ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠದ ಪರ–ವಿರೋಧಿ ಬಣಗಳ ಪೈಪೋಟಿ

ಹವ್ಯಕ ಮಹಾಸಭೆ: 14 ಸ್ಥಾನಗಳಿಗೆ ಮಾರ್ಚ್‌ 27ಕ್ಕೆ ಚುನಾವಣೆ
Last Updated 19 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹವ್ಯಕ ಸಮುದಾಯದ ಸಂಸ್ಥೆ ‘ಅಖಿಲ ಹವ್ಯಕ ಮಹಾಸಭಾ’ದ 14 ನಿರ್ದೇಶಕರ ಸ್ಥಾನಗಳಿಗೆ ಮಾರ್ಚ್‌ 27ರಂದು ಚುನಾವಣೆ ನಡೆಯಲಿದ್ದು, ತುರುಸಿನ ಸ್ಪರ್ಧೆ ಕಂಡುಬಂದಿದೆ.

ಹವ್ಯಕ ಸೇರಿದಂತೆ 18 ಸಮುದಾಯಗಳ ಶಿಷ್ಯರನ್ನು ಹೊಂದಿರುವ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ವಿರುದ್ಧ ಕೇಳಿಬಂದಿರುವ ಅತ್ಯಾಚಾರದ ಆರೋಪ ಕೂಡ ಈ ಬಾರಿಯ ಚುನಾವಣೆ ಪ್ರಚಾರದಲ್ಲಿ ಅಲ್ಲಲ್ಲಿ ಪ್ರಸ್ತಾಪ ಆಗುತ್ತಿದೆ.

ಹವ್ಯಕ ಮಹಾಸಭಾ 31 ನಿರ್ದೇಶಕರ ಸ್ಥಾನಗಳನ್ನು ಹೊಂದಿದೆ. ಇದರ ಪೈಕಿ 14 ಸ್ಥಾನಗಳಿಗೆ ಈಗ ಚುನಾವಣೆ ನಡೆಯಲಿದೆ. ಒಂದು ಸ್ಥಾನಕ್ಕೆ (ಕೇರಳ ರಾಜ್ಯ) ಅವಿರೋಧ ಆಯ್ಕೆ ಆಗಿದೆ.

ಹವ್ಯಕರ ಜನಸಂಖ್ಯೆ ಎಷ್ಟು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಬೇರೆ ಬೇರೆ ದೇಶಗಳಲ್ಲಿ ನೆಲೆ ಕಂಡುಕೊಂಡಿರುವ ವರನ್ನೂ ಪರಿಗಣಿಸಿದರೆ, ಈ ಸಮುದಾಯದ ಜನಸಂಖ್ಯೆ ಅಂದಾಜು 11 ಲಕ್ಷ ಎನ್ನಲಾಗಿದೆ. ಆದರೆ ಮಹಾಸಭಾದ ಚುನಾವಣೆಗೆ ಮತದಾರರ  ಸಂಖ್ಯೆ 17 ಸಾವಿರ ಮಾತ್ರ.

ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದ ನಂತರ ಮಹಾಸಭಾಕ್ಕೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಸ್ವಾಮೀಜಿ ಪರ ಇರುವವರು ಹಾಗೂ ಅವರ ವಿರುದ್ಧ ಇರುವವರು ಮಹಾಸಭಾ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.

ಎಲ್ಲಾ ಕ್ಷೇತ್ರಗಳಿಗೆ ಬೆಂಗಳೂರಿನಲ್ಲೇ ಮತದಾನ ನಡೆಯಲಿದ್ದು, ಬೇರೆ ಬೇರೆ ಊರುಗಳಿಂದ ಮತದಾರರನ್ನು ಕರೆತರಲು ಕೆಲವು ಅಭ್ಯರ್ಥಿಗಳು ಬಸ್ಸಿನ ವ್ಯವಸ್ಥೆ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಶಾಸಕರ ಚುನಾವಣೆಯಲ್ಲಿ ಕಂಡುಬರುವ ತುರುಸು ಇಲ್ಲೂ ಕಾಣುತ್ತಿದೆ ಎನ್ನುತ್ತಿದ್ದಾರೆ ಸಮುದಾಯದ ಮುಖಂಡರು.

ಚುನಾವಣೆ ವಿಷಯ: ‘ಹವ್ಯಕರು ಹೆಚ್ಚಿರುವ ಮಲೆನಾಡಿನ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹವ್ಯಕರು ಬಹು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದ ಅಡಿಕೆ ತೋಟಗಳು ಮಾರಾಟವಾಗುತ್ತಿವೆ. ಕೃಷಿ ನೆಚ್ಚಿಕೊಂಡ ಹವ್ಯಕ ಯುವಕರನ್ನು ವರಿಸಲು ಸಮುದಾಯದ ಕನ್ಯೆಯರು ಒಪ್ಪುತ್ತಿಲ್ಲ’ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಮಹಾಸಭಾ ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು ಎಂಬುದು ಚುನಾವಣಾ ಕಣದಲ್ಲಿ ಇರುವ ಶಿರಸಿಯ ಸಚ್ಚಿದಾನಂದ ಹೆಗಡೆ ಅವರ ಅಭಿಪ್ರಾಯ.

ಒಬ್ಬರಿಗೆ 15 ಮತ: ಬೆಂಗಳೂರಿನ ಆರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ತಲಾ ಮೂರು, ಕೊಡಗು ಜಿಲ್ಲೆಯ ಒಂದು, ಕರ್ನಾಟಕ–ಕೇರಳ ಹೊರತುಪಡಿಸಿದ ರಾಜ್ಯಗಳ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎರಡು ವರ್ಷಗಳಿಂದ ಮಹಾಸಭೆಯ ಸದಸ್ಯರಾಗಿರುವವರಿಗೆ ಮತದಾನದ ಹಕ್ಕು ಇದೆ. ಒಬ್ಬ ಮತದಾರನಿಗೆ ಹದಿನೈದು ಮತಗಳಿವೆ ಎಂದು ಮಹಾಸಭೆಯ ಪದಾಧಿಕಾರಿಯೊಬ್ಬರು ತಿಳಿಸಿದರು. ಜಿ.ವಿ. ಹೆಗಡೆ ಕಾನಗೋಡು, ಜಿ.ಕೆ. ಭಟ್ಟ, ಕೆ.ಜಿ. ಮಂಜುನಾಥ್, ಜಿ.ವಿ. ರಾಮಕೃಷ್ಣ, ಎಸ್.ಜಿ. ಹೆಗಡೆ ಸೇರಿದಂತೆ ಹಲವರು ಚುನಾವಣಾ ಕಣದಲ್ಲಿ ಇದ್ದಾರೆ.

ಸ್ವಾಮೀಜಿ ಪರ ವಾಟ್ಸ್‌ಆ್ಯಪ್‌ ಸಂದೇಶ
‘ಬೆಂಗಳೂರಿನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದ ಬಹುಪಾಲು ಜಾಗವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ವಶಕ್ಕೆ ಪಡೆಯುವ ಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಮಹಾಸಭೆ ನಿರ್ದೇಶಕರ ಸ್ಥಾನಗಳಿಗೆ ಮಠದ ಅನುಯಾಯಿಗಳನ್ನು ಆಯ್ಕೆ ಮಾಡಬೇಕು. ತನ್ನ (ಮಠದ) ಆಜ್ಞಾಪಾಲಕರ ಮೂಲಕ ಸಂಸ್ಥಾನವು (ಮಠ) ಮಹಾಸಭಾದ ಕಟ್ಟಡ ಬಳಸಿಕೊಳ್ಳುವಂತೆ ಆಗಲು, ಮಹಾಸಭಾ ಸದಸ್ಯರ ಬೆಂಬಲ ಅತಿಮುಖ್ಯ’ ಎಂಬ ಸಂದೇಶ ವಾಟ್ಸ್‌ಆ್ಯಪ್‌ ಮೂಲಕ ಮತದಾರರಿಗೆ ರವಾನೆಯಾಗಿದೆ.

ಇದನ್ನು ಸ್ವಾಮೀಜಿ ಕಡೆಯವರೇ ಮಾಡಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಹಾಸಭಾದ ಕಟ್ಟಡವನ್ನು ವಶಕ್ಕೆ ಪಡೆಯುವ ಉದ್ದೇಶ ಇದರ ಹಿಂದಿದೆ ಎಂದು ಸ್ವಾಮೀಜಿ ವಿರೋಧಿಗಳು ಆರೋಪಿಸಿದ್ದಾರೆ.  ಆದರೆ, ‘ಇಂಥ ಉದ್ದೇಶ ಇಲ್ಲ. ಇನ್ನೊಬ್ಬರ ಆಸ್ತಿಯನ್ನು ಪಡೆಯುವ ತೃಣಮಾತ್ರದ ಆಸೆಯೂ ನಮಗಿಲ್ಲ’ ಎಂದು ಮಠದ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT