ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಕ್ಕೆ ಹಣ ನೀಡಿ ಮಠವಾದ ಸರ್ಕಾರ

ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ದೇವನೂರ ಟೀಕೆ
Last Updated 26 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಧಾರವಾಡ: `ರಾಜ್ಯದ ವಿವಿಧ ಮಠಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಿದ ಸರ್ಕಾರ ಮಠಗಳಲ್ಲೇ ಮಠವಾಗಿ ಹೋಗಿದೆ' ಎಂದು  ಸಾಹಿತಿ ದೇವನೂರ ಮಹಾದೇವ ಟೀಕಿಸಿದರು.

ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘ ಮಂಗಳವಾರ ಏರ್ಪಡಿಸಿದ್ದ `ದೇವನೂರ ಮಹಾದೇವ: ಕ್ರಿಯೆ, ತತ್ವ, ಅಭಿವ್ಯಕ್ತಿ' ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, `ಅನ್ಯಾಯದಿಂದ ಸಾವಿರಾರು ಕೋಟಿ ಗಳಿಸಿದವರು ವಿವಿಧ ದೇವರಿಗೆ ಕಾಣಿಕೆ ಸಲ್ಲಿಸುತ್ತಾರೆ, ಕಿರೀಟ ಅರ್ಪಿಸುತ್ತಾರೆ. ಆ ಮೂಲಕ ಪಾಪದ ಪ್ರಾಯಶ್ಚಿತ್ತ ಮಾಡಿಕೊಂಡೆವು ಎಂದು ತಿಳಿದುಕೊಳ್ಳುತ್ತಾರೆ. ಸರ್ಕಾರಕ್ಕೂ ತಾನು ಮಾಡಿದ ಕಾರ್ಯಗಳ ಬಗ್ಗೆ ಭಯ ಇದ್ದಂತಿದೆ. ಅದಕ್ಕೆಂದೇ ಮಠಗಳಿಗೆ ಹಣ ನೀಡಿದೆ. ಅದರ ಬದಲು, ಸಂಪನ್ಮೂಲ ಇಲ್ಲದೇ ಸೊರಗುತ್ತಿರುವ ಹಂಪಿ ಕನ್ನಡ ವಿ.ವಿ.ಗೆ ಹಣ ನೀಡಬೇಕು' ಎಂದರು.

`ಗೋವಾದಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ಹಲವಾರು ಶಾಲೆಗಳನ್ನು ಮುಚ್ಚಿದೆ. ಮುಚ್ಚಿದ ಶಾಲೆಗಳ ಜಾಗವನ್ನು ಸಂಘ ಪರಿವಾರದ ಸಂಸ್ಥೆಗಳಿಗೆ ಮಂಜೂರು ಮಾಡಿದೆ. ಕರ್ನಾಟಕ ಸರ್ಕಾರವೂ ಇದೀಗ ಶಾಲೆ ಮುಚ್ಚಲು ಹೊರಟಿದೆ. ಇದೂ ಸಂಘ ಪರಿವಾರಕ್ಕೆ ನೀಡುವ ಇಲ್ಲವೇ, ಆದಿವಾಸಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಉದ್ದೇಶ ಹೊಂದಿವೆಯೇ ಎಂಬ ಆತಂಕ ಕಾಡುತ್ತಿದೆ' ಎಂದರು.

`ಅಮೃತ ಸಿಂಚನ ಎಂಬ ವಿ.ವಿ.ಯನ್ನು ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ. ಮಾಟ, ಮಂತ್ರ, ತಂತ್ರಗಳ ಬಗ್ಗೆ ಇದರಲ್ಲಿ ಹೇಳಿ ಕೊಡಲಾಗುತ್ತದಂತೆ! ಟಿ.ವಿಗಳ ಮೂಲಕ ಮಾಟ-ಮಂತ್ರಗಳನ್ನು ನೋಡಿ ಜನಗಳ ಬುದ್ಧಿ ಕೆಟ್ಟುಹೋಗಿದೆ. ಅಂಥದರಲ್ಲಿ ಈ ವಿ.ವಿ. ಅಪಾಯಕಾರಿಯಾಗಿದೆ. ಇದರಿಂದಾಗಿ ಸತಿ ಸಹಗಮನ, ನರಬಲಿಯಂತಹ ಪದ್ಧತಿಗಳು ಮತ್ತೆ ಜಾರಿಗೆ ಬಂದರೂ ಅಚ್ಚರಿಯಿಲ್ಲ' ಎಂದು ಆತಂಕ ವ್ಯಕ್ತಪಡಿಸಿದರು.

ಈ ನೀತಿಗಳನ್ನು ಪ್ರಶ್ನಿಸಲು ಯುವ ಸಮೂಹವು `ವಿಶ್ವಮಾನವ ವಿದ್ಯಾರ್ಥಿ-ಯುವಜನರ ವೇದಿಕೆ' ರಚಿಸಿಕೊಳ್ಳಬೇಕು. ಪ್ರತಿ ಕಾಲೇಜಿನಿಂದ 10 ಜನ ಹುಡುಗ-ಹುಡುಗಿಯರು ಇದರಲ್ಲಿ ಇರಬೇಕು. 10 ಜಾತಿಯವರಿಗೂ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಬೇಕು. ಈ ಸಮೂಹದ ನಾಯಕತ್ವವನ್ನು ನಾನು ಹಿಂಬಾಲಿಸುತ್ತೇನೆ' ಎಂದು ಹೇಳಿದರು.

ಹಿರಿಯ ವಿಮರ್ಶಕ ಡಾ.ನಟರಾಜ್ ಹುಳಿಯಾರ್ ಅವರು ದೇವನೂರ ಅವರ `ಎದೆಗೆ ಬಿದ್ದ ಅಕ್ಷರ' ಕೃತಿಯ ಐದನೇ ಮುದ್ರಣ ಬಿಡುಗಡೆ ಮಾಡಿದರು. ದೇವನೂರ ಕ್ರಿಯೆ, ತತ್ವ, ಅಭಿವ್ಯಕ್ತಿ ಕುರಿತು ವಿವಿಧ ಗೋಷ್ಠಿಗಳು ನಡೆದವು.

`1973ರಲ್ಲಿ ಪ್ರಕಟವಾದ ದ್ಯಾವನೂರು ಕಥಾ ಸಂಕಲನದಿಂದ ಹಿಡಿದು ಎದೆಗೆ ಬಿದ್ದ ಅಕ್ಷರ ಕೃತಿಯವರೆಗೆ ದೇವನೂರ ಅವರ ಸಾಹಿತ್ಯವನ್ನು ಅಭ್ಯಾಸ ಮಾಡಿದರೆ ನಾಲ್ಕು ದಶಕಗಳ ಕನ್ನಡ ಸಾಹಿತ್ಯದ ಸ್ವರೂಪ ಗೊತ್ತಾಗುತ್ತದೆ' ಎಂದು ಸಮಾರೋಪ ಭಾಷಣ ಮಾಡಿದ ಹಂಪಿ ಕನ್ನಡ ವಿ.ವಿ. ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT