ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಚಲಾವಣೆ ಹಕ್ಕಷ್ಟೇ ಅಲ್ಲ; ಕರ್ತವ್ಯವೂ ಹೌದು

ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಜಿ.ಪಂ.ಸಿಇಒ ಮಂಜುಶ್ರೀ ಅಭಿಮತ
Last Updated 26 ಜನವರಿ 2015, 10:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಮತ ಚಲಾವಣೆ ಕೇವಲ ಹಕ್ಕಷ್ಟೇ ಅಲ್ಲ. ಹಕ್ಕು ಪಡೆದ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಹೌದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಎನ್.ಮಂಜುಶ್ರೀ ತಿಳಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭ ಉದ್ಘಾಟಿಸಿ ನೂತನ ಯುವ ಮತದಾರರಿಗೆ ಚುನಾವಣಾ ಆಯೋಗದ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಿದ ನಂತರ ಅವರು ಮಾತನಾಡಿದರು.

ದೇಶದ ಸಂವಿಧಾನ, 18 ವರ್ಷ ಪೂರೈಸಿದ ರಾಷ್ಟ್ರದ ಎಲ್ಲ ನಾಗರಿಕರಿಗೂ ಮತ ಚಲಾಯಿಸುವ ಹಕ್ಕನ್ನು ನೀಡಿದೆ. ಮತ ಚಲಾವಣೆಯ ಅಧಿಕಾರ, ಕರ್ತವ್ಯ ಮತ್ತು ಅವಕಾಶವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಾಗ ಉತ್ತಮ ಸರ್ಕಾರ ಆಯ್ಕೆ ಮಾಡಿ ದೇಶ, ರಾಜ್ಯ ಮತ್ತು ನಮ್ಮ ಭವಿಷ್ಯ ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆ ಆಗಲಿದ್ದು, ಅದರಲ್ಲಿ ಹಕ್ಕು ಪಡೆದ ಎಲ್ಲರೂ ಭಾಗವಹಿಸಿ ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಆಧ್ಯಕ್ಷತೆ ವಹಿಸಿ ಮಾತನಾಡಿ, ಮತದಾರರು ತಮ್ಮ ಹಕ್ಕನ್ನು ಪ್ರತಿಪಾದಿಸಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರು ಸಕ್ರಿಯವಾಗಿ ಭಾಗವಹಿಸಿದ್ದು, ಉತ್ತಮ ಬೆಳವಣಿಗೆ. ಶೇ. 100ಕ್ಕೆ ನೂರರಷ್ಟು ಮತ ಚಲಾವಣೆ ಆಗಲು ಎಲ್ಲರೂ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎನ್.ಅನುಚೇತ್ ಮಾತನಾಡಿ, ಭಾರತ ಚುನಾವಣಾ ಆಯೋಗ ೧೯೫೦ ರ ಜ. ೨೫ ರಂದು ಸ್ಥಾಪಿಸಿದ ಈ ದಿನವನ್ನು ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ದೇಶದಲ್ಲಿ ೧೩೨ ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ ಸುಮಾರು ೯೪ ಕೋಟಿಯಷ್ಟು ಮತದಾರರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ೫೫ ಕೋಟಿಯಷ್ಟು ಮತದಾರರು
ಮತಚಲಾಯಿಸಿದ್ದು, ೨೬ ಕೋಟಿ ಮಹಿಳೆಯರು ಮತ್ತು ೧೯ ರಿಂದ ೩೫ ವರ್ಷದೊಳಗಿನ ಶೇ ೩೫ ರಷ್ಟು ಯುವ ಮತದಾರರಿದ್ದಾರೆ. ಈ ನಿಟ್ಟಿನಲ್ಲಿ ಯುವ ಮತದಾರರ ಪಾಲ್ಗೂಳ್ಳುವಿಕೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಸ್ವಾಗತಿಸಿದರು. ಚುನಾವಣಾ ತಹಶೀಲ್ದಾರ್ ಜಿ.ನಳಿನ ವಂದಿಸಿದರು. ತಹಶೀಲ್ದಾರ್ ಕಾಂತರಾಜ್ ನಿರೂಪಿಸಿದರು. ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರೊ.ಕೆ.ಕೆ.ಕಾಮಾನಿ, ವಿವಿಧ ಕಾಲೇಜಿನ ಪ್ರಾಧ್ಯಾಪಕರು ಇದ್ದರು. 

ಮತದಾರರ ದಿನಾಚರಣೆ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಂಗೋಲಿ, ಭಾಷಣೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ರಂಗೋಲಿಯಲ್ಲಿ ಮೇಘನಾ (ಪ್ರಥಮ), ಎಂ.ಪಿ.ರಂಜಿತಾ (ದ್ವಿತೀಯ), ನವ್ಯಶ್ರೀ (ತೃತೀಯ), ಭಾಷಣ ಸ್ಪರ್ಧೆಯಲ್ಲಿ ವೈ.ಟಿ.ರವಿಕುಮಾರ್ (ಪ್ರಥಮ), ಮಾನಸವಾಣಿ (ದ್ವಿತೀಯ), ಮಧುಸೂದನ್ ತೃತೀಯ ಸ್ಥಾನ ಪಡೆದರು.

18 ವರ್ಷ ಮೇಲ್ಪಟ್ಟ ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನದ ಹಕ್ಕು ಪಡೆಯಲು ಹೆಸರು ನೊಂದಾಯಿಸಿಕೊಳ್ಳುವಂತೆ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಲಾಯಿತು. ಜಾಗೃತಿ ಜಾಥಾ ಜಿ.ಪಂ. ಕಚೇರಿವರೆಗೆ ಸಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT