ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೇ... ಮುಟ್ಟಿದರೆ ಮುನಿಯಿರಿ

Last Updated 25 ಜುಲೈ 2014, 19:30 IST
ಅಕ್ಷರ ಗಾತ್ರ

ಸುಮಾರು ಒಂದೂವರೆ ವರ್ಷದ ಹಿಂದೆ ನಾವು ಕೆಲವು ಸ್ನೇಹಿತರು ಒಟ್ಟಾಗಿ, ಚಿತ್ರದುರ್ಗದ ಒಂಬತ್ತು ವರ್ಷದ ಹುಡುಗಿಯೊಬ್ಬಳಿಗೆ ಇಲ್ಲಿನ ಅತ್ಯುತ್ತಮ ಆಸ್ಪತ್ರೆಯೊಂದರಲ್ಲಿ ಕಾಲಿಗೆ ಚಿಕಿತ್ಸೆ ಕೊಡಿಸುತ್ತಿದ್ದೆವು. ನಾಲ್ಕು ಹಂತಗಳಲ್ಲಿ ಸಾಗಿದ ಆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವಾರಗಟ್ಟಲೆ ಆ ಹುಡುಗಿ ಆಸ್ಪತ್ರೆಯಲ್ಲಿದ್ದಾಗ ವಾರ್ಡ್‌ಬಾಯ್‌ಗಳು, ನರ್ಸ್‌ಗಳು ಎಲ್ಲರೂ ಪರಿಚಿತರೇ ಆಗಿದ್ದರು. ಅವಳನ್ನು ಚಿಕಿತ್ಸಾ ಕೊಠಡಿಯಿಂದ ವಾರ್ಡಿಗೆ, ವಾರ್ಡಿನಿಂದ ಮತ್ತೆ ಈಚೆ ಗಾಲಿಕುರ್ಚಿಯಲ್ಲಿ ಕರೆದೊಯ್ಯುತ್ತಿದ್ದವ ಸ್ವಲ್ಪ ಪೆದ್ದು ಕಳೆಯ ವಾರ್ಡ್‌ಬಾಯ್. ನಾವು ಚಿಕಿತ್ಸಾ ಕೊಠಡಿಯ ಹೊರಗೆ ಕಾಯುತ್ತಿರುವಾಗ ಕಾಲಿಗೆ ಮಣ ಭಾರದ ರಾಡ್‌ಗಳನ್ನು ಹಾಕಿಸಿ ಕೊಂಡು, ಮೂರೂ ಹೊತ್ತು ನೋವಿನಿಂದ ಮುಲುಗುಡುವ ಆ ಹುಡುಗಿಗೆ ಆತ ಕಚಗುಳಿಯಿಟ್ಟು, ಅವಳತ್ತ ಬಾಗಿ, ಅವಳೂರಿನ ಬಗ್ಗೆ ಏನಾದ್ರೂ ಕೇಳುತ್ತ ನಗಿಸುತಿದ್ದ.

ಮೊದಮೊದಲು ನನಗೂ ಇದೆಲ್ಲ ಸಹಜವಾಗಿಯೇ ಕಂಡಿತ್ತು. ಆದರೆ ನಾಲ್ಕಾರು ಸಲ ಆತ ನಗಿಸುವಾಗ ಅವಳನ್ನು ಮುಟ್ಟುವುವದನ್ನು ಸೂಕ್ಷ್ಮವಾಗಿ ಗಮನಿಸಿದ ನನಗೆ ಯಾಕೋ ಆತ ಎಲ್ಲೆಲ್ಲೋ ಮುಟ್ತಿದ್ದಾನೆ ಅನ್ನಿಸಿತು. ಹಾಗೊಮ್ಮೆ ಇನ್ನೇನು ಚಿಕಿತ್ಸಾ ಕೊಠಡಿಯಿಂದ ಹೊರ ಬಂದ ನಾವು ಅವಳ ಗಾಲಿ ಕುರ್ಚಿಯನ್ನು ವಾರ್ಡಿಗೆ ಕರೆದೊಯ್ಯುವ ವಾರ್ಡ್‌ಬಾಯ್‌ಗಳಿಗೆ (ಹಾಗೆ ಚಿಕಿತ್ಸಾ ಕೊಠಡಿಯ ಹೊರಗೆ ಒಬ್ಬರಲ್ಲ ಒಬ್ಬರು ವಾರ್ಡ್ ಬಾಯ್‌ ಇರುತ್ತಿದ್ದರು) ಕಾಯುತ್ತಿದ್ದಾಗ ಈತ ಬಂದವನೇ ಅವಳತ್ತ ಬಾಗಿ, ಕಚಗುಳಿಯಿಟ್ಟು ನೋವಿನಲ್ಲಿದ್ದ ಅವಳನ್ನು ನಗಿಸುವ ಪ್ರಯತ್ನ ಮಾಡುತ್ತ... ನನಗೆ ಆತನ ಕೈಗಳು ಕಂಕುಳಿನಿಂದ ಎದೆಯ ಭಾಗಕ್ಕೆ ಸರಿದಿದ್ದು ಸ್ಪಷ್ಟವಾಗಿ ಕಾಣಿಸಿತು. ನಾನು ತಟ್ಟನೆ ಅವನನ್ನು ಸರಿಸಿ, ‘ಬಿಡಿ ನಾನೇ ತಳ್ತೇನೆ, ಹೋಗಿ ಲಿಫ್ಟ್‌ ಓಪನ್ ಮಾಡಿ’ ಎಂದೆ. ಆತನ ಮುಖ ಕಪ್ಪಿಟ್ಟಿತು. ಅವಳಮ್ಮನಿಗೆ ಆತನ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿ, ಮತ್ತೆ ಅಲ್ಲಿಂದ ಹೊರಡುವಾಗ ತಡೆಯಲಾಗದೇ ಆ ಹುಡುಗಿಗೂ ‘ಆತ ಎದೆ ಹತ್ರವೆಲ್ಲ ಕೈ ತಂದರೆ, ಅಲ್ಲೆಲ್ಲ ಮುಟ್ಟಬೇಡ ಎನ್ನಬೇಕು’ ಎಂದು ತಿಳಿಸಿ ಹೊರಟೆ.

ಪೆದ್ದು ಕಳೆಯ ಆ ಹುಡುಗನ ಬಗ್ಗೆ ದೂರುಕೊಡಲೂ ಮನಸ್ಸಾಗಲಿಲ್ಲ. ಯಾಕೆ ಈ ಘಟನೆಯನ್ನು ಇಷ್ಟು ವಿವರಿಸಿದೆ ಎಂದರೆ ತುಂಬ ಸಲ ಸಹಜ/ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ನಡುವಣ ಗೆರೆ ತೀರಾ ತೆಳುವಾಗಿರುತ್ತದೆ. ಈ ತೆಳು ಗೆರೆಯನ್ನು ನಿರ್ಲಕ್ಷ್ಯ ಮಾಡಿದರೆ, ಅದೇ ಮುಂದೆ ದೊಡ್ಡ ಅಪಾಯಗಳಿಗೆ ನಾಂದಿಯೂ ಆಗಬಹುದು.

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಒಳ್ಳೆಯ (ಅಥವಾ ಸಹಜ/ಹಿತ) ಸ್ಪರ್ಶ ಮತ್ತು ಕೆಟ್ಟ (ಅಹಿತಕರ) ಸ್ಪರ್ಶದ ಬಗ್ಗೆ ಅರಿವು ಮೂಡಿಸಬೇಕು? ಹೇಗೆ ಮೂಡಿಸಬೇಕು? ಇದೀಗ ನಿಜಕ್ಕೂ ಸವಾಲಿನ ಪ್ರಶ್ನೆ. ಸುಮಾರು 18 ತಿಂಗಳಿಂದ ಎರಡೂವರೆ ವರ್ಷದ ಹೊತ್ತಿಗೇ ಮಗುವಿಗೆ ಯಾವುದು ಒಳ್ಳೆಯ ಸ್ಪರ್ಶ, ಯಾವುದು ಕೆಟ್ಟ ಸ್ಪರ್ಶ ಎಂದು ಗೊತ್ತಾಗತೊಡಗುತ್ತದೆ. ಮಗು ಅದನ್ನು ಭಾಷೆಯ ಮೂಲಕ ಅಭಿವ್ಯಕ್ತ ಗೊಳಿಸದೇ ಇರಬಹುದು. ಆದರೆ ತನಗೆ ಅಹಿತವೆನ್ನಿಸಿದ್ದನ್ನು ಅಳುವಿನ ಮೂಲಕ, ಚೀರುವ ಮೂಲಕ ವ್ಯಕ್ತ ಪಡಿಸಬಹುದು.
ಎರಡೂವರೆ ಮೂರು ವರ್ಷದ ಹೊತ್ತಿಗೆ ಮಕ್ಕಳು ಮಾತನಾಡತೊಡಗುತ್ತವೆ, ಭಾವನೆಗಳನ್ನು ಅಸ್ಪಷ್ಟವಾಗಿಯಾದರೂ ವ್ಯಕ್ತಪಡಿಸುತ್ತವೆ.

ಮಗುವಿಗೆ ಸ್ನಾನ ಮಾಡಿಸುವಾಗ ಅಥವಾ ಬಟ್ಟೆ ಹಾಕುವ ಸಮಯದಲ್ಲಿ ದೇಹದ ಅಂಗಾಂಗಳನ್ನು ಪರಿಚಯಿಸುತ್ತ, ಜನನಾಂಗಗಳೂ ದೇಹದ ಅಂಗವೆಂದು ಹೇಳುತ್ತ, ನಿನ್ನ ಈ ಅಂಗಾಂಗಗಳು, ‘ನಿನ್ನ ಈ ದೇಹ ನಿನ್ನದು’ ಎಂಬುದನ್ನು ಆಗಾಗ ಒತ್ತಿ ಹೇಳಬೇಕು. ‘ಇದೆಲ್ಲ ನಿಂದೇ ಮರಿ’ ಎನ್ನುತ್ತ ದೇಹದ ಮೇಲೆ ಮಗುವಿಗೆ ಹಕ್ಕಿನ ಭಾವನೆಯನ್ನು ಮೂಡಿಸಬೇಕು. ಅಂದರೆ ಮಗುವಿನೊಂದಿಗೆ ಪೋಷಕರಾದ ನಿಮ್ಮ ಮಾತುಕತೆ, ಸಂವಹನ ತುಂಬ ಮುಖ್ಯವಾಗುತ್ತದೆ. ನೆನಪಿಡಬೇಕಾದ ಇನ್ನೊಂದು ಅಂಶವೆಂದರೆ ಮಗುವಿನೊಂದಿಗೆ ಇಂತಹ ಮಾತುಕತೆಯಾಡುವಾಗ ಸಾಧ್ಯವಿದ್ದಷ್ಟೂ ಗಂಭೀರವಾಗಿ, ಆದರೆ ವೈಜ್ಞಾನಿಕ ವಿಚಾರ ಹೇಳುವಂತೆ ಹಗುರವಾಗಿ ಹೇಳಬೇಕು.

ಮಗುವಿಗೆ ನಾಲ್ಕು- ನಾಲ್ಕೂವರೆ ವರ್ಷವಾಗುತ್ತಿದ್ದಂತೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ನಿಧಾನವಾಗಿ ತಿಳಿಸಿಕೊಡಬಹುದು. ಸ್ಪರ್ಶದ ಬಗ್ಗೆ ತಿಳಿಸಿಕೊಡುವ ಮೊದಲು ಮಗುವಿಗೆ ‘ನಿನ್ನ ತುಟಿ, ಎದೆಯ ಭಾಗ, ಹಿಂಭಾಗ ಮತ್ತು ತೊಡೆಗಳ ನಡುವಣ ಜಾಗವನ್ನು ಅಮ್ಮ (ಅಥವಾ ಅಪ್ಪ) ಸ್ನಾನ ಮಾಡಿಸುವಾಗ ಅಥವಾ ಬಟ್ಟೆ ಬದಲಿಸುವಾಗ ಮುಟ್ಟುತ್ತಾರೆ. ಅವರ ಹೊರತಾಗಿ ಬೇರೆ ಯಾರೂ ಆ ಅಂಗವನ್ನು ಮುಟ್ಟಬಾರದು, ಅದು ನಿಂಗೆ ಸೇರಿದ್ದು ಮಾತ್ರ’ ಆಗಾಗ ಹೇಳುತ್ತ ಮನವರಿಕೆ ಮಾಡಿಸಬಹುದು.

ದೇಹದ ಚಿತ್ರವನ್ನು ತೋರಿಸಿ, ಯಾರಾದರೂ ಮುಟ್ಟಬಹುದಾದ ಭಾಗವನ್ನು ಹಸಿರು ಬಣ್ಣದಿಂದ ಹಾಗೂ ಯಾರೂ ಮುಟ್ಟಲೇಬಾರದ ಭಾಗವನ್ನು ಅಂದರೆ ತುಟಿ, ಎದೆ, ಹಿಂಭಾಗ ಮತ್ತು ತೊಡೆಗಳ ಮಧ್ಯದ ಭಾಗವನ್ನು ಕೆಂಪುಬಣ್ಣದಿಂದ ಸೂಚಿಸಿ, ವಿವರಿಸಬಹುದು.

ಅಮ್ಮ ಅಥವಾ ಅಪ್ಪ ಅಥವಾ ಮಗು ಚಿಕ್ಕದಿದ್ದಾಗಿನಿಂದ ನೋಡಿದ ಕುಟುಂಬದವರು ಯಾರಾದರೂ ಎತ್ತಿಕೊಂಡಾಗ ಮಗುವಿನ ಕೆಳ ಭಾಗವನ್ನು ಹಿಡಿದುಕೊಂಡಿದ್ದರೂ ಅದಕ್ಕೆ ಅದು ಪ್ರೀತಿಯ ಮಮತೆಯ ಸ್ಪರ್ಶ ಎಂದು ಗೊತ್ತಾಗುತ್ತದೆ. ಬೇರೆಯವರು ಅಲ್ಲಿ ಮುಟ್ಟಿದಾಗ ಅದಕ್ಕೆ ಇಷ್ಟವಾಗದೇ ಇರಬಹುದು, ಆಗ ಮಗು ಚೀರುತ್ತದೆ. ಅಂತಹ ಸಮಯದಲ್ಲಿ ಮಗುವಿಗೆ ಒತ್ತಾಯಿಸಬೇಡಿ. ಮಗು ಎಲ್ಲರ ಬಳಿ ಮುದ್ದು ಮಾಡಿಸಿಕೊಂಡರೆ ಮಾತ್ರ ಸಾಮಾಜಿಕ ನಡವಳಿಕೆ ಕಲಿಯುತ್ತದೆ ಎನ್ನುವುದು ಒಂದು ಹುಸಿಭ್ರಮೆ. ಮುಖ್ಯವಾಗಿ ಮಗುವಿಗೆ ಇಷ್ಟವಿಲ್ಲದ ಸ್ಪರ್ಶವನ್ನು ಇಷ್ಟವಿಲ್ಲ ಎಂದು ಧೈರ್ಯವಾಗಿ ಹೇಳುವ ಅಥವಾ ಚೀರುವ ಮೂಲಕ ಅಭಿವ್ಯಕ್ತಗೊಳಿಸುವ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಬೇಕಿದೆ.

ನಮ್ಮ ಭಾರತೀಯ ಸಮಾಜದ ಮುಖ್ಯ ಸಮಸ್ಯೆ ಎಂದರೆ ಮಗುವಿಗೆ ಮೊದಲಿನಿಂದಲೇ ಅಮ್ಮ, ಅಪ್ಪನ ಬಳಿ ಬಂದು ನನಗೆ ಇಂಥ ಸಮಸ್ಯೆ ಇದೆ, ಇಂಥದ್ದು ಇಷ್ಟವಾಗ್ತಿಲ್ಲ ಎಂದು ಹೇಳುವ ಒಂದು ವಾತಾವರಣವನ್ನು ನಾವು ಹುಟ್ಟು ಹಾಕುವುದೇ ಇಲ್ಲ. ಮಗು ಏನೋ ತೊಂದರೆ ಇದೆ, ಏನೋ ಅಹಿತವೆನ್ನಿಸ್ತಾ ಇದೆ ಎಂದಾಗಲೂ ಪೋಷಕರು ಅದಕ್ಕೆ ಸ್ಪಂದಿಸದೇ ಇದ್ದರೆ ಮಗು ನಂಬಿಕೆ ಕಳೆದುಕೊಳ್ಳುತ್ತದೆ. ಶಾಲೆಯಲ್ಲಿ ಏನು ಮಾಡಿದೆ? ಯಾರು ಯಾರೊಂದಿಗೆ ಒಡನಾಡಿದೆ, ಸ್ನೇಹಿತರೊಂದಿಗೆ ಏನು ಮಾಡಿದೆ ಎಂಬ ಚಿಕ್ಕ ಪುಟ್ಟ ವಿವರಗಳನ್ನು ಕೇಳುತ್ತಿದ್ದರೆ ಮಗುವಿಗೆ ‘ಅಪ್ಪ, ಅಮ್ಮನಿಗೆ ನನ್ನ ಬಗ್ಗೆ ಕಾಳಜಿ ಇದೆ, ಆಲಿಸುತ್ತಾರೆ’ ಎಂಬ ನಂಬಿಕೆ ಮೂಡುತ್ತದೆ. ‘ಹಾಗಿದ್ದರೆ ನನ್ನ ಸಮಸ್ಯೆಗಳನ್ನೂ ಹಂಚಿಕೊಳ್ಳಬಹುದು, ನನಗೆ ಯಾವುದು ಹಿತವೆನ್ನಿಸುವುದಿಲ್ಲ, ಏನು ಕಿರಿಕಿರಿಯೆನ್ನಿಸುತ್ತದೆ ಎಂದು ಹೇಳಿಕೊಳ್ಳಬಹುದು’ ಎಂದು ಮಗು ಧೈರ್ಯ ಮತ್ತು ಸುರಕ್ಷಿತ ಭಾವನೆ ತಾಳುತ್ತದೆ.

ಸ್ನೇಹಿತರು ಕೈಕೈ ಹಿಡಿದುಕೊಳ್ಳುವುದು, ಭುಜವನ್ನು ಬಳಸುವುದು ಒಳ್ಳೆಯ ಸ್ಪರ್ಶ, ಶಿಕ್ಷಕರು ಪ್ರೋತ್ಸಾಹಿಸುವಂತೆ ಬೆನ್ನುತಟ್ಟಿದರೆ, ಭುಜತಟ್ಟಿದರೆ ಒಳ್ಳೆಯ ಸ್ಪರ್ಶ, ಆದರೆ ಎದೆಯ ಭಾಗವನ್ನು, ತೊಡೆಯನ್ನು ಮುಟ್ಟತೊಡಗಿದರೆ ಅದು ಕೆಟ್ಟ ಸ್ಪರ್ಶ, ಹೀಗೆ ಉದಾಹರಣೆಗಳ ಮೂಲಕ ನಿಧಾನವಾಗಿ ಅರಿವು ಮೂಡಿಸಬಹುದು. ಮಗುವಿಗೆ ತನ್ನ ದೇಹದ ಬಗ್ಗೆ ಗೌರವ ಭಾವನೆ ತಳೆಯುವಂತೆಯೇ, ತನ್ನ ಸ್ನೇಹಿತರ, ಸಹಪಾಠಿಗಳ ದೇಹದ ಯಾವ ಭಾಗಗಳನ್ನು ಮುಟ್ಟಬಾರದು ಎಂದು ಅರಿವು ಮೂಡಿಸುವುದು, ಬೇರೆಯವರ ದೇಹದ ಬಗ್ಗೆ ಚಿಕ್ಕಂದಿನಿಂದಲೇ ಗೌರವದ ಭಾವನೆ ಮೂಡಿಸುವುದು (ವಿಶೇಷವಾಗಿ ಗಂಡುಮಕ್ಕಳಿಗೆ) ಬಹಳ ಅಗತ್ಯವಿದೆ. ಮಗುವಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಅರಿವು ಮೂಡಿಸುವುದು ಮಾತ್ರವಲ್ಲದೇ ಆ ಕುರಿತು ಮಗು ಏನಾದರೂ ಹೇಳಿದಾಗ ಆಲಿಸಬೇಕು, ನಿರಂತರ ಮಾತುಕತೆ, ಸಂವಾದದಲ್ಲಿರಬೇಕು.

‘ನಿನ್ನ ತುಟಿಗಳು, ಎದೆ, ತೊಡೆಗಳ ಮಧ್ಯದ ಭಾಗ ಮತ್ತು ಹಿಂಭಾಗವನ್ನು ಯಾರೂ ಮುಟ್ಟಬಾರದು, ಅದು ಕೇವಲ ನಿಂಗೆ ಮಾತ್ರ ಸೇರಿದ್ದು, ನಿನ್ನದು’ ಎಂಬುದನ್ನು ಒತ್ತಿ ಹೇಳಿಕೊಡಬೇಕು, ಯಾರಾದರೂ ಮುಟ್ಟಿದರೆ ದೃಢವಾಗಿ ಧೈರ್ಯದಿಂದ ಮಟ್ಟಬೇಡ ಎಂದು ಹೇಳುವುದನ್ನು ಮಗುವಿಗೆ ಕಲಿಸಬೇಕು. ಮುಟ್ಟಬೇಡ ಎಂದು ಮಗು ದೃಢತೆಯಿಂದ ಚೀರುವುದು ಮೊದಲನೇ ಹೆಜ್ಜೆ. ಮಗುವಿಗೆ ಅಲ್ಲಿಂದ ಅಥವಾ ಅಂತಹ ವ್ಯಕ್ತಿಯ ಹಿಡಿತದಿಂದ ತಪ್ಪಿಸಿಕೊಂಡು ಧೈರ್ಯದಿಂದ ಓಡಿ ಹೋಗುವಂತೆ ಹೇಳಿಕೊಡುವುದು ಎರಡನೇ ಹೆಜ್ಜೆ. ಇಂಥದ್ದು ನಡೆದಾಗ ಮಗು ತಕ್ಷಣವೇ ಅಮ್ಮ ಅಥವಾ ಅಪ್ಪ ಅಥವಾ ಮಗುವಿಗೆ ಸುರಕ್ಷಿತ ಎನ್ನಿಸಬಲ್ಲ ಕುಟುಂಬದ ಹಿರಿಯರ ಬಳಿ ಹೇಳಿಕೊಳ್ಳುವುದನ್ನು ಕಲಿಸುವುದು ಮೂರನೇ ಹೆಜ್ಜೆ.

ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಅದು ನಡೆದ ಎಷ್ಟೋ ದಿನಗಳ ನಂತರ ಬೆಳಕಿಗೆ ಬರಲು ಮುಖ್ಯ ಕಾರಣವೆಂದರೆ ಮಗು ಇಂಥ ಕ್ರೂರ ಸ್ಪರ್ಶದ ಬಗ್ಗೆಯೂ ಮುಕ್ತವಾಗಿ ಅಮ್ಮನಲ್ಲಿ ಅಥವಾ ಅಪ್ಪನಲ್ಲಿ ಹಂಚಿಕೊಳ್ಳುವ ವಾತಾವರಣ ಮನೆಯಲ್ಲಿ ಇಲ್ಲದೇ ಇರುವುದು. ವಿಬ್ಗಯೊರ್‌ ಶಾಲೆಯ ಉದಾಹರಣೆಯನ್ನೇ ತೆಗೆದುಕೊಂಡರೆ ಘಟನೆ ನಡೆದ ಸುಮಾರು ಹತ್ತು ದಿನಗಳ ತರುವಾಯ ಅಮ್ಮ ವಿಚಾರಿಸಿಕೊಂಡಾಗ ಮಗು ಹೇಳಿಕೊಂಡಿದೆ. ಎಂಥಹುದೇ ರೀತಿಯ ಕೆಟ್ಟ ಸ್ಪರ್ಶಕ್ಕೆ ಒಳಗಾದಾಗಲೂ ತಕ್ಷಣವೇ ಮಗು ಮನೆಯಲ್ಲಿ ಅಮ್ಮ ಮತ್ತು ಅಪ್ಪನೊಂದಿಗೆ ಹಂಚಿಕೊಳ್ಳುವ ವಾತಾವರಣವನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಪೋಷಕರು ಗಂಭೀರವಾಗಿ ಆಲೋಚಿಸಬೇಕಿದೆ. ಮಗು ಎಷ್ಟು ಬೇಗನೆ ತನಗಾದ ಕೆಟ್ಟ ಸ್ಪರ್ಶದ ಬಗ್ಗೆ ಹಂಚಿಕೊಳ್ಳುವುದೋ ಅಷ್ಟು ಬೇಗನೆ ಮಗುವಿಗೆ ವೈದ್ಯಕೀಯ ಚಿಕಿತ್ಸೆ ನೀಡಿ, ಆ ಆಘಾತದಿಂದ ಹೊರ ಬರುವಂತೆ ಮಾಡಬಹುದು ಮತ್ತು ತಪ್ಪಿತಸ್ಥರ ಮೇಲೆ ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.

ನೆನಪಿಡಿ, ಇದೆಲ್ಲ ಹೆಣ್ಣು ಮಗುವಿಗೆ ಮಾತ್ರವಲ್ಲ, ಗಂಡುಮಗುವಿಗೂ ಅನ್ವಯಿಸುತ್ತದೆ ಮತ್ತು ಗಂಡು ಮಗುವೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತದೆ. ಹೀಗಾಗಿ ಕೆಟ್ಟ ಸ್ಪರ್ಶದ ಬಗ್ಗೆ ಹೇಳಿಕೊಳ್ಳುವುದು ಸಾಮಾಜಿಕ ಕಳಂಕವೆಂಬ ಭಾವನೆಯಿಂದ ಮೊದಲು ಪೋಷಕರು ಹೊರಗೆ ಬರಬೇಕಿದೆ. ಜೊತೆಗೆ ಮಗುವಿನ ಮನಸ್ಸನ್ನು ಓದಲು, ಮಗುವಿನ ಭಾವನೆಗಳನ್ನು ಗೌರವಿಸುವುದನ್ನು ಪೋಷಕರು ಕಲಿಯಬೇಕಿದೆ ಮತ್ತು ‘ನಿನಗೆ ಏನೇ ಆದರೂ ನಾನಿದ್ದೇನೆ, ನಾನು ಎಲ್ಲವನ್ನೂ ಆಲಿಸುತ್ತೇನೆ’ ಎಂಬ ಸುರಕ್ಷಿತ ಭರವಸೆಯನ್ನು ಪೋಷಕರು ಮಗುವಿನಲ್ಲಿ ಮೂಡಿಸಬೇಕಿದೆ.

ಕೆಲವು ಮಿಥ್ಯೆಗಳು
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೇವಲ ಪಾಶ್ಚಿಮಾತ್ಯ ದೇಶಗಳಲ್ಲಿ, ನಮ್ಮ ಭಾರತದಲ್ಲಿ ಅಲ್ಲ (ಇಂಡಿಯಾದಲ್ಲಿ ಆಗಬಹುದೇನೋ!) ಇದೆಲ್ಲ ಸ್ಲಂಗಳಲ್ಲಿ ನಡೆಯುತ್ತೆ, ಮಧ್ಯಮ ಮತ್ತು ಶ್ರೀಮಂತ ವರ್ಗದಲ್ಲಿ ನಡೆಯೋದಿಲ್ಲ.  ಹುಡುಗಿಯರು ಮಾತ್ರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗ್ತಾರೆ. ಮನೇಲಿ ಅಪ್ಪ, ಅಮ್ಮ ಸರಿಯಾಗಿಲ್ಲದಿದ್ದರೆ, ಒಡೆದ ಕುಟುಂಬಗಳಲ್ಲಿ ಮಾತ್ರ ನಡೆಯುತ್ತೆ. ಲೈಂಗಿಕ ದೌರ್ಜನ್ಯ ಎಸಗುವವರು ಅಪರಿಚಿತರು. ಹೀಗಾಗಿ ಅಪರಿಚಿತರೊಂದಿಗೆ ಎಚ್ಚರಿಕೆಯಿಂದ ಇರಬೇಕು. ಮಗುವಿಗಿಂತ ದೊಡ್ಡವರು ಮುಟ್ಟಿ, ಮುದ್ದಿಸಿದರೆ ತಪ್ಪೇನಿಲ್ಲ. ಮಗು ಇದರಿಂದ ಸಾಮಾಜಿಕ ನಡವಳಿಕೆಯನ್ನು ಕಲಿಯುತ್ತದೆ.

ವಾಸ್ತವ ಹೀಗಿದೆ...: ಲೈಂಗಿಕ ದೌರ್ಜನ್ಯ ನಮ್ಮಲ್ಲಿಯೂ ತುಂಬ ವ್ಯಾಪಕವಾಗಿದೆ ಆದರೆ ಬೆಳಕಿಗೆ ಬರುತ್ತಿಲ್ಲ, ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ನಮ್ಮ ಸಮಾಜವಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಯಾವುದೇ ವರ್ಗ, ಅಂತಸ್ತುಗಳ ಬೇಧವಿಲ್ಲ ಹುಡುಗಿಯರು ಮಾತ್ರವಲ್ಲ, ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ವ್ಯಾಪಕವಾಗಿ ನಡೆಯುತ್ತೆ. ಬೆಚ್ಚನೆಯ ಕೌಟುಂಬಿಕ ಪರಿಸರದಲ್ಲಿಯೂ ಲೈಂಗಿಕ ದೌರ್ಜನ್ಯ ನಡೆಯಬಹುದು. ಅಪರಿಚಿತರು ಮಾತ್ರವಲ್ಲ, ಹೆಚ್ಚಿನ ವೇಳೆ ಪರಿಚಿತರು, ತೀರಾ ಹತ್ತಿರದ ಬಂಧುಗಳೇ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಮನೆಯೊಳಗೇ ನಮ್ಮ ಮೂಗಿನ ಕೆಳಗೇ ನಮ್ಮ ಮಗುವಿನ ಮೇಲೇ ಯಾರೋ ತೀರಾ ಹತ್ತಿರದವರೇ ಮುದ್ದಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ ಎಂಬುದನ್ನು ಮರೆಯಬಾರದು. ಮಗುವನ್ನು ಮುದ್ದಿಸುವಾಗಲೂ, ದೊಡ್ಡವರು ದೇಹದ ಕೆಲವು ಭಾಗಗಳನ್ನು ಮುಟ್ಟಲೇಬಾರದು. ಪ್ರತೀ ಮಗುವಿಗೂ ತನ್ನ ದೇಹದ ಮೇಲೆ ಹಕ್ಕಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT