ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ನೀಡಿ ಮನೆಯಡುಗೆ

Last Updated 8 ಸೆಪ್ಟೆಂಬರ್ 2015, 19:58 IST
ಅಕ್ಷರ ಗಾತ್ರ

ಮಕ್ಕಳನ್ನು ಶಾಲೆಗೆ ಕಳುಹಿಸುವ ಧಾವಂತದಲ್ಲಿ ಪೋಷಕರು ಲಂಚ್‌ ಬಾಕ್ಸ್‌ನಲ್ಲಿ ಸಿಕ್ಕಸಿಕ್ಕ ಆಹಾರವನ್ನು ತುಂಬಿ ಕಳುಹಿಸುತ್ತಿದ್ದಾರೆ. ಕೆಲವರಂತೂ ಚಾಕಲೇಟ್‌, ಬಿಸ್ಕೆಟ್‌, ಪೇಸ್ಟ್ರೀಸ್‌ ಸೇರಿಂದಂತೆ ಜಂಕ್‌ ಫುಡ್‌ಗಳನ್ನೂ ತುಂಬಿ ಮಕ್ಕಳ ಆರೋಗ್ಯ ಹಾಳುಮಾಡುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಶೇಕಡಾ 20 ರಷ್ಟು ಶಾಲಾ ಮಕ್ಕಳು ಪೌಷ್ಟಿಕ ಆಹಾರದ ಕೊರತೆ, ದೈಹಿಕ ಚಟುವಟಿಕೆಗಳಿಲ್ಲದೇ ಬೊಜ್ಜು ಮೈ, ಅಧಿಕ ಒತ್ತಡ, ರಕ್ತದೊತ್ತಡ ಸೇರಿದಂತೆ ಮಧುಮೇಹಕ್ಕೂ ತುತ್ತಾಗುತ್ತಿರುವ ಸಂಗತಿ ಆತಂಕ ಉಂಟುಮಾಡಿದೆ.

ಸೆಪ್ಟೆಂಬರ್‌ 1ರಿಂದ 7ರವರೆಗೆ ‘ನ್ಯಾಷನಲ್‌ ನ್ಯೂಟ್ರಿಷನ್‌ ವೀಕ್’ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಎಂಥ ಆಹಾರ ಕೊಡಬೇಕು, ಏನನ್ನು ಕೊಡಬಾರದು ಎಂಬುದರ ಬಗ್ಗೆ ಮಾತನಾಡಿದ್ದಾರೆ ಕೋರಮಂಗಲದ ಡಯಬೆಟಾ ಕೇರ್‌ ಇಂಡಿಯಾದ ಮುಖ್ಯ ನ್ಯೂಟ್ರಿಷನಿಸ್ಟ್‌ ಡಾ. ತಾರಾ ಮುರಳಿ.
‘ನಮ್ಮ ಮಕ್ಕಳನ್ನು ಎಂಥ ಶಾಲೆಗೆ ಸೇರಿಸಬೇಕು, ಇತರೆ ಮಕ್ಕಳಂತೆ ಹೇಗೆ ಬುದ್ಧಿವಂತರನ್ನಾಗಿ ಮಾಡಬೇಕು, ಎಂಬ ಇತ್ಯಾದಿ ಅಂಶಗಳ ಕಡೆ ಗಮನ ಹರಿಸುವಂತೆ, ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವ ಬಗ್ಗೆಯೂ ನಿಗಾವಹಿಸಬೇಕಾದ ಅಗತ್ಯ ಸೃಷ್ಟಿಯಾಗಿದೆ. 2 ವರ್ಷದಿಂದ 14 ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಆಹಾರ ಮುಖ್ಯಪಾತ್ರವಹಿಸುತ್ತದೆ.

ಹಿಂದಿನ ಕಾಲದಲ್ಲಿ ಮಕ್ಕಳು ಗೋಲಿ, ಚಿನ್ನಿದಾಂಡು, ಮರಕೋತಿ, ಕಳ್ಳಪೋಲಿಸ್‌ನಂಥ ಆಟಗಳನ್ನು ಆಡುತ್ತಿದ್ದರು. ದೈಹಿಕ ಚಟುವಟಿಕೆ ಹೆಚ್ಚಿತ್ತು. ಈಗಿನ ಮಕ್ಕಳೇನಿದ್ದರೂ ಮೊಬೈಲ್‌, ಕಂಪ್ಯೂಟರ್‌, ಟಿವಿ ಮುಂದೆ ಕುಳಿತು ಕಾಲಹರಣ ಮಾಡುತ್ತಿದ್ದಾರೆ. ಇದರೊಂದಿಗೆ ಮುಖ್ಯ ಆಹಾರವಾಗಿ ಜಂಕ್‌ ಫುಡ್‌ ಜೊತೆಯಾಗಿದೆ. ಹಠ ಮಾಡುತ್ತಾರೆ ಎಂಬ ಕಾರಣಕ್ಕೆ ಅಥವಾ ಅತೀಯಾದ ಪ್ರೀತಿಯಿಂದ ಮಕ್ಕಳಿಗೆ ಹೆಚ್ಚು ಕ್ಯಾಲರಿ ಇರುವ ಆಹಾರ ಕೊಡುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಸ್ಥೂಲಕಾಯತೆ ಆವರಿಸಿ ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ.

 ಜ್ವರ ಬಂದರೆ ಪ್ರತಿರಕ್ಷೆ ಗುಣ ಕೂಡ ಅವರಲ್ಲಿ ಇರೋದಿಲ್ಲ. ಆದ್ದರಿಂದ ಮಕ್ಕಳಿಗೆ ಕೊಡುವ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಬೇಕಿದೆ. ಇವರಿಗೆ ಮನೆಯಲ್ಲೇ ಮಾಡುವ ಆಹಾರ ಕೊಡಬೇಕು. ಈ ವಯಸ್ಸಿನಲ್ಲೇ ಮನೆ ಆಹಾರ ಇಷ್ಟಪಡುವಂತೆ ಹಂತ ಹಂತವಾಗಿ ಪ್ರಯತ್ನಿಸಬೇಕು. ಆಗ ವಯಸ್ಸು 25 ಆಗುವುದರೊಳಗೆ ರಕ್ತದೊತ್ತಡ, ಬೊಜ್ಜು ಮೈ, ಮಧುಮೇಹ ಸೇರಿದಂತೆ ಹೃದ್ರೋಗ ಸಮಸ್ಯೆ ಬರದಂತೆ ತಡೆಗಟ್ಟಬಹುದು’ ಎನ್ನುತ್ತಾರೆ ಡಾ. ತಾರಾ ಮುರಳಿ.

ಕಾಡುವ ಸಮಸ್ಯೆ
ಮಕ್ಕಳಲ್ಲಿ ದೈಹಿಕ ಚಟುವಟಿಕೆ ಇಲ್ಲದ ಜೀವನ ಶೈಲಿ, ಜಂಕ್‌ ಫುಡ್‌ನಿಂದ ಅನೇಕ ಸಮಸ್ಯೆಗಳು ಉಲ್ಬಣವಾಗುತ್ತವೆ. ಮುಖ್ಯವಾಗಿ ಬೊಜ್ಜುಮೈ ಹೊಂದುವುದು. ಅಧಿಕ ಒತ್ತಡ, ಕೆಟ್ಟ ಕೊಲೆಸ್ಟ್ರಾಲ್‌ ಶೇಖರಣೆ, ರಕ್ತದೊತ್ತಡ ಹಾಗೂ ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಅಪೌಷ್ಟಿಕತೆ ಕಾಡಬಹುದು. ಆದ್ದರಿಂದ ಮಕ್ಕಳಿಗೆ ಪ್ರತಿದಿನವೂ ಜಂಕ್‌ಫುಡ್‌ಗಳ ಬದಲಾಗಿ ಆರೋಗ್ಯಯುತ ಆಹಾರ ನೀಡಬೇಕಿದೆ.

ಪೌಷ್ಟಿಕ ಆಹಾರ ಕೊಡಿ
ಮಕ್ಕಳಲ್ಲಿ ಅಧಿಕ ಬೊಜ್ಜು ಬಾರದಂತೆ ತಡೆಯಲು ಆಹಾರದ ಕಡೆ ಗಮನ ಕೊಡಬೇಕಿದೆ. ಬೆಳಿಗ್ಗೆ 8ಗಂಟೆ ಒಳಗೆ ಒಂದು ಲೋಟ ಹಾಲು, ಬಾಳೆ ಹಣ್ಣು ಕೊಡಿ. ಊಟದ ಡಬ್ಬದಲ್ಲಿಯೂ ತಾಜಾ ಹಣ್ಣು ಹಾಕಿ, ಸ್ಯಾಂಡ್‌ವಿಚ್‌ ಇಷ್ಟಪಡುವ ಮಕ್ಕಳಾದರೆ ತರಕಾರಿ ಹೆಚ್ಚು ಹಾಕಿ ಕೊಡಿ, ಮೊಟ್ಟೆಯೂ ಒಳ್ಳೆಯದು. ತರಕಾರಿ ಕಟ್ಲೆಟ್‌, ಬಿಸಿಬೇಳೆ ಭಾತ್‌ ಹಾಗೂ ಪನ್ನೀರ್‌ ರೋಲ್‌ ಮಾಡಿ ಕೊಡಬಹುದು. ಶಾಲೆಯಿಂದ ಬಂದ ತಕ್ಷಣ ತರಕಾರಿ ಹೆಚ್ಚು ಹಾಕಿದ ಚುರುಮುರಿ, ಬೇಳೆ ವಡೆ, ರವಾ ಇಡ್ಲಿ, ಎಗ್‌ ಸ್ಯಾಂಡ್‌ವಿಚ್‌ ಕೊಡಬಹುದು. ಹಣ್ಣು ಇಷ್ಟಪಡದ ಮಕ್ಕಳಿಗೆ ಹಣ್ಣುಗಳನ್ನು ಹಾಕಿ ಮಾಡಿದ ಮಿಲ್ಕ್‌ಶೇಕ್‌ ಕೊಡಬಹುದು. ಇವು ಹೆಚ್ಚು ಪೌಷ್ಟಿಕಾಂಶವನ್ನು ಒದಗಿಸುತ್ತವೆ. ರಾಗಿ, ಜೋಳ, ಗೋಧಿಯಿಂದ ಮಾಡಿದ ಆಹಾರವೂ ಮುಖ್ಯವಾಗಿರಲಿ. ತಂಗಳು ಬೇಡ, ಎಣ್ಣೆಯಲ್ಲಿ ಕರೆದ ಆಹಾರ ಹೆಚ್ಚು ಬೇಡ. ಮಕ್ಕಳ ಆರೋಗ್ಯಕ್ಕೆ ಸಹಕಾರಿಯಾದ ಆಹಾರವಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT