ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್‌ ಬ್ಯಾಟಿಂಗ್‌ ಮೋಡಿ...

Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಅದು 30 ಯಾರ್ಡ್‌ ಸೈಜಿನ ಚಿಕ್ಕ ಕ್ರೀಡಾಂಗಣವೇ? ಎಂದು ದೂರವಾಣಿಯಲ್ಲಿ ಮಾತನಾಡುತ್ತಿದ್ದ ಹಿರಿಯ ಕ್ರೀಡಾ ಪತ್ರಕರ್ತರೊಬ್ಬರು ಕೇಳುತ್ತಿದ್ದರು. ‘ಅಲ್ಲ ಸರ್‌ ಅದು ದೊಡ್ಡ ಕ್ರೀಡಾಂಗಣ. ಅಲ್ಲಿ ನಡೆದ ಟ್ವೆಂಟಿ–20 ಪಂದ್ಯದಲ್ಲಿ ಆ ಹುಡುಗ ದ್ವಿಶತಕ ಬಾರಿಸಿದ್ದಾನೆ’ ಎಂದು ಇನ್ನೊಂದು ತುದಿಯಲ್ಲಿ ಮಾತನಾಡುತ್ತಿದ್ದ ಇರ್ಫಾನ್ ಸೇಠ್‌ ಉತ್ತರಿಸುತ್ತಿದ್ದರು.

ಆಗ ಆ ಪತ್ರಕರ್ತರಿಗೆ ಅಚ್ಚರಿ. ಕೆಲ ವರ್ಷಗಳ ಹಿಂದೆಯಷ್ಟೇ ಕ್ರಿಕೆಟ್‌ ಅಂಗಳಕ್ಕೆ ಕಾಲಿಟ್ಟ ಆ ಹುಡುಗನಲ್ಲಿ ಅಷ್ಟೊಂದು ಪ್ರತಿಭೆಯಿದೆಯೇ ಎಂದು ಅವರು ಬೆರಗುಗೊಂಡಿದ್ದರು.

–ಹೀಗೆ ಇರ್ಫಾನ್‌ ಸೇಠ್‌ ಮತ್ತು ಆ ಪತ್ರಕರ್ತರ ನಡುವೆ ಸಂಭಾಷಣೆ ನಡೆದಿದ್ದು ಮಯಂಕ್‌ ಅಗರವಾಲ್‌ ಬಗ್ಗೆ. ಅದು ಏಳೆಂಟು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ವಿಇಟಿ ಕ್ರೀಡಾಂಗಣದಲ್ಲಿ ನಡೆದ ಟ್ವೆಂಟಿ–20 ಟೂರ್ನಿಯಲ್ಲಿ ಮಯಂಕ್ ದ್ವಿಶತಕ ಬಾರಿಸಿದ್ದರು. ಈ ನೆನಪನ್ನು ಮಯಂಕ್‌ ಪ್ರತಿನಿಧಿಸುವ ಜವಾನ್ಸ್ ಕ್ರಿಕೆಟ್‌ ಕ್ಲಬ್‌ನ ಕೋಚ್‌್ ಇರ್ಫಾನ್‌ ಸೇಠ್‌ ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

‘ಮಯಂಕ್‌ ಆಗಿನ್ನು 17 ವರ್ಷದ ಒಳಗಿನವರ ಟೂರ್ನಿಯಲ್ಲಿ ಆಡುತ್ತಿದ್ದ. ಹೆರಾನ್ಸ್‌ ಕಪ್‌ಗಾಗಿ ಟ್ವೆಂಟಿ–20  ಟೂರ್ನಿ ಆಯೋಜಿಸಲಾಗಿತ್ತು. ಟೂರ್ನಿಯಲ್ಲಿ ಮಯಂಕ್‌ ದ್ವಿಶತಕ ಬಾರಿಸಿದ್ದ. ಈ ವಿಷಯವನ್ನು ಮಾಧ್ಯಮದವರಿಗೆ ಹೇಳಿದಾಗ ಮೊದಲು ಎಲ್ಲರಿಗೂ ಅಚ್ಚರಿಯಾಗಿತ್ತು. ಆದ್ದರಿಂದ ಆತನನ್ನು ದ್ವಿಶತಕದ ಪರಿಣತ ಎಂದು ಕರೆಯುತ್ತಿದ್ದೆವು’ ಎಂದು ಅವರು ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ.

ವಿವಿಧ ವಯೋಮಿತಿಯೊಳಗಿನ ಟೂರ್ನಿಗಳನ್ನು ಆಡುವಾಗಲೇ ಮಯಂಕ್ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಆಗಿದ್ದರು. ಕೆಎಸ್‌ಸಿಎ ಲೀಗ್ ಟೂರ್ನಿಗಳಲ್ಲಿ ‘ರನ್‌ ಮೆಷಿನ್‌’ ಎನಿಸಿದ್ದರು. ಹೆಚ್ಚು ರನ್ ಗಳಿಸಿದ್ದಕ್ಕಾಗಿ 2010ರ ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಸರಣಿ ಶ್ರೇಷ್ಠ ಗೌರವ ಪಡೆದಿದ್ದರು.

24 ವರ್ಷದ ಮಯಂಕ್‌ ಅವರನ್ನು ಹೋದ ವರ್ಷದ ರಣಜಿ ಟೂರ್ನಿಯ ಕೆಲ ಪಂದ್ಯಗಳಿಂದ ಕೈಬಿಡಲಾಗಿತ್ತು. ಹಲವು ಪಂದ್ಯಗಳಿಗೆ ಹದಿನೈದು ಸದಸ್ಯರ ತಂಡದಲ್ಲಿಯೇ ಸ್ಥಾನ ನೀಡಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಬದಲಾವಣೆಯಾಗಿದೆ. ರಣಜಿ ಪಂದ್ಯಗಳಲ್ಲಿಯೂ ಚುಟುಕು ಕ್ರಿಕೆಟ್‌ನಂತೆ ವೇಗವಾಗಿ ರನ್‌ ಗಳಿಸುವ ಕಲೆ ಕರಗತವಾಗಿದೆ. ಆದ್ದರಿಂದಲೇ ಭಾರತ ‘ಎ’ ತಂಡದ ಕೋಚ್‌ ರಾಹುಲ್ ದ್ರಾವಿಡ್‌ ಅವರು ಮಯಂಕ್ ಪ್ರತಿಭೆಯನ್ನು ರಾಜ್ಯ ತಂಡ ಚೆನ್ನಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

‘ನಾನು ಕ್ರಿಕೆಟ್‌ಗೆ ಬರಲು ಸಚಿನ್‌ ತೆಂಡೂಲ್ಕರ್‌ ಕಾರಣ. ಆದರೆ, ವೀರೇಂದ್ರ ಸೆಹ್ವಾಗ್‌ ರೀತಿಯಲ್ಲಿ ಬ್ಯಾಟಿಂಗ್‌ ಮಾಡಲು ಇಷ್ಟಪಡುತ್ತೇನೆ’ ಎಂದು ಮಯಂಕ್ ಹಿಂದೊಮ್ಮೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅವರ ಆಟವೂ ಸೆಹ್ವಾಗ್ ಆಟದಂತೆಯೇ ಇರುತ್ತದೆ. ಸ್ಫೋಟಕ ಹೊಡೆತ, ವೇಗವಾಗಿ ರನ್‌ ಕಲೆ ಹಾಕುವ ವಿಷಯದಲ್ಲಿ ಮಯಂಕ್‌ ಮುಂಚೂಣಿಯಲ್ಲಿರುತ್ತಾರೆ. ಆದ್ದರಿಂದ ಈ ಬ್ಯಾಟ್ಸ್‌ಮನ್‌ಗೆ ಐಪಿಎಲ್‌ನಲ್ಲಿ ಸಾಕಷ್ಟು ಬೇಡಿಕೆ. ಮೊದಲು ಆರ್‌ಸಿಬಿ ತಂಡದಲ್ಲಿದ್ದ ರಾಜ್ಯದ ಆಟಗಾರ ಈಗ ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿದ್ದಾರೆ.

2008–09ರಲ್ಲಿ 19 ವರ್ಷದ ಒಳಗಿನವರ ಕೂಚ್‌ ಬಿಹಾರಿ ಟ್ರೋಫಿಯಲ್ಲಿ ಐದು ಪಂದ್ಯಗಳಿಂದ 54ರ ಸರಾಸರಿಯಲ್ಲಿ ಒಟ್ಟು 432 ರನ್‌ ಕಲೆ ಹಾಕಿದ್ದರು. ದೇಶಿ ಟೂರ್ನಿಯಲ್ಲಿ ತೋರಿದ ಪ್ರದರ್ಶನವನ್ನು ಗಮನಿಸಿ ಆಯ್ಕೆ ಸಮಿತಿಯವರು ಮಯಂಕ್‌ಗೆ ರಾಷ್ಟ್ರೀಯ ಜೂನಿಯರ್‌ ತಂಡದಲ್ಲಿ ಸ್ಥಾನ ನೀಡಿದರು. ಅಲ್ಲೂ ರನ್‌ ಹೊಳೆ ಹರಿಸಿದರು.

2009ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಿದ 19 ವರ್ಷದ ಒಳಗಿನವರ ಏಕದಿನ ಸರಣಿಯಲ್ಲಿ ಅವರು ಒಂದು ಪಂದ್ಯದಲ್ಲಿ 160 ರನ್‌ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.  ಆದ್ದರಿಂದಾಗಿ ಟ್ವೆಂಟಿ–20 ಮತ್ತು ಏಕದಿನ ಟೂರ್ನಿಗೆ ಹೆಚ್ಚು ಪಂದ್ಯಗಳಲ್ಲಿ ಆಡಲು ಅವಕಾಶ ಲಭಿಸಿತು. ಎರಡು ವರ್ಷಗಳ ಹಿಂದೆಯಷ್ಟೇ ಮಯಂಕ್‌ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದರು. ವಿಶೇಷವೆಂದರೆ, ಇದಕ್ಕೂ ಮೂರು ವರ್ಷ ಮೊದಲೇ (2010ರಲ್ಲಿ) ಟ್ವೆಂಟಿ–20 ಟೂರ್ನಿ ಆಡಿದ್ದರು. ಹೋದ ವಾರ ದಕ್ಷಿಣ ಆಫ್ರಿಕಾ ಎದುರು ನಡೆದ ಚುಟುಕು ಕ್ರಿಕೆಟ್‌ ಪಂದ್ಯದಲ್ಲಿಯೂ ಅಬ್ಬರಿಸಿದ್ದರು. ಅನುಭವಿ ಆಟಗಾರರನ್ನು ಹೊಂದಿದ್ದ ಹರಿಣಗಳ ನಾಡಿನ ತಂಡದ ಎದುರು 49 ಎಸೆತಗಳಲ್ಲಿ 87 ರನ್‌ ಗಳಿಸಿದ್ದು ಇದಕ್ಕೆ ಸಾಕ್ಷಿ.

ಆದ್ದರಿಂದ ಮಯಂಕ್‌ ಕ್ರೀಸ್‌ನಲ್ಲಿದ್ದರೆ ಉಳಿದ ಆಟಗಾರರಿಗೆ ಅದೇನೋ ಭರವಸೆ. ಮುಯಂಕ್‌ ಇದ್ದಾರಲ್ಲ ಎನ್ನುವ ಗಾಢ ನಂಬಿಕೆ. ಆಟಗಾರರಲ್ಲಿ ಇರುವಂಥ ನಂಬಿಕೆ ಈಗ ದ್ರಾವಿಡ್‌ ಅವರಲ್ಲೂ ಮೂಡಿದೆ. ಏಕೆಂದರೆ ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಎದುರಿನ ‘ಎ’ ಪಂದ್ಯಗಳ ಸರಣಿಯಲ್ಲಿ ಮಯಂಕ್‌ ಉತ್ತಮ ಪ್ರದರ್ಶನ ನೀಡಿದ್ದಾರೆ. ಕೆಪಿಎಲ್ ಟೂರ್ನಿಯಲ್ಲಿ ಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್‌ ಎನ್ನುವ ಕೀರ್ತಿ ಇವರ ಹೆಸರಿನಲ್ಲಿದೆ. ಈ ಬಾರಿಯ ಕೆಪಿಎಲ್‌ನಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಅವರು ಹುಬ್ಬಳ್ಳಿ ಟೈಗರ್ಸ್‌ ಎದುರು ಶತಕ ಬಾರಿಸಿದ್ದರು.

ಹೀಗೆ ಪ್ರತಿ ಟೂರ್ನಿಯಲ್ಲೂ ರನ್ ಮಳೆ ಸುರಿಸುತ್ತಿರುವ ಮಯಂಕ್‌ಗೆ ರಾಷ್ಟ್ರೀಯ ತಂಡ ಪ್ರತಿನಿಧಿಸುವ ಆಸೆ. 2009–10ರಲ್ಲಿ ನಡೆದ 19 ವರ್ಷದ ಒಳಗಿನವರ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿದವರ ಭಾರತದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದರು. ವಿಶ್ವಕಪ್‌ ಮತ್ತು ಜೂನಿಯರ್ ಹಂತದ ಟೂರ್ನಿಗಳಲ್ಲಿ ಮಯಂಕ್‌ ಮತ್ತು ಕೆ.ಎಲ್‌. ರಾಹುಲ್ ಆರಂಭಿಕ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದರು.

ಕರ್ನಾಟಕದ ಈ ಆರಂಭಿಕ ಜೋಡಿಯಿಂದ ಸಾಕಷ್ಟು ಸೊಗಸಾದ ಇನಿಂಗ್ಸ್‌ಗಳು ದಾಖಲಾಗಿವೆ. ಭರವಸೆಯ ಬ್ಯಾಟ್ಸ್‌ಮನ್‌ ರಾಹುಲ್‌ ಭಾರತ ಟೆಸ್ಟ್ ತಂಡದಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದ್ದಾರೆ. ಮಯಂಕ್‌ ಕೂಡ ರಾಹುಲ್‌ ಹಾದಿಯಲ್ಲಿ ಮುನ್ನಡೆದರೆ ರಾಷ್ಟ್ರೀಯ ತಂಡದಲ್ಲಿ ರಾಜ್ಯದ ಆರಂಭಿಕ ಜೋಡಿಯದ್ದೇ ಜುಗಲ್‌ಬಂದಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT