ ಸಂಪುಟ ಸಮಿತಿಯೂ ಸೇರಿದಂತೆ ಯುಪಿಎ ಸರ್ಕಾರದಲ್ಲಿ ರಚಿಸಲಾಗಿದ್ದ ನಾಲ್ಕು ಪ್ರಮುಖ ಸಂಪುಟ ಸಮಿತಿಗಳನ್ನು ಪ್ರಧಾನಿ ಮೋದಿ ಮಂಗಳವಾರ ರದ್ದುಗೊಳಿ­ಸಿದ್ದಾರೆ.

ತ್ವರಿತಗತಿಯಲ್ಲಿ ಆಡಳಿತಾತ್ಮಕ ನಿರ್ಧಾ­ರ­ಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳ­ಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಬೆಲೆ ನಿಯಂತ್ರಣ, ಪ್ರಾಕೃತಿಕ ವಿಕೋಪ ನಿರ್ವಹಣೆ ಹಾಗೂ ವಿಶ್ವ  ವ್ಯಾಪಾರ ಸಂಘಟನೆಯ ವ್ಯವ­ಹಾರ­ಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಗಳನ್ನು ಕೂಡಾ ರದ್ದು ಪಡಿಸ­ಲಾಗಿದೆ. ಇವುಗಳ ಉಸ್ತುವಾರಿಯನ್ನು ಇತರ ಸಂಪುಟ ಸಮಿತಿಗಳಿಗೆ ವಹಿಸಲಾಗಿದೆ.

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಈಗಾಗಲೇ ಮಹತ್ವದ ತೀರ್ಮಾನ ಕೈಗೊಂಡಿದೆ.  ಇನ್ನುಳಿದ  ಚಿಕ್ಕಪುಟ್ಟ ತೀರ್ಮಾನಗಳನ್ನು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನೋಡಿಕೊಳ್ಳಲಿದೆ. ಬೆಲೆ ನಿಯಂತ್ರಣ ಸಮಿತಿಯ ಉಸ್ತುವಾರಿಯನ್ನೂ ಕೂಡ ಇದೇ ಸಮಿತಿ ನೋಡಿಕೊಳ್ಳಲಿದೆ.

ಇನ್ನು ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಯ ಹೊಣೆಯನ್ನು ಸಂಪುಟ ಕಾರ್ಯದರ್ಶಿ ನೋಡಿಕೊಳ್ಳಲಿದ್ದಾರೆ. ಇಲ್ಲವೇ ಸಚಿವ ಸಂಪುಟ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದೆ.

ಮುಂದಿನ ದಿನಗಳಲ್ಲಿ ಮೋದಿ  ಇನ್ನೂ ಕೆಲವು ಸಂಪುಟ ಸಮಿತಿಗಳನ್ನು ಪುನರ್ ರಚಿಸಲಿದ್ದಾರೆ.  ಸಂಪುಟ ಸಮಿತಿ, ಆರ್ಥಿಕ, ಸಂಸದೀಯ,  ರಾಜ­ಕೀಯ ಹಾಗೂ ರಕ್ಷಣಾ ವ್ಯವಹಾರಗಳಿಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಗಳನ್ನೂ  ಪುನರ್ ರಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT