ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ಸೌರವಿದ್ಯುತ್‌

ಅಕ್ಷರ ಗಾತ್ರ

ಮೇ ಮೂರನೇ ವಾರದಲ್ಲಿ ವಿದ್ಯುತ್‌ ದರ ಏರಿಕೆಯ ಪ್ರಸ್ತಾವನೆಗೆ ‘ಕರ್ನಾಟಕ ವಿದ್ಯುತ್‌ ನಿಯಂತ್ರಣ ಮಂಡಳಿ’ (ಕೆಇಆರ್‌ಸಿ) ಅನುಮೋದನೆ ನೀಡಿತು. ಇನ್ನೊಂದೆಡೆ, ‘ಕೆಪಿಟಿಸಿಎಲ್‌’ ರಾಜ್ಯದ ವಿವಿಧೆಡೆ ವಿದ್ಯುತ್‌ ಕಡಿತದ ಮುನ್ಸೂಚನೆ ಹೊರಡಿಸಿತು. ಮತ್ತೊಂದೆಡೆ, ಬಿರುಬೇಸಿಗೆಯ ತಾಪ. ವಿದ್ಯುತ್‌ ಇಲ್ಲದೇ ಫ್ಯಾನ್‌ ತಿರುಗದು, ಫ್ರಿಡ್ಜ್‌ ಕೆಲಸ ಮಾಡದು.

ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಓದಿಕೊಳ್ಳಲೂ ಬೆಳಕು ಇಲ್ಲದೇ ಇದ್ದರೆ ಹೇಗೆ? ರಾಜ್ಯದೆಲ್ಲೆಡೆ ಜನರ ಗೊಣಗಾಟ....
ಜತೆಗೆ, ಬಿರುಬಿಸಿ ತಾಪದಿಂದ ಬಸವಳಿದ ಜನರಿಂದ ಸೂರ್ಯನಿಗೇ ಹಿಡಿಶಾಪ... ಈ ಎಲ್ಲಾ ಅಂಶಗಳೂ ಬೇರೆಬೇರೆಯೇ ಆಗಿದ್ದರೂ ಪರಸ್ಪರ ಸಂಬಂಧವನ್ನೂ ಹೊಂದಿವೆ ಎನಿಸುವುದಿಲ್ಲವೇ?

ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ಖರೀದಿ ವೆಚ್ಚ ಹೆಚ್ಚಿದರೆ ವಿದ್ಯುತ್‌ ಸರಬರಾಜು ಕಂಪೆನಿಗಳಾದರೂ ಏನು ಮಾಡಬೇಕು. ಅದೆಷ್ಟೇ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಿದರೂ ಅದಕ್ಕಿಂತ ಬೇಡಿಕೆಯೇ ಅತ್ಯಧಿಕ ಪ್ರಮಾಣದಲ್ಲಿದ್ದರೆ ಪೂರೈಕೆ ಮಾಡಲು ಹೇಗೆ ಸಾಧ್ಯ?

ಅದು ಸರಿ, ಸೂರ್ಯನ ಕೆಲಸವಾದರೂ ಏನು? ಬೆಂಕಿ ಚೆಂಡಿನಂತಿರುವ ಆತ ಸದಾ ಉರಿಯುತ್ತಲೇ ಇರುವುದರಲ್ಲಿ ಅವನ ತಪ್ಪಾದರೂ ಏನು? ಹಾಗೆ ಉರಿಯುವಾಗ ಕೇವಲ ಬೆಳಕನ್ನಷ್ಟೇ ಕೊಡಲು ಸಾಧ್ಯವೇ? ಶಾಖವೂ ತನ್ನಿಂತಾನೇ ಹೊರಬೀಳುವುದಿಲ್ಲವೇ? ‘ಶಾಖ’, ಬಿಸಿಲ ತಾಪ ಎಂದು ಗೊಣಗುವ ಬದಲು ಅದೇ ಶಾಖವನ್ನು ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಿಲ್ಲವೇ?

ಶಾಖದಿಂದಲೇ ಅಲ್ಲವೇ ನಮ್ಮ ಎಲ್ಲ ಉತ್ಪಾದಕ ಚಟುವಟಿಕೆಗಳೂ, ಉದ್ಯಮಗಳೂ, ಕೈಗಾರಿಕೆಗಳೂ, ಕೊನೆಗೆ ಅಡುಗೆ ಮನೆಯಲ್ಲಿನ ಆಹಾರ ತಯಾರಿಕೆ ನಡೆಯುವುದು. ಬೆಂಕಿ ಉರಿಸಿ ನೀರನ್ನು ಕುದಿಸಿದಾಗಲೇ ಹಬೆ ಉತ್ಪತ್ತಿಯಾಗಿ ಜೇಮ್ಸ್‌ವ್ಯಾಟ್‌ನ ‘ಉಗಿಬಂಡಿ’ ಚಲಿಸಿದ್ದು. ಕಲ್ಲಿದ್ದಲು ಉರಿದು ಬೂದಿಯಾದಾಗಲೇ ಅಲ್ಲವೇ ‘ಶಾಖೋತ್ಪನ್ನ ವಿದ್ಯುತ್‌’ ತಯಾರಾಗಿದ್ದು. ಪೆಟ್ರೋಲ್‌, ಡೀಸೆಲ್‌, ಅನಿಲ ಉರಿದು ಶಾಖೆ ಹೊಮ್ಮಿಸಿದಾಗಲೇ ವಾಹನ, ಯಂತ್ರಗಳು ಚಲಿಸಿದ್ದು.

ಮನಸ್ಸು ಮಾಡಬೇಕಷ್ಟೆ
ಅದೇ ರೀತಿಯಲ್ಲಿ ಸೂರ್ಯನ ತಾಪವನ್ನು ಅರ್ಥಾತ್‌ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್‌ ಉತ್ಪಾದನೆಗೆ ಏಕೆ ಎಲ್ಲರೂ ಮನಸ್ಸು ಮಾಡುತ್ತಿಲ್ಲ. ಪ್ರತಿಯೊಂದು ಕಟ್ಟಡದ ಮೇಲೂ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡರೆ ಅದೆಷ್ಟೊಂದು ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಬಹುದು?

ಕನಿಷ್ಠ ನಿಮ್ಮದೇ ಮನೆಯ ಛಾವಣಿಯಲ್ಲಿ ಚಿಕ್ಕದಾದರೂ ಸರಿ ಒಂದು ಸೌರವಿದ್ಯುತ್ ಘಟಕ ಅಳವಡಿಸಿದರೆ ಹೇಗೆ? ಈ ಫಲಕ ಸೂರ್ಯನ ಶಕ್ತಿಯನ್ನು ಹೀರಿಕೊಂಡು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಿ ಕೊಡುವಾಗ ಸ್ವಲ್ಪ ಪ್ರಮಾಣದಲ್ಲಾದರೂ ನಿಮ್ಮ ಮನೆಯ ವಿದ್ಯುತ್‌ ಕೊರತೆ ನೀಗಿಸಿಕೊಳ್ಳಬಹುದಲ್ಲವೇ? ಆಲೋಚಿಸಿ...

ವಾಟರ್‌ ಹೀಟರ್‌
ನಗರಗಳಲ್ಲಿ, ಚಿಕ್ಕ ಪಟ್ಟಣಗಳಲ್ಲಿಯೂ ಬಹಳಷ್ಟು ಮನೆಗಳ ತಾರಸಿಯಲ್ಲಿ ಈಗ ಸೂರ್ಯನ ಶಕ್ತಿಯನ್ನೇ ಬಳಸಿಕೊಂಡು ನೀರು ಬಿಸಿ ಮಾಡಿಕೊಳ್ಳುವ ‘ಸೋಲಾರ್‌ ವಾಟರ್‌ ಹೀಟರ್‌’ಗಳನ್ನು ಕಾಣಬಹುದಾಗಿದೆ. ಈ ಪರ್ಯಾಯ ಇಂಧನ ಶಕ್ತಿ ಘಟಕಗಳ ಅಳವಡಿಕೆಗೆ ಸರ್ಕಾರದಿಂದಲೂ ಸಹಾಯಧನದ ನೆರವು ದೊರೆಯುತ್ತಿದೆ.

ಈ ಮೊದಲೆಲ್ಲಾ ಸ್ನಾನಕ್ಕಾಗಿ ನೀರು ಕಾಯಿಸಲು ಸೌದೆ, ತೆಂಗಿನ ಕರಟ, ಅಡಕೆ ಸಿಪ್ಪೆ, ಕಾಫಿ ಹೊಟ್ಟು ಬಳಕೆಯಾಗುತ್ತಿದ್ದವು. ಇವನ್ನು ಸಂಗ್ರಹಿಸುವುದು ಒಂದು ತೊಡಕಾದರೆ, ಹೊಗೆ ಆವರಿಸಿಕೊಳ್ಳುವ ಸಮಸ್ಯೆಯೂ ಇತ್ತು.
ಸಾಂಪ್ರದಾಯಿಕ ವಾಟರ್‌ ಹೀಟರ್‌ಗಳು ವಿದ್ಯುತ್‌ ಕಡಿತ ಅಥವಾ ವಿದ್ಯುತ್‌ ಬಿಲ್‌ ಉಂಟುಮಾಡುತ್ತಿದ್ದ ಆಘಾತವನ್ನು ಕಡಿಮೆ ಮಾಡಿದವು. ಹಾಗಾಗಿಯೇ ಬಹಳಷ್ಟು ಕಡೆ ಈಗ ಸೋಲಾರ್‌ ವಾಟರ್‌ ಹೀಟರ್‌ಗಳ ಬಳಕೆ ಹೆಚ್ಚುತ್ತಿದೆ.

ಸೌರ ವಿದ್ಯುತ್‌ ಘಟಕ
ಇದೇ ರೀತಿಯಲ್ಲಿ ಸೌರ ವಿದ್ಯುತ್‌ ಘಟಕಗಳೂ ಪ್ರತಿಯೊಂದು ಮನೆಯ ಛಾವಣಿಯನ್ನು ಅಲಂಕರಿಸಿದರೆ ಸಾಂಪ್ರದಾಯಿಕ ಮೂಲದ ವಿದ್ಯುತ್‌ ಸರಬರಾಜು ಮೇಲೆ ಒತ್ತಡ ಕಡಿಮೆ ಆಗುತ್ತದೆ. ವಿದ್ಯುತ್‌ ಸರಬರಾಜು ಕಂಪೆನಿಗಳ ಪರಿಸ್ಥಿತಿಯೂ ಸುಧಾರಣೆ ಆಗುತ್ತದೆ ಅಲ್ಲವೇ?

ಆದರೆ, ಸೋಲಾರ್‌ ವಾಟರ್‌ ಹೀಟರ್‌ ಅಳವಡಿಕೆಯೇ ಸ್ವಲ್ಪ ದುಬಾರಿಯದು. ಇನ್ನು ಸೌರ ವಿದ್ಯುತ್‌ ಫಲಕ ಅಳವಡಿಸಿಕೊಳ್ಳುವುದು ಹಣದ ವಿಚಾರದಲ್ಲಿ ಸುಲಭದ ಮಾತಲ್ಲ ಎಂಬ ಅಭಿಪ್ರಾಯವೂ ಇದೆ. ಹೌದು, ಈವರೆಗೂ ಸೌರ ವಿದ್ಯುತ್‌ ಫಲಕ ಅಳವಡಿಸಿಕೊಳ್ಳುವುದು ದುಬಾರಿ ಯೋಜನೆಯೇ ಆಗಿದೆ. ಏಕೆಂದರೆ, ಸೂರ್ಯನ ಶಕ್ತಿಯನ್ನು ಹೀರಿಕೊಂಡು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ‘ಸೋಲಾರ್ ಸೆಲ್‌’ಗಳನ್ನು  ಆಮದು ಮಾಡಿಕೊಳ್ಳಬೇಕಿತ್ತು. ಹಾಗಾಗಿ ಅವುಗಳ ಬೆಲೆಯೂ ತುಸು ಹೆಚ್ಚೇ ಇರುತ್ತಿತ್ತು.

ಆದರೆ, ಈಗ ಭಾರತದಲ್ಲಿಯೇ ಹಲವೆಡೆ ಸೋಲಾರ್ ಸೆಲ್‌ಗಳನ್ನು ತಯಾರಿಸುವ ಕಂಪೆನಿಗಳು ಕಾರ್ಯಾರಂಭ ಮಾಡಿವೆ. ಟಾಟಾ ಪವರ್‌ ಸೋಲಾರ್‌ ಸಹ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ‘ಸೋಲಾರ್ ಸೆಲ್‌’ ಮತ್ತು ‘ಸೌರಶಕ್ತಿಯ ದೊಡ್ಡ ಫಲಕ’ಗಳನ್ನು ತಯಾರಿಸುವ ಘಟಕವನ್ನು ಹೊಂದಿದೆ.

ಮೊದಲು ಸೋಲಾರ್‌ ಸೆಲ್‌ಗಳನ್ನೇ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ದಕ್ಷಿಣ ಕೊರಿಯಾದಿಂದ ವೇಫರ್ಸ್‌ಗಳನ್ನು ಮಾತ್ರವೇ (ಕಚ್ಛಾಚಸ್ತು) ತರಿಸಿಕೊಳ್ಳಲಾಗುತ್ತಿದೆ. ಸಿಲಿಕಾದಿಂದ ತಯಾರಿಸಲಾದ ಈ ವೇಫರ್ಸ್‌ಗಳಿಗೆ ಇಲ್ಲಿನ ಘಟಕದಲ್ಲಿ ಅಗತ್ಯವಾದ ರಾಸಾಯನಿಕ, ಫಿಲ್ಮೆಂಟ್‌, ನೀಲಿಬಣ್ಣ ಬಳಿದು ಪರಿಪೂರ್ಣವಾದ ಸೋಲಾರ್‌ ಸೆಲ್‌ಗಳಾಗಿ (ಸೌರಶಕ್ತಿ ಕೋಶ) ಅಭಿವೃದ್ಧಿಪಡಿಸಲಾಗುತ್ತಿದೆ.

ನಂತರ ಈ ಸೆಲ್‌ಗಳನ್ನು ವಿವಿಧ ಸಂಖ್ಯೆಯಲ್ಲಿ ಜೋಡಿಸಿ ಕನಿಷ್ಠ 12 ಕಿಲೊವಾಟ್‌ನಿಂದ ಗರಿಷ್ಠ 350 ಕಿಲೊವಾಟ್‌ ಸಾಮರ್ಥ್ಯದ ಪ್ರತ್ಯೇಕ ಸೌರ ಫಲಕಗಳಾಗಿ ಸಿದ್ಧಗೊಳಿಸಲಾಗುತ್ತಿದೆ. ಕಚ್ಛಾವಸ್ತು ಹೊರತುಪಡಿಸಿದರೆ ಸೌರಶಕ್ತಿ ಫಲಕ ಪರಿಪೂರ್ಣವಾಗಿ ಇಲ್ಲಿಯೇ ತಯಾರಾಗುವುದರಿಂದ ಬೆಲೆಯಲ್ಲಿಯೂ ಕಡಿಮೆ ಇದೆ.

ಸೌರಫಲಕಗಳ ತಯಾರಿಕೆ ವೆಚ್ಚವೂ ತಗ್ಗಿರುವುದರಿಂದ ಬೆಲೆಯೂ ಮೂರು ವರ್ಷಗಳಲ್ಲಿ ಶೇ 60ರಿಂದ ಶೇ 70ರವರೆಗೂ ತಗ್ಗಿದೆ. ಹಾಗಾಗಿ ಈಗ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಳ್ಳುವುದು ಅಷ್ಟೇನೂ ದುಬಾರಿಯ ಸಂಗತಿ ಅಲ್ಲ ಎನ್ನುತ್ತಾರೆ ‘ಟಾಟಾ ಪವರ್‌ ಸೋಲಾರ್‌’ ಕಂಪೆನಿಯ ‘ಸಿಇಒ’ ಅಜಯ್‌ ಗೋಯಲ್‌.

ಇಲ್ಲಿ ತಯಾರಾಗುವ ಸೌರಶಕ್ತಿ ಫಲಕಗಳು 25 ವರ್ಷಗಳವರೆಗೂ ಕಾರ್ಯನಿರ್ವಹಿಸಬಲ್ಲವಾಗಿವೆ. 25ನೇ ವರ್ಷದಲ್ಲಿಯೂ ಶೇ 80ರಷ್ಟು ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿರುತ್ತವೆ. ನಂತರದಲ್ಲಿಯೂ ಕಾರ್ಯನಿರ್ವಹಿಸಿದರೂ ಉತ್ಪಾದನೆ ಸಾಮರ್ಥ್ಯ ಇಳಿಮುಖವಾಗುತ್ತಾ ಹೋಗುತ್ತದೆ.

1 ಕಿಲೊವಾಟ್‌ ಸಾಮರ್ಥ್ಯದ ಸೌರಫಲಕ ಈಗ ಕಡಿಮೆ ಬೆಲೆಗೆ ಲಭ್ಯವಿದೆ. ‘ಸಂಜೀವಿನಿ’ ಯೋಜನೆ ಹೆಸರಿನಲ್ಲಿ ಸೌರಶಕ್ತಿ ಫಲಕ, ಇನ್ವರ್ಟರ್‌, ಒಂದು ಬ್ಯಾಟರಿಯನ್ನು ಒಳಗೊಂಡ ವಿದ್ಯುತ್‌ ಉತ್ಪಾದಕ ಘಟಕ ಕನಿಷ್ಠ ₨15 ಸಾವಿರರಿಂದ ₨30 ಸಾವಿರದವರೆಗೂ ಇದೆ. ಇದು ಸಬ್ಸಿಡಿ ಹೊರತಾದ ಬೆಲೆ ಎನ್ನುತ್ತಾರೆ ಅಜಯ್‌.

‘ಸೌರಶಕ್ತಿ ಉಪಕರಣಗಳು ನಿಜಕ್ಕೂ ಬಹಳ ಪ್ರಯೋಜಕಾರಿಯಾಗಿವೆ. ಅವು ನಮ್ಮ ದಿನನಿತ್ಯದ ಜೀವನದ ವಿದ್ಯುತ್‌ ಅಗತ್ಯವನ್ನು ತಕ್ಕಮಟ್ಟಿಗಾದರೂ ಪೂರೈಸಲು ಶಕ್ತವಾಗಿವೆ. ಇಂದಿನ ಅನಿಯಮಿತ ವಿದ್ಯುತ್ ಕಡಿತದ ಸಂದರ್ಭಗಳಲ್ಲಿ ಮನೆಯಲ್ಲಿನ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಬಹುತೇಕ ನಿರಪಯೋಗಿಯಾಗಿಬಿಡುತ್ತವೆ. ಆದರೆ, ಸೌರಶಕ್ತಿಯ ಸದ್ಬಳಕೆ ಇರುವೆಡೆಯಲ್ಲಿ ಈ ಸಮಸ್ಯೆ ಇರುವುದಿಲ್ಲ.

ಸೌರಶಕ್ತಿಯ ಸಮರ್ಪಕ ಬಳಕೆಯಿಂದ ಮನೆಯ ವಿದ್ಯುತ್ ಶುಲ್ಕದ ಹೊರೆಯನ್ನೂ ಕಡಿಮೆ ಮಾಡಿಕೊಳ್ಳಬಹುದಾಗಿದೆ  ಎನ್ನುತ್ತಾರೆ ಬೆಂಗಳೂರಿನ ಬಂಟ್ ಸೋಲಾರ್ ಇಂಡಿಯಾ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಶೆಟ್ಟಿ.
ಈಗಿನ ತುರ್ತು ಅಗತ್ಯವೇನೆಂದರೆ, ನವೀಕರಿಸಬಹುದಾದ ಇಂಧನಗಳು ಮತ್ತು ಅವುಗಳ ಬಳಕೆ ಬಗ್ಗೆ ಗ್ರಾಹಕರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ.

ಮನೆಗಳಲ್ಲಿ ಬಳಸಬಹುದಾದ ಸಣ್ಣ ಗಾತ್ರದ ಸೌರವಿದ್ಯುತ್‌ ಉಪಕರಣಗಳು ಈಗ ಸುಲಭದಲ್ಲಿ ಕೈಗೆಟಕುವ ಬೆಲೆಗೆ ಲಭ್ಯವಿವೆ. ಜನರೂ ಈ ಬಗ್ಗೆ ಗಮನ ಹರಿಸಿ ಬೆಳಕಿನ ಕೊರತೆ ನೀಗಿಸಿಕೊಳ್ಳಬಹುದು ಎನ್ನುತ್ತಾರೆ ಚಂದ್ರಶೇಖರ ಶೆಟ್ಟಿ.

ಜಾಗವಿದ್ದೆಡೆ ಸೌರಶಕ್ತಿ ಫಲಕ
ನಿಧಾನವಾಗಿಯಾದರೂ ಪರ್ಯಾಯ ಇಂಧನ ಮೂಲಗಳ ಬಗ್ಗೆ ಇತ್ತೀಚೆಗೆ ಚರ್ಚೆ ನಡೆಯುತ್ತಿವೆ, ಪರ್ಯಾಯ ಇಂಧನ ಮೂಲಗಳ ಸದ್ಬಳಕೆ ಬಗೆಗೂ ಉತ್ತೇಜನದ ಮಾತುಗಳು ಕೇಳಿಬರುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೂ ಮನೆ ಮನೆಗಳಲ್ಲಿ ಸೌರ ವಿದ್ಯುತ್‌ ಬಳಕೆ ಉತ್ತಮ ರೀತಿಯಲ್ಲಿ ನಡೆದಿದೆ.

ನಗರಗಳಲ್ಲಿ ಕೆಲವೆಡೆ ರಸ್ತೆ ಸಂಚಾರ ದೀಪ ನಿರ್ವಹಣೆಗೆ ಸೌರಶಕ್ತಿ ಫಲಕಗಳು ಅಳವಡಿಸಿರುವುದು ಕಂಡುಬರುತ್ತದೆ. ಕೆಲವು ಹಳ್ಳಿ, ಪಟ್ಟಣಗಳಲ್ಲಿ ಬೀದಿ ದೀಪಗಳಿಗೆ ಸೌರಶಕ್ತಿ ಫಲಕಗಳನ್ನು ಅಳವಡಿಸುವ ಪ್ರಯೋಗವೂ ನಡೆದಿದೆ.
ಇತ್ತೀಚೆಗೆ ಕೃಷಿ ಪಂಪ್‌ಸೆಟ್‌ಗಳಿಗೂ ಸೌರ ವಿದ್ಯುತ್ ಬಳಕೆ ಪ್ರಯತ್ನವೂ ನಡೆದಿದೆ.

ಆದರೆ, ಇವೆಲ್ಲವೂ ಬಹಳ ಸಣ್ಣ ಪ್ರಮಾಣದಲ್ಲಿ ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುವ ಮಾತಾಯಿತು. ದೊಡ್ಡ ಪ್ರಮಾಣದಲ್ಲಿ ಸೌರಶಕ್ತಿ ವಿದ್ಯುತ್‌ ಘಟಕಗಳನ್ನು ಅಳವಡಿಸಬೇಕೆಂದರೆ ಹಣದ ಮಾತಷ್ಟೇ ಅಲ್ಲ, ಬಹಳ ವಿಸ್ತಾರವಾದ ಜಾಗವೂ ಬೇಕು ಎಂಬುದು ದೊಡ್ಡ ಅಡ್ಡಿಯಾಗಿದೆ.

ಎಲ್ಲೆಲ್ಲಿ ಉಪಯೋಗಕ್ಕೆ ಬಾರದ ಜಾಗವಿದೆಯೋ, ಎಲ್ಲಿ ವರ್ಷದ ಹೆಚ್ಚು ಸಮಯ ಸೂರ್ಯನ ಪ್ರಕರ ಬಿಸಿಲು ಇರುತ್ತದೆಯೋ ಅಲ್ಲೆಲ್ಲ ದೊಡ್ಡ ಪ್ರಮಾಣದಲ್ಲಿ ಸೌರ ವಿದ್ಯುತ್‌ ಘಟಕಗಳ ಸ್ಥಾಪನೆ ಯತ್ನ ನಡೆದಿದೆ. ಕಳೆದ ವರ್ಷ ಗುಜರಾತ್‌ನಲ್ಲಿ ಬಹಳ ವಿಶಾಲವಾದ ಜಾಗದಲ್ಲಿ ಸೌರ ಫಲಕಗಳನ್ನು ಜೋಡಿಸಿ ಬೃಹತ್‌ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಕರ್ನಾಟಕದ ಚಿತ್ರದುರ್ಗ­ದಲ್ಲಿಯೂ ಇಂತಹುದೇ ಒಂದು ಸೌರವಿದ್ಯುತ್‌ ಘಟಕ ಕಾರ್ಯಾರಂಭ ಮಾಡಿದೆ. 

ಈಗ ವಿಮಾನ ನಿಲ್ದಾಣಗಳಲ್ಲೂ ಸೌರವಿದ್ಯುತ್‌ ಘಟಕ ಸ್ಥಾಪನೆ ಮಾತುಗಳ ಕೇಳಿಬಂದಿವೆ. ದೇಶದ 30 ವಿಮಾನ ನಿಲ್ದಾಣಗಳಲ್ಲಿ  ಸೌರವಿದ್ಯುತ್‌ ಘಟಕಗಳನ್ನು ಸ್ಥಾಪಿಸುವುದಾಗಿ ‘ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ’ (ಎಎಐ) ಇತ್ತೀಚೆಗಷ್ಟೇ ಹೇಳಿದೆ. 

ವಿಮಾನ ನಿಲ್ದಾಣಗಳಲ್ಲಿ ಲಭ್ಯವಿರುವ ಹೆಚ್ಚುವರಿ ಭೂಮಿ ಅಥವಾ ದೊಡ್ಡ ಛಾವಣಿ ಮೇಲೆ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್‌ ಪಡೆಯುವುದು ‘ಎಎಐ’ ಆಲೋಚನೆ. ಮೊದಲ ಹಂತದಲ್ಲಿ 50 ಮೆಗಾವಾಟ್‌ ಸಾಮರ್ಥ್ಯದ ಸೌರವಿದ್ಯುತ್‌ ಘಟಕಗಳನ್ನು ಅಳವಡಿಸುವ ಯೋಜನೆ ಇದೆ ಎಂದಿದೆ ‘ಎಎಐ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT