ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಚಂದ್ರ ಪ್ರಯೋಗ ‘ವಾಸ್ಕೋಡಿಗಾಮ’

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಶೀರ್ಷಿಕೆ ಮತ್ತು ಕಿಶೋರ್ ಗೆಟಪ್‌ನ ಕಾರಣಕ್ಕೆ ‘ವಾಸ್ಕೋಡಿಗಾಮ’ ಸಿನಿಮಾ ಗಮನ ಸೆಳೆಯುತ್ತಿದೆ. ತಮ್ಮ ಎರಡನೇ ಚಿತ್ರದ ಬಗ್ಗೆ ನಿರ್ದೇಶಕ ಮಧುಚಂದ್ರ ಹೇಳುವ ಮಾತುಗಳು ಇಲ್ಲಿವೆ.

‘ಸರಿಗಮ ಮಾ ಮಾ ಮಾ ವಾಸ್ಕೋಡಿಗಾಮ, ವಾಸ್ಕೋಡಿಗಾಮ. ಅಯ್ಯೋ ರಾಮ. ಕಾಲೇಜು ಒಂದು ಜೈಲು...’ ಈ ಹಾಡಿಗೆ ಕಿಶೋರ್ ಗ್ಲಾಮರ್ ಲುಕ್‌ನಲ್ಲಿ ಕುಣಿದು–ಮಿನುಗುತ್ತಿರುವ ಸಿನಿಮಾ ‘ವಾಸ್ಕೋಡಿಗಾಮ’. ಹೌದು, ಕಿಶೋರ್ ಭಿನ್ನ ವಿಭಿನ್ನ ಗೆಟಪ್ಪುಗಳ ಮೂಲಕ ಗಮನ ಸೆಳೆದಿರುವ ಚಿತ್ರ ಇದು.

‘ವಾಸ್ಕೋಡಿಗಾಮ’ನ ಬಗ್ಗೆ ಹೆಚ್ಚು ಭರವಸೆ ಹೊಂದಲು ಕಿಶೋರ್ ಒಂದು ಕಾರಣ. ಇನ್ನೊಂದು ಕಾರಣ, ನಿರ್ದೇಶಕ ಮಧುಚಂದ್ರ.   ಮೂರು ವರುಷಗಳ ಹಿಂದೆ ‘ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮ ಕಾವ್ಯಂ’ ಚಿತ್ರದ ಮೂಲಕ ಪ್ರಯೋಗಮುಖಿ ನಿರ್ದೇಶಕನಾಗಿ ಗಾಂಧಿನಗರದಲ್ಲಿ ಕಂಡವರು ಇದೇ ಮಧು.

ಎರಡನೇ ಪ್ರಯತ್ನದ ಬಗ್ಗೆ  ಮಧುಚಂದ್ರ ಹೆಚ್ಚು ಭರವಸೆ ಹೊಂದಿದ್ದಾರೆ. ಈ ಚಿತ್ರ ಶಿಕ್ಷಣ ಮತ್ತು ಅಲ್ಲಿನ ಒಂದಿಷ್ಟು ಲೋಪಗಳನ್ನು ಎತ್ತಿ ತೋರುವ ಪ್ರಯತ್ನವಾಗಿದೆ.
‘ವಾಸ್ಕೋಡಿಗಾಮ’ನ ನಾಡಿ ಮಿಡಿತ ಹಿಡಿಯಲು ನಿರ್ದೇಶಕರು ಸಾಕಷ್ಟು ವರ್ಕ್‌ಔಟ್‌ಗಳನ್ನೇ ಮಾಡಿದ್ದಾರೆ. ಚಿಂತಕ ಜಿಡ್ಡು ಕೃಷ್ಣಮೂರ್ತಿ ಅವರ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಣ ಪದ್ಧತಿ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅಲ್ಲದೆ ಬೇರೆ ಬೇರೆ ಶಿಕ್ಷಣ ಕ್ರಮಗಳ ಒಳನೋಟಗಳನ್ನು ಗಮನಿಸಿ ಚಿತ್ರಕಥೆ ರೂಪಿಸಿದ್ದಾರೆ.

‘ವಾಸ್ಕೋಡಿಗಾಮ’ನ ವಸ್ತುವನ್ನು ಮಧು ವಿವರಿಸುವುದು ಹೀಗೆ: ‘ಶಿಕ್ಷಣ ಹೇಗೆ ಒತ್ತಡದಿಂದ ಕೂಡಿದೆ ಎನ್ನುವ ಒಂದು ಅಂಶವನ್ನಿಟ್ಟುಕೊಂಡು ಮನರಂಜನೆಯಾಗಿ ಕಥೆ ಹೇಳಲಾಗಿದೆ.

ಇಂದಿನ ಸಂದರ್ಭದಲ್ಲಿ ಇಷ್ಟವಿಲ್ಲದಿದ್ದರೂ ಪಠ್ಯ ಪುಸ್ತಕಗಳ ವಿಷಯವನ್ನು ಅನಿವಾರ್ಯವಾಗಿ ಓದಲೇಬೇಕು. ಶಿಕ್ಷಣದಲ್ಲಿ ‘ಕಡ್ಡಾಯ’ ಎನ್ನುವುದಕ್ಕೆ ಒತ್ತು ಕೊಡಲಾಗುತ್ತಿದೆ. ಉದಾಹರಣೆಗೆ: ಒಬ್ಬ ಹುಡುಗ ಗಣಿತ ವಿಷಯದಲ್ಲಿ ಪ್ರೌಢನಾಗಿರುವುದಿಲ್ಲ. ಆ ಹುಡುಗನಿಗೆ ಆ ವಿಷಯಕ್ಕಿಂತ ಮತ್ತೊಂದು ವಿಷಯದ ಮೇಲೆ ಆಸಕ್ತಿ. ಆದರೆ ಅನಿವಾರ್ಯವಾಗಿ ಆತ ಗಣಿತವನ್ನು ಓದಲೇಬೇಕು. ಆ ಒತ್ತಡದಿಂದ ಅವನ ಬೆಳವಣಿಗೆ ಸರಾಗವಾಗಿ ಆಗುವುದಕ್ಕೆ ಅಡಚಣೆಯಾಗುತ್ತದೆ. ಪರೀಕ್ಷೆಯಲ್ಲಿ ನಪಾಸಾದರೆ ಪರಿಣಾಮಗಳೇ ಬೇರೆಯಾಗುತ್ತವೆ.

ಅನುತ್ತೀರ್ಣನಾದರೆ ದಡ್ಡ ಎನ್ನುವ ಹೀಗಳಿಕೆ. ಹೀಗೆ ಒಂದಿಷ್ಟು ಶಿಕ್ಷಣದ ಮೂಲ ಅಂಶಗಳನ್ನು ಇಟ್ಟುಕೊಂಡು ಕಾಮಿಡಿಯಾಗಿ ಸಿನಿಮಾವನ್ನು ನಿರೂಪಿಸಲಾಗಿದೆ’ ಎಂದು ‘ವಾಸ್ಕೋಡಿಗಾಮ’ನ ಕಥಾ ಕೇಂದ್ರವನ್ನು ಹೇಳುವರು ಮಧುಚಂದ್ರ.

ನಿರ್ದೇಶಕರ ಅನುಭವ
‘ವಾಸ್ಕೋಡಿಗಾಮ’ನ ಚಿತ್ರಕಥೆ ರೂಪಿಸಲು ನಿರ್ದೇಶಕರ ಕಾಲೇಜು ದಿನಗಳ ಅನುಭವಗಳು ಹಿನ್ನೆಲೆಯಲ್ಲಿವೆ. ‘ನಾವು ಕಾಪಿ ಹೊಡೆದುಕೊಂಡು ಆರಾಮಾಗಿ ಇದ್ದವರು. ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣನಾದೆ. ಆಗ ನಮಗೆ ಮುದ್ದೇಗೌಡರು ಎನ್ನುವ ಉಪನ್ಯಾಸಕರು ಇದ್ದರು. ವಿದ್ಯಾರ್ಥಿಗಳಿಗೆ ಅನ್ನಿಸಿದ್ದನ್ನು ಮಾಡಲು ಅವಕಾಶ ನೀಡುತ್ತಿದ್ದರು. ಯಾವುದಕ್ಕೂ ಒತ್ತಡವಿರಲಿಲ್ಲ. ಆಗಲೇ ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿ ಕೆಲವು ಲೋಪಗಳನ್ನು ಗಮನಿಸಿದೆ. ಕಾರಣಗಳನ್ನು ಕಂಡುಕೊಂಡೆ. ಆ ಹಿನ್ನೆಲೆಯಲ್ಲಿ ಸುಮಾರು ದಿನಗಳಿಂದ ಚಿತ್ರಕಥೆಯ ಮೇಲೆ ಕೆಲಸ ಮಾಡಿದೆ’ ಎನ್ನುತ್ತಾರೆ ಮಧು. ಚಿತ್ರದಲ್ಲಿ ಕಿಶೋರ್ ಕನ್ನಡ ಉಪನ್ಯಾಸಕ. ಇದು ಅವರು ಸಿನಿಮಾಕ್ಕೆ ಬರುವ ಮುಂಚಿನ ವೃತ್ತಿ ಎನ್ನುವುದನ್ನು ಈ ವೇಳೆ ನೆನೆಯಬಹುದು.

ಒಂಬತ್ತು ಗೆಟಪ್ಪು
ಸರ್ದಾಜಿ, ಸ್ವಾಮಿ ವಿವೇಕಾನಂದ ಮತ್ತಿತರ ವೇಷಗಳಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಭಿನ್ನ ವಿಭಿನ್ನ ಗೆಟಪ್‌ಗಳು ಗಮನ ಸೆಳೆದಿವೆ. ಕಥೆಯಲ್ಲಿ ನಾಲ್ಕು ವೇಷ ಸೇರಿದಂತೆ ಒಂಬತ್ತು ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಕಿಶೋರ್. ಕಾಮಿಕ್ಸ್ ಸ್ಪರ್ಶವೂ ಸಿನಿಮಾಕ್ಕಿದೆ. ‘ಕಿಶೋರ್‌ ಅವರನ್ನು ಇಲ್ಲಿ ಹೊಸ ರೀತಿ ತೋರಿಸಿದ್ದೇವೆ. ಸಂದರ್ಭಕ್ಕೆ ತಕ್ಕಂತೆ ಗೆಟಪ್ ಬದಲಾಗಲಿದೆ. ಶಿಕ್ಷಣ ವ್ಯವಸ್ಥೆ ಚಿತ್ರಗಳು ಎಂದರೆ ನೋಡುವುದು ಕಷ್ಟಸಾಧ್ಯ. ಆ ಕಾರಣಕ್ಕೆ  ಮನರಂಜನೆಯೂ ಇದೆ. ಒಂದು ಸೂಕ್ಷ್ಮ ವಿಷಯ ನಿರೂಪಿಸುತ್ತಿದ್ದರೂ ಅದು ಪೂರ್ಣ ಮನರಂಜನೆಯಲ್ಲಿ ಸಾಗಲಿದೆ. ಲವ್ ಸ್ಟೋರಿಯೂ ಇದೆ.

ಭಾರತೀಯ ಪಾತ್ರವೊಂದರ ಮೇಲೆ ಸೂಪರ್ ಮ್ಯಾನ್ ಇತ್ಯಾದಿ ಬೇರೆ ಬೇರೆ ದೇಶದ ಪಾತ್ರಗಳು ದಾಳಿ ಮಾಡುತ್ತವೆ. ಇದನ್ನು ಕಾಮಿಕ್ಸ್‌ನಲ್ಲಿ ಹೇಳಲಾಗಿದೆ’ ಎಂದು ಹೇಳುತ್ತಲೇ ಕಿಶೋರ್ ಅವರ ಸರಳತೆಯನ್ನು ಮೆಚ್ಚಿ ಮಾತನಾಡುತ್ತಾರೆ ನಿರ್ದೇಶಕರು. ‘ಕಿಶೋರ್‌ ತಮ್ಮ ಊಟದ ತಟ್ಟೆಯನ್ನು ತಾವೇ ತೊಳೆಯುತ್ತಿದ್ದರು. ಚಿತ್ರೀಕರಣದಿಂದ ಹೊರ ಬಂದರೆ ಡ್ರೆಸ್ ಬಗ್ಗೆಯೂ ತೆಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

ಚೋರಗುರು
ಈ ‘ವಾಸ್ಕೋಡಿಗಾಮ’ ಏನನ್ನು ಸಂಶೋಧಿಸುವನು ಎನ್ನುವ ಕುತೂಹಲ ಹಲವರಿಗೆ ಇದೆ. ಇದೆಲ್ಲದಕ್ಕೂ ಸಿನಿಮಾದತ್ತ ಬೆರಳು ತೋರುವರು ನಿರ್ದೇಶಕರು. ಈ ಮುನ್ನ ಚಿತ್ರಕ್ಕೆ ‘ಚೋರಗುರು’ ಶೀರ್ಷಿಕೆಯನ್ನು ಪಕ್ಕಾ ಮಾಡಲಾಗಿತ್ತಂತೆ. ಆದರೆ ಶೀರ್ಷಿಕೆ ಭಿನ್ನವಾಗಿರಲಿ ಮತ್ತು ಕಥೆಯ ಕಾರಣಕ್ಕೆ ‘ವಾಸ್ಕೋಡಿಗಾಮ’ ಸೂಕ್ತ ಎಂದು ಬದಲಿಸಲಾಗಿದೆಯಂತೆ. ‘ಹೆಸರೇ ವಿಚಿತ್ರವಾಗಿರಬೇಕು ಎಂದುಕೊಂಡಿದ್ದೆವು. ಐನ್‌ಸ್ಟೈನ್ ಇತ್ಯಾದಿ ಹೆಸರುಗಳನ್ನು ಪಟ್ಟಿ ಮಾಡಿದೆವು.  ಪಟ್ಟಿಯಲ್ಲಿದ್ದ ವಾಸ್ಕೋಡಿಗಾಮ ಹೆಸರು ಚೆನ್ನಾಗಿತ್ತು. ಇಲ್ಲಿನ ನಾಯಕ ಶಿಕ್ಷಣ ವ್ಯವಸ್ಥೆಗೆ ಒಂದು ಹೊಸ ಹಾದಿ ಕಂಡು ಹಿಡಿಯುತ್ತಾನೆ. ಚಿತ್ರಕಥೆಗೂ ಇದು ಕನೆಕ್ಟ್ ಆಗುವ ಕಾರಣಕ್ಕೆ ಇದನ್ನು ಅಂತಿಮಗೊಳಿಸಲಾಯಿತು’ ಎನ್ನುವರು ಮಧು ಚಂದ್ರ. ಕಿಶೋರ್ ಜತೆ ಐದು ವಿದ್ಯಾರ್ಥಿಗಳು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್ ಮತ್ತಿತರರ ತಾರಾಗಣವಿದೆ. ಸುಳ್ಯದಲ್ಲಿ ಬಹುಪಾಲು ಚಿತ್ರೀಕರಣ ನಡೆದಿದ್ದು, ಈಗ ರೀರೆಕಾರ್ಡಿಂಗ್‌ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ ಕೊನೆ ಅಥವಾ ಜುಲೈ ಆರಂಭದಲ್ಲಿ ಚಿತ್ರ ತೆರೆಗೆ ಬರಲಿದೆ.

ಪ್ರಯೋಗಮುಖಿ ಚಂದ್ರ
ಮೂರು ವರುಷಗಳ ಹಿಂದೆ ‘ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮ ಕಾವ್ಯಂ’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದವರು ಮಧುಚಂದ್ರ. ಈ ಪ್ರಯೋಗ ಯುಕ್ತ ಪ್ರೇಮಕಥೆ ಬಹುಮಂದಿಯನ್ನು ಸೆಳೆದಿತ್ತು. ಮಧು ಚಂದ್ರ ಮೂಲತಃ ಮಂಡ್ಯದವರು. ರಂಗಭೂಮಿ ಹಿನ್ನೆಲೆಯುಳ್ಳವರು. ಹಲವು ನಾಟಕಗಳನ್ನು ನಿರ್ದೇಶಿಸಿದ ಅನುಭವಿದೆ. ಆರಂಭದಲ್ಲಿ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದರು. ನಂತರ ಉಪೇಂದ್ರ ಮತ್ತಿತರ ನಿರ್ದೇಶಕರ ಬಳಿ ಕಲಿಕೆ. ಸಾಹಿತ್ಯದ ವಿದ್ಯಾರ್ಥಿಯಾಗಿ ಕಾಲೇಜು ದಿನಗಳಲ್ಲಿ ಮಿಂಚಿದ್ದವರು ಮಧುಚಂದ್ರ. ಸಹೋದರ ಮಂಜು ಮಾಂಡವ್ಯ ಸಹ ಸಿನಿಮಾರಂಗದಲ್ಲಿ ಇದ್ದಾರೆ. ‘ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮ ಕಾವ್ಯಂ’ ಚಿತ್ರ, ನಾಯಕಿ ಶ್ವೇತಾ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಕೊಡಿಸಿತ್ತು. ಪ್ರಯೋಗಮುಖಿಯಾಗಿರುವ ಮಧುಚಂದ್ರ ‘ವಾಸ್ಕೋಡಿಗಾಮ’ನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಭರವಸೆಯ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT