ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮುಟ್ಟಿದ ಆಪ್ತ ಕಥಾನಕ

ರಂಗಭೂಮಿ
Last Updated 21 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಭಾರತವು ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಎದುರಿಸಿದ ದೇಶವಿಭಜನೆಯ ಸಮಸ್ಯೆ, ಗಲಭೆಯ ವಾತಾವರಣ, ಪಾಕಿಸ್ತಾನಕ್ಕೆ ಜನರ ವಲಸೆ, ಸಂದಿಗ್ಧ–ಗೊಂದಲದ ಪರಿಸ್ಥಿತಿ ಹಾಗೂ ಇದಕ್ಕೆ ಸಂಬಂಧಿಸಿದ ಇನ್ನಿತರ ಸೂಕ್ಷ್ಮ ಸಂವೇದನೆಗಳಿಗೆ ಕನ್ನಡಿ ಹಿಡಿಯುವ ನಾಟಕ ‘ಜತೆಗಿರುವನು ಚಂದಿರ’.

ಇತ್ತೀಚೆಗೆ ನಗರದ ಕೆ.ಎಚ್.ಕಲಾಸೌಧದಲ್ಲಿ ‘ಪ್ರವರ ಆರ್ಟ್ ಸ್ಟುಡಿಯೋ’ ಅರ್ಪಿಸಿದ ಈ ನಾಟಕ, ರಷ್ಯನ್ ಲೇಖಕ ಶೋಲೆಮ್ ಆಲೈಕೆಮ್‌ನ ಸಣ್ಣಕಥೆ ಆಧರಿಸಿ ಜೋಸೆಫ್ ಸ್ಟೀನ್ ರಚಿಸಿರುವ ‘ಫಿಡ್ಲರ್ ಆನ್ ದ ರೂಫ್’ ಪ್ರಸಿದ್ಧ ನಾಟಕದ ರೂಪಾಂತರ. ಕನ್ನಡಕ್ಕೆ ಇದನ್ನು ಜಯಂತ ಕಾಯ್ಕಿಣಿ ರೂಪಾಂತರಿಸಿದರು. ಆಸಕ್ತಿಕರವಾಗಿ ನಾಟಕವನ್ನು ಕಟ್ಟಿಕೊಟ್ಟವರು ಯುವ ನಿರ್ದೇಶಕ ಹನು ರಾಂಸಂಜೀವ್.

ರಷ್ಯನ್ ಕ್ರಾಂತಿಗೆ ಮುನ್ನಿನ ‘ಜಾರ್’ಗಳ ಆಳ್ವಿಕೆಯ ಕಾಲದಲ್ಲಿ ಅಲ್ಪಸಂಖ್ಯಾತ ಯಹೂದಿಗಳು ಮತ್ತು ಕಟ್ಟಾ ಸಂಪ್ರದಾಯವಾದಿಗಳಾದ ಕ್ರಿಶ್ಚಿಯನ್ನರ ನಡುವಿನ ಶೀತಲ ಸಮರದ ಹಿನ್ನಲೆಯಲ್ಲಿ ನಡೆದ ಕಥೆಯನ್ನು ಕಾಯ್ಕಿಣಿ ನಮ್ಮ ದೇಶ ವಿಭಜನೆಯ ಕಾಲದ ಸಂಕ್ರಮಣ ಪರಿಸ್ಥಿತಿಯೊಂದಿಗೆ ಸಮೀಕರಿಸಿದ್ದಾರೆ. ಸಣ್ಣಹಳ್ಳಿಯೊಂದರಲ್ಲೂ ವರ್ಣಕಲಹ, ತಿಕ್ಕಾಟ ಹೇಗೆ ರಾಜಕೀಯ ತಿರುವನ್ನು ಪಡೆಯುತ್ತವೆ ಎನ್ನುವುದನ್ನು ಬಡ ಕುಟುಂಬವೊಂದರ ಸಂದರ್ಭದಲ್ಲಿ ಕಟ್ಟಿಕೊಡಲಾಗಿದೆ.

ನಾಟಕದಲ್ಲಿ ಸಂಪ್ರದಾಯಸ್ಥ ಮನೋಭಾವದ ಅಮಾಯಕ ಬಡೇಮೀಯಾ ದೈವಭೀರು. ಬೇಕರಿ ತಿನಿಸುಗಳನ್ನು ಮಾರಾಟ ಮಾಡಿಕೊಂಡು ಹೆಂಡತಿ ಮತ್ತು ಮೂವರು ಹೆಣ್ಣುಮಕ್ಕಳ ಸಂಸಾರವನ್ನು ಸಾಗಿಸುತ್ತಿದ್ದ ಶ್ರಮಜೀವಿ. ಅವನಿದ್ದ ಸಮಾಜದಲ್ಲಿ ಹೆಣ್ಣುಮಕ್ಕಳ ವಿವಾಹವನ್ನು ಮದುವೆ ದಲ್ಲಾಳಿಗಳ ಮೂಲಕವೇ ನಡೆಸಬೇಕಾದಂಥ ಪದ್ಧತಿ ಇತ್ತು. ಇನ್ನೂ ಇಪ್ಪತ್ತು ದಾಟದ ಹಿರಿಮಗಳಿಗೆ ಮದುವೆ ದಲ್ಲಾಳಿ ಚಾಂದ್ಬೀಬಿ, ವಯಸ್ಸಾದ ವಿಧುರ ಕಲಾಯಿ ಕೆಲಸದ ಶ್ರೀಮಂತ ವರನನ್ನು ಗೊತ್ತು ಮಾಡಿದಾಗ ಬಡೇಮೀಯನಿಗೆ ಜವಾಬ್ದಾರಿ ಕಳೆಯಿತೆಂಬ ನೆಮ್ಮದಿ. ಅವನ ಹೆಂಡತಿಗೆ ವರದಕ್ಷಿಣೆ ಸಮಸ್ಯೆ ನೀಗಿದ ಸಂತಸ. ಆದರೆ ಈಗಾಗಲೇ ಬಡದರ್ಜಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಮಗಳು ಕಂಗಾಲಾಗಿ, ಅಪ್ಪನಲ್ಲಿ ಹೇಳಿಕೊಂಡಾಗ ವಾತ್ಸಲ್ಯಮಯಿ ಅಪ್ಪ ಕರಗಿಹೋಗುತ್ತಾನೆ. ಏನೋ ನೆಪ ಹೇಳಿ ಹೆಂಡತಿಯನ್ನು ಈ ಮದುವೆಗೆ ಒಪ್ಪಿಸುತ್ತಾನೆ.

ಈ ಮಧ್ಯೆ ಅವರ ಮನೆಗೆ ಬಂದ ಕ್ರಾಂತಿಕಾರಕ ವಿಚಾರವಾದಿ ಯುವಕನಲ್ಲಿ ಅನುರಕ್ತಳಾದ ಎರಡನೇ ಮಗಳು ಅಪ್ಪನಲ್ಲಿ ತನ್ನ ಪ್ರೇಮದ ಬಗ್ಗೆ ಹೇಳಿಕೊಂಡಾಗ ತಂದೆ ಅದಕ್ಕೆ ಅಡ್ಡಿಪಡಿಸುವುದಿಲ್ಲ. ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ತಂದೆ, ಅವರ ಮನನೋಯಿಸಲಾರದಂಥ ಅಂತಃಕರಣಿ. ಹಿರಿಮಗಳ ಮದುವೆ ನಡೆಯುವಷ್ಟರಲ್ಲಿ ಎರಡನೇ ಭಾವೀ ಅಳಿಯನನ್ನು ಬಂಧಿಸಿ ಜೈಲಿಗೆ ಹಾಕಿದ ಸುದ್ದಿ ಬರುತ್ತದೆ. ಆಗ ಎರಡನೇ ಮಗಳು ಅವನನ್ನು ಸೇರಿಕೊಳ್ಳಲು ಹೆತ್ತವರನ್ನು ತೊರೆದು ದೂರದೂರಿಗೆ ಹೊರಟು ಹೋಗುತ್ತಾಳೆ. ಅಷ್ಟರಲ್ಲಿ ಮೂರನೆಯ ಮಗಳು ತಾನು ಪ್ರೀತಿಸಿದ ಅನ್ಯಕೋಮಿನ ಪಂಡಿತನ ಮಗನೊಂದಿಗೆ ಪರಾರಿಯಾದಾಗ ಹೆತ್ತವರು ಅವಮಾನ ಸಹಿಸದಾಗುತ್ತಾರೆ.

ಊರಿನವರೆಲ್ಲ ಈ ವರ್ಣಸಂಕರವನ್ನು ವಿರೋಧಿಸಿ ಗಲಾಟೆ ಮಾಡುತ್ತಾರೆ. ಇದರಿಂದ ಮೊದಲೇ ಹೊತ್ತಿ ಉರಿಯುತ್ತಿದ್ದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳಬಹುದೆಂಬ ಆತಂಕದಲ್ಲಿ ಪೋಲಿಸರು ಅವನ ಇಡೀ ಕುಟುಂಬ ತತ್‌ಕ್ಷಣ ಊರು ಬಿಡುವಂತೆ ಒತ್ತಾಯ ಹೇರುತ್ತಾರೆ. ಹುಟ್ಟಿ ಬೆಳೆದ ತಮ್ಮ ಜಾಗವನ್ನು ತೊರೆಯಲು ಅವನ ಕುಟುಂಬ ಪಡುವ ಸಂಕಟ ಹೇಳತೀರದು. ತನ್ನದಲ್ಲದ ತಪ್ಪಿಗೆ ಬಡೇಮೀಯಾ ಮಾತ್ರವಲ್ಲ ಊರಿನ ಅವನೆಲ್ಲ ಜನರೂ ಗುಳೇಹೋಗಬೇಕಾದ ಕರುಣಾಜನಕ ಪರಿಸ್ಥಿತಿ ನಿರ್ಮಾಣವಾಗುವುದು ಆಡಳಿತ ಪರಮಾಧಿಕಾರದ ವಿಪರ್ಯಾಸ.

ಮುಗ್ಧ ಬಡೇಮೀಯನ ಸುತ್ತ ಭ್ರಮಿಸುವ ಕಥೆ ಅತ್ಯಂತ ಸಹಜ ನೆಲೆಯಲ್ಲಿ ಆಕರ್ಷಿಸುತ್ತದೆ. ತನ್ನೆಲ್ಲ ಕಷ್ಟಸುಖಗಳನ್ನು ತಾನು ನಂಬಿದ ದೇವರೊಡನೆ ಆಪ್ತವಾಗಿ ತೋಡಿಕೊಳ್ಳುವ ಅವನ ಸ್ವಗತ ನುಡಿಗಳು ಅವನ ಸರಳ ವ್ಯಕ್ತಿತ್ವವನ್ನು ಸೊಗಸಾಗಿ ಕಟ್ಟಿಕೊಡುತ್ತದೆ. ಸಮುದ್ರತೀರದಲ್ಲಿನ ಅವನ ನಿವೇದನೆಯ ಸನ್ನಿವೇಶ, ಹಿನ್ನಲೆಯ ಬಿಳಿಪರದೆಯ ಮೇಲೆ ಮೂಡಿಬರುವ ಅಲೆಗಳ ವಿಭ್ರಮದ ಬೆಳಕಿನಾಟದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂತು.

ಅವನ ಸುಖಸಂಸಾರದ ಚಿತ್ರಣ, ವಿವಿಧ ಸನ್ನಿವೇಶ- ಘಟನೆಗಳ ಬೆಳವಣಿಗೆಯಲ್ಲಿ ಹಂತಹಂತವಾಗಿ ಅರಳುತ್ತ ಹೋಯಿತು. ಪ್ರತಿ ಸನ್ನಿವೇಶದಲ್ಲೂ ಬಹು ಸಹಜವಾಗಿ ಸ್ಫುರಿಸುತ್ತ ಹೋದ ಸುಂದರ ಹಾಡುಗಳು, ನವಿರಾದ ಹೆಜ್ಜೆ-ಕುಣಿತಗಳು ಮನಸ್ಸಿಗೆ ಮುದ ನೀಡಿದವು. ಸಂಗೀತಮಯವಾದ ನಾಟಕದ ಲಯ ವಿಶಿಷ್ಟವೆನಿಸಿತು. ಮಾತುಗಳೆಲ್ಲ ಗೀತೆಗಳಾಗಿ ಪಲ್ಲವಿಸಿ ಸಂಭ್ರಮಿಸಿ ನಡೆಯುತ್ತ ಸಾಗಿದ ಕಥಾನಕ, ಮುಂದಿನ ಹೆಜ್ಜೆಗಳಲ್ಲಿ ವಿಷಾದದ ನೆರಳಲ್ಲಿ ಮುನ್ನಡಿಯಿಟ್ಟಿದ್ದು ಕರುಣಾರಸ ಜಿನುಗಿಸಿತು.

ಹಳೆಯ ಸೈಕಲ್ಲಿನ ಮೇಲೆ ಬುಟ್ಟಿಯಿಟ್ಟುಕೊಂಡು ವ್ಯಾಪಾರ ಮಾಡುವ ಇಂಥ ಎಷ್ಟೋ ಬಡೇಮೀಯರ ಬವಣೆಯನ್ನು ಅಚ್ಚುಕಟ್ಟಾಗಿ ದೃಶ್ಯೀಕರಿಸಿದ್ದಾರೆ ನಿರ್ದೇಶಕ ಹನು ರಾಂಸಂಜೀವ್.

ಕಡೆಯಲ್ಲಿ ತಾನು ಬಾಳಿ ಬೆಳಗಿದ ಮನೆಯನ್ನು ತೊರೆಯುವ ಸಂದರ್ಭದಲ್ಲಿ ಮನೆಯಾಕೆ ಗೋಳಿಡುವ ಮಾತುಗಳು ಕರುಳು ಇರಿಯುವಂತಿದ್ದವು. ಬಿಟ್ಟುಹೋಗುವ ಮನೆಯ ಕಸವನ್ನು ಸ್ವಚ್ಛವಾಗಿ ಗುಡಿಸುವ ಆಕೆಯ ತೀವ್ರ ಅಭೀಪ್ಸೆಯ ಆತ್ಮೀಯ ಬೆಸುಗೆ, ಧ್ವನಿಸಿದ ನೋಟ ಹೃದಯಸ್ಪರ್ಶಿಯಾಗಿತ್ತು. ಹಿನ್ನಲೆಯಲ್ಲಿ ಮೂಡಿಬರುತ್ತಿದ್ದ ಅಕ್ಷಯ್-ಅರ್ಪಿತ್ ಭೋನ್ಸ್ಲೆ ಅವರ ಸಂಗೀತದ ವಿನ್ಯಾಸ, ಗಾಯಕಿ ಮಹತಿಯವರ ಸುಶ್ರಾವ್ಯ ಧ್ವನಿ, ಬೆಳಕಿನ ಹೊನಲು, ಸೂಕ್ತ ರಂಗಸಜ್ಜಿಕೆ, ಪ್ರಸಾಧನ ವೈವಿಧ್ಯ ಮನಸೆಳೆಯಿತು.

ಬಡೇಮೀಯ ಆಗಿ ವೆಂಕಟೇಶ್ ಭಾರದ್ವಾಜ್ ಪಾತ್ರವನ್ನರಿತು ತಾದಾತ್ಮ್ಯದಿಂದ ಚೆನ್ನಾಗಿ ಅಭಿನಯಿಸಿದರು. ಅವನ ಹೆಂಡತಿಯಾಗಿ ಶಾಂಭವಿ ಕಾಶೀನಾಥ್ ಬಹು ನೈಜವಾಗಿ ನಟಿಸಿದರು. ಚಾಂದ್‌ಬೀಬಿಯಾಗಿ ವಿಭಾ ಗುರುರಾಜ್ ಸ್ಪಷ್ಟವಾಗಿ ಸಂಭಾಷಣೆ ಹೇಳುವ ಬಗೆಯಿಂದ ಗಮನ ಸೆಳೆದರು. ಹೆಣ್ಣುಮಕ್ಕಳಾಗಿ ತೇಜಸ್ವಿನಿ ರಮೇಶ್,ಅಂಜಲಿ ಬಿಂದು ಮಾಧವ, ರಮ್ಯಶ್ರೀ, ಶಫಿಯಾಗಿ ಆದಿತ್ಯ ಶೆಟ್ಟಿ, ವಿಚಾರವಾದಿಯಾಗಿ ಅಭಿಶಿತ್ ರಾವ್ ಅವರೊಂದಿಗೆ ಕಲಾಯಿ ಭಾಯಿಯಾಗಿ ಗಿರೀಶ್ ಅಲಾಜೆ ಮತ್ತು ಉಳಿದೆಲ್ಲ ನಟರೂ ಹದವಾಗಿ ಅಭಿನಯಿಸಿ ನಾಟಕದ ಯಶಸ್ಸಿಗೆ ಕಾರಣರಾದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT