ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಸ್ವಚ್ಛತೆಗೆ ನೈಸರ್ಗಿಕ ವಿಧಾನ

Last Updated 27 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ರಜಾ ದಿನಗಳ ಪ್ರವಾಸದ ಬಳಿಕ ಅಥವಾ ಊರಿಗೆ ಹೋಗಿ ರಜೆಯ ಮಜಾ ಸವಿದು ಹಿಂತಿರುಗಿ ಬರುವ ವೇಳೆಗೆ ಮನೆಯೆಲ್ಲಾ ಧೂಳು, ಕಸದಿಂದ ತುಂಬಿದ್ದರೆ ಪ್ರವಾಸದ ಮಜಾ ಎಲ್ಲಾ ಒಮ್ಮೆಲೆ ಮಾಯವಾಗುತ್ತದೆ. ಜತೆಗೆ ಕಿಟಕಿಗೆ ಹಾಕಿದ ಕರ್ಟನ್‌ಗಳೆಲ್ಲಾ ಧೂಳಿನಿಂದ, ಕುಶನ್‌ಗಳು ತಿಗಣೆಗಳಿಂದ ಕೂಡಿದ್ದರೆ ಯಾಕಾದರೋ ಮನೆ ಬಾಗಿಲು ಮುಚ್ಚಿ ಯಾಕೆ ಹೋದೆವೋ ಎಂದನ್ನಿಸಿಬಿಡುತ್ತದೆ.

ಕೇವಲ ರಜೆ ಮುಗಿಸಿ ಬಂದ ವೇಳೆ ಮಾತ್ರವಲ್ಲ, ಮನೆಯನ್ನು ಆಗಾಗ ಧೂಳು ಕೊಡವಿ ಸಂಪೂರ್ಣ ಸ್ವಚ್ಛ ಮಾಡಲೇ ಬೇಕು.  ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಮಿ ಕೀಟಗಳು ಮತ್ತು ತಿಗಣೆಗಳಿಂದ ಮನೆಯನ್ನು ಮುಕ್ತಗೊಳಿಸಬೇಕಾದ್ದು ಎಲ್ಲರೂ ಮಾಡಬೇಕಾದ ಮೊತ್ತಮೊದಲ ಕಾರ್ಯವಾಗಿದೆ.

ಕ್ರಿಮಿಕೀಟಗಳು ಮತ್ತು ಜಿರಲೆಗಳ ನಿವಾರಣೆಗೆ ಈಗಂತೂ ಸಾಕಷ್ಟು ಮಾರ್ಗಗಳಿವೆ. ಆದರೆ ರಾಸಾಯನಿಕಗಳನ್ನು ಬಳಸಿ ನಿವಾರಿಸುವ ಇಂಥ ಕ್ರಮಗಳು ಮನೆಮಂದಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಸಾಧ್ಯವಾದಷ್ಟು ನೈಸರ್ಗಿಕ ವಿಧಾನಗಳನ್ನು ಬಳಸುವುದೇ ಉತ್ತಮ.

ಶುಚೀಕರಣ: ಮನೆ ಶುಚಿಗೊಳಿಸುವ ಪ್ರಕ್ರಿಯೆ ಎಂದರೆ ಕೇವಲ ಜಿರಲೆ, ತಿಗಣೆಗಳ ನಾಶವೊಂದೇ ಮುಖ್ಯ ಉದ್ದೇಶವಾಗಿರಬಾರದು. ಮನೆಯಲ್ಲಿ ತುಂಬಿರುವ ಅನಗತ್ಯ ವಸ್ತುಗಳ ನಿವಾರಣೆಯೂ ಇಲ್ಲಿ ಪ್ರಮುಖವಾಗುತ್ತದೆ. ಮೊದಲ ಹಂತವಾಗಿ ಮನೆಯಲ್ಲಿ ಪೇರಿಸಿಟ್ಟಿರುವ ಹಳೆ ಪತ್ರಿಕೆ, ಮ್ಯಾಗಜಿನ್‌ಗಳನ್ನು ಮಾರಾಟ ಮಾಡಿ. ಸಾಮಾನ್ಯವಾಗಿ ಕ್ರಿಮಿಕೀಟಗಳ ಆವಾಸಸ್ಥಾನ ಇಂಥ ಪ್ರದೇಶಗಳೇ ಆಗಿರುವುದರಿಂದ ಇವುಗಳನ್ನು ಮಾರಾಟ ಮಾಡಿದಾಗ ಶುಚೀಕರಣ ಕಾರ್ಯ ಅರ್ಧದಷ್ಟು ಕಡಿಮೆಯಾಗುತ್ತದೆ.

ಒಮ್ಮೆ ಮನೆ ಶುಚಿಗೊಳಿಸಿದ ಬಳಿಕ ಮನೆಯ ನೆಲ, ಗೋಡೆ, ಕಿಟಕಿ, ಬಾಗಿಲುಗಳತ್ತ ಗಮನ ಕೊಡಿ. ಗೋಡೆಯ ಮೇಲೆ ಅಥವಾ ಮರದ ಪೀಠೋಪಕರಣಗಳು ಹೀಗೆ ಎಲ್ಲಾದರೂ ಬಿರುಕು ಕಾಣಿಸಿಕೊಂಡಿದೆಯೇ ಎಂದು ನೋಡಿ. ಬಿರುಕಿದ್ದಲ್ಲಿ ಅಥವಾ ಸಣ್ಣ ಸಣ್ಣ ತೂತುಗಳಿದ್ದಲ್ಲಿ ಅವುಗಳನ್ನು ಮುಚ್ಚಿ. ಇದರಿಂದ ತಿಗಣೆಗಳು ಮತ್ತಿ ಕ್ರಿಮಿಕೀಟಗಳು ಅಲ್ಲಿ ನೆಲೆಸುವುದನ್ನು ತಪ್ಪಿಸಬಹುದು.

ಅಂತೆಯೇ ಸ್ನಾನದ ಕೋಣೆ, ಅಡುಗೆ ಕೋಣೆಗಳಲ್ಲಿಯೂ ಶುಚಿತ್ವ ಕಾಪಾಡುವುದು ಅಗತ್ಯ. ಸ್ನಾನದ ಕೋಣೆ ಅಥವಾ ಅಡುಗೆ ಕೋಣೆ ನೆಲವನ್ನು ಆಗಾಗ ಸ್ಕ್ರಬ್ ಮಾಡುತ್ತಿರಬೇಕು. ಇಲ್ಲಿನ ನೆಲ ಯಾವಾಗಲೂ ಒಣಗಿದಂತಿರುವಂತೆ ನೋಡಿಕೊಳ್ಳಬೇಕಾದ್ದು ಅಗತ್ಯ. ಮಲಿನ ನೀರು, ನೀರೂ ಕೂಡ ಎಲ್ಲಿಯೂ ಕಟ್ಟಿ ನಿಲ್ಲದೆ ಸರಾಗವಾಗಿ ಹೋಗುವಂತಿರಬೇಕು. ಇದರಿಂದ ಬ್ಯಾಕ್ಟೀರಿಯಾಗಳು ಮತ್ತು ಸೊಳ್ಳೆಗಳಿಂದ ರಕ್ಷಣೆ ಪಡೆಯಬಹದು.

ಕೇವಲ ಮನೆಯೊಳಗೆ ಮಾತ್ರವಲ್ಲ, ಮನೆಯ ಸುತ್ತಲಿನ ಪರಿಸರವೂ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ನಿಂತ ನೀರಿನಲ್ಲಿ ಸೊಳ್ಳೆಗಳು ಹೆಚ್ಚು ವಾಸವಾಗುವುದರಿಂದ ಮನೆಯ ಸುತ್ತಲು ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಿ.

ನಿಮ್ಮ ಮನೆಯ ಮುಂದಿನ ಉದ್ಯಾನವನದಲ್ಲಿ ನೀರಿನ ಸಣ್ಣ ಕೊಳಗಳಿದ್ದರೆ ಮೀನುಗಳನ್ನು ಅದರಲ್ಲಿ ಸಾಕಿ. ಮೀನುಗಳು ಸೊಳ್ಳೆಗಳು ನೀರಿನಲ್ಲಿಡುವ ಮೊಟ್ಟೆಗಳನ್ನು ತಿನ್ನುವುದರಿಂದ ಸೊಳ್ಳೆಗಳ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಇನ್ನು ಅಡುಗೆ ಕೋಣೆಗೆ ಬಂದರೆ ಅಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವುದರಿಂದ ಜಿರಳೆಗಳು ಹೇರಳವಾಗಿ ಕಂಡುಬರುವುದರಲ್ಲಿ ಸಂಶಯವಿಲ್ಲ. ಮೊತ್ತ ಮೊದಲನೆಯದಾಗಿ ಅಡುಗೆ ಕೋಣೆಯಲ್ಲಿ ದವಸ ಧಾನ್ಯಗಳನ್ನು  ಗಾಳಿಯಾಡದ ಡಬ್ಬಗಳಲ್ಲಿ ತುಂಬಿಸಿಡಿ.

ಚಳಿಗಾಲದಲ್ಲಂತೂ ಆಹಾರ ಪದಾರ್ಥಗಳನ್ನು ಹೊರಗೆ ತೆರೆದಿಡಬೇಡಿ. ಚಳಿಗಾಲದಲ್ಲಿ ವಾತಾವರಣದ ಉಷ್ಣತೆ ಕಡಿಮೆಯಿರುವಾಗ ಕ್ರಿಮಿಕೀಟಗಳು ಮತ್ತು ಜಿರಳೆಗಳು ಸುಲಭವಾಗಿ ಮನೆಯೊಳಗೆ ಸೇರಿಕೊಳ್ಳುತ್ತವೆ. ಕ್ರಿಮಿ ಕೀಟಗಳು ಕಂಡುಬಂದರೆ ಅವುಗಳ ಮೂಲ ಎಲ್ಲಿ ಎಂದು ಕಂಡುಹಿಡಿದು ಅವುಗಳನ್ನು ನಾಶಪಡಿಸಿ.

ಇರುವೆಗಳಂತೂ ಎಲ್ಲಾ ಮನೆಗಳಲ್ಲಿಯೂ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಕೇವಲ ಸಿಹಿ ವಸ್ತುವಿನ ಮೇಲೆ ಮಾತ್ರವಲ್ಲದೆ ನೀರಿನ ಜಗ್, ಹಲ್ಲುಜ್ಜುವ ಬ್ರಷ್ ಅಷ್ಟೇ ಏಕೆ ಮೈಕ್ರೋವೇವ್ ಒಳಗೂ ಇರುವೆಗಳ ಸಾಲೇ ಕಂಡುಬರುತ್ತದೆ.  ಇರುವೆಗಳು ಕಂಡುಬರುವಲ್ಲಿ ಸೌತೆಕಾಯಿಯ ಸಿಪ್ಪೆಗಳನ್ನು ಹರಡಿ. ಸಿಪ್ಪೆಯ ಕಹಿಯುಣ್ಣುವ ಇರುವೆಗಳು ಅಲ್ಲಿಂದ ಮಾಯವಾಗುತ್ತದೆ.

ತೆವಳುವ ಸ್ವಭಾವದ ಕ್ರಿಮಿಕೀಟಗಳು ಮತ್ತು ಜಿರಲೆಗಳು ಮನೆಮಂದಿಯ ಮತ್ತೊಂದು ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರ ಇಲ್ಲಿದೆ. ಬೆಳ್ಳುಳ್ಳಿ ಸಣ್ಣ ಚೂರು, ಸ್ವಲ್ಪ ಮೆಣಸಿನ ಹುಡಿ, ಇದ್ದಿಲು ಪುಡಿ, ಟಾಲ್ಕಂ ಪೌಡರ್ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಅರೆಯಿರಿ. ಅರೆದ ಮಿಶ್ರಣವನ್ನು ಅಲ್ಲಲ್ಲಿ ಹಚ್ಚಿರಿ. ಈ ಮಿಶ್ರಣದಲ್ಲಿರುವ ಪ್ರತಿಯೊಂದು ಘಟಕಗಳು ಒಂದೊಂದು ಹಂತದಲ್ಲಿ ಕಾರ್ಯವೆಸಗಿ ಕ್ರಿಮಿಕೀಟಗಳನ್ನು ನಿವಾರಿಸುತ್ತದೆ.

ಬೇಕಿಂಗ್ ಸೋಡಾ ಮತ್ತು ಸಕ್ಕರೆ ಹುಡಿ ಮಿಶ್ರಣವನ್ನು ಬೆರೆಸಿ ಹಚ್ಚುವುದರ ಮೂಲಕವೂ ಜಿರಲೆಗಳಿಂದ ಮುಕ್ತಿ ಪಡೆಯಬಹುದು.

ಕ್ರಿಮಿಕೀಟಗಳಿಂದ ಮನೆಯನ್ನು ಸಂರಕ್ಷಿಸುವುದು ಎಷ್ಟು ಅಗತ್ಯವೋ ಅಷ್ಟೇ ಶ್ರಮವೂ ಅದಕ್ಕೆ ಅನಿವಾರ್ಯ. ಆದರೆ ನೈಸರ್ಗಿಕ ವಿಧಾನಗಳನ್ನು ಬಳಸುವುದರಿಂದ ಮನೆಮಂದಿಯೂ ಸುರಕ್ಷಿತರು ಮಾತ್ರವಲ್ಲದೆ ಮಕ್ಕಳೂ ಸುರಕ್ಷಿತರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT